“ಬಹು ಪ್ರತಿಭೆಯ ವೃಂದಾ”,

ಬಾಲ್ಯದಿಂದಲೇ ಯಕ್ಷಗಾನದ ಕಲಿಕೆ. ಹೈಸ್ಕೂಲು ಹಂತದಲ್ಲೇ ವೇದಿಕೆಯಲ್ಲಿ ಯಕ್ಷಗಾನ ಪ್ರದರ್ಶನ. ಕಾಲೇಜು ಮೆಟ್ಟಿಲು ಏರುವ ವೇಳೆಗೆ ನಾಟಕ, ಚಿತ್ರಕಲೆ, ನೃತ್ಯ, ಕ್ರೀಡೆ.. ಹೀಗೆ ಹಲವು ಕ್ಷೇತ್ರಗಳಿಗೆ ಪ್ರತಿಭಾ ಪ್ರಭೆಯ ವಿಸ್ತರಣೆ. ನೂರಾರು ಪ್ರಶಸ್ತಿಗಳು, ಹಲವಾರು ಸನ್ಮಾನಗಳು. ಒಟ್ಟಿನಲ್ಲಿ ‘ಬಹುಮುಖ ಯುವ ಪ್ರತಿಭೆ’ ಎಂಬುದಕ್ಕೆ ಇವರೊಂದು ನಿದರ್ಶನ ! ಈ ಬಹುಮುಖ ಪ್ರತಿಭೆಗಳ ಸಂಗಮವೇ ವೃಂದಾ ಕೊನ್ನಾರ್. ಇವರು ಮಂಗಳೂರಿನ ಬೈಕಂಪಾಡಿಯ ಬಿ.ಸುಬ್ಬರಾವ್ ಮತ್ತು ವಿದ್ಯಾ ರಾವ್ ದಂಪತಿ ಪುತ್ರಿ. ಮಂಗಳೂರು ಸುರತ್ಕಲ್ ಗೋವಿಂದದಾಸ ಕಾಲೇಜಿನ ವಿದ್ಯಾರ್ಥಿನಿ. ಬಿಕಾಂ ಪದವಿ ಮುಗಿಸಿ, ಚಾರ್ಟೆಡ್‌ ಅಕೌಂಟೆಂಟ್ ಪರೀಕ್ಷೆ ಬರೆಯುತ್ತಿದ್ದಾರೆ. ಬಿಡುವಿನ ವೇಳೆಯಲ್ಲೇ ಇಷ್ಟೆಲ್ಲಾ ‘ಕ್ಷೇತ್ರ’ಗಳಲ್ಲಿ ತಮ್ಮ ಹೆಜ್ಜೆ ಗುರುತಗಳನ್ನು ಮೂಡಿಸಿದ್ದಾರೆ. ವೃಂದಾ ಅವರಿಗೆ ಎಳವೆಯಿಂದಲೇ ತನ್ನ ಕಣ್ಣೆದುರು ಕಂಡ ಕಲೆಗಳನ್ನೆಲ್ಲ ಕಲಿಯುವ ಆಸಕ್ತಿ. ಹೀಗಾಗಿ ಕಾಲೇಜು ಮೆಟ್ಟಿಲು ಏರುವ ಹೊತ್ತಿಗೆ ಹಾಡು, ನೃತ್ಯ, ನಟನೆ, ಯಕ್ಷಗಾನ, ಪೇಂಟಿಂಗ್, ನಿರೂಪಣೆ, ಛದ್ಮವೇಷ, ಭಾಷಣ, ಪ್ರಬಂಧ, ಯೋಗ, ಕ್ರೀಡೆ ಜನಪದ ನೃತ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲೂ ‘ಸೈ’ ಎನ್ನಿಸಿಕೊಂಡಿದ್ದಾರೆ. ಯಕ್ಷಗಾನವೆಂದರೆ ಪ್ರೀತಿ ಎಷ್ಟೆಲ್ಲ ಕ್ಷೇತ್ರಗಳಲ್ಲಿ ಸುತ್ತಾಡಿ ಬಂದಿರುವ ವೃಂದಾಗೆ ಯಕ್ಷಗಾನ ಕಲೆ ಎಂದರೆ ಅತೀವ ಪ್ರೀತಿ. ಬಾಲ್ಯದಿಂದಲೇ ಚಂಡೆಯ ಅಬ್ಬರ, ಬಣ್ಣದ ವೇಷ, ಕುಣಿತಕ್ಕೆ ಆಕರ್ಷಿತರಾಗಿ, ಯಕ್ಷಗಾನ ಕಲಿಯಲು ಆರಂಭಿಸಿದ ಇವರು, ಮೊದಲ ಬಾರಿಗೆ ಶಾಲಾ ವಾರ್ಷಿಕೋತ್ಸವದಲ್ಲಿ ಪ್ರದರ್ಶನ ನೀಡಿದರು. ಲವಕುಶ ಯಕ್ಷಗಾನದಲ್ಲಿ ಶ್ರೀರಾಮನ ಪಾತ್ರಧಾರಿಯಾಗಿ ಗೆಜ್ಜೆ ಕಟ್ಟಿ ರಂಗ ಪ್ರವೇಶ ಮಾಡಿದ್ದರು. ನಂತರ ಹಂತ ಹಂತವಾಗಿ ಯಕ್ಷಗಾನ ಕಲೆಯ ಪ್ರಮುಖ ಅಂಗಗಳಾದ ನಾಟ್ಯ, ಕುಣಿತ, ಅಭಿನಯ, ಅರ್ಥಗಾರಿಕೆ, ವೇಷಭೂಷಣ ಹಾಗೂ ಬಣ್ಣಗಾರಿಕೆಯಲ್ಲಿ ಪರಿಣತಿ ಪಡೆದರು. ಎಂ.ಶಂಕರನಾರಾಯಣ ಮೈರ್ಪಾಡಿ ಮತ್ತು ಶಿವರಾಮ ಪಣಂಬೂರು ವೃಂದಾ ಅವರ ಯಕ್ಷಗಾನದ ಗುರುಗಳು. ಇವರಲ್ಲಿ ಪ್ರಾಥಮಿಕ ಯಕ್ಷಗಾನದ ನಾಟ್ಯ ಮತ್ತು ಅಭಿನಯ ಕಲಿತಿದ್ದಾರೆ. ನಂತರ ಯಕ್ಷರಂಗದ ಗುರುಗಳಾದ ಅಡ್ಕ ರಾಕೇಶ್ ರೈ ಅವರ ಗರಡಿಯಲ್ಲಿ ಪಳಗುತ್ತಾ ಪರಿಪೂರ್ಣ ಯಕ್ಷಗಾನ ಕಲಾವಿದೆಯಾಗಿ ರೂಪುಗೊಂಡಿದ್ದಾರೆ. ಇಂಗ್ಲಿಷ್, ಸಂಸ್ಕೃತ, ಕನ್ನಡ ಮತ್ತು ತುಳು ಭಾಷೆಯಲ್ಲಿ ಯಕ್ಷಗಾನವನ್ನು ಅಭಿನಯಿಸಿ ಭೇಷ್ ಎನಿಸಿಕೊಂಡಿದ್ದಾರೆ. ಯಕ್ಷಗಾನ ಅಭಿನಯದ ಜತೆ ತಾಳಮದ್ದಳೆಯಲ್ಲಿ ಅದ್ಭುತ ಅರ್ಥಧಾರಿಯೂ ಹೌದು. ಅರ್ಥಗಾರಿಕೆ ಸುಲಭದ ಮಾತಲ್ಲ. ಭಾಗವತರು ಹಾಡುವ ಹಾಡಿನ ಸಾಲುಗಳನ್ನು ಅರ್ಥೈಸಿಕೊಂಡು ತನ್ನೆದುರಿನ ಅರ್ಥಗಾರರ ಮಾತಿಗೆ ಸಮರ್ಪಕವಾಗಿ ಕಥೆ ಹಾಗೂ ಸಂಭಾಷಣೆ ಜೋಡಿಸಬೇಕು. ಈ ಪರಿಣತಿಯಿಂದಾಗಿ ಮಂಗಳೂರು ಆಕಾಶವಾಣಿ ಕಲಾವಿದೆಯಾಗಿ ತಾಳಮದ್ದಳೆಯಲ್ಲಿ ಪಾತ್ರ ನಿರ್ವಹಿಸಲು ಸಾಧ್ಯವಾಯಿತು. ಯಕ್ಷಗಾನದಂತಯೇ ಪೇಂಟಿಂಗ್‌ನಲ್ಲೂ ಸಾಧನೆ ಮಾಡಿರುವ ವೃಂದಾ, ಒಂಬತ್ತನೇ ತರಗತಿಯಿಂದಲೇ ಚಿತ್ರಕಲೆ ವಿಭಾಗದ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಪ್ರಥಮಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಮನದಲ್ಲಿ ಮೂಡುವ ಕಲ್ಪನೆಗೆ ಚಿತ್ರರೂಪ ನೀಡುವ ಅವರ ಕೈ ಚಳಕದಲ್ಲಿ ವೈವಿಧ್ಯಮಯ ಕಲಾಕೃತಿಗಳು ಅರಳಿವೆ. ನಾಟಕರಂಗದಲ್ಲೂ ಹೆಜ್ಜೆ.. ಹಾಡು, ನೃತ್ಯ ಬಲ್ಲ ವೃಂದಾಗೆ ನಾಟಕ ರಂಗವೂ ಕೈಬೀಸಿ ಕರೆದಿದೆ. ಈಕೆ ಬಣ್ಣ ಹಚ್ಚಿ ರಂಗಸ್ಥಳಕ್ಕಿಳಿದರೆಂದರೆ ಪಾತ್ರಕ್ಕೆ ಜೀವ ತುಂಬುತ್ತಾರೆ. ಪಾತ್ರ ಪರಕಾಯ ಪ್ರವೇಶ ಮಾಡಿದಂತೆ ತನ್ಮಯತೆ ಪ್ರದರ್ಶಿಸುತ್ತಾರೆ. ಯಾವ ಪಾತ್ರವಾದರೂ ಸರಿ ಆ ಪಾತ್ರಕ್ಕೆ ಭಾವನಾತ್ಮಕ ಸ್ಪರ್ಶ ನೀಡುತ್ತಾರೆ. ವಿನೋದ್ ಶೆಟ್ಟಿ ಕೃಷ್ಣಾಪುರ ಇವರ ಬಳಿ ನಾಟಕ ಕಲಿಯುತ್ತಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಲವಾರು ಪ್ರದರ್ಶನಗಳನ್ನು ನೀಡಿ ಬಹುಮಾನಗಳನ್ನು ಗಳಿಸಿದ್ದಾರೆ. ಅರಳು ಹುರಿದಂತೆ ಮಾತನಾಡುವ ವೃಂದಾ, ಕನ್ನಡ, ಇಂಗ್ಲಿಷ್‌ ಮತ್ತು ಸಂಸ್ಕೃತ ಭಾಷೆಯಲ್ಲಿ ಭಾಷಣ ಮಾಡುತ್ತಾರೆ. ಸಭಾ ಕಾರ್ಯಕ್ರಮಗಳ ನಿರೂಪಣೆ ಈಕೆಯ ಮತ್ತೊಂದು ಹವ್ಯಾಸ. ಮಾತಿನ ಜತೆಗೆ, ಛದ್ಮವೇಷ ಸ್ಪರ್ಧೆ, ಏಕಪಾತ್ರ ಅಭಿನಯದಲ್ಲೂ ಸೈ ಎನಿಸಿಕೊಂಡು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸಾಮಾಜಿಕ ಪಿಡುಗುಗಳು ಮತ್ತು ಪರಿಸರ ಸಂಬಂಧಿತ ಪ್ರಬಂಧ ಸ್ಪರ್ಧೆಯಲ್ಲಿ ಹಲವು ಬಹುಮಾನ ಗಳಿಸಿದ್ದಾರೆ. ಅಂತರ್ ಶಾಲಾ ಕಾಲೇಜು ಮತ್ತು ಅಂತರ್ ವಿಶ್ವವಿದ್ಯಾಲಯ ಮಟ್ಟದ ಚರ್ಚಾಕೂಟಗಳಲ್ಲಿ, ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ಬಹುಮಾನ ಪಡೆದಿದ್ದಾರೆ. ರಂಗಸಜ್ಜಿಕೆಗೆ ಸೀಮಿತವಾಗದ ವೃಂದಾ ಅವರ ಆಸಕ್ತಿ ನಾಟಕ ಅಭಿನಯ ಸಾಮಾಜಿಕ ಕಳಕಳಿಯತ್ತಲೂ ಹೊರಳಿದೆ. ಸಾಮಾಜಿಕ ಪಿಡುಗುಗಳು, ಪರಿಸರ ಜಾಗೃತಿ ಮೂಡಿಸುವಂತಹ ಬೀದಿ ನಾಟಕಗಳಲ್ಲಿ ಅಭಿನಯಿಸಿರುವ ಅವರು, ಜನಪದ ನೃತ್ಯ ಹಾಗೂ ವೀರಗಾಸೆಯಲ್ಲೂ ಪರಿಣತಿ ಪಡೆದಿದ್ದಾರೆ. ಕಲೆ ಮತ್ತು ಹವ್ಯಾಸಗಳಿಂದಾಚೆಗೂ ಕಾಲಿಟ್ಟಿರುವ ವೃಂದ, ಮಂಗಳೂರು ವಿಶ್ವವಿದ್ಯಾಲಯದಿಂದ ಶಿಕ್ಷಣ ಕ್ಷೇತ್ರದಲ್ಲಿನ ಅತ್ಯುತ್ತಮ ಸಾಧನೆಗಾಗಿ ಬಂಗಾರದ ಪದಕ ಪಡೆದಿದ್ದಾರೆ. ರೋಟರಾಕ್ಟ್ ಕ್ಲಬ್‍ನ ಅಧ್ಯಕ್ಷೆ ಹಾಗೂ ಕಾರ್ಯದರ್ಶಿಯಾಗಿ, ತನ್ನ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯದರ್ಶಿಯಾಗಿಯೂ ಈಕೆ ಕೆಲಸ ಮಾಡಿದ್ದಾರೆ. ಕ್ರೀಡೆಯಲ್ಲೂ ಮುಂದು. ಆಶುಭಾಷಣ, ಆಶು ನಟನೆಯಲ್ಲಿ ಎತ್ತಿದ ಕೈ. ಗೋಡೆಗಳಲ್ಲಿ, ಶಾಲೆಗಳಲ್ಲಿ, ಫ್ಲೈಓವರ್‌ಗಳಲ್ಲಿ ವೈವಿಧ್ಯಮಯವಾದ ವರ್ಲಿ ಚಿತ್ರಗಳನ್ನು ಬಿಡಿಸುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಈ ಕಲಾ ಕೌಶಲವನ್ನು ಮಕ್ಕಳಿಗೂ ಹೇಳಿಕೊಡುತ್ತಿದ್ದಾರೆ. ವೃಂದಾ ಸಾಧನೆಗೆ ಸಂದ ಪ್ರಶಸ್ತಿ, ಸನ್ಮಾನಗಳು ಹಲವಾರು. ಧರ್ಮಸ್ಥಳದ ಶಾಂತಿವನ ಟ್ರಸ್ಟ್‌ನಿಂದ ರಾಜ್ಯ ಮಟ್ಟದ ಚಿತ್ರ ಸ್ಪರ್ಧೆಯಲ್ಲಿ ಪ್ರಶಸ್ತಿ, ಜಿಲ್ಲಾ ಮಟ್ಟದ ರಂಗೋಲಿ ರಚನೆ ಮತ್ತು ಆವೆ ಮಣ್ಣಿನ ಮಾದರಿ ರಚನೆಯಲ್ಲಿ ಬಹುಮಾನ ಸೇರಿದಂತೆ ಸರಿ ಸುಮಾರು 520 ಪ್ರಶಸ್ತಿ ಹಾಗೂ ಸುಮಾರು 70ಕ್ಕೂ ಹೆಚ್ಚು ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ. ವೃಂದಾ ಅವರ ಇಷ್ಟೆಲ್ಲ ಸಾಧನೆಯ ಹಿಂದೆ ತಂದೆ ತಾಯಿ ಮತ್ತು ಸಹೋದರರ ಸಹಕಾರವಿದೆ. ಸಮಯ ಹೇಗೆ ಹೊಂದಿಸುತ್ತೀರಿ? ‘ಓದು, ಕ್ರೀಡೆ, ನೃತ್ಯ, ಗಾಯನ..ಇಷ್ಟೆಲ್ಲ ಹವ್ಯಾಸಗಳಿಗೆ ಸಮಯ ಹೇಗೆ ಹೊಂದಿಸಿಕೊಳ್ಳುತ್ತೀರಿ’ ಎಂದು ವೃಂದಾ ಅವರನ್ನು ಪ್ರಶ್ನಿಸಿದರೆ; ‘ನನಗೆ ಬಾಲ್ಯದಿಂದಲೇ ವಿಭಿನ್ನವಾದ ಬದುಕು, ವಿಶಿಷ್ಟವಾದ ಸಾಧನೆ ಮಾಡಬೇಕೆಂಬ ಗುರಿ ಇತ್ತು. ಅದಕ್ಕೆ ಸರಿಯಾಗಿ ಸಮರ್ಪಕ ಮಾರ್ಗದರ್ಶನ ಸಿಕ್ಕಿತು. ಎಲ್ಲವುದಕ್ಕೂ ಸಮಯ ನಿಗದಿ ಮಾಡಿಕೊಳ್ಳುತ್ತಿದ್ದೆ. ವಿದ್ಯಾಭ್ಯಾಸಕ್ಕೆ ತೊಡಕಾದಂತೆ ಪಠ್ಯೇತರ ಚಟುವಟಿಕೆಗಳಿಗೆ ಸಮಯ ಕೊಟ್ಟಿದ್ದೇನೆ. ನನಗೆ ಯಾವುದೂ ಹೊರೆ ಎನ್ನಿಸಲಿಲ್ಲ’ ಎಂದು ಅಚ್ಚರಿಯ ಉತ್ತರ ನೀಡುತ್ತಾರೆ. ‘ನಾನು ಸಕಾರಾತ್ಮಕವಾಗಿ ಚಿಂತನೆ ಮಾಡುತ್ತೇನೆ. ಮನಸ್ಸಿನಂತೆ ಮಾರ್ಗ ಎನ್ನುತ್ತಾರಲ್ಲಾ ಹಾಗೆ. ನನ್ನ ಎಲ್ಲ ಚಟುವಟಿಕೆಗಳೂ ಒಂದಕ್ಕೊಂದು ಪೂರಕವಾಗಿದ್ದವು. ಪಠ್ಯೇತರ ಚಟುವಟಿಕೆಗಳೂ ನನ್ನ ವಿದ್ಯಾಭ್ಯಾಸಕ್ಕೆ ಪೂರಕವಾಗಿದ್ದವು. ಪ್ರತಿ ಕ್ಷಣವನ್ನೂ ಬಿಡುವಿಲ್ಲದಂತೆ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ. ಎಂದೂ ಸಮಯದ ಅಭಾವ ಕಂಡುಬಂದಿಲ್ಲ. ಟಿವಿ ನೋಡುವುದು ಕಡಿಮೆ. ಅನಗತ್ಯ ಮೊಬೈಲ್ ಚಾಟಿಂಗ್ ಇಷ್ಟವಾಗುವುದಿಲ್ಲ’ ಎಂದು ಖಡಕ್‌ ಆಗಿ ಹೇಳುತ್ತಾರೆ. ಚಿತ್ರಕಲೆ ಪ್ರವೀಣೆ ಶೈಕ್ಷಣಿಕ ಕಲಿಕೆಯಲ್ಲಿನ ಬಿಡುವಿನ ವೇಳೆಯಲ್ಲೇ ವಾಟರ್ ಪೇಂಟಿಂಗ್, ಸ್ಪೀಡ್ ಪೇಂಟಿಂಗ್, ಫೇಸ್ ಪೇಂಟಿಂಗ್, ಗ್ಲೋಆರ್ಟ್, ಅಕ್ರಿಲಿಕ್ ಪೇಂಟಿಂಗ್, ಗ್ಲೋ ಆರ್ಟ್, ಮುಖವರ್ಣ, ವರ್ಲಿ ಆರ್ಟ್, ಪೆನ್ಸಿಲ್ ಶೇಡಿಂಗ್, ಆಯಿಲ್ ಕಲರ್ ನಂತಹ ಹಲವು ಪ್ರಾಕಾರಗಳಲ್ಲಿ ಚಿತ್ರ ಬಿಡಿಸುತ್ತಾರೆ. ಉಮೇಶ್ ಎಸ್.ಜೆ ಇವರ ಚಿತ್ರಕಲಾ ಗುರುಗಳು. ಚಿತ್ರ ಬರೆಯುವುದಷ್ಟೇ ಅಲ್ಲ, ಆವೆ ಮಣ್ಣಿನಿಂದ ವಿವಿಧ ಮಾದರಿಗಳು ಮತ್ತು ಕಲಾಕೃತಿಗಳನ್ನೂ ಮಾಡುತ್ತಾರೆ. ಗುರುಗಳಾದ ವೆಂಕಿ ಪಲಿಮಾರ್ ಅವರಿಂದ ತರಬೇತಿ ಪಡೆದಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ಮಾದರಿಗಳನ್ನು ರಚಿಸಿ ಪ್ರಶಸ್ತಿ ಪಡೆದಿದ್ದಾರೆ.

courtsey:prajavani.net

“author”: “ಸಂತೋಷ್ ರಾವ್ ಪೆರ್ಮುಡ”,

https://www.prajavani.net/artculture/art/many-talent-vridna-654776.html

Leave a Reply