‘ಅತಿಯಾದ ಆಸೆಗಳೇ ಒತ್ತಡಕ್ಕೆ ಕಾರಣ’

‘ಅತಿಯಾದ ಆಸೆಗಳೇ ಒತ್ತಡಕ್ಕೆ ಕಾರಣ’

ಮನಸ್ಸು ವಾಸ್ತವಸ್ಥಿತಿ ಒಪ್ಪಿಕೊಳ್ಳದೆ ಪ್ರತಿರೋಧ ತೋರಿದಾಗ ಒತ್ತಡ ಉಂಟಾಗುತ್ತದೆ. ಮನುಷ್ಯ ಹೆಚ್ಚು ಹೆಚ್ಚು ಚಿಂತನಶೀಲನಾದಷ್ಟು ಬದುಕಿನಾಳದಲ್ಲಿ ಇಳಿದು ಬದುಕಿನ ಒಳಗುಟ್ಟನ್ನು ಅರಿಯಬಹುದು. ಇದರಿಂದ ಒತ್ತಡದ ಪ್ರಮಾಣವೂ ಕಡಿಮೆಯಾಗುತ್ತದೆ ಎನ್ನುವುದು ನೇತ್ರತಜ್ಞ ಡಾ. ಕೆ. ಭುಜಂಗ ಶೆಟ್ಟಿ ಅವರ ಅಭಿಪ್ರಾಯ.

ಯಾವುದೇ ಪರಿಸ್ಥಿತಿ ಅಥವಾ ಎಂಥದ್ದೇ ಸಂದರ್ಭವಾಗಲಿ ಮನಸ್ಸು ವಾಸ್ತವವನ್ನು ಅರಿತುಕೊಂಡು ಒಪ್ಪಿಕೊಳ್ಳುವುದನ್ನು ಕಲಿಯಬೇಕು. ಅದರ ಬದಲಾಗಿ ಪ್ರತಿರೋಧವನ್ನು ತೋರಿದರೆ ಒತ್ತಡ ಉಂಟಾಗುತ್ತದೆ. ವಾಸ್ತವ ಒಳ್ಳೆಯದಾಗಲಿ, ಕೆಟ್ಟದಾಗಲಿ  – ಅದನ್ನು ಒಪ್ಪಿಕೊಳ್ಳುವ ಮನೋಭಾವ ನಮ್ಮದಾಗಬೇಕು. ಉದಾಹರಣೆಗೆ: ನಾವು ರಸ್ತೆಯಲ್ಲಿ ಹೋಗುವಾಗ ಟ್ರಾಫಿಕ್‌ ಜಾಮ್‌ನಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೆ. ಆಗ ‘ರಸ್ತೆ ಸರಿಯಿಲ್ಲ, ಟ್ರಾಫಿಕ್‌ ಪೊಲೀಸ್ ಸರಿಯಿಲ್ಲ, ಅವರು ಸರಿಯಿಲ್ಲ, ಇವರು ಸರಿಯಿಲ್ಲ, ಅದಕ್ಕೆ ಹೀಗೆ ಆಯ್ತು’ ಎಂದುಕೊಂಡು ಗೊಣಗಿಕೊಂಡು ಅಸಮಾಧಾನ ತೋರುವುದಕ್ಕಿಂತ, ‘ಈ ಸಮಸ್ಯೆ ನನಗೊಬ್ಬನಿಗೆ ಅಲ್ಲ. ಬೆಂಗಳೂರಿನಂತಹ ನಗರದಲ್ಲಿ ಇದು ಸಾಮಾನ್ಯ’ ಎಂದುಕೊಂಡರೆ ಮನಸ್ಸು ಹಗುರವಾಗಿ, ಒತ್ತಡ ಕಡಿಮೆಯಾಗುತ್ತದೆ.

ಸಮಸ್ಯೆಗಳು ಎದುರಾದಾಗ ಅದನ್ನು ಒಪ್ಪಿಕೊಳ್ಳಬೇಕು. ಎಲ್ಲದಕ್ಕೂ ಪರಿಹಾರ ಇದ್ದೇ ಇದೆ. ಆದರೆ ಸಮಸ್ಯೆ ಕಾಣಿಸಿಕೊಂಡಾಗ ತಕ್ಷಣಕ್ಕೆ ಋಣಾತ್ಮಕವಾಗಿ ಪ್ರತಿಕ್ರಿಯೆ ನೀಡಬಾರದು. ಈ ಬಗ್ಗೆ ಧನಾತ್ಮಕವಾಗಿ ಯೋಚಿಸಿ ‘ಏನೋ ಆಗಿದ್ದು ಆಗಿ ಹೋಯ್ತ, ಮುಂದೆ ಹೀಗಾಗದಂತೆ ಎಚ್ಚರ ವಹಿಸಿ ಕೆಲಸ ಮಾಡುತ್ತೇನೆ’ ಎಂದುಕೊಂಡರೆ ಸಮಸ್ಯೆಗೆ ಪರಿಹಾರ ತಾನಾಗಿಯೇ ಹುಟ್ಟಿಕೊಳ್ಳುತ್ತದೆ. ಇನ್ನು ಕೆಲವೊಮ್ಮೆ ‘ನಮ್ಮಿಂದ ಏನೂ ಮಾಡಲು ಸಾಧ್ಯವೇ ಇಲ್ಲ’ ಎನ್ನುವ ಸಂದರ್ಭದಲ್ಲಿ ಪರಿಸ್ಥಿತಿಗೆ ಶರಣಾಗಬೇಕು. ಅದು ಬಿಟ್ಟು ಬೈದು, ಗಲಾಟೆ ಮಾಡುವುದು ಮಾಡುವುದರಿಂದ ನಮ್ಮೊಳಗೆ ನಾವು ಒತ್ತಡವನ್ನು ತಂದುಕೊಂಡಂತೆ ಆಗುತ್ತದೆಯಷ್ಟೆ.

ಮನುಷ್ಯನ ಜೀವನದಲ್ಲಿ ಶೇ 90ರಷ್ಟು ಪರಿಸ್ಥಿತಿಗಳು ನಮ್ಮ ನಿಯಂತ್ರಣದಲ್ಲೇ ಇರುತ್ತವೆ. ಉಳಿದ ಶೇ 10ರಷ್ಟರ ಮೇಲೆ ನಮ್ಮ ನಿಯಂತ್ರಣವಿರುವುದಿಲ್ಲ. ಆದರೆ ಯಾವುದೇ ಪರಿಸ್ಥಿತಿಯೇ ಆಗಲಿ ನಾವು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಅದು ಕೂಡ ಒತ್ತಡದ ನಿರ್ವಹಣೆಯ ಭಾಗವೇ ಆಗಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ಹೇಗೆಂದರೆ – ಯಾವಾಗಲೂ ಡಾಕ್ಟರ್‌ಗಳು ನೀಡುವ ಔಷಧಗಳು 2 + 2 = 4 ಆಗಿರುವುದಿಲ್ಲ. ಔಷಧಗಳು ಬೇರೆ ಬೇರೆ ರೋಗಿಗಳ ಮೇಲೆ, ಬೇರೆ ಬೇರೆ ರೀತಿಯ ಪ್ರಭಾವ ಬೀರುತ್ತದೆ. ಏಕೆಂದರೆ ಪ್ರತಿರೋಗಿಯ ದೇಹಲಕ್ಷಣವೂ ಭಿನ್ನವಾಗಿರುತ್ತದೆ. ಒಬ್ಬ ಡಾ‌ಕ್ಟರ್ ಎಷ್ಟೇ ಉತ್ತಮವಾಗಿ ಚಿಕಿತ್ಸೆ ನೀಡಿದರೂ ಅದು ರೋಗಿಗಳ ದೇಹಸ್ಥಿತಿಗೆ ಅನುಗುಣವಾಗಿ ಪರಿಣಾಮವನ್ನು ಬೀರಿರುತ್ತದೆ. ಇಬ್ಬರು ರೋಗಿಗಳಿಗೆ ಒಂದೇ ರೀತಿಯ ಆಪರೇಶನ್ ಮಾಡಿದ್ದರೂ, ಇಬ್ಬರೂ ಅದನ್ನು ಬೇರೆ ಬೇರೆ ರೂಪದಲ್ಲಿ ನೋಡಿರುತ್ತಾರೆ. ಒಬ್ಬ ರೋಗಿ ‘ತುಂಬಾ ಚೆನ್ನಾಗಿ ಆಪರೇಶನ್‌ ಮಾಡಿದ್ದೀರಿ ಡಾಕ್ಟ್ರೆ, ಈಗೇನು ತೊಂದರೆ ಇಲ್ಲ’ ಎಂದರೆ, ಇನ್ನೊಬ್ಬ ರೋಗಿ ಬಂದು ‘ಡಾಕ್ಟ್ರೆ, ಕಣ್ಣಲ್ಲಿ ಏನೋ ಚುಚ್ಚಿದ ಹಾಗೆ ಅನ್ನಿಸುತ್ತದೆ, ಆಗಾಗ ಉರಿ ಬರುತ್ತದೆ’ ಎಂದು ಗೊಣಗುತ್ತಾರೆ. ಆದರೆ ಹಾಗೆ ಹೇಳಿದವರ ಮೇಲೆ ಬೇಸರಗೊಳ್ಳುವುದು, ಕೋಪ ಮಾಡಿಕೊಳ್ಳುವುದು ಸರಿಯಿಲ್ಲ. ವೈದ್ಯನಾದವನು ಎಲ್ಲ ರೋಗಿಗಳನ್ನು ಸಮಾನದೃಷ್ಟಿಕೋನದಿಂದ ನೋಡಬೇಕು. ‘ನಾನು ಮಾಡಿದ್ದೇ ಸರಿ, ನಾನು ಚೆನ್ನಾಗಿಯೇ ಮಾಡಿದ್ದೆ, ನನ್ನಿಂದ ಇದಕ್ಕಿಂತ ಹೆಚ್ಚಿಗೆ ಏನು ಮಾಡಲು ಸಾಧ್ಯವಿಲ್ಲ’ ಎಂದು ಅವರ ಮೇಲೆ ರೇಗಿದರೆ ನಮಗೇ ಒತ್ತಡ ಎನ್ನಿಸುತ್ತದೆ. ಜೊತೆಗೆ ರೋಗಿಗಳೂ ಬೇಸರಗೊಳ್ಳುತ್ತಾರೆ. ಇದರಿಂದ ರೋಗಿ–ಡಾಕ್ಟರ್ ಇಬ್ಬರ ಮನಃಸ್ಥಿತಿಯೂ ಕೆಡುತ್ತದೆ. ಡಾಕ್ಟರ್ ಆದವನು ರೋಗಿಗಳ ಜೊತೆಗೆ ಸಮಾಧಾನ ಹಾಗೂ ಸಹಾನುಭೂತಿಯಿಂದ ನಡೆದುಕೊಳ್ಳಬೇಕು, ಹೇಗೆಂದರೆ ಶೇ 90ರಷ್ಟು ರೋಗ ವಾಸಿಯಾಗಿದೆ ಎಂದು ಸಮಾಧಾನ ತೋರುವ ರೋಗಿಗಳಿಗಿಂತ ಶೇ 10ರಷ್ಟು ವಾಸಿಯಾಗಿಲ್ಲ ಎಂದು ಗೊಣಗುವವರ ಮೇಲೆ ಹೆಚ್ಚು ಕಾಳಜಿ ತೋರಬೇಕು. ‘ಡಾಕ್ಟರ್ ನನ್ನನ್ನು ತುಂಬಾ ಕಾಳಜಿ ಮಾಡುತ್ತಾರೆ, ಚೆನ್ನಾಗಿ ನೋಡಿಕೊಳ್ಳುತ್ತಾರೆ’ ಎಂದು ರೋಗಿಗಳ ಮನಸ್ಸಿನಲ್ಲಿ ಮೂಡಬೇಕು. ಇದು ನಮ್ಮ ಕ್ಷೇತ್ರದಲ್ಲಿ ತುಂಬ ಮುಖ್ಯ ಎನಿಸುತ್ತದೆ.

ಪ್ರತಿದಿನವೂ ಮನುಷ್ಯ ಹೆಣಗಾಡುತ್ತಲೇ ಇರುತ್ತಾನೆ. ಹಣ, ಅಂತಸ್ತು, ಕಾರು, ಬಂಗಲೆ ಎಂದುಕೊಂಡು ದಿನದ ಬದುಕಿನೊಂದಿಗೆ ಗುದ್ದಾಡುತ್ತಲೇ ಇರುತ್ತಾನೆ. ಆದರೆ ಈ ಎಲ್ಲವನ್ನು ಮಾಡುವುದು ಮನಸ್ಸಿನ ಖುಷಿಗಾಗಿ; ಈ ಎಲ್ಲವೂ ಸಿಕ್ಕ ಮೇಲೆ ಖುಷಿಯೊಂದೇ ನಮ್ಮೊಂದಿಗುಳಿಯುವುದು. ಆದರೆ ಖುಷಿಯಾಗಿರುವುದಕ್ಕೆ ಮೇಲೆ ಹೇಳಿದ ಎಲ್ಲಕ್ಕಿಂತ ನಮ್ಮ ವ್ಯಕ್ತಿತ್ವ ಹೇಗಿದೆಯೋ ಹಾಗೆ ಇರುವುದು ತುಂಬ ಮುಖ್ಯ. ಹಣ, ಹೆಸರು, ಆಸ್ತಿಗಳ ಹಿಂದೆ ಓಡುವುದಕ್ಕಿಂತ ಇರುವುದರಲ್ಲೇ ನೆಮ್ಮದಿಯನ್ನು ಕಂಡುಕೊಳ್ಳಬೇಕು. ನನ್ನ ಪ್ರಕಾರ ನಾವು ಯಾವಾಗ ಸದಾಕಾಲ ಸಂತೋಷದಿಂದ ಇರಲು ಸಾಧ್ಯವಾಗುತ್ತದೋ, ಆಗ ಉಳಿದಿದ್ದೆಲ್ಲವೂ ತಾನಾಗಿಯೇ ನಮ್ಮ ಬಳಿ ಸೇರುತ್ತದೆ. ಯಾವಾಗಲೂ ನಮಗಿಂತ ಮೇಲಿನವರನ್ನು ನೋಡಿ, ‘ಅಯ್ಯೋ ಅವರ ಬಳಿ ಅಷ್ಟು ಕಾರಿದೆ, ಎಷ್ಟೊಂದು ಚೆಂದದ ಬಂಗಲೆಯಿದೆ’ ಎಂದುಕೊಂಡು ನಮ್ಮಲ್ಲೇ ನಾವು ಅಸಮಾಧಾನ ಪಟ್ಟುಕೊಳ್ಳುವುದಕ್ಕಿಂತ, ನಮಗಿಂತ ಕೆಳಗಿರುವವರನ್ನು ನೋಡಿ ‘ನನ್ನ ಬಳಿ ಇಷ್ಟಾದರೂ ಇದೆ, ನಾನೇ ಸುಖಿ’ ಎಂದು ಸಮಾಧಾನಪಟ್ಟುಕೊಳ್ಳುವುದನ್ನು ಕಲಿಯಬೇಕು.

ನಾವು ಈಗಿರುವ ಸ್ಥಿತಿಯಲ್ಲೇ ಸಂತೋಷ, ನೆಮ್ಮದಿ ಕಾಣಲು ಸಾಧ್ಯವಾಗಿಲ್ಲ ಎಂದರೆ ನಾಳೆ ನಮಗೆ ಖುಷಿ ಸಿಗಲು ಸಾಧ್ಯವೇ ಇಲ್ಲ. ಕಾರಣ ನಮ್ಮ ಬಯಕೆ, ಬೇಡಿಕೆಗಳು ಹೆಚ್ಚಾದಂತೆಲ್ಲ ಸಂತೋಷ ನಮ್ಮಿಂದ ದೂರವಾಗುತ್ತ ಹೋಗುತ್ತವೆ. ಹೀಗಾಗಿ ಬೇರೆಯವರನ್ನು ನೋಡಿ ನಮ್ಮಲ್ಲಿ ನಾವು ಕೀಳರಿಮೆ ಬೆಳೆಸಿಕೊಳ್ಳುವುದನ್ನು ಮೊದಲು ನಿಲ್ಲಿಸಬೇಕು.

ಆಸೆ–ಬಯಕೆಗಳನ್ನು ಹೆಚ್ಚಿಸುವ ದೊಡ್ಡ ಅಪರಾಧಿ ಎಂದರೆ ಮನಸ್ಸು. ಮನಸ್ಸಿನ ಮೇಲೆ ನಮಗೆ ನಿಯಂತ್ರಣ ಸಾಧಿಸಲು ತಿಳಿದರೆ ಯಾವಾಗಲೂ ಖುಷಿಯಾಗಿ ಸಂತಸದಿಂದ ಇರಬಹುದು. ಆದರೆ ಯಾವಾಗ ಮನಸ್ಸೇ ನಮ್ಮನ್ನು ನಿಯಂತ್ರಣ ಮಾಡುತ್ತದೋ, ಆಗ ಒತ್ತಡಗಳು ಸೃಷ್ಟಿಯಾಗುತ್ತಹೋಗುತ್ತವೆ. ‘ದೇವರು ನಮ್ಮನ್ನು ಚೆನ್ನಾಗಿ ಇಟ್ಟಿದ್ದಾನೆ. ಈ ಜೀವ ಬದುಕಲು ಬೇಕಾದ ಗಾಳಿ, ನೀರು, ಮುಖ್ಯವಾಗಿ ಉಸಿರು ಇವೆಲ್ಲವೂ ದೇವರು ನಮಗೆ ನೀಡಿದ ವರ. ಆ ಕಾರಣಕ್ಕೆ ನಾವು ಬದುಕಿದ್ದೇವೆ. ಅದಕ್ಕೆ ನಾವು ದೇವರಿಗೆ ಋಣಿಯಾಗಿರಬೇಕು’ ಎಂದುಕೊಂಡರೆ ಜೀವನ ಸಂತಸದಿಂದ ಮುಂದೆ ಸಾಗುತ್ತದೆ.

ಒತ್ತಡ ಕಡಿಮೆಯಾಗಲು ಇರುವ ಇನ್ನೊಂದು ಮುಖ್ಯ ಅಂಶ ಎಂದರೆ ಆರೋಗ್ಯ. ಮನುಷ್ಯ ಆರೋಗ್ಯವಾಗಿದ್ದರೆ ಎಲ್ಲವೂ ಸರಿದಾರಿಯಲ್ಲಿ ಸಾಗುತ್ತಿರುತ್ತದೆ. ಅದಕ್ಕಾಗಿ ಪ್ರತಿದಿನ ಯೋಗ, ವ್ಯಾಯಾಮಗಳನ್ನು ಮಾಡಬೇಕು. ಆರೋಗ್ಯ ಸರಿಯಿದ್ದರೆ ಮಾತ್ರ ನಾವು ಜೀವನದಲ್ಲಿ ಯಾವುದೇ ಒತ್ತಡವಿಲ್ಲದೇ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುವುದು. ಪ್ರತಿದಿನ ಧ್ಯಾನವನ್ನು ಮಾಡುವುದು ನನ್ನ ದಿನಚರಿಯಲ್ಲೊಂದು. ಯೋಗ, ಧ್ಯಾನ, ವ್ಯಾಯಾಮಗಳ ಜೊತೆ ಮನುಷ್ಯ ಹೆಚ್ಚು ಹೆಚ್ಚು ಚಿಂತನಶೀಲನಾಗಬೇಕು. ನಮಗೆ ಅನೇಕ ವಿಷಯಗಳು ತಿಳಿದಿರುತ್ತವೆ. ಆದರೆ ತಿಳಿದಿದ್ದನ್ನು ಕಾರ್ಯರೂಪಕ್ಕೆ ತರಲು ನಾವು ಪ್ರಯ್ನತಿಸುವುದಿಲ್ಲ. ಜ್ಞಾನವನ್ನು ಅಭ್ಯಾಸ ಮಾಡಿ ಪಡೆದರೆ ಸಾಲುವುದಿಲ್ಲ. ಆ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಾನು ಯಾವುದೇ ವಿಷಯದ ಬಗ್ಗೆಯಾಗಲಿ ಚಿಂತನೆ ಮಾಡುತ್ತೇನೆ. ಆ ಚಿಂತನೆ, ಯೋಚನೆಗಳೇ ನನಗೆ ಧ್ಯಾನ ಎನ್ನಿಸುತ್ತವೆ.

ವ್ಯಕ್ತಿಯೊಬ್ಬ ಜೀವನದ ಯಾವುದೋ ಒಂದು ಹಂತದಲ್ಲಿ ಯಶಸ್ಸು ಸಾಧಿಸಿದರೆ ಸಾಲುವುದಿಲ್ಲ. ನನಗೆ ಹೇಳುವುದಾದರೆ ಒಬ್ಬ ವೈದ್ಯನಾಗಿ ನಾನು ಯಶಸ್ಸು ಸಾಧಿಸಿದರೆ ಸಾಲುವುದಿಲ್ಲ. ಮನೆಯ ಯಜಮಾನನಾಗಿ, ಒಬ್ಬ ಗಂಡನಾಗಿ, ತಂದೆಯಾಗಿ – ಹೀಗೆ ಎಲ್ಲ ಹಂತವನ್ನು ಸರಿಸಮವಾಗಿ ನಿಭಾಯಿಸಲು ತಿಳಿದಿದ್ದರೆ ಮಾತ್ರ ಯಶಸ್ಸು ‌ಸಾಧ್ಯ. ಇವೆಲ್ಲದರೊಂದಿಗೆ ನೆಮ್ಮದಿ ತುಂಬ ಮುಖ್ಯ ಎನಿಸಿಕೊಳ್ಳುತ್ತದೆ. ಸದಾಕಾಲ ಒತ್ತಡದಿಂದ ಆರೋಗ್ಯ ಕೆಡಿಸಿಕೊಂಡು ಯಶಸ್ಸು ಸಾಧಿಸಿದರೆ ಉಪಯೋಗವಿಲ್ಲ.

50ವರ್ಷಗಳ ಮೊದಲು ಹಳ್ಳಿಗಳಲ್ಲಿ ಯಾವುದೇ ಸೌಕರ್ಯಗಳು ಇರಲಿಲ್ಲ. ಜನ ತಮ್ಮ ಬಳಿ ಇರುವುದರಲ್ಲೇ ಸಂತೋಷವಾಗಿದ್ದರು. ಇಂದಿನ ಜನರಂತೆ ಅವರಲ್ಲಿ ಅತಿಯಾದ ಆಸೆಗಳು ಯಾವುದೂ ಇರಲಿಲ್ಲ. ಹಳ್ಳಿಯೇ ಅವರಿಗೆ ಪ್ರಪಂಚವಾಗಿತ್ತು. ಎಲ್ಲೋ ವಿದೇಶದಲ್ಲಿ, ಇನ್ನಾವುದೋ ರಾಜ್ಯದಲ್ಲಿ ನಡೆದ ಯಾವುದೇ ಘಟನೆಯೂ ಅವರನ್ನು ಕಂಗೆಡಿಸುತ್ತಿರಲಿಲ್ಲ. ಆಗೆಲ್ಲಾ ಟಿ.ವಿ., ನ್ಯೂಸ್‌ಪೇಪರ್‌ ಯಾವುದೂ ಇರಲಿಲ್ಲ. ಹೆಚ್ಚಿನ ಜನರು ರೈತಕುಟುಂಬದವರೇ ಆಗಿದ್ದರು. ಜನರು ಸೂರ್ಯ ಹುಟ್ಟಿದ ಮೇಲೆ ಒಂದಷ್ಟು ಕೆಲಸ ಮಾಡುತ್ತಿದ್ದರು. ಆಗೆಲ್ಲಾ ದುಡ್ಡಿನ ವ್ಯವಹಾರಕ್ಕಿಂತ ಕೊಡುಕೊಳ್ಳುವಿಕೆ ವ್ಯವಸ್ಥೆ ಹೆಚ್ಚಿತ್ತು. ಆದರೆ ಈಗ ಕಾಲ ಬದಲಾಗಿದೆ. ಇಂದಿನ ಒತ್ತಡದ ಜೀವನಕ್ಕೆ ಮುಖ್ಯ ಕಾರಣ. ಆಧುನಿಕ ಜೀವನಶೈಲಿ. ಇದು ಮನುಷ್ಯನಿಂದ ಎಲ್ಲವನ್ನು ದೂರ ಮಾಡುತ್ತಿದೆ. ಆಧುನಿಕ ಜೀವನಶೈಲಿ ಅಥವಾ ಆಧುನಿಕಯೋಚನೆಗಳು ಹೇಗೆಂದರೆ ‘ಆಸೆ–ಬಯಕೆಗಳನ್ನು ಹೆಚ್ಚು ಮಾಡು, ಆಸೆಗಳ ಪೂರೈಕೆಗೆ ಹೆಚ್ಚುಹೆಚ್ಚು ಸಾಧನೆ ಮಾಡು’ ಎಂದು ಮನಸ್ಸು ನಮಗೆ ಹೇಳುತ್ತಿರುತ್ತದೆ. ಹಾಗಾಗಿ ಈ ಆಸೆಗಳ ಪೂರೈಕೆಗೆ ನಾವು ಒತ್ತಡದ ಹಿಂದೆ ಬೀಳುತ್ತೇವೆ. ಹಿಂದೆಲ್ಲಾ ಋಷಿಗಳು ಹೇಳುತ್ತಿದ್ದರು ‘ನಾವು ನಮ್ಮ ಆಸೆ–ಬಯಕೆಗಳನ್ನು ನಿಗ್ರಹಿಸಲು ಕಲಿಕಬೇಕು, ಆಗ ಮಾತ್ರ ನಾವು ನೆಮ್ಮದಿ ಕಾಣಲು ಸಾಧ್ಯ’ ಎಂದು. ಆದರೆ ಈಗ ಹಾಗಲ್ಲ, ನಮ್ಮಲ್ಲಿ ಆಸೆಗಳನ್ನು ಪ್ರಚೋದಿಸುವ ಆಲೋಚನೆಗಳೇ ಹೆಚ್ಚು ಮನಸ್ಸಿನಲ್ಲಿ ಮೂಡುತ್ತವೆ. ಆಸೆ ಕಡಿಮೆಯಾದಷ್ಟು ಜೀವನದಲ್ಲಿ ಹೋರಾಟ ಹಾಗೂ ಒತ್ತಡ ಕಡಿಮೆಯಾಗುತ್ತದೆ. ಇದರೊಂದಿಗೆ ಈ ಡೆಡ್‌ಲೈನ್‌ಗಳು ನಮ್ಮ ಎಲ್ಲಾ ಸಮಸ್ಯೆಗಳಿಗೂ ದಾರಿ. ನಮ್ಮ ಜೀವನದ ಶೇ 80ರಷ್ಟು ಭಾಗ ನಾಶವಾಗಿರುವುದು ಒತ್ತಡದಿಂದ. ಇದಕ್ಕೆ ಕಾರಣ ಮೇಲೆ ಹೇಳಿದಂತೆ ಆಧುನಿಕ ಜೀವನಶೈಲಿ.

ಒಮ್ಮೆ ಸಮಾಧಾನದಿಂದ ಕುಳಿತು ‘ನಾವು ಇಷ್ಟೇಕೆ ಮುಂದೇ ಮುಂದೇ ಓಡುತ್ತಿದ್ದೇವೆ, ಇದರಿಂದ ನಮಗೇನು ಸಿಗುತ್ತದೆ’ ಎಂದು ಯೋಚಿಸಬೇಕು. ಜೊತೆಗೆ ‘ನಾನು ಯಾರು? ಇಲ್ಲಿಗೇಕೆ ಬಂದೆ? ಇಲ್ಲಿ ಬದುಕಲು ಕಾರಣವೇನು?’ – ಇಂಥ  ಪ್ರಶ್ನೆಗಳನ್ನು ನಮ್ಮೊಳಗೆ ಕೇಳಿಕೊಳ್ಳಬೇಕು. ಹೀಗೆ ಆತ್ಮಾವಲೋಕನ ಮಾಡಿಕೊಳ್ಳುವುದರಿಂದ ಬದುಕಿನ ಅನಗತ್ಯಗಳ ಹಿಂದೆ ಓಡುವುದನ್ನು ನಿಲ್ಲಿಸುತ್ತೇವೆ. ಜೊತೆಗೆ ಯಾವುದಕ್ಕೆ ಪ್ರಾಶಸ್ತ್ಯ ನೀಡಬೇಕು, ಯಾವುದಕ್ಕೆ ಬೇಡ ಎಂಬುದರ ಸ್ಪಷ್ಟ ಅರಿವು ನಮಗಾಗುತ್ತದೆ.

Courtesy : Prajavani.net

http://www.prajavani.net/news/article/2018/03/28/562184.html

Leave a Reply