ನಗೆಯುಕ್ಕಿಸಿದ ‘ಗುಗ್ಗು’ವಿಗೆ ನೂರು…

ನಗೆಯುಕ್ಕಿಸಿದ ‘ಗುಗ್ಗು’ವಿಗೆ ನೂರು…

ಸದಾ ನೆನಪಿನಲ್ಲಿ ಇರಿಸಿಕೊಳ್ಳಬೇಕಾದ ಹಲವು ನಟರನ್ನು ಕನ್ನಡ ಚಿತ್ರರಂಗ ನೀಡಿದೆ. ಅಂಥವರಲ್ಲಿ ಒಬ್ಬರು ‘ಗುಗ್ಗು’. ತಂದೆಯ ಅಂಗಡಿಯ ಗಲ್ಲಾಪೆಟ್ಟಿಗೆಯಿಂದ ಚಿತ್ರರಂಗದವರೆಗಿನ ಅವರ ಯಾನವನ್ನು ಈ ಬರಹದಲ್ಲಿ ಕಟ್ಟಿಕೊಡಲಾಗಿದೆ. ಕನ್ನಡ ಚಿತ್ರಗಳನ್ನು ನೋಡುತ್ತ ಬಳೆದ ಒಂದು ತಲೆಮಾರಿನವರಿಗೆ ‘ಗುಗ್ಗು’ವಿನ ನೆನಪನ್ನು ಮತ್ತೆ ತರಿಸುವಂತಿದೆ ಈ ಲೇಖನ…

ತಮಾಷೆ ಮಾತು, ಮುಗ್ಧತೆ, ಪೆದ್ದು ಪೆದ್ದಾದ ಮುಖ್ಯ ಮಹತ್ವದ ಪಾತ್ರಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದ ಕಲಾವಿದ ’ಕಾಮೆಡಿಯನ್‌ ಗುಗ್ಗು’ಗೆ ಈಗ ನೂರು ವರ್ಷ.

ಗುಡೇಮಾರನಹಳ್ಳಿ ಬೆಂಗಳೂರು ಸೆರಗಿನಲ್ಲಿರುವ ಮಾಗಡಿ ಸಮೀಪದ ಪುಟ್ಟಹಳ್ಳಿ. ಇಲ್ಲಿನ ಮಾಕಂ ಕೃಷ್ಣಯ್ಯ ಶೆಟ್ಟಿ–ಕಮಲಮ್ಮನವರ ಮಗ ಗುಗ್ಗು ಜನಿಸಿದ್ದು 1918ರ ಮಾರ್ಚ್‌ 18 ರಂದು.

ಬೆಂಗಳೂರಿನ ಅಕ್ಕಿಪೇಟೆಯಲ್ಲಿ ಕೃಷ್ಣಯ್ಯಶೆಟ್ಟಿ ಅವರು ಜವಳಿ ಅಂಗಡಿ ಇಟ್ಟುಕೊಂಡಿದ್ದರು. ಅವರ ಮಗ ಅಶ್ವತ್ಥನಾರಾಯಣ ಶೆಟ್ಟಿಯನ್ನು ಶಾಲೆಗೆ ಹಾಕಿದರೂ  ಆತನ ಗಮನವೆಲ್ಲಾ ಆ ಕಾಲಕ್ಕೆ ಬೆಂಗಳೂರಿನ ಆ ಪೇಟೆಯಲ್ಲಿ ಹೆಚ್ಚಿದ್ದ ವೃತ್ತಿ ನಾಟಕ ಕಂಪನಿಗಳತ್ತಲೇ ಇತ್ತು. ತಂದೆಯ ಭಯದಿಂದ ಶಾಲೆ ಮುಗಿದ ಮೇಲೆ ಅಂಗಡಿ ಗಲ್ಲಾ ಪೆಟ್ಟಿಗೆ ಮೇಲೆ ಒಂದೆರಡು ಗಂಟೆ ಇದ್ದಂತೆ ಮಾಡುತ್ತಿದ್ದ ಅಶ್ವತ್ಥನಾರಾಯಣ ಗೆಳೆಯರೊಂದಿಗೆ ನಂತರ ನಾಟಕಗಳಿಗೆ ಹಾಜರ್‌.

ನಾಟಕಗಳ ಜೊತೆಗೆ ಅಶ್ವತ್ಥನಾರಾಯಣನಿಗೆ ಸಿನಿಮಾ ನೋಡುವ ಖಯಾಲಿ. ತಂದೆ ದಬಾಯಿಸಿದರೆ ಹರಿಕಥೆ ಕೇಳಲು ಹೋಗಿದ್ದೇ ಅಂಥ ತಪ್ಪಿಸಿಕೊಳ್ಳುವುದನ್ನು ಕಲಿತಿದ್ದ ಅಶ್ವತ್ಥನಾರಾಯಣ ಒಮ್ಮೆ ಧೈರ್ಯ ಮಾಡಿ ನಾಟಕ ಕಂಪನಿ ಮಾಲಿಕರಲ್ಲಿಗೆ ಹೋಗಿ ಪಾರ್ಟು ಮಡುವ ಅವಕಾಶವನ್ನು ಕೇಳಿಬಿಟ್ಟರು.

ಆ ಕಂಪನಿ ಮಾಲೀಕರು ಇನ್ಯಾರೂ ಅಲ್ಲ. ಸುಪ್ರಸಿದ್ಧ ಕಾಮಡಿಯನ್‌ ಕೆ. ಹಿರಣ್ಣಯ್ಯ. ‘ಬಾರಯ್ಯ ನಿನಗೊಂದು ಚಾನ್ಸ್‌ ಕೊಡ್ತೀನಿ’ ಅಂದುಬಿಟ್ಟ ಕೂಡಲೇ ಅಶ್ವತ್ಥನಾರಾಯಣ ಅವರ ಕಾಲಿಗೆಬಿದ್ದು ನಮಸ್ಕರಿಸಲು ಮುಂದಾದ. ಆಗ ಅವರೆಂದರೂ ‘ಅದು ದಿನಾ ನನಗೆ ನಮಸ್ಕಾರ ಮಾಡೋ ಪಾತ್ರ ಕಣಯ್ಯ’ ಎಂದದ್ದೇ ಚಿಗುರುಮೀಸೆ ಅಶ್ವತ್ಥನಾರಾಯಣನಿಗೆ ಖುಷಿಯೋ ಖುಷಿ.

ಹಾಸ್ಯ ನಾಟಕದಲ್ಲಿ ಅಶ್ವತ್ಥನಾರಾಯಣ ಶೆಟ್ಟರಿಗೆ ಪುಟ್ಟ ಪಾತ್ರ ಸಿಕ್ಕಿತು. ಮಾಲೀಕ ಕೆ. ಹಿರಣ್ಣಯ್ಯನವರು ಆ ಪಾತ್ರವನ್ನು ‘ಗುಗ್ಗು’ ಎಂದು ಕರೆದರು. ಹಿರಣ್ಣಯ್ಯನವರ ಕಂಪನಿಯಲ್ಲಿ ಪಾತ್ರ ಮಾಡುತ್ತಿದ್ದಾನೆ ಎಂದ ಮೇಲೆ ಮನೆಯವರೂ ಅದರಲ್ಲೂ ತಾಯಿ–ತಂದೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ.

ಹೆಚ್ಚಿನ ಶ್ರಮವಿಲ್ಲದೆ ಪುಟಾಣಿ ಪಾತ್ರ ನಿರ್ವಹಿಸುತ್ತಿದ್ದ ಅಶ್ವತ್ಥನಾರಾಯಣ ಶೆಟ್ಟಿ ತಾವು ಅಭಿನಯಿಸುತ್ತಿದ್ದ ಪಾತ್ರದ ಹೆಸರನ್ನೇ ತಾವು ಇಟ್ಟುಕೊಂಡರು. ಜೊತೆಗೆ ಕೆ. ಹಿರಣ್ಣಯ್ಯನವರಿಗೆ ಇದ್ದ ವಿಶೇಷಣ ಕಾಮೆಡಿಯನ್‌ ಅನ್ನೂ ಸೇರಿಸಿಕೊಂಡು ‘ಕಾಮೆಡಿಯನ್‌ ಗುಗ್ಗು’ ಎಂದು ಘೋಷಿಸಿಕೊಂಡರು!

ಗುಗ್ಗುಗೇ ಬಣ್ಣದ ಬದುಕಿನಲ್ಲಿಯೇ ಇರಬೇಕೆಂಬ ಆಕಾಂಕ್ಷೆ. ರಂಗಭೂಮಿಯಲ್ಲಿ ಜಾಗ ಹುಡುಕಿಕೊಂಡಿದ್ದ ಅವರಿಗೆ ಚಲನಚಿತ್ರಗಳಲ್ಲೂ ಕಾಣಿಸಿಕೊಳ್ಳಬೇಕೆಂಬ ಹಂಬಲ. ಆಗೊಂದು ಈಗೊಂದು ಕನ್ನಡ ಚಿತ್ರಗಳು ತೆರೆಗೆ ಬರುತ್ತಿದ್ದ ಕಾಲ ಅದು. 1950ರ ದಶಕದ ಶುರುವಿನಲ್ಲಿ ಕನ್ನಡ ಚಿತ್ರಗಳು ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿಯೇ ತಯಾರಾಗಲು ಪ್ರಯತ್ನಗಳು ನಡೆದಿದ್ದವು.

1954 ರಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸ ಉತ್ಸಾಹ. ರಾಜಕುಮಾರ್‌ ಅವರ ‘ಬೇಡರ ಕಣ್ಣಪ್ಪ’ ಸಿದ್ಧವಾಗಿತ್ತು. ಇನ್ನೊಬ್ಬ ಹೊಸ ನಟ ಚೊಕ್ಕಣ್ಣ (ಕಲ್ಯಾಣ ಕುಮಾರ್‌) ಅಭಿನಯಿಸುತ್ತಿದ್ದ ‘ನಟಶೇಖರ’ ಚಿತ್ರಕ್ಕಾಗಿ ಸಿದ್ಧತೆಗಳು ನಡೆದಿದ್ದವು. ಅದರ ನಿರ್ದೆಶಕ ಸಿ.ವಿ. ರಾಜು, ಗುಗ್ಗು, ಸಿ.ವಿ. ರಾಜುರನ್ನ ಭೇಟಿಯಾಗಿ ಚಿತ್ರದಲ್ಲಿ ಚಾನ್ಸ್‌ ಕೇಳಿದಾಗ ಅವರು ಇಲ್ಲವೆನ್ನಲಿಲ್ಲ.

ಅತೀವ ಸಂತೋಷಗೊಂಡ ‘ಗುಗ್ಗು’ ಬೆಳ್ಳಿಪರದೆಯಲ್ಲೂ ಕಾಣಿಸಿಕೊಳ್ಳಲಿದ್ದೇನೆಂದು ಮನೆಯವರಿಗೆ ಹೇಳಿ ಮದ್ರಾಸಿಗೆ ಹೊರಟರು.

ನಾಡಿಗೇರ್‌ ಕೃಷ್ಣರಾಯರು ಕನ್ನಡದ ಖ್ಯಾತ ಹಾಸ್ಯ ಸಾಹಿತಿಗಳು. ಸಿ.ವಿ. ರಾಜು, ನಾಡಿಗೇರರಿಗೆ ‘ನಟಶೇಖರ’ ಚಿತ್ರದ ಚಿತ್ರಕಥೆ. ಸಂಭಾಷಣೆ ಬರೆಯುವ ಹೊಣೆ ಒಪ್ಪಿಸಿದ್ದರು. ಅಶ್ವತ್ಥನಾರಾಯಣ ಶೆಟ್ಟರಿಗೆ (ಗುಗ್ಗು) ಪಾತ್ರವೊಂದನ್ನು ಸೃಷ್ಟಿಸಲು ಅವರಿಗೆ ಹೇಳಿದ್ದೇ ಗುಗ್ಗು ಮುಖದಲ್ಲಿ ನಗು ಅರಳಿತು.

ನೂತನ ನಟ ಕಲ್ಯಾಣ್‌ ಕುಮಾರ್‌. ಜಯಲಲಿತಾ ತಾಯಿ ಸಂದ್ಯಾ ವಿದ್ಯಾವತಿ, ರಾಮಚಂದ್ರಶಾಸ್ತ್ರೀ, ರಮಾದೇವಿ, ಗಣಪತಿಭಟ್ ಮೊದಲಾದ ಅನುಭವಿ ನಟ ವರ್ಗವಿದ್ದ ‘ನಟಶೇಖರ’ದಲ್ಲಿ ‘ಗುಗ್ಗು’ ಎಂಬ ಹೊಸ ಕಲಾವಿದನಿಗೂ ಜಾಗ ಇತ್ತು. ಅಲ್ಲಿಂದಾಚೆ ಶುರುವಾಯ್ತು ‘ಗುಗ್ಗು’ ಅವರ ಸಿನಿ ಪಯಣ.

ಸಿನಿಮಾ ಸೇರಬೇಕೆಂದರೆ ಸುಂದರವಾಗಿರಬೇಕು. ಉತ್ತಮ ದೇಹದಾಢ್ಯತೆ ಹೊಂದಿರಬೇಕು. ಒಟ್ಟಿನಲ್ಲಿ ಸೌಂದರ್ಯ ಮುಖ್ಯ ಎನ್ನುವ ಆ ಕಾಲದಲ್ಲಿ ಇದಾವುದೂ ಇಲ್ಲದ, ಮುಖ ನೋಡಿದರೆ ನಗು ತರಿಸುತ್ತಿದ್ದ ಜಿ.ಎಂ. ಮಾಕಂ ಅಶ್ವತ್ಥನಾರಾಯಣ ಶೆಟ್ಟಿ  ಉರೂಪ್‌ ಕಾಮೆಡಿಯನ್‌ ‘ಗುಗ್ಗು’ ಕ್ಯಾಮರಾ ಮುಂದೆ ನಿಂತರು. ಕ್ಯಾಮರಾ ಮುಂದೆಯೇ ತಮ್ಮ ಬದುಕು ರೂಪಿಸಿಕೊಳ್ಳಲು ಮುಂದಾದರು.

ಆ ಕಾಲದಲ್ಲಿ ಚಿತ್ರ ತಯಾರಿಕೆ ಎಂದರೆ ಕಲಾವಿದ–ತಂತ್ರಜ್ಞರೆಲ್ಲ ಒಂದೇ ಮನೆಯಲ್ಲಿದ್ದು ಅಲ್ಲಿಯೇ ಏರ್ಪಾಡಾಗಿರುತ್ತಿದ್ದ ಊಟೋಪಚಾರಗಳನ್ನು ಪಡೆಯಬೇಕಿತ್ತು. ಕಂಪನಿ ಮನೆಯಲ್ಲಿಯೇ ಮಲಗಬೇಕಿತ್ತು. ‘ನಟಶೇಖರ’ ತಾರಾಗಣದಲ್ಲಿದ್ದ ‘ಗುಗ್ಗು’ಗೆ ಈ ಸೌಲಭ್ಯವಿತ್ತು. ಚಿತ್ರೀಕರಣ ಇಲ್ಲದ ಸಮಯದಲ್ಲಿ ಬೇರೆ ಸ್ಟುಡಿಯೋಗಳಿಗೆ ಹೋಗಿ ಸಿನಿಮಾದಲ್ಲಿ ಚಾನ್ಸ್‌ ಕೇಳುವುದನ್ನು ‘ಗುಗ್ಗು’ ಸದಾ ಮಾಡುತ್ತಿದ್ದರು.

ಮದ್ರಾಸಿನಲ್ಲಿ ವಾಸವಿದ್ದರೆ ಮಾತ್ರಾ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಗುತ್ತೆ ಎಂಬುದನ್ನು ಅರಿತ ಗುಗ್ಗು ವಸತಿಯೊಂದನ್ನು ನೋಡಿಕೊಳ್ಳಲು ಗೆಳೆಯರ ನೆರವು ಕೇಳಿದ್ದರು. ಆಗ ಅವರಿಗೆ ಸಿಕ್ಕಿದ್ದೇ ಕೋಡಂಬಾಕ್ಕಂ ಕೊಠಡಿ. ಒಬ್ಬರು ಮಲಗಬಹುದಾದ ಈ ರೂಮ್‌ ಕನ್ನಡ ಚಿತ್ರ ಚರಿತ್ರೆಯಲ್ಲಿ ಶಾಶ್ವತವಾದ ಸ್ಥಾನ ಗಿಟ್ಟಿಸಿಕೊಂಡಿದ್ದು ಈಗ ಇತಿಹಾಸದ ಭಾಗ ಎನ್ನುತ್ತಾರೆ. ಗುಗ್ಗು ಗೆಳೆಯ ಹೆಸರಾಂತ ನಿರ್ದೇಶಕ ನಟ ಸಿ.ವಿ. ಶಿವಶಂಕರ್‌.

ಇದು ಮದ್ರಾಸ್‌ನ ಚಲನಚಿತ್ರ ಸ್ಟುಡಿಯೋಗಳಿಗೆ ಹೋಗುವ ಮಾರ್ಗ ಮಧ್ಯೆ ಇರುವ ಸ್ಥಳದಲ್ಲಿದ್ದ ಸ್ಥಳ. ರೈಲು ನಿಲ್ದಾಣಗಳಿಗೂ ಸಮೀಪವಿದ್ದ ಜಾಗ, ಕೊಠಡಿ ಚಿಕ್ಕದಾಗಿದ್ದರೂ ಮುಂದೆ ವಿಶಾಲವಾದ ಖಾಲಿ ಜಾಗವಿತ್ತು. ‘ಗುಗ್ಗು’ ಮನಸ್ಸು ಮಾಡಿ ಮುಂಗಡ ಹಣಕೊಟ್ಟು ರೂಂಗೆ ಕಾಲಿಟ್ಟರು. ನಟನಾಗಲೇಬೇಕೆಂಬ ಅದಮ್ಯ ಆಸೆಯೇ ‘ಗುಗ್ಗು’ ಇಲ್ಲಿರಲು ಮನಸ್ಸು ಮಾಡಿದಂತಿತ್ತು. ಹಗ್ಗದಿಂದ ಹೆಣೆದ ಮಂಚ–ಚಾಪೆ. ಇದ್ದ ಬಟ್ಟೆ ನೇತಾಗಲು ಗೋಡೆಗೆ ಮೊಳೆ ಬಡಿದು ಕೊಠಡಿ ಸಜ್ಜು ಮಾಡಿಕೊಂಡ ‘ಗುಗ್ಗು’ ಮುಖ ನೋಡಿಕೊಳ್ಳಲು ‘ಕನ್ನಡಿ’ ದಿನಾ ನಮಸ್ಕರಿಸಲು ವೆಂಕಟೇಶ್ವರನ ಫೋಟೋ ಹಾಕುವುದನ್ನು ಮರೆಯಲಿಲ್ಲ.

ಸಣ್ಣ ಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತ, ಚಿತ್ರೀಕರಣ ಇಲ್ಲದ ಹೊತ್ತಿನಲ್ಲಿ ಸ್ಟುಡಿಯೋಗಳನ್ನು ಸುತ್ತುವುದನ್ನು ಅಭ್ಯಾಸ ಮಾಡಿಕೊಂಡಿದ್ದ ‘ಗುಗ್ಗು’ ಆರ್ಥಿಕವಾಗಿ ಗಟ್ಟಿಯಾಗಿಲ್ಲದಿದ್ದರೂ ಸಹಾಯ ಕೇಳಿಬಂದವರಿಗೆ ಬರಿಗೈನಲ್ಲಿ ಕಳಿಸುತ್ತಿರಲಿಲ್ಲ. ಡಾ. ರಾಜ್‌ಕುಮಾರ್‌, ಟಿ.ಆರ್‌. ನರಸಿಂಹರಾಜು, ಟಿ.ಎನ್‌. ಬಾಲಕೃಷ್ಣ, ಉದಯಕುಮಾರ್‌ ಹೀಗೆ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ನಟರೂ ಬಂದು ಹೋಗುತ್ತಿದ್ದ ‘ಗುಗ್ಗು’ ಕೊಠಡಿಗೆ ಹಿರಿಯ ನಟ ರಾಮಚಂದ್ರಶಾಸ್ತ್ರೀ ‘ಗುಗ್ಗು ಮಹಲ್‌’ ಎಂದು ನಾಮಕರಣ ಮಾಡಿದ್ದೂ ಆಯಿತು.

ಮನೆಗೆ ಬಂದವರಿಗೆ ಕುರುಕುಲು ತಿಂಡಿ, ಪಕ್ಕದಲ್ಲೇ ಇದ್ದ ಉಡುಪಿ ಹೋಟಲ್‌ನಿಂದ ಕಾಫಿ ಕೊಡುವುದನ್ನು ‘ಗುಗ್ಗು’ ಯಾವಾಗಲೂ ತಪ್ಪಿಸುತ್ತಿರಲಿಲ್ಲ. ಆತ್ಮೀಯವಾದ ಮಾತು. ಸಾಧ್ಯವಾದಷ್ಟು ತಿಂಡಿ. ಆಗಾಗ ಹಾಸ್ಯ ಚಟಾಕಿ ಎಲ್ಲವೂ ಸಿಗುತ್ತಿದ್ದ ‘ಗುಗ್ಗು ಮಹಲ್‌’ಗೆ ಕನ್ನಡ ನಟರ ದಂಡೆ ಬರುತ್ತಿತ್ತು. ‘ಗುಗ್ಗು ಮಹಲ್‌’ನಲ್ಲಿ ಕನ್ನಡ ಚಿತ್ರರಂಗದ ಸ್ಥಿತಿಗತಿಗಳ ಬಗ್ಗೆ ಪರಾಮರ್ಶೆ ನಿರಂತರವಾಗಿ ನಡೆಯುತ್ತಿದ್ದರಿಂದ ಅದೊಂದು ಕನ್ನಡ ಸಿನಿಮಾ ವಾರ್ತಾ ಕೇಂದ್ರವೂ ಆಗಿತ್ತು.

ಹೊಸ ಚಿತ್ರದ ಮಾತುಕತೆ, ಮಹೂರ್ತದ ದಿನಾಂಕ ಕೆಲಸ ಮಾಡುವ ತಂತ್ರಜ್ಞರು, ಅಭಿನಯಿಸುವ ನಟ–ನಟಿಯರು ಎಲ್ಲವೂ ‘ಗುಗ್ಗು ಮಹಲ್‌’ನಲ್ಲಿ ಲಭ್ಯವಿರುತ್ತಿದ್ದರಿಂದ ಕನ್ನಡ ಪತ್ರಿಕೆಗಳಿಗೆ ಚಿತ್ರ ಸುದ್ದಿಗೇನು ಕೊರತೆ ಇರುತ್ತಿರಲಿಲ್ಲ.

‘ಭಕ್ತಿ ವಿಜಯ’, ‘ಓಹಿಲೇಶ್ವರ’, ‘ಪ್ರೇಮದ ಪುತ್ರಿ’, ‘ಇದೇ ಮಹಾಸುದಿನ’, ‘ಮಿಸ್‌ ಲೀಲಾವತಿ’, ‘ಬೀದಿ ಬಸವಣ್ಣ’, ‘ಹೇಮಾವತಿ’, ‘ಆಟೋರಾಜ’, ‘ಭೂಮಿಗೆ ಬಂದ ಭಗವಂತ’, ಹೀಗೆ 284ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ‘ಗುಗ್ಗು’ ಅಭಿನಯಿಸಿದರು. ಇವುಗಳಲ್ಲಿ ಒಂದೇ ದೃಶ್ಯದಲ್ಲಿ ಕಾಣಿಸಿಕೊಳ್ಳುವ ಪಾತ್ರಗಳೂ ಇರುತ್ತಿದ್ದವು. ಕೊಟ್ಟ ಯಾವುದೇ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವುದು ‘ಗುಗ್ಗು’ಗೆ ಅಭ್ಯಾಸವಾಗಿತ್ತು.

ನೋಡಲು ಆಕರ್ಷಕವಲ್ಲದ ‘ಗುಗ್ಗು’ ಕಪ್ಪಾಗಿದ್ದರೂ ಅವರ ಹೃದಯ ಶ್ರೀಮಂತಿಕೆಯನ್ನು ಮೆಚ್ಚದವರು ಕಡಿಮೆ. ಮದ್ರಾಸಿನಲ್ಲಿದ್ದ ಕನ್ನಡ ಚಿತ್ರರಂಗದವರಿಗೆ ತಮ್ಮ ‘ಗುಗ್ಗು ಮಹಲ್‌’ನಲ್ಲಿ ಆಶ್ರಯ ನೀಡುತ್ತಿದ್ದ ಗುಗ್ಗು ಹೆಚ್ಚೇನು ಸಂಪಾದಿಸಲು ಸಾಧ್ಯವಿರಲಿಲ್ಲ. ಬರುತ್ತಿದ್ದ ಸಣ್ಣ ಪ್ರಮಾಣದ ಆದಾಯದಲ್ಲಿ ಬೇರೆಯವರಿಗೆ ನೆರವಾಗುವುದನ್ನು ಗುಗ್ಗು ಕೊನೆವರೆಗೂ ಮರೆಯಲಿಲ್ಲ.

ಗುಗ್ಗು ಮದ್ರಾಸ್‌ನ ತಮ್ಮ ಮಹಲ್‌ನಲ್ಲಿದ್ದರೆ ಅವರ ಕುಟುಂಬ ಬೆಂಗಳೂರಿನಲ್ಲಿತ್ತು. ಮೂವರು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ‘ಗುಗ್ಗು’ ಕೊಡಿಸಿದ್ದರು. ಆರ್ಥಿಕವಾಗಿ ಸಬಲರಲ್ಲದ ‘ಗುಗ್ಗು’ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟಕೊಳ್ಳಲು ಸಾಧ್ಯವಾಗಿರಲಿಲ್ಲ. ನಟಶೇಖರದಿಂದ ಎ.ಟಿ. ರಘು ಅವರ ‘ಗೂಂಡಾ ಗುರು’ ಚಿತ್ರದವರೆಗೆ ಬಣ್ಣಹಚ್ಚಿ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುವುದನ್ನು ನಿರಂತರವಾಗಿ ಮಾಡಿದ ‘ಗುಗ್ಗು’ ಚಿತ್ರಕಥೆ–ಸಂಭಾಷಣೆ ಬರೆಯುವುದನ್ನು ರೂಢಿಸಿಕೊಂಡಿದ್ದರು. ಕೆಲವರು ಇವರ ಸಾಹಿತ್ಯವನ್ನು ಉಪಯೋಗಿಸಿಕೊಂಡು ಸ್ಮರಿಸುವ ಗೋಜಿಗೆ ಹೋಗಲಿಲ್ಲ.

ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಕ್ಕೆ ‘ಗುಗ್ಗು’ಗೆ ಸಂಭಾವನೆ ಸಿಕ್ಕಲಿಲ್ಲ. ಕೊಟ್ಟವರು ಹೆಚ್ಚಿಗೂ ಕೊಡುತ್ತಿರಲಿಲ್ಲ. ಇದಾವುದನ್ನು ‘ಗುಗ್ಗು’ ಚಿಂತಿಸುತ್ತಿರಲಿಲ್ಲ. ಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಪ್ರೇಕ್ಷಕರಿಂದ ಗುರ್ತಿಸಲ್ಪಡುತ್ತಿದ್ದ ‘ಗುಗ್ಗು’ ಹೃದಯ ವೈಶಾಲ್ಯದ  ವ್ಯಕ್ತಿಯಾಗಿ ಕನ್ನಡಿಗರೆಲ್ಲರ ಮನಸ್ಸು ಗೆದ್ದವರು.

ಕಾಮೆಡಿಯನ್‌ ಗುಗ್ಗು ಎಂಬ ವಿಭಿನ್ನ ಹೆಸರಿನಿಂದ ಹೆಸರಾದ ಮಾಕಂ ಅಶ್ವತ್ಥನಾರಾಯಣ ಶೆಟ್ಟರು ತಮ್ಮ ಪುಟ್ಟ ಪಾತ್ರಗಳಿಂದ, ವಿಶೇಷವಾಗಿ ಶೈಕಾವಸ್ಥೆಯಲ್ಲಿದ್ದ ಕನ್ನಡ ಚಿತ್ರರಂಗದ ನಟ–ಸಾಹಿತಿ–ತಂತ್ರಜ್ಞರಿಗೆ ವಿಶ್ರಾಂತಿ ತಾಣವನ್ನು ಮದ್ರಾಸಿನಲ್ಲಿ ಮಾಡಿಕೊಟ್ಟು ‘ಗುಗ್ಗು ಮಹಲ್‌’ನಿಂದ ಸ್ಮೃತಿಪಟಲದಲ್ಲಿ ಸದಾ ನಿಲ್ಲುತ್ತಾರೆ.

Leave a Reply