“‘ಅವಸ್ಥೆ’ಯ ಅವಸ್ಥೆ”,

ಈಚೆಗೆ ತೀರಿಕೊಂಡ ಹಾಲಸಿದ್ದಣ್ಣ ಹೇಳಿಕೊಳ್ಳುತ್ತಿದ್ದ ಎರಡು ಘಟನೆಗಳೆಂದರೆ ಒಂದು- ಅವನು ಚಿಕ್ಕವನಾಗಿದ್ದಾಗ ಹಳ್ಳದ ಮೆಳೆಯಲ್ಲಿ ಎರಡು ಕರಡಿಗಳ ದಾಳಿಗೆ ಸಿಲುಕಿ ತುಂಬಿದ ಹಳ್ಳ ಹಾರಿ ಪಾರಾಗಿ ಬಂದಿದ್ದು. ಎರಡು- ಕಂಬಾರರು ಮತ್ತು ಕೀರಂ ಅವರ ಕಾವ್ಯದ ಕುಣಿತಕ್ಕೆ ಹೆದರಿ ಬಾತ್‍ರೂಮ್‌ನಲ್ಲಿ ಕಳೆದಿದ್ದು. ಯು.ಆರ್. ಅನಂತಮೂರ್ತಿ ಅವರ ‘ಅವಸ್ಥೆ’ ಕಾದಂಬರಿಯನ್ನು ಸಿನಿಮಾ ಮಾಡಲು ತಯಾರಿ ನಡೆಯುತ್ತಿರುವಾಗ ಹೈಲ್ಯಾಂಡ್ ಹೋಟೆಲ್‍ನಲ್ಲಿ ಒಂದು ರೂಮ್‌ ಪಡೆಯಲಾಗಿತ್ತು. ಶೂಟಿಂಗ್ ಆರಂಭಕ್ಕೂ ಮುನ್ನ ಅಲ್ಲಿ ಸಿದ್ಧತೆ ನಡೆಸುತ್ತಿದ್ದೆ. ಚಿತ್ರದಲ್ಲಿ ಎರಡು ಹಾಡುಗಳನ್ನು ಬಳಸಿಕೊಂಡೆ. ಒಂದು ಗೋಪಾಲಕೃಷ್ಣ ಅಡಿಗರ ‘ಮೌನ ತಬ್ಬಿತು’ ಕವನ. ಇನ್ನೊಂದು ಚಂದ್ರಶೇಖರ ಕಂಬಾರರು ಚಿತ್ರಕ್ಕೆಂದು ಕವನ ರಚಿಸಿವುದು ಎಂದು ತೀರ್ಮಾನಿಸಲಾಗಿತ್ತು. ಅದರಂತೆ ಕಂಬಾರರು ಒಂದೆರಡು ದಿನ ನಮ್ಮ ಜೊತೆ ಕಳೆದು ‘ಧಗೆ ಉರಿವ ಹಗಲಿನಲಿ’ ಹಾಡು ಬರೆದುಕೊಟ್ಟರು. ಈ ಪ್ರಕ್ರಿಯೆಯಲ್ಲಿ ಕೀರಂ ಸಹ ನನ್ನ ಜೊತೆ ಸಹಕರಿಸಲು ಇದ್ದರು. ಆ ಸಮಯದಲ್ಲಿ ಹಾಲಸಿದ್ದಣ್ಣ ಊರಿಂದ ಬೆಂಗಳೂರಿಗೆ ಬಂದಿದ್ದ. ಹೋಟೆಲ್ ರೂಮ್‌ ಖಾಲಿಯಿರುವುದರಿಂದ ನನ್ನ ರೂಮ್‌ ಬದಲು ಅಲ್ಲಿ ಇರಿಸಿದ್ದೆ. ಕಂಬಾರರು, ಕೀರಂ ಮತ್ತು ನಾನು ಇನ್ನೊಂದಿಬ್ಬರ ಜೊತೆ ಗುಂಡು, ಊಟ ಮತ್ತು ಕಾವ್ಯ ನಡೆದು ನಾನು ಮಲಗಲು ನನ್ನ ರೂಮ್‌ಗೆ ಹೊರಟೆ. ಹಾಲಸಿದ್ದಣ್ಣ ರೂಮ್‌ನಲ್ಲಿ ಉಳಿದ. ಕೀರಂ ಮತ್ತು ಕಂಬಾರರ ಕಾವ್ಯದ ಸುಧೆಗೆ ಮೊದಲು ತಲೆದೂಗಿ ಬರಬರುತ್ತಾ ಅವರಿಬ್ಬರು ಗುಂಡು ಮತ್ತು ಕಾವ್ಯವನ್ನು ಮೈ ಮನಗಳಿಗೆ ಏರಿಸುತ್ತಾ ಪರಕಾಷ್ಠೆಯ ಕಡೆ ತಿರುಗಿದ್ದು ಕಂಡು ಪಿಳಿಪಿಳಿ ನೋಡುತ್ತಾ ತಲೆತಿರುಗಿ ಬಾತ್‍ರೂಮ್‌ನಲ್ಲಿ ಹೋಗಿ ಕುಳಿತುಕೊಂಡನಂತೆ. ಪಂಪನಿಂದ ಹಿಡಿದು ಜಾನಪದ, ಈಚಿಗಿನ ಕಾವ್ಯದವರೆಗೆ ಇಬ್ಬರೂ ಒಂಥರಾ ನಿಘಂಟು ಇದ್ದ ಹಾಗೆ. ಬಾಯಿಯಲ್ಲಿಯೇ ಕಾವ್ಯ ಮಾತಾಗಿ, ವಾಚನವಾಗಿ, ಹಾಡಾಗಿ ಕೊನೆ ಕೊನೆಗೆ ನೃತ್ಯಕ್ಕೆ ತಿರುಗಿಬಿಡುವುದು ಸಹಜವಾಗಿರುತ್ತಿತ್ತು. ಬೆಳಿಗ್ಗೆ ಬಂದಾಗ ಇಬ್ಬರ ಹಾಡುಗಾರಿಕೆ, ನರ್ತನ ಇತ್ಯಾದಿ ಊರವರ ತರಹ ವರ್ಣಿಸಿ ಇಬ್ಬರನ್ನು ಕಂಡರೆ ಹೆದರಿದ್ದನ್ನು ಹೇಳಿದ. ಇಬ್ಬರೂ ನಮ್ಮ ನಾಡಿನ ಅತ್ತ್ಯುತ್ತಮ ಶ್ರೇಷ್ಠರು ಎಂದೆ. ‘ಏನ್ ಕತೆನೋ.. ಏನೋ.. ಅದೇನು ಮಾತು ಅದೇನು ಕುಣಿತ..’ ಎಂದು ಗೊಣಗುತ್ತಲೇ ಇದ್ದ. ಆ ಕರಡಿಗಳಿಗಿಂತ ಈ ಇಬ್ಬರು ಅವನಿಗೆ ಭೀತಿ ಹುಟ್ಟಿಸುವ ರೀತಿಯಲ್ಲಿ ಅಂದು ಕಾವ್ಯವನ್ನು ಆಸ್ವಾದಿಸಿದ್ದರು. ಅನಂತಮೂರ್ತಿ ಚಿತ್ರ ಆರಂಭದ ಸಮಯದಲ್ಲಿ ಅಮೆರಿಕದ ಯೂನಿವರ್ಸಿಟಿಯಲ್ಲಿದ್ದರು. ಅನಂತನಾಗ್ ಜೊತೆ ಆಗ ‘ಪ್ರಜಾವಾಣಿ’ಯ ವೈಎನ್‍ಕೆ ಸಹ ನಮ್ಮ ಜೊತೆ ಈ ಸಿದ್ಧತೆಯ ಸಂಜೆಗಳಲ್ಲಿ ಸೇರಿಕೊಳ್ಳುತ್ತಿದ್ದರು. ‘ರೈಟರ್ ಇಲ್ಲದೆ ಸಿನಿಮಾ ಶುರು ಮಾಡಿದಿರಿ?’ ಎಂದು ಯಾರೋ ಕೇಳಿದರು. ಅದಕ್ಕೆ ವೈಎನ್‍ಕೆ ‘ಕಾದಂಬರಿ ಆಧಾರಿತ ಸಿನಿಮಾಗಳ ಮೊದಲ ಶಾಟ್ ವಿಲ್ ಬಿ ರೈಟರ್. ಅವರನ್ನ ಮುಗಿಸಿ ನಂತರ ಸಿನಿಮಾ ಶೂಟ್ ಮಾಡಬೇಕು. ಏಕೆಂದರೆ ಅವರಿದ್ದರೆ ನಾನು ಅದನ್ನಿಟ್ಟುಕೊಂಡು ಬರೆದಿದ್ದೆ. ಇದರಲ್ಲಿ ಈ ಭಾವನೆ ಇತ್ತು ಅಂತಾ ಹೇಳ್ತಾನೆ ಇರ್ತಾನೆ.. ಅದಕ್ಕೆ…’ ಎಂದು, ಲೇಖಕನಿಗೆ ಗನ್‍ನಿಂದ ಶೂಟ್ ಮಾಡಿ ಕ್ಯಾಮೆರಾ ಶೂಟ್ ಮಾಡಬೇಕು ಅಂದಾಗ ನಾವೆಲ್ಲಾ ಜೋರಾಗಿ ನಕ್ಕೆವು. ಎಂ.ಪಿ. ಪ್ರಕಾಶ್ ಅವರು ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಮಂತ್ರಿ. ಅವರೂ ಸಿದ್ಧತೆಯಲ್ಲಿ ಸಹಕರಿಸುತ್ತಿದ್ದರು. ನಾನು ಲಂಕೇಶ್ ಪತ್ರಿಕೆಯ ಆರಂಭದಿಂದ ಒಂದೂವರೆ ಎರಡು ವರ್ಷ ಪತ್ರಿಕೋದ್ಯಮದಲ್ಲಿ ದುಡಿದಿದ್ದರಿಂದ ಸಿನಿಮಾ ಪಬ್ಲಿಸಿಟಿ, ಸುದ್ದಿಗಳನ್ನು ಬರೆದು ಪತ್ರಿಕೆಗಳಿಗೆ ಕಳಿಸಿಕೊಡುತ್ತಿದ್ದೆ. ಆಗೆಲ್ಲಾ ಈ ಟಿ.ವಿ.ಗಳು ಮತ್ತು ಪ್ಯಾಕೇಜ್ ಡೀಲ್‍ಗಳು ಇರಲಿಲ್ಲ. ಒಮ್ಮೆ ಪ್ರಕಾಶ್ ಸಿಕ್ಕಿದ್ದಾಗ, ‘ಏನ್ರಿ ಕೃಷ್ಣ ನನ್ನದು ಮೇಜರ್ ಪಾತ್ರ ಅಂತ ಹೇಳ್ತೀರಾ. ಸುದ್ದಿಯಲ್ಲಿ ನನ್ನ ಹೆಸರೇ ಇರೋಲ್ಲ..’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರಮುಖ ಪಾತ್ರದಲ್ಲಿ ಅನಂತನಾಗ್, ಎಂ.ಪಿ. ಪ್ರಕಾಶ್, ಬಿ.ವಿ. ಕಾರಂತ, ಎಂ. ಭಕ್ತವತ್ಸಲ ಇದ್ದಾರೆ ಎಂದು ನಾನು ಬರೆಯುತ್ತಿದ್ದು ಎಲ್ಲರ ಹೆಸರು ಪತ್ರಿಕೆಗಳು ಪ್ರಿಂಟ್ ಆದಾಗ ಸರಿಯಾಗಿ ಇರುತ್ತಿತ್ತು. ಆದರೆ, ಎಂ.ಪಿ. ಪ್ರಕಾಶ್ ಬದಲಿಗೆ ಎಂ.ಪಿ. ಶಂಕರ್ ಎಂದು ಪ್ರಿಂಟಾಗಿರುತ್ತಿತ್ತು. ನನಗೆ ಗೊತ್ತಿದ್ದ ಪತ್ರಿಕೆಯ ಗೆಳೆಯರಿಗೆ ನನ್ನ ಕಷ್ಟ ಹೇಳಿಕೊಂಡಾಗ ಅವರು ‘ಬಹುಶ್ಯ ಸಿನಿಮಾ ಸುದ್ದಿ ನೋಡುವವರೋ ಅಥವಾ ಪ್ರೂಫ್ ತಿದ್ದುವವರೋ ನೀವೇ ತಪ್ಪು ಬರೆದಿದ್ದೀರಿ ಎಂದು ಸರಿಪಡಿಸುತ್ತಿರಬೇಕು’ ಎಂದು ಮುಗುಳ್ನಕ್ಕರು. ಚಿತ್ರದ ಶೂಟಿಂಗ್ ಭರ್ಜರಿ ಪ್ರಚಾರದೊಂದಿಗೆ ಆರಂಭವಾಯಿತು. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಚಾಲನೆ ಕೊಟ್ಟರು. ಜೆ.ಹೆಚ್. ಪಟೇಲ್, ಅಬ್ದುಲ್ ನಜೀರ್ ಸಾಬ್, ಎಂ.ಪಿ. ಪ್ರಕಾಶ್, ಡಿ.ಬಿ. ಚಂದ್ರೇಗೌಡ ಮುಂತಾದ ಮಂತ್ರಿಗಳು ನಟಿಸುತ್ತಿದ್ದು ಕಾರಣವಾಗಿತ್ತು. ಜಯನಗರದಲ್ಲಿ ಮೊದಲ ದಿನಗಳ ಚಿತ್ರೀಕರಣ. ನಾನು ಸಹ ಹಲವು ಚಿತ್ರಗಳ ಜೊತೆ ಕೆಲಸ ಮಾಡಿದ್ದರಿಂದ ಕ್ಯಾಮೆರಾದ ಸಹ ಮಾಲೀಕ ಗಣೇಶ್ ಬಹಳ ಆಪ್ತರಾಗಿದ್ದರು. ಒಂದು ವಾರದ ಚಿತ್ರೀಕರಣದ ನಂತರ ಅವರು ಚಿತ್ರೀಕರಣದ ಜಾಗದಿಂದ ಬೇರೆಡೆ ಕರೆದುಕೊಂಡು ಹೋಗಿ ‘ನೋಡಿ.. ನಿಮಗೆ ಸಿಕ್ಕಿರುವ ಅವಕಾಶ ಯಾರಿಗೂ ಸಿಗೋದಿಲ್ಲ. ಬಹಳ ಅದೃಷ್ಟವಂತರು ನೀವು. ಆದರೆ, ಏನ್ ಈ ತರಹ ಕಥೆ ಆರಿಸ್ಕೋಂದ್ದಿರಾ.. ಈಗಲೂ ಕಾಲ ಮಿಂಚಿಲ್ಲ… ಸೆಂಟಿಮೆಂಟಿರೋ ಸಬ್ಜೆಕ್ಟ್ ಸೆಲೆಕ್ಟ್ ಮಾಡ್ಕೊಳ್ಳಿ. ನಿಮ್ಮ ಬಗ್ಗೆ ಪ್ರೀತಿಯಿಂದ ಹೇಳ್ತಾ ಇದ್ದೀನಿ…’ ಎಂದರು. ಇಬ್ಬರು ಮಾತಾಡುತ್ತಿದ್ದದ್ದನ್ನು ಕ್ಯಾಮೆರಾಮನ್ ಎಸ್. ರಾಮಚಂದ್ರ ನೋಡ್ತಾ ಇದ್ದರು. ಶೂಟಿಂಗ್ ನಂತರ ಗುಂಡು ಹಾಕುತ್ತಾ ಗಣೇಶ್ ಹೇಳಿದ್ದನ್ನು ಹೇಳಿದೆ. ಸಾಮಾನ್ಯವಾಗಿ ಸಿನಿಮಾ ಚಿತ್ರೀಕರಣದ ನಡುನಡುವೆ ಅಂದರೆ 70 ದೃಶ್ಯಗಳಿರುತ್ತವೆ ಅಂದುಕೊಂಡರೆ 30ರ ದೃಶ್ಯವೋ ಅಥವಾ 53ರ ದೃಶ್ಯವೋ ಮೊದಲು ಚಿತ್ರೀಕರಣವಾಗುತ್ತಿರುತ್ತದೆ. ಶೂಟಿಂಗ್‍ನಲ್ಲಿ ತೊಡಗಿಕೊಂಡಿರುವ ಕ್ಯಾಮೆರಾ ಮತ್ತು ಸೆಟ್ ಹುಡುಗರು, ಮೇಕಪ್‍ನವರು ಮುಂತಾಗಿ ಭಾಗವಹಿಸಿದವರಿಗೆ ಕಥೆಯು ಗೊತ್ತಿರುವುದಿಲ್ಲ. ನಿರ್ದೇಶನ ವಿಭಾಗವರಿಗೆ ಮಾತ್ರ ಕಥೆ ಗೊತ್ತಿರುತ್ತೆ. ಚಿತ್ರೀಕರಣ ಆಗುವಾಗ ನಡೆಯುವ ಘಟನೆಯಿಂದ ಮತ್ತು ಮಾತುಕತೆಗಳಿಂದ ‘ಇದು ಫ್ಯಾಮಿಲಿ ಸೆಂಟಿಮೆಂಟ್’, ‘ಇದು ಲವ್ ಸಬ್ಜೆಕ್ಟ್’, ‘ಇದು ರಿವೇಂಜ್ ಸ್ಟೋರಿ’ ಮುಂತಾಗಿ ಮೊದಲ ದಿನವೇ ನಟ, ನಟಿಯರು ಹೇಳುವ ಮಾತುಗಳಿಂದ ಅವರೆಲ್ಲರಿಗೆ ತಾವು ತೊಡಗಿಸಿಕೊಂಡ ಶೂಟಿಂಗ್ ಚಿತ್ರದ ಹೂರಣ ತಿಳಿದು ಬಿಡುತ್ತದೆ. ಆದರೆ, ‘ಅವಸ್ಥೆ’ ಚಿತ್ರೀಕರಣದಲ್ಲಿ ಲವ್ ಆಗಲಿ, ಫ್ಯಾಮಿಲಿ ಸೆಂಟಿಮೆಂಟ್, ರಿವೇಂಜ್ ಎಲಿಮೆಂಟ್ ಆಗಲಿ ಅವರಿಗೆ ಸಿಗದೆ ನಿರಾಶರಾಗಿದ್ದರು. ದಿನದಿಂದ ದಿನಕ್ಕೆ ನಡೆಯುವ ಚಿತ್ರೀಕರಣದಲ್ಲಿ ಅನಂತನಾಗ್ ಹೇಳುವ ‘ದಡ ಹತ್ತದ ಜನರಿಗೆ ರಾಜಕೀಯ ಮಾಡಬೇಕು’ ಎನ್ನುವುದು, ಪಾತ್ರಗಳು ಮಾರ್ಕ್ಸ್‌ವಾದ, ಲೋಹಿಯಾವಾದ ಹೇಳುವ ಮಾತುಗಳು ಅವರ ಊಹೆಗೆ ನಿಲುಕದವುಗಳಾಗಿದ್ದವು. ಮಾರನೆ ದಿನದಿಂದ ರಾಮಚಂದ್ರ ಒಬ್ಬಬ್ಬರನ್ನೇ ಕರೆದು ‘ಸಿನಿಮಾ ಕಥೆ ಗೊತ್ತಾಯ್ತ?’ ಎಂದು ಕೇಳುವುದು, ಅವರು ಹಾವು ತುಳಿದವರಂತೆ ಬೆಚ್ಚಿ ನನ್ನ ಕಡೆ ನೋಡಿ ನಿರಾಶರಾಗಿ ಹೋಗುವುದು ರಾಮಚಂದ್ರ ಮತ್ತು ಅನಂತ್ ನನ್ನಡೆ ನೋಡಿ ಕಿಚಾಯಿಸುವುದು ನಡೆಯುತ್ತಿತ್ತು. ಬಿ.ವಿ. ಕಾರಂತರು ಎರಡು ಹಾಡುಗಳನ್ನು ರಿಕಾರ್ಡ್‌ ಮಾಡಿಕೊಟ್ಟಿದ್ದು ಸಂಗೀತವನ್ನು ಅವರೇ ಮಾಡಬೇಕಿತ್ತು. ಆದರೆ, ಅವರು ಭೂಪಾಲ್‍ನಲ್ಲಿ ನಡೆದ ಆಕಸ್ಮಿಕ ಆಘಾತಕ್ಕೆ ಒಳಗಾದ್ದರಿಂದ ವಿಜಯಭಾಸ್ಕರ್ ನಂತರ ಸಂಗೀತ ಕೊಟ್ಟರು. ಒಮ್ಮೆ ತೀರ್ಥಹಳ್ಳಿಯ ಅಕ್ಕಪಕ್ಕ ಚಿತ್ರೀಕರಣ. ತೀರ್ಥಹಳ್ಳಿಯ ಪ್ರವಾಸಿಮಂದಿರದ ಎಲ್ಲಾ ರೂಮ್‌ಗಳನ್ನು ನಾವೇ ಆಕ್ರಮಿಸಿಕೊಂಡಿದ್ದೆವು. ಬಿ.ವಿ. ಕಾರಂತರದ್ದು ಭೈರಾಗಿ ಪಾತ್ರ. ಹತ್ತಿರದ ಗುಡ್ಡದಲ್ಲಿ ಅವರ ಮತ್ತು ಅನಂತನಾಗ್‍ ಅವರ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದೆವು. ಗುಡ್ಡದ ಬದಲು ಇಲ್ಲಿಂದಲೇ ಮೇಕಪ್ ಮಾಡಿಕೊಂಡು ಹೊರಡುತ್ತಿದ್ದೆವು. ಕಾರಂತರು ದಬ- ದಬ ಬಟ್ಟೆ ಬಿಚ್ಚಿ ಕೌಪೀನ ಧರಿಸಿ ಮೈಗೆಲ್ಲಾ ವಿಭೂತಿ ಬಳಿಸಿಕೊಂಡು ಓಡಾಡುತ್ತಿದ್ದುದು ರೂಢಿಯಾಗಿತ್ತು. ಆಗ ಶಿವಮೊಗ್ಗದ ಸ್ಪೆಷಲ್ ಡಿ.ಸಿ. ಐ.ಎಂ. ವಿಠಲಮೂರ್ತಿ. ಅವರು ಬಂದಿರುವುದು ಅವರು ನನಗೆ ಹೇಳಿ ಕಳಿಸಿದಾಗಲೇ ತಿಳಿಯಿತು. ಅವರ ರೂಮ್‌ಗೆ ಹೋದೆ. ಸಿನಿಮಾ ಹೇಗೆ ನಡೀತಾ ಇದೆ ಇತ್ಯಾದಿ ವಿಚಾರಿಸಿ ಎಲ್ಲಾ ರೂಮ್‌ಗಳನ್ನು ನಾವೇ ಪಡೆದ ಬಗ್ಗೆ ಸೂಕ್ಷ್ಮವಾಗಿ ಅಸಮಾಧಾನ ಸೂಚಿಸುತ್ತಾ, ‘ಅಲ್ರಿ ನಿಮ್ಮ ಜನ ಭಾರಿ ಗಲಾಟೆ ಮಾಡ್ತಾರೆ ನೋಡ್ರಿ.. ಅಲ್ಲಿ ನೋಡ್ರಿ…’ ಎಂದು ಕಿಟಕಿಯಿಂದ ತೋರಿಸುತ್ತಾ, ‘ಒಂದು ಡಿಸಿಪ್ಲೀನ್ ಬೇಡ್ವೇನ್ರಿ. ಈ ಶೂಟಿಂಗ್ ಜನರ ಜೊತೆ ಈ ಭಿಕ್ಷುಕರನ್ನ ಇಲ್ಲಿ ಬಿಟ್ಕೊಂಡಿದಾರೆ’. ‘ಯಾರ್ ಸಾರ್’ ಅಂತ ನಾನು ಇಣುಕಿ ನೋಡಿ ಜೋರಾಗಿ ನಕ್ಕೆ. ‘ಸಾರ್ ಅವರು ಯಾರು ಸರಿಯಾಗಿ ನೋಡಿ ಸ್ವಲ್ಪ. ಅವರು ಬಿ.ವಿ. ಕಾರಂತರು..’ ಎಂದೆ. ‘ಅರರೆರೆ…’ ಎನ್ನುತ್ತಾ ಸರಬರನೆ ಮೇಟಿ ಅಚ್ಚಣ್ಣನ ಜೊತೆ ಹರಟುತ್ತಿದ್ದ ಕಾರಂತರ ಬಳಿ ಓಡಿದರು. ಎಲ್ಲರಿಗಿಂತ ಮೊದಲು ತಯಾರಾಗಿರುತ್ತಿದ್ದ ಕಾರಂತರು ಹೀಗೆ ಅಡ್ಡಾಡುತ್ತಿದ್ದದು ವಿಠಲಮೂರ್ತಿ ಅವರನ್ನು ಭಿಕ್ಷುಕ ಎಂದು ತಪ್ಪು ತಿಳಿಯಲು ಕಾರಣವಾಗಿತ್ತು. ‘ನನ್ನ ಹಾಡುಗಳನ್ನು ತೆಗೆದ ರೀತಿ ನನ್ನ ಪಾತ್ರ ಇರುತ್ತೋ ಇಲ್ವೋ?’ ಎಂದು ಕಾರಂತರು ನನ್ನೊಂದಿಗೆ ತಮಾಷೆ ಮಾಡುತ್ತಿದ್ದರು. ಸುಬ್ರಹ್ಮಣ್ಯ ತೆಲುಗು ಮೂಲದ ಮದ್ರಾಸ್ ಸಿನಿಮಾ ಎಡಿಟಿಂಗ್‍ನಲ್ಲಿ ತೊಡಗಿಸಿಕೊಂಡ ಗೆಳೆಯ. ಕಾಶೀನಾಥರ ‘ಅಪರಿಚಿತ’ದ ಕಾಲದಿಂದ ಗೊತ್ತಿದ್ದ ಪಕ್ಕಾ ವ್ಯಾಪಾರಿ ಚಿತ್ರಗಳಷ್ಟೇ ಗೊತ್ತಿರುವ ಅವರು ‘ಅವಸ್ಥೆ’ ಸಿನಿಮಾದ ಸಂಕಲನಕಾರ. ನಾನು ಸಹ ಬೇಕೆಂದೆ ಅವರನ್ನು ಆರಿಸಿಕೊಂಡಿದ್ದೆ. ಎರಡು ಗಂಟೆ ಸಿನಿಮಾ ಮಾಡಲು ಹೊರಟರೆ ಮೂರೂವರೆ ಗಂಟೆ ಸಿನಿಮಾ ಆಗಿಬಿಟ್ಟಿತ್ತು. ಅಂತೂ ಇಂತೂ ಕತ್ತರಿಸಿ ಎರಡೂವರೆ ಗಂಟೆ ಉಳಿಸಿದ್ದೆವು. ‘ನೀವು ಬೇಜಾರು ಆಗೋಲ್ಲ ಅಂದ್ರೆ ಹೇಳ್ತೀನಿ. ಆ ಭೈರಾಗಿ ಯಾಕೆ ಬೇಕು? ಒಂದೇ ಒಂದು ಡೈಲಾಗ್ ಇಲ್ಲ ಏನೂ ಇಲ್ಲ- ತೆಗೆದುಬಿಡೋಣ’ ಎಂದ. ‘ಅಯ್ಯಯ್ಯೋ ಆ ಪಾತ್ರ ಬಹುಮುಖ್ಯ’ ಎಂದೆ. ಕಾರಂತರಿಗೆ ಹೇಳಿದಾಗ ನಗುತ್ತಾ ಹೇಳಿದರು. ‘ಬಾಲ್‍ರಾಜ್ ಸಹಾನಿ ಮಗನನ್ನ ಯುಎಸ್‍ಎಸ್‍ಆರ್‌ನ ಆಕ್ಟಿಂಗ್ ಸ್ಕೂಲ್‍ಗೆ ಟ್ರೈನಿಂಗ್ ಕಳಿಸ್ತಾರೆ. ಮಾತಿನ ನಡುವೆಯ ನಿಶ್ಯಬ್ದಕ್ಕೆ ಹೆಚ್ಚು ಒತ್ತು ಕೊಟ್ಟು ಮೊದಲ ಸಿನಿಮಾದಲ್ಲಿ ನಟಿಸ್ತಾನೆ. ಮೈ… ತುಮ್ಕೋ.. ಪ್ರೇ… ಕರ್ತಾ… ಹೂ… ಅನ್ನೋ ಮಾತು ಎಡಿಟರ್ ಕೈಯಲ್ಲಿ ಸಿಕ್ಕು ಮೈತುಮ್ಕೋಪ್ರೇಂಕರ್ತಾಹೂ ಆಗಿ ನಡುನಡುವೆ ಇದ್ದ ಸೈಲೆನ್ಸ್ ಕಟ್’ ಎಂದು ನಗಿಸಿದ್ದರು. ಸಿನಿಮಾ ಬಿಡುಗಡೆಗೆ ಮುನ್ನ ಹಲವು ಶೋಗಳನ್ನು ಏರ್ಪಡಿಸಿದ್ದೆವು. ನಿರ್ಮಾಪಕ ಮಹಿಮಾ ಪಟೇಲ್‍ ಅವರ ಅಣ್ಣ ಅಕಾಲಿಕವಾಗಿ ತೀರಿಕೊಂಡ ಸತೀಶ್ ಬಹಳ ಲವಲವಿಕೆಯ ವ್ಯಕ್ತಿ. ಪಟೇಲರ ತಂಗಿಯ ಮಗಳು ಎಂಜಿನಿಯರ್ ಓದುತ್ತಿದ್ದವಳು. ‘ಅಲ್ರಿ ನಾನು ಅವಸ್ಥೆ ಮೂರು ಸರಿ ನೋಡಿದೆ. ಮೂರನೇ ಸರಿ ನೋಡಿದರೂನೇ ನಂಗೆ ಅರ್ಥ ಆಗಲಿಲ್ಲ’ ಎಂದು ಹೇಳಿದಾಗ ಅಲ್ಲಿಯೇ ಇದ್ದ ಸತೀಶ್‌ ‘ಛೆ.. ಛೆ.. ಎಂಥಾ ದಡ್ಡಿಯೇ ನೀನು. ಮೂರು ಸರ್ತಿನೂ ಗೊತ್ತಾಗ್ಲಿಲ್ವಂತೆ. ನಂಗೆ ನೋಡು ಒಂದನೇ ಸಲಕ್ಕೆ ಗೋತ್ತಾಗಿಬಿಡ್ತು. ಇದು ಮೂರಲ್ಲ ನೂರು ಸರ್ತಿ ನೋಡಿದ್ರೂ ಗೊತ್ತಾಗೊ ಸಿನಿಮಾ ಅಲ್ಲ ಅಂತ..’ ಎಂದು ಧಡಕ್ಕೆಂದು ಹೇಳಿದ್ದರು.

courtsey:prajavani.net

“ಕೃಷ್ಣ ಮಾಸಡಿ”,

https://www.prajavani.net/entertainment/cinema/avaste-film-650865.html

Leave a Reply