“ಒಡವೆ ಬೇಗ ಬಿಚ್ಚಿ”,

ಬೆಳಿಗ್ಗೆ ಏಳುತ್ತಿದ್ದಂತೆ ಎಡಗಾಲು ಏಕೋ ಸ್ವಾಧೀನದಲ್ಲೇ ಇಲ್ಲವೆನಿಸಿ ಹಾಗೇ ಕುಳಿತುಬಿಟ್ಟೆ. ಮನೆಯವರೆಲ್ಲ ಗಾಬರಿಯಾದಾರೆಂದು, ಯಾಕೋ ಸರಿಯಾಗಿ ಹೆಜ್ಜೆ ಇಡಲಾಗುತ್ತಿಲ್ಲ, ಮಲಗಿದಾಗ ಎಲ್ಲೋ ಉಳುಕಿರಬಹದು ಎಂದು ಹೇಳಿದೆ. ಸ್ವಲ್ಪ ಹೊತ್ತು ಕುಳಿತು ಸುಧಾರಿಸಿಕೊಂಡು ನಿಧಾನವಾಗಿ ನಿತ್ಯಕರ್ಮಗಳನ್ನು ಮುಗಿಸಿ, ಮಲಗಿದೆ. ನೋವು ಕಡಿಮೆಯಾಗಲಿಲ್ಲ. ಹೆಜ್ಜೆಯ ಲಯವೇ ತಪ್ಪಿತ್ತು. ಹೆಚ್ಚು ನೋವೆಂದರೆ ಆಸ್ಪತ್ರೆಗೆ ಹೋಗಲು ಹೇಳುತ್ತಾರೆಂದು ಹೇಳಲಿಲ್ಲ. ಆಸ್ಪತ್ರೆಗೆ ಹೋಗುವುದೆಂದರೆ ಬಲು ಬೇಸರ, ಭಯ, ಕಿರಿಕಿರಿ, ಹಿಂಸೆ. ಆಸ್ಪತ್ರೆ ಎಂದೊಡನೆ ಇದ್ದ ಕಾಯಿಲೆ ಉಲ್ಬಣಗೊಂಡು, ಇಲ್ಲದಿರುವ ಕಾಯಿಲೆ ಬಂದಂತಾಗುವ ಮನಃಸ್ಥಿತಿ ನನ್ನದು. ಯಾರಾದರೂ ಸಂಬಂಧಿಕರು, ಸ್ನೇಹಿತರು ಆಸ್ಪತ್ರೆಯಲ್ಲಿದ್ದರೆ ಆಸ್ಪತ್ರೆಗೆ ಹೋಗಿ ನೋಡುವ ಬದಲು ಅವರು ಮನೆಗೆ ಹೋದ ಮೇಲೆ ನೋಡಿ ಬರುವ ಅಭ್ಯಾಸವೇ ಹೆಚ್ಚು. ಸುಮಾರು ಒಂದು ವಾರ ಮನೆ ಮದ್ದು ಮಾಡಿದರೂ ವಾಸಿಯಾಗದ ಕಾರಣ ಮೂಳೆ ಡಾಕ್ಟರ್ ಬಳಿ ಹೋದೆ. ಅವರು ಪರೀಕ್ಷಿಸಿ ಸದ್ಯಕ್ಕೆ ನೋವಿನ ಮಾತ್ರೆಗಳನ್ನು ಕೊಡ್ತೇನೆ, ಕೂಡಲೇ ಒಂದು ಎಂ.ಆರ್.ಐ. ಸ್ಕ್ಯಾನ್ ಮಾಡಿಸಿಕೊಂಡು ಬನ್ನಿ, ‘…’ ಸೆಂಟರ್‌ನಲ್ಲೇ ಆಗಬೇಕು ಎಂದು ಹೇಳಿದರು. ಎಕ್ಸ್‌ರೇ ಆದ್ರೆ ಓಕೆ, ಆದರೆ, ಅವರು ಎಂ.ಆರ್.ಐ. ಸ್ಕ್ಯಾನ್ ಎಂದೊಡನೆ ವಿಷಯ ಸ್ವಲ್ಪ ಸೀರಿಯಸ್ ಇರಬಹುದೇನೋ ಎನಿಸಿ ನನ್ನ ಎದೆ ಢವಗುಟ್ಟಿತು. ಡಾಕ್ಟರ್ ಹೇಳಿದ್ದ ಸ್ಕ್ಯಾನಿಂಗ್ ಸೆಂಟರಿಗೆ ಹೋಗಿ, ಡಾಕ್ಟರ್ ರೆಫೆರೆನ್ಸ್ ತೋರಿಸಿ ಬಿಲ್ ಮಾಡಿಸಿದೆವು. ಬರೋಬ್ಬರಿ ಹತ್ತು ಸಾವಿರ ರೂಪಾಯಿ. ಅಬ್ಬಾ! ಇದೇನಪ್ಪಾ ಇಷ್ಟೊಂದು ಅಂದ್ಕೊಂಡು ಒಳಹೋದೆ. ಒಳಗೆ ನನಗಿಂತ ಮೊದಲೇ ಇನ್ನಿಬ್ಬರಿದ್ದರು. ಅಲ್ಲಿನ ಮಹಿಳಾ ಸಿಬ್ಬಂದಿಯೊಬ್ಬರು ಬಂದು ‘ಬಟ್ಟೆ ಬಿಚ್ಚಿ, ಬಟ್ಟೆ ಬಿಚ್ಚಿ’ ಎಂದರು. ನನಗೋ ಗಾಬರಿಯೊಂದಿಗೆ ನಗೂ ಕೂಡ ಬಂತು, ಆಕೆ ಹೇಳಿದ ರೀತಿಗೆ. ಆಕೆ ಒಬ್ಬರಿಗೆ ಒಂದು ರೂಂ ತೋರಿಸಿ ಗೌನ್ ಕೊಟ್ಟು, ಬಟ್ಟೆ ಬಿಚ್ಚಿ, ಇದ್ನ ಹಾಕ್ಕಳಿ ಎಂದಳು, ಸಮಾಧಾನವಾಯ್ತು ನಾನೂ ಬಟ್ಟೆ ಬದಲಿಸಿ ಗೌನ್ ಧರಿಸಿದೆ. ‘ಒಡವೆ ಗಿಡವೆ ಎಲ್ಲ ಬೇಗ ಬಿಚ್ಚಿ ಕೊಡಿ ಬಿಚ್ಚಿಕೊಡಿ’ ಎಂದಳು. ಇದೇನಪ್ಪಾ! ದರೋಡೆಕೋರರು ಚಾಕು ಚೂರಿ ತೋರಿಸಿ ಹೆದರಿಸುವಂತೆ, ಅಂಗುಲಿಮಾಲಾ ದಾರಿಹೋಕರನ್ನು ದರೋಡೆ ಮಾಡುತ್ತಿದ್ದಂತೆ ಹೇಳ್ತಿದಾಳಲ್ಲ ಎನಿಸಿತು. ‘ಎಲ್ಲಾ ನಿಮ್ಮೋರ ಕೈಲಿ ಕೊಡಿ’ ಎಂದಳು. ಸದ್ಯ ಅವಳಿಗಲ್ಲವಲ್ಲ ಎಂದುಕೊಂಡೆ. ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಎಂದಳು. ಸ್ಕ್ಯಾನಿಂಗ್ ಮಾಡಿಸಲು ಒಡವೆ ವಸ್ತ್ರ ಎಲ್ಲ ತೆಗೆಯಬೇಕೆಂದು ತಿಳಿದಿರಲಿಲ್ಲ. ‘ನಿನ್ನೆಡೆಗೆ ಬರುವಾಗ ಸಿಂಗಾರದ ಹೊರೆಯೇಕೆ ಸಡಗರದ ಮಾತುಗಳ ಬಿಂಕವೇಕೇ?’ ಎನ್ನುವ ಕವಿತೆಯ ಸಾಲುಗಳು ಕಿವಿಯಲ್ಲಿ ರಿಂಗಣಿಸಿದವು. ಸ್ಕ್ಯಾನಿಂಗ್‍ಗೆ ಬರುವಾಗ ಒಡವೆ ವಸ್ತ್ರಗಳೇಕೆ? ಕೈತುಂಬಾ ಹಣವೊಂದಿದ್ದರಷ್ಟೇ ಸಾಕೇ ಎನಿಸಿ, ಧರಿಸಿದ್ದ ಸರ, ಓಲೆ, ಬಳೆ, ಉಂಗುರ ಅಷ್ಟನ್ನೂ ಬಿಚ್ಚಿ ನನ್ನ ತಂಗಿಯ ಮಗನ ಕೈಯಲ್ಲಿಟ್ಟು ಒಡವೆ ಜೋಪಾನ ಎಂದೆ. ಅವನು ನಸುನಕ್ಕ. ಆರೋಗ್ಯ ಕೈಕೊಟ್ಟಿದ್ದರೂ ಒಡವೆ ಜೋಪಾನ ಎಂದು ಹೇಳಿದ್ದಕ್ಕೆ ಒಂದು ಕ್ಷಣ ನನಗೂ ನಗು ಬಂತು. ಎಂಥ ವಿಪರ್ಯಾಸ ನೋಡಿ, ಆರೋಗ್ಯವೇ ಸರಿಯಿಲ್ಲದಿದ್ದರೂ ಒಡವೆ ಚಿಂತೆ! ಹೆಂಗಸರ ಮನಃಸ್ಥಿತಿಯೇ ಹೀಗೇನೋ. ಸ್ಕ್ಯಾನಿಂಗ್ ರೂಂ ಒಳಹೊಕ್ಕಾಗ ಒಬ್ಬ ಹುಡುಗ ಸುಮಾರು ನೂರು ಬತ್ತಿ ಹೊಸೆಯುವಷ್ಟು ಹತ್ತಿಯನ್ನು ನನ್ನ ಕೈಗಿಟ್ಟ. ಕೂಡಲೇ ಇದೇನು ಸ್ಕ್ಯಾನಿಂಗಾ, ಆಪರೇಷನ್ನಾ ಎಂಬ ಪ್ರಶ್ನೆ ಕಾಡಿ ಭಯದಲ್ಲಿ ಏನಪ್ಪಾ ಇದು? ಇಷ್ಟೊಂದು ಹತ್ತಿ ಯಾಕೆ ಎಂದೆ. ಆತ ಕಿವಿಗಿಟ್ಟುಕೊಳ್ಳಿ ಎಂದ. ಅಯ್ಯೋ ದೇವರೇ ಇಷ್ಟೊಂದು ಹತ್ತಿ ಕಿವಿಗಿಟ್ಟುಕೊಳ್ಳಲು ನನ್ನದೇನು ಆನೆಯ ಕಿವಿನೇ ಅಂದ್ಕೊಂಡೆ! ನಂತರ ಆತ, ಸ್ಕ್ಯಾನಿಂಗ್ ಯಂತ್ರದ ಕೆಳಗಿರುವ ಸ್ಟ್ರೆಚರ್ ಮೇಲೆ ಮಲಗಲು ಹೇಳಿ, ನೋಡಿ ಮೇಡಂ, ನಾವು ಯಂತ್ರ ಚಾಲೂ ಮಾಡಿದಾಗ ವಿವಿಧ ನಮೂನಿ ಸೌಂಡ್ ಬರ್ತಾವ್ರೀ. ಹೆದರ್ ಬ್ಯಾಡ್ರಿ. ಕಿವಿಗೆ ಹತ್ತಿ ಇಟ್ಕೊಂಡ್ ಮಕ್ಕೋಳ್ರಿ ಎಂದ. ಸರಿ ಎಷ್ಟು ಹೊತ್ತಾಗುತ್ತೆ ಎಂದೆ. ಅರ್ಧ ತಾಸಾಗುತ್ತೇರಿ ಅಂದ. ತುಂಬಾ ಹೊತ್ತಾದ್ರೆ ನಿದ್ದೆ ಬಂದು ಮಲಗಿಬಿಟ್ರೆ ಎಂದು ‘ಸ್ಕ್ಯಾನಿಂಗ್’ ಆದ ಮೇಲೆ ಎಬ್ಬಿಸ್ತೀರಲ್ಲ ಎಂದೆ. ಹೂನ್ರಿ ಎಂದವ ಬಾಗಿಲು ಹಾಕ್ಕೊಂಡು ಹೊರಗೆ ಹೋದ. ಒಮ್ಮೆಲೇ ನನಗೆ ದಿಗಿಲು ಶುರುವಾಯ್ತು. ಸ್ಕ್ಯಾನಿಂಗ್ ರೂಂನಲ್ಲಿ ನಾನೊಬ್ಬಳೇ! ಗಟ್ಟಿಯಾಗಿ ಕಣ್ಣುಮುಚ್ಚಿ ಮುಕ್ಕೋಟಿ ದೇವರನ್ನು ನೆನೆಯುತ್ತಾ ಅವ ಹೇಳಿದ ವಿವಿಧ ನಮೂನಿ ಸೌಂಡ್ ಈಗ ಬರಬಹುದೇನೋ ಆಗ ಬರಬಹುದೇನೋ ಎಂಬ ಕುತೂಹಲದಲ್ಲೇ ಇದ್ದೆ. ಆದರೆ ಯಾವ ವಿವಿಧ ನಮೂನಿ ಶಬ್ದನೂ ಕೇಳದೆ ಒಂದೇ ತರದ ಶಬ್ದ ಕೇಳಿ ಬರ್ತಿತ್ತು. ಸುಮಾರು ಅರ್ಧಗಂಟೆ ಅದೇ ಶಬ್ದ. ಯಾರೋ ಬಾಗಿಲು ತೆರೆದಂತಾಯ್ತು, ಮುಗಿಯಿತೇನೋ ಅಂದ್ಕೊಂಡು, ‘ಆಯ್ತಾ, ಎದ್ದೇಳಲಾ’ ಎಂದೆ. ಅಷ್ಟರಲ್ಲಿ ಆ ಹುಡುಗ, ‘ಮೇಡಂ ಬ್ಯಾಡ್ರಿ’ ಎಂದ. ‘ಅಲ್ಲಪ್ಪಾ, ನೀ ವಿವಿಧ ನಮೂನಿ ಶಬ್ದ ಬರತ್ತೆ ಅಂತ ಹೇಳಿದ್ದಿ. ಆದ್ರೆ ಬರಿ ಒಂದೇ ಒಂದು ಶಬ್ದ ಬಂತಲ್ಲಾ’ ಎಂದೆ. ‘ಬಂದಂಗಿಲ್ರಿ’ ಎಂದ. ‘ಹಾಂ! ಇಲ್ಲಪ್ಪಾ ಹತ್ತಿ ಇಟ್ಕೊಂಡ್ರೂ ಚೆನ್ನಾಗಿ ಕೇಳಿಸ್ತಿತ್ತು ಒಂದೇ ತರದ ಸೌಂಡು’ ಎಂದೆ. ಅದಕ್ಕವನು, ‘ಕರೆಂಟ್ ಹೋಗಿ ಮಷಿನ್ ಚಾಲೂನೇ ಆಗಿಲ್ಲ. ಇನ್ನೂ ಸ್ಕ್ಯಾನಿಂಗ್ ಆಗಿಲ್ರಿ’ ಅಂದ. ಗಾಬರಿಯಿಂದ ನಾನು ‘ಆಂ ಏನಾಯ್ತು’ ಎಂದೆ. ಅದಕ್ಕವನು ‘ಮೇಡಮ್ಮೋರೆ ಆಗ ಯಂತ್ರ ಚಾಲೂ ಮಾಡಿ ನಾ ಹೊರಗೆ ಹೋದೇನ್ರಿ. ಕರೆಂಟ್ ಹೋಗಿ ಯಂತ್ರ ಸ್ಟಾಪ್ ಆಗಿತ್ರಿ. ಈಗ ಬಂದೈತ್ರಿ. ಅದ್ಕ ನಾ ಬಂದೇನ್ರಿ’ ಅಂದ. ‘ಹಾಗಾದರೆ ಇಷ್ಟರವರೆಗೆ ಬಂದ ಶಬ್ದ ಯಾವುದಪ್ಪಾ‌’ ಅಂದೆ. ‘ಓ ಅದಾ… ಅದು ಪಕ್ಕದಾಗ ಬಿಲ್ಡಿಂಗ್ ಒಡ್ಯಾಕತ್ಯಾರ‍್ರೀ. ಅದು ಅಲ್ಲಿ ಸೌಂಡ್ ಐತ್ರಿ’ ಅನ್ನೋದೇ! ಅಯ್ಯೋ ದೇವರೇ, ಇದೇನಪ್ಪಾ ಕಥೆ! ಹಿಂದೆ ನಮ್ಮ ಪಕ್ಕದ ಹಳ್ಳಿಯವರೊಬ್ಬರು ಆಪರೇಷನ್‍ಗೆ ಹೆದರಿ ಓ.ಟಿ.ಗೆ ಹೋಗುವಾಗ ತಪ್ಪಿಸಿಕೊಂಡು ಓಡಿ ಬಂದಿದ್ದರೆಂಬ ಸಂಗತಿ ನೆನಪಾಯ್ತು. ಅವರ ಗೌನ್ ತೊಡದೇ ಇದ್ದಿದ್ದರೆ ನಾನೂ ಕೂಡ ಎದ್ದು ಓಡಿ ಬರುತ್ತಿದ್ದೆ. ಯಾರೂ ಇಲ್ಲದ ಆ ಸ್ಕ್ಯಾನಿಂಗ್ ರೂಮಿನಲ್ಲಿ ಇಷ್ಟು ಹೊತ್ತು ಕಳೆದದ್ದೇ ಕಷ್ಟ, ಅದರಲ್ಲಿ ಇನ್ನೂ ಅರ್ಧಗಂಟೆ ಇರಬೇಕೂಂದ್ರೆ?! ಹಾರ್ಟ್‌ ವೀಕ್ ಇದ್ದ ಪೇಷಂಟ್ ಆದ್ರೆ, ಅಲ್ಲೇ ಶಿವನಪಾದ ಸೇರ್ಕೊಳ್ಳೋದಂತೂ ಗ್ಯಾರಂಟಿ ಅನಿಸ್ತು. ನನ್ನ ಪೆಚ್ಚುಮೋರೆ ನೋಡಿದ ಅವ, ಗಾಬರಿಯಾಗ್ಬೇಡ್ರಿ ಹೆದ್ರಬ್ಯಾಡ್ರಿ ಮೇಡಮ್ಮೋರೆ, ಏನೂ ಆಗಂಗಿಲ್ರಿ ಅಂದ. ಕಟ್ಟಿರುವ ದುಡ್ಡು ಹೋದ್ರೂ ಪರವಾಗಿಲ್ಲ ಓಡಿಬಿಡೋಣವೆನಿಸಿತು. ಹತ್ತಿಯನ್ನು ಮತ್ತಷ್ಟು ದಪ್ಪನಾಗಿ ಕಿವಿಗೆ ಇಟ್ಕೊಂಡೆ, ಕೆಲ ಕ್ಷಣದಲ್ಲಿ ಅವ ಹೇಳಿದಂತೆ ತರತರದ ಶಬ್ದ ಬಂತು. ಕಣ್ಣುಮುಚ್ಚಿ ಊರ ದೇವರನ್ನೆಲ್ಲಾ ನೆನೆದೆ. ಸುಮಾರು ಅರ್ಧ ಗಂಟೆಯ ನಂತರ ಬಂದ ಆತ ಮೇಡಮ್ಮೋರೆ ಆತು ಏಳ್ರಿ ಎಂದ. ಬದುಕಿದೆಯಾ ಬಡಜೀವವೇ ಎಂದುಕೊಂಡೆ. ಭಗವಂತಾ ಇನ್ನು ಏನೇ ಕಾಯಿಲೆ ಬಂದ್ರೂ ಪರವಾಗಿಲ್ಲ ಎಂ.ಆರ್.ಐ. ಸ್ಕ್ಯಾನಿಂಗ್ ಸಹವಾಸ ಮಾತ್ರ ಬೇಡ ಎನ್ನುತ್ತಾ, ನನ್ನ ಉಡುಗೆ ತೊಟ್ಟು ಈ ದಿಕ್ಕಿಗೆ ಇನ್ನೊಮ್ಮೆ ತಿರುಗಿ ನೋಡಬಾರದು ಎಂದುಕೊಂಡೆ. ರಿಪೋರ್ಟ್‌ ಸಂಜೆ ಸಿಗುತ್ತದೆಂದರು, ಸಿಗದಿದ್ದರೂ ಹೋಯ್ತು, ಇಲ್ಲಿಂದ ಹೋದರೆ ಸಾಕು ಎನಿಸಿ ಒಂದೇ ಉಸಿರಿಗೆ ದಡದಡನೆ ಕೆಳಗಿಳಿದೆ. ಅದುವರೆಗೆ ಇದ್ದ ಕಾಲಿನ ಸೆಳೆತ ಆಗ ಕಾಣಲೇ ಇಲ್ಲ ನೋಡಿ! ಮೊನ್ನೆ ಬೆಂಗಳೂರಿನಿಂದ ಬಂದಿದ್ದ ಗೆಳತಿಗೆ ಈ ಸಂಗತಿಯನ್ನು ಹೇಳಿದಾಗ ಅಯ್ಯೋ ಈಗ ತುಂಬಾ ಅಡ್ವಾನ್ಸ್ಡ್‌ ಸೌಂಡ್ಲೆಸ್ ಸ್ಕ್ಯಾನಿಂಗ್ ಯಂತ್ರಗಳಿವೆ ಕಣೇ, ಇಲ್ಲೇ ಬರಬಾರದಾ ಎಂದಳು! ಅಮ್ಮಾ ತಾಯಿ ಸೌಂಡ್‍ಲೆಸ್ಸೂ ಬೇಡ ವಿವಿಧ ನಮೂನಿ ಸೌಂಡೂ ಬೇಡಾ, ಸ್ಕ್ಯಾನಿಂಗ್ ಸಹವಾಸವೇ ಬೇಡ. ಒಳ್ಳೇ ಮಾರ್ಚರಿಯಲ್ಲಿ ಮಲಗಿದಂತಿತ್ತು ಕಣೆ ಎಂದೆ ಬಹುಶಃ ರೋಗಕ್ಕಿಂತ, ರೋಗದ ಚಿಕಿತ್ಸೆಗಿಂತ ಅದರ ತಪಾಸಣೆ ಮತ್ತು ಪರೀಕ್ಷೆಗೊಳಪಡುವುದೇ ಹೆಚ್ಚು ಭಯಾನಕವೆನಿಸಿತು!

courtsey:prajavani.net

“author”: “ರಾಜೇಶ್ವರಿ ಹುಲ್ಲೇನಹಳ್ಳಿ”,

https://www.prajavani.net/artculture/short-story/odave-bega-bicchi-653464.html

Leave a Reply