“ವಿಶಾಲ ಕರ್ನಾಟಕದ ಕನಸುಗಾರ”,

‘ನಾನು ಗೀತಾಭಕ್ತ, ಕೃಷ್ಣಭಕ್ತ, ಕೃಷ್ಣನ ದೀರ್ಘ ವಂಶದಲ್ಲಿ ನನ್ನ ಮನೆತನಕ್ಕೂ ಒಂದು ಸ್ಥಾನ’– ಇದು ಜಯಚಾಮರಾಜ ಒಡೆಯರ್‌ ಅವರು ಗೀತೆಯ ಕುರಿತು ರಚಿಸಿರುವ ಪುಸ್ತಕವೊಂದರ ಮೊದಲ ವಾಕ್ಯ. ಅವರು ಕೃಷ್ಣನ ಭಕ್ತನಾಗಿದ್ದ ಹಾಗೇ ಕನ್ನಡದ ಭಕ್ತರೂ ಆಗಿದ್ದರು. ವಿಶಾಲ ಕರ್ನಾಟಕದ ಕನಸು ಕಂಡಿದ್ದರು. ಕನ್ನಡಕ್ಕಾಗಿ ಅವರ ಜೀವ ಎಂದಿಗೂ ಮಿಡಿಯುತ್ತಿತ್ತು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ರಾಜ್ಯವನ್ನು ರಾಮರಾಜ್ಯ ಮಾಡಿದ್ದರು. ಅದಕ್ಕಾಗಿಯೇ ಮಹಾತ್ಮ ಗಾಂಧಿ ಅವರಿಂದ ‘ರಾಜ ಋಷಿ’ ಎಂದು ಕರೆಸಿಕೊಂಡಿದ್ದರು. ಮೈಸೂರು ರಾಜರಂಥ ರಾಜರು ಇದ್ದರೆ ನಮಗೆ ಸ್ವಾತಂತ್ರ್ಯವೂ ಬೇಡ, ಪ್ರಜಾಪ್ರಭುತ್ವವೂ ಬೇಡ ಎಂದು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಹೇಳಿದ್ದರು. ಕೃಷ್ಣರಾಜ ಒಡೆಯರ್ ನಂತರ ಅಧಿಕಾರಕ್ಕೆ ಬಂದ ಜಯಚಾಮರಾಜ ಒಡೆಯರ್ ಅವರೂ ಇದೇ ದಾರಿಯಲ್ಲಿ ನಡೆದವರು. ಮೈಸೂರು ಅರಸರು ಎಂದೂ ವಿಲಾಸಿ ರಾಜರಾಗಿರಲಿಲ್ಲ. ತಮ್ಮ ಖರ್ಚಿಗೆ ನಿಗದಿಯಾಗಿದ್ದ ಹಣಕ್ಕಿಂತ ಹೆಚ್ಚು ಹಣವನ್ನು ವೆಚ್ಚ ಮಾಡುತ್ತಿರಲಿಲ್ಲ. ಅರಮನೆಯನ್ನು ಕಟ್ಟಿದ್ದೂ ಅವರ ಹಣದಲ್ಲಿ. ಖರ್ಚಿಗೆ ಹಣ ಇಲ್ಲದಿದ್ದಾಗ ಒಡವೆಗಳನ್ನು ಅಡ ಇಟ್ಟರೇ ವಿನಾ ಜನರ ಹಣ ಮುಟ್ಟಲಿಲ್ಲ. ನಗರಸಭೆ, ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿ, ಪ್ರಜಾಪ್ರತಿನಿಧಿ ಸಭೆ, ನ್ಯಾಯ ವಿಧಾಯ ಸಭೆ ಎಲ್ಲವೂ ರಾಜಾಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ ಕ್ರಮವಾಗಿದ್ದವು. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಮೊಟ್ಟಮೊದಲ ಬಾರಿಗೆ ರಾಜತ್ವವನ್ನು ಭಾರತದಲ್ಲಿ ವಿಲೀನಗೊಳಿಸಿದ ಮಹಾರಾಜ ಎಂಬ ಕೀರ್ತಿ ಜಯಚಾಮರಾಜ ಒಡೆಯರ್ ಅವರದು.ಜಯಚಾಮರಾಜ ಒಡೆಯರ್ ಅವರು ಒಬ್ಬ ಶ್ರೇಷ್ಠ ವಾಗ್ಗೇಯಕಾರ, ಒಳ್ಳೆಯ ಕಲಾವಿದ, ಉತ್ತಮ ಸಾಹಿತಿ, ಉನ್ನತ ಆದರ್ಶದ ಕಲಾಪೋಷಕ. ಅವರ ಹಿರಿಮೆ ಇನ್ನೊಬ್ಬರು ಹೊರಿಸಿದ್ದಲ್ಲ, ವಂಶಪಾರಂಪರ್ಯವಾಗಿ ಬಂದದ್ದೂ ಅಲ್ಲ. ಬಹುಪಾಲು ತಾವೇ ದುಡಿದು ಗಳಿಸಿದ್ದು. ಮಹಾಕವಿ ರಾಘವಾಂಕನ, ‘ಭಕ್ತಿಗೆ ಈಶ್ವರನ ತಲೆದೂಗಿಸುವುದಧಿ’ ಎಂಬ ಮಾತು ಇವರಲ್ಲಿ ಅನ್ವರ್ಥವಾಗುತ್ತಿತ್ತು. ‘ಆಕಾರ ಸದೃಶ ಪ್ರಜ್ಞಃ ಪ್ರಜ್ಞಯಾ ಸದೃಶಾಗಮಃ’ ಎಂಬ ಮಹಾಕವಿ ಕಾಳಿದಾಸನ ಮಾತು ಪೂರ್ಣವಾಗಿ ಅನ್ವಯವಾಗುತ್ತಿತ್ತು. ಅವರು ಹಲವು ದೇಶಗಳಿಗೆ ಭೇಟಿ ನೀಡಿದ್ದರು. ಇಂಗ್ಲೆಂಡ್‌, ಅಮೆರಿಕ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಈಜಿಪ್ಟ್, ಜಪಾನ್‌, ಸಿಂಗಪುರ ಮೊದಲಾದ ದೇಶಗಳಲ್ಲಿ ಸಂಚರಿಸಿ ಅಪಾರ ಅನುಭವ ಸಂಪಾದಿಸಿದ್ದರು. ಅನೇಕ ವಿಶ್ವವಿದ್ಯಾಲಯಗಳಲ್ಲಿ ತತ್ವಜ್ಞಾನ, ಸಾಹಿತ್ಯ, ಸಂಸ್ಕೃತಿ ಕುರಿತು ವಿದ್ವತ್‌ಪೂರ್ಣ ಭಾಷಣಗಳನ್ನು ಮಾಡಿದ್ದರು. ಅವರು ಭಾರತೀಯ ಸಂಗೀತದಲ್ಲಿ ಆಳವಾದ ಜ್ಞಾನ ಹೊಂದಿದ್ದರು. ಜಯಚಾಮರಾಜರು ಕಲೆಗೆ ಪ್ರೋತ್ಸಾಹ ನೀಡಿದರು. ಪಾಶ್ಚಾತ್ಯ ಸಂಗೀತದ ಮೇಲೂ ಪ್ರಭುತ್ವ ಹೊಂದಿದ್ದರು. ಪಿಯಾನೊ, ಪೈಪ್‌ ಆರ್ಗನ್‌ಗಳನ್ನು ಚೆನ್ನಾಗಿ ನುಡಿಸಬಲ್ಲವರಾಗಿದ್ದರು. ದಕ್ಷಿಣ ಭಾರತದ ಸಂಸ್ಕೃತಿ ಮೈಸೂರಿನಲ್ಲಿ ಮೇಳೈಸುವಂತೆ ಮಾಡಿದ್ದರು. ಆ ಕಾಲದ ಪ್ರಮುಖ ವಾಗ್ಗೇಯಕಾರರು, ಸಂಗೀತ ವಿದ್ವಾಂಸರು ಇವರ ಆಸ್ಥಾನವನ್ನು ಅಲಂಕರಿಸಿದ್ದರು. ಪಾಶ್ಚಾತ್ಯ ಸಂಗೀತದ ಬಗ್ಗೆ ಭಾರತದಲ್ಲೇ ಅತಿ ದೊಡ್ಡದೆನಿಸುವ ಗ್ರಂಥ ಭಂಡಾರವನ್ನು ಇಟ್ಟುಕೊಂಡಿದ್ದರು. 94ಕ್ಕೂ ಹೆಚ್ಚು ಕೀರ್ತನೆಗಳನ್ನು ರಚಿಸಿದ್ದರು. ಹೊಸ ರಾಗಗಳನ್ನೂ ಪ್ರಚಾರಕ್ಕೆ ತಂದಿದ್ದರು. ಲಂಡನ್ನಿನ ಹೆಸರಾಂತ ಫಿಲೊಮಿನಾ ಕನ್ಸರ್ಟ್‌ ಸೊಸೈಟಿಯ ಮೊದಲ ಅಧ್ಯಕ್ಷರಾಗಿ ಶಾಸ್ತ್ರೀಯ ಸಂಗೀತಕ್ಕೆ ಯುರೋಪಿನಲ್ಲೂ ಮಾನ್ಯತೆ ಸಿಕ್ಕುವಂತೆ ಮಾಡಿದರು. ಹ್ಯಾರಿ ವಾಲ್ಟರ್‌ ಲೆಗ್ಗಿ ಎಂಬ ಯುರೋಪಿನ ಸಂಗೀತ ಧ್ವನಿ ಮುದ್ರಣದ ನಿರ್ಮಾಪಕನೊಬ್ಬ ಒಮ್ಮೆ ಮೈಸೂರಿಗೆ ಭೇಟಿ ನೀಡಿದ್ದ. ಜಯಚಾಮರಾಜರ ಸಂಗೀತ ವೈಭವವನ್ನು ಕಂಡು ನಿಬ್ಬೆರಗಾಗಿದ್ದ ಆತ ವ್ಯಕ್ತಪಡಿಸಿದ ಅನಿಸಿಕೆ ಚಾರಿತ್ರಿಕ ದಾಖಲೆಯಾಗಿ ಉಳಿದಿದೆ.‘ಮೈಸೂರಿಗೆ ಭೇಟಿ ನೀಡಿದ್ದೊಂದು ಸೊಗಸಾದ ಅನುಭವ. ಅಲ್ಲಿನ ಮಹಾರಾಜರು ವಯಸ್ಸಿನಲ್ಲಿ ತುಂಬಾ ಕಿರಿಯರು. ಅವರಿಗಿನ್ನೂ 30 ವರ್ಷವೂ ಆಗಿಲ್ಲ. ಅವರ ಒಂದು ಅರಮನೆಯಲ್ಲಿ ಶಾಸ್ತ್ರೀಯ ಸಂಗೀತದ ದೊಡ್ಡದಾದ ಮುದ್ರಿತ ಭಂಡಾರವಿದೆ. ಥರಾವರಿ ಲೌಡ್‌ ಸ್ಪೀಕರ್‌ಗಳು, ಪಿಯಾನೊಗಳು ಸಹ ಅವರ ಸಂಗ್ರಹದಲ್ಲಿವೆ’ ಎಂದು ವಾಲ್ಟರ್‌ ಬರೆದಿದ್ದ. ‘ಜಯಚಾಮರಾಜೇಂದ್ರ ಗ್ರಂಥಮಾಲೆ’ ಎಂಬ ಹೆಸರಿನಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಗ್ರಂಥಗಳನ್ನು ಕನ್ನಡದಲ್ಲಿ ಪ್ರಕಟಿಸಿ ಕನ್ನಡಾಭಿಮಾನ ಮೆರೆದವರು ಅವರು. ಸಂಸ್ಕೃತ ಭಾಷೆಯಲ್ಲಿರುವ ವೇದ, ಶಾಸ್ತ್ರ, ಪುರಾಣ, ಉಪನಿಷತ್ತು ಸಾಮಾನ್ಯ ಜನರಿಗೆ ಅರ್ಥವಾಗಬೇಕು ಎಂಬ ಉದ್ದೇಶದಿಂದ ಹಲವು ಗ್ರಂಥಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿಸಿ ಉಚಿತವಾಗಿ ಹಂಚಿದ್ದರು. ರಾಜ್ಯಶಾಸ್ತ್ರ, ಚರಿತ್ರೆ, ಅರ್ಥಶಾಸ್ತ್ರ ಮತ್ತು ಆಫ್ರಿಕನ್ ವಿಷಯಗಳಲ್ಲಿ ಅವರಿಗೆ ವಿಶೇಷ ಪರಿಣತಿ ಇತ್ತು. ಒಳ್ಳೆಯ ಕುದುರೆ ಸವಾರರು, ನುರಿತ ಬೇಟೆಗಾರರೂ ಆಗಿದ್ದರು. ಟೆನಿಸ್ ಆಟಗಾರರೂ ಹೌದು. ಹೆಸರಾಂತ ಟೆನಿಸ್‌ಪಟು ರಾಮನಾಥನ್‌ ಕೃಷ್ಣನ್‌ ಅವರು ವಿಂಬಲ್ಡನ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ನೆರವು ನೀಡಿದ್ದರು. ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ಇಎಎಸ್‌ ಪ್ರಸನ್ನ ಅವರನ್ನು ಕಳುಹಿಸಲು ಅವರ ತಂದೆ ನಿರಾಕರಿಸಿದ್ದಾಗ ಅವರನ್ನು ಮನವೊಲಿಸಿ, ಪ್ರಸನ್ನ ಅವರು ಪ್ರವಾಸ ಕೈಗೊಳ್ಳುವಂತೆಯೂ ಮಾಡಿದ್ದರು. ಅಂತಹ ಅಪ್ಪಟ ಕ್ರೀಡಾಪ್ರೇಮಿ ಅವರಾಗಿದ್ದರು. ಜಯಚಾಮರಾಜರು ನಿಜ‌ವಾದ ಅರ್ಥದಲ್ಲಿ ದಾರ್ಶನಿಕರಾಗಿದ್ದರು. ಭಾರತ ಸಂಗೀತ ಅಕಾಡೆಮಿಗೆ ಮಾತ್ರವಲ್ಲದೆ ಬೆಂಗಳೂರು ಬಸವ ಸಮಿತಿಗೂ ಅವರು ಅಧ್ಯಕ್ಷರಾಗಿದ್ದರು. ಪ್ರಜಾಪರಿಷತ್ತು ರಚಿಸಿ ಜನರಿಂದಲೇ ಆಡಳಿತ ಆರಂಭಿಸಿದ ರಾಜ ಎಂಬ ಹಿರಿಮೆ ಅವರದ್ದು. ತಾಂತ್ರಿಕ ಶಿಕ್ಷಣದ ಮಹತ್ವ ಅರಿತಿದ್ದ ಅವರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ವಿಶಾಲ ಮೈಸೂರಿಗೆ ನೀರಾವರಿ ಕಲ್ಪಿಸಲು ಹಲವು ಯೋಜನೆಗಳನ್ನು ಜಾರಿಗೊಳಿಸಿದರು. ಆಸ್ಪತ್ರೆಗಳನ್ನು ಸ್ಥಾಪಿಸಿ ಆರೋಗ್ಯ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದರು. 1965ರ ಅಕ್ಟೋಬರ್‌ 17 ರಂದು ಗೋಖಲೆ ಸಾರ್ವಜನಿಕ ಸಂಸ್ಥೆಯ ಸಮಾರಂಭದಲ್ಲಿ ಮಾಡಿದ ಭಾಷಣದಲ್ಲಿ ಅವರು ‘Whatever my personal fortunes are and wherever I may be, my roots are here and prosperity of the people of Mysore remain close to my heart’ (ನನ್ನ ವೈಯಕ್ತಿಕ ಅದೃಷ್ಟ ಏನೇ ಇರಲಿ ಮತ್ತು ನಾನು ಎಲ್ಲಿಯೇ ಇರಲಿ, ನನ್ನ ಬೇರುಗಳು ಮಾತ್ರ ಇಲ್ಲಿಯೇ ಇವೆ ಮತ್ತು ಮೈಸೂರು ಜನರ ಸಮೃದ್ಧಿಯ ಬದುಕು ನನ್ನ ಹೃದಯಕ್ಕೆ ಹತ್ತಿರದ ವಿಷಯವಾಗಿದೆ) ಎಂಬ ಮಾತುಗಳನ್ನು ಆಡಿದ್ದರು. ಕನ್ನಡಿಗರು, ಮೈಸೂರು ಜನರ ಬಗ್ಗೆ ಅವರಿಗಿದ್ದ ಪ್ರೀತಿಗೆ ಈ ಮಾತುಗಳು ದ್ಯೋತಕ. ಜಯಚಾಮರಾಜ ಒಡೆಯರ್ ಅವರು ಕನ್ನಡನಾಡಿಗೆ ಬಹಳಷ್ಟು ಕೊಡುಗೆ ನೀಡಿದವರು. ಆದರೆ, ಅವರ ಜೀವನವೇ ಒಂದು ವಿಚಿತ್ರ. 1940ರಿಂದ 47ರವರೆಗೆ ಅವರು ಮಹಾರಾಜರಾಗಿದ್ದರು. ನಂತರ ಗಣತಂತ್ರ ಜಾರಿಗೆ ಬರುವವರೆಗೆ ರಾಜ ಪ್ರಮುಖರಾಗಿದ್ದರು. ಆಮೇಲೆ ರಾಜ್ಯಪಾಲರಾದರು. ನಂತರ ಮಾಜಿ ಮಹಾರಾಜರಾಗಿ ರಾಜಧನವನ್ನು ಪಡೆಯುತ್ತಿದ್ದರು. ರಾಜಧನ ಪದ್ಧತಿ ರದ್ದಾದ ನಂತರ ನಮ್ಮ ನಿಮ್ಮಂತೆ ತೆರಿಗೆ ಕಟ್ಟುವ ಜನಸಾಮಾನ್ಯರೂ ಆಗಿಬಿಟ್ಟರು

courtsey:prajavani.net

https://www.prajavani.net/artculture/article-features/jayachamaraja-wadiyar-650864.html

Leave a Reply