“ಅತಿ ಕಿರಿಯ ತಬಲಾ ವಾದಕನಿಗೆ ಗಿನ್ನೆಸ್”,

ಗಿನ್ನೆಸ್‌ ದಾಖಲೆ ಪುಟದಲ್ಲಿ ಹೆಸರು ಬರೆಸಿಕೊಳ್ಳುವುದೆಂದರೆ ಮಹಾ ತಪಸ್ಸು. ಅದಕ್ಕೆ ಹೆಚ್ಚು ಶ್ರಮಪಡಬೇಕು. ಹಲವು ವರ್ಷ ಶ್ರಮಿಸಿದರೂ ಗಿನ್ನೆಸ್ ದಾಖಲೆ ಹಲವರಿಗೆ ಇನ್ನೂ ಸಾಧ್ಯವಾಗಿಲ್ಲ. ಆದರೆ ಈ ಮುಂಬೈನ ತೃಪ್ತರಾಜ್ ಪಾಂಡ್ಯ ಆರು ವರ್ಷ ತುಂಬುವುದಕ್ಕೂ ಮೊದಲೇ ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದ್ದಾನೆ. ಪಾಂಡ್ಯ ಎರಡು ವರ್ಷದವನಿದ್ದಾಗಲೇ ತಬಲಾ ಬಾರಿಸುವುದನ್ನು ಅಭ್ಯಾಸ ಮಾಡಿದ. ಆಗಲೇ ಮುಂಬೈನ ಸೊಮಯ್ಯ ಕಾಲೇಜಿನಲ್ಲಿ ಮೊದಲ ಪ್ರದರ್ಶನ ನೀಡಿದ. ಮೂರರ ವಯಸ್ಸಿನಲ್ಲೇ ಆಲ್‌ ಇಂಡಿಯಾ ರೇಡಿಯೊದಲ್ಲಿ ತಬಲಾ ವಾದನದ ಕಾರ್ಯಕ್ರಮ ನೀಡಿ, ಎಲ್ಲರ ಮೆಚ್ಚುಗೆ ಗಳಿಸಿದ. ನಾಲ್ಕು ವರ್ಷದವನಿದ್ದಾಗ ದೂರದರ್ಶನದಲ್ಲಿ ಪ್ರದರ್ಶನ ನೀಡಿ ಎಲ್ಲರನ್ನೂ ಆಚ್ಚರಿಗೊಳಿಸಿದ. ಆರು ವರ್ಷ ತುಂಬುವಷ್ಟರಲ್ಲಿ ವಿಶ್ವದ ಅತಿ ಕಿರಿಯ ತಬಲಾ ವಾದಕ ಎಂದು ಗಿನ್ನೆಸ್‌ ದಾಖಲೆ ಸೇರಿದ. ತೃಪ್ತರಾಜ್‌ಗೆ ಚಿಕ್ಕಂದಿನಿಂದಲೂ ಸಂಗೀತವೆಂದರೆ ಇಷ್ಟ. ಅಮ್ಮ ಭಕ್ತಿ ಗೀತೆಗಳನ್ನು ಹಾಡುತ್ತಿದ್ದರೆ, ಇವನು ಹಿಂದೆ ಕುಳಿತು ಅಲ್ಯುಮಿನಿಯಂ ಡಬ್ಬಾಗಳನ್ನು ಬಾರಿಸುತ್ತಿದ್ದ. ಅವನ ಈ ಆಸಕ್ತಿಯೇ ವಿಶ್ವದ ಅತಿ ಕಿರಿಯ ತಬಲಾ ವಾದಕನನ್ನಾಗಿ ಮಾಡಿದೆ ಎಂದು ಮಗನ ಸಾಧನೆ ಬಗ್ಗೆ ಸಂತೋಷದಿಂದ ಹೇಳುತ್ತಾರೆ ಅತುಲ್ ಪಾಂಡ್ಯ. ಜನಪದ ಮತ್ತು ಭಕ್ತಿಗೀತೆಗಳೆಂದರೆ ಅವನಿಗೆ ತುಂಬಾ ಇಷ್ಟ. ಆ ಹಾಡುಗಳಿಗೆ ತಕ್ಕಂತೆ ತಬಲಾ ಬಾರಿಸುವುದನ್ನು ಕಲಿತಿದ್ದಾನೆ ಎಂದು ಹೇಳುತ್ತಾರೆ ಅವರು. ತೃಪ್ತರಾಜ್‌ಗೆ ಬಾಲ ಕಲಾರತ್ನ ಪ್ರಶಸ್ತಿ ಲಭಿಸಿದೆ. 50ಕ್ಕೂ ಹೆಚ್ಚು ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾನೆ.

courtsey:prajavani.net

https://www.prajavani.net/artculture/music/c-youngest-tablaist-650222.html

Leave a Reply