ಗಂಡು–ಹೆಣ್ಣಿನ ಸಾಮರಸ್ಯದ ‘ಶಿಖಂಡಿ’

ಗಂಡು–ಹೆಣ್ಣಿನ ಸಾಮರಸ್ಯದ ‘ಶಿಖಂಡಿ’

ಕರ್ನಾಟಕ ನಾಟಕ ಅಕಾಡೆಮಿ ಹಾಗೂ ‘ಪ್ರಜಾವಾಣಿ’ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ನಾಟಕ ವಿಮರ್ಶೆ ಸ್ಪರ್ಧೆಯಲ್ಲಿ ಪುರಸ್ಕೃತವಾದ ರಂಗ ವಿಮರ್ಶೆ ಇಲ್ಲಿದೆ.

ಗಂ ಡಾಗಲೀ, ಹೆಣ್ಣಾಗಲೀ ಯಾರೂ ಪರಿಪೂರ್ಣರಲ್ಲ. ಪ್ರತಿ ಪುರುಷನಲ್ಲಿ ಹೆಣ್ಣಿನಂಶವೂ, ಹೆಣ್ಣಿನಲ್ಲಿ ಗಂಡಿನಂಶವೂ ಇರುತ್ತದೆ. ಸಂದರ್ಭದ ಕಾರಣದಿಂದ ಅವುಗಳು ಸ್ಫುಟಗೊಳ್ಳುತ್ತವೆ. ಪುರಾಣದ ಅರ್ಧನಾರೀಶ್ವರ ಪರಿಕಲ್ಪನೆಯಲ್ಲಿಯೂ ಇದು ವ್ಯಕ್ತವಾಗಿದೆ. ಗಂಡು, ಹೆಣ್ಣು ಹಾಗೂ ಇವೆರಡರ ನಡುವಿನ ತೃತೀಯ ಲಿಂಗವನ್ನು ಕುರಿತು ಇಂದು ಜಾಗತಿಕವಾಗಿ ಚರ್ಚೆಯಾಗುತ್ತಿದೆ.

ಇಂತಹ ಸಮಕಾಲೀನ ಸಂಗತಿಯನ್ನು ಪುರಾಣದ ನೆಲೆಯಲ್ಲಿ ಮುಂಬೈನ ಫೌಜೆ ಜಲಾಲಿ ಅವರು ರಚಿಸಿ ನಿರ್ದೇಶನ ಮಾಡಿದ ‘ಶಿಖಂಡಿ’ ನಾಟಕವು ಸಿಜಿಕೆ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಶಿಖಂಡಿಗೆ ಜನ್ಮಾಂತರದ ಸಂಬಂಧವಿದೆ. ಭೀಷ್ಮನು ವಿಚಿತ್ರವೀರ್ಯನಿಗೆ ಮದುವೆ ಮಾಡಲು ಕಾಶಿ ರಾಜನ ಮೂವರು ಮಕ್ಕಳಾದ ಅಂಬೆ, ಅಂಬಿಕೆ ಹಾಗೂ ಅಂಬಾಲಿಕೆಯರನ್ನು ಬಲಾತ್ಕಾರದಿಂದ ಕರೆತರುತ್ತಾನೆ. ಆದರೆ ಹಿರಿಯಳಾದ ಅಂಬೆ ಈಗಾಗಲೇ ಮತ್ತೊಬ್ಬ ರಾಜಕುಮಾರನೊಂದಿಗೆ ಅನುರಕ್ತಳಾಗಿರುವುದಾಗಿ ತಿಳಿಸಿ, ಮರಳುತ್ತಾಳೆ. ಭೀಷ್ಮನಿಂದ ಸೋಲನ್ನನುಭವಿಸಿದ ಅವಳ ಪ್ರಿಯಕರನು ಅಂಬೆಯನ್ನು ವರಿಸಲು ನಿರಾಕರಿಸಿದಾಗ ಭೀಷ್ಮನೇ ತನ್ನನ್ನು ವರಿಸುವಂತೆ ವಿನಂತಿಸಿಕೊಳ್ಳುತ್ತಾಳೆ. ತನ್ನ ಶಪಥದ ಕಾರಣದಿಂದಾಗಿ ಭೀಷ್ಮನು ಅವಳನ್ನು ವರಿಸಲು ನಿರಾಕರಿಸಲು, ಅವನ ಗುರುವಾದ ಪರಶುರಾಮರನ್ನು ಕರೆತರುತ್ತಾಳೆ. ಅದರಲ್ಲಿಯೂ ವಿಫಲಳಾಗಿ ಮುಂದೆ ದ್ರುಪದ ರಾಜನಿಗೆ ಶಿಖಂಡಿಯಾಗಿ ಹುಟ್ಟುತ್ತಾಳೆ. ತೃತೀಯಲಿಂಗಿ ಶಿಖಂಡಿಯು ಕಾಡಿನಲ್ಲಿ ಯಕ್ಷನ ಕಾರಣದಿಂದ ಲಿಂಗಪರಿವರ್ತಿತನಾಗುತ್ತಾನೆ. ಜನ್ಮಾಂತರದ ಸೇಡನ್ನು ಅರ್ಜುನನು ಶಿಖಂಡಿಯನ್ನು ಮುಂದೆ ಮಾಡಿಕೊಂಡು ಭೀಷ್ಮನನ್ನು ಕೊಲ್ಲುವುದರೊಂದಿಗೆ ಮುಕ್ತಾಯವಾಗುತ್ತದೆ. ಪುರಾಣದಲ್ಲಿ ಶಿಖಂಡಿಯ ಪಾತ್ರವು ಅತ್ಯಂತ ಸಂಕೀರ್ಣವಾಗಿದೆ. ಪುರುಷನ ಅಹಂಕಾರವನ್ನು ಮುರಿಯುವ ನೆಲೆಯಲ್ಲಿ ಹಾಗೂ ಯಾರೂ ಪರಿಪೂರ್ಣರಲ್ಲವೆಂಬುದನ್ನು ಸಾಂಕೇತಿಕವಾಗಿ ಹೇಳುತ್ತದೆ.

ನಾಟಕಗಾರ್ತಿ ಮತ್ತು ನಿರ್ದೇಶಕಿ ಫೌಜೆ ಜಲಾಲಿ, ಪ್ರಸ್ತುತ ನಾಟಕದಲ್ಲಿ ಲಿಂಗ ಅಸಮಾನತೆ ಹಾಗೂ ತೃತೀಯ ಲಿಂಗಿಗಳ ನೆಲೆಯಲ್ಲಿ ಕೆಲವು ಪ್ರಶ್ನೆಗಳನ್ನು ಎತ್ತುವುದರ ಮೂಲಕ ನಾಟಕವನ್ನು ವಿಸ್ತರಿಸಿದ್ದಾರೆ. ಸೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದನ್ನು ಕಥನದ ಹಿನ್ನೆಲೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಪುರಾಣದಲ್ಲಿರುವ ಶಿವ–ಶಿವೆಯರ ಅರ್ಧನಾರೀಶ್ವರ ತತ್ವವನ್ನು ನಾಟಕದಲ್ಲಿ ಇನ್ನಷ್ಟು ವಿಸ್ತರಿಸಿದ್ದಾರೆ. ಸ್ವತಃ ಅರ್ಜುನನು ವಿರಾಟನಗರದಲ್ಲಿ ಬೃಹನ್ನಳೆಯಾಗಿದ್ದ ಸಂದರ್ಭವನ್ನು ಕೂಡ ಸಾಂಕೇತಿಕವಾಗಿ ತಂದಿದ್ದಾರೆ. ತಮ್ಮ ನಿರ್ದಿಷ್ಟವಾದ ಉದ್ದೇಶಕ್ಕೆ ಸಾಕಷ್ಟು ಸಿದ್ಧತೆಯನ್ನು ಮಾಡಿಕೊಂಡೇ ನಾಟಕವನ್ನು ರಚಿಸಿರುವ ಫೌಜೆ, ನಾಟಕದ ವಿನ್ಯಾಸ ಮತ್ತು ನಿರ್ದೇಶನಕ್ಕೂ ಸಾಕಷ್ಟು ಸಿದ್ಧತೆಯನ್ನು ಮಾಡಿಕೊಂಡಿರುವುದು ಪ್ರತಿ ದೃಶ್ಯದಲ್ಲಿಯೂ ವ್ಯಕ್ತವಾಗುತ್ತದೆ. ಗಂಭೀರವಾದ ವಿಷಯವನ್ನು ನಿರ್ದೇಶಕರು ವಿಡಂಬನೆ ಹಾಗೂ ತಿಳಿಹಾಸ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ.

ವಸ್ತ್ರವಿನ್ಯಾಸದಲ್ಲಿ ಅರ್ಧ ಮೇಲುವಸ್ತ್ರ ಹಾಗೂ ಅರ್ಧ ಧೋತಿ ಗಮನ ಸೆಳೆಯಿತು. ಮೇಲುವಸ್ತ್ರದ ವಿನ್ಯಾಸದಲ್ಲಿ ಆಧುನಿಕತೆಯನ್ನೂ, ಧೋತಿಯಲ್ಲಿ ಪಾರಂಪರಿಕತೆಯನ್ನು ತಂದಿದ್ದಾರೆ. ಗುಂಪಿನಲ್ಲಿ ಕಲಾವಿದರು ನಾಲ್ವರು ಬಿಳಿಯ ಬಣ್ಣವನ್ನು ಹಾಗೂ ನಾಲ್ವರು ಕಪ್ಪು ಬಣ್ಣದ ವಸ್ತ್ರವನ್ನು ಧರಿಸುವಲ್ಲಿಯೂ ನಾಟಕದ ಆಶಯವಿದೆ. ಎಲ್ಲ ಪಾತ್ರಧಾರಿಗಳಿಗೂ ಒಂದು ನಿರ್ದಿಷ್ಟವಾದ ಚಲನೆಯನ್ನು ಕೊಟ್ಟಿದ್ದಾರೆ. ಕಥನವನ್ನು ಪ್ರಧಾನವಾಗಿ ಹೇಳುತ್ತಲೇ ಆಂಗಿಕವಾದ ಅಭಿನಯದ ಮೂಲಕ ಹಲವು ಚರ್ಚೆಗಳನ್ನು ಹುಟ್ಟುಹಾಕುತ್ತಾರೆ. ನಾಟಕದಲ್ಲಿ ಕಥನವು ವೇಗವನ್ನು ಪಡೆದುಕೊಂಡಿದೆ. ಉಸಿರು ಬಿಗಿಹಿಡಿಯುವಷ್ಟು ವೇಗವನ್ನು ಪಡೆದಿರುವ ಕಥನಕ್ಕೆ ಪೂರಕವಾಗಿ ಕಲಾವಿದರನ್ನು ಸಮರ್ಥವಾಗಿ ದುಡಿಸಿಕೊಂಡಿದ್ದಾರೆ. ನಾಟಕದ ವೇಗವು ಕಥನಕ್ಕೆ ಅಡ್ಡಿಯಾಗದೆ, ಸಂವಹನಕ್ಕೆ ಪೂರಕವಾಗಿದೆ.

ನಾಟಕದಲ್ಲಿ ರಂಗಪರಿಕರವಾಗಿ ಬಿದಿರನ್ನು ಬಳಸಿಕೊಳ್ಳುವಲ್ಲಿ ಕಲಾತ್ಮಕತೆಯು ಕಂಡುಬರುತ್ತದೆ. ಬಿದಿರಿನ ತಡಿಕೆಯು ರಂಗದ ಬಲಬದಿಯಲ್ಲಿ ಸುರುಳಿಯಾಕಾರವಾಗಿ ಹರಡಿಕೊಂಡು, ವಿಸ್ತರಿಸುತ್ತಾ ಮುಂದಕ್ಕೆ ಚಾಚಿಕೊಂಡಿದೆ. ರಂಗದ ಮೇಲ್ಭಾಗದಲ್ಲಿ ಬಿದಿರಿನ ತಡಿಕೆಯು ಸೀರೆಯಾಕಾರದಲ್ಲಿ ಸುರುಳಿ ಸುರುಳಿಯಾಗಿ ಮಡಚಿಕೊಂಡು ಒಂದೆಡೆ ಬಾಯಿ ತೆರೆದಂತಿದೆ. ಇದನ್ನು ಸೂಕ್ಷ್ಮವಾಗಿ ನೋಡಿದರೆ ಸೃಷ್ಟಿಗೆ ಕಾರಣವಾದ ಅಂಡಾಣು ಮತ್ತು ವೀರ್ಯವನ್ನು ಸಂಕೇತಿಸುತ್ತದೆ.

ನಾಟಕ ರಚನೆ, ನಿರ್ದೇಶನದ ಜತೆಗೆ ಫೌಜೆ ಅಭಿನಯದಲ್ಲೂ ಮಿಂಚಿದ್ದಾರೆ. ಇನ್ನುಳಿದ ಕಲಾವಿದರು ಪಾತ್ರವೇ ತಾವಾಗಿ ಭಾವಪರವಶವಾಗಿ ಅಭಿನಯಿಸಿದ್ದಾರೆ. ಕೆಲ ಗಂಭೀರ ವಿಷಯಗಳನ್ನು ತಿಳಿಹಾಸ್ಯದ ಮ್ಯಾನರಿಸಮ್ಮಿನಲ್ಲಿ ಪ್ರೇಕ್ಷಕರಿಗೆ ತಲುಪಿಸುವಲ್ಲಿನ ಕಲಾವಿದರ ಮನೋಜ್ಞ ಅಭಿನಯ ಅಭಿನಂದನಾರ್ಹ. ಬೆಳಕಿನ ವಿನ್ಯಾಸ ಮತ್ತು ಹಿನ್ನೆಲೆ ಸಂಗೀತ ನಾಟಕಕ್ಕೆ ಪೂರಕವಾಗಿದೆ.

Courtesy : Prajavani.net

http://www.prajavani.net/news/article/2018/05/02/570002.html

Leave a Reply