ಮಹತ್ವಾಕಾಂಕ್ಷೆಯ ಮೀಮಾಂಸೆ ಬರೆಹ

ಮಹತ್ವಾಕಾಂಕ್ಷೆಯ ಮೀಮಾಂಸೆ ಬರೆಹ

ಲೇಖಕ ಗಿರಿ (ಮಹಾಬಲಗಿರಿ ಎನ್. ಹೆಗಡೆ) ಅವರು ನಿಡುಗಾಲ ಕ್ಯಾಲಿಫೋರ್ನಿಯಾದ ‘ಸ್ಟೇಟ್ ಯೂನಿವರ್ಸಿಟಿ’ಯಲ್ಲಿ ಮಕ್ಕಳ ಮತ್ತು ವಯಸ್ಕರ ವಾಕ್ ಸಮಸ್ಯೆಗಳ ಬಗ್ಗೆ ಪಾಠ ಮಾಡುತ್ತ, ತತ್ಸಂಬಂಧದ ರೋಗ ಲಕ್ಷಣಗಳ ಬಗೆಗೆ ಪುಸ್ತಕಗಳನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ರಚಿಸಿದವರು. ಇದರೊಂದಿಗೆ ಗಿರಿ ಅವರು 1970ರ ದಶಕದಲ್ಲಿ ಬರೆದ ‘ಗತಿಸ್ಥಿತಿ’ ಕಾದಂಬರಿಯಿಂದಲೂ ಪ್ರಸಿದ್ಧರಾದವರು. ಈಗಲೂ ಅವರು ವಾಸವಿರುವುದು ಅಮೆರಿಕದ ಕ್ಲೋವಿಸ್‌ನಲ್ಲಿ. ಗಿರಿ ಅವರು ಇದೇ ಮೊದಲ ಬಾರಿಗೆ ವರ್ತನ ವಿಜ್ಞಾನವನ್ನು ಸಾಹಿತ್ಯ ಮೀಮಾಂಸೆಗೆ ಒಗ್ಗಿಸುವ ಪ್ರಯತ್ನದ ಹಿನ್ನಲೆಯಲ್ಲಿ ‘ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ’ ಬರೆದಿದ್ದಾರೆ. ಈ ಕೃತಿಗೆ ಹಿರಿಯ ವಿಮರ್ಶಕ ಜಿ.ಎಚ್. ನಾಯಕರು ಮುನ್ನುಡಿ ಬರೆದಿದ್ದಾರೆ.
ವಿಜ್ಞಾನದ ತಳಹದಿಯ ಮೇಲೆ ಸಾಹಿತ್ಯ ಮೀಮಾಂಸೆಯ ಸಂಗತಿಗಳನ್ನು ಚರ್ಚಿಸುವುದು, ಅದರೊಂದಿಗೆ ಪಾಶ್ಚಿಮಾತ್ಯ, ಪೌರ್ವಾತ್ಯ ಪರಂಪರೆಯ ವಿಮರ್ಶಾ ಪ್ರಕ್ರಿಯೆಗಳನ್ನು ಪರಿಷ್ಕರಿಸಿ ಅದೇ ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಅನ್ವಯಿಸುವ ಮಹತ್ವಾಕಾಂಕ್ಷೆಯ ಬರೆಹ ಗಿರಿ ಅವರ ಪ್ರಸ್ತುತ ಕೃತಿ. ವ್ಯಾಪಕ ಅಧ್ಯಯನ ಮತ್ತು ಚರ್ಚೆಯ ಈ ಗ್ರಂಥ ಒಂಬತ್ತು ಅಧ್ಯಾಯಗಳಲ್ಲಿದೆ. ಆರಂಭಿಕ ಅಧ್ಯಾಯಗಳಲ್ಲಿ ಸಾಹಿತ್ಯ ಮತ್ತು ವಿಜ್ಞಾನದ ಸಂಬಂಧ, ನಂತರ ಬಿ.ಎಫ್‌. ಸ್ಕಿನ್ನರ್ ಅವರ ವರ್ತನ ವಿಜ್ಞಾನದ ವಿಶ್ಲೇಷಣೆ, ಮುಂದುವರಿದಂತೆ ಪೂರ್ವ–ಪಶ್ಚಿಮದ ಸಿದ್ಧಾಂತಗಳ ಮಂಡನೆ, ಇಷ್ಟೇ ಅಲ್ಲದೆ ವರ್ತನ ವಿಧಾನಗಳ ಸಾಹಿತ್ಯ ಸಮೀಕರಣವನ್ನು ಪ್ರಸ್ತಾಪಿಸುತ್ತಾರೆ.
ಆರು, ಏಳು, ಎಂಟನೇ ಅಧ್ಯಾಯಗಳಲ್ಲಿ ವರ್ತನಾ ವಿಧಾನಗಳ ಔಚಿತ್ಯವನ್ನು ಸಂಶೋಧನೆ, ಬರೆಹಗಾರ, ಬರೆಹದ ರಚನಾ ಪ್ರಕ್ರಿಯೆ ಇದಿಷ್ಟನ್ನು ಕನ್ನಡ ಸಾಹಿತ್ಯದ ನೆಲೆಗಳಲ್ಲಿ ಚರ್ಚಿಸಲಾಗಿದೆ. ಪ್ರಸ್ತುತ ಸಾಹಿತ್ಯ ಸಂದರ್ಭದಲ್ಲಿ ವರ್ತನ ವಿಜ್ಞಾನ ಬರವಣಿಗೆ, ವಿಮರ್ಶೆಗೆ ಸಂಬಂಧಿಸಿದ ತಿರುಣಾಮ–ಪರಿಣಾಮಗಳನ್ನು ಲೇಖಕರು ವಿವರಿಸುತ್ತ, ಮುಂದೆ ಪ್ರಾಚೀನ ಅಲಂಕಾರಿಕರ ರಸ–ಧ್ವನಿ ಸಿದ್ಧಾಂತ ಮಂಡನೆಯನ್ನೂ ಚರ್ಚೆಗೆ ಒಳಪಡಿಸಿದ್ದಾರೆ. ಕಾವ್ಯ ಮೀಮಾಂಸೆಯ ಸಂಗತಿಗಳ ಕುರಿತಾಗಿ ಈಗಾಗಲೇ ಪ್ರಸ್ತಾಪಿಸಲಾಗಿರುವ ವಿವರಗಳನ್ನು ವರ್ತನ ವಿಜ್ಞಾನದ ಆಧಾರದ ಮೇಲೆ ಕೆಲವು ಪ್ರಶ್ನೆಗಳನ್ನು ಓದುಗರ ಮುಂದಿಡುತ್ತಾರೆ. ಇಲ್ಲಿ ಮುಖ್ಯ ಪ್ರಶ್ನೆ ಎಂದರೆ, ಸಂಸ್ಕೃತ ಮೀಮಾಂಸೆಯು ವೈಜ್ಞಾನಿಕವೇ ಎಂಬುದು. ಇದರೊಂದಿಗೆ ಇನ್ನೊಂದು ಪ್ರಶ್ನೆ, ಪಾಶ್ಚಿಮಾತ್ಯ ಮೀಮಾಂಸೆಯ ಇತಿಹಾಸವೂ ಕೂಡ ಸಾಹಿತ್ಯವನ್ನು ‘ಅನುಕರಣೆ’ ಎಂಬ ಚೌಕಟ್ಟಿನಿಂದಾಚೆ ವ್ಯವಹರಿಸಿದ ಸಾಧ್ಯತೆ ಇದೆಯೇ ಎಂಬುದು. ಇದಕ್ಕೆ ಗಿರಿ ಅವರು ನಕಾರಾತ್ಮಕವಾಗಿ ಉತ್ತರಿಸುತ್ತ ವರ್ತನ ವಿಜ್ಞಾನದ ಪರಿಕಲ್ಪನೆಗಳನ್ನು ಅದರೊಂದಿಗೆ ಪಾರಿಭಾಷಿಕ ಪದಗಳನ್ನು ಕನ್ನಡಕ್ಕೆ ತರುವ ಪ್ರಯತ್ನದೊಂದಿಗೆ ಹೊಸಬಗೆಯ ಸಾಹಿತ್ಯ ಮೀಮಾಂಸೆಯನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.
ಹೊಸಗನ್ನಡ ವಿಮರ್ಶೆಯು ಪಾಶ್ಚಾತ್ಯ ವಿಮರ್ಶಾ ಮಾದರಿಗಳ ಹಿನ್ನಲೆಯಲ್ಲಿರುವುದನ್ನು ಚರ್ಚಿಸುತ್ತ ‘ವರ್ತನ ವಿಜ್ಞಾನ’ದ ಸಾರ್ವತ್ರಿಕತೆಯನ್ನು ಬಳಸಿ ಕನ್ನಡ ಸೃಜನಶೀಲತೆಯೇ ಮುಂತಾಗಿ ವಿಮರ್ಶಾ ಬರೆಹಗಳನ್ನು ಮರು ವಿಶ್ಲೇಷಿಸಿರುವುದು ಗಿರಿ ಅವರ ಈ ಕೃತಿಯ ಮಹತ್ವದ ಮತ್ತು ಕುತೂಹಲಕಾರಿ ಭಾಗವಾಗಿದೆ. ಹನ್ನೆರಡನೆಯ ಶತಮಾನದ ವಚನಕಾರರ, ಹದಿನೈದನೆಯ ಶತಮಾನದ ಕೀರ್ತನೆಕಾರರ, ಜನಪದ ಕತೆ, ಕಾವ್ಯಗಳಲ್ಲದೆ ಆಧುನಿಕ ಲೇಖಕರ ಕೃತಿಗಳಲ್ಲಿ ಸಾಹಿತ್ಯಿಕ ಪ್ರಕ್ರಿಯೆಯನ್ನು, ಅದರ ನಿರ್ಮಿತಿ ಮೂಲವನ್ನು ಪದೀಯ ವರ್ತನೆಯ ಮೂಲಕ ಹೇಳಲು ಲೇಖಕರು ಪ್ರಯತ್ನಿಸಿದ್ದಾರೆ. ಈ ನಿಟ್ಟಿನಲ್ಲಿ ಮೀಮಾಂಸೆಯ ಮುಖ್ಯ ಪರಿಕಲ್ಪನೆಗಳಾದ ಸಾಹಿತ್ಯವೆಂಬುದು ಜೀವನದ ಪ್ರತಿಬಿಂಬ ಅಲ್ಲದೆ ಸಾಹಿತ್ಯ ನಿರ್ಮಿತಿಗೆ ಸ್ಫೂರ್ತಿಯೇ ಕಾರಣವೆಂಬ ಪ್ರಚಲಿತ ನುಡಿಗಟ್ಟುಗಳ ಪ್ರಸ್ತುತತೆಯನ್ನು ಪ್ರಶ್ನಿಸುತ್ತಾರೆ. ಇದಲ್ಲದೆ ರಸ–ಧ್ವನಿ ಸಿದ್ಧಾಂತದಿಂದ ಆಧುನಿಕ ಕನ್ನಡದ ವಿಮರ್ಶಾ ಪ್ರಕ್ರಿಯೆಯವರೆಗೂ ಸಹಜ ವಿಜ್ಞಾನ ಭಾಗವಾದ ವರ್ತನ ವಿಜ್ಞಾನವನ್ನು ಅರ್ಥೈಸಿಕೊಳ್ಳುವ ಸಾಧ್ಯತೆಗಳನ್ನು ಗಿರಿ ಅವರು ಪುನರ್‌ಪರಿಶೀಲನೆಗೆ ಒಳಪಡಿಸುತ್ತಾರೆ. ಅಂದರೆ, ಪ್ರಾಚೀನ ಮೀಮಾಂಸಕರ, ಅಲಂಕಾರಿಕರ ಪರಿಕಲ್ಪನೆಗಳನ್ನೆಲ್ಲ ವೈಜ್ಞಾನಿಕ ಮೂಸೆಯಲ್ಲಿ ಗಮನಿಸಹೊರಟಾಗ ಏಳುವ ಪ್ರಶ್ನೆಗಳನ್ನು ಗಿರಿಯವರು ತಮ್ಮ ಗ್ರಂಥದಲ್ಲಿ ಚರ್ಚಿಸಿರುವುದು ಕನ್ನಡ ವಿಮರ್ಶಾ ಲೋಕಕ್ಕೆ ಹೊಸ ಕೊಡುಗೆಯಾಗಿದೆ. ಪಾಶ್ಚಾತ್ಯ ಅಥವಾ ಪೌರ್ವಾತ್ಯ ಮೀಮಾಂಸೆಗಳಲ್ಲಿನ ವೈಜ್ಞಾನಿಕ ಸಂಗತಿಗಳನ್ನು ಕ್ರೋಢೀಕರಿಸಿ ಪರಿಷ್ಕ್ರತ ಸಿದ್ಧಾಂತವನ್ನು ನೀಡಿರುವುದು ಕನ್ನಡ ಸಾಹಿತ್ಯ ಲೋಕದ ವಿಮರ್ಶಾ ಮಾದರಿಯ ಅಗತ್ಯತೆಯನ್ನು ಸದ್ಯದ ಮಟ್ಟಿಗೆ ಪೂರೈಸಬಹುದಾದ ಕೃತಿಯನ್ನು ಗಿರಿಯವರು ಓದುಗರಿಗೆ ನೀಡಿದ್ದಾರೆ.
–ಕೃಷ್ಣಮೂರ್ತಿ ಹನೂರು
Courtesy : Prajavani.net
http://www.prajavani.net/news/article/2017/01/01/462894.html
Leave a Reply