‘ಜವಾಬ್ದಾರಿಯೇ ಒತ್ತಡ’

‘ಜವಾಬ್ದಾರಿಯೇ ಒತ್ತಡ’

ಮನುಷ್ಯ ತನ್ನ ಮನಸ್ಸಿಗೆ ವಿರುದ್ಧವಾದ ಕೆಲಸವನ್ನು ಮಾಡಿದಾಗ ಒತ್ತಡ ಉಂಟಾಗುತ್ತದೆ. ಬದುಕಿನ ಓಟದಲ್ಲಿ ನಾವು ಹಲವಾರು ಒತ್ತಡಗಳನ್ನು ಎದುರುಗೊಂಡಿರುತ್ತೇವೆ. ಬದುಕಿನಲ್ಲಿ ಸಂಭವಿಸುವ ಕೆಲವು ಅನಿರೀಕ್ಷಿತಗಳು ನಮ್ಮನ್ನು ಒತ್ತಡಕ್ಕೆ ಸಿಲುಕಿಸುತ್ತವೆ. ಆದರೆ ಆ ಒತ್ತಡವನ್ನೇ ಜವಾಬ್ದಾರಿ ಎಂದುಕೊಂಡು ಬದುಕು ಸಾಗಿಸಿದರೆ ಒತ್ತಡ ನಮ್ಮನ್ನು ಕಾಡುವುದಿಲ್ಲ ಎನ್ನುತ್ತಾರೆ ನಟ ಮಂಡ್ಯ ರಮೇಶ್‌.

ಇಷ್ಟ ಇಲ್ಲದೆ ಮಾಡುವ ಎಲ್ಲಾ ಕೆಲಸವೂ ಒತ್ತಡವೇ ಎನಿಸುತ್ತದೆ. ನಾನು ರಂಗಭೂಮಿಯವನು. ರಂಗಭೂಮಿಯಲ್ಲಿ ಕೆಲಸ ಮಾಡುವುದು ನನಗೆ ಇಷ್ಟದ ಕೆಲಸ. ಹಗಲು ರಾತ್ರಿ ಕೆಲಸ ಮಾಡುತ್ತೇನೆ. ಎಂದಿಗೂ ಇದು ನನಗೆ ಒತ್ತಡದ ಕೆಲಸ ಅಥವಾ ಇದರಿಂದ ನನಗೆ ಒತ್ತಡ ಕಾಡುತ್ತದೆ ಎನ್ನುವ ಭಾವ ಬಾಧಿಸಿಲ್ಲ. ಇಷ್ಟ ಮತ್ತು ಕಷ್ಟಗಳ ನಡುವೆ ಸಮನ್ವಯತೆ ಕಾಪಾಡಿಕೊಳ್ಳುವುದು ಮುಖ್ಯ.

ಬದುಕಿಗೆ ಓಟ ಎಂಬುದಿರುತ್ತದೆ. ಇಲ್ಲಿ ನಾವು ಹಲವಾರು ಒತ್ತಡಗಳನ್ನು ಎದುರುಗೊಳ್ಳುತ್ತೇವೆ. ಇಲ್ಲಿ ಸಂಭವಿಸುವ ಕೆಲವು ಅನಿರೀಕ್ಷಿತಗಳೂ ನಮ್ಮನ್ನು ಒತ್ತಡಕ್ಕೆ ಒಡ್ಡುತ್ತವೆ. ‘ಟೆನ್ಷನ್‌’ ಅನ್ನುವ ಶಬ್ದ ಸಕಾರಾತ್ಮಕ ಹಾಗೂ ನಕಾರಾತ್ಮಕವಾಗಿಯೂ ಧ್ವನಿಸುತ್ತದೆ. ನನ್ನದು ಸಕಾರಾತ್ಮಕ ಚಿಂತನೆ. ನನ್ನ ಪ್ರಕಾರ ‘ಟೆನ್ಷನ್‌’ ಅಂದರೆ ಜವಾಬ್ದಾರಿ. ಇದು ನನ್ನ ಗುರುವೊಬ್ಬರು ಹೇಳಿಕೊಟ್ಟಿದ್ದು. ಯಾವುದೋ ಒಂದು ಕೆಲಸ ಹಿಡಿದ ಮೇಲೆ ಅದು ಆಗಿಲ್ಲ ಎಂದು ಒದ್ದಾಡುತ್ತಾ ಇರುತ್ತೇವೆ. ಅದು ಬೇಗನೆ ಮುಗಿಯಬೇಕು, ಸಕಾಲಕ್ಕೆ ಆಗಬೇಕು ಎನ್ನುವ ಒತ್ತಡ ಜವಾಬ್ದಾರಿಯಾಗಿ ನಮ್ಮನ್ನು ಎಚ್ಚರಿಸುತ್ತದೆ. ನಾವು ಸಕಾರಾತ್ಮಕವಾಗಿ ಇದ್ದರೆ ಎಲ್ಲವೂ ಸಕಾರಾತ್ಮಕವಾಗಿಯೇ ಇರುತ್ತದೆ.

ಕಾಲಘಟ್ಟ ಬದಲಾದ ಹಾಗೆ ಹೊಸ ತಲೆಮಾರಿನ ನಿರೀಕ್ಷೆಗಳು ಬದಲಾಗುತ್ತವೆ. ರಂಗಭೂಮಿಯೂ ಇದಕ್ಕೆ ಹೊರತಾಗಿಲ್ಲ. ಹಳೆ ತಲೆಮಾರು ರಂಗಭೂಮಿಯ ಸೌಂದರ್ಯವನ್ನು ಸರಳತೆ ಎಂದು ನಂಬಿಕೊಂಡಿತ್ತು. ಹೊಸ ತಲೆಮಾರು, ಅದರ ಸೌಂದರ್ಯ, ಕಲಾತ್ಮಕತೆಯ ಜೊತೆಗೆ ವಾಣಿಜ್ಯ ದೃಷ್ಟಿಕೋನವನ್ನೂ ಬೆಳೆಸಿಕೊಂಡಿದೆ. ರಂಗಭೂಮಿ ಇನ್ನೂ ಪೂರ್ಣ ಪ್ರಮಾಣದ ಉದ್ಯಮವಾಗಿಲ್ಲ. ಹಾಗಾಗಿ, ಇದರಲ್ಲೇ ವಾಣಿಜ್ಯ ಮೌಲ್ಯವನ್ನು ಕಂಡುಕೊಳ್ಳಬೇಕು ಎನ್ನುವ ಒತ್ತಡ ಸದ್ಯ ರಂಗಭೂಮಿಗಿದೆ. ಈ ಎಲ್ಲಾ ಸಂಗತಿಗಳನ್ನು ಸರಿದೂಗಿಸಿಕೊಂಡು ಹೋಗುವ, ವಾಣಿಜ್ಯದ ಜೊತೆಗೆ ‘ಸರಳತೆ’ಯನ್ನೂ ಕಾಪಾಡಿಕೊಂಡು ಹೋಗುವ ಜರೂರು ಸದ್ಯದ ನಮ್ಮ ತಲೆಮಾರಿನ ಒತ್ತಡವಾಗಿದೆ.

ಒತ್ತಡ ಎನಿಸಿದಾಗ ನಾನು ಹಲವಾರು ವಿಧದಲ್ಲಿ ಅದನ್ನು ನಿಭಾಯಿಸುತ್ತೇನೆ. ಅದರಲ್ಲಿ ಒಂದು ಸರಳವಾಗುವುದು ಮತ್ತು ಸತ್ಯವಾಗುವುದು. ಉದಾಹರಣೆಗೆ, ನಮಗೆ ₹5 ಸಾವಿರ ಬೇಕಾಗಿರುತ್ತದೆ. ಆದರೆ, ನಮ್ಮ ಬಳಿ ಅಷ್ಟೊಂದು ಹಣ ಇರುವುದಿಲ್ಲ. ಸುಮ್ಮನೆ ಒದ್ದಾಟ ಮಾಡಿಕೊಂಡು ಗೋಳಾಡುವುದಕ್ಕಿಂತ, ಕೆಲಸವನ್ನು ಕಡಿಮೆ ಖರ್ಚಿನಲ್ಲಿ ನಿಭಾಯಿಸಿಕೊಳ್ಳುವ ಮಾರ್ಗವನ್ನು ಕಂಡುಕೊಂಡು ಸರಳವಾಗುವುದು. ಮತ್ತೊಂದು ಉದಾಹರಣೆ ಕೊಡುವುದಾದರೆ, ನೀವು ಯಾರೊಂದಿಗೋ ಸುಳ್ಳು ಹೇಳಿರುತ್ತೀರಿ. ಇದು ಸದಾ ನಿಮ್ಮನ್ನು ಕಾಡುತ್ತದೆ. ಅವರು ಕಣ್ಣ ಮುಂದೆ ಬಂದಾಗೆಲ್ಲಾ ಸುಳ್ಳಿನ ವಿಚಾರ ನಿಮ್ಮನ್ನು ಒತ್ತಡಕ್ಕೆ ತಳ್ಳುತ್ತದೆ. ಆದ್ದರಿಂದ ನಾವು ಸತ್ಯವಂತರಾಗಬೇಕು. ಈ ಎರಡೂ ಒತ್ತಡ ನಿವಾರಣೆಗೆ ನಾನು ಕಂಡುಕೊಂಡ ದಾರಿಗಳು.

ಒತ್ತಡ ನಿಭಾಯಿಸುವುದರಲ್ಲಿ ನಾನು ಕಂಡುಕೊಂಡ ಎರಡನೇ ಮಾರ್ಗ ಎಂದರೆ ಅಲ್ಪತೃಪ್ತನಾಗಿರುವುದು. ನಾನು ಅತಿಯಾದ ಕನಸು ಕಾಣುವುದಿಲ್ಲ. ಪ್ರಸನ್ನ ಅವರು ಹೇಳುತ್ತಿರುವ ‘ದೇಸಿ ಸಂಸ್ಕೃತಿ’ ವಿಚಾರಗಳು ನನ್ನನ್ನು ಬಹಳವಾಗಿ ಕಾಡುತ್ತಿವೆ. ಒತ್ತಡದ ಈ ಜೀವನದಿಂದ ಅವರು ಹೇಳುವ ಮಾರ್ಗೋಪಾಯಗಳು ನಮ್ಮನ್ನು ಕಾಪಾಡುತ್ತವೆ.

ಒಂದು ನಾಟಕ ಆಡ್ತಾ ಇದ್ದೀವಿ ಅಂದರೆ, ಅದರ ಹಿಂದೆ ನಮ್ಮ ಶ್ರಮ ಬಹಳವಾಗಿ ಇರುತ್ತದೆ. ಇದಕ್ಕಾಗಿ ಆರು–ಏಳು ತಿಂಗಳಿಂದ ತಾಲೀಮು ಮಾಡುತ್ತಾ ಇರುತ್ತೇವೆ. ನಾಳೆ ನಾಟಕ ಪ್ರದರ್ಶನ ಇರುತ್ತದೆ ಎಂದುಕೊಳ್ಳಿ. ಮುಖ್ಯ ಪಾತ್ರಧಾರಿಯ ತಂದೆ ತೀರಿ ಹೋಗುತ್ತಾರೆ. ಈ ಸಂದರ್ಭದಲ್ಲಿ ಆಗುವ ಒತ್ತಡ ಹೇಳತೀರದು. ತಕ್ಷಣದಲ್ಲಿ ಬೇರೆ ಹುಡುಗನನ್ನು ತಯಾರು ಮಾಡಬೇಕು. ನಾಳಿನ ಪ್ರದರ್ಶನಕ್ಕೆ ಬಂದ ಪ್ರೇಕ್ಷಕರು ನಮ್ಮ ಈ ಒತ್ತಡಗಳನ್ನು ಕೇಳುವುದಿಲ್ಲ. ಗುಣಮಟ್ಟದ ಪ್ರದರ್ಶನ ನಮ್ಮ ಜವಾಬ್ದಾರಿಯಾಗಿರುತ್ತದೆ. ಈ ಹಂತದಲ್ಲಿ ಮೌನವಾಗಿರುತ್ತೇನೆ. ಇದು ನಾನು ಅನುಸರಿಸುವ ಮೂರನೇ ವಿಧ. ಮೌನ ಒತ್ತಡವನ್ನು ತಡೆದುಕೊಳ್ಳಬಹುದಾದ ಒಂದು ಉತ್ತಮ ಸಾಧನ ಎನ್ನಬಹುದು. ಮೌನವಾಗಿದ್ದಾಗ ಹಲವಾರು ಯೋಚನೆಗಳು ಬರುತ್ತವೆ. ಇದು ಸಮಸ್ಯೆಯಿಂದ ಅಥವಾ ಒತ್ತಡದಿಂದ ನಮ್ಮನ್ನು ಪಾರು ಮಾಡುತ್ತವೆ.  

ಹಿಂದಿನ ಕಾಲದ ಒತ್ತಡಕ್ಕೂ ಈಗಿನ ಕಾಲದ ಒತ್ತಡಕ್ಕೂ ವ್ಯತ್ಯಾಸ ಇದೆ. ಆದರೆ, ಅದರ ಸ್ವರೂಪಗಳು ಒಂದೇ ಆಗಿವೆ. ಹಿಂದೆ ನಿಮಗೆ ಒತ್ತಡ ಅನಿಸಿದಾಗ ನಿಮ್ಮ ಜತೆ ಕೂತು ಮಾತಾಡಿ ಅದರ ನಿವಾರಣೆಯ ದಾರಿ ಹುಡುಕೋಕೆ ಅವಿಭಕ್ತ ಕುಟುಂಬಗಳಿದ್ದವು. ಆದರೆ, ಈಗ ನಾವೆಲ್ಲಾ ಒಂಟಿಯಾಗಿದ್ದೇವೆ. ಇದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ ಎಂಬುದು ನನ್ನ ಅನಿಸಿಕೆ. ಒಟ್ಟಿನಲ್ಲಿ, ರಂಗಭೂಮಿಯೇ ಒಂದು ಕುಟುಂಬ ಇದ್ದ ಹಾಗೆ, ಇದೇ ನಿಜವಾದ ಟೆನ್ಷನ್‌ ಕಡಿಮೆ ಮಾಡೋ ಅಟೆನ್ಷನ್‌ ಎಂದು ನಾನು ಭಾವಿಸಿದ್ದೇನೆ. ನಾವು ಜೀವನವನ್ನು ಹೇಗೆ ಗ್ರಹಿಸುತ್ತೇವೆ ಅನ್ನುವುದು ಇಲ್ಲಿ ಮುಖ್ಯವಾಗುತ್ತದೆ. ಇಷ್ಟ–ಕಷ್ಟಗಳ ಸಮತೋಲನವನ್ನು ನಿಭಾಯಿಸಬೇಕು ಎನ್ನುವುದನ್ನು ತಿಳಿಯಬೇಕು. 

Courtesy :Prajavani.net

http://www.prajavani.net/news/article/2018/04/12/565348.html

Leave a Reply