ರೂಪಕವಾಗಿ ರಾಮಾಯಣ

ವಾಲ್ಮೀಕಿ ರಾಮಾಯಣದ ಮೂಲ ಆಶಯ ಹಾಗೂ ಸಮಕಾಲೀನ ಸಂದರ್ಭ ಎರಡನ್ನೂ ಗಮನದಲ್ಲಿರಿಸಿಕೊಂಡು ರಾಮನನ್ನು ಅರಿಯುವ ಪ್ರಯತ್ನ ನನ್ನದಾಗಿದೆ. 1991ರ ಸರಿಸುಮಾರಿನಲ್ಲಿ, ಈ ದೇಶದಲ್ಲಿ ರಾಮಮಂದಿರ ನಿರ್ಮಾಣದ ಚಳವಳಿ ನಡೆದಿತ್ತು. ಚಳವಳಿಯು ಹಿಂದು ಮುಸಲ್ಮಾನ ಸಮುದಾಯಗಳ ನಡುವಿನ ಧಾರ್ಮಿಕ ಹಾಗೂ ಸಾಮಾಜಿಕ ಭಿನ್ನಾಭಿಪ್ರಾಯಗಳಿಂದಾಗಿ ಆರಂಭವಾಗಿತ್ತು, ಹಿಂಸಾತ್ಮಕವಾಗುವ ಸಾಧ್ಯತೆಯಿತ್ತು. ನಾನು ಚಿಂತಿತನಾಗಿದ್ದೆ. ಹಾಗಾಗಿ, ಆವರೆಗೆ ಕೇವಲ ಸಮಾಜವಾದದ ಚಿಂತನೆ ಮಾಡುತ್ತಿದ್ದ ನಾನು ರಾಮನ ಚಿಂತೆ ಮಾಡತೊಡಗಿದೆ. ರಾಮನನ್ನು ಅರಿಯುವ ನನ್ನ ಪ್ರಯತ್ನವು ಹೀಗೆ, ಮಂದಿರ ನಿರ್ಮಾಣ ಚಳವಳಿಗೆ ಪ್ರತಿಕ್ರಿಯೆಯಾಗಿ ಆ ದಿನಗಳಲ್ಲೇ ಆರಂಭವಾಯಿತು. ಅಗ್ನಿಪ್ರಳಯದ ಅಪಾಯ ಎರಡನೆಯ ಸಂದರ್ಭವನ್ನು ನಾನು ಅಗ್ನಿಪ್ರಳಯದ ಅಪಾಯ ಎಂದು ಕರೆಯಲು ಬಯಸುತ್ತೇನೆ. ವಿಜ್ಞಾನಿಗಳು ಇದನ್ನು ಪೃಥ್ವಿ ಬಿಸಿಯಾಗುತ್ತಿರುವ ಸಂದರ್ಭ ಎಂದು ವಿವರಿಸುತ್ತಾರೆ. ಇದರ ಲಕ್ಷಣಗಳು ಇಂತಿವೆ. ಮಳೆ–ಬೆಳೆ ಏರುಪೇರಾಗುವುದು, ಅತಿಯಾದ ಬಿಸಿಲು, ಅತಿವೃಷ್ಟಿ-ಅನಾವೃಷ್ಟಿಗಳ ಮೂಲಕ ಬರಗಾಲ ಉಂಟಾಗುವುದು, ಇತ್ಯಾದಿ. ಇವೆಲ್ಲವುಗಳೂ ನಮಗೀಗಾಗಲೇ ಅನುಭವಕ್ಕೆ ಬರತೊಡಗಿವೆ. ಆದರೆ, ನಮ್ಮ ಅರಿವಿಗೆ ಬಾರದಿರುವ ವೈಜ್ಞಾನಿಕ ಸತ್ಯವೆಂದರೆ, ಇದು ಮಾನವ ನಿರ್ಮಿತ ಅನಾಹುತವಾಗಿದೆ ಎನ್ನುವುದು. ಈ ಪ್ರಕ್ರಿಯೆಯನ್ನು ತತ್‍ಕ್ಷಣದಲ್ಲಿ ಹಿಮ್ಮೆಟ್ಟಿಸದಿದ್ದರೆ, ಕೇವಲ ಹದಿನೈದು ವರ್ಷಗಳಲ್ಲಿ ಹಿಮ್ಮೆಟ್ಟಿಸದಿದ್ದರೆ, ಹಿಮ್ಮೆಟ್ಟಿಸುವುದೇ ಅಸಾಧ್ಯವಾಗುತ್ತದಂತೆ. ಇದು ಅಗ್ನಿಪ್ರಳಯ. ಜಲಪ್ರಳಯ ಈವರೆಗೆ ನಾವು ಜಲಪ್ರಳಯದ ಬಗ್ಗೆ ಮಾತ್ರ ಕೇಳಿದ್ದೆವು. ಪುರಾಣಗಳಲ್ಲೂ ಕೇಳಿದ್ದೆವು, ವೈಜ್ಞಾನಿಕವಾಗಿಯೂ ಕೇಳಿದ್ದೆವು. ವಿಜ್ಞಾನವು ಜಲಪ್ರಳಯವನ್ನು ಪುರಾಣಗಳಿಗಿಂತ ಕೊಂಚ ಭಿನ್ನವಾಗಿ ನೋಡುತ್ತದೆ. ಐಸ್‍ಏಜ್ ಎಂದು ಅದನ್ನು ಕರೆಯುತ್ತದೆ. ಒಂದು ಲಕ್ಷ ವರ್ಷಗಳಿಗೊಮ್ಮೆ ಬರುತ್ತದೆ ಈ ಐಸ್‍ಏಜ್ ಅಥವಾ ಮಂಜಿನಯುಗ. ಈವರೆಗೆ ಅಂತಹ ಐದು ಐಸ್‍ಏಜ್‍ಗಳು ಆಗಿ ಹೋಗಿವೆ. ಆರನೆಯದು ಬರಲಿಕ್ಕೆ ಇನ್ನೂ ಎಂಬತ್ತು ಸಾವಿರ ವರ್ಷಗಳು ಬಾಕಿಯಿವೆ. ಭೂಮಿ ತಣ್ಣಗಾಗಿ ಮಂಜುಗಡ್ಡೆ ಉಂಟಾಗಿ ಬರಲಿರುವ ಈ ಜಲಪ್ರಳಯಕ್ಕೂ ಬಹಳ ಮೊದಲೇ ಮಾನವನಿರ್ಮಿತ ಅಗ್ನಿಪ್ರಳಯ ಬಂದೆರಗಲಿದೆ ನಮ್ಮ ಮೇಲೆ. ಸಕಲ ಜೀವಗಳನ್ನೂ ನಾಶಮಾಡಲಿದೆ. ಹಾಗಾದಾಗ ಭೂಮಿಯೂ ಸಹ ಮಿಕ್ಕ ಗ್ರಹಗಳಂತೆ ಜೀವವನ್ನು ಸಲಹುವ ಶಕ್ತಿ ಕಳೆದುಕೊಳ್ಳಲಿದೆ. ಅತಿಯಾಗಿ ಇಂಧನ ಉರಿಸುವುದು, ಅತಿಯಾಗಿ ಉತ್ಪಾದನೆ ಮಾಡುವುದು ಇತ್ಯಾದಿ, ಅತಿಯಾದ ಪುರುಷ ಪ್ರಯತ್ನ ಉಂಟು ಮಾಡಲಿರುವ ಅನಾಹುತವಿದು. ಈಗಾಗಲೇ ನಮಗೆ ಅನುಭವಕ್ಕೆ ಬರುತ್ತಿರುವ ಇದರ ಪೂರ್ವಸೂಚನೆ ಕೇವಲ ಕಂತೆ ಪುರಾಣವಲ್ಲ, ಒಂದು ಭೀಕರ ವಾಸ್ತವ. ಈ ಅಪಾಯಕಾರಿ ವಾಸ್ತವದಿಂದ ಹೊರಬರಬೇಕಿದೆ ನಾವು. ರೂಪಕ ಪ್ರಜ್ಞೆ ನಾನೊಬ್ಬ ರಂಗಕರ್ಮಿ, ರೂಪಕಗಳ ನಡುವೆ ಕೆಲಸ ಮಾಡುವವನು ನಾನು. ಮೇಲಿನ ಎರಡೂ ಬೆಳವಣಿಗೆಗಳಿಗೆ ಗಾಢವಾದ ಸಂಬಂಧವಿದೆ ಎಂದು ನನ್ನ ರೂಪಕಪ್ರಜ್ಞೆ ಹೇಳತೊಡಗಿದೆ. ರಾಮನನ್ನು ಅರಿಯುವ ನಮ್ಮ ಪ್ರಯತ್ನವು ಪ್ರಕೃತಿಯನ್ನು ಸಲಹುವ ಪ್ರಯತ್ನವೂ ಆಗಬೇಕು, ಅತಿಯಾದ ಪುರುಷ ಪ್ರಯತ್ನವನ್ನು ಹಿಮ್ಮೆಟ್ಟಿಸುವ ಕೆಲಸವೂ ಆಗಬೇಕು ಎಂದು ಅದು ಹೇಳತೊಡಗಿದೆ. 1991ರಲ್ಲಿ ನಾನು, ಒಂದು ರಂಗಪ್ರದರ್ಶನದ ಮೂಲಕವೇ ಈ ಕೆಲಸ ಶುರುಮಾಡಿದೆ. ಅತ್ತ, ರಥಯಾತ್ರೆ, ಇಟ್ಟಿಗೆ ಸಂಗ್ರಹ, ಬಾಬರಿ ಮಸೀದಿ ಧ್ವಂಸ ಇತ್ಯಾದಿ ಗದ್ದಲಗಳು ನಡೆದಿದ್ದರೆ, ಇತ್ತ ನಾನು ಭವಭೂತಿಯ ಹೆಸರಾಂತ ಸಂಸ್ಕೃತ ನಾಟಕ ಉತ್ತರ ರಾಮಚರಿತೆ ಆಡಿಸಿದೆ. ದೆಹಲಿಯ ರಾಷ್ಟ್ರೀಯ ನಾಟಕಶಾಲೆಯ ವಿದ್ಯಾರ್ಥಿಗಳಿಗೆಂದು ಹಿಂದಿಯಲ್ಲಿ ಆಡಿಸಿದ ಆ ರಂಗಪ್ರಸ್ತುತಿ ಒಂದು ಅಸಾಧಾರಣ ಅನುಭವವಾಗಿತ್ತು ನನಗೆ. ಹೊರಗೆ ಆಕ್ರೋಶಮಯ ವಾತಾವರಣವಿದ್ದರೆ, ತಾಲೀಮಿನ ಕೊಠಡಿಯೊಳಗೆ ರಾಮಸೀತೆಯರು ಪಡುತ್ತಿದ್ದ ಪಡಬಾರದ ಪಾಡನ್ನು ಕಂಡು ನಾನು ಕಣ್ಣೀರು ಕರೆಯುತ್ತಿದ್ದೆ. ಪುರುಷನ ಕಣ್ಣೀರು ಅದು. ವಿಚಿತ್ರ ಅನ್ನಿಸುತ್ತಿತ್ತು ನನಗೆ! ಇರುವುದು ಒಬ್ಬನೇ ರಾಮ. ಅದು ಹೇಗೆ ಅವನು ಆಕ್ರೋಶಕ್ಕೂ ಕಾರಣನಾಗುತ್ತಾನೆ, ಕಣ್ಣೀರಿನ ಕಥನಕ್ಕೂ ಕಾರಣನಾಗುತ್ತಾನೆ ಎಂಬ ಪ್ರಶ್ನೆ ಕಾಡುತ್ತಿತ್ತು ನನ್ನನ್ನು. ಯಾವುದು ಸರಿ, ರಾಮಕಥನವೇ ರಾಮಮಂದಿರವೇ ಎಂಬ ಪ್ರಶ್ನೆ ಕಾಡುತ್ತಿತ್ತು. ಉತ್ತರ ತಿಳಿಯಲೆಂದು ರಾಮಾಯಣದ ಆಳಕ್ಕಿಳಿದೆ. ಈಗ, ಹೆಚ್ಚೂ ಕಡಿಮೆ ಮೂರು ದಶಕಗಳ ನಂತರ ರಾಮಕಥನವನ್ನು ಉತ್ತರ ರೂಪದಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ. ರಾಮಾಯಣದ ಮೂಲ ರೂಪಕ ರಾಮಸೀತೆಯರು ವ್ಯಕ್ತಿಗಳೂ ಹೌದು ರೂಪಕಗಳೂ ಹೌದು. ವ್ಯಕ್ತಿಗಳಾಗಿ ನೋಡಿದಾಗ, ರಾಮ ಒಬ್ಬ ಗಂಡಸು, ಸೀತೆ ಒಬ್ಬ ಹೆಂಗಸು. ರೂಪಕವಾಗಿ ನೋಡಿದಾಗ, ರಾಮ ಪುರುಷ ಅರ್ಥಾತ್ ಮಾನವ, ಸೀತೆ ಪ್ರಕೃತಿ. ಈ ಎರಡೂ ಸ್ಥಿತಿಯಲ್ಲಿ ಅವರು ಪ್ರೀತಿಪೂರ್ವಕ ಸಹಬಾಳ್ವೆ ನಡೆಸಲು ಹೆಣಗುತ್ತ ಸೋಲುತ್ತ ಗೆಲ್ಲುತ್ತ ಹಟ ಹಿಡಿದು ಮುಂದುವರೆಯಬೇಕು ಎನ್ನುತ್ತದೆ ರಾಮಾಯಣ. ಪ್ರಣಯಿಗಳಾಗಿ ದಂಪತಿಗಳಾಗಿ ಕಾಡು-ನಾಡು ಜೋಡಿಯಾಗಿ ಗ್ರಾಮ-ನಗರ ಜೋಡಿಯಾಗಿ ಸಹಜತೆ-ಸಭ್ಯತೆ ಜೋಡಿಯಾಗಿ ಎಲ್ಲ ಪ್ರಬೇಧಗಳಲ್ಲೂ, ಅವರು ಮಾಡಬೇಕಾದದ್ದು ಇದೇ ಪ್ರಯತ್ನವನ್ನು. ನಾವು ಮಾಡಬೇಕಾದದ್ದೂ ಇದನ್ನೇ. ಯಾರೇ ಆಗಲಿ, ಜೋಡಿಗಳನ್ನು ಬೇರ್ಪಡಿಸಬಾರದು. ಬೇರ್ಪಡಿಸುವುದು ರಾಕ್ಷಸತನ ಅಥವಾ ರಾವಣತನ. ಇದು, ರಾಮಾಯಣದ ಮೂಲ ಆಶಯ. ಬೇರ್ಪಡಿಸಿದ್ದು ಇಬ್ಬರು ಪ್ರಣಯಿಗಳನ್ನಾದರೆ, ಬೇಡನ ಬಾಣದಿಂದಾಗಿ ಬೇರ್ಪಟ್ಟ ಕ್ರೌಂಚಪಕ್ಷಿಗಳಂತೆ ಅಥವಾ ರಾವಣನಿಂದಾಗಿ ಬೇರ್ಪಟ್ಟ ರಾಮಸೀತೆಯರಂತೆ, ನೋವು ಅನುಭವಿಸುತ್ತಾರೆ ಪ್ರಣಯಿಗಳು. ಇದನ್ನು ಅರಿಯಲಿಕ್ಕೆ ಕಷ್ಟವಿಲ್ಲ. ಬೇರ್ಪಡಿಸಿದ್ದು ಪುರುಷ-ಪ್ರಕೃತಿ ತತ್ವಗಳನ್ನಾದರೆ ಅರಿಯುವುದು ಕಷ್ಟ. ಪುರುಷ-ಪ್ರಕೃತಿ ತತ್ವಗಳ ಬೇರ್ಪಡಿಕೆ ಅಪಾಯಕಾರಿಯಾದದ್ದು. ಉದಾಹರಣೆಗೆಂದು ಅಂತರಂಗ ಬಹಿರಂಗಗಳನ್ನು ಬೇರ್ಪಡಿಸಿ ನೋಡಿ. ಅಪ್ರಿಯ ಸತ್ಯವೊಂದು ನಿಮ್ಮೆದುರು ನಿಲ್ಲುತ್ತದೆ. ಅಂತರಂಗ ಪ್ರಕೃತಿಯಾದರೆ, ಬಹಿರಂಗ ಪುರುಷ. ರಾಮನ ಉದಾಹರಣೆಯನ್ನೇ ತೆಗೆದುಕೊಳ್ಳಿ. ಇವೆರಡು ಬೇರ್ಪಟ್ಟಾಗ, ರಾಮನಂತಹ ರಾಮನೇ ಸಹಜಪ್ರಕೃತಿ ಮರೆತು, ಸೀತೆಯನ್ನು ಹಿಂಸಿಸತೊಡಗುತ್ತಾನೆ, ಸೀತೆಯನ್ನು ಅಗ್ನಿಪರೀಕ್ಷೆಗೆ ಒಡ್ಡುತ್ತಾನೆ. ಇದೇ ತಾತ್ವಿಕತೆಯನ್ನು ವೈಯಕ್ತಿಕತೆ ಹಾಗೂ ಸಾರ್ವಜನಿಕತೆಗಳಿಗೆ ಹೊಂದಿಸಿದಾಗ ಮತ್ತೊಂದೇ ಅರ್ಥ ಮೇಲೆದ್ದು ಬರುತ್ತದೆ. ಸಾರ್ವಜನಿಕ ಜವಾಬ್ದಾರಿಯ ಸಲುವಾಗಿ ವೈಯಕ್ತಿಕ ಬದುಕನ್ನು, ವೈಯಕ್ತಿಕ ಬದುಕಿನ ಭಾಗವಾದ ಸೀತೆಯರನ್ನೂ, ಬಲಿಕೊಡುವುದು ಎಲ್ಲ ಸಾರ್ವಜನಿಕ ವ್ಯಕ್ತಿಗಳಿಗೆ ಅನಿವಾರ್ಯವಾಗುತ್ತದೆ. ರಾಮ ಈ ಕೆಲಸ ಮಾಡಿದ, ಬುದ್ಧ ಮಾಡಿದ, ಗಾಂಧೀಜಿ ಕೂಡ ಮಾಡಿದರು. ಲಿಂಗತಾರತಮ್ಯದ ಇಂದಿನ ಚಾರಿತ್ರಿಕ ಸಂದರ್ಭದಲ್ಲಿ ಲೈಂಗಿಕ ಹಿಂಸೆಯು ಹೆಚ್ಚಾಗಿ ಗಂಡಸರಿಂದ ಸಂಭವಿಸುತ್ತದೆ. ಅದರೆ ಹೆಂಗಸರು ಇದಕ್ಕೆ ಹೊರತಲ್ಲ ಎನ್ನುತ್ತದೆ ಈ ತಾತ್ವಿಕತೆ. ಉದಾಹರಣೆಗೆ ಕೈಕೇಯಿ, ಮಾತೃತ್ವವನ್ನೇ ಆಸ್ತಿಪ್ರಜ್ಞೆಯಾಗಿ ಕಂಡದ್ದರಿಂದಾಗಿ, ದಶರಥ ಮಹಾರಾಜನನ್ನು ಹಿಂಸಿಸಿದಳು ಹಾಗೂ ಅವನ ಸಾವಿಗೆ ಕಾರಣಳಾದಳು. ಹಾಗಿದ್ದರೆ ಯಾರು ರಾವಣ? ಯಾರು ಬೇಕಾದರೂ ಆಗಬಹುದು ಯಾವ ಮನುಷ್ಯಬೇಕಾದರೂ ರಾವಣನಾಗಬಹುದು ಎನ್ನುತ್ತದೆ ರಾಮಾಯಣದ ಮೂಲರೂಪಕ. ರಾವಣರುಗಳಿಗೆ ತಾನು ರಾವಣನಾಗಿದ್ದೇನೆ ಎಂಬ ಅರಿವಿರುವುದಿಲ್ಲ. ಅರಿವಿರದೆ ಹತ್ತುತಲೆ ಮೂಡಿರುತ್ತದೆ ಅವರಿಗೆ. ಬ್ರಾಹ್ಮಣಿಕೆ, ವೇದಾಧ್ಯಯನ, ಅಧಿಕಾರ, ಕಲಾಪ್ರೌಢಿಮೆ, ಹಿರಿಮೆ ಎಲ್ಲದರ ನಂತರವೂ ರಾವಣರಾಗಿರುತ್ತೇವೆ ನಾವು. ಮಠಾಧಿಪತಿಗಳು, ರಾಜಕಾರಣಿಗಳು, ಅಧಿಕಾರಿಗಳು, ಬುದ್ಧಿಜೀವಿಗಳು, ಅಷ್ಟೇ ಏಕೆ, ಒಬ್ಬ ಅಗಸ ಕೂಡ ರಾವಣನಾಗಬಲ್ಲ ಎನ್ನುತ್ತದೆ ರಾಮಾಯಣದ ಮೂಲರೂಪಕ. ರಾಮನ ಮಿತಿ ರಾಮನ ಮಿತಿ ರಾಮಾಯಣದ ಮಿತಿಯಲ್ಲ. ರಾಮಾಯಣದ ಮಹತ್ವವಿರುವುದೇ ರಾಮನ ಮಿತಿಯಲ್ಲಿ. ಏಕೆಂದರೆ ಅದುವೆ ಸಭ್ಯತೆಯ ಮಿತಿ, ಅದುವೆ ಹಿಂಸೆಯ ಮಿತಿ, ಅದುವೆ ವ್ಯವಸ್ಥೆಯ ಮಿತಿ. ವ್ಯವಸ್ಥೆ! ಪುರುಷವೆಂಬುದೇ ವ್ಯವಸ್ಥೆ. ವ್ಯವಸ್ಥೆಗಳು ಮಿತಿಮೀರಿದಾಗ – ಅದು ಕಮ್ಯೂನಿಸ್ಟ್ ವ್ಯವಸ್ಥೆಯಿರಲಿ, ವೈದಿಕ ವ್ಯವಸ್ಥೆಯಿರಲಿ, ಕ್ಯಾಪಿಟಲಿಸ್ಟ್ ವ್ಯವಸ್ಥೆಯಿರಲಿ, ಎಲ್ಲವೂ ರಾಕ್ಷಸ ವ್ಯವಸ್ಥೆಗಳೇ ಆಗುತ್ತವೆ. ಅನುಮಾನವೇ ಬೇಡ. ಹಾಗಂತ, ರಾಮಾಯಣ ವ್ಯವಸ್ಥೆಯ ವಿರೋಧಿಯಲ್ಲ. ಅನಾರ್ಕಿಸ್ಟ್ ಅಲ್ಲ ರಾಮಾಯಣ. ರಾಮರಾಜ್ಯವೂ ಒಂದು ವ್ಯವಸ್ಥೆಯೇ ತಾನೆ. ಆದರೆ ಅದು ಸಣ್ಣವ್ಯವಸ್ಥೆ. ಪ್ರಕೃತಿಯೊಟ್ಟಿಗೆ ನಿಲ್ಲುವ ವ್ಯವಸ್ಥೆಯದು. ಆಶ್ರಮಮಾದರಿಯನ್ನು ಅನುಕರಿಸುವ ವ್ಯವಸ್ಥೆ. ಹಾಗಾಗಿ, ಯಂತ್ರ-ತಂತ್ರ-ಮಂತ್ರಗಳ ಅಬ್ಬರವನ್ನು ಅನುಮಾನದಿಂದ ನೋಡುವ ವ್ಯವಸ್ಥೆಯದು. ಶೂದ್ರರಿಂದ ಶ್ರಮಸಹಿತ ಸರಳ ಬದುಕನ್ನು ಕಲಿತು, ಆರಿತವರಿಂದ ಅರಿವನ್ನು ಕಲಿತು, ಎರಡನ್ನೂ ಬೆಸೆಯುವ ಮಹಾನ್‍ವ್ಯವಸ್ಥೆ ರಾಮರಾಜ್ಯ. ನಾವು ಅಗ್ನಿ ಪ್ರಳಯ ಹಾಗೂ ಮಂದಿರ, ಮಸೀದಿ ಹಿಂಸೆಯಿಂದ ಬಿಡುಗಡೆ ಹೊಂದಬೇಕೆಂದರೆ ಅತ್ಯಗತ್ಯವಾಗಿರುವ ವ್ಯವಸ್ಥೆ ರಾಮರಾಜ್ಯ. ಸಣ್ಣದೇ ಸರಿಯಾದ ವ್ಯವಸ್ಥೆ. ಆದರೆ ನಾವು, ರಾಮನನ್ನು ದೊಡ್ಡಮಂದಿರಗಳಲ್ಲಿ ಬಂಧಿಸಿಡಲು ಹೊರಟಿದ್ದೇವೆ. ಬಂಧಿಸಿಟ್ಟು, ಬೃಹತ್ತಾದ ಸ್ಮಾರ್ಟ್‍ಸಿಟಿಗಳನ್ನು ನಿರ್ಮಿಸಲು ಹೊರಟಿದ್ದೇವೆ. ಅಗ್ನಿಪ್ರಳಯವನ್ನು ಮೈಮೇಲೆ ಎಳೆದುಕೊಳ್ಳಲು ಹೊರಟಿದ್ದೇವೆ. ರಾಮರಾಜ್ಯದ ನಿರ್ಮಾಣವೆಂದರೆ ಗ್ರಾಮಸ್ವರಾಜ್ಯದ ನಿರ್ಮಾಣ. ಗ್ರಾಮಸ್ವರಾಜ್ಯದ ನಿರ್ಮಾಣ ಮಾತ್ರವೇ ಅಗ್ನಿಪ್ರಳಯವನ್ನು ತಪ್ಪಿಸಬಲ್ಲದು. ಅಗ್ನಿಪ್ರಳಯವೆಂಬುದು ಪ್ರಕೃತಿ ನಮಗೊಡ್ಡಿರುವ ಅಗ್ನಿಪರೀಕ್ಷೆಯಾಗಿದೆ. ಪರಿಶುದ್ಧ ಮನಸ್ಸಿನಿಂದ ಪ್ರಕೃತಿಯನ್ನು ಸಲಹಿದರೆ ನಾವೂ ಸಹ, ಸೀತೆಯಂತೆಯೇ ಸುಟ್ಟುಕೊಳ್ಳದೆ ಹೊರಬೀಳಬಹುದು ಅಗ್ನಿಪ್ರಳಯದಿಂದ. ಯಂತ್ರ ನಾಗರಿಕತೆ ಯಂತ್ರ ನಾಗರಿಕತೆ ಯಾವುದೇ ಧರ್ಮಗ್ರಂಥಗಳಲ್ಲಿ ದಾಖಲಾಗಿಲ್ಲ. ಆಗುವುದು ಸಾಧ್ಯವೂ ಇದ್ದಿಲ್ಲ. ಧರ್ಮಗ್ರಂಥಗಳು ರಚನೆಯಾದದ್ದು ಕೈಉತ್ಪನ್ನಗಳ ನಾಗರಿಕತೆಯಲ್ಲಿ. ಆದರೆ ರೂಪಕವಾಗಿ ಅದು ರಾಮಾಯಣದಲ್ಲಿ ದಾಖಲಾಗಿದೆ. ಲಂಕೆಯ ಮಹಾನಗರವೇ ಯಂತ್ರ ನಾಗರಿಕತೆಗೆ ರೂಪಕವಾಗಿದೆ. ಲಂಕೆಯ ಅಧಿಪತಿ ರಾವಣ ಇಂದಿನ ಉದ್ದಿಮೆಪತಿಗಳಂತೆಯೇ ಸರಿ. ಲಂಕೆಯ ರೂಪಕವನ್ನು ಗಮನಿಸಿ! ವಿಮಾನಗಳಿಲ್ಲದ ಕಾಲದಲ್ಲಿ ವಿಮಾನಗಳಿವೆ ಅಲ್ಲಿ. ವರ್ಚುಯೆಲ್ ಮಾಧ್ಯಮಗಳ ಜಾಲವಿರದಿದ್ದ ಕಾಲದಲ್ಲಿ ಮಾಯಾಜಾಲವಿದೆ ಅಲ್ಲಿ. ನ್ಯೂಯಾರ್ಕು ಲಂಡನ್ನು ಮುಂಬಯಿ ಬೆಂಗಳೂರುಗಳಿರದಿದ್ದ ಕಾಲದಲ್ಲಿ, ಇವುಗಳು ಈಗ ಮಾಡುತ್ತಿರುವಂತೆಯೇ, ಅಲ್ಲಿ ಆಗಲೂ ಪ್ರಕೃತಿಯನ್ನು ಬಲವಂತದಿಂದ ಬಂಧಿಸಿಡಲಾಗಿದೆ. ಹಾಗೂ, ತನ್ನ ಲಾಲಸೆಗಾಗಿ ದುರ್ಬಳಕೆ ಮಾಡಲಾಗಿದೆ. ಧಾರ್ಮಿಕ ಸಂದರ್ಭ ಇಂದಿನ ನೈತಿಕ ಅಧಃಪತನವನ್ನು ಎದುರಿಸಲಿಕ್ಕೆ ಧರ್ಮ ಅಗತ್ಯ ಎಂದು ಜನ ಮನಗಂಡಿದ್ದಾರೆ. ಅವರ ತೀರ್ಮಾನ ಸರಿಯಾದದ್ದೇ ಇದೆ. ಆದರೆ ಆ ಕೆಲಸ ಮಾಡಲಿಕ್ಕೆ ಮಾನವಧರ್ಮ ಸೂಕ್ತವಾದದ್ದೇ ರಾಮಮಂದಿರ ಸೂಕ್ತವಾದದ್ದೇ ಎಂಬುದು ಪ್ರಶ್ನೆ. ರಾಮಾಯಣದ ಮೂಲರೂಪಕವು ಅನುಮಾನಾತೀತವಾಗಿ ಮಾನವ ಧರ್ಮವನ್ನು ಎತ್ತಿಹಿಡಿಯುತ್ತಿದೆ. ರೂಪಕಪ್ರಜ್ಞೆ ಮರೆತು ಓದಿದಾಗ ಮಾತ್ರ ರಾಮಾಯಣ ಒಂದು ಕಂತೆಪುರಾಣವಾಗಿ ಕಾಣುತ್ತದೆ. ರಾಮ ಮಾನವ ರಾಮ ಮಾನವ ಎಂದು ಹೇಳಿದಾಗ, ಅದು ಒಂದು ದೈವವಿರೋಧಿ ಹೇಳಿಕೆ ಎಂದು ನಿಮಗೆ ಅನ್ನಿಸಬಹುದು. ತಾಳ್ಮೆಯಿರಲಿ. ದೇವರು ಇದ್ದಾನೆಯೇ ಎಂಬ ಪ್ರಶ್ನೆ ಅಲ್ಲ ಇದು. ಪ್ರಕೃತಿ-ಪುರುಷ ತಾತ್ವಿಕತೆಯ ಮೂಲಕ ಬದುಕನ್ನು ಅರಿಯುವ ಪ್ರಯತ್ನ ಮಾತ್ರ ಇದು. ಈ ಪ್ರಯತ್ನಕ್ಕೆ ದೇವರ ಅಗತ್ಯವಿಲ್ಲ. ಪ್ರಕೃತಿ ಪರಿಪೂರ್ಣ ಪುರುಷ ಅಪೂರ್ಣ ಎಂದು ರಾಮಾಯಣ ಗ್ರಹಿಸುತ್ತದೆ. ರಾಮ ಮರ್ಯಾದೆ ಹೊತ್ತ ಪುರುಷನಾದ್ದರಿಂದ ದೈವಸಮಾನ ಎಂದು ರಾಮಾಯಣ ಗ್ರಹಿಸುತ್ತದೆ. ಆದರೆ ಜಗತ್ತಿನ ಹುಟ್ಟಿಗೆ ಒಂದು ಅಲೌಕಿಕ ಕಾರಣವಿದೆ ಎಂದು ನಾನೂ ನಂಬುತ್ತೇನೆ. ಅಂತಹ ಅಲೌಕಿಕ ಕಾರಣವನ್ನು ದೇವರೆಂದು ಕರೆಯಲಿಕ್ಕೆ ನನಗೆ ಖಂಡಿತವಾಗಿ ಅಭ್ಯಂತರವಿಲ್ಲ. ವಿಚಾರಕ್ಕೂ ನಂಬಿಕೆಗೂ ಘರ್ಷಣೆ ಬರಬೇಕಿಲ್ಲ. ನನಗೆ ದೇವರೊಟ್ಟಿಗೆ ನಿಜಕ್ಕೂ ತಕರಾರಿಲ್ಲ. ತಕರಾರಿರುವುದು ಪೂಜಾರಿಗಳೊಟ್ಟಿಗೆ ಮಾತ್ರ. ಹಾಗೆಂದು ಪೂಜಾರಿಗಳು ಕೆಟ್ಟವರೇನಲ್ಲ. ಅತಿಒಳ್ಳೆಯವರು ಅವರು. ಅಥವಾ ಹಾಗೆಂದು ಭ್ರಮಿಸುವವರು ಹೆಚ್ಚಿನವರು. ರಾಮನಿಗೇ ಇಲ್ಲದ ಭ್ರಮೆ ಕೆಲವೊಮ್ಮೆ ರಾಮನ ಪೂಜಾರಿಗಳಿಗಿರುತ್ತದೆ. ಭಕ್ತರು, ‘ಇರಲಿ ಬಿಡಿ ಏನೀಗ! ಆತ ಮನುಷ್ಯನೂ ಹೌದು. ದೇವರಷ್ಟೇ ದೊಡ್ಡವನೂ ಹೌದು!’ ಎಂದರೆ, ಕೂಡದು ಎಂದು ಗುಡುಗುತ್ತಾರೆ ಪೂಜಾರಿಗಳು. ಹೀಗೆ ಶುರುವಾಗುವ ಪ್ರತ್ಯೇಕತೆ ಬೆಳೆಯುತ್ತ ಹೋಗುತ್ತದೆ. ಅವಾಂತರಗಳನ್ನು ಸೃಷ್ಟಿಸುತ್ತದೆ. ಇನ್ನು ಸ್ವಯಂಚಾಲಿತ ಯಂತ್ರಗಳು! ಇವು ತಾವೇ ಪರಿಪೂರ್ಣ ಎಂದು ಭ್ರಮಿಸಿವೆಯಾದ್ದರಿಂದ ಪೂಜಾರಿಗಳೊಟ್ಟಿಗೆ ಸುಲಭವಾಗಿ ಕೈಜೋಡಿಸಿವೆ. ಪೂಜಾರಿಗಳೂ ಯಾವುದೇ ಮುಲಾಜಿಲ್ಲದೆ ಯಂತ್ರಗಳೊಟ್ಟಿಗೆ ಕೈಜೋಡಿಸಿದ್ದಾರೆ. ವೇದಗಳಲ್ಲಿ ಸ್ವಯಂಚಾಲಿತ ಯಂತ್ರಗಳ ಅಧಿಕೃತ ಪ್ರಸ್ತಾಪ ಇಲ್ಲದಿರುವುದರಿಂದಾಗಿ ಹಾಗೆ ಮಾಡಬಹುದು ಎಂದು ತಿಳಿದಿದ್ದಾರೋ ಏನೋ, ತಿಳಿಯೇ. ಅದೇನೇ ಇರಲಿ ಇಬ್ಬರೂ ಸೇರಿ ದುಡ್ಡು ಮಾಡುತ್ತಿದ್ದಾರೆ, ಇಬ್ಬರೂ ಸೇರಿ ಭಾರತದ ಜನತೆ ಹಾಗೂ ಭಾರತ ದೇಶಗಳನ್ನು ಪ್ರತ್ಯೇಕಿಸುತ್ತಿದ್ದಾರೆ. ಇದು ಅಪರಾಧ.ರಾಮಾಯಣ ಒಂದು ಸಾಹಿತ್ಯ ಕೃತಿಯೂ ಹೌದು ಒಂದು ಧರ್ಮಗ್ರಂಥವೂ ಹೌದು. ಇದನ್ನು ಬೇರ್ಪಡಿಸಬಾರದು. ಮಂದಿರ ಚಳವಳಿಗಾರರ ಜೊತೆಗೆ ನನಗಿರುವ ತಕರಾರು ಇವರೆಡರ ಬೇರ್ಪಡಿಕೆಯೇ ಆಗಿದೆ. ಆದರೆ ಅವರು ರಾಮನನ್ನು ಮುನ್ನಲೆಗೆ ತಂದು ಒಳಿತನ್ನೂ ಮಾಡಿದ್ದಾರೆ. ರಾಮನ ನೈತಿಕತೆ ರಾಮ ದೊಡ್ಡವನು, ಅವನ ರಾಜಕಾರಣವೂ ದೊಡ್ಡದು. ಸಣ್ಣತನವಿಲ್ಲ ಅಲ್ಲಿ. ಒಂದೊಮ್ಮೆ ಯಾರನ್ನಾದರೂ ಹೊರಹಾಕಬೇಕಾಗಿಬಂದರೆ, ರಾಮ ತನ್ನನ್ನೇ ಹೊರಹಾಕಿಕೊಳ್ಳುತ್ತಿದ್ದ. ಮೊದಲು ಅಯೋಧ್ಯೆಯಿಂದ ಹೊರಹಾಕಿಕೊಂಡ, ನಂತರ ತನ್ನದೇ ಒಂದು ಭಾಗವಾದ ಸೀತೆಯನ್ನು ಕಾಡಿಗೆ ಹಿಂದಿರುಗಿಸಿದ. ನಂತರ ಮಕ್ಕಳನ್ನು ಸಿಂಹಾಸನದ ಮೇಲೆ ಕೂರಿಸುವ ಬದಲಾಗಿ, ಆಶ್ರಮವಾಸಿಗಳನ್ನಾಗಿಸಿದ. ಹೀಗೆ ರಾಜಸತ್ತೆಯನ್ನು ಕೊನೆಗೊಳಿಸಿದ ರಾಮ. ವಂಶಪಾರಂಪರ್ಯ ಆಡಳಿತದ ಪಿಡುಗನ್ನು ಕೊನೆಗೊಳಿಸಿದ. ರಾಮಾಯಣವನ್ನು ರೂಪಕವಾಗಿ ನೋಡಿದಾಗ ಇದೆಲ್ಲ ಅರಿವಾಗುತ್ತದೆ. ಇನ್ನೂ ಏನೆಲ್ಲ ಅರಿವಾಗುತ್ತದೆ. ಬನ್ನಿ, ಮುನ್ನಡೆಯುವುದು ಬಾಕಿಯಿದೆ. ಹಸಿರು ಸೇನೆ ನಿರ್ಮಿಸುವುದು ಬಾಕಿಯಿದೆ. ಅಗ್ನಿಪ್ರಳಯವನ್ನು ತಡೆಯುವುದು ಬಾಕಿಯಿದೆ. ಇವೆಲ್ಲವೂ ದೊಡ್ಡ ಕೆಲಸಗಳು. ಎಲ್ಲರೂ ಕೈಜೋಡಿಸಬೇಕಾದ ಕೆಲಸಗಳು. ಸಾಬರು ಸಿಂಗರು ಕ್ರೈಸ್ತರು ಹಿಂದುಗಳು ಭಾರತೀಯರು ಪಾಕೀಸ್ತಾನೀಯರು ಅಮೇರಿಕನ್ನರು ಚೀನೀಯರು ಎಂಬ ಯಾವುದೇ ಪ್ರತ್ಯೇಕತೆಯಿಲ್ಲದೆ, ಎಲ್ಲರೂ ಕೈಜೋಡಿಸಬೇಕಾದ ಕೆಲಸವಿದು. ರಾಮರಾಜ್ಯ, ಅರ್ಥಾತ್ ಗ್ರಾಮಸ್ವರಾಜ್ಯ ನಿರ್ಮಿಸೋಣ ಬನ್ನಿ! ರಾಮನ ಹಸಿರುಸೇನೆ! ರಾಮಾಯಣವು ಸಮಸ್ಯೆಯನ್ನು ಮಾತ್ರವೇ ಮುಂದಿಡುತ್ತಿಲ್ಲ ಉತ್ತರವನ್ನೂ ಸಹ, ರೂಪಕದ ಭಾಷೆಯಲ್ಲಿ, ಸೂಚಿಸುತ್ತಿದೆ. ಅದುವೆ ರಾಮನ ಹಸಿರುಸೇನೆ! ಯಂತ್ರ–ತಂತ್ರ–ಮಂತ್ರ ಚಾಲಿತನಾದ ರಾವಣನನ್ನು ರಾಮ ಸೋಲಿಸುವುದು ಹಸಿರುಸೇನೆಯೊಟ್ಟಿಗೆ ನಿಂತು ಯುದ್ಧಮಾಡಿ. ರಾಮಾಯಣದ ಮಕುಟಮಣಿ ಈ ಹಸಿರು ಸೇನೆ. ಈ ಸೇನೆಯಲ್ಲಿ ಕಪಿಗಳಿದ್ದಾವೆ, ಕರಡಿಯಿದೆ, ಮುದಿಹದ್ದು ಇದೆ, ಇಣಚಿಯಿದೆ. ಇಲ್ಲಿ ಮರಗಿಡಬಂಡೆಗಳು ಆಯುಧಗಳಾಗಿ ಬಳಕೆಯಾಗುತ್ತವೆ. ಗಿಡಮೂಲಿಕೆಗಳು ಔಷಧವಾಗಿ ಬಳಕೆಯಾಗುತ್ತವೆ. ನದಿ–ಬೆಟ್ಟ–ಸಮುದ್ರಗಳು ಸ್ನೇಹಿತರಂತೆ ವರ್ತಿಸುತ್ತವೆ. ಈ ಸೇನೆಯಲ್ಲಿ ಮನುಷ್ಯರು ಏಳುಮಂದಿ ಮಾತ್ರ ಇದ್ದಾರೆ. ರಾಮ, ಲಕ್ಷ್ಮಣ, ವಿಭೀಷಣ ಹಾಗೂ ಅವನ ನಾಲ್ಕು ಸಹಚರರಷ್ಟೇ ಮನುಷ್ಯರು! ಮಿಕ್ಕವರೆಲ್ಲ ಪ್ರಾಕೃತಿಕಜೀವಿಗಳು! ಹಸಿರುಸೇನೆಯು ಆಶ್ರಮ ಜೀವನಪದ್ಧತಿಯನ್ನು ಉಳಿಸಲು ಯುದ್ಧ ಮಾಡುತ್ತದೆ ಎಂಬುದು ಕೂಡ ಗಮನಾರ್ಹ ಸಂಗತಿಯಾಗಿದೆ.

author”: “ಪ್ರಸನ್ನ”

courtsey:prajavani.net

https://www.prajavani.net/artculture/art/ramayana-660032.html

Leave a Reply