ಗಾರ್ದಭ ಪುರಾಣ

Donkey3  ಮಾನವ ‘ದ್ವಿಪದಿ’. ದನ, ಎತ್ತು,ಎಮ್ಮೆ, ಕೋಣ, ಕುದುರೆ, ಕತ್ತೆ ಹೀಗೆ    ತನ್ನ    ಬದುಕಿಗಾಗಿ ಚತುಷ್ಪದಿಗಳನ್ನು ಸಾಕಿದ್ದಾನೆ. ಪ್ರಾಣವುಳ್ಳ  ಎಲ್ಲರನ್ನು ಪ್ರೀತಿಸು.  ಭಗವಂತ  ಅವರಲ್ಲಿಯೂ ನೆಲೆಸಿದ್ದಾನೆ ಎಂದು  ಪ್ರವಚನಕಾರರು ಹೇಳಿದಾಗ  ನಾನು ಕುದುರೆಯಷ್ಟೇ  ಕತ್ತೆಯನ್ನು  ಪ್ರೀತಿಸಲಾರಂಭಿಸಿದೆ. ಈ ಪ್ರೀತಿ  ಪರಾಕಾಷ್ಟೆಗೆ ಹೋಗಿ  ಬಾಲ್ಯದಲ್ಲೊಮ್ಮೆ ಅಪ್ಪನೊಡನೆ, ನಮ್ಮ ಹಟ್ಟಿಯಲ್ಲಿರುವ  ದನಕರುಗಳ  ಜತೆಗೆ ನಾವೇಕೆ ಒಂದು ಕತ್ತೆಯನ್ನು ಸಾಕಬಾರದು ಎಂದು  ಕೇಳಿದಕ್ಕೆ ‘ಸದ್ಯಕ್ಕೆ ನೀನಿದ್ದೀಯಲ್ಲ, ಮುಂದೆ ನೋಡೋಣ ಅಂದಿದ್ದರು. ನಮ್ಮ ಬ್ರಾಹ್ಮಣ ಸಂಪ್ರದಾಯ, ರೀತಿ ರಿವಾಜುಗಳೆಲ್ಲ ಕತ್ತೆಯನ್ನು ಸಾಕುವುದಕ್ಕೆ ಅನುಮತಿಯನ್ನು ಕೊಡದಿರುವಾಗ ನಾನು ಕತ್ತೆಯನ್ನು ಮಾನಸಿಕವಾಗಿಯಷ್ಟೇ ಪ್ರೀತಿಸಬೇಕಾಯಿತು.

ದುಡಿಯುವುದರ ಹೊರತಾಗಿ ಕತ್ತೆಗೇನೂ ತಿಳಿಯದು. ಭಾರ ಹೊರುವುದಷ್ಟೇ ಅದರ ಕೆಲಸ. ಅಗಸ ಬೆನ್ನ ಮೇಲೇ ಹೇರಿದ ಮಹಾರಾಜ-ರಾಣಿಯರ ಬಟ್ಟೆಗಳಿರಲಿ, ಕಲ್ಲುಕುಟಿಗ ಬೆನ್ನ ಮೇಲೆ ಹೇರಿದ ಬೀಸುವ ಕಲ್ಲುಗಳೇ ಇರಲಿ, ಬೆನ್ನ ಮೇಲಿರುವ ಗಂಧದ ಕೊರಡುಗಳ ಹೊರೆಯೇ ಇರಲಿ ಕತ್ತೆಗದರ ಮಹತ್ವ ತಿಳಿಯದು. ಅದಕೆಂದೇ ಸೃಷ್ಟಿಯಾದ ಗಾದೆಯೊಂದಿದೆ. ‘ಕತ್ತೆಯೇನ ಬಲ್ಲದು ಕಸ್ತೂರಿಯ ಪರಿಮಳವ’ ಎಂದು. ಬುದ್ಧಿವಂತಿಕೆಯ ವಿಚಾರ ಬಂದಾಗ ಅದು ಇಲ್ಲದವರನ್ನು ‘ಕತ್ತೆ’ಯೆಂದು ಕರೆಯಬೇಕೆಂಬುದು ನಾವು ಬಾಲ್ಯದಲ್ಲಿ ಶಾಲೆಯಲ್ಲಿ ಸೋದಾಹರಣವಾಗಿ ಅಧ್ಯಾಪಕರಿಂದ ಕಲಿತ ಪಾಠ. ಬಹಳಷ್ಟು ಬುದ್ಧಿವಂತರೆಂದು ಅಂದುಕೊಂಡಿರುವ ನಾವು-ನೀವೆಲ್ಲ ಒಂದಲ್ಲ ಒಂದು ಸಾಲ ಬಾಲ್ಯದಲ್ಲಿ ‘ಗಾರ್ದಭ’ ಪ್ರಶಸ್ತಿ ಪಡೆದವರೇ.

ಒಬ್ಬ ಅಗಸನಿದ್ದ. ಕತ್ತೆಯೊಂದನ್ನು ಸಾಕಿದ್ದ. ಆ ಕತ್ತೆಗೊಂದು ಗಂಡು ಮರಿಯಿತ್ತು. ಅಗಸನ ಆರೈಕೆ ಮತ್ತು ತಾಯಿ ಕತ್ತೆಯ ಹಾರೈಕೆಯಿಂದ ಅದು ಮುದ್ದಾಗಿ, ದಷ್ಟಪುಷ್ಟವಾಗಿಯೇ ಬೆಳೆಯಿತು. ಇನ್ನೇನು ದುಡಿಯುವ ವಯಸ್ಸು. ತಾನಿನ್ನು ಈ ಯುವಕ ಕತ್ತೆಯನ್ನು ತನ್ನ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳಬಹುದು ಎಂದು ಕೊಂಡ ಅಗಸ ತನ್ನ ಮುದಿ ಹೆಣ್ಣು ಕತ್ತೆಯನ್ನು ಸೇವೆಯಿಂದ ನಿವೃತ್ತಗೊಳಿಸಿದ. ಪ್ರಾಯದ ಕತ್ತೆಗೋ ಕೆಲಸ ಮಾಡುವುದೆಂದರೆ ಮೈಗಳ್ಳತನ. ಶೋಕಿ ಮಾಡುವುದೊಂದು ಬಿಟ್ಟು ಬೇರೇನು ತಿಳಿಯದು. ಸಿನಿಮಾ ಪೋಸ್ಟರ್ ಗಳೆಂದರೆ ಅದರಲ್ಲೂ ‘ಎ’ ಪ್ರಶಸ್ತಿ ವಿಜೇತ ಸಿನಿಮಾ ಪೋಸ್ಟರ್ ಗಳೆಂದರೆ ಪಂಚ ಪ್ರಾಣ. ಗೋಡೆಯ ಮೇಲಿರುವ ಇಂತಹ ಪೋಸ್ಟರುಗಳನ್ನು ಕಿತ್ತು ತಂದು ಸಂಗ್ರಹಿಸುವ ಚಾಳಿ ಅದಕ್ಕೆ. ಅಗಸನಿಗೆ ತನ್ನ ಕತ್ತೆಯ ಸಮಸ್ಯೆ ಏನೆಂದು ತಿಳಿಯಿತು. ಕತ್ತೆಯನ್ನು ಪ್ರೀತಿಯಿಂದ ಕರೆದ, ಮೈದಡವಿದ, ಮದುವೆ ಮಾಡಿಸಲೇ ಎಂದ. ಕತ್ತೆ ಖುಷಿಯಿಂದ ಕೆನೆಯಿತು, ಅದರ ಭಾಷೆಯಲ್ಲಿ ಹುರ್ರಾ ಎಂದಿತು. ಪ್ರೀತಿಯಿಂದ ಮೆಲ್ಲಗೆ ಅಗಸನ್ನು ಒದೆಯಿತು! ತಾನು ತಿನ್ನದೆ ಜೋಪಾನವಾಗಿಟ್ಟ ನಟಿ ಮಲ್ಲಿಕಾಳ ಪೋಸ್ಟರುಗಳನ್ನು ಅಗಸನಿಗೆ ತಂದು ಕೊಟ್ಟಿತು. ಅಗಸ ತನ್ನಲ್ಲಿದ್ದ ಮೊಬೈಲ್ ನಿಂದ ಯಾವುದೋ ಸಂಖ್ಯೆಗೆ ಕತ್ತೆಯ ಎದುರಲ್ಲೇ ಡಯಲ್ ಮಾಡಿದ. ಒಂದಿಷ್ಟು ಮಾತನಾಡಿ ಕೊನೆಗೆ ಒಪ್ಪಿಗೆ ತಾನೇ ಎಂದು ಕೇಳಿದ. ಕತ್ತೆಯ ಕಿವಿಯಲ್ಲುಸುರಿದ, ತನ್ನ ಕೈಯಲ್ಲಿರುವ ಚಿತ್ರಗಳು ಮುಗಿದ ಮೇಲೆ ನಿನ್ನನ್ನು ಮದುವೆಯಾಗಲು ನಟಿ ಮಲ್ಲಿಕಾ ಒಪ್ಪಿಕೊಂಡಿದ್ದಾಳೆ. ಕತ್ತೆ ಪ್ರೀತಿಯಿಂದ ಅಗಸನಿಗೊಂದು ಮುತ್ತು ನೀಡಿತು. ಮರುದಿನದಿಂದ ಅಗಸನ ಜತೆಯಲ್ಲಿ ನಿಯತ್ತಿನಿಂದ ದುಡಿಯಲಾರಂಭಿಸಿತು, ಇಂದಿಗೂ ದುಡಿಯುತ್ತಿದೆ. ಚಿತ್ರ ನಟಿ ಮಲ್ಲಿಕಾಳ ಕೈಯ್ಯಲ್ಲಿ ಇದ್ದ ಚಿತ್ರಗಳು ಇನ್ನೂ ಮುಗಿದಂತಿಲ್ಲ!

ಕತ್ತೆಯ ಕುರಿತಂತೆ ಇನ್ನೊಂದು ಸ್ವಾರಸ್ಯಕರ ಕತೆಯಿದೆ. ಊರಲ್ಲೊಬ್ಬ ಅಗಸ. ಅವನ ಮನೆಯ ಬಳಿಯಲ್ಲೇ ಜ್ಯೋತಿಷ್ಯ ಬಲ್ಲ ವೇದಪಾರಂಗತ ಬ್ರಹ್ಮಣನೊಬ್ಬನ ಮನೆ. ಒಂದು ದಿನ ಬ್ರಾಹ್ಮಣ ಎಲ್ಲಿಗೋ ಹೊರಟವನು ಅಗಸನ ಮನೆಯ ಮುಂದೆ ಹಾದು ಹೋಗುತ್ತಿದ್ದಾಗ ಎದುರಾದ ಅಗಸ ಕೇಳಿಯೇ ಬಿಟ್ಟ ‘ಎಲ್ಲಿಗೆ ಹೊರಟಿರಿ ಭಟ್ಟರೇ? ಅನಿಷ್ಟ ಮುಂಡೆದೇ… ಶುಭ ಕಾರ್ಯಕ್ಕಾಗಿ ಪರವೂರಿಗೆ ಹೊರಟಾಗ ಎಲ್ಲಿಗೆಂದು ಕೇಳುತ್ತೀಯ.. ? ತಪ್ಪಾಯಿತು ಭಟ್ಟರೇ… ಇಂದು ಸಂಜೆ ಮಳೆ ಬರುವಂತಿದೆ, ಆದರೂ ಕೈಯ್ಯಲ್ಲಿ ಕೊಡೆಯಿದೆಯಲ್ಲ. ತೊಂದರೆಯೇನು ಆಗದು. ಅಗಸರೆಲ್ಲ ನಮಗೆ ಮಳೆ ಬೆಳೆಯ ಬಗ್ಗೆ ಹೇಳುವಂತಾಗಿದೆ…. ಬ್ರಾಹ್ಮಣ ಗೊಣಗುತ್ತ ಮುನ್ನಡೆದ. ಅಗಸ ಹೇಳಿದ ಮಾತು ನಿಜವಾಯಿತು. ಅಂದು ಸಂಜೆ ಕಡು ಬೇಸಿಗೆಯಾದರೂ ಕುಂಭದ್ರೋಣ ಮಳೆಯಾಯ್ತು. ಊರನ್ನು ತಲುಪಿದ ಬ್ರಾಹ್ಮಣ ನೇರವಾಗಿ ಅಗಸನ ಬಳಿಗೆ ಹೋಗಿ ಅಗಸನ ಸೂಚನೆಯನ್ನು ಲಘುವಾಗಿ ತೆಗೆದುಕೊಂಡಿದ್ದರ ಬಗ್ಗೆ ಪಶ್ಚಾತ್ತಾಪ ಪಟ್ಟು ಅಗಸನನ್ನು ಮಹಾಜ್ಞಾನಿಯೆಂದು ಹೊಗಳಿ ಅವನ ಕಾಲುಗಳನ್ನು ಮುಟ್ಟಿ ನಮಸ್ಕರಿಸಲು ಮುಂದಾದ. ಆಗ ಅಗಸ ಬ್ರಾಹ್ಮಣನನ್ನು ತಡೆದು, ಭಟ್ಟರೇ ಈ ನಮಸ್ಕಾರ ನನಗೆ ಸಲ್ಲಬೇಕಾದುದಲ್ಲ, ನನ್ನ ಗುರುಗಳಿಗೆ ಅವರನ್ನೇ ನಮಸ್ಕರಿಸಿ ಎಂದ. ಎಲ್ಲಿ ನಿನ್ನ ಗುರುಗಳನ್ನು ತೋರಿಸು ಅಂದ ಬ್ರಾಹ್ಮಣ. ಅಗಸ ತನ್ನ ಕತ್ತೆಯನ್ನು ತೋರಿಸಿ ಹೀಗಂದ, ತಪ್ಪು ತಿಳಯಬೇಡಿ ಭಟ್ಟರೇ, ಪ್ರಾಣಿಗಳಿಂದಲೂ ಮನುಷ್ಯ ಕಲಿಯಬೇಕಾದದ್ದು ಬಹಳವಿದೆ. ಬೇಸಿಗೆಯಲ್ಲಿ ಸೆಕೆ ವಿಪರೀತವಾಗಿ ನನ್ನ ಕತ್ತೆಯ ಬೆನ್ನ ಮೇಲಣ ಕೂದಲು ನಿಮಿರಿ ನಿಂತು ಅದು ವಿಚಿತ್ರವಾಗಿ ಕಿರುಚಲು ಪ್ರಾರಂಭಿಸಿದರೆ ಆ ದಿನ ಮಳೆ ಬಂದೇ ಬರುವುದೆಂದು ನಾನು ನನ್ನ ಈ ಕತ್ತೆಯಿಂದ ಕಲಿತೆ. ಹೀಗಾಗಿ ನಮಸ್ಕಾರ ಸಲ್ಲಬೇಕಾದದ್ದು ಈ ಗಾರ್ದಭ ಮಹಾರಾಜರಿಗೆ! ಇರಬಹುದೇನೋ. ಇಂದಿಗೂ ಮಳೆ ಬಾರದೇ ಇದ್ದರೆ ಕತ್ತೆಗಳಿಗೆ ಮದುವೆ ಮಾಡಿಸಿದ ಸುದ್ದಿಯನ್ನು ನಾವು ಓದುತ್ತಲೇ ಇರುತ್ತೇವೆ.
ನಮ್ಮ ಶಾಲಾ ದಿನಗಳನ್ನು ನೆನೆಸಿಕೊಳ್ಳೋಣ. ಕನ್ನಡ ಪಠ್ಯದಲ್ಲಿ ನಮಗೊಂದು ಸುಂದರ ಪದ್ಯವಿತ್ತು.

ಸಂತೆಗೆ ಹೋದನು ಭೀಮಣ್ಣ
ಹಿಂಡಿಯ ಕೊಂಡನು ಹತ್ತು ಮಣ
ಕತ್ತೆಯ ಬೆನ್ನಿಗೆ ಹೇರಿಸಿದ
ಕುದುರೆಯ ಜತೆಯಲಿ ಸಾಗಿಸಿದ….
ಎಂಬ ಸಾಲುಗಳಿಂದ ಪ್ರಾರಂಭವಾಗುವ ಈ ಪದ್ಯದಲ್ಲಿ ಕೊನೆಗೆ ಅಗಸ ಕುದುರೆಯ ಬೆನ್ನ ಮೇಲೆ ಹೇರಿದ ಭಾರವನ್ನು ಕತ್ತೆ ತಾನು ಅರ್ಧ ಹಂಚಿಕೊಂಡು ಬದುಕಿನಲ್ಲಿ ಸಹಕಾರ ತತ್ತ್ವವನ್ನು ಕುದುರೆಗೆ ತಿಳಿಸುತ್ತದೆ. ಬದುಕಿನಲ್ಲಿ ನಾವು ಹಲವೊಂದು ಸಲ ಕುದುರೆಗಳೆಂದುಕೊಂಡು ಸಹಕಾರ ತತ್ತ್ವವನ್ನು ಕಡೆಗಣಿಸಿ ಕತ್ತೆಗಳಾಗುತ್ತೇವೆ!
ಕೊನೆಯದಾಗಿ ಕತ್ತೆಗೂ ಸೌಂದರ್ಯಕ್ಕೂ ಇಲ್ಲಿಯ ಸಂಬಂಧ. ಜಾನಪದ ಹೇಳುತ್ತದೆ ‘ಕತ್ತೇಯಾ ಮರಿ ಚಂದ…. ಎಂದು’. ಆದರೆ ಸಂಸ್ಕೃತದ ಕವಿಯೊಬ್ಬ ಹೇಳುತ್ತಾನೆ ‘ಪ್ರಾಪ್ತೇಷು ಷೋಡ‍ಶೇ ವರ್ಷೇ ಗಾರ್ದಭಿ ಚಾಪ್ಸರಾಯಿತಿ’. ಹೆಣ್ಣು ಕತ್ತೆಯೂ ಕೂಡ ಹದಿನಾರು ವರ್ಷವಾದಾಗ ಸುಂದರವಾಗಿ ಕಾಣುತ್ತದಂತೆ. ಕವಿಯ ಕಲ್ಪನೆ ಸರಿಯೇ ತಪ್ಪೇ ಎಂಬುದನ್ನು ಗಂಡು ಕತ್ತೆಯೊಂದನ್ನು ಕೇಳಿಯೇ ಖಚಿತಪಡಿಸಿಕೊಳ್ಳಬೇಕಾಗಿದೆ.

Leave a Reply