ಕಲಾವಿದನ ಕಣ್ಣಲ್ಲಿ ನೆರೆ ಕರ್ನಾಟಕ

ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಬವಣೆಗಳನ್ನು ಕಲಾವಿದ ಬಾಲಚಂದ್ರ ಚಿತ್ರಗಳಲ್ಲಿ ಪ್ರಸ್ತುತ ಪಡಿಸಿದ್ದಾರೆ. ಪತ್ನಿ, ತಲೆಮೇಲೆ ಪುಟ್ಟಿ ಹೊತ್ತುಕೊಂಡು, ಕೊಂಕಳಲ್ಲಿ ಮಗು ಎತ್ತಿಕೊಂಡು, ಕೈಯಲ್ಲಿ ಪಾತ್ರೆ, ಪಗಡಿ ಹಿಡಿದು ಸಾಗುತ್ತಿದ್ದರೆ, ಪತಿ ಒಂದು ಕೈಯಲ್ಲಿ ಜಾನುವಾರ ಹಿಡಿದುಕೊಂಡು, ಉಳಿದ ಮಕ್ಕಳ ಕೈ ಹಿಡಿದುಕೊಂಡು ಮಂಡಿಯುದ್ದ ನೀರಿನಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿದ್ದಾರೆ..! ಒಂದು ಕಡೆ ಬಸ್ಸು ಅರ್ಧ ನೀರಿನಲ್ಲಿ ಮುಳುಗುತ್ತಲೇ ಸಾಗುತ್ತಿದೆ, ಇನ್ನೊಂದು ಕಡೆ ಜನರು ಬೋಟ್‌ನಲ್ಲಿ ಕುಳಿತು, ಊರಿನ ನಡುವಿರುವ ನೀರಿನಲ್ಲಿ ತೇಳುತ್ತಾ ಸಾಗುತ್ತಿದ್ದಾರೆ..! ಹೆಲಿಕಾಪ್ಟರ್‌ವೊಂದು ಮೇಲೆ ಹಾರಾಡುತ್ತಿದೆ. ನಾಲ್ಕೈದು ಕುಟುಂಬಗಳು, ಹೆಲಿಕಾಪ್ಟರ್‌ನಲ್ಲಿರುವವರು ಉದುರಿಸುವ ಆಹಾರ ಪೊಟ್ಟಣಕ್ಕಾಗಿ ಕೈಚಾಚಿ ನಿಂತಿದ್ದಾರೆ. ಅವರ ಕಾಲು ಬುಡದಲ್ಲೇ ಪ್ರವಾಹ ಬಂದು ನಿಂತಿದೆ..ಇವು, ಬಾಗಲಕೋಟೆಯ ಕಲಾವಿದ ಬಾಲಚಂದ್ರ ಅವರು ರಚಿಸಿದ ‘ನೆರೆ–ಸಂತ್ರಸ್ತರ’ ಚಿತ್ರಗಳು. ಇವರ ಪ್ರತಿ ಚಿತ್ರವೂ ಉತ್ತರ ಕರ್ನಾಟಕದ ಪ್ರವಾಹ ಪರಿಸ್ಥಿತಿ ಮತ್ತು ಆ ವೇಳೆಯಲ್ಲಿ ಜನರು ಅನುಭವಿಸಿದ ಸಂಕಟವನ್ನು ಕಟ್ಟಿಕೊಡುತ್ತವೆ. ‘ನೆರೆ ಬಂದಾಗ ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿ ತೀರದಲ್ಲಿನ ಪರಿಸ್ಥಿತಿಯನ್ನು ಕಣ್ಣಾರೆ ಕಂಡಿದ್ದೆ. ಕೆಲವರನ್ನು ಮಾತನಾಡಿಸಿದ್ದೆ. ಕೆಲವೊಂದು ಫೋಟೊಗಳನ್ನು ತೆಗೆದಿದ್ದೆ. ಇವೆಲ್ಲವನ್ನೂ ಚಿತ್ರಗಳಲ್ಲಿ ಅಡಕಗೊಳಿಸಿದ್ದೇನೆ. ಕೆಲವೊಂದು ಕಾಲ್ಪನಿಕ ಚಿತ್ರಗಳೂ ಇವೆ’ ಎನ್ನುತ್ತಾರೆ ಬಾಲಚಂದ್ರ. ಅವರು ಹೇಳಿದಂತೆ, ಆ ಚಿತ್ರಗಳಲ್ಲಿ, ಕೃಷ್ಣೆಯ ಆರ್ಭಟ, ಮಲಪ್ರಭಾ, ಘಟಪ್ರಭೆಯರ ಉಗ್ರ ನರ್ತನವಿದೆ, ಪ್ರವಾಹದಲ್ಲೇ, ಸಾಮಾನು ಸರಂಜಾಮುಗಳು, ಮಕ್ಕಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿರುವ ಕುಟುಂಬಗಳ ದೃಶ್ಯವಂತೂ ಮನಕಲಕುತ್ತದೆ. ಕರ್ನಾಟಕದ ಭೂಪಟದ ಎದುರು ಸಂತ್ರಸ್ತರು ನೆರವಿಗಾಗಿ ಮುಗಿಲತ್ತ ಕೈಚಾಚಿರುವಂತಹ ಚಿತ್ರ, ಆಗಿನ ಉತ್ತರ ಕರ್ನಾಟಕದ ಪರಿಸ್ಥಿತಿಯಷ್ಟೇ ಅಲ್ಲ, ಈಗಲೂ ಪ್ರವಾಹದ ಭೀತಿ ಎದುರಿಸುತ್ತಿರುವ ಪ್ರದೇಶಗಳ ಪರಿಸ್ಥಿತಿಯನ್ನೂ ಪ್ರತಿಬಿಂಬಿಸುತ್ತಿವೆ. ಪ್ರತಿ ಚಿತ್ರದಲ್ಲೂ ನೋವು, ಸಂಕಟ, ದುಗುಡ ಎಲ್ಲ ಭಾವಗಳನ್ನು ಕಾಣುತ್ತವೆ. ಬಾಲಚಂದ್ರ ಶಿವಪ್ಪ ಬೇಕಿನಾಳ ಅವರು ಬಸವನಬಾಗೇವಾಡಿಯವರು. ಸದ್ಯ ಬಾಗಲಕೋಟೆಯ ರಾಜ್ಯ ರಸ್ತೆಸಾರಿಗೆ ಸಂಸ್ಥೆಯಲ್ಲಿ ಕುಶಲಕರ್ಮಿ(ಬಣ್ಣಗಾರ)ಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡವರು. ಪ್ರೌಢಶಾಲೆಯಲ್ಲಿರುವಾಗ ಶಿಕ್ಷಕ ಗಂಗಾಧರ ಕಮ್ಮಾರ ಅವರಿಂದ ಪ್ರೇರಣೆ ಪಡೆದವರು. ‘ನನ್ನ ಬದುಕಿನಲ್ಲಿ ಕಮ್ಮಾರ ಸರ್ ಅವರ ಪಾತ್ರ ದೊಡ್ಡದು. ಅವರು ನಮ್ಮಲ್ಲಿರುವ ಕಲೆಯನ್ನು ಗುರುತಿಸಿ ನೀರೆರೆದು ಪ್ರೋತ್ಸಾಹಿಸಿದರು’ ಎಂದು ಗೌರವದಿಂದ ನೆನೆಯುತ್ತಾರೆ. ಬಾಲಚಂದ್ರ ಅವರು ಹೂವಿನಹಿಪ್ಪರಗಿಯ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಎರಡು ವರ್ಷ ಡಿಎಂಸಿ ಶಿಕ್ಷಣ, ಬೆಳಗಾವಿಯ ಉಮಾ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಮೂರು ವರ್ಷ ಎ.ಎಂ. ಪದವಿ ಪೂರೈಸಿದ್ದಾರೆ. ಅದೇ ಕಾಲೇಜಿನಲ್ಲಿಯೇ ಒಂದು ವರ್ಷ ಎಎಂಜಿಡಿ ಕೋರ್ಸ್‌ ಅಧ್ಯಯನ ಮಾಡಿದ್ದಾರೆ. ಜಲವರ್ಣ, ತೈಲವರ್ಣ, ಅರ್ಕಿಲಿಕ್‌ ಪೇಂಟಿಂಗ್‌ನಲ್ಲಿ ಪ್ರಾವೀಣ್ಯ ಪಡೆದಿದ್ದಾರೆ. ಸದ್ಯ ಪ್ರತಿನಿತ್ಯ ಬಸ್‍ಗಳಿಗೆ ಗ್ರಾಫಿಕ್ಸ್, ಪೇಂಟಿಂಗ್ ಮಾಡುತ್ತಾರೆ. ರೇಡಿಯಂ ಸ್ಟೀಕರ್, ಪೋಸ್ಟರ್ ನಿತ್ಯದ ಕಾಯಕ. ಬಣ್ಣದ ಬದುಕಿನಲ್ಲಿಯೇ ಜೀವನ ಸಾಗುವುದರಿಂದ ಸಹಜವಾಗಿ ಚಿತ್ರಕಲೆ ಅವರಿಗೆ ಒಲಿದಿದೆ. ಈಗಾಗಲೇ ಚಿತ್ರಗಳನ್ನು ರಾಜ್ಯಮಟ್ಟದ ಕಲಾಶಿಬಿರ, ಚಿತ್ರಸಂತೆಗಳಲ್ಲಿ ಚಿತ್ರಗಳನ್ನು ಪ್ರದರ್ಶಿಸಿ ಮೆಚ್ಚುಗೆ ಪಡೆದಿದ್ದಾರೆ. ಚಿತ್ರಕಲಾ ಸಮ್ಮೇಳನ, ಕಲಾಶಿಬಿರ, ಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ. ನೆರೆ ಸಂತ್ರಸ್ತರ ಬದುಕಿನ ಚಿತ್ರಗಳನ್ನು ಪ್ರದರ್ಶಿಸಿ ಇಲಾಖೆಯ ಅಧಿಕಾರಿಗಳಿಂದ ಭೇಷ್ ಎನಿಸಿಕೊಂಡಿದ್ದಾರೆ. ಇವರ ಕಲಾ ಕೌಶಲ್ಯ ಮೆಚ್ಚಿ, ಬಾಗೇವಾಡಿಯ ಬಸವೇಶ್ವರ ಫೌಂಡೇಶನ್ ಅವರು ‘ಬಸವಭೂಷಣ’ ಪ್ರಶಸ್ತಿ ನೀಡಿ ಗೌರವಿಸಿದೆ. 2017ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಲವಾರು ಸಂಘಸಂಸ್ಥೆಗಳು ಅವರನ್ನು ಗೌರವಿಸಿವೆ.

headline- ಕಲಾವಿದನ ಕಣ್ಣಲ್ಲಿ ನೆರೆ ಕರ್ನಾಟಕ

courtsey:prajavani.net

https://www.prajavani.net/artculture/article-features/flood-karnataka-in-artist-eye-677161.html

Leave a Reply