ವಸುದೈವ ಕುಟುಂಬಕಂ

ವಸುದೈವ ಕುಟುಂಬಕಂ

ಮಂಜು ಮುಸುಕಿದ ಬೆಳಗು ದೂರದವರೆಗೆ ದಾರಿಯನ್ನು ಮಸುಕಾಗಿಸಿ ನಗುತಿದೆ. ತೆಂಗಿನ ಮರಗಳ ಗರಿಗಳು ಸುಂದರವಾದ ಚಿತ್ರ ಬಿಡಿಸಿಟ್ಟ ತೆರದಿ ಕಂಗೊಳಿಸುತ್ತಿವೆ. ಇತ್ತ ಸೂರ್ಯ ಹಣಿಕಿಕ್ಕುವ ವೇಳೆ ಅತ್ತ ರಾತ್ರಿಯ ಕತ್ತಲು ನಿರ್ಗಮಿಸುವ ವೇಳೆ ಎಂಥ ಮನೋಹರ ದೃಶ್ಯಕಾವ್ಯವನ್ನು ಮೂಡಿಸಿ ಮರೆಯಾಗುತ್ತಿದೆ. ಅದಕ್ಕೇ ಹೇಳುವುದು ಒಂದೊಂದು ಬೆಳಗೂ ಸುಂದರ ಆಹ್ಲಾದವನ್ನು ನೀಡುವಂಥದ್ದು.

ಅದರಲ್ಲೂ ಮಳೆಗಾಲದ ಬೆಳಗೂ ಆಹಾ! ಆಹಾ!! ಮಳೆಗಾಲವೆಂದರೆ ಏನೇನೆಲ್ಲ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಬೆಚ್ಚಗಿನ ಉಣ್ಣೆಬಟ್ಟೆಗಳು ರಗ್ಗು, ನೈಲಾನ್ ರೇನ್ ಕೋಟ್ ಗಳು, ಛತ್ರಿ ಗೂಡಿನ ಮೇಲಿರುವವೆಲ್ಲಾ ಕೆಳಗಿಳಿದು ಬರುತ್ತವೆ. ಮಾಡಿನ ಮೇಲಿಟ್ಟ ಸಂಡಿಗೆ, ಹಪ್ಪಳಗಳೆಲ್ಲ ಕೆಳಗಿನ ಡಬ್ಬಗಳನ್ನಾಶ್ರಯಿಸುತ್ತವೆ. ಮಾಡು ಸೋರದಂತೆ ಏನೇನೆಲ್ಲ ಕಾಳಜಿಗಳನ್ನು ತೆಗೆದುಕೊಳ್ಳಬೇಕಾಗುತ್ತವೆ. ಪ್ರತಿವರ್ಷವೂ ಬರುವ ಮಳೆಗಾಗಿ ರೈತ ಕಾತರಿಸಿ ಕಾಯುತ್ತಿರುತ್ತಾನೆ. ಒಣಗಿದ ಭೂತಾಯಿಯ ಮಡಿಲು ಮೊದಲ ಮಳೆಗೆ ಘಮ್ಮನೇ ಸುವಾಸನೆಯನ್ನು ಎಲ್ಲೆಡೆ ಹರಡಿ ತನ್ನಿರುವಿಕೆಯ ಅರಿವನ್ನು ಹುಟ್ಟು ಹಾಕುತ್ತದೆ. ಈ ಮಳೆ ಎಷ್ಟೇ ತೊಂದರೆ ತಾಪತ್ರಯಗಳನ್ನುಂಟು ಮಾಡಿದರೂ ಪ್ರತಿಯೊಬ್ಬರೂ ಕಾತರದಿಂದ ಇದಿರು ನೋಡುತ್ತಿರುವುದು ಈ ಕಾಲವೊಂದೇ, ಯಾಕೆ ಹೀಗೆ? ಅಂದರೆ ಎಲ್ಲೆಡೆಯೂ ಜೀವಜಲವನ್ನು ತುಂಬಿಸಿ, ಭೂಮಿಗೆ ಹಸಿರನ್ನು ಹರಡಿಸಿ ಸಕಲರ ಉಸಿರನ್ನು ಹಸಿರಾಗಿಸುವುದು ಈ ಕಾಲದಲ್ಲೇ, ಅದಕ್ಕೆಂದೇ ನಮ್ಮ ಪೂರ್ವಜರು ಹಬ್ಬಗಳನ್ನು ಪ್ರಾರಂಭಿಸಿದ್ದೇ ಈ ಕಾಲದಲ್ಲಿ. ಹಬ್ಬಗಳ ಹೆಬ್ಬಾಗಿಲು ಎಂದೆನಿಸಿಕೊಳ್ಳುವ ಶ್ರಾವಣ ಮಾಸ ಪ್ರಾರಂಭವಾಗುವುದೇ ಈ ಕಾಲದಲ್ಲಿ. ಹೊರಗೆ ಮೋಡ ಮುಸುಕಿದ ವಾತಾವರಣ. ಮಳೆಯ ತಂಪ ಸೂಸುವ ಹಿತಗಾಳಿ, ತಂಗಾಳಿ ಆರ್ಭಟದ ಪರ್ಯಾವರಣ, ಹೋಳಿಗೆ ಬುರುಬುರಿಯ ಸವಿಊಟ, ಎಲ್ಲೆಲ್ಲೂ ಆಹ್ಲಾದತೆ, ಪೂರ್ವಜರು ರೂಪಿಸಿದ ಹಬ್ಬಗಳ ನಕಾಶೆ, ವಾತಾವರಣಕ್ಕೆ ತಕ್ಕ ಊಟ, ಆರೋಗ್ಯ ಸಂಜೀವಿನಿಯಾಗಿಸಿಹುದಲ್ಲವೇ?

“ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವೊಕ್ಕು ಸರ್ವಜ್ಞ” ಎಂಬ ಸರ್ವಜ್ಞನ ನುಡಿಗಳು ಈಗ ನೆನಪಾಗುತ್ತಿವೆ. ಮಳೆಗಾಲ ಪ್ರಾರಂಭಿಸುತ್ತಿದ್ದಂತೆಯೇ ಭೂಮಿ ಉಳಲು ಹದಗೊಂಡಿರುತ್ತದೆ. ಅದಕ್ಕಾಗಿ ಎತ್ತು ಉಪಯುಕ್ತವಾದ ಪ್ರಾಣಿಯಾಗಿರುತ್ತದೆ. ಹೀಗಾಗಿ ಮಣ್ಣೆತ್ತಿನ ಅಮವಾಸ್ಯೆಯಂದು ಎತ್ತುಗಳನ್ನು ಶೃಂಗರಿಸಿ, ಅವುಗಳಿಗೆ ಗುಲಾಲು ಗೊಜ್ಜಿ, ಎರಡೂ ಕೋಡುಗಳಿಗೂ ಕೋಡುಬಳೆಗಳಿಂದ ಶೃಂಗರಿಸಿ, ಕುಂಕುಮ ಹಚ್ಚಿ ಆರತಿ ಬೆಳಗುವರು. ಅಂದರೆ ಎತ್ತನ್ನು ಉಪಯೋಗಿಸುವ ಮೊದಲು ಅದಕ್ಕೆ ಪೂಜಿಸಿ ಉಪಯೋಗಿಸುವುದು ನಮ್ಮ ಸತ್ ಸಂಪ್ರದಾಯ ಅಥವಾ ಸಂಸ್ಕೃತಿ. ಹಾಗೆಯೇ ಬೀಳುವ ಮಳೆಗಳಿಂದ ಬಿಲಗಳಲ್ಲಿ ಅಡಗಿರುವ ಹಾವುಗಳು ಈಚೆಗೆ ಬರುತ್ತವೆ. ಹೊಲಗಳಲ್ಲಿ ಕಾಳುಕಡಿಗಳನ್ನು ತಿನ್ನಲು ಬರುವ ಇಲಿ ಹೆಗ್ಗಣಗಳನ್ನೆಲ್ಲ ತಿನ್ನುತ್ತಾ ರೈತನಿಗೆ ಸಹಕಾರಿಯಾಗಿರುತ್ತವೆ. ಅಂತೆಯೇ ಅವುಗಳಿಗೆ ದೇವರ ಸ್ವರೂಪ ನೀಡಿದ್ದು ನಾಗರಪಂಚಮಿ ಹಬ್ಬವನ್ನು ವಿಶೇಷವಾಗಿ ಆಚರಿಸಲ್ಪಡುತ್ತದೆ. ಆನೆಯ ಮುಖವನ್ನು ಗಣಪತಿಗೆ ಹಚ್ಚಿ ಗಣೇಶ ಚತುರ್ಥಿಯನ್ನು ಆಚರಿಸುತ್ತಾ ಪರೋಕ್ಷವಾಗಿ ಆನೆಯನ್ನು ಪೂಜಿಸುವ ಸತ್ ಸಂಪ್ರದಾಯ ಹಾಕಿದ್ದು ನಮ್ಮ ಪೂರ್ವಜರು, ಯಾವುದೇ ಪ್ರಾಣಿಯೂ ಯಾರಿಗೂ ಕೆಡಕನ್ನುಂಟು ಮಾಡುವುದಿಲ್ಲ. ಅವುಗಳಿಗೆ ಕೆಡಕನ್ನುಂಟು ಮಾಡುವವರೆಗೆ. ಹಾಗಾಗಿ ಎಲ್ಲಾ ಪ್ರಾಣಿಗಳಿಗೂ, ವಿಷ ಜಂತುಗಳಿಗೂ ದೇವತೆಯ ಸ್ವರೂಪವನ್ನು ನೀಡಿದ್ದು ನಮ್ಮ ಪೂರ್ವಜರು. ಇಂಥ ಸತ್ ಸಂಪ್ರದಾಯದಿಂದ ಮನಸ್ಸು ವಿಶಾಲವಾಗುತ್ತದೆ. ಈ ಹಬ್ಬಗಳ ಆಚರಣೆ ನಮ್ಮಲ್ಲಿ ಸುವಿಚಾರವನ್ನು ಹರಡುವುದಲ್ಲದೇ ಎಲ್ಲ ಜೀವಿಗಳನ್ನೂ ದೈವತ್ವಕ್ಕೇರಿಸಿ ನೋಡುವ ಪರಿ ಅಪರೂಪವಾದದ್ದು. ಪಾಶ್ಚಾತ್ಯದೇಶದಲ್ಲಿ ಸಂಕುಚಿತ ಮನೋಭಾವನೆಯಿಂದಾಗಿ ಪರಿಸರಸ್ನೇಹಿ ಪ್ರಾಣಿಗಳೂ ಕೂಡ ಅವರ ಆಹಾರವಾಗಿ ಪರಿಣಮಿಸುತ್ತಿವೆ. ಇದೇ ರೀತಿ ಮುಂದುವರೆದರೆ ಪರಿಸರ ಅಸಮತೋಲನವಾಗುವುದರಲ್ಲಿ ಸಂದೇಹವೇ ಇಲ್ಲ. ತಾನೂ ಇದ್ದು ಪರರನ್ನು ಇರಗೊಡಿಸುವುದು ನಮ್ಮ ಸಂಸ್ಕೃತಿ. ವಸುದೈವ ಕುಟುಂಬಕಂ ಎಂಬುದು ನಮ್ಮ ಜೀವನ ಶೈಲಿ, ತಾನಷ್ಟೇ ಮೆರೆದು ಪರರನ್ನು ಅಳಿಸಿಹಾಕುವುದು ಪಾಶ್ಚಾತ್ಯರ ಸಂಸ್ಕೃತಿ. ಪರರ ಅಳಿವಿನ ಮೇಲೆ ಮೆರೆಯುವವರು ಅವರು. ಇದು ಅಕ್ಷಮ್ಯವಾದದ್ದು.

ಪ್ರಕೃತಿ ಮನುಜಕುಲಕ್ಕೆ ನೀಡುವ ಉಪಕಾರದ ಕಿಂಚಿತ್ತಾದರೂ ಮಾನವ ಹಿಂತಿರುಗಿಸಬೇಕಲ್ಲವೆ? ಮಳೆ ಬಿದ್ದು ಮೋಡ ಬರಿದಾದಾಗಲೂ ತಂಪಾದ ಹವೆ ಮನವ ಮುದಗೊಳಿಸುವುದಿಲ್ಲವೇ? ತಾನು ಶಾಶ್ವತ ನಿರಂತರ ಎಂಬ ಅಹಮ್ಮು ಸಲ್ಲದು. ನಮ್ಮ ಜೀವಿತದ ನಂತರವೂ ತಂಪಾದ ಹವೆ ನೀಡುವ ಆಹ್ಲಾದತೆಯಂತೆ ನಾವಿರಬೇಕಲ್ಲವೇ?

 

Leave a Reply