ಮತ್ತೆ ಮತ್ತೆ ಓದಬೇಕು ಅನಿಸುವ ಮಹಾಭಾರತ…

ಮತ್ತೆ ಮತ್ತೆ ಓದಬೇಕು ಅನಿಸುವ ಮಹಾಭಾರತ…

-ಪದ್ಮರಾಜ ದಂಡಾವತಿ

ಮಹಾಭಾರತ ಭಾರತೀಯರಿಗೆ ಹೊಸದಲ್ಲ. ಅದು ಮನೆ ಮನೆಯ ಕಥೆ. ಎಲ್ಲರಿಗೂ ಅದರ ಕಥೆ ಗೊತ್ತು. ಗೊತ್ತಿದ್ದ ಕಥೆಯನ್ನು ಮತ್ತೆ ಮತ್ತೆ ಓದಿದ್ದೇವೆ. ಪಠಣ ಮಾಡಿದ್ದೇವೆ. ಮನನ ಮಾಡಿದ್ದೇವೆ. ಆದರೂ ಮತ್ತೆ ಮತ್ತೆ ‘ಭಾರತ’ವನ್ನು ಓದಬೇಕು ಅನಿಸಿದೆ. ಅದಕ್ಕೆ ಒಬ್ಬೊಬ್ಬರು ಅರ್ಥೈಸಿದ ಭಿನ್ನ ಬಗೆಯೂ ಕಾರಣವಾಗಿದೆ;  ಐದು ಸಾವಿರ ವರ್ಷಗಳು ಗತಿಸಿದರೂ ಅದು ನಮ್ಮನ್ನು ಕಾಡುವುದು ನಿಂತಿಲ್ಲ.

ಓದು ಒಂದು ಸುಖ. ಅದು ನಮ್ಮನ್ನು ಹಿಡಿದುಕೊಳ್ಳುತ್ತದೆಯೇ ಅಥವಾ ಅದನ್ನು ನಾವು ಹಿಡಿದುಕೊಳ್ಳುತ್ತೇವೆಯೇ? ನಾವು ಹಿಡಿದುಕೊಂಡ ಮೇಲೆ ಅದು ನಮ್ಮನ್ನು ಹಿಡಿದುಕೊಳ್ಳುತ್ತದೆಯೇ? ಹೇಳುವುದು ಕಷ್ಟ. ದೇವದತ್ತ ಪಟ್ಟನಾಯಕರ ‘ಜಯ’ ಕೃತಿಯನ್ನು ನಿನ್ನೆ ಬೆಳಿಗ್ಗೆ ಓದಿ ಮುಗಿಸಿದೆ. ಮಹಾಭಾರತದ ಸಚಿತ್ರ ಮರುಕಥನವಾದ ‘ಜಯ’ ಕೃತಿಯನ್ನು ಕನ್ನಡದ ಪ್ರಸಿದ್ಧ ವಿಮರ್ಶಕ ಗಿರಡ್ಡಿ ಗೋವಿಂದರಾಜರು ಅನುವಾದಿಸಿದ್ದಾರೆ. ಮೂಲಕೃತಿಯ ಹಾಗೆಯೇ ಕನ್ನಡದ ಕೃತಿಯನ್ನೂ ಅದೇ ಮುಖಪುಟದೊಡನೆ, ಅದೇ ಗಾತ್ರದಲ್ಲಿ  ಮುದ್ರಿಸಿರುವುದು ವಿಶೇಷ. ಧಾರವಾಡದ ಮನೋಹರ ಗ್ರಂಥಮಾಲೆ ಈ ಕೃತಿಯನ್ನು ಪ್ರಕಟಿಸಿದೆ.  ದೇವದತ್ತ ಪಟ್ಟನಾಯಕರ ಕೃತಿ ಎಷ್ಟು ಶ್ರೇಷ್ಠವಾಗಿದೆಯೋ ಗಿರಡ್ಡಿಯವರ ಕನ್ನಡ ಅನುವಾದ ಕೂಡ ಅಷ್ಟೇ ಉತ್ಕೃಷ್ಟವಾಗಿದೆ. 

ಮಹಾಭಾರತ ಭಾರತೀಯರಿಗೆ ಹೊಸದಲ್ಲ. ಅದು ಮನೆ ಮನೆಯ ಕಥೆ. ಎಲ್ಲರಿಗೂ ಅದರ ಕಥೆ ಗೊತ್ತು. ಗೊತ್ತಿದ್ದ ಕಥೆಯನ್ನು ಮತ್ತೆ ಮತ್ತೆ ಓದಿದ್ದೇವೆ. ಪಠಣ ಮಾಡಿದ್ದೇವೆ. ಮನನ ಮಾಡಿದ್ದೇವೆ. ಆದರೂ ಮತ್ತೆ ಮತ್ತೆ ‘ಭಾರತ’ವನ್ನು ಓದಬೇಕು ಅನಿಸಿದೆ. ಅದಕ್ಕೆ ಒಬ್ಬೊಬ್ಬರು ಅರ್ಥೈಸಿದ ಭಿನ್ನ ಬಗೆಯೂ ಕಾರಣವಾಗಿದೆ;  ಐದು ಸಾವಿರ ವರ್ಷಗಳು ಗತಿಸಿದರೂ ಅದು ನಮ್ಮನ್ನು ಕಾಡುವುದು ನಿಂತಿಲ್ಲ.

ದೇವದತ್ತ ಪಟ್ಟನಾಯಕರು ಓದಿದ್ದು ವೈದ್ಯಕೀಯವನ್ನು. ವೃತ್ತಿಯಿಂದ ನಾಯಕತ್ವ ತರಬೇತಿ ಸಲಹೆಗಾರರು. ಇವು ಎರಡಕ್ಕೂ ಭಿನ್ನವಾದುದು ಅವರ ಆಸಕ್ತಿ. ಅವರು ಪುರಾಣಶಾಸ್ತ್ರಜ್ಞರು. ಪುರಾಣ ಕಥೆಗಳ ಸ್ವರೂಪ, ಸಂಕೇತ, ಆಚರಣೆ ಮತ್ತು ಆಧುನಿಕ ಕಾಲಕ್ಕೆ ಅವುಗಳ ಪ್ರಸ್ತುತತೆ ಕುರಿತು ಅವರು ಯಾವಾಗಲೂ ಚಿಂತಿಸಿದ್ದಾರೆ. ಮತ್ತು ವ್ಯಾಪಕವಾಗಿ ಬರೆದಿದ್ದಾರೆ. ಅವರಿಗೆ ಮಹಾಭಾರತ ಕಾಡಿದ್ದರಲ್ಲಿ ಅಚ್ಚರಿಯಿಲ್ಲ. 350 ಪುಟಗಳಿಗೆ ಮೀರಿದ ಈ ಪುಸ್ತಕದಲ್ಲಿ 108 ಅಧ್ಯಾಯಗಳು ಇವೆ. ಪ್ರತಿಯೊಂದು ಅಧ್ಯಾಯದ ಜೊತೆಗೆ ಪಟ್ಟನಾಯಕರೇ ರಚಿಸಿದ 250ಕ್ಕೂ ಹೆಚ್ಚು ರೇಖಾ ಚಿತ್ರಗಳು ಜೊತೆಗೆ ಇವೆ. ಪ್ರತಿ ಅಧ್ಯಾಯದ ಕೊನೆಯಲ್ಲಿ ಅದನ್ನು ಅರ್ಥೈಸುವ ಪುಟ್ಟ ಪುಟ್ಟ, ಕೆಲವು ಸಾರಿ ದೀರ್ಘ ಟಿಪ್ಪಣಿಗಳು ಇವೆ. ಪಟ್ಟನಾಯಕರ ಕೃತಿ ಭಿನ್ನವಾಗುವುದು ಅಲ್ಲಿ. ಟಿಪ್ಪಣಿಗಳು ಮಹಾಭಾರತವನ್ನು ಭಿನ್ನ ದೃಷ್ಟಿಕೋನದಿಂದ ನೋಡಿವೆ. ಹೊಸ ಅರ್ಥಗಳನ್ನು ಕಟ್ಟಿ ಕೊಟ್ಟಿವೆ.

ಎ.ಆರ್‌.ಕೃಷ್ಣಶಾಸ್ತ್ರಿಗಳ ‘ವಚನ ಭಾರತ’ ಮೂಲ ಭಾರತಕ್ಕೆ ನಿಷ್ಠವಾದ ಅನುವಾದಕ್ಕೆ ಒಂದು ಮಾದರಿ ಎನ್ನುವಂಥ ಕೃತಿ. ಈಗಲೂ ಕನ್ನಡದ ಸರಳ ಗದ್ಯ ಮಹಾಭಾರತಗಳಲ್ಲಿ ‘ವಚನಭಾರತ’ಕ್ಕೆ ಅಗ್ರಮಣೆ. ಎಸ್‌.ಎಲ್‌.ಭೈರಪ್ಪನವರ ‘ಪರ್ವ’ ಮಹಾಭಾರತವನ್ನು ಆಧರಿಸಿದ  ಕಾದಂಬರಿ. ಭೈರಪ್ಪನವರು ಆಧುನಿಕ ದೃಷ್ಟಿಯಿಂದ ಮಹಾಭಾರತವನ್ನು ‘ಪರ್ವ’ದಲ್ಲಿ ಅರ್ಥೈಸುವುದಕ್ಕಿಂತ ಮುಂಚೆಯೇ ಇರಾವತಿ ಕರ್ವೆಯವರ ‘ಯುಗಾಂತ’ ಕೃತಿ (ಅನು : ಸರಸ್ವತಿ ರಿಸಬೂಡ) ಬಂದಿತ್ತು. ‘ಪರ್ವ’ದಷ್ಟು ‘ಯುಗಾಂತ’ ಪ್ರಸಿದ್ಧ ಕೃತಿಯಾಗಿಲ್ಲದೇ ಇರಬಹುದು. ಆದರೆ, ನನಗೆ  ಯಾವಾಗಲೂ ‘ಪರ್ವ’ಕ್ಕಿಂತ ‘ಯುಗಾಂತ’ ಹೆಚ್ಚು ಮಹತ್ವದ ಕೃತಿ ಎಂದು ಅನಿಸಿದೆ.

ದೇವದತ್ತ ಪಟ್ಟನಾಯಕರ ‘ಜಯ’, ‘ಯುಗಾಂತ’ದ ಹಾಗೆಯೇ ಇನ್ನೊಂದು ನೆಲೆಯಲ್ಲಿ ಮಹಾಭಾರತವನ್ನು ಅರ್ಥ ಮಾಡಿಸುತ್ತದೆ. ಎಚ್.ಎಸ್‌.ವೆಂಕಟೇಶಮೂರ್ತಿಯವರು ಕುಮಾರವ್ಯಾಸ ಭಾರತವನ್ನು ಆಧಾರವಾಗಿ ಇಟ್ಟುಕೊಂಡು ಮಹಾಭಾರತವನ್ನು ವಿಶ್ಲೇಷಿಸುವ, ಅರ್ಥೈಸುವ ಬಗೆಯೂ ಕನ್ನಡಕ್ಕೆ ಹೊಸದು ಮತ್ತು ಅನನ್ಯವಾದುದು (ಕುಮಾರವ್ಯಾಸ ಕಥಾಂತರ).

ಗಿರಡ್ಡಿಯವರು ತಮ್ಮ ಅನುವಾದಕರ ಮಾತುಗಳಲ್ಲಿ ಹೇಳುವ ಹಾಗೆ, ‘ಜಯ ವ್ಯಾಸಭಾರತದ ಸಂಗ್ರಹವಲ್ಲ….ಪಟ್ಟನಾಯಕರು ಮೂಲಕಥೆಯ ಹಂದರವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಅಲ್ಲಿ ನಡೆಯುವುದೆಲ್ಲ ಇಲ್ಲಿಯೂ ನಡೆಯುತ್ತದೆ. ಜೊತೆಗೆ ಅಲ್ಲಿ ನಡೆಯದ ಕೆಲವು ರೋಚಕ ಪ್ರಸಂಗಗಳು ಇಲ್ಲಿ ನಡೆಯುತ್ತವೆ. ಮಹಾಭಾರತದ ಹಲವಾರು ಕಥಾಂತರಗಳು ಅಸ್ತಿತ್ವದಲ್ಲಿ ಇವೆಯಷ್ಟೇ?  ಕನ್ನಡ ಯಕ್ಷಗಾನದಿಂದ ತೆಗೆದುಕೊಂಡ ಗಯನ ಕಥೆ, ಭಾಗವತದಿಂದ ತೆಗೆದುಕೊಂಡ ಇರಾವಂತನ ಕಥೆ, ಕೇರಳ–ಆಂಧ್ರ ಮೂಲಗಳಿಂದ ತೆಗೆದುಕೊಂಡ ಬರ್ಬರೀಕನ ಕಥೆ ಇಂಥವು. ಅವುಗಳ ಜೊತೆಗೆ ಛತ್ತೀಸಗಡದ ಪಾಂಡವಾನಿ, ಮಹಾರಾಷ್ಟ್ರದ ಗೋಂಧಳ್, ತಮಿಳುನಾಡಿನ ತೆರುಕ್ಕೂತ್ತುಗಳಿಂದಲೂ ಕೆಲವು ಪ್ರಸಂಗಗಳು ಸೇರಿಕೊಂಡಿವೆ. ಮೂಲಭಾರತದಲ್ಲಿ ಇಲ್ಲದ ಇಂಥ ಪ್ರಸಂಗಗಳನ್ನು ಪಟ್ಟನಾಯಕರು ಮೂಲ ಕಥೆಯೊಂದಿಗೆ ಹೊಲಿಗೆ  ಕಾಣದಂತೆ ಹೆಣೆದಿರುವ ರೀತಿ ಅವರ ಕಥೆಗಾರಿಕೆಯ ಜಾಣ್ಮೆಯನ್ನು ತೋರಿಸುತ್ತದೆ. ಈ ಹೊಸ ಕಥೆಗಳಿಂದ ಮಹಾಭಾರತದ ಪರಿಚಿತ ಕಥೆಗೆ ಅಪರಿಚಿತತೆಯ ಹೊಸ ಕಳೆ ಬಂದಿದೆ.

‘ಹೀಗೆ ಅನೇಕ ಮೂಲಗಳಿಂದ ತೆಗೆದುಕೊಂಡ ಪ್ರಸಂಗಗಳನ್ನು ಮಹಾಭಾರತದ ಕಥೆಯಲ್ಲಿ ಸೇರಿಸಿರುವುದು, ಮೂಲದಿಂದ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿರುವುದು ಇನ್ನೂ ಒಂದು ದೃಷ್ಟಿಯಿಂದ ಕುತೂಹಲಕರವಾಗಿದೆ. ಇದು ಭಾರತೀಯ ಕಥನ ಪರಂಪರೆಯ ವೈಶಿಷ್ಟ್ಯವೇ ಆಗಿದೆ. ತನ್ನ ಜೀವಿತ ಕಾಲದಲ್ಲಿ ಶತಮಾನಗಳ ಉದ್ದಕ್ಕೂ ವ್ಯಾಸಭಾರತ ಬೆಳೆಯುತ್ತ ಬೆಳೆಯುತ್ತ ಈಗಿರುವಷ್ಟು ದೊಡ್ಡದಾದದ್ದೇ ಹೀಗೆ.’

ದೊಡ್ಡದಾಗಿ ಬೆಳೆದು ನಿಂತ ಮಹಾಭಾರತ (ಜಯ) ಓದಿ ಮುಗಿಸಿದ ಮೇಲೆ ವೈಶಂಪಾಯನನಿಂದ ಈ ಕಥೆ ಕೇಳಿದ ಪಾಂಡವರ ವಂಶಜ ಜನಮೇಜಯನಿಗೆ ಅನಿಸುವ ಹಾಗೆಯೇ ನಮಗೂ ಅನಿಸುತ್ತದೆ. ‘ಈ ಕಥೆಯ ನಾಯಕ ಯಾರು?’ ‘ಖಳನಾಯಕ ಯಾರು?’

ಜನಮೇಜಯನಿಗೆ ಹಾಗೆ ಅನಿಸಲು ಕಾರಣವಿದೆ. ಎಲ್ಲ ಮುಗಿದ ಮೇಲೆ ಯುಧಿಷ್ಠಿರ ಸಜೀವವಾಗಿ ಸ್ವರ್ಗಾರೋಹಣ ಮಾಡಲು ನಿರ್ಧರಿಸಿದಾಗ ಅವನ ಜೊತೆಗೆ  ತಮ್ಮಂದಿರೂ ಬರಲು ಆಗುವುದಿಲ್ಲ. ಹೆಂಡತಿಯೂ ಬರಲು ಸೋಲುತ್ತಾಳೆ. ದಾರಿಯಲ್ಲಿಯೇ ಬಿದ್ದು ಸತ್ತು ಹೋಗುತ್ತಾರೆ. ಒಂದು ನಾಯಿ ಮಾತ್ರ ಅವನ ಜೊತೆಗೆ ಬರುತ್ತದೆ. ಯುಧಿಷ್ಠಿರ ಸ್ವರ್ಗವನ್ನು ಪ್ರವೇಶ ಮಾಡಿದಾಗ ಅಲ್ಲಿ ಎಲ್ಲ ನೂರು ಮಂದಿ ಕೌರವರೂ ಇರುತ್ತಾರೆ! ಒಬ್ಬ ಪಾಂಡವನೂ ಇರುವುದಿಲ್ಲ!

ಕೃತಿಯ ಕೊನೆಯ ಅಧ್ಯಾಯದಲ್ಲಿ ಪಟ್ಟನಾಯಕರು ತಮ್ಮ ಕೃತಿಗೆ ‘ಜಯ’ ಎಂಬ ಹೆಸರು ಇಟ್ಟುದು ಏಕೆ ಎಂದು ಚರ್ಚಿಸುತ್ತಾರೆ, ವೈಶಂಪಾಯನ ಹೇಳುತ್ತಾನೆ : ‘ಈ ಜಗತ್ತಿನಲ್ಲಿ ಎರಡು ರೀತಿಯ ವಿಜಯಗಳಿವೆ, ಅವು ವಿಜಯ ಮತ್ತು ಜಯ. ವಿಜಯ ಎಂಬುದು ಭೌತಿಕವಾದುದು. ಅಲ್ಲಿ ಸೋಲುವವ ಇರುತ್ತಾನೆ. ಜಯ ಎಂಬುದು ಆಧ್ಯಾತ್ಮಿಕವಾದುದು. ಅಲ್ಲಿ ಸೋಲುವವರು ಇರುವುದಿಲ್ಲ. ಕುರುಕ್ಷೇತ್ರದಲ್ಲಿ ಇದ್ದುದು ವಿಜಯ. ಅಲ್ಲಿ ಜಯ ಇರಲಿಲ್ಲ.’

ಕೌರವರನ್ನು ಸ್ವರ್ಗದಲ್ಲಿ ಕಂಡ ಯುಧಿಷ್ಠಿರ ಸ್ವರ್ಗಾಧಿಪತಿಗಳ ಜೊತೆಗೆ ದೀರ್ಘ ವಾಗ್ವಾದ ನಡೆಸುತ್ತಾನೆ. ತನ್ನ ಸೋದರರು ನರಕಕ್ಕೆ ಏಕೆ ಹೋದರು ಎಂದು ತಿಳಿಯಲು ಹೆಣಗುತ್ತಾನೆ. ಕುರುಕ್ಷೇತ್ರ ಯುದ್ಧವು ತಮ್ಮ ಪೂರ್ವಗ್ರಹಗಳನ್ನು ಶುದ್ಧೀಕರಿಸಲಿಲ್ಲ ಎಂದು ಅವನಿಗೆ ಅರ್ಥವಾಗುತ್ತದೆ. ತನ್ನ ಕಡುವೈರಿಗಳನ್ನು ಒಳಗೊಂಡಂತೆ ಎಲ್ಲರ ಬಗೆಗೆ ಪರಿಶುದ್ಧ ಅನುಕಂಪವಿದ್ದಾಗ ಮಾತ್ರ ಅಹಂ ಅನ್ನು ನಿಜವಾಗಿ ಗೆಲ್ಲಬಹುದು ಎಂದು ಅವನಿಗೆ ಅರ್ಥವಾಯಿತು. ಇದು ಯುಧಿಷ್ಠಿರ ತನ್ನ ಮೇಲೆಯೇ ಸಾಧಿಸಿದ ವಿಜಯವಾಗಿತ್ತು. ಇದೇ ನಿಜವಾದ ‘ಜಯ’ ಎನಿಸಿತ್ತು. ಇದೇ ದೃಷ್ಟಿಯಿಂದ ಕೃತಿಯ ಕೊನೆಯ ವಾಕ್ಯವೂ ಬಹಳ ಅರ್ಥಪೂರ್ಣವಾಗಿದೆ.
‘ಕೌರವರು ಯುದ್ಧಕ್ಕೆ ಮೊದಲು ಭೂಮಿಗೆ ಅಂಟಿಕೊಂಡ ಹಟಮಾರಿಗಳಾಗಿದ್ದಾರೆ. ಪಾಂಡವರು ಯುದ್ಧದ ನಂತರ ಉದಾರವಾಗಲು ಕಷ್ಟಪಡುತ್ತಾರೆ.

ಹೀಗೆ, ಅಧರ್ಮ ನಿರಂತರ ಆಮಿಷವಾಗಿದ್ದರೆ, ಧರ್ಮವು ಸದಾ ಪ್ರಗತಿಯಲ್ಲಿರುವ ಕೊನೆಯಿಲ್ಲದ ಕೆಲಸವಾಗಿದೆ. ಅದು ಮಾನವತೆಗೆ ಬೆಲೆ ತಂದುಕೊಡುತ್ತದೆ.’
ಮೌಲ್ಯಗಳ ಈ  ಸಂಘರ್ಷ ಮಹಾಭಾರತದ ಆರಂಭದಲ್ಲಿಯೇ ಇದೆ. ಉದ್ದಕ್ಕೂ ಇದೆ.  ಹಿಂದೆ ನಡೆದುದು ಆ ಕುಟುಂಬದ ಇತಿಹಾಸದಲ್ಲಿ ಮತ್ತೆ ಮತ್ತೆ ನಡೆಯಿತು. ನೈತಿಕತೆ ಮತ್ತು ಅನೈತಿಕತೆಯ ನಡುವಿನ ಸಂಘರ್ಷದಿಂದಲೇ ಮಹಾಭಾರತದ ಕಥೆ ಆರಂಭವಾಗುತ್ತದೆ. ಬೃಹಸ್ಪತಿಯ ಹೆಂಡತಿಯಾಗಿದ್ದ ತಾರೆ ಗಂಡನನ್ನು ತೊರೆದು ಚಂದ್ರನ ಬೆನ್ನು ಹತ್ತುವುದರೊಡನೆ ಮಹಾಭಾರತದ ವಿವಾಹೇತರ ಸಂಬಂಧದ ಸರಪಣಿ ಆರಂಭವಾಗುತ್ತದೆ. ಇದು ಕಥೆಯ ಉದ್ದಕ್ಕೂ ಮರುಕಳಿಸುತ್ತದೆ. ಐವರು ಗಂಡ��ದಿರ ಜೊತೆಗೆ ನೈತಿಕ ಮತ್ತು ಅಧಿಕೃತ ಸಂಬಂಧ ಹೊಂದಿದ್ದ ದ್ರೌಪದಿ ತಾನು ಕರ್ಣನನ್ನು ಪ್ರೀತಿಸಿದ್ದೆ ಎಂದು ಒಪ್ಪಿಕೊಳ್ಳುವಲ್ಲಿಯೂ ಇದರ ಒಂದು ಎಳೆ ಕಾಣುತ್ತದೆ. ಗಂಡನನ್ನು ಬಿಟ್ಟು ಚಂದ್ರನ ಜೊತೆಗೆ ಹೋಗಿದ್ದ ತಾರೆ, ಗರ್ಭಿಣಿಯಾಗಿ ವಾಪಸು ಬಂದಾಗ ಅದರ ವಾರಸುದಾರರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ : ‘ಕ್ಷೇತ್ರದಲ್ಲಿ ಯಾರು ಬೀಜ ಬಿತ್ತಿದರೆಂಬುದು ಮುಖ್ಯವಲ್ಲ. ಅದರ ಅಧಿಪತಿ ಯಾರು ಎಂಬುದು ಮುಖ್ಯ. ತಾರೆಯನ್ನು ವಿಧ್ಯುಕ್ತವಾಗಿ ಮದುವೆಯಾಗಿರುವ ನೀನೇ ಅವಳ ಎಲ್ಲ ಮಕ್ಕಳ ಒಡೆಯ ಮತ್ತು ತಂದೆ; ಅವು ಮದುವೆಯ ಮೊದಲು ಹುಟ್ಟಿರಲಿ, ನಂತರ ಹುಟ್ಟಿರಲಿ ಅಥವಾ ಬೇರೆ  ಯಾರಿಗಾದರೂ ಹುಟ್ಟಿರಲಿ. ಅವಕ್ಕೆಲ್ಲ ನೀನೇ ತಂದೆ’ (ಪುಟ12) ಎಂದು ದೇವತೆಗಳು ಬೃಹಸ್ಪತಿಗೆ ಹೇಳುವ ಮೂಲಕ ಮುಂದೆ ಎಷ್ಟೋ ತಲೆಮಾರುಗಳ ನಂತರ ಹುಟ್ಟಿದ ಪಾಂಡವರ ಜೈವಿಕ ತಂದೆಯರು ಬೇರೆ ಬೇರೆಯವರು ಆಗಿದ್ದರೂ ಅವರೆಲ್ಲ ಪಾಂಡುವಿನ ಮಕ್ಕಳೇ ಆದರು ಎಂಬುದಕ್ಕೆ ಇಂಗಿತವೂ ಅಲ್ಲವೇ?

ಹೆಣ್ಣು ಗಂಡಿನ ನಡುವಿನ ಸಂಬಂಧದ ಜಟಿಲತೆ ಮಹಾಭಾರತದ ಉದ್ದಕ್ಕೂ ಪುನರಾವರ್ತನೆ ಆಗುತ್ತದೆ. ಪುರೂರವ, ಯಯಾತಿಯರ ಜೊತೆಗೆ ಸಂಬಂಧ ಬೆಳೆಸಲು ಷರತ್ತು ವಿಧಿಸುವ ಹೆಣ್ಣು ಮಕ್ಕಳು ಭೀಷ್ಮನ ಕಾಲದಲ್ಲಿ ಅದೇ ಷರತ್ತು ವಿಧಿಸುವ ಗಟ್ಟಿತನ ಉಳಿಸಿಕೊಳ್ಳುವುದಿಲ್ಲ. ಗಾಂಧಾರಿ ಗಂಡನಿಗಾಗಿ ಕಣ್ಣಿಗೆ ಪಟ್ಟಿ ಕಟ್ಟಿಕೊಳ್ಳುತ್ತಾಳೆ. ಕುಂತಿಯ ಕಷ್ಟ ಕೇಳುವುದೇ ಬೇಡ. ಹನ್ನೆರಡು ವರ್ಷಗಳ ವನವಾಸದಲ್ಲಿ ಇದ್ದಾಗ ದ್ರೌಪದಿ ಒಬ್ಬ ಋಷಿಗೆ ಕೇಳುತ್ತಾಳೆ. ತನಗೇ ಏಕೆ ಇಷ್ಟು ಕಷ್ಟಗಳು ಎಂದು. ನಳ ದಮಯಂತಿಯರ ಕಥೆ ಹೇಳುವ ಋಷಿ  ಹನ್ನೆರಡು ವರ್ಷಗಳ  ಅವರ ವನವಾಸವನ್ನು ನೆನಪಿಸುತ್ತಾನೆ. ರಾಮಾಯಣದಲ್ಲಿ ಹದಿನಾಲ್ಕು ವರ್ಷಗಳ ವನವಾಸವನ್ನು ರಾಮ, ಲಕ್ಷ್ಮಣ, ಸೀತೆ ಅನುಭವಿಸುತ್ತಾರೆ. ಮಹಾಭಾರತದಲ್ಲಿ ಹನ್ನೆರಡು ವರ್ಷಗಳ ವನವಾಸ ಮತ್ತು ಒಂದು ವರ್ಷದ ಅಜ್ಞಾತ ವಾಸ ಪಾಂಡವರು ಅನುಭವಿಸುತ್ತಾರೆ. ವನವಾಸ ಎಂಬುದು ಮನುಷ್ಯರನ್ನು ಮಾಗಿಸುವ ಒಂದು ಪ್ರತೀಕವಾಗಿ ಮತ್ತೆ ಮತ್ತೆ ಬರುವಂತೆ ಕಾಣುತ್ತದೆ. ಹಾಗೂ ಜೀವನದಲ್ಲಿ ಕಷ್ಟಗಳೇ ಹೆಚ್ಚು ಎಂಬುದನ್ನೂ ಅದು ಹೇಳುತ್ತಿರುವಂತಿದೆ. ನಳ ಮಹಾರಾಜ ದ್ಯೂತದ ಆಸೆಗೆ ಸೋತು ವನವಾಸಕ್ಕೆ ಹೋದಂತೆಯೇ ಧರ್ಮಜನೂ ಅದೇ ತಪ್ಪು ಮಾಡುತ್ತಾನೆ. ಎಲ್ಲವನ್ನೂ ಸೋತು ಬಿಡುತ್ತಾನೆ. ಜೂಜು ಎಂಬುದು ಮನುಷ್ಯನ ಆದಿಮ ‘ವಾಸನೆ’ ಆಗಿರಬಹುದೇನೋ? ಜೂಜಿನಲ್ಲಿ ಧರ್ಮಜ ಸೋತ ನಂತರ ದ್ರೌಪದಿಗೆ ಆದ ಅವಮಾನವನ್ನು ಆಕೆಯೇ ಆಹ್ವಾನಿಸಿದಳೇ? ರಾಜಸೂಯಯಾಗದ ಸಂದರ್ಭದಲ್ಲಿ ನಿರ್ಮಾಣವಾದ ಮಯಸಭೆಗೆ ಬಂದು ನೀರಿನಲ್ಲಿ ಬಿದ್ದ ಧುರ್ಯೋಧನನಿಗೆ ‘ಕುರುಡ ತಂದೆ, ಕುರುಡ ತಾಯಿಯ ಮಗನೂ ಕುರುಡ’ ಎಂದು ದ್ರೌಪದಿ ಹೇಳಬಾರದಿತ್ತೇ? ಅಂಥ ಪ್ರಶ್ನೆಯನ್ನು ಪಟ್ಟನಾಯಕರು ಎತ್ತುತ್ತಾರೆ. ಮನುಷ್ಯನ ಅಂಗವೈಕಲ್ಯ ಕುರಿತು ಹಂಗಿಸಬಾರದು ಎಂಬುದು ಅವರ ಅಡಿಟಿಪ್ಪಣಿಯಲ್ಲಿನ ಮಾತು. ಚಿತ್ರಾ ಬ್ಯಾನರ್ಜಿ ದಿವಾಕರುಣಿ ಅವರ ‘Palace of illusion’ ಕೃತಿಯಲ್ಲಿ ಇದೇ ಮಾತು ಬರುತ್ತದೆ. ದ್ರೌಪದಿಯ ಆ ಮಾತು ಮುಂದೆ ಒಂದು ದಿನ ತುಂಬಿದ ಸಭೆಯಲ್ಲಿ ಅವಳ ಅಪಮಾನಕ್ಕೇ ಕಾರಣವಾಯಿತು.

ರಜಸ್ವಲೆಯಾಗಿದ್ದ, ಅರೆಬರೆ ವಸ್ತ್ರ ತೊಟ್ಟಿದ್ದ ಆಕೆಯ ಕೂದಲು ಹಿಡಿದು ದುಶ್ಶಾಸನ ರಾಜಾಂಗಣಕ್ಕೆ ಎಳೆದು ತಂದ. ಆಕೆಯ ಮೈದುನ ದುರ್ಯೋಧನ ತನ್ನ ತೊಡೆ ತೋರಿಸಿ ಕುಳಿತುಕೊಳ್ಳಲು ಆಮಂತ್ರಿಸಿದ. ಅಂತಿಮವಾಗಿ ಅದು ಮಹಾಭಾರತದ ಯುದ್ಧಕ್ಕೆ ಕಾರಣವಾಯಿತು.

ಮಹಾಭಾರತದ ಯುದ್ಧ ನಡೆದುದು ಸೇಡಿಗಾಗಿ. ಈರ್ಷ್ಯೆಗಾಗಿ. ಆದರೆ, ಯುದ್ಧ ನಡೆಯುವುದಕ್ಕಿಂತ ಮುಂಚೆ ಕೃಷ್ಣನ ಅಣ್ಣ ಬಲರಾಮ ಯುದ್ಧವನ್ನು ತಡೆಯಲು ಎಲ್ಲ ಪ್ರಯತ್ನ ಮಾಡಿದ. ಆದರೆ, ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಅನಿಸಿದಾಗ, ‘ಯುದ್ಧದ ನಿಯಮಗಳನ್ನು ಇಬ್ಬರೂ ಮುರಿಯಬೇಡಿ’ ಎಂದು ಬುದ್ಧಿ ಹೇಳಿ ಹೊರಟು ಹೋದ. ಆದರೆ, ಹದಿನೆಂಟು ದಿನಗಳ ಕಾಲ ನಡೆದ ಯುದ್ಧದಲ್ಲಿ ‘ನ್ಯಾಯಕ್ಕಾಗಿ ಹೋರಾಡಿದ’ ಪಾಂಡವರೇ ಹೆಚ್ಚು ನಿಯಮಗಳನ್ನು ಮುರಿದರು (ಪುಟ 295). ಭೀಷ್ಮನ ಸಾವು, ದ್ರೋಣರ ಸಾವು, ಜಯದ್ರಥನ ಸಾವು, ಕರ್ಣನ ಸಾವು, ದುರ್ಯೋಧನನ ಸಾವುಗಳೆಲ್ಲ ಯುದ್ಧದ ನಿಯಮಕ್ಕೆ ಪೂರಕವಾಗಿ ಇರಲಿಲ್ಲ. ಅಭಿಮನ್ಯುವಿನ ಸಾವಿನಲ್ಲಿ ಏಕಾಕಿಯಾದವರ ಮೇಲೆ ಹಲ್ಲೆ ಮಾಡಬಾರದು ಮತ್ತು ಪಾಂಡವರ ಐವರು ಮಕ್ಕಳ ಹತ್ಯೆಯಲ್ಲಿ ನಿದ್ದೆಯಲ್ಲಿ ಇದ್ದವರ ಮೇಲೆ ದಾಳಿ ಮಾಡಬಾರದು ಎಂಬ ಎರಡು ನಿಯಮಗಳನ್ನು ಮಾತ್ರ ಕೌರವರು ಮೀರಿದರು.

ಅಂತಿಮವಾಗಿ ಕುರುಕ್ಷೇತ್ರದ ಯುದ್ಧ ಸರ್ವನಾಶಕ್ಕೆ ಕಾರಣವಾಯಿತು. ಪಾಂಡವರ ಪರವಾಗಿ ನಿಂತು ಅವರ ವಿಜಯಕ್ಕೆ ಕಾರಣವಾದ ಕೃಷ್ಣನಿಗೆ ಗಾಂಧಾರಿಯ ಶಾಪ ತಟ್ಟಿತು. ಅವನ ಬಂಧು ಬಾಂಧವರೆಲ್ಲ ಹೊಡೆದಾಡಿಕೊಂಡು ಸತ್ತು ಹೋದರು.  ಕೃಷ್ಣನಿಗೆ ಶಾಪ ಕೊಟ್ಟ ಗಾಂಧಾರಿ ಯುದ್ಧಭೂಮಿಯಲ್ಲಿ ಹಸಿವಿನಿಂದ ನರಳಿ, ಕತ್ತಲಲ್ಲಿ ಕಲ್ಲುಗಳು ಎಂದು ಭ್ರಮಿಸಿ, ಮೃತ ದೇಹದ ಭಾಗಗಳನ್ನು ಒಂದರ ಮೇಲೆ ಒಂದು ಜೋಡಿಸಿ ಇಟ್ಟು ಅದರ ಮೇಲೆ ನಿಂತು ಮರದ ಹಣ್ಣು ಕಿತ್ತುಕೊಂಡು ತಿನ್ನುವುದು ಏನನ್ನು ಹೇಳುತ್ತಿರಬಹುದು? ಹಸಿವು ಎಂಬ ವಿಕೃತಿಯನ್ನೇ ಅಥವಾ ಸಹಜ ಪ್ರಕೃತಿಯನ್ನೇ?

‘ಛಲದೋಳ್‌ ಧುರ್ಯೋಧನಂ’ ಎಂದ ಪಂಪ. ಆದರೆ, ಯುದ್ಧಭೂಮಿಯಲ್ಲಿ ಸೋತು ಸಾವಿನ ದವಡೆಯಲ್ಲಿ ಇದ್ದ, ಕಿರೀಟ ಧರಿಸಿದ್ದ ತನ್ನ ತಲೆಗೆ ಭೀಮನಿಂದ ಒದೆಸಿಕೊಂಡ ದುರ್ಯೋಧನ, ಪಾಂಡವರ ಮಕ್ಕಳನ್ನು  ರಾತ್ರಿಯ ಕತ್ತಲೆಯಲ್ಲಿ ಸಂಹರಿಸಿ ತಂದ ಅಶ್ವತ್ಥಾಮನಿಗೆ, ‘ಕೊನೆಗೆ ನಾವು ಚಿಕ್ಕಮಕ್ಕಳನ್ನು ಕೊಲ್ಲುವ ಮಟ್ಟಕ್ಕೆ ಇಳಿದೆವೇ? ಇದು ಮುಗಿಯುವುದು ಯಾವಾಗ? ನಾವೆಲ್ಲ ಸತ್ತ ಮೇಲೆಯೇ? ಇದು ಹುಚ್ಚುತನ. ಪಾಂಡವರು ಹೆಣಗಳ ನಗರವನ್ನು ಆಳುವಂತಾಯಿತು. ಹೌದು ಅಶ್ವತ್ಥಾಮ. ನಾನು ಸೋತಿರಬಹುದು. ಆದರೆ, ವಾಸ್ತವವಾಗಿ ಯಾರೂ ಗೆದ್ದಿಲ್ಲ’ (ಪುಟ 295) ಎಂದು ಹೇಳುತ್ತಾನೆ.

ಮನುಷ್ಯನೇ ಹಾಗೆ. ಚರಿತ್ರೆಯ ಉದ್ದಕ್ಕೂ  ಗೆಲ್ಲಲಾಗದ ಯುದ್ಧವನ್ನೇ ಆತ ಮಾಡುತ್ತ  ಇದ್ದಾನೆ. ಮತ್ತು ಮುಂದೆಯೂ ಮಾಡುತ್ತ ಇರುತ್ತಾನೆ.

Courtesy : prajavani.net

http://www.prajavani.net/news/article/2017/03/12/477217.html

Leave a Reply