ಅನಂತನ ಅಂತರಾಳ

ಅನಂತನ ಅಂತರಾಳ

‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಸಿನಿಮಾದಲ್ಲಿ ಹಿರಿಯ ನಟ ಅನಂತ್‌ ನಾಗ್‌ ಅವರದು 65ರ ವಯಸ್ಸಿನಲ್ಲಿಯೂ ಉದ್ಯೋಗ ಅರಸುವ ಹಿರಿ ವ್ಯಕ್ತಿಯ ಪಾತ್ರ. ಈ ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿದ್ದು, ಚಿತ್ರವು ಪ್ರತಿ ವ್ಯಕ್ತಿಯೂ ಹೊಟ್ಟೆಪಾಡಿಗಾಗಿ ಜೀವನದಲ್ಲಿ ವಿವಿಧ ಪಾತ್ರ, ಕೆಲಸಗಳನ್ನು ಮಾಡಬೇಕಾಗುತ್ತದೆ ಎಂಬುದನ್ನು ಧ್ವನಿಸುತ್ತದೆ. ಅನಂತ್‌ ನಾಗ್‌ ಅವರು ಇತ್ತೀಚೆಗೆ ಎಚ್ಚರಿಕೆಯಿಂದ ಹೊಸ ಬಗೆಯ ಚಿತ್ರಕತೆಗಳನ್ನು ಆಯ್ದುಕೊಳ್ಳುತ್ತಿದ್ದು, ಅವರ ಇತ್ತೀಚಿಗಿನ ಅನೇಕ ಚಿತ್ರಗಳು ಇದನ್ನು ಸಾಬೀತು ಮಾಡಿವೆ. ಈ ಚಿತ್ರದಲ್ಲಿ ಅವರು ಹೊಸ ಬಗೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರವು ಪೀಳಿಗೆಗಳ ನಡುವಿನ ಅಂತರದ ಕುರಿತಾಗಿದೆ. ಈ ಚಿತ್ರದ ಅನುಭವಗಳನ್ನು ಅನಂತ್‌ನಾಗ್‌ ಹಂಚಿಕೊಂಡಿದ್ದಾರೆ.

ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಚಿತ್ರದ ಬಗ್ಗೆ ಹೇಳಿ?
ಈ ಚಿತ್ರದ ಕತೆ ತುಂಬ ಸಂಕೀರ್ಣ ಮತ್ತು ಬಹು ಪದರಗಳನ್ನು ಹೊಂದಿರುವಂಥದು. ಮಾನವನ ಸಂಬಂಧಗಳು ಹಾಗೂ ಹಳೆ ಪೀಳಿಗೆಯ ಜನ ಹೇಗೆ ಹೊಸ ವಾತಾವರಣವನ್ನು ಸ್ವೀಕರಿಸುತ್ತಾರೆ ಎಂಬ ಬಗ್ಗೆ ಇದೆ. ಕೆಲಸದ ಭದ್ರತೆ, ಖಾಸಗಿ ವಲಯದಲ್ಲಿ ಕೆಲಸ ಮಾಡುವವರ ಜೀವನ… ಹೀಗೆ ಅನೇಕ ವಿಷಯಗಳ ಬಗ್ಗೆ ಇದರಲ್ಲಿ ಚರ್ಚಿಸಲಾಗಿದೆ.

ಚಿತ್ರದಲ್ಲಿ ನಿಮಗೆ ಮುಖಾಮುಖಿಯಾದ ಪಾತ್ರ?
ಚಿತ್ರದಲ್ಲಿ ನಾನು ರಾಧಿಕಾ ಜೊತೆ ತುಂಬಾ ಕಾಣಿಸಿಕೊಂಡಿದ್ದೇನೆ. ನಮ್ಮಿಬ್ಬರ ಸ್ವಭಾವಗಳು ತದ್ವಿರುದ್ಧ. ನಾನು ಸಂಗೀತ ಪ್ರೇಮಿಯಾಗಿದ್ದರೆ ಆಕೆ ಸಂಗೀತ ಪ್ರೇಮಿಸುವ ಯಾರನ್ನೂ ಹತ್ತಿರಕ್ಕೂ ಸೇರಿಸಿಕೊಳ್ಳಲ್ಲ. ಆಕೆಯ ತಾಯಿ ಸಂಗೀತಗಾರ್ತಿಯಾಗಿದ್ದರಿಂದಲೇ ತನ್ನ ಅಪ್ಪ– ಅಮ್ಮನಿಗೆ ವಿಚ್ಛೇದನವಾಯಿತು ಎಂದು ನಂಬಿರುವವಳು ಆಕೆ. ಬಹಳ ಗಂಭೀರ, ಭಾವನಾತ್ಮಕ ದೃಶ್ಯಗಳು ಚಿತ್ರದಲ್ಲಿವೆ.

ನಿಮ್ಮ ಪಾತ್ರ ಪೋಷಣೆ ಬಗ್ಗೆ ಹೇಳಿ 
ಸ್ವಲ್ಪ ಕಠಿಣವಾಗಿತ್ತು. ನನಗೆ ಕೆಲ ಸಂಭಾಷಣೆಗಳಿವೆ. ನಾನು ಕೆಲಸ ಮಾಡುವ ಜಾಗದಲ್ಲಿ ನನ್ನ ಮೌನದ ಮೂಲಕವೇ ನನಗೇನಿಸುತ್ತದೆಯೋ ಅದನ್ನು ನಾನು ತಿಳಿಸಬೇಕು. ಎಲ್ಲರೂ ಎಲ್ಲಾ ಕೆಲಸಗಳನ್ನು ಮಾಡಬೇಕಾಗುತ್ತದೆ. ಎಲ್ಲಾ ರೀತಿಯ ಕೆಲಸ ಮಾಡುವುದರೊಂದಿಗೆ ನನ್ನ ಪಾತ್ರ ಮುಗಿಯುತ್ತದೆ. ನಾನು ಯುವಜನರಿಂದ ಹಾಸ್ಯ ಹಾಗೂ ಗೇಲಿಗೊಳಗಾಗಿರುವ ದೃಶ್ಯಗಳಿವೆ. ಈ ಎಲ್ಲವನ್ನೂ ಸೂಕ್ಷ್ಮವಾಗಿ ತೋರಿಸಲಾಗಿದೆ.

ನಿರ್ದೇಶಕ ನರೇಂದ್ರ ಬಾಬು ಜೊತೆಗೆ ಕೆಲಸ ಮಾಡಿದ ಅನುಭವ ಹೇಗಿತ್ತು? 
ನಾನು ಅವರ ಬರವಣಿಗೆಯಿಂದ ಆಕರ್ಷಿತನಾಗಿದ್ದೇನೆ. ಕೆಲವೊಂದು ಸಂಭಾಷಣೆಗಳು ತುಂಬ ಆಕರ್ಷಕವಾಗಿ, ಹರಿತವಾಗಿದೆ. ಅವರ ಜೊತೆ ಕೆಲಸ ಮಾಡುವಾಗ ನಾನು ತುಂಬ ಆಲರ್ಟ್‌ ಆಗಿ ಇರುತ್ತಿದ್ದೆ. ಈ ಚಿತ್ರದಲ್ಲಿ ಕೆಲಸ ಮಾಡಿರುವ ಯುವಜನರು ಎಲ್ಲರೂ ರಂಗಭೂಮಿ ಹಿನ್ನೆಲೆಯವರು. ತುಂಬ ಚೆನ್ನಾಗಿ ಕೆಲಸ ಮಾಡಿದ್ದಾರೆ. ಅವರ ಜೊತೆ ಕೆಲಸ ಮಾಡುವುದು ತುಂಬ ಸವಾಲಿದ್ದಾಗಿತ್ತು.

ಈಚೆಗೆ ನೀವು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸುತ್ತಿದ್ದೀರಿ. ಇದು ಪ್ರಜ್ಞಾಪೂರ್ವಕ ಬದಲಾವಣೆಯೇ? 
ಯುವ ನಿರ್ದೇಶಕರು ಅತ್ಯಾಸಕ್ತಿ ಹೊಂದಿದ್ದು, ಅವರಿಗೆ ಏನು ಬೇಕು ಎಂಬುದರ ಬಗ್ಗೆ ಅವರಿಗೆ ಖಚಿತವಾಗಿ ಗೊತ್ತಿರುತ್ತದೆ. ಅವರು ಹೊಸ ಸಿನಿಮಾ ಮಾಡುವಾಗ ಹೊಸ ಐಡಿಯಾಗಳ ಜೊತೆ ಬರುತ್ತಾರೆ. ನನ್ನ ಜೀವನದ ಒಂದು ಹಂತದಲ್ಲಿ ನಾನು ಕಾದಂಬರಿ ಆಧಾರಿತ ಸಿನಿಮಾಗಳಲ್ಲಿ ನಟಿಸುತ್ತಿದ್ದೆ. ಬಳಿಕ ಚಿತ್ರಕತೆ ಆಧಾರಿತ ಸಿನಿಮಾಗಳನ್ನು ಮಾಡಿದೆ. ಅಸಾಂಪ್ರದಾಯಿಕ ಹಾಗೂ ಕೆಲ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ಚಿತ್ರಕತೆಗಳನ್ನು ಪ್ರೇಕ್ಷಕರು ಯಾವಾಗಲೂ ಸ್ವೀಕರಿಸುತ್ತಾರೆ.

Courtesy : Prajavani.net

http://www.prajavani.net/news/article/2018/05/30/575995.html

Leave a Reply