ಫೇಸ್‌ಬುಕ್‌ ತುಂಬ ಬುಕ್ಕಿನ ಮಾತು

ಫೇಸ್‌ಬುಕ್‌ ತುಂಬ ಬುಕ್ಕಿನ ಮಾತು

‘ವಿಶ್ವ ಪುಸ್ತಕ ದಿನ’ದಂದು ಫೇಸ್‌ಬುಕ್‌ ಎಂದಿನಿಂತಿರಲಿಲ್ಲ. ಅಲ್ಲಿ ಇಷ್ಟದ ಪುಸ್ತಕಗಳ ಮುಖಪುಟವಿತ್ತು. ಕಪಾಟುಗಳಲ್ಲಿ ಸಾಲಾಗಿ ನಿಂತಿದ್ದ ಪುಸ್ತಕಗಳ ನೋಟ ಕಣ್ಸೆಳೆಯುತ್ತಿತ್ತು ಸದಾ ಮೊಬೈಲ್ ಮೇಲೆ ಬೆರಳಾಡಿಸುತ್ತಿದ್ದವರೂ ಅಂದು ಪುಸ್ತಕಗಳ ಹಾಳೆಗಳನ್ನು ತಿರುವಿ ಹಾಕಿದರು. ಪುಸ್ತಕ ದಿನವನ್ನು ನಿಮಿತ್ತ ಮಾಡಿಕೊಂಡು ಇಷ್ಟದ ಪುಸ್ತಕಗಳನ್ನು ಹೇಗೆಲ್ಲಾ ಕೊಂಡಾಡಿದರು ಗೊತ್ತೆ?

‘ದೇಶ ಸುತ್ತು, ಕೋಶ ಓದು’ ಅನ್ನೋದು ಗಾದೆಮಾತು. ಫೇಸ್‌ಬುಕ್, ವಾಟ್ಸ್ಯಾಪ್, ಟ್ವಿಟರ್, ಇನ್‌ಸ್ಟಾಗ್ರಾಂ ಕಾಲದಲ್ಲಿ ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗಿದೆ ಎಂಬುದು ಬಹುತೇಕರ ದೂರು. ಆದರೆ, ಏಪ್ರಿಲ್ 23ರಂದು ವಿಶ್ವ ಪುಸ್ತಕ ದಿನಾಚರಣೆ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪುಸ್ತಕ ಪ್ರಿಯರು ಸದ್ದಿಲ್ಲದೇ ದೊಡ್ಡಮಟ್ಟದ ಅಭಿಯಾನವನ್ನೇ ನಡೆಸಿದರು.

#ವಿಶ್ವಪುಸ್ತಕದಿನ, #ಹ್ಯಾಪಿರೀಡಿಂಗ್ ಹ್ಯಾಷ್‌ಟ್ಯಾಗ್ ಬಳಸಿ ತಮ್ಮಿಷ್ಟದ ಪುಸ್ತಕ, ತಮ್ಮನೆಯ ಗ್ರಂಥಾಲಯ, ತಮ್ಮ ಸಂಗ್ರಹದ ಪುಸ್ತಕಗಳ ಚಿತ್ರಗಳನ್ನು ಹಾಕಿ ಸಂಭ್ರಮಿಸಿದರು. ಕೆಲವರು ತಾವು ಈಗ ಓದುತ್ತಿರುವ ಪುಸ್ತಕಗಳನ್ನು ಉಲ್ಲೇಖಿಸಿ ಪುಟ್ಟ ಟಿಪ್ಪಣಿಗಳನ್ನು ಹಂಚಿಕೊಂಡರು. ಇನ್ನು ಪುಸ್ತಕ ಪ್ರಕಾಶಕರು ತಮ್ಮ ಪ್ರಕಾಶನದಲ್ಲಿರುವ ಪುಸ್ತಕಗಳ ಪಟ್ಟಿ ಸಹಿತ ಪುಸ್ತಕಗಳ ರಾಶಿಗಳನ್ನೇ ಕವರ್ ಪೇಜ್‌ನಲ್ಲಿ ಹಾಕಿಕೊಂಡರು. ಲೇಖಕರು ತಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಚಿತ್ರಗಳನ್ನು ನೆನಪಿಸಿಕೊಂಡರು.

ಸಂಸ್ಕೃತಿ ಚಿಂತಕ ರಹಮತ್ ತರೀಕೆರೆ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದ ‘ಒಂದು ಜರಾಜೀರ್ಣ ಪುಸ್ತಕ’ ಬರಹವಂತೂ ಮುದ್ರಿತ ಬರಹಗಳ ನಿರ್ಗಮನ, ತಂತ್ರಜ್ಞಾನ ಕೋಶಗಳ ಆಗಮನ ಕುರಿತು ಸಣ್ಣ ವಿವರಣೆಯನ್ನೇ ನೀಡುವಂತಿದೆ. ಸಾವಿರ ಪುಟಗಳ ‘ಕರ್ನಾಟಕ ವಿಷಯ ವಿಶ್ವಕೋಶ’ದ ಕುರಿತ ಹಳೆಯ ನೆನಪುಗಳನ್ನು ಜತನವಾಗಿ ಕಟ್ಟಿಕೊಟ್ಟಿದ್ದಾರೆ ಅವರು. ‘ನಿನ್ನೆ ಹುಟ್ಟಿದ ಶಬ್ದವೊಂದು ಇಂದು ಆನ್ ಲೈನ್ ನಿಘಂಟಿಗೆ ಸೇರಿಬಿಡುತ್ತದೆ. ವಿಕಿಪಿಡಿಯಾ ಬಂದಿದೆ. ಗೂಗಲ್ ಭೂಪಟ ಬಂದಿವೆ. ನಾವು ನಡೆಯುತ್ತಿರುವ ರಸ್ತೆಯಲ್ಲಿ ಯಾವ ದಿಕ್ಕಿನಲ್ಲಿ ಎಷ್ಟುದೂರ ನಮಗೆ ಬೇಕಾದ ಜಾಗವಿದೆ ಎಂದು ಮೊಬೈಲಿನಲ್ಲೇ ಹಾದಿತೋರುಗರು ಇದ್ದಾರೆ. ಈ ಸೌಲಭ್ಯದಲ್ಲಿರುವ ತೊಡಕೆಂದರೆ, ಎಲೆಕ್ಟ್ರಾನಿಕ್ ಸಲಕರಣೆಗಳ ಮೂಲಕವೇ ಈ ಕೋಶಗಳ ಪ್ರಯೋಜನ ಪಡೆಯಬೇಕಿರುವುದು. ಹೀಗಾಗಿ ಮುದ್ರಿತ ಕೋಶಗಳ ಯುಗವಿನ್ನೂ ಮುಗಿದಿಲ್ಲ’ ಎನ್ನುವ ರಹಮತ್ ಅವರ ಆಶಾಭಾವ ಪುಸ್ತಕಗಳಿಗಿನ್ನೂ ಜೀವವಿದೆ ಎಂಬುದನ್ನು ಸಾರುವಂತಿದೆ.

ರಹಮತ್ ಅವರ ಬರಹಕ್ಕೆ ಪ್ರತಿಕ್ರಿಯಿಸಿರುವ ಲೇಖಕಿ ಎಲ್.ಸಿ.ಸುಮಿತ್ರಾ ‘ನನ್ನ ಹತ್ತಿರವೂ ಈ ಪುಸ್ತಕ ಇದೆ…ಜೀರ್ಣಾವಸ್ಥೆಯಲ್ಲಿ’ (ಕರ್ನಾಟಕ ಕನ್ನಡ ವಿಷಯ ವಿಶ್ವಕೋಶ) ಎಂದು ಪುಸ್ತಕ ಮುಖಪುಟವನ್ನು ಶೇರ್ ಮಾಡಿಕೊಂಡಿದ್ದಾರೆ. ಪುಸ್ತಕವೊಂದು ಲೇಖಕರ ಆತ್ಮಸಂಗಾತಿಯಾಗಿ ನೆಲೆ ಕಂಡುಕೊಳ್ಳುವ ಸುಖವನ್ನು ಇಬ್ಬರೂ ನೆನಪಿಸಿಕೊಂಡಿದ್ದಾರೆ.

‘ನನ್ನ ಮನೆಯಲ್ಲಿ ಅಡುಗೆ ಮನೆ ಮತ್ತು ಬಚ್ಚಲು ಮನೆ ಹೊರತು ಪಡಿಸಿ ಉಳಿದೆಲ್ಲ ಕಡೆ‌ ಪುಸ್ತಕ ಮತ್ತು ದಸ್ತಾವೇಜುಗಳನ್ನು ಪೇರಿಸಿಟ್ಟಿದ್ದೇನೆ. ಒಂದಷ್ಟುಅಟ್ಟದ ಮೇಲೆ ಕಟ್ಟಿಟ್ಟಿದ್ದೇನೆ. ಎಲ್ಲವನ್ನೂ ಓದಿ‌ ಮುಗಿಸುವಷ್ಟು ನನ್ನಲ್ಲಿ ಆಯುಷ್ಯ ಇಲ್ಲ‌. ಆದರೂ ಪುಸ್ತಕ ಖರೀದಿಯ ದೌರ್ಬಲ್ಯ ಮೀರಲು ಸಾಧ್ಯವಾಗಿಲ್ಲ. ಈ ಓದುವ ಹುಚ್ಚು, ಮಗಳಿಗೂ ಸಾಂಕ್ರಾಮಿಕವಾಗಿ ಹತ್ತಿರುವ ಕಾರಣ ಪುಸ್ತಕ ರದ್ದಿಯಾಗಲಾರದು ಎಂಬ ಭರವಸೆ. ಆದರೆ ಪುಸ್ತಕ ಜೋಡಿಸಿಡುವ ಕಲೆ‌ ಕರಗತವಾಗಿಲ್ಲ. ಹೀಗಾಗಿ ಒಮ್ಮೊಮ್ಮೆ ಪುಸ್ತಕ ಅರ್ಜೆಂಟಾಗಿ ಬೇಕಾದಾಗ ಹುಡುಕಲು ಹೋಗುವುದಿಲ್ಲ, ಹೊಸ ಪುಸ್ತಕ ಖರೀದಿ‌ಸುತ್ತೇನೆ’ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಬರೆದುಕೊಂಡಿದ್ದಾರೆ. ತಮ್ಮ ಮನೆಯಲ್ಲಿರುವ ಪುಸ್ತಕ ಸಂಗ್ರಹಗಳ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.

ಕವಯತ್ರಿ ರುಕ್ಮಿಣಿ ತಲ್ವಾಡ್ ‘ಸದ್ಯದ ಓದು…’ ಶೀರ್ಷಿಕೆಯಡಿ ಹಿರಿಯ ಪತ್ರಕರ್ತೆ ಡಾ.ವಿಜಯಾ ಅವರ ‘ಕುದಿ ಎಸರು’ ಪುಸ್ತಕ ಓದುತ್ತಾ ತಮ್ಮ ಮನದಲ್ಲಾದ ತಳಮಳಗಳನ್ನು ಭಾವುಕವಾಗಿ ಟಿಪ್ಪಣಿ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ‘ನಿನ್ನೆ ವಿಶ್ವ ಪುಸ್ತಕದ ದಿನ. ಹಾಗಾಗಿ ಹಂಚಿಕೊಳ್ಳುತ್ತಿದ್ದೇನೆ. ಎಲ್ಲರೂ ಓದಲೇಬೇಕಾದ, ಅದರಲ್ಲೂ ಗಂಡಸರು ಮತ್ತು ಗಂಡು ಮನಸ್ಥಿತಿಯ ಹೆಂಗಸರು ಪ್ರಮುಖವಾಗಿ ಓದಬೇಕಾದ ಪುಸ್ತಕ. ಇದು ಓದುಗರನ್ನು ಸಂವೇದನೆಗೆ ನೂಕುವ ಪುಸ್ತಕ. ಓದು ತಿಳಿವಳಿಕೆಯನ್ನು ನೀಡುತ್ತದೆ ಅಷ್ಟೇ. ಆದರೆ ಸಂವೇದನೆ, ಅರಿವನ್ನು ಹುಟ್ಟಿಸುತ್ತದೆ. ಅರಿವು ಮನುಷ್ಯತ್ವದೆಡೆಗೆ ಕೊಂಡೊಯ್ಯುತ್ತದೆ’ ಎಂದು ಆಪ್ತವಾಗಿ ಬರೆದುಕೊಂಡಿದ್ದಾರೆ.

Courtesy : Prajavani.net

http://www.prajavani.net/news/article/2018/04/25/568309.html

Leave a Reply