ನಕಾರಾತ್ಮಕ ಭಾವನೆಗಳನ್ನು ಹೊಸಕಿ ಹಾಕಿ

ನಕಾರಾತ್ಮಕ ಭಾವನೆಗಳನ್ನು ಹೊಸಕಿ ಹಾಕಿ

– ಸ್ವಾಮಿ ವೀರೇಶಾನಂದ ಸರಸ್ವತೀ

ಮಹಾತ್ಮರ ಹಾಗೂ ಸಾಧಕರ ನಡೆ, ನುಡಿ, ಆಚಾರ ಹಾಗೂ ವಿಚಾರಗಳು ಮಾನವ ಸಂಕುಲಕ್ಕೆ ‘ಶಿಲಾಕ್ಷರ’ದಂತೆ ದಿಕ್ಸೂಚಿ ಆಗಬಲ್ಲವು. ‘ನಾನು ಸ್ಪೂರ್ತಿ ನೀಡುವುದನ್ನು ನಿಲ್ಲಿಸುವುದಿಲ್ಲ’ ಎಂದಿರುವ ಸ್ವಾಮಿ ವಿವೇಕಾನಂದರು ತಮ್ಮ ಚಿಂತನೆಗಳಲ್ಲಿ ‘ತಲೆಮಾರಿನ ಅಭಿಪ್ರಾಯಭೇದ’ (Generation gap) ಬಾರದಂತೆ ನೋಡಿಕೊಂಡಿದ್ದಾರೆ, ಆದ್ದರಿಂದಲೇ ವಿವೇಕವಾಣಿ ಮಾನವ ಸಮಾಜಕ್ಕೆ ‘ಪ್ರೇರಣೆಯ ಚಿರಂತನ ಮೂಲ’ ಎಂದೆನಿಸಿದೆ.

ಜಗತ್ತಿನಲ್ಲಿ ಸಾಧನೆಗೈದ ಅಸಂಖ್ಯಾತರ ಬದುಕಿನಲ್ಲಿ ಮೌಲ್ಯಗಳು ಹಾಗೂ ಆದರ್ಶಗಳು ನೆಲೆಗಟ್ಟಾಗಿ ನಿಂತು ಆದರ್ಶಗಳನ್ನು ನಿರ್ವಿುಸಿದ್ದು ಇತಿಹಾಸ. ‘ವಿದ್ಯೆ ಅನ್ನೊಂದು ಪುಗಸಟ್ಟೆ ಪುನುಗಲ್ಲ, ಸಾಧನೆ ಮಾಡಬೇಕು… ಯಶಸ್ಸೆಂಬುದು ಸಾಧಕನ ಸೊತ್ತೇ ಹೊರತು ಸೋಮಾರಿಯ ಸೊತ್ತಲ್ಲ…’ ಇವೇ ಮೊದಲಾದ ಮಾತುಗಳು ನಮ್ಮನ್ನು ಯೋಚನೆಗೆ ಒರೆ ಹಚ್ಚುತ್ತವೆ, ಸಾಧನಾಪಥದ ಗಹನ ವಿಚಾರವನ್ನು ಗಂಭೀರವಾಗಿ ಚಿಂತಿಸುವಂತೆ ಪ್ರೇರೇಪಿಸುತ್ತವೆ.

ಸ್ವಾಮಿ ವಿವೇಕಾನಂದರ ತಂದೆ ವಿಶ್ವನಾಥದತ್ತರು ಮಗನ ಜೀವನವನ್ನು ರೂಪಿಸುವಲ್ಲಿ ಪ್ರಮುಖರು. ಯುವಕ ನರೇಂದ್ರ ಒಮ್ಮೆ ತಂದೆಯ ಧಾರಾಳತನವನ್ನು ಕಂಡು ಹೀಗೆ ಪ್ರಶ್ನಿಸುತ್ತಾನೆ: ‘ಅಪ್ಪಾ, ನಿನ್ನ ದಾನದ ಪ್ರವೃತ್ತಿ ನನಗೆ ಆಶ್ಚರ್ಯ ತಂದಿದೆ. ನಿನ್ನ ಆಸ್ತಿಯನ್ನೆಲ್ಲ ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತ ಹೋದರೆ ನನಗೇನು ದೊರೆತೀತು? ನನಗಾಗಿ ಏನು ಮಾಡಿದ್ದೀಯೆ?’ ಆಗ ತಂದೆ ಹೇಳಿದ ಉತ್ತರ ಅದ್ಭುತ: ‘ಮಗು ನರೇನ್, ನಿನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೋ. ನಾನು ನಿನಗೇನು ನೀಡಿರುವೆ ಎಂಬ ಅರಿವಾಗುತ್ತೆ’!; ಆಗ ಯುವಕ ನರೇಂದ್ರ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ಕಂಡಾಗ ಅವನಿಗೆ ಅರಿವಾಯ್ತು-‘ತನ್ನ ವಿಶಾಲವಾದ ಹಣೆ, ಆತ್ಮವಿಶ್ವಾಸದ ಕಣ್ಣುಗಳು, ಎಂತಹ ಸನ್ನಿವೇಶವನ್ನೂ ಧೃತಿಗೆಡದೆ ನಿರ್ವಹಿಸಲು ಶಕ್ತವಾದ ಎದೆಗಾರಿಕೆ, ಉತ್ಸಾಹವನ್ನೇ ಸೂಸುವ ಮುಖಮಂಡಲ…’ ಬದುಕಿನಲ್ಲಿ ಇನ್ನೆಂದೂ ಈ ಪ್ರಶ್ನೆ ಅವನ ಮನಸ್ಸಿನಲ್ಲಿ ಸುಳಿಯಲಿಲ್ಲ!

ಮುಂದೆ ಸ್ವಾಮಿ ವಿವೇಕಾನಂದರು ಯುವಜನತೆಯನ್ನು ಬಡಿದೆಬ್ಬಿಸುವ ಮಾತುಗಳನ್ನಾಡುವ ಸಂದರ್ಭಗಳಲ್ಲಿ, ‘ಸರ್ವಶಕ್ತಿ ಸ್ವರೂಪಿಣಿಯಾದ, ಅನಂತಳಾದ ಜಗಜ್ಜನನಿಯ ಪುತ್ರ ನೀನೆಂಬುದು ನೆನಪಿರಲಿ, ವ್ಯಕ್ತಿಯು ತನ್ನ ಆದರ್ಶವನ್ನು ಸಿದ್ಧಿಸಿಕೊಳ್ಳುವ ಯತ್ನದಲ್ಲಿ ಪರಿಸರ ಪರಿಸ್ಥಿತಿಗಳೊಂದಿಗೆ ಸಾಕಷ್ಟು ಸೆಣೆಸಾಡಬೇಕಾಗುತ್ತದೆ. ಎಲ್ಲ ನಕಾರಾತ್ಮಕ ಭಾವನೆಗಳನ್ನು ಅದೊಂದು ಅಂಟುರೋಗವೋ ಎಂಬಂತೆ ಹೊಸಕಿಹಾಕಬೇಕು. ಆಗ ನಾವು ಪ್ರಚಂಡ ಶಕ್ತಿಯಾಗಿ,s ಚೈತನ್ಯವಾಗಿ ಪ್ರಕಟವಾಗುತ್ತೇವೆ’ ಎಂದಿದ್ದಾರೆ.

ಕೆಲವು ಶತಮಾನಗಳ ಇತಿಹಾಸವನ್ನು ಅವಲೋಕಿಸಿದಾಗ, ನಮ್ಮ ಕಣ್ಣು ತೆರೆಸುವ ವ್ಯಕ್ತಿತ್ವಗಳು ಗೋಚರಿಸುತ್ತವೆ. ಉದಾಹರಣೆಗೆ, ಅಂಧನಾಗಿದ್ದ ಜಾನ್​ವಿುಲ್ಟನ್, ‘Paradise lost, Paradise regained’ ಎಂಬ ಪುಸ್ತಕವನ್ನು ಬರೆದು ಲೋಕ ವಿಖ್ಯಾತನಾದ! ಕಿವುಡನಾಗಿದ್ದ ಬಿಥೋವನ್ ಶ್ರೇಷ್ಠ ಸಂಗೀತಗಾರನಾಗಿ ರೂಪುಗೊಂಡ! ಚರ್ಮವ್ಯಾಧಿಯ ನೆಪೋಲಿಯನ್ ಹಾಗೂ ಮೂರ್ಛೆರೋಗದ ಜೂಲಿಯಸ್ ಸೀಸರ್ ಜಗತ್ತಿನ ಇತಿಹಾಸದಲ್ಲಿ ಸಾರ್ವಕಾಲಿಕ ಶ್ರೇಷ್ಠ ಚಕ್ರವರ್ತಿಗಳ ಶ್ರೇಣಿಯಲ್ಲಿ ದಾಖಲಾದರು!

‘ಶ್ರದ್ಧೆ, ಶ್ರದ್ಧೆ, ಶ್ರದ್ಧೆ… ಶ್ರದ್ಧೆ ಮಾತ್ರವೇ ನಿನ್ನ ಆಂತರ್ಯದ ದಿವ್ಯತೆಯನ್ನು ಹೊರಗೆಡವುತ್ತದೆ ಮತ್ತು ನಿನ್ನ ಸಾಹಸಮಯ ಬದುಕಿಗೆ ಹೆದ್ದಾರಿ ಆಗುತ್ತದೆ…’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು.

ಸ್ವಾಮೀಜಿ, ‘ಯುವಕರೇ, ನಿಮ್ಮನ್ನು ನೀವು ನಂಬಿ. ಜನ ನಿಮ್ಮನ್ನು ಹೊಗಳಲಿ ಅಥವಾ ತೆಗಳಲಿ. ನೀವು ಮಾತ್ರ ಇದಾವುದಕ್ಕೂ ಗಮನಕೊಡದೆ ಆದರ್ಶವನ್ನು ಮುಂದಿಟ್ಟುಕೊಂಡು ಸಿಂಹಪರಾಕ್ರಮದಿಂದ ಕಾರ್ಯನಿರತರಾಗಬೇಕು’ ಎನ್ನುತ್ತಾರೆ. ಶಕ್ತಿಯುತ ಸಂದೇಶಗಳು ಹಾಗೂ ಆದರ್ಶ ಜೀವನಗಳು ಮನುಷ್ಯನಿಗೆ ನಂಬಲಸಾಧ್ಯವಾದ ವಿಶ್ವಾಸವನ್ನು ದೊರಕಿಸಿಕೊಡುತ್ತವೆ ಎಂಬುದನ್ನು ಜಗತ್ತು ಸಾಬೀತು ಪಡಿಸಿದೆ. ತತ್ಸಂಬಂಧದಾಗಿ ಕೆಲವು ಉದಾಹರಣೆಗಳನ್ನು ಗಮನಿಸಬಹುದು.

ಆಸ್ಟ್ರೇಲಿಯಾದ ಟೆನಿಸ್ ಆಟಗಾರ ಥಾಮಸ್ ಮಸ್ಟರ್ ರಸ್ತೆ ಅಪಘಾತದಲ್ಲಿ ಪಾ›ಣಾಂತಿಕವಾಗಿ ಗಾಯಗೊಂಡಿದ್ದ. ಅವನಿಗೆ ಶಸ್ತ್ರಚಿಕಿತ್ಸೆಗೈದ ವೈದ್ಯರು, ‘ಈತ ಮುಂದೆ ಟೆನಿಸ್ ಆಡುವುದಿರಲಿ, ಸರಿಯಾಗಿ ನಡೆದಾಡುವುದೂ ದುಸ್ಸಾಧ್ಯ’ ಎಂದು ವರದಿ ನೀಡಿದರು. ಆದರೆ ಥಾಮಸ್​ನ ಆಲೋಚನೆ ಜಗತ್ತಿನ ಭಾವನೆಗೆ ತದ್ವಿರುದ್ಧವಾಗಿದ್ದಿತು. 1995ರಲ್ಲಿ ಮತ್ತೆ ಆತ ಅಂತಾರಾಷ್ಟ್ರೀಯ ಚಾಂಪಿಯನ್ ಆದ! ‘ಅರೆಕೊರೆಯಿಲ್ಲದ ದಿಟ್ಟತನ, ಸ್ಥಿರಸಂಕಲ್ಪ ಮತ್ತು ಸ್ವಪ್ರಯತ್ನದ ನೆರವಿನೊಂದಿಗೆ ನಾನು ಪೂರ್ವಸ್ಥಿತಿಗೆ ಮತ್ತೆ ಮರಳುತ್ತೇನೆ, ಕಾರ್ಯಸಾಧನೆಯಲ್ಲಿ ಅಗ್ರಗಣ್ಯತೆ ಮೆರೆಯುತ್ತೇನೆ…’ಎಂದು ಸಾರಿದ ಆತ ವೈದ್ಯರು ತನ್ನ ಬಗ್ಗೆ ಇತ್ತಿದ್ದ ಆರೋಗ್ಯ ಪ್ರಮಾಣಪತ್ರಕ್ಕೆ ತಿದ್ದುಪಡಿ ಹಾಕಿದ! ಕ್ರೀಡಾಜಗತ್ತಿನಲ್ಲಿ ಜಾಗತಿಕ ಮಟ್ಟದಲ್ಲಿ ಪಡೆವ ಚಿನ್ನದ ಪದಕಗಳು ಕೇವಲ ಚಿನ್ನದಿಂದ ತಯಾರಾದ್ದದ್ದಲ್ಲ. ಬದಲಿಗೆ ಬದುಕಿನಲ್ಲಿ ಪರಿಶ್ರಮ, ಗುರಿಯನ್ನು ಮುಟ್ಟುವ ಉತ್ಸಾಹ, ಬತ್ತದ ಹೋರಾಟ ಮತ್ತು ಜಗತ್ತಿನಲ್ಲಿ ಅಪರೂಪವೆನಿಸಬಹುದಾದ ಎದೆಗಾರಿಕೆಯಿಂದ ಪ್ರಾಪ್ತವಾಗುವಂಥವು.

2008ರ ಒಲಂಪಿಕ್ಸ್​ನಲ್ಲಿ ಚಿನ್ನದ ಪದಕಗೆದ್ದ ಶೂಟರ್ ಅಭಿನವ್ ಬಿಂದ್ರಾ, ‘ಮೊದಲ ಸಲ ನಿಮಗೆ ಲಭಿಸುವ ಯಶಸ್ಸು ನಿಮ್ಮನ್ನು ಸಾಕಷ್ಟು ಉತ್ಸಾಹಿಗಳನ್ನಾಗಿ ಮಾಡುತ್ತದೆ, ಮತ್ತೊಂದು ಸಾಧನೆಗೆ ಪ್ರೇರಣೆಯಾಗುತ್ತದೆ. ಕಠಿಣ ಪರಿಶ್ರಮಪಡದೆ ಬೇರೆ ದಾರಿಯಿಲ್ಲ. ಯಶಸ್ಸು ಲಭಿಸಿದ ಮೇಲೆ ನೀವು ಪಟ್ಟ ಕಷ್ಟ ನಿಮಗೆ ಗೊತ್ತಾಗುವುದಿಲ್ಲ… ಯಾವತ್ತೂ ಒಂದೇ ಗೆಲುವಿಗೆ ಹಾಗೂ ಯಶಸ್ಸಿಗೆ ಸಮಾಧಾನಪಟ್ಟುಕೊಳ್ಳಬಾರದು. ಯಶಸ್ಸನ್ನು ಬೆನ್ನಟ್ಟಿ ಹೋಗಬೇಕು. ಗುರಿ ಮುಟ್ಟುವ ಹಾದಿಯಲ್ಲಿ ಯಾವತ್ತೂ ವಿಶ್ರಮಿಸಬಾರದು’ ಎಂದಿದ್ದಾರೆ.

ಸೋಲುಗಳಿಂದ ಪಾಠ: ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಪುಲ್ಲೇಲ ಗೋಪಿಚಂದ್, ‘ನಿಮ್ಮ ತಪ್ಪು ಹಾಗೂ ಸೋಲುಗಳ ಬಗ್ಗೆ ಯಾವತ್ತೂ ನಕಾರಾತ್ಮಕವಾಗಿ ಯೋಚಿಸಬೇಡಿರಿ. ಸೋಲುಗಳಿಂದಲೂ ಪಾಠ ಕಲಿಯಬಹುದು. ಕನಸನ್ನು ಬೆನ್ನು ಹತ್ತಿ ಹೋಗುವ ಹಾದಿಯಲ್ಲಿ ನಿರಾಶೆ, ಖಿನ್ನತೆ ಸಹಜ. ಸದಾ ನಿಮ್ಮ ಕನಸಿನೊಂದಿಗೆ ಪಯಣಿಸಿ, ಅದರೊಂದಿಗೇ ಜೀವಿಸಿ’ ಎನ್ನುತ್ತಾರೆ. ಒಂದು ಪ್ರಮುಖ ಸಭೆಯಲ್ಲಿ ಪ್ರಖ್ಯಾತ ಖಗೋಳ ವಿಜ್ಞಾನಿ, ‘ಖಗೋಳ ವಿಜ್ಞಾನಿಗೆ ಈ ಅಳತೆ ಸಿಗದ ಬ್ರಹ್ಮಾಂಡದಲ್ಲಿ ಮನುಷ್ಯ ಕೇವಲ ಯಃಕಶ್ಚಿತ್ ಒಂದು ಚುಕೆ್ಕ ಮಾತ್ರ ಎಂದೆನಿಸುತ್ತದೆ’ ಎಂದರು. ಆ ಸಭೆಯಲ್ಲಿ ಉಪಸ್ಥಿತರಿದ್ದ ವಿಜ್ಞಾನಿ ಆಲ್ಬರ್ಟ್ ಐನ್​ಸ್ಟೀನ್ ಹೇಳುತ್ತಾರೆ: ‘ಇಂತಹ ಭಾವನೆ ನನಗೂ ಹಲವು ಬಾರಿ ಬಂದಿದೆ, ನನಗೂ ಈಗ ಅರಿವಾಯ್ತು. ಆದರೆ, ಈ ಯಃಕಶ್ಚಿತ್ ಚುಕ್ಕೆ ಖಗೋಳ ವಿಜ್ಞಾನಿಯೂ ಆಗಿರಬಹುದು’. ಅಂದರೆ ಮಾನವನು ತನ್ನನ್ನು ತಾನು ಕೀಳಾಗಿ ಪರಿಭಾವಿಸಬಾರದು.

‘ಬದುಕಿನಲ್ಲಿ ಹಣ ಎಂಬುದೊಂದು ಸಾಧನ. ಆದರೆ ಅದೇ ಸರ್ವಸ್ವವಾಗದು! ಅದು ನಮ್ಮನ್ನು ನಾವಿಷ್ಟಪಟ್ಟಲ್ಲಿಗೆ ಕೊಂಡೊಯ್ಯಬಲ್ಲದು, ಆದರೆ ನಮ್ಮನ್ನು ಚಾಲಕನ ಸ್ಥಾನದಲ್ಲಿ ಕೂರಿಸಲು ಹಣಕ್ಕೆ ಅಸಾಧ್ಯವಂತೆ’! ಇದು ಮಹಾತ್ಮರೊಬ್ಬರ ಅಭಿಮತ.

ವಿಶ್ವವಿಖ್ಯಾತ ಇತಿಹಾಸಜ್ಞ ವಿಲ್​ಡ್ಯೂರೆಂಟ್ ಹೇಳಿದ ಮಾತು ಪರಮಾದ್ಭುತ: ‘ಇಟಲಿಯ ಪ್ರಗತಿಗೆ ಒಂದು ಪುನರುಜ್ಜೀವನ ಚಳವಳಿ (Renaissance), ಜರ್ಮನಿಯ ಪ್ರಗತಿಗೆ ಒಂದು ಸುಧಾರಣಾ ಚಳವಳಿ(Reformation), ಫ್ರಾನ್ಸ್ ಪ್ರಗತಿಗೆ ಒಬ್ಬ ಮಹಾ ವಾಗ್ಮಿ ವಾಲ್ಟೈರ್, ಆದರೆ ಭಾರತದ ಸಮಗ್ರ ಪ್ರಗತಿಗೆ ಸ್ವಾಮಿ ವಿವೇಕಾನಂದ’! ಅಂದರೆ ಸ್ವಾಮಿ ವಿವೇಕಾನಂದರ ಪ್ರವಚನಗಳಲ್ಲಿ ಮೂಡಿಬಂದ ಪ್ರಖರ ಚಿಂತನೆಗಳು ಪುನರುಜ್ಜೀವನ ಚಳವಳಿ ಹಾಗೂ ಸುಧಾರಣಾ ಚಳವಳಿಗೆ ಪೂರಕವಾದ ಅಂಶಗಳನ್ನು ಒಳಗೊಂಡಿದೆ. ಮೃತಪ್ರಾಯದ ಕಡೆಗೆ ಸಾಗುತ್ತಿದ್ದ ಭಾರತವನ್ನು ಬದುಕಿಸಿ ಶಕ್ತಿಸಂಜೀವಿನಿಯ ಗುರಿಯೆಡೆಗೆ ಕೊಂಡೊಯ್ಯುವ, ಊಹಿಸಲೂ ಅಸಾಧ್ಯವೆನಿಸಬಹುದಾದ ಕಾರ್ಯವನ್ನು ಸ್ವಾಮಿ ವಿವೇಕಾನಂದರು ಯಶಸ್ವಿಯಾಗಿ ಕೈಗೊಂಡರು.

ಬೆಳಕಿನೆಡೆಗೆ…: ಜಗತ್ತಿಗೆ ಬೆಳಕು ಬೇಕಾಗಿದೆ. ಜಗತ್ತು ಎಂದೂ ಬೆಳಕಿನ ಆರಾಧಕ. ದೌರ್ಬಲ್ಯವನ್ನು ಒಪ್ಪಿ ಅಪ್ಪುವುದರಿಂದ ಮಾನವ ಜೀವಚ್ಛವವೇ ಆಗುತ್ತಾನೆ. ಆದ್ದರಿಂದಲೇ ಸ್ವಾಮಿ ವಿವೇಕಾನಂದರು ನಮ್ಮನ್ನು ಉಪನಿಷತ್ತಿನ ಅಧ್ಯಯನಕ್ಕೆ ಪ್ರೇರೇಪಿಸುತ್ತಾರೆ. ಅವರು ಭಾರತೀಯರಿಗೆ ‘ಉಪನಿಷತ್ತುಗಳೆಡೆಗೆ ಮರಳಿ’ ಎಂದು ಕರೆ ನೀಡುತ್ತಾರೆ.

ಜಗತ್ತಿನ ಮಹಾನ್ ಚಿಂತಕ ಆಲ್ವಿನ್ ಟಾಫ್ಲರ್ ತನ್ನ ಪುಸ್ತಕ ‘ಪವರ್ ಶಿಫ್ಟ್’ನಲ್ಲಿ ಹೀಗೆ ಉಲ್ಲೇಖಿಸುತ್ತಾನೆ: ‘ಇಂದು ರಾಜಕೀಯ ನಾಯಕರುಗಳಲ್ಲಿ ಕೆಲವರಾದರೂ ಸಮಗ್ರದೃಷ್ಟಿ (Holistic approach) ವಿಧಾನದಿಂದ ಕರ್ತವ್ಯ ನಿರ್ವಹಣೆ ಮಾಡಿದ್ದರೆ ಪ್ರಸ್ತುತ ವಸ್ತುಸ್ಥಿತಿಯೇ ಬೇರೆಯಾಗುತ್ತಿತ್ತು. ಇತಿಹಾಸ ಸೃಷ್ಟಿಯಾಗುವುದು ಬಹುಜನರ ಸ್ವಾರ್ಥತೆಯಿಂದಲ್ಲ; ಅದು ಸೃಷ್ಟಿ ಆಗುವುದು ಕೆಲವೇ ನಿಃಸ್ವಾರ್ಥ ರಚನಾತ್ಮಕ ದೃಷ್ಟಿ ಉಳ್ಳವರಿಂದ ಮಾತ್ರ’. ಸಮಾಜದಲ್ಲಿ ಜನರಿಗೆ ಸಾಮಾನ್ಯವಾಗಿ ಎರಡು ಬಗೆಯ ಭಯಗಳು ಕಾಡುತ್ತವೆ. ಅವುಗಳೆಂದರೆ ‘ಸೋಲಿನ ಭಯ’ ಮತ್ತು ‘ಟೀಕೆಯ ಭಯ’. ಆದರೆ ಭಯದಿಂದ ಪಾರಾಗಲು ಭಯ ಕುರಿತು ಚಿಂತಿಸುವುದರಿದ ಸಾಧ್ಯವೇ ಇಲ್ಲ, ಬದಲಾಗಿ ಶಕ್ತಿಯನ್ನು ಕುರಿತು ಚಿಂತನೆ ನಡೆಸುವುದು! ಶ್ರೀರಾಮಕೃಷ್ಣರ ನೇರ ಶಿಷ್ಯರಾದ ಸ್ವಾಮಿ ತುರೀಯಾನಂದರು ಒಮ್ಮೆ ಹೇಳಿದ್ದ್ದುಂಟು: ‘ತಮ್ಮ ಮನಸ್ಸಿನ ಮೇಲೆ ಹಿಡಿತ ಸಾಧಿಸಿರುವಂಥವರೊಂದಿಗೆ ಜೀವಿಸಲು ಯತ್ನಿಸಿ. ಒಂದೊಮ್ಮೆ ಅದು ಸಾಧ್ಯವಾಗದಿದ್ದಲ್ಲಿ, ಅವರ ಕುರಿತೇ ಆಲೋಚಿಸಿ. ಒಂದು ಮನಸ್ಸು ಮತ್ತೊಂದು ಮನಸ್ಸನ್ನು ನಿಯಂತ್ರಿಸುತ್ತದೆ’.

ಯುವಶಕ್ತಿಗೆ ಅನ್ವರ್ಥವಾಗಿರುವ ಸ್ವಾಮಿ ವಿವೇಕಾನಂದರು ಮಾನವನ ಆಭ್ಯುದಯಕ್ಕಾಗಿಯೇ ಹೋರಾಡಿದವರು. ಅಲ್ಲದೆ ಅವರೇ ಹೇಳಿದ್ದಾರೆ- ‘ನಾನು ಸ್ಪೂರ್ತಿ ನೀಡುವುದನ್ನು ನಿಲ್ಲಿಸುವುದಿಲ್ಲ’ ಎಂದು. ಅವರ ಈ ಮಾತು ನಮ್ಮಲ್ಲಿರುವ ದೌರ್ಬಲ್ಯದ ತೊಗಲನ್ನು ಕೊಡವಿಹಾಕಲಿ, ನಕಾರಾತ್ಮಕ ವಿಚಾರಗಳನ್ನು ಹೊಸಕಿಹಾಕಲಿ. ನಮ್ಮನ್ನು ಆಶಿಷ್ಟ, ದೃಢಿಷ್ಟ, ಬಲಿಷ್ಠರನ್ನಾಗಿಸಲೆಂದು ಆಶಿಸೋಣ.

Courtesy : Prajavani.net

http://vijayavani.net/column-viveka-dhare-from-swami-veereshananda-saraswati/

Leave a Reply