ರಾಮಾಯಣ, ಮಹಾಭಾರತ ಮತ್ತು ಧರ್ಮ

ರಾಮಾಯಣ, ಮಹಾಭಾರತ ಮತ್ತು ಧರ್ಮ

ಇರಾವತಿ ಕರ್ವೆ ಅವರ ‘ಯುಗಾಂತ’ ಕೃತಿ ಮಹಾಭಾರತ ಕಾವ್ಯದ ಕುರಿತಂತೆ ನೀಡಿರುವ ಒಳನೋಟಗಳು ಬಹಳ ಅಪರೂಪವಾದುದು. ಮಹಾಭಾರತದ ಪಾತ್ರ ವಿಶ್ಲೇಷಣೆಯನ್ನು ಅವರು ಮನಶ್ಯಾಸ್ತ್ರೀಯ ಹಿನ್ನೆಲೆಯಲ್ಲಿ ಮಾಡುತ್ತಾರೆ. ಇರಾವತಿ ಕರ್ವೆ ಅವರು ಖ್ಯಾತ ಮಾನವ ಶಾಸ್ತ್ರಜ್ಞೆ, ಸಮಾಜ ಶಾಸ್ತ್ರಜ್ಞೆಯೂ ಹೌದು ಎನ್ನುವುದನ್ನು ಈ ಸಂದರ್ಭದಲ್ಲಿ ಅರಿತಾಗ ಅವರ ಕೃತಿಯ ವಿಶ್ವಾಸಾರ್ಹತೆ ನಮಗೆ ಮನವರಿಕೆಯಾಗುತ್ತದೆ. ಇವರನ್ನು ಭಾರತದ ಪ್ರಪ್ರಥಮ ಮಹಿಳಾ ಮಾನವ ಶಾಸ್ತ್ರಜ್ಞೆ ಎಂದೂ ಕರೆಯುತ್ತಾರೆ. ಮಹಾಭಾರತದ ಕುರಿತಂತೆ ಇರುವ ಹತ್ತು ಹಲವು ತಪ್ಪು ನಂಬಿಕೆಗಳನ್ನು ಯುಗಾಂತ ಕೃತಿ ಹೋಗಲಾಡಿಸುತ್ತದೆ. ಹಲವು ಪಾತ್ರಗಳ ಹಿನ್ನೆಲೆ ಮುನ್ನೆಲೆಗಳು ಅತ್ಯಂತ ಕುತೂಹಲಕರವಾಗಿ ಅವಲೋಕಿಸುತ್ತಾ ಮಹಾಭಾರತವನ್ನು ಹೊಸದಾಗಿ ಓದುವಂತೆ ಮಾಡಿದವರು ಇರಾವತಿ. ಈ ಕೃತಿ ಭಾರತದ ಅತಿ ಹೆಚ್ಚು ಭಾಷೆಗಳಲ್ಲಿ ಅನುವಾದಗೊಂಡಿದೆ. ಈ ಕೃತಿಯ ಪ್ರಭಾವದಿಂದ ಮಹಾಭಾರತವನ್ನು ವಸ್ತುವಾಗಿಸಿಕೊಂಡು ಹಲವರು ಕಾದಂಬರಿಗಳನ್ನೂ ಬರೆದಿದ್ದಾರೆ. ಯುಗಾಂತ ಮಹಾಭಾರತವನ್ನು ಹೊಸ ರೀತಿಯಲ್ಲಿ ನೋಡುವ ಕಣ್ಣುಗಳನ್ನು ನೀಡಿತು. ಅದೀಗ ಇರಾವತಿ ಕರ್ವೆ ಅವರ ಇನ್ನೊಂದು ಪ್ರಮುಖ ಕೃತಿ ‘ರಾಮಾಯಣ, ಮಹಾಭಾರತ ಮತ್ತು ಧರ್ಮ’ವನ್ನು ಚಂದ್ರಕಾಂತ ಪೋಕಳೆಯವರು ಕನ್ನಡಕ್ಕೆ ತಂದಿದ್ದಾರೆ. ಈ ಕೃತಿ ರಾಮಾಯಣ ಮತ್ತು ಮಹಾಭಾರತದ ನಡುವಿನ ಅಂತರ್ ಸಂಬಂಧದ ಬೇರುಗಳನ್ನು ತಡಕಾಡುತ್ತದೆ ಮತ್ತು ಈ ಕೃತಿಯ ಮೂಲಕ ಸ್ಥಾಪಿತಗೊಂಡ ಧರ್ಮವನ್ನು ಅವರು ವಿಶ್ಲೇಷಿಸುತ್ತಾರೆ. ಮಹಾಭಾರತದ ಕುರಿತಂತೆ ಬರೆಯುತ್ತಾ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ರಾಜಮನೆತನದ ತಲೆಮಾರಿನ ಬಖರ ಇತಿಹಾಸ ಮತ್ತು ಕೆಲವು ಹಳೆಯ ಚರಿತ್ರೆ ಎಂದು ಅಭಿಪ್ರಾಯಪಡುವ ಅವರು, ರಾಮಾಯಣವು ಕೆಲವು ಜಾನಪದ ಕಥೆ ಮತ್ತು ಕೆಲವು ಅದ್ಭುತ ಕಥೆಗಳ ಸಮ್ಮಿಶ್ರವಾಗಿದೆ ಎಂದು ಅಭಿಪ್ರಾಯಪಡುತ್ತಾರೆ ಮತ್ತು ಮಹಾಭಾರತಕ್ಕಿಂತ ಮುನ್ನವೇ ರಾಮಾಯಣ ಜಾನಪದ ರೂಪದಲ್ಲಿ ಜನರ ನಡುವೆ ಅಸ್ತಿತ್ವದಲ್ಲಿದ್ದುದನ್ನೂ ಅವರು ಗುರುತಿಸುತ್ತಾರೆ. ಅಂದರೆ ಮಹಾಭಾರತ ಇತಿಹಾಸವಾದರೆ ರಾಮಾಯಣ ಕಾವ್ಯವಾಗಿರಬೇಕು ಎಂಬ ಊಹೆ ಅವರದು. ಮಹಾಭಾರತದಲ್ಲಿ ಆರಂಭದಿಂದ ಕೊನೆಯವರೆಗೂ ನಡೆಯುವ ಸಂಘರ್ಷ ಮನುಷ್ಯ ಪಾತಳಿಯದ್ದು ಮತ್ತು ಕೌಟುಂಬಿಕವಾದುದು. ರಾಮಾಯಣ ಕೌಟುಂಬಿಕವಾದರೂ ಅದರಾಚೆಗಿನ ಹಲವು ಪೇಚುಗಳು, ಗೊಂದಲಗಳ ನಡುವೆ ಮುಂದುವರಿಯುತ್ತದೆ. ಮಹಾಭಾರತ ಮತ್ತು ರಾಮಾಯಣ ಹಿಂಸೆಯ ಕುರಿತಂತೆ ತಳೆದಿರುವ ನಿಲುವುಗಳಲ್ಲಿನ ವ್ಯತ್ಯಾಸವನ್ನೂ ಕುತೂಹಲಕರವಾಗಿ ಮಂಡಿಸಲಾಗಿದೆ. ಎರಡು ಮಹಾಕಾವ್ಯಗಳ ನಡುವಿನ ವ್ಯತ್ಯಾಗಳನ್ನು ಮತ್ತು ಸಾಮ್ಯಗಳನ್ನು ಲೇಖಕಿ ಮೊದಲ ಎರಡು ಅಧ್ಯಾಯಗಳಲ್ಲಿ ವಿವರಿಸಿದ್ದಾರೆ. ಹಾಗೆಯೇ ರಾಮಾಯಣದ ಅಯೋಧ್ಯಾಕಾಂಡದಲ್ಲಿ ಕಾಡಿಗೆ ಹೊರಡುವ ರಾಮನ ಚಿತ್ರಗಳು, ಭರತಭಾವಗಳನ್ನು ಕಟ್ಟಿಕೊಡುತ್ತಾ, ಈ ಸಂದರ್ಭದಲ್ಲಿ ದಶರಥ, ಕೌಸಲ್ಯಾ ಮೊದಲಾದ ಪಾತ್ರಗಳ ಅಭಿವ್ಯಕ್ತಿಗಳನ್ನು ಮನಃಶ್ಯಾಸ್ತ್ರೀಯ ನೆಲೆಯಲ್ಲಿ ವಿಶ್ಲೇಷಿಸುತ್ತಾರೆ. ಕೊನೆಯ ಸುದೀರ್ಘ ಲೇಖನದಲ್ಲಿ ಭಾರತೀಯ ಧರ್ಮ, ತತ್ವಶಾಸ್ತ್ರಗಳನ್ನು ಜಾಗತಿಕವಾದ ಇತರ ಸಿದ್ಧಾಂತಗಳ ಜೊತೆಗಿಡುವ ಪ್ರಯತ್ನವನ್ನು ಮಾಡುತ್ತಾರೆ. ಒಟ್ಟಿನಲ್ಲಿ, ಭಾರತದ ಅಂತಃಸ್ವರೂಪವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಕೃತಿ ಇದಾಗಿದೆ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 120ರೂ. 

Leave a Reply