“ಶ್ರೇಷ್ಠ ಅನುಭಾವಿ ಬಹು ಭಾಷ ಪ್ರವೀಣರು ಮಹಿಪತಿದಾಸರು”

ಕಾರ್ತಿಕ ಛಟ್ಟಿ ಅಮವಾಸ್ಯೆ ಮಹಿಪತಿದಾಸರ ಬೃಂದಾವನಸ್ಥರಾದ ದಿನ. ನಿಮಿತ್ಯ ಅವರ ಜೀವನ ಚರಿತ್ರೆಯ ಕಿರು ಲೇಖನ.

ಮಹಿಪತಿದಾಸರು ಮೂಲತಃ ಬಾಗಲಕೋಟೆ ಜಿಲ್ಲೆಯ “ಕಾಥವಟೆ” ಮನೆತನದವರು. ಆದರೆ ಕಾಲಾಂತರದಲ್ಲಿ ಮಹಿಪತಿರಾಯರ ತಂದೆ “ಮೌನಭಾರ್ಗವ” ಗೋತ್ರಜ ಕೊನೇರಿರಾಯರು ತಮ್ಮ ಹೆಂಡತಿಯಾದ ಲಕ್ಷ್ಮಿಬಾಯಿ ಜೊತೆ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ “ಐಗಳಿ” ಎಂಬ ಗ್ರಾಮದಲ್ಲಿ ವೆಂಕಟೇಶ ದೇವರನ್ನು ಅರ್ಚಿಸುತ್ತ, ಕರ್ಣಿಕ ವೃತ್ತಿಯೊಂದಿಗೆ ಸುಖವಾಗಿದ್ದರು. ಕೊನೇರಿರಾಯರು ವಿದ್ವಾಂಸರು ಷಟ್ ಶಾಸ್ತ್ರ ಪಂಡಿತರು ಮತ್ತು ಸಂಗೀತ ಆಸಕ್ತರಾಗಿದ್ದರು. ಇವರಿಗೆ ಮೊದಲನೇ ಮಗ ವೆಂಕಟೇಶ ಮತ್ತು ಎರಡನೇ ಮಗ ಗುರುರಾಯ (ಮಹಿಪತಿರಾಯ) ಸಂಸಾರ ಬೆಳೆದ ಹಾಗೆ ನಿರ್ವಹಿಸಲು ಕಷ್ಟವಾದಾಗ ವಿಜಯಪುರಕ್ಕೆ ಕೊನೇರಿರಾಯರು ಬಂದು ನೆಲಸಿದರು. ಆಗ ಆದಿಲ್ ಶಾಹಿ ಆಡಳಿತ ಇದ್ದರು, ಹಿಂದು-ಮುಸ್ಲಿಂ ಧರ್ಮದಲ್ಲಿ ದ್ವೇಷದ ವಾತಾವರಣ ಇರದೆ ಸ್ನೇಹ ಸೌಹಾರ್ದತೆಯಿಂದ ಕೂಡಿತ್ತು.  ಮುಂದೆ ಮಕ್ಕಳಿಬ್ಬರು ಬೆಳೆದು ದೊಡ್ಡವರಾದ ಮೇಲೆ ಹಿರಿಯವನಾದ ವೆಂಕಟೇಶನು ವಿದ್ಯಾಭ್ಯಾಸ ಮಾಡಿ ಮುಂದೆ ಐಗಳಿ ಗ್ರಾಮದಲ್ಲಿ ತನ್ನ ಹೆಂಡತಿಯಾದ ತುಕ್ಕವ್ವಳ ಜೊತೆ ಕುಲದ ಕರ್ಣಿಕ ವೃತ್ತಿ ಮತ್ತು ವೆಂಕಟೇಶ ದೇವರ ಅರ್ಚನೆ ಮಾಡ್ತಾ ಅಲ್ಲಿಯೇ ವಾಸಿಸತೊಡಗಿದ.
ಇತ್ತ ಮಹಿಪತಿರಾಯರು ತಮ್ಮ ತಂದೆಯಂತೆ ಷಟ್ ಶಾಸ್ತ್ರ ಕಲೆತು, ನಿತ್ಯ ಜಪತಪಗಳಲ್ಲಿ ತೊಡಗಿ ಅನುಷ್ಠಾನ ಮಾಡ್ತಾ ರಾಮಾಯಣ, ಮಹಾಭಾರತ ಭಾಗವತ್, ಮದ್ವಶಾಸ್ತ್ರ ಹೀಗೆ ಕಲಿತು ಅಧ್ಯಾತ್ಮ ಕಡೆ ಹೆಚ್ಚಿನ ಒಲವು ತೋರಿಸುತ್ತಾ ಸಾಧನೆಯ ಮಾರ್ಗದಲ್ಲಿ ನಡೆದರು. ಇವರು ಆದಿಲ್ ಶಾಹಿ ಆಸ್ಥಾನದ ಪಕ್ಕದಲ್ಲಿರುವ  ಇರುವ ನರಸಿಂಹ ಸ್ವಾಮಿ ದೇವಸ್ಥಾನ ಕಟ್ಟೆಯ ಮೇಲೆ ಪ್ರವಚನ ಹೇಳುತ್ತಿದ್ದರು.ಇವರ ವಾಕ್ ಚಾತುರ್ಯ ಮತ್ತು ಮಧುರ ಸ್ಪಷ್ಟತೆಯ ಪ್ರವಚನಕ್ಕೆ ಎಲ್ಲರ ಮನಸೂರೆಗೊಂಡು, ಯಾವ ಜಾತಿಭೇಧ ಇಲ್ಲದ ಎಲ್ಲ ವರ್ಗದ ಜನರು ಇವರ ಪ್ರವಚನ ಕೇಳಲು ಬರುತ್ತಿದ್ದರು.ಇವರು ಕನ್ನಡ,ಉರ್ದು, ಮರಾಠಿ, ತೆಲಗು, ಪಾರ್ಸಿ, ಸಂಸ್ಕೃತ ಬಹು ಭಾಷಾ ಪಂಡಿತರಿದ್ದರು. ಇವರ ಕೀರ್ತಿ ವಿಜಯಪುರ ಮತ್ತು ಸುತ್ತಮುತ್ತೆಲ್ಲ ಪಸರಿಸತೊಡಗಿತು. ಇವರ ಪ್ರವಚನ ಶೈಲಿ, ಆದಿಲ್ ಶಾಹಿಯ ಆಪ್ತರಲ್ಲೊಬ್ಬಾದ ಸರದಾರ ಖವಾಸಖಾನನಿಗೆ ಇವರ ಕೀರ್ತಿ ಮತ್ತು ಹೆಸರು ಎಲ್ಲವೂ ತಿಳಿದಿತ್ತು. ಒಂದು ದಿನ ಖವಾಸಖಾನನು ಇವರ ಪ್ರವಚನ ಕೇಳಿ, ಅನಂದಿತನಾಗಿ ತನ್ನ ಅರಮನೆಗೆ ಆಮಂತ್ರಿಸಿ, ತನ್ನ ಕಾರ್ಯದರ್ಶಿಯಾಗಲು ವಿನಂತಿಸಿ ಕೊಂಡನು. ಮಹಿಪತಿರಾಯರು ಖವಾಸ ಖಾನನ ಮಾತಿಗೆ ಕಟ್ಟುಬಿದ್ದು  ಒಪ್ಪಿಕೊಂಡರು. ಒಂದು ದಿನ ಲೆಕ್ಕಪತ್ರದಲ್ಲಿ ತೊಡಕು ಉಂಟಾಗಿ ವಿಚಾರ ಮಾಡುತ್ತ ಕುಳಿತಿದ್ದ ಖವಾಸಖಾನನ್ನು ನೋಡಿ ಮಹಿಪತಿರಾಯ್ರು ವಿಚಾರಿಸಿದಾಗ ಲೆಕ್ಕಪತ್ರದಲ್ಲಿನ ಸಮಸ್ಯೆ ತೋರಿಸಿದಾಗ ಇವರು ಅದನ್ನು ಸರಳವಾಗಿ ಬೇಗನೆ ಬಗೆಹರಿಸಿದರು.ಆಗ ಖವಾಸಖಾನ ಸಂತೋಷಗೊಂಡನು.ಈ ಲೆಕ್ಕದ ವಿಷಯ ಆದಿಲ್ ಶಾಹಿಗೆ ತೋರಿಸಿ ಅವರ ಮುಂದೆ ಇದನ್ನ ಬಗೆಹರಿಸಿದ ಮಹಿಪತಿರಾಯರು. ಇದನ್ನು ಕಂಡು ಆದಿಲ್ ಶಾಹಿ ಸಂತೋಷಗೊಂಡು ಇಂತಹ “ಅಮೂಲ್ಯ ರತ್ನ” ನನಗೆ ಪರಿಚಯಿಸಿದೆ ಖವಾಸಖಾನ ಗೆ ಎಂದು ಹೊಗಳಿದರು.ಇವರನ್ನು ಆಸನದ ಮೇಲೆ ಕುಳ್ಳಿರಿಸಿ ಸನ್ಮಾನಿಸಿ ತಾವು ನನ್ನ ರಾಜ್ಯ ಬೊಕ್ಕಸದ ಕೋಶಾಧಿಕಾರಿ ಆಗಬೇಕೆಂದು ಹೇಳಿ ರಾಜಮುದ್ರೆ ಇರುವ ಉಂಗುರ ತೊಡಿಸಿ, ಎಲ್ಲ ಮರ್ಯಾದೆ ಮಾಡಿ ಸತ್ಕರಿಸಿದನು.ಇವರ ಕೀರ್ತಿ ಎಲ್ಲಕಡೆ ಹಬ್ಬಿತು. ಕೊನೇರಿಯಾರು ಮುಂದೆ ಕಲ್ಬುರ್ಗಿ ದೇಶಮುಖರ ಮನೆತನದ ತಿರುಮಲಾ (ತಿಮ್ಮವ್ವ) ಎಂಬಾಕಿ ಜೊತೆ ಮದುವೆ ಆಯಿತು. ಹೀಗೆ ದಿನ ಕಳೆಯುತ್ತಿದ್ದಾಗ ಅಣ್ಣ ವೆಂಕಟೇಶ ತೀರಿ ಹೋದಮೇಲೆ, ಅತ್ತಿಗೆಯಾದ ತುಕ್ಕವ್ವ ಇವರ ಜೊತೆಯಲ್ಲಿಯೇ ಇದ್ದರು. ತುಕ್ಕವ್ವಳನ್ನು ತಾಯಿಯಂತೆ ಕಾಣುತ್ತಾ ಎಲ್ಲರ ಜೊತೆ  ವೈಭೋಗದಿಂದ ಇದ್ದರು, ಮಹಿಪತಿರಾಯರು ಸದಾ ನಿರ್ಲಿಪ್ತತೆ,ಶಾಂತತೆ ಜಲದಲ್ಲಿನ ಕಮಲದಂತೆ ಮಹಿಪತಿರಾಯ ಇದ್ದರು.

ಕೆಲ ಕಾಲ ನಂತರ ತಿಮ್ಮವ್ವಳಿಗೆ ಮಕ್ಕಳಿಲ್ಲದ ಕೊರಗು ಕಾಡ ಹತ್ತಿತ್ತು. ಮಹಿಪತಿರಾಯರು ಒಂದು ದಿನ ಆದಿಲ್ ಶಾಹಿ ಆಸ್ಥಾನದ ಪಕ್ಕದಲ್ಲಿರುವ ಕಂದಕ ಪಕಕ್ಕೆ ನಡೆದು ಕೊಂಡು ಬರುತ್ತಿರುವಾಗ ಮುಸ್ಲಿಂ ವಲ್ಲಿಗಳಾದ (ಸೂಫಿ ಸಂತರಾದ) ಶಾನುಂಗ ಮತ್ತು ಶಾನುಂಗಿ ಎಂಬ ಅಣ್ಣತಂಗಿ ವಲ್ಲಿಗಳಿದ್ದರು. (ಬೆತ್ತಲೆಯಲ್ಲಿಯೇ ತಿರುಗುತ್ತಿದ್ದರು) “ಮೌತ್ ಕಾ ಘಾಣ” ಎಂದು ಅನ್ನುತ್ತಾ ತಿರುಗುತ್ತಿದ್ದರು. ಇವರ ಮಾತು ಸತ್ಯವಾಗುತ್ತಿತ್ತು. ಅರೇ ! ಬೇಟಾ ಮಹಿಪತಿ ಇಲ್ಲಿ ಬಾ ಅಂತ ಕರೆದು, ನಿನ್ನ ಕೈಯಲ್ಲಿರುವ ರಾಜಮುದ್ರೆ ಉಂಗುರ ಕೊಡು ನೋಡುತ್ತೇವೆ ಅಂದಾಗ ಮಹಿಪತಿರಾಯರರು ಉಂಗುರ ಕೊಟ್ಟಕೂಡಲೇ ನೋಡ್ತಾ ಪಕ್ಕದಲ್ಲಿರುವ ಕಂದಕಕ್ಕೆ ಎಸೆದರು. ಆಗ! ಇವ್ರು ಗಾಬರಿಯಿಂದ ನಾನು ಈ ಉಂಗುರ ಇರದೆ ಆಸ್ಥಾನದೊಳಗೆ ಕಾಲಿಡಲಾಗುವದಿಲ್ಲ ಅಂದಾಗ ಕೂಡಲೇ ತಂಗಿ ಶಾನುಂಗಿ ಕಂದಕಕ್ಕೆ ಹಾರಿ ಬೊಗಸೆ ತುಂಬಾ ಉಂಗರು ತಂದು ಕೊಡಲು ಎಲ್ಲವೂ ಒಂದೇ ತರನಾಗಿ ಇದ್ದದ್ದು ಕಂಡು, ಮಹಿಪತಿರಾಯ್ರು ಆಶ್ಚರ್ಯಗೊಂಡು ವಿಚಾರದಲ್ಲಿರುವಾಗಲೇ ಶಾನುಂಗ, ಅರೇ !ಬೇಟಾ ಏನು ವಿಚಾರ ಮಾಡು ತ್ತಿರುವಿ ಈ ಕ್ಷುಲ್ಲಕ ವಸ್ತು ವಿಷಯಗಳ ಸಂಸಾರ ವ್ಯಾಮೋಹ ಬೀಡು. ಇಲ್ಲಿಯೇಸಮೀಪದಲ್ಲಿರುವ ಸಾರವಾಡ ಗ್ರಾಮದಲ್ಲಿ ಒಬ್ಬ ಯೋಗಿವರಣ್ಯೇರು ಗುರುಗಳಾದ ರುದ್ರಂಶ ಸಂಭೂತರಾದ ಶ್ರೀ ಭಾಸ್ಕರ ಸ್ವಾಮಿಗಳು ತಪೋ ನಿರತರಾಗಿದ್ದಾರೆ. ಆವರು ನಿನ್ನ ಸ್ವರೂಪೋದ್ಧಾರಕ ಗುರುಗಳು ನಿನ್ನ ಸಲುವಾಗಿ ಆರು ತಿಂಗಳಿಂದ ನಿನ್ನ ಬರುವಿಕೆಗಾಗಿ ಕಾಯುತ್ತಿದ್ದಾರೆ ನೀನು ಅಲ್ಲಿಗೆ ಹೋಗು ಎಂದು ಹೇಳಿದರು. ಈ ವಿಚಾರದಲ್ಲಿ ಮನೆಗೆ ಬಂದರು ಹೆಂಡತಿ ಯಾದ ತಿಮ್ಮವ್ವಾ ಚಿಂತಿತ ಮುಖ ನೋಡಿ ಕೇಳಿದಾಗ ,ನಡೆದ ವಿಷಯ ಹೇಳಿದರು. ಈಕೆ ಈ ವಿಷಯ ಕೇಳಿ ತಬ್ಬಿಬ್ಬುಗೊಂಡು, ತನ್ನ ಪತಿಯಾದ ಮಹಿಪತಿ ರಾಯರ ಮುಂದೆ ಮಕ್ಕಳ ಪಡೆಯುವ ಸಲುವಾಗಿ ನಾನು ಹಲವು ತಿಂಗಳಿಂದ ಸಾರವಾಡಕ್ಕೆ ಅವರ ಆಶೀರ್ವಾದ ಪಡೆಯಲು ಹೋಗುತ್ತಿದ್ದೆ, ಆದರೆ ಇಷ್ಟು ದಿನವಾದರೂ ಆಶೀರ್ವಾದ ಕೊಟ್ಟಿದ್ದಿಲ್ಲ, ನನಗೂ ಇಂದೇ ಸ್ವಾಮಿಗಳು ನೀನು ನಿನ್ನ ಪತಿ ಜೊತೆ ಬಾ ಆಗ ಆಶೀರ್ವದಿಸಿ ಫಲ ನೀಡುವೆ ಅಂತ ಅಂದಿದ್ದಾರೆ, ಎಂದು ಅಂದಾಗ ಮಹಿಪತಿ ರಾಯರು ವಿಸ್ಮಯಗೊಂಡು. ಮನೆಯಲ್ಲಿಯೂ ಇಬ್ಬರ ವಿಷಯ ಕೇಳಿ  ಎಲ್ಲರೂ ಆಶ್ಚರ್ಯ ಚಕಿತರಾದರು.

ಮರುದಿನ ಸತಿಪತಿಗಳಿಬ್ಬರು ಸಾರವಾಡಕ್ಕೆ ಹೋಗಿ ಗುರುಗಳನ್ನು ನೋಡಿ ಆಶೀರ್ವಾದ ಪಡೆದರು. ತಿಮ್ಮವಳಿಗೆ ಜೋಡು ಫಲಗಳ ಹಾಕಿ ಇಬ್ಬರು ಗಂಡು ಸಂತಾನವಾಗುತ್ತದೆ, ಒಬ್ಬನು ದೇಶವನ್ನಾಳುವ ಶೂರನಾದರೆ ಮತ್ತೊಬ್ಬ ಅಧ್ಯಾತ್ಮದಲ್ಲಿ ಸಾಧನೆ ಮಾಡುವ ಪುತ್ರ ಆಗುತ್ತಾನೆ ಎಂದು ಆಶೀರ್ವದಿಸುತ್ತಾರೆ. ನಂತರ ವಿಜಯಪುರಕ್ಕೆ ಬಂದು ದಿವಾನ ಪದವಿ ತ್ಯಾಗ ಮಾಡಿ ಇದ್ದ ಎಲ್ಲ ಸ್ವತ್ತನ್ನು ದಾನ ಮಾಡಿ ಕುಟುಂಬದ ಸಮೇತ ಸಾರವಾಡಕ್ಕೆ ಬಂದು ನೆಲಸುತ್ತಾರೆ.  ಆದಿಲ್  ಶಾಹಿ ಮತ್ತು ಖವಾಸಖಾನ ಎಷ್ಟೇ ಹೇಳಿ ಕಳಿಸಿದರು ಬರದೆ ,ದೃಢ ನಿಶ್ಚಯದಿಂದ ಎಲ್ಲ ತಿರಸ್ಕರಿಸಿ  ಮಹಿಪತಿ ಸ್ವಾಮಿಗಳು  ಸಾರವಾಡಕ್ಕೆ ಬಂದರು. ಗುರೊಪದೇಶ ಪಡೆದು ನಿತ್ಯ ಅನುಷ್ಠಾನ ಮಾಡಿ ಹನ್ನೆರಡು ವರುಷಕ್ಕೆ ಸಿದ್ಧಿಸುವ ಯೋಗ ಕೇವಲ ಹನ್ನೊಂದು ತಿಂಗಳದಲ್ಲಿ ಸಾಧಿಸಿದರು. ಅಪರೋಕ್ಷ ಜ್ಞಾನಿಗಳಾದರು. ಭಾಸ್ಕರ ಸ್ವಾಮಿಗಳು ಇವರ ತಪೋನಿಷ್ಠೆ ಮೆಚ್ಚಿ ನಿನ್ನಿಂದ ಲೋಕ ಕಲ್ಯಾಣವಾಗಬೇಕಾಗಿದೆ ಇನ್ನು ನೀನು ವಿಜಯಪುರಕ್ಕೆ ಹೋಗಿ ಜನರಿಗೆ ಅಧ್ಯಾತ್ಮ ಮಾರ್ಗ ತೋರಿಸಿ  ನಡೆಸು ನಿನ್ನಿಂದ ಧರ್ಮ ರಕ್ಷಣೆ ಆಗಲಿ ಅಂತ ಹೇಳಿ ಅಪ್ಪಣೆ ಕೊಟ್ಟರು.  ಆಗ ಆದಿಲ್ ಶಾಹಿ ಕಾಲದಲ್ಲಿ ಜಾತಿಮತ ಅಂತ ಕಚ್ಚಾಟ ಇದಿದ್ದಿಲ್ಲಾ , ಇವರು ಬರುವ ವಿಷಯ ತಿಳಿದು ಇವರಿಗೆ ಖವಾಸಖಾನ ಮುಖಾಂತರ ಸರಳವಾದ ಮನೆ ಇರುವ ವ್ಯೆವಸ್ಥೆ ಮಾಡಿದನು .ಇದನ್ನ ಅರಿತ ಮಹಿಪತಿ ದಾಸರು ತಿರಸ್ಕಾರ ಮಾಡಿದರು, ರಾಜನ ಪ್ರೀತಿಯ ವಿನಂತಿ ಮೇರೆಗೆ ಒಪ್ಪಿಕೊಂಡರು. ತಿಮ್ಮವ್ವಾ ಆಶೀರ್ವಾದ ಫಲವಾಗಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದಳು. ಮೊದಲನೆಯವನು ದೇವರಾಯ, ಎರಡನೆಯವನು ಕೃಷ್ಣರಾಯ. ಹೀಗೆ ಮಹಿಪತಿ ದಾಸರ ಕೀರ್ತಿ ಎಲ್ಲಡೆ ಹಬ್ಬಿ ಜಾತಿಭೇಧ ಇಲ್ಲದೆ ಇವರ ದರ್ಶನಕ್ಕೆ ತಂಡೋಪಡವಾಗಿ ಬಂದು ಇವರ ಆಶೀರ್ವಾದ ಪಡೆಯಲು  ಜನರು ಬರುತ್ತಿದ್ದರು.

ಮುಂದೆ ವಿಜಯಪುರದಲ್ಲಿ ಅಸ್ಥಿರತೆಯಿಂದ ಯುದ್ಧ ಪ್ರಾರಂಭವಾಯಿತು ಸಾವು ನೋವುಗಳು ಹೆಚ್ಚಾಯಿತು. ಮಾಹಾಮಾರಿ ಪ್ಲೇಗ್ ಬಂತು ಹಾಗೆ ಬರಗಾಲ ಶುರುವಾಯಿತು ಇದರಿಂದ ಮಹಿಪತಿದಾಸರು ಕುಟುಂಬ ಸಮೇತ ವಿಜಯಪುರ ಬಿಟ್ಟು ಕಲ್ಬುರ್ಗಿ ಜಿಲ್ಲೆಯ ಶಾಹಪುರಗೆ ಹೋಗಿ “ಮಂದಾಕಿನಿ” ಸರೋವರದ ತಟದಲ್ಲಿ ಒಂದು ಗುಡ್ಡ  ಪಕ್ಕದಲ್ಲೇ ಗುಹೆ, ನಿತ್ಯವೂ ಇವರು ತಮ್ಮ ಅನುಷ್ಠಾನ ಮಾಡ್ತಾ ಮೂರು ವರುಷ ಕಳೆದರು.  ಅಲ್ಲಿಯೇ ಹನುಮಂತ ಮೂರ್ತಿಯನ್ನು ಸ್ಥಾಪಿಸಿ ಪೂಜೆಸುತ್ತಿದರು.ಬಂದ ಜನರಿಗೆ ಸದ್ಭೋಧನೆ ಮಾಡ್ತಾ ಇದ್ದರು. ಅಲ್ಲಿಯೂ ಇವರಿಗೆ ಏಕಾಂತ ಅನುಷ್ಠಾನಕ್ಕೆ ದಕ್ಕೆ ಬರಲು ಪರಮಾತ್ಮನ ಅಪ್ಪಣೆಯಂತೆ ಕಾಖಂಡಕಿಗೆ ಹೋಗಲು ಪ್ರೇರಣೆಯಾಯಿತು. ಈಗಲೂ ಅವರ ಸ್ಥಾಪಿಸಿದ ಹನುಮಂತನಿಗೆ “ಕಾಖಂಡಕೀಶ” ಎಂತಲೂ ಮತ್ತು ಇವರು ಕುಳಿತು ಅನುಷ್ಠಾನ ಮಾಡಿತಿದ್ದ ದಿನ್ನೆಯನ್ನು “ಮಹಿಪತಿದಾಸರ ದಿನ್ನೆ” ಎಂದು ಪ್ರಚಲಿತಲ್ಲಿದೆ. ಮುಂದೆ  ಕುಟುಂಬ ಸಮೇತ ಕಾಖಂಡಕಿಗೆ ಬರಲು ಅಲ್ಲಿಯೂ ಊರ ಕರುಣಿಕನಿಗೆ ಇವರು ಬರುವ ಮುನ್ಸೂಚನೆ ಸಿಕ್ಕಿತ್ತು. ಆದರಿಂದ ಮಹಿಪತಿದಾಸರನ್ನು ಊರ ಹಿರಿಯರೊಂದಿಗೆ ತಾಳ ಮದ್ದಳೆ ಸಮೇತ ಬರಮಾಡಿಕೊಂಡನು. ಕರುಣಿಕರು ಉಳಿಯಲು ಮನೆ ಕೊಟ್ಟರೆ, ಊರ ಪಟೇಲ್ ತಮ್ಮ ಹೊಲದಲ್ಲಿಯ ಶಮಿ ವೃಕ್ಷದ  ಕೆಳಗೆ ಅನುಷ್ಠಾನ ಮಾಡಲು ಅವರಿಗೆ ಹೇಳಿದನು ಹೀಗೆ ದಿನಗಳು ಕಳೆಯುತ್ತಿರಲು, ತಿಮ್ಮವ್ವಾ ಹಠಾತ್ತನೆ ಜ್ವರಕ್ಕೆ ಅಸುನೀಗಿದಳು.

ಮುಂದೆ ಅಣ್ಣನ ಹೆಂಡತಿಯಾದ ತುಕ್ಕವ್ವಳ ಆರೈಕೆಯಲ್ಲಿ ಮಕ್ಕಳು ಬೆಳೆದರು .ಮೊದಲನೇ ಮಗನಾದ ದೇವರಾಯನನ್ನು  ಮಾವನಾದ ಕಲ್ಬುರ್ಗಿ ದೇಶಮುಖರು ತಮ್ಮ ಮಗಳ ನೆನಪಿಗಾಗಿ ಮೊಮ್ಮಗನನ್ನು  ತಮ್ಮಲ್ಲಿ ಕರೆದುಕೊಂಡು ಹೋಗಿ , ಅವನಿಗೆ ಯುದ್ಧ ಕೌಶಲ್ಯ ತರಬೇತಿ ಕೊಡಿಸಿ ಮುಂದೆ ಪೇಶ್ವೆ ಮಾಹಾರಾಜನ ಬಳಿ ಸೇನಾಧಿಪತಿಯಾಗಿ ಮುಂದೆ, ಜಾಲವಾದಿ ಮತ್ತು ಇತರ ಹತ್ತು ಹಳ್ಳಿಗಳಿಗೆ ಆಳುವ ಸರದಾರನಾಗಿ ಕಾಂತ ಕ್ಷೇತ್ರಜನಾಗಿ ಜನಾನುರಾಗಿಯಾಗಿ ಬೆಳೆದನು. ಇವರು ಹಲವು ಸಾಹಿತ್ಯಗಳನ್ನುರಚಿಸಿದ್ದಾರೆ.

ಇನ್ನೊಬ್ಬ ಮಗ ಕಾಖಂಡಕಿಯಲ್ಲಿಯೇ ಇದ್ದು ಅವರು ತಮ್ಮ ತಂದೆಯಾದ ಮಹಿಪತಿದಾಸರನ್ನು ಗುರುಗಳಾಗಿ ಸ್ವೀಕರಿಸಿ ತಂದೆಯನ್ನೇ ಅನುಸರಿಸಿ ಆಧ್ಯಾತ್ಮ ಸಾಧನೆಯಲ್ಲಿ ನಡೆದವರು. ಇವರು ಸಾವಿರಾರು ದೇವರ ಸಾಹಿತ್ಯ,ಉಗಾಭೋಗ, ಕೀರ್ತನೆಗಳು ಬರೆದಿದ್ದಾರೆ.
ಬಂದ ಭಕ್ತರಿಗೆ ಧರ್ಮೋಪದೇಶ ಮಾಡುತ್ತಾ ಧರ್ಮ ಪಾಲನೆ ಮಾಡಿದರು ಹಾಗೆಯೇ ಬಂದ ಭಕ್ತರಿಗೆ ಸನ್ಮಾರ್ಗದ ಹಾದಿಯಲ್ಲಿ ನಡೆಸುತ್ತಿದ್ದರು.
ಮುಂದೆ ತಮ್ಮ ಅವಸಾನದ ಕಾಲ ಅರಿತು ಮಗ ಕೃಷ್ಣಾರಾಯರನ್ನು ಕರೆಯಿಸಿ  ಜಾಲವಾದಿಯಿಂದ ದೇವರಾಯನನ್ನು ಕರೆಯಲು ಹೇಳಿದರು. ಮುಂದೆ ಮಕ್ಕಳಿಬ್ಬರ ಜೊತೆಯಲ್ಲಿ ಕೊಲ್ಹಾರಕ್ಕೆ ಹೋಗಿ ಕೃಷ್ಣ ನದಿಯ ತಟದಲ್ಲಿ ಸ್ಥಿರವಾದ ಆಸನ ಹಾಕಿ ಅನುಷ್ಠಾನಕ್ಕೆ ಕುಳಿತರು. ಸರಿಯಾದ ಏಳನೇ ದಿನವಾದ ಕಾರ್ತಿಕ ವದ್ಯ ಅಮಾವಾಸ್ಯೆಯ ದಿನ ಇವರ ಪ್ರಾಣಪಕ್ಷಿಯು ಶ್ರೀಹರಿಯಲ್ಲಿ ಸೇರಿತು. ಇವರು ವೈಕುಂಠ ದ್ವಾರಪಾಲಕರಾದ ಜಯವಿಜಯರಲ್ಲಿ , “ವಿಜಯ”ರ ಅಂಶ ಎಂದು “ಗುರು ಮಾಲಿಕಾ”ಗ್ರಂಥದಲ್ಲಿ ಉಲ್ಲೇಖಸಲಾಗಿದೆ.

ಎಲ್ಲ ವಿಧಿವಿಧಾನಗಳು ಮುಗಿಸಿ ಮಕ್ಕಳಿಬ್ಬರು ತಮ್ಮತಮ್ಮ ಊರಿಗೆ ಹೋದರು. ಆದರೆ ಕೃಷ್ಣರಾಯರಿಗೆ ತಂದೆ ಎನಿಸಿದ ಗುರುವಾದ ಮಹಿಪತಿರಾಯರ ನೆನಪು ಬಹಳ ಬಂದು ದುಃಖಿಸುತ್ತಾ ಮಲಗಿದಾಗ ಕನಸಿನಲ್ಲಿ ಮಹಿಪತಿ ದಾಸರು ಬಂದು ನಾನು ನಿತ್ಯ ಅನುಷ್ಠಾನ ಮಾಡುತ್ತಿದ್ದ ಶಮಿ ವೃಕ್ಷ  ಭೂಮಿಯ ಕೆಳಗೆ ನಾನು ನೂರಾ ಎಂಟು ಸಾಲಿಗ್ರಾಮ ರೂಪದಲ್ಲಿರುವೆ, ಅದರಿಂದ  ನನ್ನ ವೃಂದಾವನ ಕಟ್ಟಿಸು ನಾನು ಅಲ್ಲಿರುವೆ ಎಂದು ಹೇಳಿದರು. ಅದರಂತೆ ಕೃಷ್ಣರಾಯರು ವೃಂದಾವನ ಕಟ್ಟಿಸಿ, ಯೋಗ ದಂಡ ,ಪಾದುಕಾ  ಇಟ್ಟು ಪೂಜೆ ಮಾಡುತ್ತಾ ಇದ್ದರು.

ಈಗಲೂ ಅದೇ ರೀತಿ ವಿಧಾನ ನಡೆದು ಬಂದಿದೆ. ಬಂದ ಭಕ್ತರನ್ನು ಉದ್ಧರಿಸುತ್ತಾ ಕಾಖಂಡಕಿಯಲ್ಲಿ ನೆಲಸಿದ್ದಾರೆ.

ಮಹಿಪತಿದಾಸರ ಪುರಂದರದಾಸರು ಮತ್ತು ಕನಕದಾಸರ ಅನಂತರ ಕಾಲ ಘಟ್ಟ ಮತ್ತು ವಿಜಯ ದಾಸರ ಬರುವ ಮುಂಚೆ (ಹಿಂದಿನ) ಮಹಿಪತಿದಾಸರ ಕಾಲ ಘಟ್ಟ ಬರುತ್ತದೆ.
ಹೀಗೆ ಮಹಿಪತಿದಾಸರ ಕೃತಿಗಳು ವಿಪುಲ. ಹಾಗೆ ವೈವಿಧ್ಯಮಯ.ಇವರು ಬಹು ಭಾಷಾ ವಿಶಾರದಾಗಿದ್ದರಲ್ಲದೆ ಬಹು ಭಾಷೆಯಲ್ಲಿ ಸಾಹಿತ್ಯಗಳನ್ನು ರಚಿಸಿದ್ದಾರೆ. ಕನ್ನಡ, ತೆಲಗು,ದಖಣಿ,ಮರಾಠಿ, ಪರ್ಷಿಯನ್ ಭಾಷಾಗಳಲ್ಲಿ ಇವರ ಸಾಹಿತ್ಯ ರಚನೆಗಳು ಇವೆ. ಕೀರ್ತನೆಗಳು,ಸ್ತೋತ್ರ, ಆರತಿ ಪದ, ಕೋಲಾಟದ ಪದ(ದಶಾವತಾರದ ಕೋಲು ಕೊಲೆನ್ನ ಕೋಲ ಶ್ರೀಹರಿಯ ಬಲಗೊಂಬೆ ಕೋಲೆ,),ಶೋಭಾನ ಪದ, ಜನ ಸಾಮಾನ್ಯರಿಗೆ ಲಾವಣಿ ಪದ, ಹಂತಿಪದ, ಸುಗ್ಗಿ ಪದ, ಸತ್ಸಂಗದ ಹಾಡು, ತ್ರಿಪದಿ, ಚೌಪದಿಗಳು, ಸಾಂಗತ್ಯ ಭಾಮಿನಿ, ವಾರ್ಧಕ ಷಟ್ಪದಿ ಹೀಗೆ ಮಹಿಪತಿರಾಯರ ಸಾಹಿತ್ಯವು ಸಂಪದ್ಭರಿತ ಹಾಗೆ ವಿಶಾಲ ದೃಷ್ಟಿಯಿಂದ ಕೋನದಿಂದ ಕೂಡಿದೆ.
ಇವರು  ಕನ್ನಡ,ಉರ್ದು, ಮರಾಠಿ, ತೆಲಗು, ಪಾರ್ಸಿ, ಸಂಸ್ಕೃತ ಬಹು ಭಾಷಾ ಪಂಡಿತರಿದ್ದರು. ಇವರ ಒಟ್ಟು ಅಂಕಿತ 14 ಇವೆ. ಇವರ ಸಾಹಿತ್ಯ 700 ಕೃತಿಗಳಿಗಿಂತ ಹೆಚ್ಚು ರಚಿಸಿ, ಅದರಲ್ಲಿ ಹರಿ ಸರ್ವೋತ್ತಮತ್ವದ ಬಗ್ಗೆ ಬಹಳ ಪದ್ಯಗಳು ಇವೆ. ಹೀಗೆ ಹರಿದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.

Leave a Reply