‘ನಿಜವನ್ನು ಅರಿತು ನಡೆದರೆ ಒತ್ತಡ ಇರದು’

‘ನಿಜವನ್ನು ಅರಿತು ನಡೆದರೆ ಒತ್ತಡ ಇರದು’

ಒತ್ತಡ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಇರುತ್ತದೆ. ಬಯಕೆಗಳ ಹಿಂದೆ ಓಡಿದಷ್ಟೂ ಒತ್ತಡಗಳ ಕಾಟ ಹೆಚ್ಚು; ಜೀವನದಲ್ಲಿ ಸತ್ಯವಾದುದು ಯಾವುದು ಎಂದು ತಿಳಿದು ಅದನ್ನು ಹಿಂಬಾಲಿಸಿದರೆ ಒತ್ತಡಗಳು ನಮ್ಮನ್ನು ಕಾಡದು. ಶೋಕ, ಕೋಪ, ಭಯಗಳಿಗೆ ತತ್‌ಕ್ಷಣವೇ ಪ್ರತಿಕ್ರಿಯಿಸುವುದೂ ಒತ್ತಡಕ್ಕೆ ಕಾರಣವಾಗಬಲ್ಲದು ಎನ್ನುತ್ತಾರೆ, ಮನೋರೋಗ ಚಿಕಿತ್ಸಕ, ಸಂಸ್ಕೃತಕವಿ ಡಾ. ಶಂಕರ್ ರಾಜಾರಾಮನ್.

ಒತ್ತಡವಿಲ್ಲದೆ ಜೀವನವಿಲ್ಲ. ಒಂದೆಡೆ ನಮ್ಮೆಲ್ಲರಿಗೂ ನಮ್ಮದೇ ಆದ ದೇಶ-ಕಾಲ-ವ್ಯಕ್ತಿ ಆಧಾರಿತ ಇತಿಮಿತಿಗಳಿರುತ್ತವೆ. ಇನ್ನೊಂದೆಡೆ ನಮ್ಮ ಜೀವನಕ್ಕೆ ಒಂದು ನಿರ್ದಿಷ್ಟವಾದ, ನಾವು ಸಾಧಿಸಲು ಬಯಸುವ ಗುರಿಯೂ ಇರುತ್ತದೆ. ಒತ್ತಡವೆಂಬುದು ಇವೆರಡರ ಸೆಣೆಸಾಟದ ಫಲ. ಇತಿಮಿತಿಗಳ ಮಧ್ಯೆಯೂ ಗುರಿಯನ್ನು ಸಾಧಿಸಲೇಬೇಕಾದ ಅನಿವಾರ್ಯ. ಅಭಿನವಗುಪ್ತನೇ ಮೊದಲಾದ ಕಾಶ್ಮೀರದಾರ್ಶನಿಕರ ಪ್ರಕಾರ ಈ ಒತ್ತಡದ ಸ್ಥಿತಿ ಜೀವಿಯ ಅಸ್ವಾತಂತ್ರ್ಯವನ್ನೇ ಸೂಚಿಸುತ್ತದೆ. ಒತ್ತಡವಿದ್ದಾಗಿ ಎಲ್ಲಿಯ ಸ್ವಾತಂತ್ರ್ಯ? ದೇಶಕಾಲಾದಿ ಉಪಾಧಿಗಳನ್ನು ಮೀರಿದ, ಚೈತನ್ಯಸ್ವರೂಪನಾದ, ಭಗವಂತ (ಕಾಶ್ಮೀರದರ್ಶನದ ಪರಿಭಾಷೆಯಲ್ಲಿ ‘ಶಿವ’) ಮಾತ್ರ ಯಾವೊಂದು ಒತ್ತಡದವೂ ಇಲ್ಲದೆ ಕೆಲಸ ಮಾಡಬಲ್ಲ. ಆದರೆ ಅವನು ಸ್ವಯಂಪರಿಪೂರ್ಣನಾಗಿರುವುದರಿಂದ ನಮ್ಮೆಲ್ಲರಿಗೂ ಇರುವ ಹಾಗೆ ಅವನಿಗೆ ಜೀವನದ ಗುರಿ ಎಂಬುದಿಲ್ಲ. ಅವನ ಮಟ್ಟಿಗೆ ಕೆಲಸವೆಂದರೆ ಅದೊಂದು ಸ್ವರೂಪದ ಸಹಜಾಭಿವ್ಯಕ್ತಿ. ಆದುದರಿಂದಲೇ ಸೈದ್ಧಾಂತಿಕರು ಅದನ್ನು ‘ಕೆಲಸ’ ಎಂದು ಕರೆಯದೆ ‘ಲೀಲಾ’ ಎಂಬ ಪದದಿಂದ ಗುರುತಿಸಿದ್ದಾರೆ. ಎಲ್ಲಿಯವರೆಗೂ ನಮಗೆ ನಮ್ಮ ಶಿವತ್ವದ ಅರಿವಿರುವುದಿಲ್ಲವೋ ಅಲ್ಲಿಯವರೆಗೂ ನಾವು ಒತ್ತಡದಲ್ಲಿಯೇ ಇರುತ್ತೇವೆ.

ಒತ್ತಡವನ್ನು ಗುರುತಿಸುವುದಾದರೂ ಹೇಗೆ?

ಭರತಮುನಿಯಿಂದ ಮೊದಲುಮಾಡಿ ಭಾರತೀಯ ಕಾವ್ಯ-ನಾಟ್ಯಶಾಸ್ತ್ರಜ್ಞರು ಮಾನವನ ದಿನನಿತ್ಯದ ಅನುಭವಕ್ಕೆ ಎಟುಕುವ ಕೆಲವೊಂದು ಮನಃಸ್ಥಿತಿಗಳನ್ನು (‘ಭಾವ’ಗಳನ್ನು) ವಿಶದವಾಗಿ ನಿರೂಪಿಸಿದ್ದಾರೆ. ಈ ಎಲ್ಲಾ ಸ್ಥಿತಿಗಳೂ ಸುಖದುಃಖಾತ್ಮಕ. ಪ್ರೀತಿಯೇ ಮುಂತಾದ ಸುಖಪ್ರಧಾನ ಭಾವಗಳಲ್ಲಿಯೂ ದುಃಖದ ಒಂದು ಎಳೆ ಇದ್ದೇ ಇರುತ್ತದೆ. ಅಂತೆಯೇ ಭಯವೇ ಮೊದಲಾದ ದುಃಖಪ್ರಧಾನ ಭಾವಗಳಲ್ಲಿಯೂ ಸುಖದ ಕಿಂಚಿತ್ ಅಂಶ ಅಂತರ್ಗತವಾಗಿರುತ್ತದೆ. ನಾವು ಅನುಭವಿಸುವ ಮನಃಸ್ಥಿತಿಯ ದುಃಖಾಂಶನ್ನು ಒತ್ತಡದ ಮಾಪಕವೆಂದು ಪರಿಗಣಿಸಬಹುದು. ಇನ್ನೊಂದು ವಿಧದಲ್ಲಿ ಹೇಳಬೇಕೆಂದರೆ ದುಃಖದ ಅನುಭವ ಹೆಚ್ಚಾದಂತೆ ಒತ್ತಡವೂ ಹೆಚ್ಚಾಗಿದೆಯೆಂದು ತಿಳಿಯಬಹುದು.

ಆಧುನಿಕ ಸಮಾಜದಲ್ಲಿ ಒತ್ತಡದ ಪ್ರಮಾಣ ಹೆಚ್ಚಾಗಿದೆಯೆಂದು ಹಿರಿಯರು ಪದೇ ಪದೇ ಶೋಕೊದ್ಗಾರವನ್ನು ಮಾಡುತ್ತಿರುತ್ತಾರೆ. ಅವರ ಈ ಶೋಕೋದ್ಗಾರವು ನಿರಾಧಾರವಾದದ್ದಲ್ಲ. ಸಮಾಜದಲ್ಲಿ ಅರ್ಥ-ಕಾಮಗಳನ್ನೇ ಮುಖ್ಯವಾಗಿ ಹಿಂಬಾಲಿಸುವವರ ಸಂಖ್ಯೆ ಯಾವಾಗಲೂ ಹೆಚ್ಚು. ಆದರೆ ಧರ್ಮ-ಮೋಕ್ಷಗಳ ಹಿರಿಮೆಯನ್ನು ಎತ್ತಿಹಿಡಿಯುವ ಕೆಲವೊಬ್ಬರಾದರೂ ಜ್ಞಾನಿಗಳು ಇದ್ದಲ್ಲಿ ಅಂತಹ ಸಮಾಜ ಆರೋಗ್ಯಕರವಾದ ಬೆಳವಣಿಗೆಯನ್ನು ಕಾಣುತ್ತದೆ. ಅದಕ್ಕೆ ಹೊರತಾಗಿ ‘ಧರ್ಮ-ಮೋಕ್ಷಗಳು ನಿರರ್ಥಕ, ಅರ್ಥ-ಕಾಮಗಳೇ ಮುಖ್ಯ’ ಎಂದು ಸಾರುವವರೇ ಜ್ಞಾನಿಗಳೆನಿಕೊಂಡು ಜನರ ಗೌರವಕ್ಕೆ ಪಾತ್ರರಾದರೆ ಸಮಾಜದ ಪತನ ಸುನಿಶ್ಚಿತ. ಅರ್ಥ-ಕಾಮಗಳೇ ಜೀವನದ ಸಫಲತೆ-ನಿಷ್ಫಲತೆಯನ್ನು ಅಳೆಯುವ ಮಾನದಂಡವಾಗಿಬಿಟ್ಟರೆ ಅದೆಷ್ಟೋ ಜನರನ್ನು ನಾವು ಅಗಣ್ಯರೆಂದು ತಳ್ಳಿಹಾಕಬೇಕಾದೀತು. ಅದೆಷ್ಟೋ ಜನರು ಅರ್ಥ-ಕಾಮಗಳ ಸಂಪಾದನೆಯಲ್ಲಿ ತಾವು ಬೇರೆಯವರಿಗಿಂತ ಹಿಂದಿದ್ದೇವೆಂದು ಭಾವಿಸಿ ಒತ್ತಡಕ್ಕೆ ತುತ್ತಾಗಬೇಕಾದೀತು. ತೀವ್ರವಾದ ಒತ್ತಡವಂತೂ ಅದೆಷ್ಟೋ ಶಾರೀರಿಕ ಹಾಗು ಮಾನಸಿಕ ರೋಗಗಳಿಗೆ ತೆರೆದ ಆಹ್ವಾನ.

ನಾವು ಒತ್ತಡವನ್ನು ಹಂತ ಹಂತವಾಗಿ ಕಡಿಮೆಮಾಡಬಹುದು. ಕೇವಲ ಬಾಹ್ಯವಸ್ತುಗಳ ಸಂಪಾದನೆಯಲ್ಲಿಯೇ ಆಸಕ್ತನಾದವನು ಆ ವಸ್ತುಗಳನ್ನು ಅನುಭವಿಸಿ ಸುಖವನ್ನು ಪಡೆಯುವತ್ತ ಮನಸ್ಸುಮಾಡಬೇಕು; ಭೋಗ್ಯ ವಸ್ತುಗಳನ್ನು ಸಂಪಾದಿಸಿ ಅವುಗಳನ್ನು ಅನುಭವಿಸುವ ದಕ್ಷತೆಯಿರುವವನು ಸಜ್ಜನೆಕೆಯಿಂದ ತನ್ನನ್ನು ನಿಯಂತ್ರಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆಯಬೇಕು; ಮನೋರೋಗಚಿಕಿತ್ಸಕನಾಗಿ ನಾನು ಪ್ರತಿನಿತ್ಯ ಭಾವತಲ್ಲಣಕ್ಕೊಳಗಾದ ಜನರನ್ನು ನೋಡುತ್ತಿರುತ್ತೇನೆ. ಅವರಲ್ಲಿ ಬಹಳಷ್ಟು ಜನರು ಅಸಂಬದ್ಧವಾದ ಯೋಚನೆ, ಮಾತು, ಮತ್ತು ಕ್ರಿಯೆಯನ್ನು ವ್ಯಕ್ತಗೊಳಿಸುವವರಾಗಿದ್ದು ಕೋಪ, ಭಯ, ಶೋಕ ಮುಂತಾದ ನರಾಕಾತ್ಮಕ ಮನಃಸ್ಥಿತಿಯನ್ನು ಹೊಂದಿರುವವರಾಗಿರುತ್ತಾರೆ. ತಮ್ಮ ವರ್ತನೆಯಿಂದ ಮನೆಯವರಿಗೆ ಕಿರಿಕಿರಿ ಉಂಟುಮಾಡುತ್ತಿರುತ್ತಾರೆ. ಮನೆಯವರ ನೆಲೆಯಿಂದ ಹೇಳಬೇಕೆಂದರೆ ರೋಗಿಯ ವರ್ತನೆ ಸ್ವಯಂಪ್ರೇರಿತ. ಆದರೆ ‘ಇದು ಸ್ವಯಂಪ್ರೇರಿತವಲ್ಲ, ಬದಲಾಗಿ ಮನೋರೋಗದ ಲಕ್ಷಣ’ ಎಂದು ನಿಶ್ಚಯಿಸಿದ ಮರುಕ್ಷಣವೇ ರೋಗಿಯ ಮೇಲೆ ಕನಿಕರವುಂಟಾಗಿ ಅವನಿಗೆ ಸಹಾಯಮಾಡುವ ನಿಟ್ಟಿನಲ್ಲಿ ನನ್ನ ಮನಸ್ಸು ಹರಿಯುತ್ತದೆ.

ವೈಯಕ್ತಿಕ ಜೀವನದಲ್ಲಂತೂ ನಾನು ಶೋಕ, ಕೋಪ, ಭಯ ಮುಂತಾದ ಮನಃಸ್ಥಿತಿಗಳಿಗೆ ಒಳಗಾದಾಗ ತತ್‌ಕ್ಷಣವೇ ಪ್ರತಿಕ್ರಿಯಿಸುವುದಿಲ್ಲ. ಪ್ರತಿಕ್ರಿಯೆಯ ಅಭಾವದಲ್ಲಿ ಆ ಮನಃಸ್ಥಿತಿಗಳಿಗೆ ಪೂರ್ಣವಾದ ಬಿಡುಗಡೆ ದೊರೆಯದೆ ಮನಸ್ಸಿನಲ್ಲಿಯೇ ಉಳಿದುಬಿಡುತ್ತವೆ. ಹೇಗೆ ಉಳಿದುಬಿಡುವ ಮನಃಸ್ಥಿತಿಗಳನ್ನು ನನ್ನ ಕಾವ್ಯದ ಪಾತ್ರಗಳ ಮೇಲೆ ಆರೋಪಿಸಿಬಿಡುತ್ತೇನೆ. ಹೀಗೆ ಮಾಡುವ ಮೂಲಕ ನನ್ನ ಶೋಕಾದಿ ಭಾವಗಳಿಗೆ ಬಿಡುಗಡೆಯೂ ದೊರೆತಂತಾಗುತ್ತದೆ. ಜೊತೆಗೆ ಕಾವ್ಯವೂ ಭಾವಸಂಪನ್ನವಾಗಿ ಮೂಡುತ್ತದೆ.

Courtesy : Prajavani.net

http://www.prajavani.net/news/article/2018/05/31/576250.html

Leave a Reply