ಸಂಸ್ಕೃತದ ಕಂಪು ಪಸರಿಸಿದ ಪದ್ಮಶ್ರೀ ಕೃಷ್ಣಶಾಸ್ತ್ರಿ

ಸಂಸ್ಕೃತದ ಕಂಪು ಪಸರಿಸಿದ ಪದ್ಮಶ್ರೀ ಕೃಷ್ಣಶಾಸ್ತ್ರಿ

‘ಸೋತ್ಸಾಹಾನಾಂ ನಾಸ್ತಿ ಅಸಾಧ್ಯಂ ನರಾಣಾಂ’ ಎಂಬ ಸೂಳ್ನುಡಿ ಇದೆ. ಭಾಸ ಕವಿಯ ಪ್ರತಿಜ್ಞಾ ನಾಟಕದಲ್ಲಿ ಯೌಗಂಧರಾಯಣನೆಂಬ ಮಂತ್ರಿ ಹೇಳುವ ಮಾತಿದು. ‘ಯಾವುದೇ ಸಂದರ್ಭದಲ್ಲೂ ಇದು ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕೂರುವುದು ತರವಲ್ಲ; ಆಗಿಯೇ ಆಗುತ್ತದೆ, ಮಾಡಿಯೇ ತೀರುತ್ತೇನೆ’ ಎಂಬ ಉತ್ಸಾಹದಿಂದ ಮೇಲೆದ್ದರೆ, ಕಾರ್ಯಪ್ರವೃತ್ತರಾದರೆ ಆಗದೆ ಇರುವುದು ಯಾವುದೂ ಇಲ್ಲ ಎಂದರ್ಥ. ತನ್ನ ರಾಜನನ್ನು ಸೆರೆಹಿಡಿದ ಸಂಕಟದ ಸಂದರ್ಭದಲ್ಲಿ ಮಂತ್ರಿ ತನಗೆ ತಾನೇ ಹೇಳಿಕೊಳ್ಳುವ  ಮೇಲಿನ ಮಾತು. ತಂತ್ರಹೂಡಿ ರಾಜನನ್ನು ಆತ ಸೆರೆಯಿಂದ ವಿಮುಕ್ತಿಗೊಳಿಸುತ್ತಾನೆ.

ಬಲ್ಲವರ ವ್ಯಂಗ್ಯನುಡಿ: ಈ ಉಪೋದ್ಘಾತ ಏಕೆ? ಸಂಸ್ಕೃತ ಭಾಷೆಯ ಅಳಿವಿನ ಬಗ್ಗೆ ಇಂಥದೇ ಒಂದು ಗಂಡಾಂತರ ಒದಗಿತ್ತು. ಅದು ಗತಕಾಲಕ್ಕೆ ಸೇರಿದ್ದು. ಸಂಸ್ಕೃತ ಈಗ ಉಳಿದಿರುವುದು ದೇವರ ಮನೆಯಲ್ಲಿ, ಮಂತ್ರ ಹೇಳಲು; ಪುರೋಹಿತರ ಪರಿಧಿಗೆ ಸೇರಿದ ಈ ಹಳೆಸರಕು ಹೊಸಯುಗದಲ್ಲಿ ಚಲಾವಣೆಯಾಗುವುದಿಲ್ಲ ಇತ್ಯಾದಿಯಾಗಿ ಸಂಸ್ಕೃತದ ಬಗ್ಗೆ ಅಸಡ್ಡೆ, ಅಪಮಾನದ ಮಾತುಗಳು ಬೇಕಾಬಿಟ್ಟಿ ಕೇಳಿಬರುತ್ತಿದ್ದ ಕಾಲವದು. ಭಾಷಾವಾರು ವಿಭಜನೆಯಾದ ಮೇಲೆ ಎಲ್ಲ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ. ಕರ್ನಾಟಕದಲ್ಲಿ ಸಂಸ್ಕೃತಕ್ಕಿಂತ ಕನ್ನಡಕ್ಕೆ ಪ್ರಾಧಾನ್ಯ ಸಿಗಬೇಕು ಎಂದು ಗೋಕಾಕ್ ಚಳವಳಿ ನಡೆಯಿತು. ದಿವಂಗತ ಅನಂತಮೂರ್ತಿಯವರು ಸಂಸ್ಕೃತವನ್ನು ಅಟ್ಟದ ಮೇಲಿನ ಭಾಷೆ, ಹಿತ್ತಿಲಿಲ್ಲದ್ದು ಎಂದು ವ್ಯಂಗ್ಯವಾಡಿದರು.

ಸರಿಸುಮಾರು ಇದೇ ಸಮಯದಲ್ಲೆ ಸಂಸ್ಕೃತದ ಅಂತಸ್ಸತ್ತ್ವವನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಒಂದು ಮಹಾಂದೋಲನ ಆರಂಭವಾಯಿತು. ಧರ್ಮಕ್ಕೆ ಗ್ಲಾನಿ ಒದಗಿದಾಗ ‘ಆತ್ಮಾನಂ ಸೃಜಾಮ್ಯಹಂ’ ಎಂದ ಭಗವಂತ ಸಂಸ್ಕೃತಕ್ಕೆ ಗ್ಲಾನಿ, ಹಾನಿ ಒದಗಿದಾಗಲೂ ಒಬ್ಬ ತರುಣನನ್ನು ಪ್ರೇರೇಪಿಸಿದ. ಆತನ ಹೆಸರೂ ಕೃಷ್ಣ. ಈ ಕೃಷ್ಣ ಆರಂಭಿಸಿದ್ದು ಸಂಸ್ಕೃತ ಆಡುನುಡಿಯ ಆಂದೋಲನ. 1981ರಲ್ಲಿ ಹುಟ್ಟಿದ ಈ ಜನಾಂದೋಲನಕ್ಕೆ ಇದೀಗ 36ರ ಪ್ರಾಯ, ಪ್ರೌಢಾವಸ್ಥೆ. ಕೇವಲ ವಯಸ್ಸಿನಲ್ಲಷ್ಟೆ ಅಲ್ಲ; ಪಡೆದಿರುವ ಸಿದ್ಧಿಯಲ್ಲಿ ಕೂಡ. 1981ರಿಂದ ಎಡೆಬಿಡದೆ ಸಂಸ್ಕೃತ ಪ್ರಚಾರ, ಪ್ರಸಾರ, ವಿಚಾರ, ವಿಮರ್ಶೆ ನಡೆಯುತ್ತಿದೆ. ಕಾರ್ಯಪಡೆಗಳ ನಿರ್ವಣ, ಭಾಷೆಯ ಹೊಸಮುಖದ ಆವಿಷ್ಕಾರ, ಸರಳ ಸಂಸ್ಕೃತಜ್ಞರಿಗೆ ಬೇಕಾದ ಸಾಹಿತ್ಯಸೃಷ್ಟಿ, ಆಬಾಲವೃದ್ಧರಾದಿಯಾಗಿ ಎಲ್ಲರಲ್ಲೂ ಸಂಸ್ಕೃತದ ಬಗ್ಗೆ ಆಸಕ್ತಿ ಮೂಡುವಂಥ ಪಾಠ-ಪ್ರವಚನಗಳ ರೂಪಣೆ ನಿರೂಪಣೆ, ಸಂಸ್ಕೃತ ಗೃಹ ಮತ್ತು ಗ್ರಾಮಗಳ ನಿರ್ವಣ, ಸಂಭಾಷಣೆ, ಭಾಷಣ- ಒಂದೇ ಎರಡೇ?

‘ಶಾಸ್ತ್ರಿ’ ಪದವಿಗೆ ಅನ್ವರ್ಥವಾದವರು: ಈ ಸಂಸ್ಕೃತ ಸಮರದ ಮುಂಚೂಣಿ ಯಲ್ಲಿ ನಿಂತು ಮುನ್ನಡೆಸುತ್ತಿರುವ ಮಹಾಸೇನಾನಿ ಚ.ಮೂ. ಕೃಷ್ಣಶಾಸ್ತ್ರಿ. ಅವರ ಹೆಸರಿನ ಮೊದಲೆರಡು ಅಕ್ಷರಗಳು ಸೇರಿದರೆ ‘ಚಮೂ’ ಎಂದಾಗುತ್ತದೆ. ಅದಕ್ಕೆ ಸಂಸ್ಕೃತದಲ್ಲಿ ಸೇನೆ ಎಂದರ್ಥ. ಸಾರ್ಥಕವಾಯಿತಲ್ಲ! ಶಾಸ್ತ್ರಿ ಎಂಬುದು ಮನೆತನದ ಹೆಸರಾಗಿ ಬಂದರೂ ತಿರುಪತಿಯ ಸಂಸ್ಕೃತ ಸಂಸ್ಥಾನದ ಶಾಸ್ತ್ರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪಡೆದ ಪದವಿಯೂ ಹೌದು. ಭಾರತದ ಪೂರ್ವಪ್ರಧಾನಿ ಲಾಲ್ ಬಹಾದೂರರು ಕೂಡ ಇದೇ ರೀತಿ ಪದವೀಧರರಾಗಿ ‘ಶಾಸ್ತ್ರಿ’ಗಳಾಗಿದ್ದರು. ಕೃಷ್ಣಶಾಸ್ತ್ರಿ ಸಂಸ್ಕೃತ ಸಂಭಾಷಣಾಂದೋಲನವನ್ನು ಆರಂಭಿಸಿದ ಸಮಕಾಲದಲ್ಲೆ ಕರ್ನಾಟಕದಲ್ಲಿ, ಅದೂ ಬೆಂಗಳೂರಿನಲ್ಲಿ ಮತ್ತೊಂದು ಅದ್ಭುತವಾದ ಸಂಗತಿ ಗೋಚರವಾಯಿತು. ಅದೂ ಸಂಸ್ಕೃತಲೋಕಕ್ಕೆ ಸಂಬಂಧಿಸಿದ್ದೆ. ಕೃಷ್ಣಶಾಸ್ತ್ರಿ ಸಂಸ್ಕೃತಕ್ಕೆ ಆಧುನಿಕ ಸ್ಪರ್ಶನೀಡಿ, ಅದು ಕೇವಲ ಗತವೈಭವವಲ್ಲ ಇಂದಿಗೂ ಪ್ರಸ್ತುತ, ಸಾರ್ವಕಾಲಿಕ, ಸಾರ್ವದೇಶಿಕ ಎಂದು ನಿರೂಪಿಸಿದರೆ, ಶತಾವಧಾನಿ ಗಣೇಶರು ಅತ್ಯಂತ ಪ್ರಾಚೀನ ಭಾಷೆಯ ಘನಸತ್ತ್ವವನ್ನು ಸರ್ವಜನರಂಜಕವೂ, ಸಕಲಜನಮಾನ್ಯವೂ ಆಗುವಂತೆ ಎತ್ತಿಹಿಡಿದರು. ವೇದಗಳಿಂದಲೇ ಸ್ಫೂರ್ತಿ ಪಡೆದ ಅವಧಾನವೆಂಬ ಭಾರತೀಯ ಅನನ್ಯ ಸಾಹಿತ್ಯಕಲಾಕ್ರೀಡೆಯನ್ನು ಅದರ ಉತ್ತುಂಗ ಸ್ಥಿತಿಗೆ ಕೊಂಡೊಯ್ದಿರುವ ಶ್ರೇಯಸ್ಸು ಗಣೇಶರಿಗೆ ಸಲ್ಲುತ್ತದೆ. ವಿಜ್ಞಾನ ಹಾಗೂ ತಾಂತ್ರಿಕ ವಿಷಯಗಳಲ್ಲಿ ಉನ್ನತೋನ್ನತ ಪದವಿಗಳನ್ನು ಪಡೆದ ಗಣೇಶರು ಸಂಸ್ಕೃತದ ತೆಕ್ಕೆಗೆ ಮರಳಿ ಅದರ ಆಕರ್ಷಣೆ ‘ಅನ್​ತಡೆಯಬಲ್’ ಎಂಬುದನ್ನು ನಿರೂಪಿಸಿದ್ದಾರೆ! ಈ ಇಬ್ಬರೂ ಕರ್ನಾಟಕದ ಮಹಾಸಾಹಸಿ ಪ್ರತಿಭೆಗಳು. ಜಗತ್ತಿಗೆ ಕರ್ನಾಟಕದ ಹೆಮ್ಮೆಯ ಕೊಡುಗೆಗಳು. ಆದರೆ ಕರ್ನಾಟಕ ಹಾಗೆ ಭಾವಿಸುವುದಿಲ್ಲ! ಎಲ್ಲೆಲ್ಲೂ ಜ್ಞಾನಪೀಠಿಗಳ ಮುಖ ಬಿಟ್ಟರೆ ಕರ್ನಾಟಕದಲ್ಲಿ ಬೇರೇನೂ ಇಲ್ಲ. ಶಾಲೆಗಳಿಂದ ಹಿಡಿದು ದೆಹಲಿ ಕರ್ನಾಟಕ ಸಂಘದವರೆಗೆ ಕರ್ನಾಟಕದ ಕೊಡುಗೆ ಎಂದರೆ ಜ್ಞಾನಪೀಠಿಗಳೆ! ಎಂಥ ವಿಪರ್ಯಾಸ.

ಯಾವನೋ ಯುರೋಪಿನವ ಸಂಸ್ಕೃತವನ್ನು ಸತ್ತಭಾಷೆ ಎಂದ. ಈ ನಾಡು, ನುಡಿ, ಸಂಸ್ಕೃತಿಗಳಿಗೆ ಎರವಾದ ಪರದೇಶಿಯೊಬ್ಬ ಹೀಗೆ ಹೇಳುವುದರಲ್ಲಿ ಆಶ್ಚರ್ಯವಿಲ್ಲ. ಆದರೆ ಅದನ್ನೇ ವೇದವಾಕ್ಯವೆಂದು ಈ ದೇಶದ ಸಂಸ್ಕೃತ ಅರಿಯದ ಬುದ್ಧಿವಂತರು ಕೂಡ ಗಿಳಿಪಾಠ ಒಪ್ಪಿಸಲು ಆರಂಭಿಸಿದ್ದರು. ಸಂಸ್ಕೃತ ಆರ್ಯಜನಾಂಗದ ಭಾಷೆ. ದ್ರಾವಿಡ ಭಾಷೆಗಳಿಗೂ ಅದಕ್ಕೂ ಸಂಬಂಧವಿಲ್ಲ. ಸಂಸ್ಕೃತ ಕಬ್ಬಿಣದ ಕಡಲೆ. ಸುಲಿದ ಬಾಳೆಯ ಹಣ್ಣಿನಂತೆ ಸುಲಭವಾದ ನಮ್ಮ ಭಾಷೆಗಳಿರುವಾಗ ಅದರ ಸುದ್ದಿ ನಮಗೇಕೆ ಬೇಕು? ಅದೊಂದು ವರ್ಗದ ಭಾಷೆ. ಆ ವರ್ಗದವರು ಉಳಿದವರನ್ನೆಲ್ಲ ತುಳಿದವರು ಮುಂತಾಗಿ ಬರೀ ‘ಕನ್ನ ಪಿನ್ನ’ಗಳೆ ಹೆಚ್ಚು. ಇವುಗಳಲ್ಲಿ ಯಾವುದಕ್ಕೂ ಆಧಾರವಿಲ್ಲ, ಪ್ರಮಾಣವಿಲ್ಲ. ಆದರೂ ಜನರ ಮನದಲ್ಲಿ ಶಂಕಾತರಂಗಗಳಿಗೇನೂ ಕೊರತೆ ಇರಲಿಲ್ಲ. ಇಂಥ ಸಂದಿಗ್ಧ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಧೀಮಂತರಾದ ನ. ಕೃಷ್ಣಪ್ಪ, ಅಜಿತ್​ಕುಮಾರ್ ಮುಂತಾದ ದೂರದರ್ಶಿಗಳ ಪ್ರೇರಣೆ ಪ್ರೋತ್ಸಾಹಗಳಿಂದ ಕೃಷ್ಣಶಾಸ್ತ್ರಿ ಸಂಸ್ಕೃತದ ಪ್ರಚಾರಕ್ಕೆ ಟೊಂಕಕಟ್ಟಿದರು. ಸ್ವಾತಂತ್ರ್ಯೊತ್ತರ ಭಾರತ ರಾಷ್ಟ್ರಜೀವನದಲ್ಲಿ ತನ್ನ ಅಸ್ಮಿತೆಯನ್ನು ಅಂದರೆ ತನ್ನತನವನ್ನು ಕಂಡುಕೊಳ್ಳಲಿಲ್ಲ. ಕೆಳಕ್ಕೆ ಬಿದ್ದ ನೀರು ಕೂಡ ತನ್ನ ಮಟ್ಟ ಕಂಡುಕೊಳ್ಳುತ್ತದೆ. ಸಾವಿರಾರು ವರ್ಷಗಳ ಸಾಹಿತ್ಯ ಸಂಸ್ಕೃತಿಗಳ ಮಹೋನ್ನತ ಇತಿಹಾಸವಿರುವ ಈ ಮಹಾಮಾತೆ ಭಾರತಿ ತನ್ನತನವನ್ನು ಅರಿಯದೆ ಇದ್ದರೆ ಇತರ ದೇಶಗಳ ಸಾಲಿನಲ್ಲಿ ಅದಕ್ಕೆ ಸ್ಥಾನವೆಲ್ಲಿ? ಮಾನವೆಲ್ಲಿ? ಭಾರತೀಯ ಅಸ್ಮಿತೆಯ ಒಂದು ಅಮೂಲ್ಯಭಾಗ ‘ಸಂಸ್ಕೃತಭಾಷೆ’. ಸಂಸ್ಕೃತ ಸಾಹಿತ್ಯದ, ಈ ಭಾಷೆ ಆವಿಷ್ಕರಿಸಿದ ತತ್ತ್ವಗಳ ಸಂಪರ್ಕವಿಲ್ಲದ, ಅದರ ಸತ್ತ್ವಹೀರಿಕೊಳ್ಳದ ಯಾವ ಭಾರತೀಯ ಭಾಷೆಯೂ ಇಲ್ಲ. ಈ ಸರ್ವಸಾಧಾರಣ ಅಂಶವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಕಂಡುಕೊಂಡಿತು. ಎಲ್ಲ ಭಾರತೀಯರಿಗೂ ಸಮಾನವಾದ ಸಂಸ್ಕೃತ ಗೌರವಸ್ಥಾನ ಪಡೆದರೆ ಅವರಲ್ಲಿ ಆತ್ಮಾಭಿಮಾನ, ಸ್ವಂತಿಕೆ ತಾನಾಗಿಯೆ ಪುಟಿಯುತ್ತದೆ ಎಂಬ ಅಂಶವನ್ನು ಬುನಾದಿಯಾಗಿಟ್ಟುಕೊಂಡು ಸಂಸ್ಕೃತವನ್ನು ಮತ್ತೆ ಜನರ ನಡುವೆ ತರಲು ಪ್ರಯತ್ನ ನಡೆಯಿತು. ಯಾವ ಕಾಲದಲ್ಲೂ ಸಂಸ್ಕೃತ ಜನರಿಂದ ದೂರವಾಗಿರಲಿಲ್ಲವೆಂಬುದು ನಿಜವಾದರೂ ಅವರು ಆತ್ಮೀಯತೆಯಿಂದ ಅಪ್ಪಿಕೊಳ್ಳುವಂತೆಯೂ ಇರಲಿಲ್ಲ.

ಪ್ರೀತಿಗಿಂತ ಭೀತಿಯೇ ಹೆಚ್ಚು: ಉದಾಹರಣೆ ನೀಡಿ ಇದನ್ನು ಸ್ಪಷ್ಟಪಡಿಸೋಣ. ‘ಆಸೇತು ಹಿಮಾಚಲ ಪರ್ಯಂತ’ ಇರುವ ಭಾರತೀಯರ ಹೆಸರುಗಳ ಮೇಲೆ ಒಮ್ಮೆ ಪಕ್ಷಿನೋಟ ಹರಿಸಿ. ಕೆಲವು ಪೂವೋತ್ತರ ರಾಜ್ಯಗಳ ಹಾಗೂ ಮುಸಲ್ಮಾನರ ಹೆಸರುಗಳನ್ನು ಹೊರತುಪಡಿಸಿದರೆ ಶೇ.80 ಜನರ ಹೆಸರುಗಳು ಸಂಸ್ಕೃತದ ನೇರ ಪದವಾಗಲಿ ಅದರ ಛಾಯೆಯಾಗಲಿ ಆಗಿರುತ್ತವೆ. ಆದರೆ ಇದು ಜನರ ಅರಿವಿಗೆ ಬಂದಿಲ್ಲ. ಸಂಸ್ಕೃತ ತನ್ನಲ್ಲೆ ಇದ್ದರೂ ಅದು ಹೊರಗಿನದು ಎಂಬ ಭಾವನೆ. ಸಂಸ್ಕೃತದ ಬಗ್ಗೆ ಸಾಮಾನ್ಯವಾಗಿ ಪ್ರೀತಿಗಿಂತ ಭೀತಿಯೇ ಹೆಚ್ಚು. ಇದು ಸಾಮಾನ್ಯರ ಸ್ಥಿತಿಯಾದರೆ, ಸಂಸ್ಕೃತ ಬಲ್ಲವರದ್ದು ಮತ್ತೊಂದು ವರಸೆ. ಸಂಸ್ಕೃತ ಇರುವುದು ವೇದ ವೇದಾಂತಗಳ, ತರ್ಕ, ವ್ಯಾಕರಣ, ಆಯುರ್ವೆದಾದಿ ಶಾಸ್ತ್ರಗಳ ಅಧ್ಯಯನಕ್ಕೆ; ಅದರಲ್ಲಿ ಮಾತನಾಡಿ ಸಾಧಿಸಬೇಕಾದ್ದೇನು ಎಂಬ ಉಡಾಫೆ. ಭಾಷೆಯು ಹಲವು ಮುಖವಾಗಿ ಹರಿಯುತ್ತದೆ. ಮುಖ್ಯವಾದದ್ದು ಮಾತು. ಅದಿಲ್ಲದಿದ್ದರೆ ಸುಂದರ ವ್ಯಕ್ತಿ ಅಂಗವಿಕಲನಾದಂತೆ. ಸರ್ವಾಂಗಪುಷ್ಟವಾದ ಸಂಸ್ಕೃತವನ್ನು ಕಾಡುತ್ತಿದ್ದುದು ಈ ವೈಕಲ್ಯ. ವಿದ್ವತ್ ಸಭೆಗಳಲ್ಲಿ, ಶಾಸ್ತ್ರ ಚರ್ಚಾ ಗೋಷ್ಠಿಗಳಲ್ಲಿ ಮಹಾವಿದ್ವಾಂಸರು ಸಂಸ್ಕೃತ ಮಾತನಾಡುತ್ತಿದ್ದರು. ಸಾಮಾನ್ಯರ ಮೇಲೆ ಅವರ ಪ್ರಭಾವವೆಷ್ಟು? ವಿದ್ವಾಂಸರಿಗೆ ತಮ್ಮ ವಿದ್ವತ್ತಿನ ಬಗ್ಗೆ ಹಮ್ಮು-ಬಿಮ್ಮು ಇದ್ದದ್ದೆ. ಇಂಥ ಸಂದರ್ಭದಲ್ಲಿ ಸಂಸ್ಕೃತವನ್ನು ಜನರ ನಡುವೆ ಬಿತ್ತುವುದು ಹೇಗೆ?

ಕೃಷ್ಣಶಾಸ್ತ್ರಿ ಕಂಡುಕೊಂಡ ಮಾರ್ಗ ಸರಳ- ಅದು ಸಂಸ್ಕೃತ ಸಂಭಾಷಣೆ. ಭಾಷೆಯೊಂದನ್ನು ವ್ಯವಸ್ಥಿತವಾಗಿ, ವೈಜ್ಞಾನಿಕವಾಗಿ, ಸರಳವಾಗಿ ಕಲಿಸುವುದು ಹೇಗೆ ಎಂಬುದನ್ನು ಹೈದರಾಬಾ��ಿನ ಭಾಷಾಸಂಸ್ಥೆಯಲ್ಲಿ ಅಭ್ಯಾಸ ಮಾಡಿದರು. 10 ದಿನಗಳಲ್ಲಿ ಸುಮಾರು ನಿತ್ಯದ ಬಳಕೆಗೆ ಬೇಕಾದ 250 ಪದಗಳನ್ನು ಸಂಸ್ಕೃತ ವ್ಯವಹಾರದ ಮೂಲಕವೇ ಪರಿಚಯಿಸುವ ಕ್ರಮವನ್ನು ಆವಿಷ್ಕರಿಸಿದರು. ಸಂಸ್ಕೃತ ಕಲಿತು ಗ್ರಂಥಾಭ್ಯಾಸ ಮಾಡುತ್ತಿದ್ದ, ಆದರೆ ಮಾತನಾಡಲು ಬರದಿದ್ದ ನೂರಾರು ಜನ ಅಧ್ಯಾಪಕರಿಗೆ ಮೊದಲು ಈ ಪಾಠ ಹೇಳಿಕೊಟ್ಟರು. ದಿನಕ್ಕೆ 2 ಗಂಟೆಯಂತೆ 20 ಗಂಟೆಗಳಲ್ಲಿ ಸಂಸ್ಕೃತದ ಕಿರುಪರಿಚಯವನ್ನು ಮಾಡಿಸಿದ ಕೃಷ್ಣಶಾಸ್ತ್ರಿಯವರನ್ನು ಎಲ್ಲರೂ ಬೆರಗುಗಣ್ಣುಗಳಿಂದ ನೋಡಿದರು. ಮೊದಲ ಹೆಜ್ಜೆ ಇಡುವುದೇ ತ್ರಾಸ. ನಂತರ ಅಭ್ಯಾಸ ತಾನಾಗಿಯೆ ಆಗುತ್ತೆ. ಶಾಸ್ತ್ರಿ ರೂಪಿಸಿದ ಈ ಸರಳ ಸಂಸ್ಕೃತ ಸಂಭಾಷಣಾ ಆಂದೋಲನ ಇಂದು 110 ದೇಶಗಳಲ್ಲಿ ಹರಡಿದೆ. ಸ್ವತಃ ಕೃಷ್ಣಶಾಸ್ತ್ರಿ ಲೋಕಸಭೆ, ಕಾಶೀಪಂಡಿತ ಮಂಡಲಿಗಳಲ್ಲಿ ಪಾಠಪದ್ಧತಿಯನ್ನು ಪ್ರಯೋಗಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ದೇಶದಲ್ಲಿ ಕೋಟಿ ಕೋಟಿ ಜನ, ಜಾತಿ ಜನಾಂಗದ ಮೇರೆಗಳನ್ನು ಮೀರಿ ಸಂಸ್ಕೃತವನ್ನು ಅಪ್ಪಿಕೊಂಡಿದ್ದಾರೆ. ಗೃಹಿಣಿಯರು, ಮಕ್ಕಳು, ಶಿಕ್ಷಿತರು, ಯುವಕರು, ವಿಜ್ಞಾನಿಗಳು, ರಾಜಕೀಯದವರು, ವೃದ್ಧರು, ಬ್ಯಾಂಕ್ ಉದ್ಯೋಗಿಗಳು, ಸಾಫ್ಟ್​ವೇರ್​ನವರು ಎಲ್ಲರೂ ಸಂಸ್ಕೃತವನ್ನು ಕಲಿಯಲು ಮುಂದಾಗುತ್ತಿದ್ದಾರೆ.

ಜನರಿಂದ ದೂರಾಗಿದ್ದ ಅವರದೇ ಭಾಷೆಯನ್ನು ಅವರ ಪಕ್ಕದಲ್ಲೆ ತಂದು ಕೂರಿಸಿದ್ದಾರೆ, ಬತ್ತಿದ್ದ ಕೆರೆಗೆ ನೀರು ತುಂಬಿಸಿದಂತೆ. ಇದು ಅಸಾಮಾನ್ಯವಾದ ನುಡಿಸೇವೆ, ದೇಶಸೇವೆ. ಕೃಷ್ಣಶಾಸ್ತ್ರಿ ಬರಹಗಾರರು. ಕೇಳುಗರಲ್ಲಿ ಸ್ಪೂರ್ತಿಯನ್ನು ಉಕ್ಕೇರಿಸುವ ವಾಗ್ಮಿ, ಕರ್ತೃತ್ವಶಾಲಿ, ದೇಶವಿದೇಶಗಳಲ್ಲಿ ಸಂಸ್ಕೃತ ನವನವೋನ್ಮೇಷವನ್ನು ಪ್ರಚುರಪಡಿಸಿದ ಜಂಗಮ. ಇವರಿಗೆ ‘ಪದ್ಮಶ್ರೀ’ ಪ್ರಶಸ್ತಿ ಬಂದದ್ದು ಜಗತ್ತಿನ ಸಂಸ್ಕೃತ ಪ್ರೇಮಿಗಳೆಲ್ಲ ಸಂಭ್ರಮಿಸುವ ಸುದ್ದಿ. ಅವರಿಗೆ ನಾಡಿನ ಜನತೆಯ ಪ್ರೀತಿಪೂರ್ವಕ ಅಭಿನಂದನೆಗಳು, ಗೌರವಪೂರ್ವಕ ಅಭಿವಂದನೆಗಳು.

Courtesy : vijayavani.net

 

Leave a Reply