ನಾಗರಿಕ ಪ್ರಜ್ಞೆ

ನಾಗರಿಕ ಪ್ರಜ್ಞೆ

1970 ರಲ್ಲಿ ಜಪಾನಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕೈಗಾರಿಕಾ ವಸ್ತು ಪ್ರದರ್ಶನದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತದ ಪ್ರಖ್ಯಾತ ವಕೀಲರಾದ ಶ್ರೀ ನಾನಿ ಪಾಲ್ಕಿವಾಲರವರು ಕಾರ್ಯಕ್ರಮದ ನಂತರ ಜಪಾನಿನ ಪ್ರಧಾನಿಯನ್ನು ಒಂದು ಪ್ರಶ್ನೆ ಕೇಳಿದರು. 1940ರ ಎರಡನೆ ಮಹಾಯುದ್ಧದಿಂದ ಧ್ವಂಸಗೊಂಡ ನಿಮ್ಮ ದೇಶದಲ್ಲಿ 7 ಕೋಟಿ ಜನಸಂಖ್ಯೆ ಮಾತ್ರ ಇದೆ. ಹಿರೋಶಿಮಾ-ನಾಗಸಾಕಿ ನಗರಗಳ ಮೇಲೆ ನಡೆದ ಬಾಂಬ್ ದಾಳಿಯಿಂದ ಇವತ್ತಿಗೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೀರಿ. ಆದರೂ ಕೇವಲ 30 ವರ್ಷಗಳಲ್ಲಿ ಜಗತ್ತು ಆಶ್ಚರ್ಯಪಡುವ ರೀತಿಯಲ್ಲಿ 100 ಹೊಸ ಕೈಗಾರಿಕೆ ಯಂತ್ರಗಳನ್ನು ಕಂಡುಹಿಡಿಯಲು ಹೇಗೆ ಸಾಧ್ಯವಾಯಿತು? ನಮ್ಮ ರಾಷ್ಟ್ರದಲ್ಲಿ 70ಕೋಟಿ ಜನಸಂಖ್ಯೆ ಇದೆ. ಇಂಥಾದ್ದೇನನ್ನು ಸಾಧಿಸಲಾಗಿಲ್ಲ’ ಎಂದರು. ಅದಕ್ಕೆ ಜಪಾನಿನ ಪ್ರಧಾನಿ ನೀಡಿದ ಉತ್ತರ ಹೀಗಿತ್ತು. “ನಿಮ್ಮ ರಾಷ್ಟ್ರದಲ್ಲಿ 70ಕೋಟಿ ಜನರಿದ್ದಾರೆ, ನಿಜ, ಆದರೆ ನಮ್ಮ ರಾಷ್ಟ್ರದಲ್ಲಿ ಇರುವವರೆಲ್ಲ 7 ಕೋಟಿ ಶ್ರೇಷ್ಠ ನಾಗರಿಕರು” ಎಂದರಂತೆ.
ಇಂದು ನಾವು, ‘ನಾಗರಿಕರು ಎಂಬ ವಿಷಯದಲ್ಲಿ ಸ್ವಲ್ಪ ಗಂಭೀರವಾಗಿ, ಯೋಚಿಸಬೇಕು. 125 ಕೋಟಿ ಜನಸಂಖ್ಯೆಯಲ್ಲಿ ಎಷ್ಟು ನಾಗರಿಕರಿದ್ದಾರೆ? ‘ನಾಗರಿಕ’ ಎಂದರೆ ಅವನ ಬದುಕು ಭಾವನೆಗಳು ಹೇಗಿರಬೇಕು? ಎಂದು ತಿಳಿದು, ನಾವು ಕೂಡ ಈ ರಾಷ್ಟ್ರದಲ್ಲಿ ನಾಗರಿಕರಾಗಿ ಬದುಕಬೇಕು ಮತ್ತು ಮುಂದಿನ ಜನಾಂಗವನ್ನು ಹಾಗೆಯೇ ನಿರ್ಮಿಸಬೇಕು ಎಂಬುದೇ ನಮ್ಮ ಮುಂದಿರುವ ಕರ್ತವ್ಯ.

ಸಾಮಾಜಿಕ ಪ್ರಜ್ಞೆ:
ಸಮಾಜವೆಂದರೆ ಜನರ ಸಮುದಾಯ. ಪ್ರತಿಯೊಬ್ಬ ವ್ಯಕ್ತಿಗೂ ಅವನದೇ ಆದ ಗುಣ ಸ್ವಭಾವ, ನಡುವಳಿಕೆಗಳು ವೈಶಿಷ್ಟ್ಯವಾಗಿರುತ್ತವೆ. ಅವನು ಸಮಾಜದಲ್ಲಿದ್ದಾಗ ತನ್ನ ಕೆಲವು ವೈಯಕ್ತಿಕ ವಿಚಾರಗಳನ್ನು ಬದಿಗಿಟ್ಟು ಸಮಾಜದ ಒಳಿತಿಗಾಗಿ ದುಡಿಯಬೇಕಾಗುತ್ತದೆ. ಇಲ್ಲದಿದ್ದರೆ ಅವನು ಆ ದೇಶದ ನಾಗರಿಕನಾಗಲು ಅರ್ಹನಲ್ಲ.
ಒಬ್ಬ ನಾಗರಿಕನಾದವನು ಮೊದಲು ಯೋಚಿಸಬೇಕಾದುದು ‘ತನ್ನಿಂದ ಮತ್ತೊಬ್ಬರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು ಹಾಗೂ ತನ್ನ ರಾಷ್ಟ್ರಕ್ಕೆ ತನ್ನಿಂದ ಅಗೌರವ ಉಂಟಾಗಬಾರದು’, ಎಂದು. ನಮ್ಮ ಶಿಕ್ಷಣದಲ್ಲಿ ಈ ವಿಷಯಕ್ಕೆ ಪ್ರಥಮ ಆದ್ಯತೆ ಸಿಗಲಿ ಎಂದು ಆಶಿಸೋಣ ಅಲ್ಲವೆ!
ಒಂದು ಉದಾಹರಣೆ: ಒಂದು ನಗರದ ರಸ್ತೆಯ ಮಧ್ಯೆ ದೊಡ್ಡ ಕಲ್ಲು ಬಿದ್ದಿತ್ತು. ಆ ರಸ್ತೆಯಲ್ಲಿ ಹೋಗುವ ಬರುವ ಸೈಕಲ್ ಸವಾರರಿಗೆ, ಚಿಕ್ಕ ಹಾಗೂ ದೊಡ್ಡ ವಾಹನಗಳಿಗೆ ಬಹಳ ತೊಂದರೆಯಾಗುತ್ತಿತ್ತು. ಕೆಲವರು ಅದಕ್ಕೆ ಡಿಕ್ಕಿ ಹೊಡೆದು ಗಾಯಗೊಂಡಿದ್ದರು, ಆದರೆ ಯಾರೊಬ್ಬರೂ ಕಲ್ಲನ್ನು ಪಕ್ಕಕ್ಕೆ ಸರಿಸುವ ಮನಸ್ಸು ಮಾಡಲೇ ಇಲ್ಲ, ಯಾಕೆಂದರೆ ಎಲ್ಲರಿಗೂ ಅರ್ಜೆಂಟು, ಎಲ್ಲರಿಗೂ ತರಾತುರಿ. ಇನ್ನು ಕೆಲವರು ನಗರ ಸಭೆಯವರಿಗೆ ಫೋನ್ ಮಾಡೋಣ ಎಂದು ಹೊರಟೇ ಹೋದರು.
ಅಂದು ಸಂಜೆ 5-6 ಗಂಟೆಯ ಸಮಯ ಕಾರ್ಖಾನೆಯಲ್ಲಿ ದುಡಿದು ಸುಸ್ತಾಗಿದ್ದ ನೌಕರನೊಬ್ಬ ರಸ್ತೆಯಲ್ಲಿ ಹೊರಟಿದ್ದವನು ಆ ಕಲ್ಲಿನ ಬಳಿ ಬಂದು ನಿಂತು ಯೋಚಿಸಿದ. ‘ಛೇ! ಈ ಕಲ್ಲಿನಿಂದ ಎಷ್ಟು ಜನರಿಗೆ ತೊಂದರೆಯಾಗುತ್ತಿದೆ. ಏನಾದರೂ ಮಾಡಿ ಇದನ್ನು ಪಕ್ಕಕ್ಕೆ ಸರಿಸಿಯೇ ಬಿಡಬೇಕು’ ಎಂದು. ಕಷ್ಟಪಟ್ಟು ಕಲ್ಲನ್ನು ರಸ್ತೆಯ ಅಂಚಿಗೆ ಸರಿಸಿದನು. ಕಲ್ಲಿನ ಅಡಿಯಲ್ಲಿ ಒಂದು ಪುಟ್ಟ ಕೈಚೀಲವಿತ್ತು. ಚೀಲದೊಳಗೆ ಒಂದು ಚೀಟಿ ಮತ್ತು ಚಿನ್ನದ ನಾಣ್ಯವಿತ್ತು. ಚೀಟಿಯಲ್ಲಿ “ಶಭಾಸ್ ನಿನ್ನನ್ನು ಮೆಚ್ಚಿದೆ, ನಮ್ಮೂರಲ್ಲಿ ನೀನೊಬ್ಬನೇ ನಾಗರಿಕ (ಸಾಮಾಜಿಕ) ಪ್ರಜ್ಞೆಯುಳ್ಳವ. ಅದಕ್ಕಾಗಿಯೇ ನಿನಗೆ ಚಿನ್ನದ ನಾಣ್ಯ “ಬಹುಮಾನ” ಆ ನೌಕರನಿಗೆ ಸಂತೋಷವಾಯಿತು. ಮನೆಗೆ ತೆರಳಿದನು. ರಸ್ತೆಗಳಲ್ಲಿ ಅನೇಕ ಪ್ರಾಣಿಗಳು ವಾಹನಗಳಿಗೆ ಸಿಕ್ಕಿ ಸತ್ತು ದಿನಗಟ್ಟಲೆ ಬಿದ್ದಿರುತ್ತವೆ. ಅವನ್ನು ಯಾರೂ ಪಕ್ಕಕ್ಕೆ ತಳ್ಳುವುದಿಲ್ಲ. ಅವುಗಳ ಮೇಲೆ ವಾಹನಗಳು ಓಡಾಡಿ ರಕ್ತಮಾಂಸಗಳು ರಸ್ತೆ ತುಂಬಾ ಚೆಲ್ಲಾಡಿರುತ್ತವೆ. ನಮ್ಮ ದೇಶದ ಜನರಲ್ಲಿ ಯಾವಾಗ ಕನಿಕರ ದಯೆ ಉಂಟಾಗುತ್ತದೋ ದೇವರೇ ಬಲ್ಲ. ಯಾವ ರಾಷ್ಟ್ರದಲ್ಲಿ ನಾಗರಿಕ ಪ್ರಜ್ಞೆ ಇರುವ ಸಂಖ್ಯೆ ಹೆಚ್ಚುತ್ತದೋ ಆ ರಾಷ್ಟ್ರ ಜಗತ್ತಿನಲ್ಲೇ ಅತ್ಯುತ್ಕೃಷ್ಟ ರಾಷ್ಟ್ರವಾಗಬಲ್ಲದು ಎಂಬುದಕ್ಕೆ ಹಲವು ಪಾಶ್ಚಿಮಾತ್ಯ ರಾಷ್ಟ್ರಗಳು ನಿದರ್ಶನವಾಗಿವೆ.
ಈ ನಿಟ್ಟಿನಲ್ಲಿ ಸ್ವಚ್ಛ ಭಾರತದ ಅಭಿಯಾನದಲ್ಲಿ ಪ್ರತಿಯೊಬ್ಬರು ಭಾಗಿಗಳಾಗುವುದು ಅನಿವಾರ್ಯ ಹಾಗೂ ಕರ್ತವ್ಯ ಅಲ್ಲವೆ?

ಸಹಿಷ್ಣುತೆ:
ಸಹಿಷ್ಣುತೆ ಎಂದರೆ ತಾಳುವುದು ಎಂದು ಅರ್ಥ. ಒಂದು ಗಾದೆ ಮಾತು ಇದೆ! ‘ತಾಳಿದವನು ಬಾಳಿಯಾನು’ ಎಂದು. ಭೌತಿಕ, ಆದಿ ಭೌತಿಕ ಹಾಗೂ ಆಧ್ಯಾತ್ಮಿಕವಾಗಿ ಉಂಟಾಗುವ ಕೆಲವು ಸುಖ ದುಃಖಗಳನ್ನು ಹೋರಾಟದಿಂದ ಪರಿಹರಿಸಿಕೊಳ್ಳಬೇಕು. ಮತ್ತೆ ಕೆಲವನ್ನು ವಿನಮ್ರದಿಂದ ಒಪ್ಪಿಕೊಳ್ಳಬೇಕಾಗುತ್ತದೆ.
ಇತ್ತೀಚಿನ ದಿನಮಾನಗಳಲ್ಲಿ ಜಗತ್ತಿನಲ್ಲಿ ಬೃಹದಾಕಾರದ ಹಾಗೂ ಗಗನಚುಂಬಿ ಕಟ್ಟಡಗಳು ನಿರ್ಮಾಣಗೊಳ್ಳುತ್ತಿವೆ, ಆದರೆ ಮನುಷ್ಯನ ಮನಸ್ಸು ಮಾತ್ರ ಸಂಕುಚಿತಗೊಳ್ಳುತ್ತಿದೆ. ಹೆಚ್ಚು ಹೆಚ್ಚು ಕಂಪ್ಯೂಟರ್‍ಗಳನ್ನು ಕಂಡುಹಿಡಿಯುತ್ತಿದ್ದಾರೆ. ಆದರೆ ಮನುಷ್ಯ-ಮನುಷ್ಯರ ಮಧ್ಯೆ ಸಂಬಂಧಗಳು ಕಡಿದು ಹೋಗುತ್ತಿವೆ. ಜನರು ಹೆಚ್ಚು ಹಣ ಗಳಿಸುತ್ತಿದ್ದಾರೆ. ಆದರೆ ಶಾಂತಿಯೇ ಇಲ್ಲ. ಹಲವಾರು ಡಿಗ್ರಿಗಳನ್ನು ಪಡೆದಿರುತ್ತಾರೆ. ಸಾಮಾನ್ಯ ಜ್ಞಾನವೂ (ಕಾಮನ್‍ಸೆನ್ಸ್) ಇರುವುದಿಲ್ಲ. ಆದ್ದರಿಂದ ಪೈಪೋಟಿಗಳು, ಕಲಹಗಳು ಹತ್ಯೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಾರಣ ಮೌಲ್ಯಾಧಾರಿತ ಶಿಕ್ಷಣ ಮತ್ತು ಚಿಂತನೆಗಳ ಕೊರತೆ. ಜಗತ್ತಿನ ಎಲ್ಲಾ ರಾಷ್ಟ್ರಗಳು ಸ್ವಾರ್ಥ ಹಾಗೂ ಅಹಂಕಾರವನ್ನು ಬದಿಗೊತ್ತಿ ಒಂದುಗೂಡಿ ದುಷ್ಟ ಜನರನ್ನು ನಿಗ್ರಹಿಸದಿದ್ದರೆ ಇನ್ನೂ ಭೀಕರವಾದ ಘಟನೆಗಳನ್ನು ಎದುರಿಸಬೇಕಾಗಬಹುದು. ಹಾಗೆಯೇ ಹುಟ್ಟಿದ ಪ್ರತಿಯೊಂದು ಮಗುವಿಗೂ ಸಹಿಷ್ಣುತೆಯ ಮಂತ್ರವನ್ನು ಹೇಳಿಕೊಡುವ ಜವಾಬ್ದಾರಿ ಹಿರಿಯರದಾಗಿರಬೇಕು. ನಮ್ಮ ಶಿಕ್ಷಣದ್ದಾಗಬೇಕು.

ಸ್ವಾಭಿಮಾನ:
ವ್ಯಕ್ತಿ ಒಂದು ದೇಶದ ಉತ್ತಮ ನಾಗರಿಕನಾಗಬೇಕಾದರೆ, ಅವನು ಸ್ವಾಭಿಮಾನಿಯಾಗಿರಬೇಕು. ಒಬ್ಬ ಓದು-ಬರಹ ಬಲ್ಲವನು, ಜ್ಞಾನಿ, ಅಧಿಕಾರಿ, ಕೈತುಂಬಾ ಸಂಬಳ ಹಾಗೂ ಇತರೆ ಎಲ್ಲಾ ಸವಲತ್ತುಗಳು ಇದ್ದರೂ ಅವನು ಸ್ವಾಭಿಮಾನ ಶೂನ್ಯನಾಗಿದ್ದರೆ, ಆಲಸ್ಯ, ಅಪ್ರಾಮಾಣಿಕತೆಗಳಿಂದ ಸಕಾಲದಲ್ಲಿ ಕರ್ತವ್ಯಗಳನ್ನು ನಿರ್ವಹಿಸುವುದರಲ್ಲಿ ಹಿಂದೆ ಬಿದ್ದು ಜೀವನದಲ್ಲಿ ಯಶಸ್ಸು ಸಾಧಿಸುವಲ್ಲಿ ವಿಫಲನಾಗುತ್ತಾನೆ. ಪ್ರತಿಯೊಬ್ಬರೂ ಸ್ವಾಭಿಮಾನಿಗಳಾಗಬೇಕು.

ಸೇವೆ:
ವಿಶ್ವದ ಸುವ್ಯವಸ್ಥೆಯೇ ಈ ಸೇವೆಯ ಕಲ್ಪನೆಯ ಮೇಲೆ ನಿಂತಿದೆ. ಗೀತೆಯಲ್ಲಿ ಇದಕ್ಕೆ ‘ಯಜ್ಞ’ ಎಂದು ಕರೆಯಲಾಗಿದೆ. ‘ಯಜ್ಞ’ ಎಂದರೆ ‘ಕೊಡು’, ಅರ್ಪಿಸು ಎಂದು ವಿಶ್ವದಲ್ಲಿ ಎಲ್ಲೆಲ್ಲೂ ಕೊಡು-ತೆಗೆದುಕೊಳ್ಳುವಿಕೆಯು ನಡೆಯುತ್ತಿದೆ. ‘ತೆಗೆದುಕೊಳ್ಳುವುದಕ್ಕಿಂತ ಮೊದಲು ಕೊಡು ಎಂಬುದು ವೇದೋಪನಿಷತ್ತುಗಳ, ಮುಖ್ಯ ಸಂದೇಶವಾಗಿದೆ. ‘ಪರೋಪಕಾರಾರ್ಥಂ ಇದಂ ಶರೀರಂ’ ಈ ಶರೀರ ಹುಟ್ಟಿರುವುದೇ ಪರೋಪಕಾರಕ್ಕಾಗಿ ಎಂದು ಉಪನಿಷತ್ತು ಹೇಳುತ್ತದೆ. ಜಗತ್ತಿನಲ್ಲಿ ಪರೋಪಕಾರ ಅಥವಾ ಸೇವೆ ಎಂಬ ತತ್ವದಿಂದ ಸೌಹಾರ್ದತೆ ಹಾಗೂ ಸಂಬಂಧಗಳು ಉಳಿದಿರುತ್ತವೆ.
ಸ್ವಾಮಿ ವಿವೇಕಾನಂದರು “ಶುದ್ಧರಾಗಿರುವುದು, ಪರರಿಗೆ ಹಿತವನ್ನು ಮಾಡುವುದು ಇದೇ ಎಲ್ಲಾ ಪೂಜೆಯ ಸಾರ. ದರಿದ್ರರಲ್ಲಿ, ದೀನರಲ್ಲಿ, ದುರ್ಬಲರಲ್ಲಿ ಯಾರು ಶಿವನನ್ನು ನೋಡುವರೋ ಅವರೇ ನಿಜವಾಗಿ ಶಿವನನ್ನು ಆರಾಧಿಸುವರು. ಕೇವಲ ವಿಗ್ರಹದಲ್ಲಿ ಮಾತ್ರ ಶಿವನನ್ನು ನೋಡುವುದು. ಭಗವದಾರಾಧನೆಗೆ ಪೀಠಿಕೆ ಮಾತ್ರ. ಯಾರು ಜಾತಿ, ಕುಲ, ಗೋತ್ರ, ಜನಾಂಗವನ್ನು ಗಮನಿಸದೆ ಒಬ್ಬ ದೀನನಿಗೆ ಸಹಾಯ ಮಾಡುವನೋ, ದೀನನನ್ನು ಸೇವಿಸುವನೋ ಅವನನ್ನು ಶಿವನು, ತನ್ನನ್ನು ದೇಗುಲದಲ್ಲಿ ಮಾತ್ರ ನೋಡುವ ಭಕ್ತರಿಗಿಂತ ಹೆಚ್ಚು ಮೆಚ್ಚುವನು” ಎಂದು ಹೇಳಿದ್ದಾರೆ.
ಸಮಾಜದಲ್ಲಿ ನಿಜವಾದ ಅರ್ಥದಲ್ಲಿ ಯಾರು ಸುಖಿಗಳು, ಯಾರು ದೊಡ್ಡವರೆಂದರೆ ತಮ್ಮನ್ನು ಇತರರ ಸೇವೆಗಾಗಿ ತೊಡಗಿಸಿಕೊಂಡಿದ್ದಾರೋ ಅವರು. ಇಂಥವರು ಸಮಾಜದ ಶ್ರೇಷ್ಠನಾಗರಿಕರಲ್ಲದೆ ಮತ್ಯಾರು! ಮನುಷ್ಯನು ಇಂಥ ಶ್ರೇಷ್ಠ ಗುಣವನ್ನು ಬೆಳಸಿಕೊಳ್ಳಬೇಕು.
ಯಾರು ವಿಧವಿಧವಾದ ಉಪಾಯಗಳಿಂದ ತೆರಿಗೆ ಕೊಡುವುದನ್ನು ತಪ್ಪಿಸುತ್ತಾರೋ ಅವರು ನಾಗರಿಕರಲ್ಲ. ಅವರು ದೇಶದಲ್ಲಿ ಇದ್ದಾರೆಯೇ ಹೊರತು, ದೇಶದವರಾಗಿಲ್ಲ ದೇಶಕ್ಕೋಸ್ಕರವಾಗಿಯೂ ಇಲ್ಲ. ಅಂಥವರನ್ನು ಗೀತೆಯು (ಸ್ತೇನ) ಕಳ್ಳ ಎಂದು ಉಲ್ಲೇಖಿಸಿದೆ. ಭಾರತೀಯರು ಇಂಥ ಸಂಕುಚಿತತೆಯನ್ನು ಬಿಟ್ಟು ಒಳ್ಳೆಯ ನಾಗರಿಕರಾಗಬೇಕು.

ಧರ್ಮ-ಸಂಸ್ಕೃತಿ:
ಸಮಾಜದ ಯಾವೊಬ್ಬ ವ್ಯಕ್ತಿಯು ಧರ್ಮ ಮತ್ತು ಸಂಸ್ಕೃತಿಗಳಿಗೆ ಎಲ್ಲಿಯವರೆಗೆ ವಿಶೇಷ ಸ್ಥಾನವನ್ನು ಕೊಡುವುದಿಲ್ಲವೊ ಅಲ್ಲಿಯವರೆಗೂ ಅವನು ಶ್ರೇಷ್ಠ ನಾಗರಿಕನಾಗಲಾರನು. ಇವು ಸಮಾಜದ ಎರಡು ಕಣ್ಣುಗಳಿದ್ದಂತೆ. ಪಶುತ್ವದಿಂದ ಮನುಷ್ಯತ್ವಕ್ಕೂ, ಮನುಷ್ಯತ್ವದಿಂದ ಮಹಾಮಾನವತ್ವಕ್ಕೆ ಕೊಂಡೊಯ್ಯುವ ಎರಡು ಸಾಧನಗಳು. ಆದ್ದರಿಂದ ಮನುಷ್ಯ ಇವನ್ನು ನಿರ್ಲಕ್ಷಿಸುವಂತಿಲ್ಲ.
ಈ ಮೇಲಿನ ವಿಚಾರಗಳನ್ನು ಪರಾಮರ್ಶಿಸಿ ಉತ್ತಮ ನಾಗರಿಕರಾಗುವಂಥ ಪ್ರಯತ್ನವನ್ನು ಮಾಡಬೇಕು. ಯಾವ ರಾಷ್ಟ್ರದಲ್ಲಿ ನಾಗರಿಕರು ಹೆಚ್ಚಾಗಿರುವರೋ ಆ ರಾಷ್ಟ್ರ ಶ್ರೇಷ್ಠ ಹಾಗೂ ಬಲಿಷ್ಠವಾಗಲು ಸಾಧ್ಯ. ಈ ನಿಟ್ಟಿನಲ್ಲಿ (ನಮ್ಮ ರಾಷ್ಟ್ರವನ್ನು) ಬಲಿಷ್ಠ ರಾಷ್ಟ್ರವಾಗಿಸಲು ನಾವೆಲ್ಲ ಸೇರಿ ಪ್ರಯತ್ನಿಸೋಣ. ಅಲ್ಲವೆ!

Leave a Reply