ಬಾಲ್ಯದ ನೆನಪಿನಂಗಳದಲ್ಲಿ.

ಬಾಲ್ಯದ ನೆನಪಿನಂಗಳದಲ್ಲಿ.

ಬಾಲ್ಯ ಅನ್ನೊದೇ ಹಾಗೆ! ಆಗಾಗ ಮರುಕಳಿಸುತ್ತಲೇ ಇರುತ್ತದೆ. ಎಷ್ಟೇ ವಯಸ್ಸಾದವರಾದರೂ ಯುವಕ, ಯುವತಿಯರೂ ಬಾಲ್ಯದ ನೆನಪಿನಂಗಳದಲ್ಲಿ ಈಜದೇ ಇರಲು ಸಾಧ್ಯವಿಲ್ಲ. ಒಂದು ಅತ್ಯಂತ ಸಿಹಿ ಘಟನೆ ಅಥವಾ ಅತ್ಯಂತ ಸಿಹಿ ಘಟನೆಗಳು ಅಚ್ಚಳಿಯದೆ ಉಳಿಯುವಂತಹದು. ಹೌದು, ನಾವು ಆಗಾಗ ಚೈತನ್ಯ ವೃದ್ಧಿಸಿಕೊಳ್ಳಲು ಈ ಬಾಲ್ಯದ ನೆನಪು ಅತ್ಯಂತ ಮೌಲ್ಯಯುತವಾದದ್ದು. ನಮ್ಮ ಮಕ್ಕಳ ಬಾಲ್ಯದ ಆಟ, ಒಡನಾಟ, ವರ್ತನೆಗಳನ್ನು ನೋಡಿದಾಗ, ಒಬ್ಬಂಟಿಯಾಗಿ ಕುಳಿತಾಗ ನಮ್ಮ ಮನಸ್ಸು ಬಾಲ್ಯದ ನೆನಪಿನೆಡೆ ವಾಲುತ್ತದೆ. ಬಾಲ್ಯದ ಶಾಲಾದಿನ, ಗೆಳತಿಯರೊಂದಿಗೆ ಕಳೆದ ಕ್ಷಣ, ತಂದೆ, ತಾಯಿ, ಅಕ್ಕ, ಅಣ್ಣ ಪ್ರತಿಯೊಬ್ಬರೊಂದಿಗೆ ಒಂದೊಂದು ಬೇರೆ ರೀತಿಯ ಒಡನಾಟ, ಅನುಭವ, ಕಲಿಕೆ ಎಲ್ಲವೂ ಆಗಿರುತ್ತದೆ. ಸಾಮಾನ್ಯವಾಗಿ ಇಂತಹ ಘಟನೆಗಳು ಜೀವನದಲ್ಲಿ ಒಂದು ಮೌಲ್ಯಯುತ ಪಾಠ ಕಲಿಸಿರಲಿಕ್ಕೂ ಸಾಕು. ಅಂತಹ ಒಂದು ಘಟನೆಯ ನೆನಪು ನಿಮ್ಮ ಮುಂದಿಡಲು ಮನಸ್ಸು ಇಚ್ಛಿಸುತ್ತಿದೆ.
ನನ್ನ ಊರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ. ಮಲೆನಾಡಿನ ಸೀಮೆಯಲ್ಲಿ ಬರುವ ಕಾರಣ ಸುತ್ತ ಹಸಿರು ಇದ್ದೇ ಇತ್ತು. ಅದರಲ್ಲೂ ನನ್ನ ಮನೆ ಇದ್ದುದು ಊರಿನ ಹೊರಗೆ ಅದೂ ಹೊಲದ ಮಧ್ಯೆ. ಸುಮಾರು 20 ಎಕರೆ ಹೊಲದ ನಡುವೆ ತೆಂಗು, ಪೇರು, ಹಲಸು, ಅಡಿಕೆ, ಹೂವಿನ ಗಿಡಗಳು, ಉಳಿದೆಲ್ಲ ಭತ್ತ ಬೆಳೆಯುವ ಹೊಲ. ನಾನು ಸುಮಾರು 5ನೇ ತರಗತಿಯಲ್ಲಿ ಕಲಿಯುತ್ತಿದ್ದೆ. ವಯಸ್ಸು 10 ರಿಂದ 11 ವರ್ಷ. ಮನೆಯಲ್ಲಿ ನಾವು 8ಜನ ಮಕ್ಕಳು ಅವರಲ್ಲಿ ನಾನು 6ನೆಯವಳು. ಅಣ್ಣ, ಅಕ್ಕ ತುಂಬಾ ದೊಡ್ಡವರಿದ್ದರು ನಾನು ಎಲ್ಲರಿಗಿಂತ ಸ್ವಲ್ಪ ಬೇರೆಯೇ ಇದ್ದೆ. ವಯಸ್ಸಿಗೆ ತಕ್ಕ ಹಠ ಸ್ವಭಾವ ನನಗೆ ಯಾವಾಗಲೂ ಹೊಸ ಹೊಸ ವಸ್ತುಗಳಲ್ಲಿ ಆಸಕ್ತಿ, ತುಂಬ ಬೇರೆ ಬೇರೆ ರೀತಿಯ ಉಡುಪು, ತುಂಬಾ ಇಷ್ಟ. ನನ್ನ ತಂದೆ ತುಂಬಾ ಸರಳ ಜೀವಿ. ದುಂದುವೆಚ್ಚ ಅವರಿಗಾಗದ ವಿಷಯ, ಇದ್ದದರಲ್ಲಿ ತುಂಬಾ ಅರಾಮವಾಗಿ ಇದ್ದು ಕಷ್ಟದಲ್ಲಿರುವವರಿಗೂ ಅಲ್ಪ ಸ್ವಲ್ಪ ತಮ್ಮಿಂದಾಗುವ ಸಹಾಯ ಮಾಡಬೇಕೆಂಬ ಉದಾರ ಸ್ವಭಾವದವರು. ಮನೆಯಲ್ಲಿ ಯಾವುದಕ್ಕೂ ಕೊರತೆ ಎಂಬುದೇನೂ ಇಲ್ಲ. ಆದರೆ ಹೊಸ ಹೊಸ ಜೀವನ ಶೈಲಿಯ ವಸ್ತುಗಳ ಪರಿಚಯವಿದ್ದರೂ ಅಧುನಿಕತೆಗೆ ಮಾರು ಹೋಗದೆ ಆರೋಗ್ಯಕರವಾದ ಎಲ್ಲವನ್ನೂ ಬಳಸುತ್ತಿದ್ದರು. ಮನೆಯಲ್ಲಿ ಮಿಕ್ಸಿ ಬದಲಾಗಿ ರುಬ್ಬುವ ಕಲ್ಲು (ಒಳಕಲ್ಲು) ಬೀಸುವ ಕಲ್ಲಿನಲ್ಲಿ ರವೆ ಬೀಸುವುದು, ಒಲೆಯ ಮೇಲೆಯ ತಯಾರಾದ ರೊಟ್ಟಿ ಹೀಗೆ ರುಚಿಯಾದ ಅಡುಗೆ. ನನ್ನ ಸಮಸ್ಯೆ ಇದ್ದುದು ಇದಾವುದರಿಂದಲೂ ಅಲ್ಲ, ಹಲ್ಲುಜ್ಜಲು paste ಬದಲಾಗಿ ಹಲ್ಲುಪುಡಿ, ಅದೂ ನಂಜನಗೂಡು ಹಲ್ಲುಪುಡಿ. ಸರಿಯಾಗಿಯೇ ನೆನಪಿದೆ. ಏಕೆಂದರೆ ನನ್ನ ನೆನಪು ಅಚ್ಚೊತ್ತಿ ಉಳಿಯಲು ಈ ಹಲ್ಲು ಪುಡಿಯೇ ಕಾರಣವಾಗಿದೆ.
ನೇರವಾಗಿ ವಿಷಯ ಪ್ರಸ್ತಾಪಿಸಿ ಬಿಡುತ್ತೀನಿ ಒಂದು ದಿನ ಮುಂಜಾನೆ ಸುಮಾರು 6 ಗಂಟೆಯ ಸಮಯ. ಆ ದಿನ ನನ್ನ ಪಾಲಿಗೆ ಸೂರ್ಯ ಪಶ್ಚಿಮದಲ್ಲಿ ಉದಯಿಸಿದಂತೆ ವಿಚಿತ್ರ ದಿನ, ಆ ದಿನ ನನ್ನ ಮೈಮೇಲೆ ಭೂತ ಬಂದಂತೆ ಹಠದ ಭೂತ ಬಂದು ಅಡರಿತ್ತು.ಕಾರಣ ಇಷ್ಟೇ , ಆ ದಿನ ಎಕೋ ನನಗೆ ಹಲ್ಲುಜ್ಜಲು ಆ ನಂಜನಗೂಡು ಹಲ್ಲುಪುಡಿ ಬೇಡವಾಗಿತ್ತು, ಅದೇನೋ ಆವತ್ತು Colgate Tooth Paste ಮೇಲೆ ಎಲ್ಲಿಲ್ಲದ ವ್ಯಾಮೋಹ, ಹಲ್ಲುಪುಡಿ ಬೇಡ ಎಂದು ಒಂದೇ ಸಮನೆ ಹಠ ಹಿಡಿದೆ. ಅಮ್ಮ ಮುಂಜಾನೆಯ ಗಡಿಬಿಡಿ ಕೆಲಸದಲ್ಲಿ ಮಗ್ನಳಾಗಿದ್ದಳು. ಆಕೆ ಬಂದು ಸರಳ ಚೊಕ್ಕವಾಗಿ ನಾಳೆ ತರೋಣ ಈಗ ಹಲ್ಲುಪುಡಿಯಲ್ಲಿ ತಿಕ್ಕು ಪುಟ್ಟಾ “ದಿನಾ ಎಷ್ಟು ರುಚಿ ಇದೆ ಅಂತ ತಿಕ್ಕುತಾ ಇದ್ದೆ ಇವತ್ತು ಏನಾಯ್ತು? ಎಂದು ಹೇಳಿ ತನ್ನ ಕೆಲಸಕ್ಕೆ ಹೋದಳು, ಬೇಡಾ…… ಎಂದು ಕೂಗಿದೆ, ಅಲ್ಲೆ ಇದ್ದ ಅಕ್ಕ ಏ…… ಯಾಕೆ ರಗಳೆ ಮಾಡ್ತಿಯಾ? ಆ ಪುಡಿಯಿಂದ ಹಲ್ಲು ಚಕ ಚಕ ಅಂತ ಹೊಳೆಯುತ್ತೆ, ಮತ್ಯಾಕ ಹಠ ಮಾಡ್ತೀಯಾ? ಎಂದಳು. ನೀನು ಸುಮ್ನೆ ಹೋಗು ನನ್ನ Friends ಹೇಳಿದ್ದಾರೆ ಅವರೆಲ್ಲಾ Paste ಅಲ್ಲೆ ತಿಕ್ಕುತಾರಂತೆ. ನನಗೂ ಅದೇ ಬೇಕು ಎಂದೆ, ಸರಿ ತರಿಸ್ಕೊ ಅಂತ ಹೇಳಿ ಕಸಪೊರಕೆ ಹಿಡಿದು ಹೊರಗೆ ನಡೆದಳು, ಈಗ ಕಣ್ಣಲ್ಲಿ ಗಂಗಾ,ಯಮುನಾ ನದಿ ಹರಿಯಲು ಪ್ರಾರಂಭವಾಗಿ ಬಿಡ್ತು. ನನ್ನ ಅಣ್ಣ ಎಲ್ಲರಿಗೂ ಸ್ವಲ್ಪ ಕಾಡಿಸುತ್ತಿದ್ದ, ಇದೇ ಸಮಯಕ್ಕೆ ಬಂದು ಅರೋಗ್ಯಕರ ವಸಡುಗಳಿಗಾಗಿ Colgate Tooth Paste ನ್ನೇ ಬಳಸಿ. ಟಣ್ ಟಣಾಣ್ ಎಂದು ಮ್ಯೂಸಿಕ್ ಕೊಡುತ್ತಾ ಪೀಡಿಸಿದ. ನನ್ನ ಅಳು ಮತ್ತೆ ಜೋರಾಯಿತು. ಏನ್ ಬೇಕವ್ವಾ ನಿಂಗೆ Paste ತಾನೆ, ಸಂಜೆ ತಂದು ಕೊಡ್ತೀನಿ ಮಳೆ ಇದೆ. ಹೊರಗೆ ತುಂಬಾ ರಾಡಿನೂ ಆಗಿದೆ ಎಂದು ಸಮಾಧಾನ ಪಡಿಸಲು ಬಂದ. ಆಗ ನನ್ನ ಅಳು ಆಶಾಢ ಮಾಸದ ಮಳೆಥರ ಹೋ……. ಹೋ……. ಎಂದು ಪ್ರಾರಂಭವಾಯಿತು, ಅವನಿಗೆ ಬೇಸರವಾಗಿ ಏನಾರಾ ಮಾಡ್ಕೋ ಎಂದ. ಅಮ್ಮ ಮತ್ತೆ ಬಂದಳು ಅಳಬೇಡ ಅಪ್ಪ ಆಗಲಿಂದ ನಿನ್ನ ಅಳುವ ಧ್ವನಿ ಕೇಳ್ತಾ ಇದ್ದಾರೆ. ಈಗ ಬಂದ್ರೆ ನಿನಗೆ ಸರಿಯಾಗಿ ಬೈತಾರೆ ಅಂದ್ರು ನಾನೇನೂ ಜುಪ್ ಅನ್ನಲಿಲ್ಲ! ಅಪ್ಪ ಬಂದೇ ಬಿಟ್ರು “ಏನ್ ಬೇಕು ನನ್ನ್ ಮಗಳಿಗೆ” ಅಂತ ತುಂಬಾ ಪ್ರೀತಿಯಿಂದ ಕೇಳಿದ್ರು, ಆದ್ರೆ ಆ ದಿನ ನನ್ನ ಮೈ ಮೇಲೆ Colgate ಭೂತ ಇತ್ತಲ್ಲ, ಅದಕ್ಕೆ ಪ್ರೀತಿಯ ಅರಿವಾಗಲೇ ಇಲ್ಲ. ನನ್ನ ಅಪ್ಪ ತುಂಬಾ ಸಮಾಧಾನಿ. ಎಷ್ಟು ದೊಡ್ಡ ಮಕ್ಕಳಿದ್ರೂ, ಒಬ್ಬರಿಗೂ ಒಮ್ಮೆಯೂ ಹೊಡೆದಿರಲಿಲ್ಲ. ಎಲ್ಲರಿಗೂ ಕೈ ತುತ್ತು ಮಾಡಿ ಊಟ ಮಾಡಿಸುತ್ತಿದ್ದವರೂ ಅವರೇ, ಇದೇನೂ ನನಗೆ ತಿಳಿದಿರಲಿಲ್ಲದ ವಿಷಯವೂ ಆಗಿರಲಿಲ್ಲ. ಆಗ ಮಳೆಗಾಲ. ಮನೆ ಹೊಲದಲ್ಲಿ ಬೇರೆ ಇದ್ದುದರಿಂದ, ಅಂಗಡಿಗಳೂ ಸಮೀಪವಿರದಿದ್ದರಿಂದ ಏನೇ ತರುವುದಾದರೆ ಸಿಟಿಗೆ ಹೋಗಬೇಕಾಗಿತ್ತು, ಈ ವಿಷಯ ನನಗೂ ತಿಳಿದಿತ್ತು. ಅಪ್ಪ ಕೈಮೀರಿ ತಿಳಿಸಲು ಪ್ರಯತ್ನಿಸಿದರು, ನಾಳೆ ಖಂಡಿತ ತರುವದಾಗಿ ಹೇಳಿದರು, ನಾನೋ ಅದೇಕೋ ಆ ದಿನ ಪೇಸ್ಟ್! ಪೇಸ್ಟ್ ಎಂದು ನೆಲಕ್ಕುರುಳಿ ಒದ್ದಾಡಿದೆ. ಆ ಘಳಿಗೆ ನನ್ನ ತಂದೆಯ ಸಹನೆ ಮೀರಿತು, ಒಂದೇ ಒಂದು ಭಾರಿ ಮೌಲ್ಯಭರಿತ ಪೆಟ್ಟು ಕೊಟ್ಟೇ ಬಿಟ್ಟರು. ಕೂಡಲೇ ಹೋರಗೆ ಹೋದರು. ನಾನೂ ಸೀದಾ ಎದ್ದು ಮಲಗಿದ್ದ ಕೋಣೆಗೆ ವಾಪಸ್ ಹೋಗಿ ಮಲಗಿದೆ. ತುಂಬಾ ಹೊದ್ದು ಕೊಂಡು ಕಣ್ತೆರೆದೆ ಮಲಗಿದೆ. ಆ ದಿನ ಶಾಲೆಗೂ ರಜೆ ಮಾಡಿದೆ. ಹೊದ್ದು ಕೊಂಡ ರಗ್ಗಿನೊಳಗೆ ನೂರಾರು ವಿಚಾರ ಮಂಥನವಾತ್ತಿತ್ತು. ಅಳು ಉಕ್ಕಿ ಉಕ್ಕಿ ಬರುತ್ತಿತ್ತು, ತಪ್ಪಿನ ಅರಿವು ಚೆನ್ನಾಗಿಯೇ ಆಗಿತ್ತು, ಊಟ ತಿಂಡಿ ಎಲ್ಲವೂ ಧಿಕ್ಕರಿಸಿ ಆಗಿತ್ತು. 2 ಗಂಟೆಯ ನಂತರ ಅಣ್ಣ ತಲೆ ಸವರಿದ ನಾನು ಎಚ್ಚರವಿದ್ದೂ ಇಲ್ಲದಂತೆ ಮಲಗೇ ಇದ್ದೇ. ಅಷ್ಟರಲ್ಲಿ ಅಕ್ಕ ಬಂದು, ಅವಳಿಗೆ ಎಬ್ಬಿಸಬೇಡ ಅಪ್ಪ ಬಂದ್ರೆನೆ ಅವ್ಳು ಏಳೋದು ಎಂದು ಹೇಳಿ ಅಣ್ಣನನ್ನು ಕರೆದು ಹೊರ ನಡೆದಳು. ಹಾಗೇ ಅತ್ತೂ ಅತ್ತೂ ನಿದ್ದೆಗೆ ಜಾರಿದ್ದೆ. ಪುನಃ ಕಣ್ತೆರೆದರೆ ನನ್ನ ತಲೆ ಅಪ್ಪನ ತೋಡೆಯ ಮೇಲಿತ್ತು. ”ಅಯ್ಯೋ ದೇವರೇ ಯಾರಪ್ಪಾ ಈ Paste ಕಂಡು ಹಿಡಿದವ. ನನ್ನ ಮಗಳಿಗೆ ಪೆಟ್ಟು ಕೊಡೋ ಹಾಗೆ ಮಾಡ್ಬಿಟ್ಟ” ಎಂದು ಹೇಳಿದ್ದೇ ತಡ, ಮತ್ತೊಂದು ಮಾತಾಡದೆ ನನ್ನ ಎತ್ತಿ ಸೀದಾ ಹೆಗಲ ಮೇಲೆ ಹಾಕಿ ನಮ್ಮ ಹೊಲದ ಸುತ್ತ ನಡೆದೇ ನಡೆದರು. ಎಲ್ಲಿಯೂ ನಿಲ್ಲಲಿಲ್ಲ. ಅವರ ಆ ಘಳಿಗೆಯ ಮೌನದ ನಡಿಗೆ ಅವರ ಅಂತರಾಳದ ನೋವು, ಮಗಳಿಗೆ ಕೊಟ್ಟ ಪೆಟ್ಟಿಗಾಗಿ ಪಡುತ್ತಿದ್ದ ಸಂಕಟ ಎಲ್ಲವೂ ಉಮ್ಮಳಿಸುತಿತ್ತು. ಅಂತಿಮವಾಗಿ ಒಂದು ಪೇರಲ ಗಿಡದ ಟೊಂಗೆಯ ಮೇಲೆ ನನ್ನ ಕೂರಿಸಿ Paste ಕೈಗಿತ್ತರು. ಕೆಂಪಾಗಿದ್ದ ನನ್ನ ಮುಖವನ್ನು ತಮ್ಮ ಬೊಗಸೆಯಲ್ಲಿ ಹಿಡಿದು ಎಷ್ಟು ಚೆಂದ ಗೊಂಬಿತರ ಕಾಣತಾಳ ನನ್ನ ಮಗಳು ಎಂದು ಹೆಗಲ ಮೇಲೆ ಅಂಬಾರಿಯಂತೆ ಕೂರಿಸಿ ಮನೆಗೆ ಬಂದು ಮುಖ ತೊಳಿಸಿ ಊಟ ಮಾಡಿಸತೊಡಗಿದರು. ಬಾಯಿಯಲ್ಲಿ ನನ್ನ ತಂದೆ ತುತ್ತಿಟ್ಟ ಆ ಕ್ಷಣ ನಾನು ಧಾರಾಕಾರವಾಗಿ ಬಿಕ್ಕಳಿಸಿ ಅತ್ತೆ.(ಅಳತೊಡಗಿದೆ). ಅಪ್ಪ ಒಂದೂ ಮಾತಾಡದೆ ನೂರು ಮಾತಾಡುತ್ತಿರುವುದು ಅವರ ಭಾವನೆಗಳಿಂದ ತಿಳಿಯುತ್ತಿತ್ತು. ಅವರ ಆ ಮೂಕ ವೇದನೆ, ತೊಳಲಾಟ, ಮಗಳ ಮೇಲೆ ಕೈ ಮಾಡಿ ಅನುಭವಿಸಿದ ಸಂಕಟ ಎಲ್ಲವೂ ಭಾವದಿಂದ ತೂರಿ ಬರುತ್ತಿತ್ತು. ಆ ಘಳಿಗೆ ಎಂದಿಗೂ ಮರೆಯಲಾಗದೆ ಉಳಿಯಿತು , ಪ್ರೀತಿ ವಾತ್ಸಲ್ಯದ ಮೌಲ್ಯಕ್ಕೆ ಸಿಕ್ಕ ನನ್ನ ಹಠ ಕರಗಿ ಹೋಯಿತು, ಮತ್ತೆ ಯಾವುದೇ ವಸ್ತುವಿಗಾಗಿ ನನ್ನ ಈ ವರೆಗಿನ ಆಯುಷ್ಯದಲ್ಲಿ ಹಠ ಎನ್ನುವುದೇ ನಾನು ಮಾಡಲಿಲ್ಲ. ಮಾಡುವುದಿಲ್ಲ ಪ್ರೀತಿಯ ಮುಂದೆ ಹಠ ಸೋತು ಶರಣಾಗಿರಬಹುದಲ್ಲವೇ?
ಬಾಲ್ಯದ ನೆನಪಿನಂಗಳದಲ್ಲಿ ಮಿಂದರೆ ಹೊರ ಬರುವುದು ಕಷ್ಟ. ಆದರೆ ಜೀವನದಲ್ಲಿಯ ಒಂದು ಮೌಲ್ಯ ಕಲಿಯಬೇಕಾದರೆ ಒಮ್ಮೆ ನಿಮ್ಮ ಬಾಲ್ಯವನ್ನೂ ಸ್ಮರಿಸಿ. ನಿಮಗೂ ನವ ಚೈತನ್ಯ ಸಿಗಬಹುದು.

Leave a Reply