ಶ್ರಮದ ಬದುಕು ಕಂಡ ಬೆಳಕು

ಶ್ರಮದ ಬದುಕು ಕಂಡ ಬೆಳಕು

ಸೌಂದರ್ಯಕ್ಕೂ ಕೇಶರಾಶಿಗೂ ಬಿಡಿಸಲಾರದ ನಂಟು. ಕಡಿಮೆ ಕೂದಲಿರುವವರು ಅಥವಾ ಬೊಕ್ಕ ತಲೆಯವರು ಕೇಶ ವಿನ್ಯಾಸದ ಆಸೆ ತಣಿಸಿಕೊಳ್ಳುವುದು ಹೇಗೆ? ಈ ಪ್ರಶ್ನೆಗೆ ಉತ್ತರ ವಿಗ್ (ಕೃತಕ ಕೇಶ). ಫ್ಯಾಷನ್‌ ಪ್ರಿಯರು, ನಟ–ನಟಿಯರು, ರಂಗಭೂಮಿ ಕಲಾವಿದರು, ಕಾನ್ಸರ್‌ ಪೀಡಿತರು ಹೀಗೆ ಹತ್ತಾರು ಬಗೆಯ ಜನರಿಗೆ ವಿಗ್‌ ತಯಾರಿಸಿ ಕೊಡುತ್ತಾರೆ ನಾಗೇಶ್ವರ್‌ ರಾವ್‌. ತಮ್ಮ ವಿಶಿಷ್ಟ ವೃತ್ತಿಯ ಬಗ್ಗೆ ಅವರು ಖುಷಿಯಿಂದ ಮಾಹಿತಿ ಹಂಚಿಕೊಂಡರು.

ನಾನು ಮೂಲತಃ ರಾಯಚೂರಿನವ. ಬದುಕು ಕಟ್ಟಿಕೊಳ್ಳಲೆಂದು ಬೆಂಗಳೂರಿಗೆ ಬಂದೆ. ಸುಮಾರು 52 ವರ್ಷಗಳಿಂದ ಕೇಶ ವಿನ್ಯಾಸಕನಾಗಿ (ವಿಗ್‌ ಡಿಸೈನರ್‌) ಕೆಲಸ ಮಾಡುತ್ತಿದ್ದೇನೆ.

ನಮ್ಮದು ಬ್ರಾಹ್ಮಣ ಅರ್ಚಕರ ಕುಟುಂಬ. ನನಗೋ ನಟನೆಯ ಹುಚ್ಚು. ಅದು 1968. ನನಗೆ ಆಗ 13 ವರ್ಷ. ನಟನೆಯ ಅವಕಾಶ ಹುಡುಕಿಕೊಂಡು ಚೆನ್ನೈನಲ್ಲಿ ಅಲೆದಾಡಿದೆ. ಜೂನಿಯರ್‌ ಆರ್ಟಿಸ್ಟ್ ಆಗಿ ಕೆಲಸವನ್ನೂ ಮಾಡಿದೆ. ಆಗಿನ ಕಾಲದಲ್ಲಿ ಜೂನಿಯರ್ ಆರ್ಟಿಸ್ಟ್‌ಗಳನ್ನು ಗೌರವದಿಂದ ನಡೆಸಿಕೊಳ್ಳುತ್ತಿರಲಿಲ್ಲ. ನನಗೆ ಒಂಥರಾ ನೋವು ಅನಿಸಿತು.

ಏನಾದ್ರೂ ಕೆಲಸ ಕಲಿಯಲೇಬೇಕು ಎಂದು ನಿರ್ಧರಿಸಿದೆ. ಚಿತ್ರೀಕರಣದ ಸೆಟ್‌ಗಳಲ್ಲಿ ನಟ–ನಟಿಯರಿಗೆ ಹಿರಿಯ ಮೇಕಪ್‌ ಆರ್ಟಿಸ್ಟ್‌ಗಳು ಮಾಡ್ತಿದ್ದ ಕೆಲಸವನ್ನು ನೋಡುತ್ತಾ ನಾನು ಕಲಿತೆ. ಕೆಲ ಕಾಲ ಮೇಕಪ್ ಆರ್ಟಿಸ್ಟ್ ಆಗಿಯೂ ಕೆಲಸ ಮಾಡಿದೆ. ಕೂಡು ಕುಟುಂಬದ ಹೊಣೆ ನನ್ನ ಮೇಲಿತ್ತು. ಸಂಪಾದನೆ ಸಾಲುತ್ತಿರಲಿಲ್ಲ. ಕೈಕಸಬು ಇರಲಿ ಎಂದು ಕೇಶವಿನ್ಯಾಸ ಕಲಿತೆ. ಹಗಲಿರುಳೆನ್ನದೆ ದುಡಿಯುತ್ತಿದ್ದೆ.

ವಿಗ್ ತಯಾರಿಸಲು ತಿರುಪತಿಯಿಂದ ಕೂದಲು ತರಿಸುತ್ತೇನೆ. ‘ಬ್ರಾಹ್ಮಣನಾಗಿ ಕೂದಲ ಕೆಲಸ ಮಾಡ್ತಾನೆ’ ಅಂತ ಹಿರಿಯರು ನನಗೆ ಜಾತಿಯಿಂದ ಬಹಿಷ್ಕಾರ ಹಾಕಿದರು. ಆದರೆ ಅಪ್ಪ–ಅಮ್ಮ ನನ್ನ ಸಾಧನೆಗೆ ಬೆಂಬಲವಿತ್ತು ಪ್ರೋತ್ಸಾಹಿಸಿದರು. ನಾನೇನು ಅಂತ ಅವರಿಗೆ ಗೊತ್ತಾದ ಮೇಲೆ, ತೀರಸ್ಕರಿಸಲ್ಪಟ್ಟವರಿಂದ ಪುರಸ್ಕೃತನಾದೆ.

ನನಗೀಗ 65 ವರ್ಷ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೇಶ ವಿನ್ಯಾಸಕನಾಗಿ ಕೆಲಸ ಮಾಡಿದ್ದೇನೆ. ಡಾ. ರಾಜ್‌ಕುಮಾರ್, ಡಾ. ವಿಷ್ಣುವರ್ಧನ್, ಜಯಂತಿ, ಲಕ್ಷ್ಮೀ, ಆರತಿ, ಭಾರತಿ ಹೀಗೆ 75 ಕ್ಕೂ ಹೆಚ್ಚು ಹಿರಿಯ ನಟ–ನಟಿಯರಿಗೆ,  ರಂಗಭೂಮಿ ಕಲಾವಿದರು, ಬಹುಭಾಷಾ ನಟ–ನಟಿಯಯರಿಗೆಲ್ಲ ವೈಯಕ್ತಿಕವಾಗಿಯೂ ಕೇಶವಿನ್ಯಾಸ ಮಾಡಿಕೊಟ್ಟಿದ್ದೇನೆ.

ಈಗಿನ ಕಾಲದ ಹುಡುಗರಿಗೆ ಕೂದಲು ಕಡಿಮೆ. ಬೊಕ್ಕತಲೆ ಸಮಸ್ಯೆ ಜಾಸ್ತಿ. ಮದುವೆ ಆಗುವ ಮನಸ್ಸು ಇದ್ದವರೂ ಬೊಕ್ಕತಲೆಯ ಕಾರಣ ಹುಡುಗಿಯರು ಒಪ್ಪುತ್ತಿಲ್ಲ ಎಂದು ಕೊರಗುತ್ತಾರೆ. ‘ಯಾವ ಹುಡುಗಿಯೂ ನನ್ನನ್ನು ಒಪ್ಪುತ್ತಿಲ್ಲ. ಒಳ್ಳೇ ವಿಗ್ ಮಾಡಿಕೊಡಿ’ ಎಂದು ಅನೇಕ ಯುವಕರು ಅಳಲು ತೋಡಿಕೊಳ್ಳುತ್ತಾರೆ. ನಾನು ಈವರೆಗೆ 70 ಸಾವಿರಕ್ಕೂ ಹೆಚ್ಚು ಮಂದಿಗೆ ವಿಗ್ ಮಾಡಿಕೊಟ್ಟಿದ್ದೇನೆ.

ಸಿನಿಮಾ ಮತ್ತು ನಾಟಕಗಳಿಗೆ ವಿಗ್‌ ಬೇಡಿಕೆ ಸದಾ ಇದ್ದೇ ಇರುತ್ತೆ. ಆದರೆ ಈಚೆಗೆ ಯುವಕ–ಯುವತಿಯರ ವಿಗ್‌ಗಳಿಗೂ ಬೇಡಿಕೆ ಕುದುರುತ್ತಿದೆ. ವಿದೇಶಿ ನಟ–ನಟಿಯರು, ಯುವಕರ ಕೇಶ ವಿನ್ಯಾಸದ ಫೋಟೊಗಳನ್ನು ತಂದುತೋರಿಸುವ ಬೆಂಗಳೂರು ಮಂದಿ, ‘ನಮಗೂ ಅಂಥದ್ದೇ ವಿಗ್ ಮಾಡಿಕೊಡಿ’ ಎಂದು ಬೇಡಿಕೆ ಇಡುತ್ತಾರೆ. ವಿಗ್‌ಗಳ ಬೆಲೆ ರೂ 1 ಸಾವಿರದಿಂದ ರೂ75 ಸಾವಿರದವರೆಗೂ ಇದೆ.  ವಿಗ್‌ಗಳನ್ನು ತಯಾರಿಸಲು ತಮಿಳುನಾಡಿನಿಂದ ಕೂದಲು ಪೂರೈಕೆ ಆಗುತ್ತದೆ. ಹೆಣ್ಮಕ್ಕಳ ಕೂದಲಿನಿಂದಲೇ ವಿಗ್‌ ತಯಾರು ಮಾಡುತ್ತೇನೆ.

ನಾನು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿದ ನಂತರವೇ ವಿಗ್‌ಗಳ ವಿನ್ಯಾಸ ಮಾಡ್ತೀನಿ. ಇಷ್ಟು ವರ್ಷಗಳ ನನ್ನ ಅನುಭವದಲ್ಲಿ ವಿಗ್‌ಗಳ ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದ ಒಬ್ಬ ಗ್ರಾಹಕರ ಉದಾಹರಣೆಯೂ ಇಲ್ಲ. ನಾಗವೇಣಿ ಜಡೆ, ಮಾರುದ್ದದ ಕೂದಲು ಇಂದಿನ ಫ್ಯಾಷನ್‌.

ನಾನು ಯಾವತ್ತೂ ಶಾಲಾ–ಕಾಲೇಜುಗಳ ಹಿಂದು–ಮುಂದೂ ಹೆಜ್ಜೆ ಇಟ್ಟವನಲ್ಲ. ಕೇಶ ವಿನ್ಯಾಸ, ವಿಗ್ ತಯಾರಿಕೆಗೆ ಸಂಬಂಧಿಸಿದ ಯಾವುದೇ ಕೋರ್ಸ್‌ ಮಾಡಿಲ್ಲ. ಇದು ನೋಡಿ ಕಲಿತ ವಿದ್ಯೆ. ಇರುವಾಗಲೇ ಏನಾದರೂ ಸಾಧನೆ ಮಾಡಬೇಕು. ನಾನು ಹೊತ್ತು–ಗೊತ್ತು ಇಲ್ಲದೆ ಕೆಲಸ ಮಾಡುತ್ತೇನೆ. ಕೆಲಸವೇ ನನ್ನ ಸ್ನೇಹಿತ. ಶ್ರಮದ ಬೆವರಿನಲ್ಲಿಯೇ ಬದುಕಿನ ಬೆಳಕು ಕಂಡೆ.

ಕ್ಯಾನ್ಸರ್ ಬಂದವರಿಗೆ ಕಿಮೊಥೆರಪಿ ವೇಳೆ ಕೂದಲು ಉದುರುತ್ತವೆ. ಇಂಥವರಿಗೆ ಮಾಡಿಕೊಡುವ ವಿಗ್‌ಗಳಿಗೆ ಹಣ ಪಡೆಯುವುದಿಲ್ಲ. ಆಸ್ಪತ್ರೆಗಳಲ್ಲಿ ನನ್ನನ್ನು ಹೇರ್‌ ಡಾಕ್ಟರ್‌ ಅಂತ್ಲೇ ಗುರುತಿಸ್ತಾರೆ. ಎಂಬಿಬಿಎಸ್ ಓದದೇ ಡಾಕ್ಟರ್ ಆಗಿಬಿಟ್ಟೆ ನೋಡಿ. ಇದಕ್ಕಿಂತ ದೊಡ್ಡ ಭಾಗ್ಯ ಇನ್ಯಾವುದಿದೆ?

ಸಂಪರ್ಕ ಸಂಖ್ಯೆ– 98452 41096.

Courtesy : Prajavani.net

http://www.prajavani.net/news/article/2018/04/05/563872.html

Leave a Reply