“ಸಾಂಪ್ರದಾಯಿಕ ಶಿಲ್ಪಕಲೆಯ ಅನನ್ಯ ಸಾಧಕ”

ಸಾಂಪ್ರದಾಯಿಕ ಶಿಲ್ಪಕಲಾ ಕ್ಷೇತ್ರವನ್ನು ವೃತ್ತಿ-ಪ್ರವೃತ್ತಿಯಾಗಿ ಆಯ್ಕೆಮಾಡಿಕೊಂಡು ಅದರಲ್ಲಿ ಮುಂದುವರಿಯುವವರು ಅಪರೂಪ. ಆದರೆ, ಇದೇ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡು, ತಾಳಮಾನ ಜ್ಞಾನದೊಂದಿಗೆ ಶಿಲ್ಪಗಳನ್ನು ರಚಿಸುತ್ತಾ ಸಾಧನೆ ಮಾಡಿರುವ ಅಪರೂಪದ ಶಿಲ್ಪಿಗಳಲ್ಲಿ ಜಿ.ಎಲ್.ಭಟ್ ಪ್ರಮುಖರು. ಇವರ ಪೂರ್ಣ ಹೆಸರು ಗಣೇಶ ಲಕ್ಷ್ಮೀನಾರಾಯಣ ಭಟ್ಟ. ಶಿಲ್ಪ ಕಲಾ ಪ್ರೇಮಿಗಳ ನಡುವೆ ‘ಜಿ.ಎಲ್.ಭಟ್’ ಎಂದೇ ಪರಿಚಿತರು. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ ಇಡಗುಂಜಿಯವರು. ಬಾಲ್ಯದಿಂದಲೇ ಚಿಗುರಿದ ಕನಸು ತಂದೆ ಲಕ್ಷ್ಮೀನಾರಾಯಣ ಭಟ್ಟ, ಇಡಗುಂಜಿ ಮಹಾಗಣಪತಿ ದೇವಸ್ಥಾನದ ಮುಖ್ಯ ಅರ್ಚಕರಾಗಿದ್ದರು. ಗಣೇಶಭಟ್ಟರು ಬಾಲ್ಯದಲ್ಲಿ ತಂದೆಯೊಂದಿಗೆ ಗಣಪತಿ ದೇಗುಲಕ್ಕೆ ಹೋಗುತ್ತಿದ್ದರು. ಗರ್ಭಗುಡಿಯಲ್ಲಿದ್ದ ಗಣಪತಿ ಮೂರ್ತಿಯನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರು. ತಂದೆ ಪೂಜೆ ಮಾಡುತ್ತಿದ್ದರೆ, ಇವರ ಗಮನವೆಲ್ಲ ಶಿಲಾಮೂರ್ತಿಯ ಕೆತ್ತನೆಯ ಸೌಂದರ್ಯದ ಮೇಲಿರುತ್ತಿತ್ತು. ‘ಇದನ್ನು ಹೇಗೆಲ್ಲ ಕೆತ್ತಿರಬೇಕು’ ಎಂದು ಮನದಲ್ಲಿ ಪ್ರಶ್ನಿಸಿಕೊಳ್ಳುತ್ತಿದ್ದರಂತೆ. ಬಾಲಕನಾಗಿದ್ದಾಗ ಮನದಲ್ಲಿ ಉಂಟಾದ ಈ ಕುತೂಹಲ, ಆಸಕ್ತಿಯೇ, ಮುಂದೆ ಭಟ್ಟರಿಗೆ, ಶಿಲ್ಪ ಕಲೆಯನ್ನೇ ವೃತ್ತಿ ಪ್ರವೃತ್ತಿಯಾಗಿ ಆಯ್ದುಕೊಳ್ಳಲು ಪ್ರೇರಣೆಯಾಯಿತು. ಹಾಗಾಗಿ ಎಸ್.ಎಸ್.ಎಲ್.ಸಿ ಮುಗಿದ ಮೇಲೆ ಶಿಲ್ಪಕಲಾಭ್ಯಾಸ ಮಾಡಲು ತೀರ್ಮಾನಿಸಿದರು. ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ಬಂದು, ಅಲ್ಲಿನ ಖ್ಯಾತ ಶಿಲ್ಪಿ ಶಾಂತಪ್ಪ ಗುಡಿಗಾರರ ಬಳಿ ತರಬೇತಿ ಪಡೆದುಕೊಂಡರು. ಶಿಲ್ಪ ಕೆತ್ತನೆಯ ಪ್ರಾರಂಭಿಕ ಪಾಠ ಕಲಿತರು. ನಂತರ ಸಾಗರದಲ್ಲೇ ಇದ್ದ ಶ್ರೀಗಂಧ ಕೆತ್ತನೆಯ ತರಬೇತಿ ಕೇಂದ್ರ ದಲ್ಲಿ ಅಭ್ಯಾಸ ಮಾಡಿದರು. ಗುರುಗಳ ಬಳಿ ಅಭ್ಯಾಸ ಆದರೆ, ಭಟ್ಟರ ಮನದಲ್ಲಿ ‘ತಾನು ಭಾರತೀಯ ಶಿಲ್ಪಶಾಸ್ತ್ರ ರೀತಿ ದೇವತಾ ಶಿಲ್ಪಗಳ ಕೆತ್ತನೆ ಕಲಿಯಬೇಕು. ಸಾಂಪ್ರದಾಯಿಕ ಶಿಲ್ಪ ತಂತ್ರಗಳನ್ನು ಅರಿಯಬೇಕು’ ಎಂಬ ಹಂಬಲವಿತ್ತು. ಅದಕ್ಕಾಗಿ ಸಮರ್ಥ ಗುರುಗಳ ಹುಡುಕಾಟ ನಡೆಸಿದ್ದರು. ಅವರ ಪ್ರಯತ್ನ ಫಲಿಸಿತು. ಸಾಂಪ್ರದಾಯಿಕ ಶಿಲ್ಪಕಲೆಯಲ್ಲಿ ಪ್ರಸಿದ್ಧರಾಗಿದ್ದ ಶಿಲ್ಪಾಚಾರ್ಯ ದೇವಲಕುಂದ ವಾದಿರಾಜರು, ಗುರುವಾಗಿ ಸಿಕ್ಕರು. ಗುರು ಸಾನಿಧ್ಯದಲ್ಲಿ ಭಟ್ಟರು ಸಾಂಪ್ರದಾಯಿಕ ಶಿಲ್ಪಕಲಾ ಕಲಿಕೆ ಆರಂಭಿಸಿದರು. ಇದು ಕಲಾ ಬದುಕಿನ ಮಹತ್ವಪೂರ್ಣ ಘಟ್ಟವಾಯಿತು. ವಾದಿರಾಜರ ಬಳಿ ಸರಿಸುಮಾರು ಹತ್ತು ವರ್ಷಗಳ ಕಾಲ ‘ಗುರುಕುಲ ಪದ್ಧತಿ’ಯಲ್ಲೇ ಶಿಲ್ಪಶಿಕ್ಷಣ ಪಡೆದ ಭಟ್ಟರು, ಶಿಲಾಕೆತ್ತನೆಯಲ್ಲಿನ ತಾಂತ್ರಿಕ ಕೌಶಲಗಳನ್ನು ಕರಗತ ಮಾಡಿಕೊಂಡರು. ಬಾದಾಮಿ ಚಾಲುಕ್ಯ, ಹೊಯ್ಸಳ, ವಿಜಯನಗರ, ಚೋಳರ ಕಾಲದ ಶಿಲ್ಪಶೈಲಿಗಳಲ್ಲಿ ಕೆತ್ತನೆ ಮಾಡುವದನ್ನು ಕಲಿತುಕೊಂಡರು. ಪ್ರೊ.ಎಸ್.ಕೆ. ರಾಮಚಂದ್ರರಾಯರ ಪರಿಚಯದ ಮೂಲಕ ಭಾರತೀಯ ಶಿಲ್ಪಶಾಸ್ತ್ರಗಳಲ್ಲಿ ಉಲ್ಲೇಖಿತವಾದ ಬೇರೆ ಬೇರೆ ದೇವತಾ ತಾಳಮಾನ ಪ್ರಮಾಣಗಳನ್ನು, ಧ್ಯಾನಶ್ಲೋಕಗಳು ಮತ್ತು ಅವುಗಳ ತಾತ್ಪರ್ಯವನ್ನು ಸಂಗ್ರಹಿಸಿದರು. ಈ ಎಲ್ಲ ಮಾಹಿತಿಗಳು ಸಾಂಪ್ರದಾಯಿಕವಾಗಿ ದೇವತಾ ಶಿಲ್ಪಗಳನ್ನು ರಚಿಸುವುದರ ಹಿಂದಿನ ತಾತ್ವಿಕ ನಿಷ್ಠೆಯನ್ನು ಅರಿಯಲು ಭಟ್ಟರಿಗೆ ಸಹಕಾರಿಯಾಯಿತು. ಮಾತ್ರವಲ್ಲ, ಪ್ರಬುದ್ಧ ಸಾಂಪ್ರದಾಯಿಕ ಶಿಲ್ಪಿಯಾಗಲು ನೆರವಾಯ್ತು. ಕಲಿಕೆ ಮುಗಿದ ನಂತರ 18 ವರ್ಷಗಳ ಕಾಲ ಬೆಂಗಳೂರು ಸಮೀಪದ ಬಿಡದಿಯಲ್ಲಿರುವ-ಕೆನರಾ ಬ್ಯಾಂಕ್ ಪ್ರಾಯೋಜಿತ ಕೆ.ಪಿ.ಜೆ ಪ್ರಭು ಕರಕುಶಲ ತರಬೇತಿ ಕೇಂದ್ರದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಇಲ್ಲಿವರೆಗೂ ಆರುನೂರಕ್ಕೂ ಹೆಚ್ಚು ಯುವ ಕಲಾವಿದರಿಗೆ ತರಬೇತಿ ನೀಡಿದ್ದಾರೆ. ಶಾಸ್ತ್ರೋಕ್ತ ಶಿಲ್ಪಗಳು ಗಣೇಶ ಭಟ್ಟರ ಕೈಚಳಕದಲ್ಲಿ ಮೂಡಿಬಂದಿರುವ ಗಣಪತಿ ಶಿಲ್ಪಗಳ ಆಕರ್ಷಣೆಯೇ ಅದ್ಭುತ. ಅವರು ರಚಿಸುವ ಶಿಲ್ಪಗಳಲ್ಲಿ ಶಿಲ್ಪಶಾಸ್ತ್ರ ರೀತಿಯ ವಿವರಗಳಿರುತ್ತವೆ. ಶಿಲ್ಪಗಳಲ್ಲಿ, ಆಭರಣ, ಅಂಗಭಂಗಿಗಳಲ್ಲಿ ತಮ್ಮದೇ ಆದ ಕಲಾ ನೈಪುಣ್ಯ, ವೈಯಕ್ತಿಕ ಶೈಲಿಯನ್ನು ದಾಖಲಿಸುವುದು ಇವರ ಹೆಚ್ಚುಗಾರಿಕೆ. ಹಟ್ಟಿಯಂಗಡಿಯ ಸಿದ್ಧಿವಿನಾಯಕ ದೇವಾಲಯದಲ್ಲಿ ಪ್ರತಿಷ್ಠಿತವಾಗಿರುವ ಮುದ್ಗಲ ಪುರಾಣಾನುಸಾರ ನಿರ್ಮಾಣಗೊಂಡ 32 ಗಣಪತಿ ಮೂರ್ತಿಗಳು ಜಿ ಎಲ್.ಭಟ್ಟರ ಸಾಂಪ್ರದಾಯಿಕ ನಿಷ್ಠೆ , ಕಲಾ ಚಾತುರ್ಯತೆ ನಿದರ್ಶನಗಳು. ‘ಸಾಂಪ್ರದಾಯಿಕ ಶಿಲ್ಪಗಳೆಂದರೆ ಬರಿಯ ಚಮತ್ಕಾರಿಕ ಶಿಲ್ಪಗಳಲ್ಲ. ಅವು ಶಿಲ್ಪಿಯೊಳಗಿನ ಆಧ್ಯಾತ್ಮಿಕ ದೃಷ್ಟಿಕೋನದಿಂದ ಒಡಗೂಡಿದ ಮನಸ್ಸು ಮತ್ತು ಶಿಲ್ಪ ಚಾತುರ್ಯದಿಂದ ಹದಗೊಂಡ ಹಸ್ತ ಕೌಶಲದ ಸಂಗಮ’ ಎನ್ನುತ್ತಾರೆ’ ಭಟ್ಟರು. ‘ಸಾಂಪ್ರದಾಯಿಕ ಶಿಲ್ಪ ರಚಿಸುವಾಗ ನನಗೆ ಸಿಗುವ ಮಾನಸಿಕ ತೃಪ್ತಿ, ಅನಿರ್ವಚನೀಯ ಆನಂದ ನವ್ಯ ಶಿಲ್ಪ ನಿರ್ಮಿತಿಯಲ್ಲಿ ಸಿಕ್ಕಿಲ್ಲ’ ಎಂದು ಅಭಿಪ್ರಾಯಪಡುತ್ತಾರೆ. ಹಾಗೆಂದ ಮಾತ್ರಕ್ಕೆ ಅವರೇನೂ ನವ್ಯ ಶಿಲ್ಪದ ವಿರೋಧಿಯಲ್ಲ. ಕೆಲವು ಶಿಲ್ಪ ಶಿಬಿರಗಳಲ್ಲಿ ಅನಿವಾರ್ಯವಾಗಿ ನವ್ಯಾಭಿವ್ಯಕ್ತಿ ಭಟ್ಟರಿಂದ ನಡೆದಿದ್ದೂ ಉಂಟು. ವಿದೇಶದಲ್ಲೂ ಮಿಂಚು ಜಿ ಎಲ್.ಭಟ್ಟರದು ಅಂತರರಾಷ್ಟ್ರೀಯ ಮಟ್ಟದ ಪ್ರತಿಭೆ. ಇಂಗ್ಲೆಂಡ್, ಅಮೆರಿಕ, ಜರ್ಮನಿ, ಫ್ರಾನ್ಸ್, ಐರ್ಲೆಂಡ್ ಮತ್ತಿತರ ದೇಶಗಳಲ್ಲಿ ಇವರ ಕಲಾಕೃತಿಗಳು ಪ್ರದರ್ಶನಗೊಂಡಿವೆ. ಹದಿನೆಂಟು ವರ್ಷಗಳಿಂದ ಇಂಗ್ಲೆಂಡ್ ಮತ್ತು ಐರ್ಲೆಂಡ್ ನಲ್ಲಿ ಭಾರತೀಯ ಶಿಲ್ಪಕಲಾ ಪ್ರದರ್ಶನ, ಪ್ರಾತ್ಯಕ್ಷಿಕೆ ಮತ್ತು ಶಿಲ್ಪಕಲಾ ತರಗತಿಗಳನ್ನು ನಡೆಸುತ್ತಾ ಬಂದಿದ್ದಾರೆ. ಈವರೆಗೆ ಭಾರತದಲ್ಲಿ 27 ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. ಸುಮಾರು 9 ಅಡಿ ಉದ್ದದ ಏಕಶಿಲಾ ಪ್ರತಿಮೆ ‘ಕಾಮಧೇನು’ ಇಂಗ್ಲೆಂಡ್‌ನ ಸಾಮರ್ ಸೆಟ್‌ನಲ್ಲಿದೆ. ಇವರೇ ನಿರ್ಮಿಸಿದ ಸುಮಾರು 7 ಅಡಿ ಎತ್ತರದ ಪಂಚಮುಖಿ ಆಂಜನೇಯ ಅಮೆರಿಕದಲ್ಲಿದೆ. ಜಿ ಎಲ್.ಭಟ್ಟರ ಸಾಧನೆಗೆ ಹಲವಾರು ಪ್ರಶಸ್ತಿಗಳು ಅರಸಿ ಬಂದಿವೆ. ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯ ಪ್ರಶಸ್ತಿ(1993 ರಲ್ಲಿ), ಶಿಲ್ಪಶ್ರೀ ಪ್ರಶಸ್ತಿ(1995ರಲ್ಲಿ), ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ(2014ರಲ್ಲಿ), ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಗೌರವ ಪ್ರಶಸ್ತಿ(2014ರಲ್ಲಿ) ಇವು ಪ್ರಮುಖವಾದವು. ‘ಸಾಂಪ್ರದಾಯಿಕ ಶಿಲ್ಪಕಲೆ ಉಳಿಸಿ’ 56 ವಸಂತಗಳನ್ನು ಪೂರೈಸಿರುವ ಭಟ್ಟರು, ‘ಭಾರತೀಯ ಸಾಂಪ್ರದಾಯಿಕ ಶಿಲ್ಪಕಲೆ ಪ್ರಾಚೀನವಾದದು. ಜತೆಗೆ ವೈವಿಧ್ಯಪೂರ್ಣವಾಗಿದೆ. ಇದರಲ್ಲಿ ಭಾರತೀಯ ಸಂಸ್ಕೃತಿಯ ಅಸ್ಮಿತೆ ಅಡಗಿದೆ. ಈ ಶಿಲ್ಪ ಪದ್ಧತಿಯನ್ನು ಪ್ರೋತ್ಸಾಹಿಸಬೇಕು. ಸುಸಜ್ಜಿತ ಸಾಂಪ್ರದಾಯಿಕ ಶಿಲ್ಪಶಾಲೆಗಳನ್ನು ಸ್ಥಾಪಿಸಬೇಕು. ಅಲ್ಲಿ ನುರಿತ ಶಿಲ್ಪಾಚಾರ್ಯರನ್ನು ನಿಯುಕ್ತಿಗೊಳಿಸಬೇಕು. ಈ ಮೂಲಕ ಮುಂದಿನ ತಲೆಮಾರಿಗೂ ಈ ಪರಂಪರೆಯನ್ನು ಉಳಿಸಬೇಕು’ ಎಂದು ಅವರು ಅಭಿಪ್ರಾಯಪಡುತ್ತಾರೆ.

https://www.prajavani.net/artculture/art/traditional-sculptureunique-657491.html

courtsey:prajavani.net

Leave a Reply