ಋಗ್ವೇದ ಸ್ಫುರಣ

ಋಗ್ವೇದ ಸ್ಫುರಣ

ಲೇಖಕ : ಎಚ್‌ ಎಸ್‌ ವೆಂಕಟೇಶಮೂರ್ತಿ
ಪ್ರಕಾಶಕರು : ಅಭಿನವ, ನಂ. 17/18–2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು – 40
ಪ್ರಕಟವಾದ ವರ್ಷ : .2017
ಪುಟ : 160
ರೂ :  200

‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಎಂಬುದು ವೇದಗಳ ಬಗ್ಗೆಯೂ ಗಾದೆಗಳ ಬಗ್ಗೆಯೂ ಹುಟ್ಟಿಕೊಂಡಿರುವ ಗಾದೆ. ನಿತ್ಯಜೀವನದ ಅನುಭವಗಳ ಮೂಸೆಯಿಂದ ಮೂಡಿಬಂದ ಜೀವನತತ್ವಗಳ ಸರಳ ರೂಪಕಗಳಂತಿರುವ ಗಾದೆಗಳು ಸುಳ್ಳಾಗುವ ಮಾತೇ ಇಲ್ಲ ಎಂಬುದನ್ನು ನಿರೂಪಿಸಲು ಜನಪದರು ಬಳಸಿಕೊಂಡಿರುವ ಉದಾಹರಣೆ ವೇದ. ಅಂದರೆ, ವೇದ ಸುಳ್ಳಾಗುವ ಮಾತಂತೂ ದೂರ; ಹೀಗಾಗಿ ಗಾದೆಯೂ ಸುಳ್ಳಾಗದು ಎಂಬುದು ಜನಪದರ ನಂಬಿಕೆ. ಆದರೆ, ಗಾದೆಮಾತುಗಳು ಜನಸಾಮಾನ್ಯರ ಬಾಯಲ್ಲಿ ಹರಿದಾಡುವಂತೆ ವೇದದ ಮಾತುಗಳು ಏಕೆ ಸಾಮಾನ್ಯರಿಗೆ ದಕ್ಕಲಿಲ್ಲ ಎಂಬುದು ಮುಖ್ಯವಾದ ಪ್ರಶ್ನೆ. ಇದಕ್ಕೆ ಪ್ರಮುಖ ಕಾರಣ ಭಾಷೆ, ಸಂಪ್ರದಾಯ ಮತ್ತು ಸಾಮಾಜಿಕ ಸಂದರ್ಭ.

ಸಂಸ್ಕೃತದಲ್ಲಿ ಮೂಡಿರುವ ವೇದಗಳು ಬಹುಕಾಲದವರೆಗೂ ಒಂದು ಸಮುದಾಯದ ಸಂಪತ್ತು ಮಾತ್ರ ಎಂಬಂತಿದ್ದವು. ಆದರೂ ವೇದಗಳ ಸಾರವನ್ನು ಕನ್ನಡಕ್ಕೆ ತರುವ ಪ್ರಯತ್ನವನ್ನು ಕವಿಗಳು, ವಚನಕಾರರು, ದಾಸರು ಕಾಲಕಾಲಕ್ಕೆ ಮಾಡಿದ್ದಾರೆ. ಸಾವಿರಾರು ವರ್ಷಗಳ ಹಿಂದೆ ರೂಪುಗೊಂಡ ವೇದಗಳು ಋಷಿ– ಮುನಿಗಳ ಪರಂಪರೆಯ ಮೂಲಕ ಮೂಲಸ್ವರೂಪದಲ್ಲೂ ಇಲ್ಲಿಯವರೆಗೆ ಉಳಿದುಕೊಂಡು ಬಂದಿವೆ. ಸಂಸ್ಕೃತ ಮೂಲದಲ್ಲಿರುವ ವೇದಗಳನ್ನು ಬೇರೆ ಬೇರೆ ಭಾಷೆಗಳಿಗೆ ಅನುವಾದಿಸುವ ಕೆಲಸವೂ ಸಾಕಷ್ಟು ನಡೆದಿದೆ. ಕನ್ನಡದಲ್ಲೂ ವೇದಗಳ ಅನುವಾದ ಗ್ರಂಥಗಳು ಪ್ರಕಟವಾಗಿವೆ. ಆದರೆ, ವೇದಗಳು ಕನ್ನಡದಲ್ಲಿ ಪದ್ಯದ ಮೈ ಪಡೆದಿರುವುದು ವಿರಳ.

ಭತೃಹರಿಯ ‘ವೈರಾಗ್ಯ ಶತಕ’, ಕೆಲ ಉಪನಿಷತ್‌ಗಳನ್ನು ಹೊಸಗನ್ನಡದ ಪದ್ಯಗಳಲ್ಲಿ ಹಿಡಿದಿಡುವ ಪ್ರಯತ್ನ ಸ್ವಲ್ಪ ಪ್ರಮಾಣದಲ್ಲಿ ನಡೆದಿದೆ. ಆದರೆ, ವೇದಗಳನ್ನು ಅನುವಾದದಲ್ಲಿ ಪದ್ಯರೂಪದಲ್ಲಿ ಕನ್ನಡಕ್ಕೆ ತಂದಿರುವ ಉದಾಹರಣೆಗಳು ಕಡಿಮೆ. ಇಂಥ ವಿರಳವಾದ ಕೆಲಸವನ್ನು ಹಿರಿಯ ಕವಿ ಎಚ್.ಎಸ್‌. ವೆಂಕಟೇಶಮೂರ್ತಿ ಕೈಗೆತ್ತಿಕೊಂಡಿದ್ದಾರೆ. ತಮ್ಮ ಇತ್ತೀಚಿನ ‘ಋಗ್ವೇದ ಸ್ಫುರಣ’ ಕೃತಿಯ ಮೂಲಕ ಅವರು ಋಗ್ವೇದದ ಆಯ್ದ ಋಕ್ಕುಗಳನ್ನು ತಿಳಿಗನ್ನಡ ಪದ್ಯಗಳಲ್ಲಿ ಹೇಳಲು ಪ್ರಯತ್ನಿಸಿದ್ದಾರೆ.

ಈ ಹಿಂದೆ ಪಂಪನ ‘ಆದಿಪುರಾಣ’ ಮತ್ತು ಕುಮಾರವ್ಯಾಸನ ಭಾರತವನ್ನು ತಿಳಿಗನ್ನಡಕ್ಕೆ ತಂದಿರುವ ಎಚ್‌ಎಸ್‌ವಿ ಈಗ ವೇದಗಳ ಕಡೆ ತಮ್ಮ ಚಿತ್ತ ಹರಿಸಿದ್ದಾರೆ. ಋಗ್ವೇದದ ಆಯ್ದ ಋಕ್ಕುಗಳನ್ನು ಮಾತ್ರ ತಿಳಿಗನ್ನಡದ ಪದ್ಯಗಳಲ್ಲಿ ಕಟ್ಟಿಕೊಟ್ಟಿರುವುದರಿಂದ ಇಡಿಯಾಗಿ ಋಗ್ವೇದ ಇಲ್ಲಿ ಕನ್ನಡಗೊಂಡಿಲ್ಲ.

ಎರಡು ಭಾಗಗಳಲ್ಲಿ ಋಗ್ವೇದದ ಋಕ್ಕುಗಳು ಇಲ್ಲಿ ತಿಳಿಗನ್ನಡಕ್ಕೆ ಬಂದಿವೆ. ಮೊದಲ ಭಾಗದಲ್ಲಿ ಅಗ್ನಿ, ಸೋಮ, ಇಂದ್ರರೇ ಮೊದಲಾದ ದೇವತೆಗಳು ಹಾಗೂ ಜೀವನತತ್ವಗಳ ಬಗೆಗಿನ ಪದ್ಯಗಳಿದ್ದರೆ ಎರಡನೇ ಭಾಗದಲ್ಲಿ ಋಗ್ವೇದ ಕಾಲದ ಜನರ ನಂಬಿಕೆಗಳ ಬಗೆಗಿನ ಕೆಲವು ಪದ್ಯಗಳಿವೆ. ಮೊದಲ ಭಾಗದಲ್ಲಿ ತಿಳಿಗನ್ನಡ ಪದ್ಯಗಳ ಕೆಳಗೇ ಆ ಪದ್ಯಗಳ ಸಣ್ಣ ವಿವರಣೆಯನ್ನೂ ಕೊಡಲಾಗಿದೆ. ಪದ್ಯವೇ ತಿಳಿಗನ್ನಡದಲ್ಲಿ ಮೂಡಿಬಂದಿರುವುದರಿಂದ ಮತ್ತೆ ಇಂಥ ವಿವರಗಳು ಬೇಕಾಗಿರಲಿಲ್ಲ. ಹಲವು ಕಡೆ ಪದ್ಯ ಹೇಳುವುದಕ್ಕಿಂತ ಹೆಚ್ಚೇನನ್ನೂ ಈ ವಿವರಣೆಗಳು ಹೇಳುವುದಿಲ್ಲ.

ಋಗ್ವೇದದ ಋಕ್ಕುಗಳಿಗೆ ಕನ್ನಡದ ಮೈಹೊಂದಿಸುವ ಕಡೆಗಷ್ಟೇ ಇಲ್ಲಿ ಗಮನಕೊಡಲಾಗಿದೆ. ಪದ್ಯಗಳ ಲಯಕ್ಕೆ ಇಲ್ಲಿ ಹೆಚ್ಚು ಒತ್ತು ಕೊಡಲಾಗಿದೆಯೇ ಹೊರತು ಈ ಪದ್ಯಗಳನ್ನು ಕನ್ನಡದಲ್ಲಿ ಹೊಸತೆನ್ನುವಂತೆ ರೂಪಿಸುವ ಪ್ರಯತ್ನ ನಡೆದಿಲ್ಲ. ಲಯದಲ್ಲೂ ಇಲ್ಲಿ ಹೊಸ ವಿನ್ಯಾಸಗಳೇನೂ ಇಲ್ಲ. ಕನ್ನಡ ಭಾಷೆಯ ಸತ್ವ ಹಾಗೂ ಕಾವ್ಯದ ಹೊಸಲಯದೊಂದಿಗೆ ವೇದವನ್ನು ಹೊಸತೆನಿಸುವಂತೆ ಹೇಳುವ ಪ್ರಯತ್ನ ಇಲ್ಲಿ ಕಾಣದು. ಸಾವಿರಾರು ವರ್ಷಗಳ ಹಿಂದಿನ ಋಗ್ವೇದವನ್ನು ಇಂದಿನ ಸಂದರ್ಭಕ್ಕೆ ಹೊಸತಾಗಿ ಮರುರೂಪಿಸಲು ಇದ್ದ ಸಾಧ್ಯತೆಯನ್ನು ಎಚ್‌ಎಸ್‌ವಿ ಇಲ್ಲಿ ಕೈ ಬಿಟ್ಟಿದ್ದಾರೆ.

Courtesy : Prajavani.net

http://www.prajavani.net/news/books/2017/08/19/514622.html

Leave a Reply