ಪತಿ ಸವಾಲಿಗೆ ಕಥೆ ಬರೆದೆ…

ಪತಿ ಸವಾಲಿಗೆ ಕಥೆ ಬರೆದೆ…

ಕನ್ನಡ ಸಂಘರ್ಷ ಸಮಿತಿ ನೀಡುವ ಡಾ.ಅನುಪಮಾ ನಿರಂಜನ ಪ್ರಶಸ್ತಿಗೆ ಸಾಹಿತಿ ಇಂದಿರಾ ಹೆಗ್ಗಡೆ ಭಾಜನರಾಗಿದ್ದಾರೆ.

ಬೆಂಗಳೂರು: ಕನ್ನಡ ಸಂಘರ್ಷ ಸಮಿತಿ ನೀಡುವ ಡಾ.ಅನುಪಮಾ ನಿರಂಜನ ಪ್ರಶಸ್ತಿಗೆ ಸಾಹಿತಿ ಇಂದಿರಾ ಹೆಗ್ಗಡೆ ಭಾಜನರಾಗಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಜರಗನಹಳ್ಳಿ ಶಿವಶಂಕರ್‌ ಪ್ರಶಸ್ತಿ ಪ್ರದಾನ ಮಾಡಿದರು.

ಲೇಖಕಿ ಅನುಪಮಾ ನಿರಂಜನ ಅವರ ಹುಟ್ಟುಹಬ್ಬದ ಪ್ರಯುಕ್ತ ನಡೆದ ರಾಜ್ಯಮಟ್ಟದ ಮಹಿಳಾ ಕಥಾ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ ಈ ಸಂದರ್ಭದಲ್ಲಿ ಬಹುಮಾನ ನೀಡಲಾಯಿತು. ‘ವಿಸ್ಮೃತಿ’ ಕಥೆಗೆ ಡಾ. ದೀಪಾ ಜೋಶಿ ಮೊದಲ ಬಹುಮಾನ ಪಡೆದರೆ, ‘ಅಬ್ಬೋಲಿ’ ಕಥೆ ಬರೆದ ಅಕ್ಷತಾ ಕೃಷ್ಣಮೂರ್ತಿ ಹಾಗೂ ‘ಮುಖಾಮುಖಿ’ ಕಥೆಗೆ ಟಿ.ಎಸ್‌. ಶ್ರವಣಕುಮಾರಿ ಎರಡು ಹಾಗೂ ಮೂರನೇ ಬಹುಮಾನಗಳನ್ನು ಪಡೆದರು.

ಜರಗನಹಳ್ಳಿ ಶಿವಶಂಕರ್‌ ಮಾತನಾಡಿ, ‘ಇಂದಿನ ಕಾಲದಲ್ಲಿ ಪೋಷಕರು ಮನೆಗೆ ಟಿ.ವಿ ತರುವುದನ್ನು ಮರೆಯುವುದಿಲ್ಲ. ಅದರ ಬದಲಾಗಿ ತ್ರಿವೇಣಿ, ಇಂದಿರಾ ಅವರ ಪುಸ್ತಕಗಳನ್ನು ತಂದು ಇಟ್ಟರೆ ನಮ್ಮ ಮಕ್ಕಳು ಅದನ್ನು ಓದಲು ಆಕರ್ಷಿತರಾಗುತ್ತಾರೆ. ಸದ್ಯಕ್ಕೆ ಎಲ್ಲ ಕಡೆ ರಾಜಕೀಯದ ಚರ್ಚೆ ನಡೆಯುತ್ತಿದೆ. ನರಿ ಕೂಗು–ಗಿರಿಗೆ ಮುಟ್ಟಲ್ಲ ಎನ್ನುವ ಮಾತಿನಂತೆ, ನಾವು ಎಷ್ಟು ಮಾತನಾಡಿದರೂ ಅಷ್ಟೇ. ಮತ ಹಾಕಿದ ಮೇಲೆ ನಮ್ಮ ಮಾತು ನಡೆಯುತ್ತದೆಯೇ’ ಎಂದರು.

‘ಸಾಹಿತಿಗಳು ಆಡಂಬರ ಹಾಗೂ ಪ್ರಚಾರಕ್ಕೆ ಗುರಿಯಾಗಬಾರದು. ಇದರಿಂದ ಅವರ ಸಾಹಿತ್ಯ ಕೃಷಿ ಮಂಕಾಗುತ್ತದೆ. ಬರವಣಿಗೆ ಸಾಧ್ಯವಾಗುವುದಿಲ್ಲ. ಹಳ್ಳಿಯಲ್ಲೋ, ನಗರದಲ್ಲಿಯೋ ಒಂದು ಕಡೆ ಇದ್ದು ಬರೆಯುತ್ತಾ ಹೋಗಬೇಕು’ ಎಂದು ಕಿವಿಮಾತು ಹೇಳಿದರು.

ಲೇಖಕಿ ಡಾ. ವರದಾ ಶ್ರೀನಿವಾಸ, ‘ಕನ್ನಡ ಸಾಹಿತ್ಯ ಲೋಕಕ್ಕೆ ಅನುಪಮಾ ಅವರ ಕೊಡುಗೆ ಅಪಾರ. ಅವರೊಂದಿಗೆ ನನ್ನದು 20 ವರ್ಷಗಳ ಒಡನಾಟ. ಸರಳ ಹಾಗೂ ಸಜ್ಜನರಾಗಿದ್ದ ಅವರು ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ನೋಡುತ್ತಿದ್ದರು. ಅವರದು ಸುಖಿ ದಾಂಪತ್ಯ ಜೀವನ. ಆದರೆ ಅಂತಿಮ ದಿನಗಳಲ್ಲಿ ಅವರಿಗೆ ಕ್ಯಾನ್ಸರ್‌ ಬಹಳವಾಗಿ ಕಾಡಿತು. ಅವರು ಬರೆದ ನಾಯಕಿ ಪ್ರಧಾನ ಕಥೆಗಳು ಇಂದಿಗೂ ಪ್ರಸ್ತುತ’ ಎಂದರು.

ಪ್ರಶಸ್ತಿ ಪಡೆದ ಇಂದಿರಾ ಹೆಗ್ಗಡೆ ಅವರು ಮಾತನಾಡಿ, ‘ನನ್ನ ಪತಿ ನನಗೆ ಕಥೆ ಬರೆದು ತೋರಿಸು ನೋಡೋಣ ಅಂತ ಸವಾಲು ಹಾಕಿದರು. ಅಂದೇ ಕಥೆ ಬರೆದೆ. ಅದು ಪತ್ರಿಕೆಯಲ್ಲಿಯೂ ಪ್ರಕಟವಾಯಿತು. 33ರ ವಯಸ್ಸಿನಲ್ಲಿ ನಾನು ಸಾಹಿತ್ಯ ಲೋಕಕ್ಕೆ ಕಾಲಿಟ್ಟೆ. ಅಂದಿನಿಂದ ಇಂದಿನವರೆಗೂ ನನ್ನದೇ ಆದ ಶೈಲಿಯಲ್ಲಿ ಬರವಣಿಗೆ ಮಾಡಿದ್ದೇನೆ. ನನ್ನ ಮೊದಲ ಪುಸ್ತಕಕ್ಕೆ ಅನುಪಮಾ ಅವರೇ ಮುನ್ನುಡಿ ಬರೆದಿದ್ದರು. ಈಗ ಅವರ ಹೆಸರಿನ ಪ್ರಶಸ್ತಿಯನ್ನೇ ಪಡೆಯುತ್ತಿರುವುದು ಸಂತಸ ಉಂಟು ಮಾಡಿದೆ’ ಎಂದರು.

‘ಕರಾವಳಿ ಭಾಗದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ. ನನ್ನ ಬರವಣಿಗೆಗೆ ಈಗಲೂ ವಿರೋಧ ವ್ಯಕ್ತವಾಗುತ್ತದೆ. ಟೀಕೆಗಳು ಸಾಹಿತ್ಯ ಕ್ಷೇತ್ರದಲ್ಲಿ ಸಹಜ. ಆದರೆ ಅಲ್ಲಿ ಬಹುತ್ವ ಸಂಸ್ಕೃತಿ ಇಲ್ಲ. ಬೆಂಗಳೂರಿಗೆ ಬಂದ ಮೇಲೆ ನೆಮ್ಮದಿಯಿಂದ ಉಸಿರಾಡುವ ವಾತಾವರಣ ಸಿಕ್ಕಿತು’ ಎಂದು ಹೇಳಿದರು.

Courtesy : Prajavani.net

http://www.prajavani.net/news/article/2018/05/18/573762.html

Leave a Reply