“ಶಂಬೂಕವಧೆ, ಪತ್ರಿಕೋದ್ಯಮ ಮತ್ತು ವಾಸ್ತವ”,

ಶಂಬೂಕವಧೆ (ಕಥಾಸಂಕಲನ) ಲೇ: ಬುಳುಸಾಗರ ಪಾಂಡುರಂಗಯ್ಯ ಪ್ರ: ನಿವೇದಿತ ಪ್ರಕಾಶನ ಮೊ: 94487 33323 ಈ ಕಥಾಸಂಕಲನದಲ್ಲಿರುವ ‘ಶಂಬೂಕವಧೆ’ ಕನ್ನಡದಲ್ಲೇ ಅತ್ಯಂತ ವಿಶಿಷ್ಟ ಕಥೆ ಎನ್ನಬಹುದು. ಇದೇ ಕಥಾವಸ್ತು ಇಟ್ಟುಕೊಂಡು ಕುವೆಂಪು ರಚಿಸಿದ ನಾಟಕ ‘ಶೂದ್ರ ತಪಸ್ವಿ’ಯೂ ಇಲ್ಲಿ ಉಲ್ಲೇಖಾರ್ಹ. ಈ ನಾಟಕದಲ್ಲಿ ಕುವೆಂಪು ರಾಮನ ಉದಾತ್ತ ಗುಣ, ವ್ಯಕ್ತಿತ್ವದ ಘನತೆ ಎತ್ತಿತೋರಿಸಿದರೆ, ಲೇಖಕ ಬುಳುಸಾಗರ ಪಾಂಡುರಂಗಯ್ಯ ಅವರು ಶಂಬೂಕವಧೆ ಕಥೆಯಲ್ಲಿ ರಾಮನೊಳಗಿನ ಚಾರಿತ್ರ್ಯ, ವ್ಯಕ್ತಿತ್ವದ ಅಸಲಿಯತ್ತನ್ನೇ ಒರೆಗೆ ಹಚ್ಚುವಂತೆ, ಸಾಹಿತ್ಯ ಓದಿನ ಕ್ರಮವನ್ನೇ ಮರುಓದಿಗೆ ಒಳಪಡಿಸುವಂತೆ ಮಾಡಿದ್ದಾರೆ. ಮತ್ತೊಂದು ಪ್ರಮುಖ ಕಥೆ ‘ಸಿಣಗಾರಿ’. ಡೊಂಬರ ಜಾತಿಯ ನರ್ತಕಿಯ ಎದುರು ಪಂಥದಲ್ಲಿ ರಾಜ್ಯವನ್ನೇ ಸೋಲುವ ಭೀತಿಗೆ ಸಿಕ್ಕಿ, ರಾಜ ದರ್ಬಾರಿನವರು ಮಾಡುವ ಕುತಂತ್ರಕ್ಕೆ ಆ ಸ್ಫುರದ್ರೂಪಿ ಹೆಣ್ಣು ಹತ್ಯೆಯಾಗುತ್ತಾಳೆ. ಅವಳೇ ‘ಸಿಣಗಾರಿ’. ಈ ಕಥೆಯು ಮನುಷ್ಯನ ಅಂತಃಕರಣವನ್ನೇ ಕಲಕುತ್ತದೆ. ಹಾಗೆಯೇ ‘ಕ್ರೌರ್ಯ’, ‘ಹಳೆ ಬೇರು– ಹೊಸ ಚಿಗುರು’, ‘ದರೋಡೆಕೋರರು’, ‘ನಿಂತ್ಕೊಂಡೆ ನೀ ಏನೇನು ಕಂಡೆ’, ‘ಕಾವು ಆರಿತ್ತು ಕಾಮ ಸುಟ್ಟಿತ್ತು’ ಕಥೆಗಳೂ ಗಮನ ಸೆಳೆಯುತ್ತವೆ. ಮನುಷ್ಯನ ಕ್ರೌರ್ಯದ ಉನ್ಮಾದ ಮತ್ತು ಪರಾಕಾಷ್ಠೆಯನ್ನು ಈ ಕಥೆಗಳು ಅನಾವರಣಗೊಳಿಸುತ್ತದೆ. ಮನುಷ್ಯನೇ ಕೇಂದ್ರ ವಸ್ತುವಾಗಿರುವ ಈ ಎಲ್ಲ ಕಥೆಗಳು ಓದಿಸಿಕೊಳ್ಳುವ ಗುಣವೊಂದಿವೆ. ಪ್ರತಿ ಕಥೆಯಲ್ಲೂ ವ್ಯಾಕರಣ ದೋಷಗಳು ಉಳಿದಿದ್ದು, ಸರಾಗ ಓದಿಗೆ ಅಲ್ಲಲ್ಲಿ ಅಡ್ಡಿಯಾಗುವುದನ್ನು ಹೊರತುಪಡಿಸಿದರೆ, ಬರವಣಿಗೆಯ ಶೈಲಿ ಓದುಗರಿಗೆ ಇಷ್ಟವಾಗುತ್ತದೆ.‌ ಮಲಾಣ್ : ಡಾ.ಶಾಂತನಾಯ್ಕ ಪ್ರ: ದೇಸಿ ಪುಸ್ತಕ ವಿಜಯನಗರ ಬೆಂಗಳೂರು ದೂರವಾಣಿ: 94484 39998 ಮೂಲನಿವಾಸಿ ಮತ್ತು ವಲಸಿಗ ಬಂಜಾರರ ನಡುವಿನ ಸಂಘರ್ಷದ ಕಥನ ‘ಮಲಾಣ್’ ಕಾದಂಬರಿ. ಮಲಾಣ್ ಎಂದರೆ ವಲಸೆ ಎಂದರ್ಥ. ಸ್ವಾತಂತ್ರ್ಯ ಪೂರ್ವದಲ್ಲಿ ಪರತಂತ್ರದ ಪದತಳಕ್ಕೆ ಸಿಕ್ಕು ಅದೆಷ್ಟೋ ಜನಾಂಗಗಳು ನೊಂದವು, ನಲುಗಿದವು. ಧಾರ್ಮಿಕ ವೈರುಧ್ಯಗಳು, ಕೋಮು ಮನೋಭಾವವು ಪಂಗಡಗಳನ್ನು, ವ್ಯಕ್ತಿಗಳನ್ನು ಇನ್ನಿಲ್ಲದಂತೆ ಕಾಡಿದ, ಕೊಂದ ದಿನಮಾನಗಳವು. ಅಂತೆಯೇ ಅಂದಿನ ಬುಡಕಟ್ಟು ಹಾಗೂ ಆದಿವಾಸಿಗಳು ಸ್ವಾರ್ಥ, ಕುಟಿಲ ತಂತ್ರಕ್ಕೆ ಬಲಿಯಾಗಿ ಒಂದೆಡೆ ನೆಲೆ ಕಾಣಲಾರದೆ, ದೇಶದ ಉದ್ದಗಲಕ್ಕೂ ಅಲೆದ, ಅನುಕ್ಷಣ ಜೀವವನ್ನು ಅಂಗೈಯಲಿ ಹಿಡಿದು ಬದುಕಿದ, ತಮ್ಮಿರುವಿಕೆಗಾಗಿ ಪಟ್ಟ ಸಂಕಷ್ಟಗಳನ್ನು ಧ್ವನಿಸುತ್ತದೆ ಈ ಕಾದಂಬರಿ. ‌ ಲಂಬಾಣಿಗರ ಬದುಕು, ಬವಣೆ, ಅಂದಿನ ಪರಿಸ್ಥಿತಿಯೇ ಇಂದಿಗೂ ಮುಂದುವರೆದಿರುವ ವಾಸ್ತವಾಂಶಗಳೇ ಇಲ್ಲಿನ ಬಹುಮುಖ್ಯ ಚರ್ಚಿತ ವಸ್ತು. ಉಳಿವಿಗಾಗಿ ಹೋರಾಟ ಒಂದೆಡೆಯಾದರೆ, ಇನ್ನೊಂದೆಡೆ ದಮನಿತರ ಸಾಲಿನಲ್ಲೇ ನಿಲ್ಲುವ ಹೆಂಗಸರ ಒಳತುಮುಲ, ಅವುಗಳಿಗೆ ಸಿಗದ ಸ್ಪಂದನೆ, ಕೌಟುಂಬಿಕ ಕಾಳಜಿ, ತಾಯಂದಿರ ಬೇಗುದಿಯನ್ನು ಪ್ರತಿಬಿಂಬಿಸುತ್ತದೆ ಈ ಕಾದಂಬರಿ. ಶೌರ್ಯ, ಯುದ್ಧಗಳ ನಡುವೆ ಹೆಣ್ಮಕ್ಕಳ ಸೊಲ್ಲಡಗಿಸುವ ಪರಿಯನ್ನು ತಿಳಿಸುತ್ತದೆ ಈ ಕಾದಂಬರಿ. ಬ್ರಿಟಿಷರ ಕುಟಿಲತೆ, ಸ್ವಾತಂತ್ರ್ಯಕ್ಕಾಗಿನ ಸಂಘರ್ಷದ ಎಳೆಗಳಿವೆ ಇಲ್ಲಿ. ಅಂದಿನ ಸಮಸ್ಯೆಗಳು ಇಂದಿಗೂ ಜೀವಂತ ಇವೆ ಅಥವಾ ಹಾಗಿರುವಂತೆ ಮಾಡಲಾಗಿದೆ ಎಂಬುದನ್ನು ಕಾದಂಬರಿ ಸೂಕ್ಷ್ಮವಾಗಿ ಚಿತ್ರಿಸಿದೆ. ಇತಿಹಾಸ ಹಾಗೂ ವರ್ತಮಾನದ ಸಂಗತಿಗಳ ಸಾರವನ್ನು ಈ ಪುಸ್ತಕದಲ್ಲಿ ಹಿಡಿದಿಡಲಾಗಿದೆ. ಪತ್ರಿಕೋದ್ಯಮ ಮತ್ತು ವಾಸ್ತವ ಲೇ: ಡಾ.ಎನ್.ಕೆ. ಪದ್ಮನಾಭ ಪ್ರ: ಕರ್ನಾಟಕ ಮಾಧ್ಯಮ ಅಕಾಡೆಮಿ ಬೆಂಗಳೂರು ದೂರವಾಣಿ: 080-22860164 ಮಾಧ್ಯಮ ಕ್ಷೇತ್ರ ನಾಗಾಲೋಟದಲ್ಲಿ ಬೆಳೆಯುತ್ತಿದ್ದು, ವಿದ್ಯುನ್ಮಾನ ಕ್ಷೇತ್ರವಂತೂ ವಿಸ್ತಾರಗೊಳ್ಳುತ್ತಲೇ ಇದೆ. ಸುದ್ದಿಯಿಂದ ನಿಜಕ್ಕೂ ಆಗಬೇಕಿರುವುದು ರಚನಾತ್ಮಕ ಕೊಡುಗೆಗಳು. ದುರಂತವೆಂದರೆ, ಸುದ್ದಿ ಲಾಭದಾಯಕ ಸರಕಾಗಿ ಮಾರ್ಪಡುತ್ತಿರುವುದು ಇಂದಿನ ವಿಪರ್ಯಾಸ. ವರದಿಗಾರಿಕೆ ವೃತ್ತಿಯನ್ನಾಗಿ ಸ್ವೀಕರಿಸುವ ಕನಸು ಹೊಂದಿರುವವರು ಮತ್ತು ಈಗಾಗಲೇ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರು ಭಾರತೀಯ ಪತ್ರಿಕಾ ರಂಗದ ಇತಿಹಾಸದೆಡೆಗೆ ಸೂಕ್ಷ್ಮ ಒಳನೋಟವಿಟ್ಟುಕೊಂಡು ಕಣ್ಣುಹಾಯಿಸಬೇಕು ಎನ್ನುವ ಲೇಖಕರ ಆಶಯ ಇಲ್ಲಿ ಅಕ್ಷರ ರೂಪ ಪಡೆದಿದೆ. ಬರೆಯುವುದೆಂದರೆ ನಮ್ಮೊಳಗಿನ ಯೋಚಿಸುವ ಶಕ್ತಿಯನ್ನು ನವೀಕರಿಸಿಕೊಳ್ಳುವ ಭಿನ್ನ ಹಾದಿ ಎಂಬುದನ್ನು ನಿಚ್ಛಳವಾಗಿಸಿದ್ದಾರೆ ಇಲ್ಲಿ ಲೇಖಕರು. ಪತ್ರಕರ್ತರಿಗೆ ಸಂವಹನ ಮುಖ್ಯವೇ ಹೊರತು, ಸಂಬಂಧವಲ್ಲ ಎಂಬುದು ಪುಸ್ತಕದ ಸೂಚ್ಯಾರ್ಥ. ಅಂತೆಯೇ ವಸ್ತುನಿಷ್ಠ ನಿರೂಪಣೆ ಆದ‍ರ್ಶವೇ ಹೊರತು ವಾಸ್ತವವಲ್ಲ ಎನ್ನುವ ಗಿರಡ್ಡಿ ಗೋವಿಂದರಾಜ್ ಅವರ ಮಾತು ಕೂಡ ಇಲ್ಲಿ ಉಲ್ಲೇಖಾರ್ಹ. ಸತ್ಯಸಂದತೆ, ಜೀವಪರತೆ, ವಾಸ್ತವಾಂಶಗಳ ಮುಖಾಮುಖಿ ಪತ್ರಿಕೋದ್ಯಮದ ಜೀವಾಳ. ಇವುಗಳೇ ಈ ಪುಸ್ತಕದ ವಸ್ತುವಿಷಯ. ಪತ್ರಕರ್ತರಾಗಬಯಸುವವರು ಓದಬೇಕಾದ ಪುಸ್ತಕವೆನ್ನಲು ಯಾವುದೇ ಅಡ್ಡಿ ಇಲ್ಲ. ಈ ಪುಸ್ತಕವು ಪತ್ರಿಕೋದ್ಯಮ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಒಂದು ಕೈಪಿಡಿಯೂ ಆಗಬಹುದು.

courtsey:prajavani.net

https://www.prajavani.net/artculture/book-review/book-652326.html

Leave a Reply