‘ಕಲೆಯಾಗಿಯೂ ಅರಳಬಹುದು’

‘ಕಲೆಯಾಗಿಯೂ ಅರಳಬಹುದು’

ಒತ್ತಡಕ್ಕೆ ಎರಡು ರೀತಿಯ ಕಷ್ಟಗಳು ಕಾರಣ; ಒಂದು ವೈಯಕ್ತಿಕವಾದುದು, ಮತ್ತೊಂದು ವ್ಯಾವಹಾರಿಕವಾದುದು. ಒತ್ತಡಗಳು ನಮಗೆ ಅನುಭವವನ್ನು ಕೊಡುತ್ತವೆ. ಈ ಅನುಭವಗಳಿಗೆ ಸೃಷ್ಟಿಶೀಲ ಸ್ವರೂಪವನ್ನೂ ಕೊಡಬಹುದು ಎನ್ನುವುದು ನಿರ್ದೇಶಕ ಟಿ. ಎನ್. ಸೀತಾರಾಂ ಅವರ ಮಾತು…

ನನಗೆ ಐದು ಮುಖಗಳಿವೆ. ಮೊದಲನೆಯದಾಗಿ ನಾನು ರೈತ, ಎರಡನೆಯದ್ದು ಸಂಸಾರದಲ್ಲಿ ನಾನೊಬ್ಬ ತಂದೆ, ಮೂರನೆಯದ್ದು ಕಿರುತೆರೆಯಲ್ಲಿ ನಿರ್ದೇಶಕ–ನಿರ್ಮಾಪಕ, ನಾಲ್ಕನೆಯದ್ದು ಚಲನಚಿತ್ರ ನಿರ್ದೇಶಕ, ಐದನೆಯದ್ದು ನಾನೊಬ್ಬ ಬರಹಗಾರ. ಇವಿಷ್ಟೂ ನನ್ನ ಕಾರ್ಯಕ್ಷೇತ್ರಗಳು.

ಈ ಎಲ್ಲ ಕ್ಷೇತ್ರಗಳಲ್ಲಿ ಒತ್ತಡದ ರೀತಿ ಬೇರೆ ಬೇರೆಯದ್ದಾಗಿರುತ್ತದೆ. ಒಬ್ಬ ರೈತನಾಗಿ ಮಳೆ ಬರುತ್ತದೋ ಇಲ್ಲವೋ, ಮಳೆ ಜಾಸ್ತಿ ಬಂದರೆ ಎಲ್ಲಿ ಬೆಳೆ ನಷ್ಟವಾಗುತ್ತದೋ, ಈ ವರ್ಷ ಫಸಲು ಚೆನ್ನಾಗಿ ಬಂದರೆ ಬಂತು, ಇಲ್ಲದಿದ್ದರೆ ಇಲ್ಲ – ಇಂಥ ಒತ್ತಡಗಳು ರೈತನಾಗಿ ನನ್ನನ್ನು ಕಾಡುತ್ತಿತ್ತು.

ಇನ್ನು ವೈಯಕ್ತಿಕವಾಗಿ ಕಷ್ಟ ಬಂದಾಗ ಈ ಕಷ್ಟಗಳನ್ನು ಎದುರಿಸುವುದು ಹೇಗೆ? ಇದರಿಂದ ಹೊರ ಬರುವುದು ಹೇಗೆ? ಎಂದುಕೊಂಡು ತೀವ್ರವಾಗಿ ಯೋಚನೆ ಮಾಡುವುದೇ ಒತ್ತಡ. ಇಂದು ನಮ್ಮನ್ನು ಕಾಡುವ ಒತ್ತಡ ನಾಡಿದ್ದು ನಮ್ಮ ಬಳಿ ಸುಳಿಯದೇ ಇರಬಹುದು. ಹೀಗೆ ಒತ್ತಡದ ಸ್ವರೂಪವೂ ದಿನದಿಂದ ದಿನಕ್ಕೆ ಬದಲಾಗಬಹುದು.

ಒತ್ತಡದಿಂದ ತಪ್ಪಿಸಿಕೊಳ್ಳಲು ಬರೆಯಬಹುದು, ಸ್ನೇಹಿತರ ಜೊತೆ ಬೆರೆಯಬಹುದು, ಒಂದು ಒಳ್ಳೆಯ ಸಿನಿಮಾವನ್ನು ನೋಡಬಹುದು. ಆದರೆ ಸಂಪೂರ್ಣ ಒತ್ತಡದಲ್ಲಿದ್ದಾಗ ಇದಾವುದೂ ಒತ್ತಡವನ್ನು ಕಡಿಮೆ ಮಾಡುವುದಿಲ್ಲ. ಒಂದು ಹಂತದ ಒತ್ತಡವಿದ್ದಾಗ ಮಾತ್ರ ಇವು ಕೆಲಸ ಮಾಡುತ್ತವೆ.

ಒತ್ತಡವನ್ನು ನಿವಾರಿಸಿಕೊಳ್ಳುವ ಸಾಮರ್ಥ್ಯ ಮನಸ್ಸಿಗೆ ಬಂದಾಗ ಅದನ್ನು ನಿವಾರಿಸಿಕೊಂಡು ಅದನ್ನೇ ಒಂದು ಕೃತಿಯನ್ನಾಗಿ ಮಾಡಲು ಸಾಧ್ಯ. ನನ್ನ ಧಾರಾವಾಹಿಯಲ್ಲಿ ಬರುವಂತಹ ಹೆಚ್ಚಿನ ಕಷ್ಟದ ಸನ್ನಿವೇಶಗಳೆಲ್ಲವೂ ನಾನು ನೋಡಿರುವಂಥದ್ದು ಅಥವಾ ಅನುಭವಿಸಿರುವಂಥದ್ದು. ಇವೆಲ್ಲ ನಮ್ಮ ಆಂತರಿಕ ಒತ್ತಡಗಳು.

ಸಾಮಾನ್ಯವಾಗಿ ಒತ್ತಡ ಎರಡು ರೀತಿಯ ಕಷ್ಟಗಳಿಂದ ಎದುರಾಗುತ್ತದೆ. ಒಂದು ವೈಯಕ್ತಿಕ ಕಷ್ಟ, ಇನ್ನೊಂದು ವ್ಯಾವಹಾರಿಕ ಕಷ್ಟ. ನನ್ನನ್ನು ಯಾವಾಗಲೂ ಹೆಚ್ಚು ಕಾಡುವುದು ಯಾವುದೇ ಒಂದು ಬರಹದ ಆರಂಭದ ವಾಕ್ಯ. ಮೊದಲ ಹಾಗೂ ಎರಡನೇ ವಾಕ್ಯ ಆರಂಭಿಸಿದರೆ ಮೂರು, ನಾಲ್ಕು, ಐದು – ಹೀಗೆ ಸಾಲು ಸುಲಲಿತವಾಗಿ ಮುಂದುವರೆಯುತ್ತದೆ.

ಮೊದಲ ವಾಕ್ಯ ಹೇಗೆ ಒತ್ತಡ ತರಿಸುತ್ತದೆ ಎಂದರೆ ‘ನನ್ನ ನೆನಪನ್ನು ಬರೆಯುವುದಾ’, ‘ನನ್ನ ಅನುಭವವನ್ನು ಬರೆಯುವುದಾ’ ಅಥವಾ ‘ಇಂದು ಜನಕ್ಕೆ ಏನು ಬೇಕು ಎಂಬುದನ್ನು ಬರೆಯುವುದಾ’ – ಎಂಬೆಲ್ಲ ಅಂಶವನ್ನು ತಲೆಯಲ್ಲಿ ಇರಿಸಿಕೊಂಡು ಯಾವ ರೀತಿ ಬರೆಯಬೇಕು ಎಂಬುದನ್ನು ನಿರ್ಧಾರ ಮಾಡಬೇಕಾಗುತ್ತದೆ. ಆಗ ಒತ್ತಡ ಕಾಡುತ್ತದೆ.

ಕೆಲವೊಮ್ಮೆ ಎರಡು ವರ್ಗದವರನ್ನು ತಲೆಯಲ್ಲಿ ಇಟ್ಟುಕೊಂಡು ಕತೆ ಬರೆದರೆ ‘ಇವರಿಗಾಗಿ ಬರೆಯುವುದಾ? ಅವರಿಗಾಗಿ ಬರೆಯುವುದಾ?’ ಅಥವಾ ಎರಡನ್ನೂ ಸೇರಿಸಿ ಬರೆಯುವುದಾ?’ – ಹೀಗೆ ಮಾಡಿದರೆ ನನ್ನ ಕ್ರಿಯಾಶೀಲತೆ ಏನಾಗುತ್ತದೆ ಎಂಬ ವಿಚಾರ ಕೂಡ ಒತ್ತಡಕ್ಕೆ ಕಾರಣವಾಗುತ್ತದೆ.

ಕ್ರಿಯಾಶೀಲತೆ ಇಲ್ಲವಾದಲ್ಲಿ ಸೃಷ್ಟಿಗಿಂತ ಲೆಕ್ಕಾಚಾರವೇ ಆಗುತ್ತದೆ. ಆದರೆ ಒಂದು ಕತೆ ಎಂದರೆ ಲೆಕ್ಕಾಚಾರ ಹಾಗೂ ಕತೆ  – ಎರಡೂ ಆಗಬೇಕು. ಲೆಕ್ಕಾಚಾರ ಬಿಡುವ ಹಾಗೂ ಇಲ್ಲ; ಏಕೆಂದರೆ ನಾನು ನಿರ್ದಿಷ್ಟ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ಕತೆ ಮಾಡಬೇಕಾಗುತ್ತದೆ.

ನಾವು ಯಾವತ್ತು ಇನ್ನೊಬ್ಬರ ಮನಸ್ಸನ್ನು ನೇರವಾಗಿ ಮುಟ್ಟಲು ಸಾಧ್ಯವಿಲ್ಲ. ಆದರೆ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಊಹಿಸಬಹುದು. ಅಂದರೆ ಊಹೆ ಮತ್ತು ನಿಜದ ನಡುವೆ ಇದ್ದು ಬರೆಯುವುದು ಒತ್ತಡ ಎನ್ನಿಸುತ್ತದೆ. ಒಬ್ಬ ಸೃಷ್ಟಿಶೀಲ ಬರಹಗಾರನಿಗೆ ಆಂತರಿಕ ಒತ್ತಡ ಈ ರೀತಿ ಬರುತ್ತದೆ. ‌‌ಇದನ್ನು ಹೇಗೆ ನಿವಾರಿಸಬಹುದು ಎಂದರೆ, ‘ಮೊದಲು ಇದನ್ನು ಬರೆದುಬಿಡೋಣ. ಬರೆದು ಅದರ ಅನುಭವವನ್ನು ನಾಳೆ ನೋಡೋಣ, ನಾಳಿನ ಅನುಭವದ ಮೇಲೆ ಮತ್ತೆ ಬರೆಯೋಣ, ತಪ್ಪನ್ನು ಸರಿಮಾಡಿಕೊಳ್ಳುವುದು, ಸರಿಯನ್ನು ಇನ್ನಷ್ಟು ಸರಿಮಾಡಿಕೊಳ್ಳುವುದು ಮಾಡುತ್ತಾ ಹೋಗೋಣ’ ಎಂದುಕೊಳ್ಳಬೇಕು.

ಒಂದು ಸಿನಿಮಾ ಮಾಡಿದಾಗ ಆ ಸಿನಿಮಾಕ್ಕೆ ಜನರು ಬರುತ್ತಾರೋ ಇಲ್ಲವೋ ಎಂಬ ಒತ್ತಡವಿರುತ್ತದೆ. ಏಕೆಂದರೆ ಅದಕ್ಕೆ ದೊಡ್ಡ ಮಟ್ಟದ ಬಂಡವಾಳವನ್ನು ಹಾಕಿರುತ್ತಾರೆ. ನಮ್ಮ ಸಿನಿಮಾದ ಜೊತೆಗೆ ಬೇರೆ ಯಾವ ಸಿನಿಮಾ ಬಿಡುಗಡೆಯಾಗುತ್ತದೋ, ಎಲ್ಲಿ ಮಳೆ ಬರುತ್ತದೋ ಈ ರೀತಿಯ ಗೊಂದಲದ ನಡುವಿನ ಒತ್ತಡವಿರುತ್ತದೆ. ‌ಆಗ ವಿಫಲಗೊಳ್ಳುವ ಅಂಚಿನಲ್ಲಿರುತ್ತೇವೆ. ಅದರಲ್ಲಿ ಸೋಲಲೂಬಹುದು, ಗೆಲ್ಲಲೂಬಹುದು. ಸೋತರೆ ಆ ಸೋಲು ಮಾನಸಿಕವಾಗಿ ಕುಗ್ಗಿಸುತ್ತದೆ. ಆ ಕುಗ್ಗುವ ಒತ್ತಡ ಬಹಳ ಕಷ್ಟ.

ನಾನು ಒತ್ತಡ ನಿರ್ವಹಣೆಗೆ ಸಂಗೀತ ಕೇಳುತ್ತೇನೆ. ನನಗೆ ಹಿಂದೂಸ್ತಾನಿ ಸಂಗೀತವೆಂದರೆ ಬಹಳ ಇಷ್ಟ. ಬರೆಯುವಾಗ ಸ್ವಲ್ಪ ಸಮಯ ಸಂಗೀತವನ್ನು ಕೇಳುತ್ತೇನೆ. ಆಗ ಒತ್ತಡ ಕಡಿಮೆಯಾಗುತ್ತದೆ. ನಮ್ಮೂರಿನ ಜಮೀನುಗಳಿಗೆ ಹೋಗಿ ಅಲ್ಲೊಂದಿಷ್ಟು ಸಮಯ ಕಳೆದರೂ ನನ್ನ ಒತ್ತಡ ನಿವಾರಣೆಯಾಗುತ್ತದೆ. ಒತ್ತಡ ಕಡಿಮೆ ಮಾಡುವ ಇನ್ನೂ ಒಂದು ತಂತ್ರವಿದೆ. ಅದೇನೆಂದರೆ ಸಮಯ ಎಲ್ಲವನ್ನೂ ಮರೆಸುತ್ತದೆ ಎಂಬ ನಂಬಿಕೆ. ಒಂದಿಷ್ಟು ಸಮಯ ಕಳೆದರೆ ಎಲ್ಲವೂ ಬದಲಾಗುತ್ತದೆ. ಆಗ ಒತ್ತಡ ತಾನಾಗಿಯೇ ಕಡಿಮೆಯಾಗುತ್ತದೆ.

ಹಿಂದಿಗೂ ಇಂದಿಗೂ ಒತ್ತಡದ ಪ್ರಮಾಣದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಈಗ ಒತ್ತಡ ತುಂಬಾ ಹೆಚ್ಚಾಗಿದೆ. ಮೊದಲು ನಾನು ವ್ಯವಸಾಯ ಮಾಡಿಕೊಂಡು ಗೌರಿಬಿದನೂರಿನಲ್ಲಿದ್ದೆ. ಆವಾಗ ಬರೆಯುತ್ತಿದ್ದೆ. ಆಗ ಸ್ವಲ್ಪವೂ ಒತ್ತಡವಿರಲಿಲ್ಲ. ಸಣ್ಣಪುಟ್ಟ ಬೆಳೆಗಳ ನಷ್ಟವಾದರೂ ಒತ್ತಡವಾಗುತ್ತಿರಲಿಲ್ಲ.

ಬೆಂಗಳೂರಿಗೆ ಬಂದ ಮೇಲೆ ಒತ್ತಡದ ಅರಿವಾಯಿತು, ಇಲ್ಲಿ ಪ್ರೇಕ್ಷಕರ ಸ್ಪರ್ಧೆಯಿಂದ ಹಿಡಿದು, ನಾನು ಬರೆಯುವ ಕತೆಯಿಂದ ಹಿಡಿದು ಎಲ್ಲವೂ ಒತ್ತಡವೇ. ಏಕೆಂದರೆ ಇಲ್ಲಿ ಸ್ಪರ್ಧೆ ಜಾಸ್ತಿ ಇದೆ. ಮೊದಲೆಲ್ಲಾ ದೂರದರ್ಶನದಲ್ಲಿ ವಾರಕ್ಕೆ ಒಂದೊಂದು ಧಾರಾವಾಹಿ ಇತ್ತು. ಈಗ ದಿನಕ್ಕೆ 64 ಧಾರಾವಾಹಿಗಳು ಬರುತ್ತಿರುತ್ತವೆ. ಹಾಗಾಗಿ ಅದರ ಮಧ್ಯೆ ಓಡುವುದು ಒತ್ತಡ ಎನ್ನಿಸುತ್ತಿತ್ತು. ಆದರೆ ಎಷ್ಟೇ ಒತ್ತಡ ಎನ್ನಿಸಿದರೂ ಅದನ್ನು ಮೀರುವ ದಾರಿಗಳನ್ನೂ ಹುಡುಕಿಕೊಳ್ಳುವುದು ನಮ್ಮ ಕೈಯಲ್ಲೇ ಇರುತ್ತದೆ.

Courtesy : Prajavani.net

http://www.prajavani.net/news/article/2017/12/07/538307.html

Leave a Reply