ಪರೀಕ್ಷೆ – ಅಂಕ – ಫಲಿತಾಂಶ

ಪರೀಕ್ಷೆ – ಅಂಕ – ಫಲಿತಾಂಶ

ಏನ್ರೀ ನಿಮ್ಮ ಮಗ ಎಷ್ಟು Time ವೇಸ್ಟ್ ಮಾಡ್ತಾನಲ್ಲಾ? ಯಾವಾಗ ನೋಡಿದ್ರು ಹೊರಗೇ ಇರ್ತಾನೆ? ಇಲ್ಲಾಂದ್ರೆ ಬರೇ ಆಟ ಆಡ್ತಿರ್ತಾನೆ. ನೀವು ಅವನಿಗೆ ಬಿಡುವು ಸಿಗದಂಗೆ ಟ್ಯೂಷನ್ ಗೀಷನ್ ಹಾಕಿಲ್ಲ ನೋಡ್ರಿ ಅದಕ್ಕೆ. ಹಿಂಗ ಬಿಟ್ರೆ ಮುಂದೆ ಉಡಾಳ ಆಗ್ತಾನ್ ನೋಡ್ರಿ. ಈಗ್ಲೇ ಹಿಡಿದು ಕೂರಿಸಿದ್ರೆ ಕೈಗೆ ಸಿಗತಾನೆ. ಇಲ್ಲಾ ಅಂದ್ರೆ ಕೈ ಬಿಡ್ತಾನಷ್ಟೆ. ದೇವ್ರೇ ಕಾಯ್ಬೇಕು ನಿಮ್ಮನ್ನ. ನನ್ನ ಮಗನ್ನ ನೋಡೀರಿ…? ಒಂದು ಚೂರು ಸಮಯಾನ ಆ ಕಡೆ.. ಈ ಕಡೆ ಹೋಗಾಕ ಬಿಡ್ಹಂಗಿಲ್ಲ. ಬೆಳಿಗ್ಗೆ ಐದು ಗಂಟೆಗೆ ಎಬ್ಬಿಸಿ ಬಿಡ್ತೀವಿ. ಸ್ವಿಮಿಂಗ್ ಹೋಗ್ತಾನೆ…, 6 ಗಂಟೆಗೆ ಬಂದು 8ರ ವರೆಗೆ ಟ್ಯೂಷನ್ ಹೋಗತಾನೆ, ಮನೆಗೆ ಬಂದು ತಿಂಡಿ ತಿಂದು ಮನೆಗೆಲಸ ಮಾಡಿ ಶಾಲೆಗೆ ಹೋಗ್ತಾನೆ. ಸಂಜೆಯೂ ಹಾಗೆ ಓದು ಅದು ಇದು ಅಂತ ಇದ್ದೇ ಇರುತ್ತೇ.
ಇದು ಇಂದಿನ ತಾಜಾ ಪಾಲಕರೊಳಗಿನ ಆಗಾಧ ಆಕಾಂಕ್ಷೆ. ತಮ್ಮ ಮಗು ಎಲ್ಲಾ ಕಲಿಬೇಕು. ಸಾಮರ್ಥ್ಯ ಇರುವುದು ಬಿಡುವುದು ಅವರಿಗೆ ಬೇಕಾಗಿಲ್ಲ. ತಮಗೆ ಏನೆಲ್ಲಾ ಕಲಿಯಲು ಸಾಧ್ಯವಾಗಲಿಲ್ಲವೋ ಅದೆಲ್ಲವನ್ನೂ ಮಗು ಕಲಿಯಬೇಕು ಎಂಬುದು ಬಹುದೊಡ್ಡ ಆಸೆ. ಅದಕ್ಕಾಗಿ ನೀರೆರೆದು ಎರೆದು ಹುಲುಸಾಗಿ ಬೆಳೆಸುತ್ತಿದ್ದಾರೆ. ಈ ರೀತಿ ಗಿಡಮರಗಳಿಗೆ ನೀರೆದಿದ್ದರೆ ನಾಡೆಲ್ಲಾ ಕಾಡಾಗಿರುತ್ತಿತ್ತೋ ಏನೋ. ಅದೇನೇ ಇರಲಿ ಇದೆಲ್ಲಾ ಮಕ್ಕಳದ್ದಲ್ಲ ಪಾಲಕರದ್ದೇ ಆಸೆಗಳು. ನೀರು ಹೆಚ್ಚಾಗಿ ಜೌಗು ಹಿಡಿದರೂ ಮಗು ಅದನ್ನು ಕಲಿಯಲೇ ಬೇಕು. ಮಗು Busy ಆಗಿದೆ ಎಂದರೆ ಕಲಿಯುತ್ತಿದೆ ಎಂದರ್ಥ. ಒಳಗೆ ಯಾವ ಒತ್ತಡ ಇದೆ. ಎಷ್ಟು ಅನುಭವಾತ್ಮಕ ಕಲಿಕೆಯಾಗುತ್ತಿದೆ. ಇದಾವುದೂ ತಿಳಿಯುವ ಗೋಜಿಗೂ ಹೋಗುವುದಿಲ್ಲ.
ಸದ್ಯ ಹೇಳಬೇಕಾಗಿರುವುದು ಇಷ್ಟೇ, ಕೆಲವೇ ವರ್ಷಗಳ ಹಿಂದೆ ಎಂದರೆ, ಸುಮಾರು 10-15 ವರ್ಷಗಳ ಹಿಂದೆ ಇಷ್ಟು ಕಲಿಕೆ, ಪರೀಕ್ಷೆ, ಅಂಕ, ಫಲಿತಾಂಶಗಳಿಗಾಗಿ ಪಾಲಕರೂ ಆತಂಕಗೊಳ್ಳುತ್ತಿರಲಿಲ್ಲ. ಮಕ್ಕಳಿಗೂ ಒತ್ತಡ ಹೇರುತ್ತಿರಲಿಲ್ಲ. ಅದಕ್ಕೆ ನಾನೇ ಬಹುದೊಡ್ಡ ಸಾಕ್ಷಿ. ಹಾ! ನನಗೆ ನನ್ನ ಕಲಿಕಾದಿನದ ಕೆಲವು ಸಂದರ್ಭಗಳು ನೆನಪಾಗುತ್ತಿವೆ. ನಾನೂ ಪದವೀ ಶಿಕ್ಷಣ ಕಲಿತಿರುವೆ. (BA.LLB) ಆದರೆ ಆಸಕ್ತಿ ಶಿಕ್ಷಕ ವೃತ್ತಿಯಲ್ಲಿದ್ದುದರಿಂದ ಶಾಲೆಯಲ್ಲಿ ಶಿಕ್ಷಕಿಯಾಗಿ ಮಕ್ಕಳೊಂದಿಗೆ ಕಲಿಸುತ್ತಾ ಕಲಿಯುತ್ತಿದ್ದೇನೆ. ನನ್ನ ಮನೆ ಅವಿಭಕ್ತ ಕುಟುಂಬ. ಮನೆಯಲ್ಲಿ ತುಂಬಾ ಮಕ್ಕಳಿದ್ದರು. ಎಲ್ಲರೂ ಶಾಲಾಮೆಟ್ಟಿಲು ಏರಿದವರೇ. ನಮ್ಮ ಮನೆಗೆ ಯಾರಾದರೂ ಅತಿಥಿಗಳು ಮನೆಗೆ ಬಂದ ಸಂದರ್ಭದಲ್ಲಿ ಕುಶಲತೆ ವಿಚಾರಿಸುತ್ತಿದ್ದರು. ಏನೂ… ಮನೆಯಲ್ಲಿ ಎಲ್ಲಾ ಆರೋಗ್ಯವಾಗಿದ್ದೀರಾ? ಮಕ್ಕಳೆಲ್ಲ ಹೇಗಿದ್ದಾರೆ? ಏನ್ ಕಲಿತಿದ್ದಾರೆ? ಎಂದು ಕೇಳಿದರೆ, ಅಪ್ಪ ನನ್ನ ಅಮ್ಮಳನ್ನು ಕರೆದು ನಮ್ಮ ಉಮಾ ಎಷ್ಟನೇ ಕ್ಲಾಸು ಎಂದು ಕೇಳುತ್ತಿದ್ದರು. ಆಗ ಅಮ್ಮಾ ಗೊಂದಲಕ್ಕೊಳಗಾಗಿ ಊಂ… 5 ಅಥವಾ 6ನೇ ಕ್ಲಾಸ್ ಇರಬೇಕು ಎಂದು ಹೇಳಿ, ಏ… ಉಮಾ ನೀನು 5ನೇ ಕ್ಲಾಸ್ ಹೌದಲ್ಲೋ? ಎಂದು ಖಾತ್ರಿಪಡಿಸಿಕೊಳ್ಳುತ್ತಿದ್ದಳು. ಹಾಗಂತ ಓದಿಸಲು ಬೇಜವಾಬ್ದಾರಿ ಅಂತೇನೂ ಅಲ್ಲ. ಕಲಿಸುತ್ತಿದ್ದರು. ಆದರೆ ಅದಕ್ಕಾಗಿ ಮಕ್ಕಳನ್ನು ಒತ್ತಡಕ್ಕೆ ಒಳಪಡಿಸುತ್ತಿರಲಿಲ್ಲ. ಆದರೆ ಎಲ್ಲಾ ಸಂಬಂಧಗಳೊಟ್ಟಿಗೆ, ಹೊಂದಾಣಿಕೆಗಳೊಂದಿಗೆ ಅನುಭವಜನ್ಯ ಕಲಿಕೆಯೇ ಹೆಚ್ಚಾಗುತ್ತಿತ್ತು.
ಇಂದು ಮಗು ಆ ಕ್ಲಾಸು ಈ ಕ್ಲಾಸು ಅಂತ ಬಿಡುವಿಲ್ಲದಂತೆ ಮಾಡುವುದು. ಅದೂ ಹೇಳಿದ್ದನ್ನೆಲ್ಲಾ ತಲೆಯಲ್ಲಿ ತುಂಬುವ ಪಾಠ. ಮಗುವಿನ ಸ್ವಂತ ವಿಚಾರ ಶಕ್ತಿ ಬೆಳೆಯುವ ಪರಿಪಾಠವಂತೂ ಇಲ್ಲವೇ ಇಲ್ಲ. ಕೇವಲ ಅಂಕ, ದೊಡ್ಡ ಉದ್ಯೋಗ ಎಲ್ಲಕ್ಕಿಂತ ಹೆಚ್ಚಿನದೆಂದರೆ ಹಣಗಳಿಕೆ. ಇಷ್ಟಕ್ಕೆ ಸೀಮಿತ. ಪಾಠ… ಪಾಠ.. ಪಾಠ ಅಂತ ಆಟ, ವ್ಯಾಯಾಮ, ದೈಹಿಕ ಬೆಳವಣಿಗೆ, ಬುದ್ಧಿಮಟ್ಟ, ಮೌಲ್ಯಗಳು ಎಲ್ಲವೂ ಸೊನ್ನೆ. ಈ ರೀತಿ ಅಂಕಗಳ ಅಡಿಪಾಯದಲ್ಲಿ ನಿಂತವರು ಕೇವಲ ಗ್ರೇಡ್‍ನಲ್ಲಿ First. ಆದರೆ, ಇವರೇ ಮುಂದಿನ ಅತ್ಯಂತ ಹೆಚ್ಚಿನ ಸಂಖ್ಯೆಯ ನಿರುದ್ಯೋಗಿಗಳು. ಯಾರ ಹೊರ ಪ್ರಪಂಚದ ಜ್ಞಾನ ಹೊಂದದೇ ಯಾವುದಕ್ಕೂ ನಿಲುಕದೆ ನಲುಗುವವರು. ಹಾಗಾದರೆ, ಈ ಪರೀಕ್ಷೆ-ಅಂಕ-ಫಲಿತಾಂಶಗಳ ಮೇಲೆ ನಿಲ್ಲುವುದು, ಓದಿನ ಬಗೆಗೆ ಆತಂಕದ ಪರಿಸ್ಥಿತಿ ನಿರ್ಮಾಣ ಮಾಡುವುದು ಸರಿಯಾದ ವಿಧಾನವೇ?
ಹೀಗೊಂದು ಸಂದರ್ಭ ನಾನು PUC ಕಲಿಯುವಾಗ ಎದುರಾಗಿತ್ತು. ಏನೆಂದರೆ, ನನ್ನ ಅಪ್ಪ ನನ್ನ ಫಲಿತಾಂಶ ನೋಡಲು ಕಾಲೇಜಿಗೆ ಹೋಗಿದ್ದರು. ಆಗೆಲ್ಲ ಪ್ರಥಮ, ದ್ವಿತಿಯ ಹಾಗೂ ತೃತಿಯ ದರ್ಜೆಯಲ್ಲಿ ತೇರ್ಗಡೆಯಾದ ಪಟ್ಟಿಗಳನ್ನು ನೋಟಿಸ್ ಬೋರ್ಡ್‍ನಲ್ಲಿ ಹಾಕುತ್ತಿದ್ದರು. ಆ ದಿನ ಅಪ್ಪ ನನ್ನ ಪರೀಕ್ಷೆಯ ಫಲಿತಾಂಶ ನೋಡಲು ತುಂಬಾ ಖುಷಿಯಿಂದ ಕಾಲೇಜಿಗೇನೋ ಹೋದರು. ಆದರೆ ಹೋದ 1/2 ಗಂಟೆಗೆ ವಾಪಾಸ್ ಬಂದಿದ್ದರು. ನಿನ್ನ ಹೆಸರು/ಸಂಖ್ಯೆ ನೋಟಿಸ್ ಬೋರ್ಡ್‍ನಲ್ಲಿ ಇಲ್ಲ. ಫೇಲ್ ಆಗಿರಬಹುದು. ಹೋಗ್ಲಿ ಬಿಡಮ್ಮ ಅಂತ ಹೇಳಿ ಏನೂ ಬೇಸರವೂ  ವ್ಯಕ್ತಪಡಿಸದೆ ಒಳಗೆ ನಡೆದ್ರು. ನನಗೆ ತುಂಬಾ ಬೇಸರವಾಗಿ ತೀರಾ ಫೇಲ್ ಆಗೋವಷ್ಟು ಬರೆದಿರಲಿಲ್ಲ. ಹಾಗಾದರೆ ಇನ್ನೂ ತುಂಬಾ ಬರೆಯುವುದಿರುತ್ತಾ? ಏನೇನೋ ಆಲೋಚನೆ ಬರತೊಡಗಿದವು. ತುಂಬಾ ನಿರಾಶೆಯಿಂದ ಬಿಕ್ಕಳಿಸಿ ಬಿಕ್ಕಳಿಸಿ ಅತ್ತೆ. ಅದಕ್ಕೆ ಅಪ್ಪ ಹೋಗ್ಲಿ ಬಿಡಮ್ಮ ಮುಂದೆ ಬೇಕಾದಷ್ಟು ಪರೀಕ್ಷೆ ಬಂದೇ ಬರ್ತಾವೆ. ಏನಾಗಲ್ಲಾ…. ಮತ್ತೆ October ನಲ್ಲಿ ಬರೀ ಬಹುದಂತೆ. ಎಷ್ಟು ಸಮಾಧಾನದ ಉತ್ತರಕೊಟ್ಟರು. ಇದಾದ ಸ್ವಲ್ಪ ಸಮಯದಲ್ಲೇ ಅಣ್ಣಾ ಬಂದು ಕಾಡಿಸಿದ. ಉಮಾ S.K. ಫೇಲ್ ಅಂತ ಹೇಳಿ ನಗ್ತಿದ್ದ. ಯಾಕಂದ್ರೆ ಅವನ ಜೊತೆ ನಾನೂ ಸೇರಿದೆ ಅನ್ನೋ ಖುಷಿ ಅವನಿಗೆ. ಅದೇನೇ ಇರ್ಲಿ, ಇವತ್ತು ಅವನೊಬ್ಬ ಒಳ್ಳೆ Businessman. ಇದ್ದಕ್ಕಿದ್ದಂತೆ ಅಣ್ಣಾ ಏ…. ತಡಿಯೇ ನಾನೊಮ್ಮೆ ನಿನ್ನ Result ನೋಡಿ ಬರ್ತೀನಿ ಅಂದ. ಕಾಲೇಜಿನ ಕಡೆ ಹೋದ. ತಿರುಗಿ ಬಂದು ಅಲ್ಲೆಲ್ಲೂ ಅವಳ ನಂಬರ್ ಇಲ್ವೇ ಇಲ್ಲ ಎಂದು ಹೇಳಿ ಹೋದ. ಸ್ವಲ್ಪ ಹೊತ್ತಿಗೆ ಅಪ್ಪಾ ಜಿಲೇಬಿ ತಂದ್ರು! ನನಗೆ ಆಶ್ಚರ್ಯ! ನೋಡಮ್ಮ ನನಗೆ ನೀನು ಫೇಲ್ ಆದ್ರೂ ಪಾಸ್ ಆದ್ರೂ ದುಃಖ ಇಲ್ಲ. ನೀನು ಅಳ್ಬೇಡ ಅಂತ ಹೇಳಿ ತಿನಿಸಿದ್ರು. ನಂತರ ತಮ್ಮ ಕೆಲಸಕ್ಕೆ ಅಂತ ಹೊರಗೆ ಹೋದ್ರು. ಒಂದು ಗಂಟೆ ನಂತರ ಮನೆಗೆ ಮರಳಿ ಬಂದ ಅಪ್ಪನ ಕೈಯಲ್ಲಿ ಮೈಸೂರ್ ಪಾಕ್ ಇತ್ತು. ಬಂದವರೇ ಅಮ್ಮನನ್ನು ಕೂಗಿ ಕರೆದರು ಪ್ರೇಮಾ…. ಏ…. ಪ್ರೇಮಾ.. ಅಂತಾ. ಅಮ್ಮ ಹೊರಗೆ ಬಂದು ಏನ್ರೀ… ಅಂದ್ರು. ಅಪ್ಪ ತಕ್ಷಣ ಬಾಯಿ ತೆಗಿ ಅಂದವರೇ ಮೈಸೂರು ಪಾಕ್ ಬಾಯಿಗೇ ಹಾಕ್ಬಿಟ್ರು.
ಏ….. ಏನ್ ನೀವು? ಬೆಳಿಗ್ಗೆ ಜಿಲೇಬಿ ತಂದ್ರಿ, ಈಗ ಮೈಸೂರು ಪಾಕ್! ಏನಾತು? ಲಾಟರಿಗೀಟರಿ ಹೊಡಿತೇನು? ಅಂದಳು.
ನನ್ನ ಮಗಳಿಗೆ ಇವತ್ತು ನಾವು ಭಾಳ ಬೇಜಾರಾಗೋ ಹಂಗೆ ಮಾಡೀವಿ. ನನ್ನ ಮಗಳು ಉಮಾ Fail ಆಗಿಲ್ಲೇ. ನನಗೆ ಪ್ರಾಂಶುಪಾಲರು ಭೆಟ್ಟಿ ಆದ್ರು. ಆಕಿ First Class ನಲ್ಲಿ Pass ಆಗ್ಯಾಳ, ಅದಕ್ಕೆ ಅಲ್ಲಿಂದ ಎದ್ದು ಹಿಂಗೇ ಬಂದುಬಿಟ್ಟೆ ಅಂದ್ರು. ನಾನೂ ಒಮ್ಮೆಲೆ ಎದ್ದು ಓಡಿ ಬಂದೆ ನನಗೇ ಗೊತ್ತಿತ್ತು. ನಾನು Fail ಆಗಲ್ಲಾ ಅಂತ ಆದ್ರೆ, ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗುತ್ತೇನೆಂದೂ ತಿಳಿದಿರಲಿಲ್ಲ. First Class ನಲ್ಲಿ ಪಾಸಾಗಿದ್ದೀನಿ. ನೀವೂ Fail ಅಂತ ಹ್ಯಾಗ ಹೇಳಿದ್ರಿ. ನಿಮಗ್ಯಾರಿಗೂ Result ನೋಡ್ಲಿಕ್ಕೆ ಬರ್ಲಿಲ್ಲ ಅಂತ ಗೊತ್ತಿದ್ರೆ ನಾನೇ ಹೋಗಿ ನೋಡಿ ಬರುತ್ತಿದ್ದೆ ಎಂದು ಸ್ವಲ್ಪ ಏರು ಧನಿಯಲ್ಲಿ ಜಂಭದಿಂದ ಹೇಳಿದೆ.
ಅದಕ್ಕೆ ಅಣ್ಣಾ ಅಂದ, ನೀನ್ಯಾವಾಗಿಂದ ನಮ್ಮ ಮರ್ಯಾದೆ ತೆಗೆಯಕ್ಕ First class ಪಾಸ್ ಆಗ್ಲಿಕ್ಕೆ ಚಾಲು ಮಾಡೀ? ನಾವು ನಿನ್ನ ಹೆಸರನ್ನು First class List ನಲ್ಲಿ ನೋಡ್ಲಿಕ್ಕೆ ಹೋಗ್ಲಿಲ್ಲ. ಆಗಿದ್ರೆ Just pass ಆಗಿರಬಹುದು ಅಂತ ತಿಳಿದಿದ್ವಿ. ಇಲ್ಲಪ್ಪಾ ಅಂದ್ರೆ Fail ಅಂತ ತಿಳಿದಿದ್ವಿ. ಈಗಾರ ಏನಾತು ಒಳ್ಳೇದಾತೋ ಇಲ್ಲೋ ಬಿಡು. ನಮಗೆಲ್ಲ ಖುಷಿ ಆತು ಅಂದ.
ನಮ್ಮಪ್ಪನೋ ಎಲ್ಲರಿಗೂ Phone ಮಾಡಿ ಹೇಳ್ಲಿಕ್ಕೆ ಶುರು ಮಾಡಿದ್ರು.
ಇದನ್ನೆಲ್ಲಾ ಹೇಳೋ ಪ್ರಸಂಗ ಯಾಕ ಬಂತದ್ರೆ ಈಗ ಗ್ರೇಡ್ ಅಂಕ ಅಂತ ತಕತಕ ಕುಣಿಯುತ್ತಿರುವ ಪಾಲಕರು, ಕುಣಿಸಿದಂತೆ ಅಸಹಾಯಕರಾಗಿ ಕುಣಿಯುತ್ತಿರುವ ಭಯಗ್ರಸ್ತ ಮಕ್ಕಳೂ, ಜಗತ್ತಿನ ಆಗುಹೋಗುಗಳ, ಸಮಾಜದೊಂದಿಗಿನ ಹೊಂದಾಣಿಕೆ, ಬದುಕುವ ಪರಿಗಳ, ಅದೂ ಹೋಗಲಿ ತಮ್ಮ ತಮ್ಮ ರಕ್ತ ಹಂಚಿಕೊಂಡಿರುವವರ ಜೊತೆಯೂ ಹೇಗಿರಬೇಕೆಂಬ ಸಾಮಾನ್ಯ ನಡುವಳಿಕೆಯೂ ಇಲ್ಲದೆ ಯಾವುದನ್ನೂ ಅನುಭವಿಸದೆ ಒಂಟಿತನದಲ್ಲಿ ಜೀವಿಸುತ್ತಿದ್ದಾರೆ. ತಾವು, ತಮ್ಮ ಪುಸ್ತಕ, ಇವೆರಡೇ ಅವರ ಸಂಬಂಧಿಗಳು ಕಲಿಕಾ ಸಾಧನಗಳು. ನಮಗೆ ಶಾಲಾ/ಕಾಲೇಜು ದಿನಗಳಲ್ಲಿ ಈ ರೀತಿಯ ಅಂಕ ಗ್ರೇಡ್‍ಗಳ ಬಗ್ಗೆ ಆತಂಕ ಇರಲಿಲ್ಲ, ಒತ್ತಡವೂ ಇರಲಿಲ್ಲ. ಅನೆಯ ವಾತಾವರಣ ಆ ಬಗ್ಗೆ ದೀರ್ಘ ಒತ್ತಡ-ಆತಂಕ ಸೃಷ್ಟಿಸುತ್ತಿರಲಿಲ್ಲ. ಆದರೂ ಪ್ರಸ್ತುತ ಗ್ರೇಡ್, ಗರಿಷ್ಟ ಅಂಕ ಗಳಿಸಿದ ಮಕ್ಕಳೊಂದಿಗೆ ಹೋಲಿಸಿಕೊಂಡರೆ ನಮಗೇನೋ ಅವರಿಗಿಂತ ನಾವೇ ಉತ್ತಮರು ಎನಿಸುತ್ತದೆ. ಆತಂಕವಿಲ್ಲದ ಓದು, ಅನುಭವಾತ್ಮಕ ಓದು ಬದುಕಿನಲ್ಲಿ ಅನೇಕ ಮೌಲ್ಯಗಳನ್ನು ಕಲಿಸಿಕೊಟ್ಟಿದೆ. ಸಮಾಜದೊಂದಿಗೆ ಬದುಕುವ ಪರಿವೆಯ ಅರಿವೂ ಇದೆ. ಎಲ್ಲಕ್ಕಿಂತ ಮಿಗಿಲಾಗಿ ಒತ್ತಡವಿಲ್ಲದ ಕುಟುಂಬದಿಂದಾಗಿ, ಗ್ರೇಡ್ ಬಂದಿಲ್ಲ. ಗರಿಷ್ಟ ಅಂಕ ಗಳ���ಸಿಲ್ಲ ಎಂಬ ಕಾರಣಕ್ಕೆ ನಮ್ಮ ಜೀವನವನ್ನೇ ಬಲಿಕೊಡುವ ಕ್ಷುಲ್ಲಕ ಯೋಚನೆಗಳಿಗೆ ಒಳಗಾಗದೆ ಜೀವನ ನಿರ್ವಹಣೆ, ಬಂದದ್ದನ್ನು ಎದುರಿಸುವ ಸಾಮರ್ಥ್ಯಗಳನ್ನು ನಮ್ಮಲ್ಲಿ ಕುಟುಂಬ ಬೆಳೆಸಿದೆ. ಭವಿಷ್ಯದ ಯೋಜನೆ ರೂಪಿಸುವ, ಧೈರ್ಯದಿಂದ ಕಾಯಕ ನಿರ್ವಹಿಸುವ ಎಲ್ಲಕ್ಕಿಂತ ಮಿಗಿಲಾಗಿ ಪರಿಸರ ಪ್ರೇಮ ನಮ್ಮ ಹೃದಯದಲ್ಲಿ ಬಿತ್ತಿದ್ದಾರೆ- ನಮ್ಮ ಹಿರಿಯರು.
ಇತ್ತೀಚೆಗಂತೂ ವಿದ್ಯಾರ್ಥಿಗಳಲ್ಲಾಗುತ್ತಿರುವ ಒತ್ತಡ, ಭವಿಷ್ಯದ ಬಗೆಗಿನ ಆತಂಕಗಳು ದಿನಪತ್ರಿಕೆ, ದೂರದರ್ಶನಗಳಲ್ಲಿ ನೋಡುತ್ತೇವೆ. ಪರೀಕ್ಷೆ ಭಯದಿಂದ ಪರೀಕ್ಷೆಯ ಹಿಂದಿನ ದಿನವೇ ನೇಣುಹಾಕಿಕೊಂಡ ಸುದ್ದಿ, ಗರಿಷ್ಟ ಅಂಕಗಳಿಸಿಲ್ಲವೆಂಬ ಕಾರಣಕ್ಕೆ ರೇಲ್ವೇ ಹಳಿಗೆ ಸಿಕ್ಕಿದ್ದು, ಮಾನಸಿಕ ಒತ್ತಡದಿಂದಾಗಿ ಒಂಟಿತನ ಎದುರಿಸುವುದು. ಒಬ್ಬರೇ ಕೋಣೆಯಲ್ಲಿ ಕೂಡುವುದು, ಇವೆಲ್ಲ ಇಂದಿನ ಪಾಲಕರು ಮಕ್ಕಳಲ್ಲಿ ತುಂಬಿರುವ ಶಿಕ್ಷಣ. ಅಂಕ, Ranking ಬರಬೇಕೆನ್ನುವ ಅಭಿಲಾಷೆಗಳು ಮಕ್ಕಳಲ್ಲಿ ಏತಕ್ಕಾದರೂ ಈ ಶಿಕ್ಷಣ ಎನ್ನುವುದು ಬಂತೋ ಎನ್ನುವ ಪರಿಸ್ಥಿತಿಯನ್ನು ತಂದೊಡ್ಡಿವೆ. ಅಂತರ್ಗತವಾಗಿ ಹುದುಗಿರುವ ಪ್ರತಿಭೆಯನ್ನು ಗುರುತಿಸದೆ ಒಲ್ಲದ ವಿಷಯಗಳನ್ನು ಮಕ್ಕಳಲ್ಲಿ ತುಂಬಿ ನಿಜವಾದ ಪ್ರತಿಭೆಗೆ ಮಣ್ಣು ಹಾಕಿ ಮುಚ್ಚಿದಂತಾಗಿದೆ. ಇನ್ನು ಕೆಲವು ಪಾಲಕರಂತೂ ಹೊಂದಿರುವ ಆಕಾಂಕ್ಷೆಗಳೇ ಬೇರೆ ರೀತಿಯವು. ಎಲ್ಲವನ್ನು ಮಗು ಕಲಿಸಿರಬೇಕು. ಸಮಯ ಯಾವಾಗ ಹೇಗೆ ಬರುತ್ತೋ ಯಾರಿಗೆ ಗೊತ್ತು? ಎನ್ನುವ ಮಾತಿನವರು. ಅದಕ್ಕಾಗಿ ಮಗು ಮನೆಯಲ್ಲಿರುವುದೇ ಅಪರೂಪ. ಕುಟುಂಬ ಸಂಬಂಧಗಳ ಜೊತೆ ಸಮಯ ಕಳೆಯುವುದೇ ಮಗುವಿಗೆ ಸಾಧ್ಯವಾಗುವುದಿಲ್ಲ. ಮನೆಗೆ ಯಾರಾದರೂ ಬಂದರೆ, ಅತಿಥಿಗಳು ಆಗಮಿಸಿದರೆ ಅವರೊಂದಿಗೆ ಮುಕ್ತವಾಗಿ ಹೇಗೆ ಮಾತನಾಡಬೇಕು ಎಂಬುದೇ ತಿಳಿಯದೆ ಗೊಂದಲಕ್ಕೀಡಾಗುತ್ತಾರೆ. ಸಂಬಂಧದಲ್ಲಿ ಅವರೇನಾಗಬೇಕೆಂಬುದೇ ತಿಳಿಯದಂತೆ. ಮುಖ ಪರಿಚಯವೇ ಇಲ್ಲದಂತೆ ವರ್ತಿಸುತ್ತಾರೆ. ಇದು ಮಗುವಿನ ತಪ್ಪಲ್ಲ, ಭಾವನೆಗಳು, ಮಮತೆ, ಕರುಣೆ ಈ ಬಗ್ಗೆ ಪರಿಚಯವೇ ಅವರಿಗೆ ಇರುವುದಿಲ್ಲ. ಕಲಿಸೋಣ ಅದಕ್ಕೇನಂತೆ ಆದರೆ ಅವರ ಸಾಮರ್ಥ್ಯ ಆಸಕ್ತಿ ಗುರುತಿಸಿ ಅವರನ್ನು ಮಾನವೀಯ ಮೌಲ್ಯಗಳ ಜೊತೆಗೆ ಬೆಳೆಸೋಣ.

Leave a Reply