ಪುಸ್ತಕ ಬಿಡುಗಡೆ – ‘ಅಲೆ ತಾಕಿದರೆ ದಡ’ ಮತ್ತು ‘ಹೂವಾಡಿಗ’

ಪುಸ್ತಕ ಬಿಡುಗಡೆ ಮಾಹಿತಿ

ತುಮಕೂರಿನ ಗೋಮಿನಿ ಪ್ರಕಾಶನದ ಪ್ರಕಟಣೆಗಳಾದ ವಾಸುದೇವ ನಾಡಿಗ್ ರವರ ‘ಅಲೆ ತಾಕಿದರೆ ದಡ’ ಮತ್ತು ಎ.ಎನ್. ರಮೇಶ್ ಗುಬ್ಬಿಯವರ ‘ಹೂವಾಡಿಗ’ ಕವನ ಸಂಕಲನಗಳ ಬಿಡುಗಡೆ ಕಾರ್ಯಕ್ರಮವು ತುಮಕೂರಿನ ಓಶೋ ಧ್ಯಾನ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಕಾಶಕರಾದ ಶ್ರೀಮತಿ ಚಂಪ ಸತೀಶ್ ನೆರವೇರಿಸಿ ತಮ್ಮ ಪ್ರಕಾಶನವು 2010ರಿಂದ ಇದುವರೆವಿಗೂ ಉತ್ತಮ ಪುಸ್ತಕಗಳನ್ನು ಪ್ರಕಟಿಸುತ್ತಿದ್ದು, ಇದುವರೆವಿಗೂ 19 ಪುಸ್ತಕಗಳನ್ನು ಪ್ರಕಟಿಸಿದೆ ಎಂದರು.

ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಸಾಹಿತಿಗಳು, ಕನ್ನಡ ಪರ ಹೋರಾಟಗಾರರಾದ ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣರವರು ಸಾಹಿತ್ಯ, ಲಲಿತ ಕಲೆಗಳಿಂದ ಮಾತ್ರ ಮಾನವ ಸಂತೃಪ್ತಗೊಳ್ಳುತ್ತಾನೆ, ಕತ್ತಲಿನಿಂದ ಬೆಳಕಿನೆಡೆಗೆ ಅವನನ್ನು ಸಾಹಿತ್ಯ ಮಾತ್ರವೇ ಕರೆದೊಯ್ಯೊಬಲ್ಲದು ಎಂದರು. ಹಿಂದಿನ ಕಾಲದಲ್ಲಿ ಶಿವಪೂಜೆಗೆ ಬಿಲ್ವಪತ್ರೆಯನ್ನು ಒದಗಿಸುವುದು ಕೂಡ ಶಿವಪೂಜೆ ಮಾಡಿದಷ್ಟೇ ಪವಿತ್ರವೆಂದು ಭಾವಿಸಲಾಗಿತ್ತು, ಈ ನಿಟ್ಟಿನಲ್ಲಿ ಇಂದಿನ ಕಾಲದಲ್ಲಿ ಶಿವಪೂಜೆಗೆ ಬಿಲ್ವಪತ್ರೆಯನ್ನು ಒದಗಿಸುವ ಕೆಲಸವನ್ನು ಗೋಮಿನಿ ಪ್ರಕಾಶನ ಮಾಡುತ್ತಿದೆ ಎಂದು ಶ್ಲಾಘಿಸಿದರು.

‘ಅಲೆ ತಾಕಿದರೆ ದಡ’ ಸಂಕಲನ ಕುರಿತು ಮಾತನಾಡಿದ ಕವಿ, ವಿಮರ್ಶಕ ಡಾ. ರವಿಕುಮಾರ್ ನೀಹ ಚಲನೆ ಮತ್ತು ಕ್ರಿಯೆ ಈ ಸಂಕಲನದ ಬಹುಮುಖ್ಯ ಜಾಡಾಗಿದ್ದು, ಹಲವಾರು ರೂಪಕಗಳನ್ನು ಬಳಸಿರುವ ನಾಡಿಗ್ ಅವರ ಕವಿತೆಗಳಲ್ಲಿ ವೈಚಾರಿಕತೆ ಮತ್ತು ಆಧುನಿಕತೆಯ ಸ್ಪರ್ಶವಿದೆ. ಕವನಗಳು ಧ್ಯಾನಸ್ಥ ಮನಸ್ಥಿತಿಯಲ್ಲಿ ಮೂಡಿ, ಆಧ್ಯಾತ್ಮದ ಹಾದಿಯಲ್ಲೂ ಇವೆ ಎಂದರು. ‘ಹೂವಾಡಿಗ’ ಸಂಕಲನ ಕುರಿತು ಮಾತನಾಡಿದ ಲೇಖಕಿ ಬಿ.ಸಿ. ಶೈಲಾ ನಾಗರಾಜ್ ಕವಿ ರಮೇಶ್‍ರವರು ಓದುಗರ ಭಾವಕೋಶವನ್ನು ಹಿಗ್ಗಿಸುವಂತಹ, ಘಮಘಮಿಸುವ ಭಾವಸುಮಗಳ ಪೋಣಿಸಿ ನವಿರಾಗಿ ತಮ್ಮ ಸಂಕಲನವನ್ನು ಉತ್ತಮ ಕಾವ್ಯಕೃತಿಯನ್ನಾಗಿಸಿದ್ದಾರೆ. ಒಲವಿನ ಕವಿಯಾಗಿ ಹೆಣ್ಣಿನ ಅಂತಃಕರಣವನ್ನು ಹೆಣ್ಣಾಗಿ ಕಟ್ಟಿಕೊಟ್ಟಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪೃಥ್ವಿ ಮಲ್ಲಣ್ಣನವರು ತಾವೊಬ್ಬ ಸಾಹಿತ್ಯದ ಉಪಾಸಕನಷ್ಟೆ ಎಂದರು. ಇಬ್ಬರು ಕವಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ ತುಮಕೂರಿನಲ್ಲಿ ತಮ್ಮ ಸಂಕಲನಗಳು ಬಿಡುಗಡೆಯಾಗಿದ್ದು ಸಂತೋಷದ ಸಂಗತಿ ಎಂದರು. ಶ್ರೀಮತಿ ಅರ್ಪಣ ಕುಮಾರ್ ಪ್ರಾರ್ಥಿಸಿದರೆ, ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಗುಬ್ಬಚ್ಚಿ ಸತೀಶ್ ಸ್ವಾಗತಿಸಿದರು. ಲೇಖಕಿ ಕಮಲಾ ಎಚ್ ಬಡ್ಡೀಹಳ್ಳಿ ವಂದಿಸಿದರೆ, ಲೇಖಕ ಟಿ.ಬಿ. ಮೋಹನ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಅಂತಿಮವಾಗಿ ಯುವಕವಿಗೋಷ್ಟಿಯೂ ನಡೆಯಿತು. ಹದಿನೈದಕ್ಕು ಹೆಚ್ಚು ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿ ಸಂಭ್ರಮಿಸಿದರು.

Leave a Reply