ಆಟಕ್ಕೆ ದಣಿವಿಲ್ಲ ಧಣಿಯಿಲ್ಲ

ಆಟಕ್ಕೆ ದಣಿವಿಲ್ಲ ಧಣಿಯಿಲ್ಲ

ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಮತ್ತು ರಾಜಕೀಯ ವ್ಯಕ್ತಿಗಳು ಮಾತನಾಡುವ ಆವೇಶದಲ್ಲಿ ಸಾಂಸ್ಕೃತಿಕ ಭಿನ್ನತೆ, ಪರಿಜ್ಞಾನಗಳು, ಇದ್ದೋ ಇಲ್ಲದೆಯೋ ಅಗ್ಗದ ಚಪ್ಪಾಳೆ ಶಿಳ್ಳೆಯ ಫಲಾನುಭವಿಗಳ ಭಾಗ್ಯ ಪಡೆಯಲು ಏನೇನೋ ಶಬ್ದ, ವಾಕ್ಯ, ಪದ ಪುಂಜಗಳನ್ನು ಓತಪ್ರೋತವಾಗಿ ಪ್ರಯೋಗಿಸಿಯೇ ಬಿಡುತ್ತಾರೆ. ಶಿಕ್ಷಣ ಮತ್ತು ವಯಸ್ಸು, ಅನುಭವ ಮ್ಯಾಚುರಿಟಿ ತರುತ್ತದೆ ಅನ್ನುವದನ್ನು ಸುಳ್ಳಾಗಿಸುತ್ತದೆ. ಇಂತಹ ಸ್ವಭಾವಕ್ಕೆ ಏನು ಅನ್ನುವುದು? ಇಂತಹ ವ್ಯಕ್ತಿಗಳು ರೋಲ್ ಮಾಡೆಲ್ ಆಗುತ್ತಾರಾ? ಇದಕ್ಕೆ ಕಾರಣವೇನಿರಬಹುದು? ಹೀಗೆ ಸ್ವಲ್ಪಸ್ವಲ್ಪಾಗಿ ವಿಶ್ಲೇಷಣೆ ಮಾಡಿದಾಗ ಮನಸ್ಸಿನಾಳದಲ್ಲಿ ಹುದುಗಿರುವ ವಿಕೃತ ವಿಚಾರಗಳು, ಅದರಲ್ಲೂ ಮದುವೆ ಅಂತ ಆಗದೇ ಇರುವ ತರುಣದಲ್ಲಿ ಆವೇಶದ ಕಾವಿನಲ್ಲಿ ಜೋಳದ ಕಾಳು ಅರಳು ಆಗಿ ಹೊರ ಸಿಡಿಯುತ್ತದೆ. ಅಶ್ಲೀಲ ಬೈಗುಳಗಳು ಸಿಟ್ಟಿನ ಆವೇಶದ ಭರದಲ್ಲಿದ್ದಾಗ ಅವರವರ ಮಾತೃಭಾಷೆಯ ಬೈಗುಳಗಳು ಬಂದೆ ಬಿಡುತ್ತವೆ ಮಾತೃಭಾಷೆಯನ್ನು ತಿಳಿದುಕೊಳ್ಳಲು ಸಹ ಇದೊಂದು ಉತ್ತಮ ಸಾಧನ. ಇನ್ನೊಂದು ಆಯಾಮದಲ್ಲಿ ಅವರವರ ಅನುಭವ. ಎಮ್ಮೆ ಸಾಕಿದವರಿಗೆ ಗೊಡ್ಡೆಮ್ಮೆ, ಕೋಣ, ಎತ್ತು, ಕೆಚ್ಚಲು, ಸಗಣಿ ಗೊಬ್ಬರ ಮೇಯೋದು ಮೇಯಿಸೋದು ಬೇಗ ತಿಳಿಯುತ್ತದೆ. ಕಿಲಾಡಿ ಹುಡುಗರು ದಕ್ಷಿಣ ಭಾರತದ ಕೆಲವು ದೇವಾಯಲಗಳಲ್ಲಿ ಗಂಡಸರು ಲುಂಗಿ ಮೇಲೆಯೇ ಬರಬೇಕೆಂದು ನಿಯಮ ಹಾಕಿದಾಗ, ಹೆಣ್ಣು ಮಕ್ಕಳಿಗೇನು ಅಂಥ ಗುಸುಗುಸು ಮಾಡುತ್ತಾರೆ ವಿನಹಾ ಬಾಯಿ ಮಾಡುವುದಿಲ್ಲ, ವಿರೋಧಿಸುವುದಿಲ್ಲ. ಯಾಕೆಂದ್ರೆ ಅವರಿಗೆ ಸಂಸ್ಕೃತಿಯ ಅರಿವಿರುತ್ತದೆ. ಅದೇನೂ ಅರಿವಿಲ್ಲದವರು ಮಾತ್ರ, ಶಿಸ್ತಿನ ಸಂಘಟನೆಗಳಲ್ಲಿ ಎಲ್ಲರೂ ಅರ್ಧ ಚಡ್ಡಿ ಹಾಕುವಾಗ ಹೆಂಗಸರೇಕೆ ಹಾಕುವುದಿಲ್ಲ ಅನ್ನುವ ಆತುರಾತರವಾದ ಮಾತುಗಳನ್ನು ಆಡಿಯೇ ಬಿಡುತ್ತಾರೆ. ಮೈ ಮುಚ್ಚುವ ಸಲ್ವಾರ್ ಕಮೀಜುಗಳು, ಕಾಣುವುದೇ ಇಲ್ಲ. ಮುಖ ಪರದೆ ಇದ್ದರೆ ನಡೆಯುತ್ತದೆ. ಆದರೆ ಅರ್ಧ ಚಡ್ಡಿಹಾಕುವ ಅಸಹಾಯಕ ರಾಜಕೀಯ ಹಂಬಲವಿದ್ದರೆ ಏನು ಮಾಡುವುದು? ಇನ್ನೂ ಸ್ತ್ರೀಯರ ಪ್ರಾತಿನಿಧ್ಯದ ಬಗ್ಗೆ ಮಾತನಾಡಿದರೆ, ಅದು ಬೇರೆ ಹಾದಿಯನ್ನೇ ಹಿಡಿಯುತ್ತದೆ. ರಾಜಕೀಯ ಶಕ್ತಿ, ಅಧಿಕಾರ ಹಣ ಜನಪ್ರಿಯತೆ ಏನೆಲ್ಲವನ್ನೂ ಮಾಡಿಸುತ್ತದೆ. ಯಾವ ಪಕ್ಷವೇ ಇರಲಿ ಯಾವ ರಾಜ್ಯವೇ ಇರಲಿ ಅದು ರಾಷ್ಟ್ರ ಮಟ್ಟದಿಂದ ಗ್ರಾಮ ಪಂಚಾಯತ್ ಮಟ್ಟದವರೆಗೆ ಎಲ್ಲದರಲ್ಲೂ ಪುರುಷ ಪ್ರಾಧಾನ್ಯತೆ ತಪ್ಪಿಲ್ಲ. ಅದು ಸಹ ನಮ್ಮ ಭಾರತೀಯ ಬಾಳ್ವೆಯ ಒಂದು ಅಂಗವಾಗಿ ಹೋಗಿದ್ದು ಇತ್ತೀಚಿನ ದಿನಗಳಲ್ಲಿ ಕೊಂಚ ಕೊಂಚ ಬದಲಾವಣೆ ತೋರುತ್ತಿರುವುದು ಗಮನಾರ್ಹ. ಕೇವಲ ಮಹಿಳೆಯರಿಗೆ ಮೀಸಲಾತಿ ಕಾನೂನು ಮಾಡಿದರೆ ಆಗುವುದಿಲ್ಲ. ಪುರುಷ ಪ್ರಾಧಾನ್ಯತೆ ಶಿಕ್ಷಣದ ಮೂಲಕ ಮಾನಸಿಕ ಧೋರಣೆ ಪರಿವರ್ತನೆಗೊಂಡಾಗ ಮಾತ್ರ ಸಾಧ್ಯ. ಈ ಬಾಯಿ ಚಪಲ ಇತ್ತೀಚಿನ ದಿನಗಳಲ್ಲಿ ಸ್ವಾಮಿಗಳನ್ನು, ಧಾರ್ಮಿಕ ಧುರೀಣರನ್ನೂ ಬಿಟ್ಟಿಲ್ಲ. ಶ್ರೇಷ್ಠ ನ್ಯಾಯಾಲಯದಲ್ಲಿ ತಪ್ಪೆಂದು ಸಾಬೀತಾಗಿದ್ದರೂ, ಒಬ್ಬರು ಇನ್ನೊಂದು ಪಂಗಡದವರನ್ನು ಜರಿದು, ಹೀಯಾಳಿಸಿ, ವಿಕೃತವಾಗಿ ಮಾತನಾಡಿ ತಮ್ಮ ತಮ್ಮ ಉದ್ದೇಶಗಳಿಗಾಗಿ ಬೀಗುವುದನ್ನು ನೋಡಬಹುದಾಗಿದೆ. ಅಧಿಕಾರಿಗಳು, ಎಲ್ಲ ಪಂಡಿತರುಗಳಿಗಿಂತ ಹೆಚ್ಚು ಓದದೆ ಒಂದು ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗಿ ಅಧಿಕಾರದ ಸುಖ ಅನುಭವಿಸಿ ಮಾಡಿ ಧರ್ಮಗುರುಗಳ ಹಾಗೆ ನ್ಯಾಯ ನಿರ್ಣಯ ನೀಡುತ್ತಾ ಪಂಗಡಗಳ ನಡುವಿನ ಭಿನ್ನಾಭಿಪ್ರಾಯದ ಪೊಟ್ಯಾನ್ಸಿಯಲ್ ಪ್ರಯೋಜನ ಪಡೆಯುವುದು ಸಹ ಇನ್ನೊಂದು ಮುಖ. ಒಮ್ಮೊಮ್ಮೆ ಅನಿಸುತ್ತದೆ ಯಾಕೋ ಏನೋ ಇಂಥಾ ಮಾತೆಲ್ಲ ಹುಟ್ಟುವುದೇ ರಾಜಕೀಯ ಪ್ರಯೋಜನಕ್ಕಾಗಿಯೋ ಅಥವಾ ತಾವು ಒಬ್ಬ ವಾಕ್ಪಟು ಟಂತ ತೋರಿಸಿಕೊಳ್ಳುವುದಕ್ಕೋ, ನಿಜವಾಗಿ ತಮ್ಮಿಂದ ಸತ್ಯ ಸಂಶೋಧನೆ ಆಗಿದೆ ಅಂತ ಹೇಳುವುದಕ್ಕಾಗಿಯೋ, ಅಥವಾ ವಿಕೃತ ಹಂಬಲಗಳು ಆವೇಶದಲ್ಲಿ ಒಮ್ಮೆಲೇ ಹೊರಗೆ ಬರುತ್ತವೆ ಅಂತಲೋ ಅಂತಹ ನಡತೆಗಳು ಮನಃಶಾಸ್ತ್ರದ ಭಾಗವಾಗಿರುತ್ತವೆ. ಮನುಷ್ಯ ಯಾಕೆ ಬೈಯುತ್ತಾನೆ ಮತ್ತು ಹೆಚ್ಚಿನ ಬೈಗಳಗಳು ಅಶ್ಲೀಲ ಎನ್ನಬಹುದಾದ ಗುಪ್ತಾಂಗಗಳ ಮೇಲೆ, ಫರ್ಟಿಲಿಟಿ ಅಂದರೆ ಉತ್ಪಾದಕತೆ ಬಗ್ಗೆ, ಸುಲಭವಾಗಿ ಕಾಣದ ಅಂಗಾಂಗಗಳ ಬಗ್ಗೆ ಹಾದರದ ವಿಷಯಗಳ ಮೇಲೆಯೇ ಏಕಿರುತ್ತವೆ ಎಂದು ಪ್ರಶ್ನೆ ಮಾಡಿಕೊಂಡಾಗ ಹಲವು ಸಾಧ್ಯತೆಗಳು ಕಾಣುತ್ತವೆ. ಗುಪ್ತವಾಗಿರುವುದು ಬೈಗುಳಗಳಲ್ಲಿ ಸಾರ್ವಜನಿಕವಾಗುವುದು, ಯಾವ ಶಾಲೆಯಲ್ಲಿ ಹೇಳದ್ದನ್ನು, ಪಠ್ಯಗಳಲ್ಲಿ ಇರದ್ದನ್ನು ಕಲಿಸುವ, ನೈಸರ್ಗಿಕವಾದ ಪ್ರಾಣಿ ಪಶು ಪಕ್ಷಿಗಳ ರತಿ ಕಲಾಪಗಳು ಪ್ರತ್ಯಕ್ಷವಾಗಿ ನೀಡುವ ಜೀವನ ಶಿಕ್ಷಣದ ಭಾಗ ಆಗಿಬಿಡುತ್ತವೆ. ಬೈಗುಳಗಳು ಸಿಟ್ಟಿನ, ಅಸಹಾಯಕತೆಯ, ಧಾಡಸಿ ಪ್ರವೃತ್ತಿಯ, ಮತ್ತೊಬ್ಬರನ್ನು ಹೇಗಾದರೂ ಮಾಡಿ ಸುಮ್ಮನಿರಿಸಿ ಬಿಡುವ ಹುನ್ನಾರದ ಮನೋಸ್ಥಿತಿಯ ಲಕ್ಷಣವಾಗಿರುತ್ತವೆ. ನಿನ್ನೆ, ಮೊನ್ನೆ ವಿಶ್ವಮಾನಸಿಕ ಆರೋಗ್ಯ ದಿನದ ನೆನಪಾಯಿತು. ಸುತ್ತಮುತ್ತ ನಡೆಯುತ್ತಿರುವ ದಿ ಗ್ರೇಟ್ ಇಂಡಿಯಾ ಶೋ ನಡೆಸುತ್ತಿರುವ ಸಿದ್ಧ ಕಾರ್ಯಕರ್ತರು ಎಲ್ಲೆಲ್ಲಿಯೂ ಸಿದ್ಧವಾಗಿ ಕಾರ್ಯನಿರತರಾಗಿದ್ದಾಗ, ಪರಮೇಶ್ವರ ಪ್ರತ್ಯಕ್ಷವಾಗಬೇಕಾಗಿದೆ ಮತ್ತು ಬದಲಾವಣೆ ಕ್ರಾಂತಿಯ ಚುನಾವಣಾ ಸಂಗಮದಲ್ಲಿ ಯಾರು ಐಕ್ಯರಾಗುತ್ತಾರೆ ಅನ್ನೋದು ಕಾಲವೇ ನಿರ್ಧಾರ ಮಾಡುವುದು ಕಾಲ. ಹೀಗೆ ಅಂತ ಹೇಳಲಿಕ್ಕೆ ಬರುವುದಿಲ್ಲ. ತೀರಾ ಲೇಟೆಸ್ಟ್ ಅಂದರೆ ಟಿಪ್ಪು ಕುರಿತು ಬಂದ ಮಾತುಗಳು ಟಿಪ್ಪುವಿನ ಖಡ್ಗ ಹಿಡಿದು ಆಡಿದ ವೀರಾವೇಶದ ಮಾತುಗಳು ಸ್ಮೃತಿ ಪಟಲದಿಂದ ಮಾಸಿಲ್ಲ ಅನ್ನುವಾಗಲೇ ಮತ್ತಿಷ್ಟು ವಿರುದ್ಧ ಮಾತುಗಳು ಹಿಂದೆ ರಾಜ ಮಹಾರಾಜರುಗಳ ಕಾಲದಲ್ಲಿ ಅವರನ್ನು ಹೊಗಳುವರೆ ಆಸ್ಥಾನ ಸಮ್ಮಾನ ಸ್ವೀಕರಿಸಿ ಕಾವ್ಯ ಕಥೆ, ಪುರಾಣ ಬರೆಯುತ್ತಿದ್ದರು. ಇತಿಹಾಸ ಸೃಷ್ಟಿಯಾಗುತ್ತಿತ್ತು ಇಂದು ಹಾಗೆಯೇ ಅಲ್ಲವೇ? ಇಂದು ನಾವು ಉಪಯೋಗಿಸಿದ ಪದಪುಂಜಗಳು ನಾಳೆ, ಒಂದಲ್ಲ ಒಂದು ದಿನ ನಮಗೆ ತಿರುಗಿ ಬರುತ್ತವೆ. ಬಾಯಿ ಬಿಟ್ಟ ಮಾತು, ಬಿಲ್ಲು ಬಿಟ್ಟ ಬಾಣದಂತೆ. ಬಿಟ್ಟದ್ದು ಹೋತು. ಹೋದದ್ದು ಬರೋದಿಲ್ಲ ಅನ್ನೂದು ಅಷ್ಟೇ ಖರೆ. ಖರೆ ಹೇಳುದ ಅಂದ್ರ, ಇತಿಹಾಸದಿಂದ ನಾವು ಮನುಷ್ಯರು ಏನೂ ಕಲಿಯುವುದಿಲ್ಲ. ಮತ್ತ ಅದ ತಪ್ಪ ಮಾಡತೀವಿ. ಹೊರಗಿನಿಂದ ಬಂದ ಬಿಜ್ಜಳಗ ಬಸವಣ್ಣ ಮತ್ತ ಪ್ರಗತಿಪರ ಧೋರಣಾ ಹಿಡಸಲಿಲ್ಲ ಬಸವಣ್ಣನ ಶಿಷ್ಯರನ್ನ ಒಡೆದ. ಕ್ರಾಂತಿ ಹೆಸರಿನಾಗ ಆಗೋ ಎಲ್ಲ ಮಾತು ಬಂದವು. ಆದರೇನಾತು. ಆಗೋದು ಆಗೇಹೋತು. ಆಗ ಬಿಜ್ಜಳ ಎಲ್ಲದಕ್ಕೂ ಸಿದ್ಧ ಇದ್ದ, ಯಾಕಂದ್ರ ಅವನ ಸಾರ್ವಭೌಮತ್ವ ಅವಗ ಬೇಕಿತ್ತು. ಈಗ ಕಾಲ ಬದಲಾಗೆದ. ಹೆಸರು ಬದಲು ಆಗ್ಯಾವ. ಮಾತು, ಮತಿ ಬದಲಾಗಿಲ್ಲ ವೇಷ ಬ್ಯಾರೆ ಮಾತ್ರ ಅದಕ್ಕ ಹೇಳೋದು ಇದೊಂದು ಗ್ರೇಟ್ ಗ್ರಾಂಡ್ ಇಂಡಿಯಾ ಶೋ! ಆಟಾ ಆಡೋರು ದಣಿಯೋದಿಲ್ಲ ನೋಡುವವರು ದಣಿ ಬೇಕು.

ಕೃಪೆ : ಸಂಯುಕ್ತ ಕರ್ನಾಟಕ

Leave a Reply