“ಆನಾ ಎಂಬ ನಕ್ಷತ್ರ”,

ಸೇಂಟ್ ಪೀಟರ್ಸ್‌ಬರ್ಗ್ ಎಂಬ ಮೋಹಕ ಊರಿನ ಹಿಂದಿನ ಹೆಸರು ‘ಲೆನಿನ್ ಗ್ರಾದ್’, ರಷ್ಯಾದ ರಾಜಧಾನಿ. ಅಲ್ಲಿ ಮುದದಿಂದ ಸುತ್ತಾಡುವಾಗ ಎಂದೋ ಓದಿದ ಆನಾ ಅಖ್ಮತೋವಾಳ ಕಡುದುಃಖದ ಸಾಲುಗಳು ಇದ್ದಕ್ಕಿದ್ದಂತೆ ನೆನಪಾದವು. ಅವಳು ರಷ್ಯಾದ ಕವಯತ್ರಿ ಎಂದಷ್ಟೇ ಗೊತ್ತಿತ್ತು. ವಿಚಾರಿಸಲಾಗಿ ಇದೇ ಊರಲ್ಲಿ ಅವಳ ಬದುಕು ಸಾಗಿದ್ದು, ಮೋಹಕವಾದದ್ದು, ದುರ್ಭರಗೊಂಡಿದ್ದು ಎಂದು ಗೊತ್ತಾಯಿತು. ಯಾವಾಗಲೋ ಒಂದು ಓದಿನಲ್ಲಿ ಅವಳ ಸಾಲುಗಳು ನನ್ನನ್ನು ಅಲ್ಲಾಡಿಸಿದ್ದವು. ಜೈಲಿನ ಬಳಿ ಇಪ್ಪತ್ತು ವರುಷ ತನ್ನ ಮಗನಿಗಾಗಿ ಅವಳೊಬ್ಬ ಅಸಹಾಯಕ ತಾಯಿಯಾಗಿ ಕಾದಿದ್ದು ಮನದಂಗಳದಲ್ಲಿ ದಾಖಲಾಗಿತ್ತು. ಮುನ್ನೂರು ವರುಷದ ಇತಿಹಾಸ ಉಳ್ಳ ಈ ಸುಂದರ ನಗರದ ಸಾಮ್ರಾಜ್ಯದಲ್ಲಿ ಜೀವನದ ಬಹುಪಾಲು ನೋವನ್ನಷ್ಟೇ ಉಂಡ ಕವಯತ್ರಿ ಆನಾಳ ಹೆಸರನ್ನು ಚುಕ್ಕಿಯೊಂದಕ್ಕೆ ಇಡಲಾಗಿದೆ. ಪ್ರಭುತ್ವದ ದಬ್ಬಾಳಿಕೆ, ಹಿಂಸೆ ಹಾಗೂ ತನ್ನ ಪ್ರೇಮದ ಗೂಟದಲ್ಲಿ ತೂಗುಯ್ಯಾಲೆಯಾಡಿದ ಜೀವ ಆನಾಳನ್ನು ಇಂದಿಗೂ ರಷ್ಯಾದ ಮಹಿಳೆಯ ಗಟ್ಟಿ ದನಿಯೆಂದೇ ಗುರುತಿಸಲಾಗಿದೆ. ಪ್ಯಾರಿಸ್ಸಿನಲ್ಲಿ ಕೆಲ ಕಾಲವಿದ್ದು ಬಂದಿದ್ದ ಆನಾ, ಅಲ್ಲಿ ಕಲೆಯೆಂಬುದು ಕಾವ್ಯವನ್ನು ತೆಳುಗೊಳಿಸಿದೆ ಎಂದು ಮೂಗು ಮುರಿಯುತ್ತಿದ್ದ ಆ ದಿನಗಳಲ್ಲಿಯೇ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಕಾವ್ಯ, ಉತ್ತುಂಗದ ಶಿಖರದಲ್ಲಿ ನಿಂತು ಉಸಿರಾಡುತ್ತಿತ್ತು. ಅಂಥ ಸಮಯದಲ್ಲಿ ಅಲ್ಲಿ ಪ್ರಚಲಿತವಾಗಿದ್ದ ಹಳೆಯ ಕಾವ್ಯದೊಂದು ಗುಂಪಿಂದ ಹೊರಬಂದ ಹಲವರು ಹೊಸ ಗುಂಪೊಂದನ್ನು ಕಟ್ಟಿಕೊಂಡರು. ‘ಅಖೆಮಿಸ್ಟ್ಸ್’ ಎನ್ನುವ ಈ ಗುಂಪಿನ ಜೊತೆ ಗುರುತಿಸಿಕೊಂಡ ಆನಾ, ಪ್ರಮುಖ ಕವಯತ್ರಿಯಾಗಿದ್ದಳು. ಅಖೆಮಿಸ್ಟ್ಸ್ ಎನ್ನುವುದು ‘ತುತ್ತ ತುದಿ’ ಎಂಬ ಅರ್ಥದ ಗ್ರೀಕ್ ಶಬ್ದ. ಇದರ ಸಮರ್ಥ ಪ್ರತಿನಿಧಿ ಆನಾ. ಈ ಹೊಸ ಸಾಹಿತ್ಯ ಚಳುವಳಿಯ ಗುಂಪಿನ ಮುಖ್ಯಸ್ಥ ಸ್ಟೀಫನ್ ಗ್ಯುಮಿಲೋವ್ ಜೊತೆ ಇವಳ ಮದುವೆ 1911ರಲ್ಲಿ ಆಗಿದ್ದೇ ಅವಳ ಏಕೈಕ ಮಗ ಲೆವ್ ಮರುವರ್ಷ ಹುಟ್ಟಿದ. ಅವು ಅವಳ ಅತ್ಯಂತ ಸಂತಸದ ದಿನಗಳು. ಅಂತೆಯೇ ಪ್ರೇಮ ಕವನಗಳು ಅವಳೊಳಗೆ ಅರಳಿಕೊಂಡವು: ನಾನುಟ್ಟ ಲಂಗದ ಮೇಲೆ ಕೈಯಾಡಿಸುತ್ತ/ ಅವನಂದ- ನಾನು ನಿನ್ನ ನೆಚ್ಚಿನ ಗೆಳೆಯ/ ಅಪ್ಪುಗೆಗಿಂತ ಅದೆಷ್ಟು ಹಿತವಾಗಿತ್ತು/ ಆ ಕೈಗಳ ಸ್ಪರ್ಶ/ ಹಕ್ಕಿಬೆಕ್ಕುಗಳ ಮೈ ನೇವರಿಸುವುದು ಹೀಗೆಯೇ…ಮೊದಲ ಸಂಕಲನ ‘ಸಂಜೆ’ ಪ್ರಕಟವಾಯಿತು. ನಂತರ ಎರಡು ವರ್ಷಗಳಲ್ಲಿ ಪ್ಯಾರಿಸ್ಸಿನ ಪ್ರವಾಸ ಹಾಗೂ ಇಟಲಿಯ ಭೇಟಿಗಳು ಅವಳ ಒಳಗನ್ನು ವಿಸ್ತರಿಸಲಾಗಿ ‘ಜಪಮಾಲೆ’ ಎಂಬ ಮತ್ತೊಂದು ಸಂಕಲನ ಬಂತು. ಇದ್ದಕ್ಕಿದ್ದಂತೆ ಅವಳಿಗೆ ಹತಾಶೆ ಬಂದೆರಗಿದಾಗ ಹೊರ ಜಗತ್ತಿಗೆ ಬೆಸುಗೆಯಾಗತೊಡಗಿದಳು. ‘ಜಪಮಾಲೆ’ ಮತ್ತೆ ಮತ್ತೆ ಮುದ್ರಣವಾಗಿ ಒಂಬತ್ತು ವರುಷ ಜನರನ್ನು ಮೋಡಿ ಮಾಡಿತು, ಯುವಕವಿಗಳು ಅವಳನ್ನು ಅನುಕರಣೆ ಮಾಡತೊಡಗಿದರು. ಆಗ, ‘ಅನೆನ್ಸ್ಕಿ’ ಎಂಬ ಕವಿಯ ಓದು ಅವಳ ಮುಂದಿನ ಕಾವ್ಯದಾರಿಗೆ ಕೈಮರವಾಯಿತು. ಅವನನ್ನು ಅವಳು ‘ಕಾವ್ಯಗುರು’ ಅಂದುಕೊಂಡಳು. ಅದರಿಂದ ಇವಳ ಕಾವ್ಯ ಒಂದು ಹೊರಳು ದಾರಿಯನ್ನೂ ಪಡೆದುಕೊಂಡಿತು. ಪೀಟರ್ಸ್‌ಬರ್ಗ್‌ನಲ್ಲಿ ‘ದಿ ಸ್ಟ್ರೇ ಡಾಗ್’ ಎನ್ನುವ ನಾಟ್ಯಗೃಹ, ಬುದ್ಧಿಜೀವಿಗಳ, ಕಲಾವಿದರ, ಕವಿಗಳ ದೊಡ್ಡ ಅಡ್ಡೆಯಾಗಿತ್ತು. ಮುಕ್ತ ಪ್ರೇಮಕಾಮದ ಕೇಂದ್ರವೂ ಆಗಿತ್ತು. ಆನಾ ಕೂಡಾ ಇಲ್ಲಿ ಮುಕ್ತ ಹೆಣ್ಣು. ಅವಳ ಈ ಅತಂತ್ರ ನಡೆಯಿಂದ ಬದುಕಿನಲ್ಲಿ ನೋವೇ ಹೆಚ್ಚಾಗಿದ್ದರೂ ಆ ನೋವೇ ಅನೇಕ ಗಟ್ಟಿದನಿಯ ಕಾವ್ಯವನ್ನೂ ಕೊಟ್ಟಿತು. ಇಲ್ಲಿ ಸೇರುತ್ತಿದ್ದ ಮಿಲಿಟರಿ ಅಧಿಕಾರಿಯೂ ಆಗಿದ್ದ ಯುವಕವಿಯೊಬ್ಬ ಹೊಸವರ್ಷದ ದಿನ ಎಲ್ಲರೂ ಒಳಗೆ ಸಂತಸದಲ್ಲಿದ್ದಾಗ ಆ ಗೃಹದ ಹೊರಮೆಟ್ಟಿಲ ಮೇಲೆ ಗುಂಡಿಟ್ಟುಕೊಂಡು ಆತ್ಮಹತ್ಯೆಗೆ ಶರಣಾಗಿಬಿಟ್ಟ. ಅವನು ಯಾರದ್ದೋ ಅಸಹಜ ಪ್ರೇಮದ ಗೊಂದಲದಲ್ಲಿ ಬಿದ್ದು ಕಂಗೆಟ್ಟಿದ್ದ. ಇದು ಆನಾಳನ್ನು ಎಷ್ಟರಮಟ್ಟಿಗೆ ಕಂಗೆಡಿಸಿತೆಂದರೆ ‘ಜಪಮಾಲೆ’ಯ ಕವನಗಳಲ್ಲಿ ಮಾತ್ರವಲ್ಲದೆ, ಅವಳ ಕೊನೆಯ ಹಾಗೂ ಮೇರುಕೃತಿ ‘ನಾಯಕನಿಲ್ಲದ ಕವಿತೆ’ಯಲ್ಲೂ ಅದರ ದಟ್ಟಛಾಯೆ ಕಾಣುತ್ತಿತ್ತು. ಈ ನಡುವೆ ಕಾಡಿಬೇಡಿ, ಸಾವಿನಂಚಿಗೆ ಹೋಗಲೂ ತಯಾರಾಗಿ, ಮದುವೆಯಾಗಿದ್ದ ಅವಳ ಮೊದಲನೆಯ ಗಂಡ ಅವಳನ್ನು ನಿರ್ಲಕ್ಷಿಸಿ ಹೊರದೇಶ ಸಂಚಾರಕ್ಕೆ ಹೊರಟುಬಿಡುತ್ತಿದ್ದ. ಮತ್ತೊಬ್ಬ ಹಾಗೂ ಮಗದೊಬ್ಬನನ್ನೂ ಮದುವೆಯಾಗಿ ಸ್ವೇಚ್ಛೆ ಹಾಗೂ ಸಂಸಾರ ಎರಡನ್ನೂ ತೂಗಲಾಗದೆ, ಜನರ ನಿಂದನೆಯನ್ನು ತಾಳಿಕೊಂಡು ನೊಂದ ಆನಾ, ತನ್ನ ಕಾವ್ಯಮುಖೇನ ಸಮಾಜದ ಹೊರಜಗತ್ತಿಗೆ ಜಿಗಿದಳು. ಅವಳ ಕಾವ್ಯ ತೀವ್ರವಾಗಿರುತ್ತಿದ್ದವು. ಅವಳನ್ನು ಹತ್ತಿರದಿಂದ ಬಲ್ಲ ‘ಮ್ಯಾಂದಲ್ ಸ್ತಾಮ್’ ಎಂಬ ಕವಿಯೊಬ್ಬ ‘ಈ ಹೆಂಗಸಿಗೆ ಭವಿಷ್ಯವಾಣಿ ಹೇಗೆ ತಿಳಿಯುತ್ತದೆ?’ ಎಂದು ಉದ್ಗರಿಸಿದ್ದಲ್ಲದೆ ಗ್ರೀಸ್‌ನ ಭವಿಷ್ಯವಾದಿ ‘ಕ್ಯಾಸಂದ್ರಾ’ಗೆ ಇವಳನ್ನು ಹೋಲಿಸಿದ್ದ. ಅವಳು ಗ್ರಹಿಸುತ್ತಿದ್ದ ಅನೇಕ ಹೊಳಹುಗಳನ್ನು ಅವಳ ಸಾಲುಗಳು ಎತ್ತಿ ತೋರುತ್ತವೆ. ಆನಾಳನ್ನ ಮೆಚ್ಚಿದ್ದ ಕವಿ ಬ್ಲೇಕ್ ಅವಳಿಗೆ ಕಾಗದ ಬರೆದಿದ್ದ– ‘ಬರವಣಿಗೆ ಹೆಚ್ಚು ಗಡುಸಾಗಬೇಕು. ಅದು ಓದಿದವರನ್ನು ಬಾಧಿಸಬೇಕು.’ ಈ ವಾಕ್ಯವನ್ನು ಅವಳೊಳಗಿನ ಸಂವೇದನೆ ಒಳಬಿಟ್ಟುಕೊಂಡಿತ್ತು. ಇದರೊಡನೆ ರಷ್ಯಾ ಕ್ರಾಂತಿಯ ದಿನಗಳು ಮೊದಲಾದವು. ಯುದ್ಧ, ಕೊಲೆ, ರಕ್ತಪಾತಗಳನ್ನು ಕಂಡಿದ್ದ ರಷ್ಯಾದ ಬೆನ್ನಹಿಂದೆಯೇ ಮತ್ತೊಂದು ಹಿಂಸಾಪರ್ವ ಶುರುವಾಗಿತ್ತು. ಆಗ, ‘ಒಂದಂತೂ ನಿಜ: ಬಂದೀಖಾನೆಯ ಬೀಗದ ಕೈಗಳ ತಾಳಕ್ಕೆ/ ನಾನೆಂದೂ ಗೀತೆ ರಚಿಸುವುದು ಸಾಧ್ಯವಿಲ್ಲ’ ಎಂದಳು ಆನಾ.ಹಿಂಸಾಪರ್ವದಲ್ಲಿ ಬೇರೆ ದೇಶಗಳಿಗೆ ಪಲಾಯನಗೊಂಡ ಜನರ ನಡುವೆ ಅವಳು ತನ್ನ ನೆಲದಲ್ಲಿಯೇ ನಿಂತು ದೇಶಕ್ಕಾಗಿ ಕವನ ಬರೆದಳು. ‘ನನಗೊಂದು ಧ್ವನಿ ಕೇಳಿಸಿತು’ ಎಂಬ ಪ್ರಾಮಾಣಿಕ ದೇಶಪ್ರೇಮದ ಗಟ್ಟಿ ನಿಲುವಿನ ಅವಳ ಕವಿತೆಯನ್ನು ಕವಿ ಬ್ಲೇಕ್ ಬಾಯಿಪಾಠ ಮಾಡಿ ‘ನಿಲುವೆಂದರೆ ಇದು’ ಎಂದು ಎಲ್ಲರೆದುರು ಹೇಳುತ್ತಿದ್ದನಂತೆ. ಈ ಕವಿತೆ ಅವಳನ್ನು ಸರ್ಕಾರ ಕೊಡುತ್ತಿದ್ದ ಕಿರುಕುಳದಿಂದ ಸ್ವಲ್ಪಮಟ್ಟಿಗೆ ಪಾರು ಮಾಡಿತೆಂದೇ ಹೇಳಬೇಕು. ಲೆನಿನ್ ಸರ್ಕಾರ ಬಂದಿತು. ದುಃಖದಲ್ಲೇ ಮುಳುಗುವ ಅನಿವಾರ್ಯತೆ ಬಂದೇಬಿಟ್ಟಿತು. ಅವಳ ಮೊದಲ ಗಂಡ ‘ಗ್ಯುಮಿಲೋವ್‌’ ಜೈಲು ಸೆರೆಯಾಳಾಗಿ ಹೆಣದ ಪತ್ತೆಯೂ ಸಿಗದಂತೆ ಕೊಲೆಗೀಡಾದ. ಮುಂದೆ ಸ್ಟಾಲಿನ್ನಿನ ಆಡಳಿತದಲ್ಲೂ ಇಂಥ ಬುದ್ಧಿಜೀವಿಗಳ ಸಾವಿರಾರು ಹತ್ಯೆಗೊಳಗಾದವು. ಆನಾ ಕುಸಿದುಹೋದಳು. ಈ ಸ್ಥಿತಿಯಲ್ಲೇ ಅವಳ ಎರಡು ಕವಿತಾ ಸಂಗ್ರಹಗಳಾದ ‘ಗುಬ್ಬಚ್ಚಿಬಾಳೆ’, ‘ಕ್ರಿಸ್ತೋತ್ತರ 1921’ ಪ್ರಕಟಗೊಂಡವು. ಮುಂದೆ ಅವಳ ಯಾವೊಂದು ಸಂಕಲನವೂ ಪ್ರಕಟವಾಗಲಿಲ್ಲ. ಹತ್ತೊಂಬತ್ತು ವರ್ಷಗಳ ಆ ದೀರ್ಘ ಸಮಯದಲ್ಲಿ ಅವಳು ಅಧ್ಯಯನ ಹಾಗೂ ಸಂಶೋಧನೆಯಲ್ಲಿ ತೊಡಗಿಕೊಂಡಳು. ಆಗ ಬಂದ ಪುಷ್ಕಿನ್ ಮೇಲಿನ ಲೇಖನಗಳು ಅವಳ ಅಗಾಧ ಪ್ರತಿಭೆಗೆ ಸಾಕ್ಷಿಯಾದವು. ಆ ಸಮಯದಲ್ಲೇ ಮೂರನೇ ಗಂಡನ ದಬ್ಬಾಳಿಕೆಯಲ್ಲಿ ನೊಂದ ಅವಳು ಗಾಳಕ್ಕೆ ಸಿಕ್ಕ ಮೀನಿನಂತೆ ದೀರ್ಘ ಹತ್ತು ವರ್ಷ ಅವನೊಡನೆಯೇ ಬದುಕಿದ್ದಳು. ಆನಾಳ ಮೂರನೆಯ ಗಂಡ ಪ್ಯೂನಿನ್ ಸ್ಟಾಲಿನ್ನನ ದುರಾಡಳಿತದ ಶ್ರಮಶಿಬಿರದಲ್ಲಿ ಸತ್ತಾಗ ದುಃಖಿಸಿ ಬರೆದ ಕವಿತೆಗಳು ಅವಳ ತಿಳಿಮನಸ್ಸಿನ ಪ್ರತೀಕವಾಗಿವೆ: ‘ನಮ್ಮದು ಬೆಟ್ಟಬೆಟ್ಟಗಳ ಸಂಬಂಧ/ ನಾನೂ ನೀನೂ ಪ್ರಪಂಚದಲ್ಲಿ ಕೂಡುವುದು ಸಾಧ್ಯವಿಲ್ಲ/ ಆಗಾಗ ನಡುರಾತ್ರಿ ನಕ್ಷತ್ರಗಳ ಮೂಲಕ/ ಸುದ್ದಿ ಕಳಿಸುತ್ತಿರು.’ ಸ್ಟಾಲಿನ್ನಿನ ಆಡಳಿತ ದುರ್ಭರವಾಗಿತ್ತು. ಒಂದು ವಿರೋಧಿ ದನಿ ಕೇಳಿದರೂ ಅಳಿಸಿ ಹಾಕಲಾಗುತಿತ್ತು. ಆನಾಳ ಮಗ ‘ಲೆವ್‌’ನನ್ನು ಜೈಲಿಗೆ ತಳ್ಳಲಾಯಿತು. ಒಂದಲ್ಲ, ಮೂರು ಬಾರಿ. ಅಲ್ಲಿಂದಾಚೆಗೆ ಇಪ್ಪತ್ತು ವರ್ಷಗಳ ಕಾಲ ಆನಾ ನೂರಾರು ಇತರ ಹೆಂಗಸರಂತೆ ಲೆನಿನ್‌ಗ್ರಾದ್‌ನ ಸೆರೆಮನೆಯಾಚೆಗೆ ಮುಂಜಾನೆ ನಡೆದುಹೋಗಿ ಸಂಜೆವರೆಗೂ ಮಗನ ಸುದ್ದಿಗಾಗಿ ಬಿಸಿಲು ಛಳಿಯೆನ್ನದೆ ಕಾದು ಕಾದು ಮನೆಗೆ ಹಿಂತಿರುಗುತ್ತಿದ್ದಳು. ಆಗ ಬಂದದ್ದೇ ‘ರಿಕ್ವಿಯಂ’ ಕವಿತಾಗುಚ್ಛ. ಎದೆ ನಡುಗಿಸುವ ಆ ತಾಯ ನೋವಿನದು: ‘ಈ ದೇಶದಲ್ಲಿ ಎಂದಾದರೊಂದು ದಿನ/ ನನಗೆ ಸ್ಮಾರಕ ನಿರ್ಮಿಸುವುದಾದರೆ/ ಇಲ್ಲಿ, ಮುನ್ನೂರು ಗಂಟೆಗಳ ಕಾಲ ನಾನು ನಿಂತ ಈ ಸ್ಥಳದಲ್ಲಿ/ ನನ್ನ ಪಾಲಿಗೆ ಸೆರೆಮನೆಯ ಬೀಗ ತೆರೆಯದೆ ಹೋದ ಆ ಇಲ್ಲಿ ಇಲ್ಲೇ ಏಕೆ?/ ಸೆರೆಮನೆಯ ಬಾಗಿಲು ನನ್ನ ಮುಖಕ್ಕೆ ಬಡಿಯುತ್ತಿದ್ದುದನ್ನು/ ಮುದುಕಿಯೊಬ್ಬಳು ಗಾಯಗೊಂಡು ಎದೆಎದೆ ಬಡಿಯುತ್ತಿದ್ದುದನ್ನು/ ಮೃಗದಂತೆ ಅರಚುತ್ತಿದ್ದುದನ್ನು ಸತ್ತ ಮೇಲೆ/ ನಾನು ಎಲ್ಲಿ ಮರೆತುಬಿಡುವೆನೋ ಎಂಬ ಭಯದಿಂದಾಗಿ…. ’ಆ ಸಮಯದಲ್ಲೇ ಅವಳ ಆಪ್ತಮಿತ್ರ ಮ್ಯಾಂಡಲ್ ಸ್ತ್ಯಾಮ್‌ ಕೂಡಾ ಹತ್ಯೆಯಾಗಿದ್ದ. ಅಂದಿನ ಹಿಂಸೆಯನ್ನು ಐದು ಪದಗಳ ಕಾವ್ಯದಲ್ಲಿ ಅವಳು ಹೇಳಿದಳು– ‘ರಕ್ತವೆಂದರೆ ಅದೆಷ್ಟು ಪ್ರೀತಿ/ ರಷ್ಯಾದ ನೆಲಕ್ಕೆ’ ಆನಾಳ ಮೇಲಿನ ಬಹಿಷ್ಕಾರವನ್ನು ಸ್ಟಾಲಿನ್ನಿನ ಸಂತೃಪ್ತ ಸರ್ಕಾರ ತೆಗೆದುಹಾಕಿತ್ತು. ಮೌನವಾಗಿದ್ದ ಅವಳ ಸಮಗ್ರ ಕಾವ್ಯದ ಪುಸ್ತಕಗಳು ಆಗಿಂದಾಗಲೇ ಸಾಲುಸಾಲು ಮಾರಾಟವಾದವು. ನಾಕು ಬೀದಿಯುದ್ದ ನಿಂತು ಜನರು ಹತ್ತು ಪಟ್ಟು ದುಡ್ಡುಕೊಟ್ಟು ಕೊಂಡರು. ಹತ್ತೊಂಬತ್ತು ವರ್ಷ ದೀರ್ಘಕಾಲದ ನಂತರ ಅವಳನ್ನು ಮತ್ತೆ ಮತ್ತೆ ಓದಿದರು. ಆ ಜನಪ್ರಿಯತೆಯನ್ನು ಕಂಡ ಸರ್ಕಾರ ಅವಳನ್ನು ಮತ್ತೆ ಮಟ್ಟಹಾಕಿತು. ಪುನಃ ಕಾವ್ಯರಚನೆಯಲ್ಲಿ ತೊಡಗಿದ ಆನಾ ‘ಯುದ್ಧದ ಗಾಳಿ’ ಗುಚ್ಛದಲ್ಲಿ ಪ್ರಕಟಿಸಿದ ‘ಧೈರ್ಯ’ ಎಂಬ ಕವಿತೆಯೊಂದು ಹೆಸರಾಯಿತು. ರಷ್ಯಾ ಭಾಷೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಕಾಪಿಡಬೇಕೆಂದು ಹೇಳುವ ಕವಿತೆಯದು. ರಷ್ಯಾಕ್ಕೆ ಮತ್ತೊಂದು ತಿರುವು. ಮೂರು ವರುಷ ರಷ್ಯಾವನ್ನು ಸುತ್ತುವರೆದ ಜರ್ಮನ್ ಅದನ್ನು ದಿಗ್ಬಂಧನದಲ್ಲಿರಿಸಿತು. ಆಗ ಸರ್ಕಾರ, ಕೆಲವು ಗಣ್ಯರನ್ನು ದೇಶದಿಂದ ಹೊರಗಿರಿಸಿತು. ಅದರಲ್ಲಿ ಆನಾ ಕೂಡ ಒಬ್ಬಳು. ಆ ಹೊತ್ತಿನಲ್ಲಿ ಅವಳಿದ್ದ ತಾಷ್ಕೆಂಟಿನಲ್ಲಿ ಅವಳು ಯುದ್ಧಾಳುಗಳಿಗೆ ತನ್ನ ಕಾವ್ಯವನ್ನು ಓದಿ ಹೇಳುತ್ತಿದ್ದಳು. ಹೊಸ ಗಾಳಿ, ದೇಶ, ಕಾವ್ಯ ಅವಳನ್ನೊಮ್ಮೆ ಕೊಂಚ ಸುಧಾರಿಸಿತು. ರಷ್ಯಾದ ಧೈರ್ಯದ ನಿಲುವಿನಿಂದ ಜರ್ಮನಿ ಸೋತಿತು. ಆನಾ ಹಿಂತಿರುಗಿ ಲೆನಿನ್‌ಗ್ರಾದ್‌ಗೆ ಬರುವಾಗ ಮಾಸ್ಕೊದಲ್ಲಿ 3000 ಅಭಿಮಾನಿಗಳ ಮುಂದೆ ತನ್ನ ಕವಿತೆ ವಾಚಿಸಿದ್ದು, ಅವರು ಎದ್ದು ನಿಂತು ಚಪ್ಪಾಳೆ ಹೊಡೆದದ್ದು ಸರ್ಕಾರದ ಕಿವಿಗೆ ಬಿತ್ತು. ಚಾಡಿಕೋರರು ಅವಳನ್ನು ‘ಅರೆ ಸೂಳೆ ಹಾಗೂ ಅರೆ ಸನ್ಯಾಸಿನಿ’ ಎಂದು ಅರಮನೆಯ ಗೋಡೆಗೆ ಕಿವಿ ಚುಚ್ಚಿದರು. ಮತ್ತೆ ಅವಳ ಗಾಳಿಯ ದಿಕ್ಕುತಪ್ಪಿತು. ಅವಳನ್ನು ರೈಟರ್ಸ್ ಯೂನಿಯನ್ನಿಂದ ಹೊರಹಾಕಿದ್ದರು. ಮಗ ಲೆವ್‌ನನ್ನು ಮೂರನೇ ಬಾರಿಗೆ ಸೈಬೀರಿಯಾ ಜೈಲಿಗೆ ಗಡಿಪಾರು ಮಾಡಿದ್ದರು. ಅನಾರೋಗ್ಯ, ಬಡತನ, ಮುಪ್ಪು, ಈ ಜಂಜಾಟದ ನಡುವೆ, ಒಬ್ಬ ಬ್ರಿಟಿಷ್ ವಿದ್ವಾಂಸ ಇಸ್ಮೆಯಾ ಬರ್ಲಿನ್‌ ಎಂಬುವನು ಅವಳನ್ನು ಗುಟ್ಟಾಗಿ ಭೇಟಿಯಾಗಲು ಬಂದಾಗ ಅವಳಲ್ಲಿದ್ದಿದ್ದು ಕರಿಯ ಬ್ರೆಡ್ ಹಾಗೂ ಸಕ್ಕರೆಯಿಲ್ಲದ ಚಹಾ ಮಾತ್ರ. ಹರಿದ ಗೌನಿನಲ್ಲಿದ್ದರೂ ಆಗಲೂ ಅವಳು ಮಹಾರಾಣಿಯಂತೆ ಘನತೆಯಿಂದಲೇ ಇದ್ದಳು. ಅವನೊಡನೆ ಇಡೀ ರಾತ್ರಿ ಕಾವ್ಯ, ಮುಪ್ಪು, ಬಡತನದ ಮಾತಿಗೆ ಜೊತೆಯಾದದ್ದು ಬೇಯಿಸಿದ ಆಲೂಗಡ್ಡೆ ಮಾತ್ರ. ಅವಳ ಕವನಗಳು ಬಾಯಿಂದ ಬಾಯಿಗೆ ಹರಡುವುದು ನಿಲ್ಲಲಿಲ್ಲ! ಕೊನೆಯ ಕವಿತಾ ಸಂಕಲನ ‘ನಾಯಕನಿಲ್ಲದ ಕವಿತೆ’ ಇಪ್ಪತ್ತು ವರುಷ ದೀರ್ಘಕಾಲ ಅವಳಿಂದ ಬರೆಸಿಕೊಂಡಿತು. ಎಲಿಯೆಟ್‌ನ ‘ವೇಸ್ಟ್ ಲ್ಯಾಂಡ್’ನ ಹಾಗೆ –ಪೀಟರ್ಸ್‌ಬರ್ಗ್‌ನ ವೈಭವ, ಅವನತಿ, ಆಳ್ವಿಕೆ, ಕ್ರೂರತೆ, ಆಡಳಿತ, ನೋವುನಲಿವು, ಸಂಸ್ಕೃತಿ, ದಬ್ಬಾಳಿಕೆ ಹೀಗೆ– ಅದೊಂದು ಪೀಟರ್ಸ್‌ಬರ್ಗ್‌ನ ಸಂಪೂರ್ಣ ಬದುಕಿನ ಚಿತ್ರಣ. ಕೊನೆಗೂ ಸ್ಟಾಲಿನ್ ಸತ್ತ. ನಗರ ಶಾಂತವಾಯಿತು. ಅವಳ ಮಗ ಲೆವ್‌ ಬಿಡುಗಡೆ ಪಡೆದಿದ್ದ. ತನ್ನದಲ್ಲದ ತಪ್ಪಿಗೆ ಯೌವ್ವನದ ಹನ್ನೊಂದು ವರುಷಗಳನ್ನು ಅವನು ಶ್ರಮಶಿಬಿರದಲ್ಲಿ ಕಳೆದಿದ್ದ. ಕೊನೆಗೆ ಆತ ಇತಿಹಾಸದ ವಿದ್ವಾಂಸನಾಗಿ ಮುನ್ನಡೆದ ಎಂಬುದು ಸಮಾಧಾನದ ಮಾತು. ಕೊನೆಯ ಹತ್ತು ವರುಷಗಳಲ್ಲಿ ಆನಾಳ ನೆಮ್ಮದಿಯ ದಿನಗಳು ಬಂದವು. ಒತ್ತಾಯದ ಮೇರೆಗೆ ಅವಳು ರೈಟರ್ಸ್ ಯೂನಿಯನ್ನಿನ ಅಧ್ಯಕ್ಷೆಯಾದಳು. ಅವಳ ಮೊದಲನೆ ಗಂಡ ಸತ್ತು ಐವತ್ತು ವರುಷದ ನಂತರ ಕಮರಾವೋ ಹಳ್ಳಿಯಲ್ಲಿ ಅವಳಿಗೆ ಒಂದು ಸ್ವಂತ ಮನೆ ಹಾಗೂ ಅವಳದ್ದೇ ಆದ ಹಟ್ಟಿ ದೊರೆಯಿತು. ಅವಳ ‘ಸಮಗ್ರ ಕಾವ್ಯ -ಕಾಲದ ಹರಿವು’ ಪ್ರಕಟವಾಯಿತು. ಇಟಲಿ ತನ್ನ ಅತ್ಯುನ್ನತ ಪ್ರಶಸ್ತಿಯನ್ನು ಅದಕ್ಕಾಗಿ ಕೊಟ್ಟರೆ ಆಕ್ಸ್‌ಫರ್ಡ್ ಯೂನಿವರ್ಸಿಟಿ ಡಾಕ್ಟರೇಟ್ ನೀಡಿತು. ಕೊನೆಗಾಲದಲ್ಲಿ ಗೊಂದಲವಿಲ್ಲದೆ ಹೃದಯಾಘಾತದಿಂದ ಮಾಸ್ಕೊದ ಡೇಮಾಡೋವೋನಲ್ಲಿ ಆಕೆ ತೀರಿಕೊಂಡಾಗ 75 ವರ್ಷ. ಕಮರಾವೋದಲ್ಲಿ ಮಣ್ಣಾದ ಆನಾಳ ಪ್ರಾರ್ಥನೆಗೆ 5000 ಜನ ಸೇರಿದ್ದರು. ಅದೂ ತರುಣ ತರುಣಿಯರು. ಅವಳು ಬಿಟ್ಟುಹೋದ ಅವಳ ನೆರಳು ಉಕ್ರೇನಿನಿಂದ ಇಲ್ಲಿಯವರೆಗೂ ಸಾಗಿ ಬದುಕಿ ಒಂದು ನಕ್ಷತ್ರದ ಹೆಸರಾಗಿ ಉಳಿದಿದ್ದು ಹೀಗೆ. ಈಗಲೂ ಅವಳ ಮ್ಯೂಸಿಯಂ ಮುಂದೆ ನಿಂತು ಅವಳ ಕವನವನ್ನು ಓದುತ್ತಾ ನಿಲ್ಲುವವರು ಯುವಜನರೇ. ಅವಳು ಹೆಣ್ಣು. ಅದೇ ಅವಳ ಶಕ್ತಿ. (ಆನಾ ಅವರ ಅನುವಾದಿತ ಕವಿತೆಗಳನ್ನು ಸ್ನೇಹಿತರೊಬ್ಬರು ಕೊಟ್ಟ ಶಾ. ಬಾಲೂರಾವ್ ಅವರ ಸಂಗ್ರಹದಲ್ಲಿ ಓದಿದ್ದು. ಅವಳನ್ನು ಹುಡುಕಿದ್ದು, ನಿಮ್ಮ ಮುಂದಿಟ್ಟಿದ್ದು ಆ ಸಂಗ್ರಹದ ಪ್ರಭಾವದಿಂದಲೇ)

courtsey:prajavani.net

https://www.prajavani.net/artculture/article-features/ana-akhmatova-655116.html

Leave a Reply