ಸಪ್ತ ಸಾಗರದಾಚೆ ಸರಿಗಮಪ

ಸಪ್ತ ಸಾಗರದಾಚೆ ಸರಿಗಮಪ

ಅಂತರರಾಷ್ಟ್ರೀಯ ಮಟ್ಟದ ಸಂಗೀತ ಕ್ಷೇತ್ರದಲ್ಲಿ ಖ್ಯಾತಿಗೊಂಡವರು ಬೆಂಗಳೂರಿನ ಕಲಾವಿದೆ ಜ್ಯೋತ್ಸ್ನಾ ಶ್ರೀಕಾಂತ್. ಕರ್ನಾಟಕ ಸಂಗೀತವನ್ನು ತನ್ನದೇ ಶೈಲಿಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿಕೊಟ್ಟ ಹೆಗ್ಗಳಿಕೆ ಅವರದ್ದು. ಲಂಡನ್‌ನ ಬಕ್ಕಿಂಗ್ ಹ್ಯಾಮ್ ಅರಮನೆಯಲ್ಲಿ ಈಚೆಗೆ ಸಂಗೀತ ಪ್ರದರ್ಶನ ನೀಡಿ ಬಂದಿದ್ದಾರೆ. ತಮ್ಮ ಸಂಗೀತ ಪಯಣದ ಬಗ್ಗೆ ‘ಮೆಟ್ರೊ’ ಜತೆ ಅವರು ಹಂಚಿಕೊಂಡಿದ್ದಾರೆ.

ಸಂಗೀತ ನನ್ನ ಪ್ಯಾಶನ್‌. ಅದಿಲ್ಲದೆ ನನ್ನ ಬದುಕು ಶೂನ್ಯ. ಅದರ ಮೇಲಿನ ಪ್ರೀತಿಗಾಗಿ ವೈದ್ಯಕೀಯ ವೃತ್ತಿ ತೊರೆದೆ. ಆ ಬೇಸರ ಹೋಗಲಾಡಿಸಿ ಹೆಸರು ತಂದುಕೊಟ್ಟದ್ದು ಮತ್ತದೇ ನನ್ನಿಷ್ಟದ ಸಂಗಾತಿ ಪಿಟೀಲು.

ಸಂಗೀತದಲ್ಲಿ ನಾನು ಏನಾದರೂ ಒಂಚೂರು ಸಾಧನೆ ಮಾಡಿದ್ದೇನೆ ಎಂದರೆ ಅದಕ್ಕೆ ತಾಯಿ ರತ್ನಾ ಶ್ರೀಕಂಠಯ್ಯ ಅವರೇ ಕಾರಣ. ಕಷ್ಟದಲ್ಲಿದ್ದರೂ ಪಿಟೀಲು ನುಡಿಸುವುದನ್ನು ನನಗೆ ಕಲಿಸುವ ದೃಢ ನಿರ್ಧಾರದಿಂದ ನನ್ನಮ್ಮ ಹಿಂದೆ ಸರಿಯಲಿಲ್ಲ. ಅವರೇ ನನ್ನ ಮೊದಲು ಗುರು.

ಸಂಗೀತ ದಿಗ್ಗಜ ಬಾಲಮುರುಳಿ ಕೃಷ್ಣ ಅವರ ಜತೆ ವೇದಿಕೆ ಹಂಚಿಕೊಂಡು ಪಿಟೀಲು ನುಡಿಸಿದ್ದೆ. ಆಗ ನನಗೆ 14 ವರ್ಷ. ಅವರ ಸ್ಪೂರ್ತಿಯಿಂದ ಸಂಗೀತದ ಮೇಲಿನ ಒಲವು ಹೆಚ್ಚಿತು. ಪಿಯುಸಿಯಲ್ಲಿ ನನಗೆ ರಾಜ್ಯಕ್ಕೆ 7ನೇ ರ‍್ಯಾಂಕ್ ಬಂದಿತ್ತು. ಬಳಿಕ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಸಹ ಸಿಕ್ಕಿತು. ಅಲ್ಲಿಯೇ ಎಂ.ಡಿ. ಪೆಥಲಾಜಿ ಪೂರ್ಣಗೊಳಿಸಿದೆ. ಶ್ರೀಕಾಂತ್ ಶರ್ಮಾ ಅವರನ್ನು ವಿವಾಹವಾದೆ. 2004ರಲ್ಲಿ ಪತಿಗೆ ಲಂಡನ್‌ನಲ್ಲಿ ಕೆಲಸ ಒದಗಿ ಬಂದಿದ್ದರಿಂದ ಅನಿವಾರ್ಯವಾಗಿ ತಾಯ್ನಾಡು ತೊರೆದು ಅಲ್ಲಿಗೆ ಹೋಗಬೇಕಾಯಿತು.

ಪಿಟೀಲಿಗೂ ನನಗೂ ಬಿಟ್ಟೂ ಬಿಡದ ನಂಟು. ವಿದೇಶದಲ್ಲಿದ್ದರೂ ಸಂಗೀತ ನನ್ನ ಮನಸ್ಸನ್ನು ಸೆಳೆಯುತ್ತಲೇ ಇತ್ತು. ವೈದ್ಯಕೀಯ ವೃತ್ತಿ, ಸಂಸಾರ ಹಾಗೂ ಸಂಗೀತ ಮೂರನ್ನು ನಿಭಾಯಿಸುವುದು ಕಷ್ಟವಾಗಿತ್ತು. ಯಾವುದೇ ಕೆಲಸವನ್ನಾದರೂ ಪರಿಪೂರ್ಣವಾಗಿ ಮಾಡಬೇಕು, ಇಲ್ಲವಾದರೆ ಆ ಕೆಲಸಕ್ಕೆ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂಬುದು ಮನದಟ್ಟಾಗಿ 2009ರಲ್ಲಿ ವೈದ್ಯ ವೃತ್ತಿ ತೊರೆದು ಸಂಗೀತದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡೆ.

ಸಂಗೀತದ ಮೇಲಿನ ವ್ಯಾಮೋಹದಿಂದ ಧ್ರುವ್ ಆರ್ಟ್ಸ್‌ ಸಂಗೀತ ಫೌಂಡೇಷನ್ ಅನ್ನು ಸ್ಥಾಪಿಸಿದೆ. ಫೌಂಡೇಷನ್ ಶುರುವಾದ ಬಳಿಕ ನನ್ನ ಸಂಗೀತದ ಹಾದಿಯೇ ಬದಲಾಯಿತು. ಸಮಾನ ಮನಸ್ಕರ ತಂಡ ಕಟ್ಟಿಕೊಂಡು ಸಾಕಷ್ಟು ಕಡೆ ಪ್ರದರ್ಶನ ನೀಡಿದೆ. 2012ರಲ್ಲಿ ಲಂಡನ್ ಇಂಟರ್‌ನ್ಯಾಷನಲ್ ಆರ್ಟ್‌ ಫೆಸ್ಟಿವಲ್ ಆಯೋಜಿಸಿದೆ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ವೇದಿಕೆ ಮಾಡಿಕೊಟ್ಟಿದ್ದು ಆ ಫೆಸ್ಟಿವಲ್.

ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಿಯವಾದದ್ದು. ಅಲ್ಲಿನ ಜನರಿಗೆ ಈ ಸಂಗೀತದ ಬಗ್ಗೆ ಅಷ್ಟೇನೂ ಗೊತ್ತಿಲ್ಲ. ಒಂದು ವೇಳೆ ಕೇವಲ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಲ್ಲಿ ಪ್ರದರ್ಶಿಸಿದ್ದರೆ ಅವರ ಮನಸ್ಸು ಗೆಲ್ಲಲು ಕಷ್ಟವಾಗುತ್ತಿತ್ತು. ಇದೇ ಕಾರಣಕ್ಕೆ ನಮ್ಮ ಸಂಗೀತ ಪ್ರಕಾರವನ್ನು ಅಂತರರಾಷ್ಟ್ರೀಯ ಸಂಗೀತದ ಜತೆಗೆ ಸಮ್ಮಿಲನಗೊಳಿಸಿ ಪ್ರದರ್ಶನ ನೀಡುವುದನ್ನು ರೂಢಿಸಿಕೊಂಡೆ. ಅದು ಕ್ಲಿಕ್‌ ಆಯಿತು.

ಆಯ್ಕೆಯಾಗಿದ್ದು ಹೀಗೆ: ಭಾರತದ 70ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಲಂಡನ್‌ನಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಸಂಬಂಧ ಲಂಡನ್‌ನ ರಾಣಿ ಎರಡನೇ ಎಲಿಜಬೆತ್ ಅವರ ಭೇಟಿಗಾಗಿ ಆಹ್ವಾನ ಬಂತು. ಅದರಂತೆ ಅವರನ್ನು ಭೇಟಿ ಮಾಡಿ ಸಂಗೀತ ಕಾರ್ಯಕ್ರಮ ನೀಡಿದ್ದೆ.

53 ಕಾಮನ್‌ವೆಲ್ತ್ ರಾಷ್ಟ್ರಗಳ ಪ್ರತಿನಿಧಿಗಳ ಸಭೆಯ ಉದ್ಘಾಟನಾ ಸಮಾರಂಭವನ್ನು ರಾಣಿ ಎಲಿಜಬೆತ್ ಅವರ ನೇತೃತ್ವದಲ್ಲಿ ಬಕ್ಕಿಂಗ್ ಹ್ಯಾಮ್ ಅರಮನೆಯಲ್ಲಿ ಏಪ್ರಿಲ್ 19ರಂದು ಆಯೋಜಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಸಹ ಭಾಗಿಯಾಗಿದ್ದರು. ಗಣ್ಯರನ್ನು ಸಂಗೀತದ ಮೂಲಕ ಸ್ವಾಗತಿಸುವುದು ನಡೆದುಕೊಂಡ ಬಂದ ಪದ್ಧತಿ. ಅದಕ್ಕಾಗಿ, ಏಳು ಖಂಡಗಳ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಏಳು ಕಲಾವಿದರನ್ನು ಆಯ್ಕೆ ಮಾಡುತ್ತಾರೆ. ಹಿಂದೆ ಎಲಿಜಬೆತ್ ಅವರ ಮುಂದೆ ಪ್ರದರ್ಶನ ನೀಡಿದ್ದರಿಂದಲೇನೋ ಅಥವಾ ಅಲ್ಲಿ ಸಾಕಷ್ಟು ಕಡೆ ಪ್ರದರ್ಶನ ನೀಡಿದ್ದರಿಂದಲೇನೋ ನನ್ನ ಹೆಸರು ಆಯ್ಕೆಯಾಗಿತ್ತು.

ಅಲ್ಲಿನವರು ಪ್ರತಿಯೊಂದು ವಿಚಾರದಲ್ಲಿ ಪರಿಣತಿ ಬಯಸುತ್ತಾರೆ. ಆ ಕಾರ್ಯಕ್ರಮವು ಇಂತಹದ್ದೆ ರೀತಿಯಲ್ಲಿ ನಡೆಯಬೇಕು ಎಂಬುದು ಮುಂಚೆಯೇ ನಿಗದಿಯಾಗಿತ್ತು. ಪ್ರದರ್ಶನ ನೀಡುವುದಕ್ಕೂ ಮುಂಚಿತವಾಗಿ ಮೂರು ದಿನ ಸತತವಾಗಿ ಅಭ್ಯಾಸ ಮಾಡಿದ್ದೆವು. ಕ್ಯಾಮೆರಾ ರಿಹರ್ಸಲ್, ಲೈವ್ ರಿಲೆ ಸಹ ನಡೆದಿತ್ತು. ಯಾವುದೇ ತೊಡಕಿಲ್ಲದೆ, ಅಂಜಿಕೆಯಿಲ್ಲದೆ ಪ್ರದರ್ಶನ ನೀಡಿದೆವು. ವಿಶ್ವವಿಖ್ಯಾತ ಅರಮನೆಯಲ್ಲಿ ಪ್ರದರ್ಶನ ನೀಡಿದ್ದು ಅವಿಸ್ಮರಣೀಯ ಕ್ಷಣ. ನನ್ನೊಂದಿಗೆ ಇನ್ನೂ ಆರು ಮಂದಿ ಕಲಾವಿದರು ತಮ್ಮದೇ ಶೈಲಿಯಲ್ಲಿ ಇಂಗ್ಲೀಷ್‌ ಫೋಕ್‌ ಪ್ರದರ್ಶನ ನೀಡಿದ್ದರು. ಎಲ್ಲರ ಮೆಚ್ಚುಗೆ ಪಡೆದೆವು.

ನಮ್ಮ ವಾಸ್ತವ್ಯಕ್ಕೆ ಪ್ರತಿಷ್ಠಿತ ಹೋಟೆಲ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅರಮನೆಯಲ್ಲೂ ನಮಗೆ ರಾಜಾತಿಥ್ಯ ಸಿಕ್ಕಿತು. ಅರಮನೆಯ ಕೆಲ ಭಾಗವಷ್ಟೇ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿರುತ್ತದೆ. ಪ್ರವಾಸಿಗರು ನೋಡಲು ಸಾಧ್ಯವಾಗದ ಅರಮನೆಯ ಉಳಿದ ಭಾಗಗಳನ್ನು ನೋಡುವ ಅವಕಾಶವೂ ನಮಗೆ ಸಿಕ್ಕಿತು.

ವೆಂಬ್ಲಿ ಸ್ಟೇಡಿಯಂನಲ್ಲಿ ಪ್ರಧಾನಿ ಭೇಟಿ: ಮೂರು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ವೆಂಬ್ಲಿ ಸ್ಟೇಡಿಯಂಗೆ ಬಂದಿದ್ದರು. ಅಲ್ಲಿ  ನಾನು ಸಂಗೀತ ಪ್ರದರ್ಶನ ನೀಡಿದ್ದೆ. ನನ್ನನ್ನು ಗುರುತಿಸಿದ ಮೋದಿ,  ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಕ್ಕಿಂಗ್ ಹ್ಯಾಮ್ ಅರಮನೆಯಲ್ಲೂ ಅವರು ನನ್ನತ್ತ ಕೈ ತೋರಿದರು.

ಕನ್ನಡವೇ ನನ್ನ ಮೊದಲ ಆದ್ಯತೆ

ನನ್ನ ಹುಟ್ಟೂರು ಬೆಂಗಳೂರು. ಮಾತೃಭಾಷೆ ತೆಲುಗು ಆಗಿದ್ದರೂ ಕನ್ನಡವೇ ನನ್ನ ಮೊದಲ ಆದ್ಯತೆ. ನಾನು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಕನ್ನಡಕ್ಕೆ ಆದ್ಯತೆ ನೀಡುವೆ. ಲಂಡನ್‌ನಲ್ಲಿದ್ದಾಗ ಕೆಲವರಿಗೆ ಕನ್ನಡ ಕಲಿಸಿದ್ದೇನೆ. ನಾನು ಎಲ್ಲಿದ್ದರೂ ಭಾರತೀಯ ಸಂಸ್ಕೃತಿ ಮರೆಯಲ್ಲ. ಇಲ್ಲಿನ ಸಂಸ್ಕೃತಿ ನನ್ನತನ. ಅದನ್ನು ಬಿಟ್ಟುಕೊಡಲು ನನಗೆ ಇಷ್ಟವಿಲ್ಲ.

ಮಕ್ಕಳು ತಾಯ್ನಾಡಿನ ಭಾಷೆಯ ವಾತಾವರಣದಲ್ಲೇ ಬೆಳೆಯಲಿ ಎಂಬ ಕಾರಣಕ್ಕೆ ಮತ್ತೆ ವಾಪಸ್ ಬಂದೆ. ಆದರೆ, ನನಗೂ ಯೂರೋಪ್‌ಗೂ ಇರುವ ನಂಟು ಅಷ್ಟು ಸುಲಭವಾಗಿ ಕಡಿದುಕೊಳ್ಳುವಂತಹದ್ದಲ್ಲ. ಹೀಗಾಗಿಯೇ, ತಿಂಗಳಲ್ಲಿ 5 ದಿನ ನಾನು ಅಲ್ಲಿರುತ್ತೇನೆ. ಧ್ರುವ್ ಆರ್ಟ್ಸ್‌ ಮೂಲಕ ಪ್ರದರ್ಶನ ನೀಡುವುದನ್ನು ಇನ್ನೂ ಮುಂದುವರೆಸಿಕೊಂಡು ಬಂದಿದ್ದೇನೆ. ನಾರ್ವೆ ಫೆಸ್ಟಿವಲ್‌ನಲ್ಲಿ ಪ್ರದರ್ಶನ ನೀಡಲಿದ್ದೇನೆ ಎನ್ನುತ್ತಾರೆ ಅವರು.

ಈ ಬಾರಿಯ ಲಂಡನ್‌ ಇಂಟರ್‌ನ್ಯಾಷನಲ್ ಆರ್ಟ್ಸ್‌ ಫೆಸ್ಟಿವಲ್ ವೇಳೆ ರಾಜ್ಯದ ಸಂಸ್ಕೃತಿ ಹಾಗೂ ಪ್ರವಾಸೋದ್ಯಮದ ಕುರಿತು ವಿಶೇಷ ಪ್ರದರ್ಶನ ನೀಡಬೇಕು ಎಂಬ ತುಡಿತವಿದೆ. ಆ ಬಗ್ಗೆ ಚಿಂತನೆ ನಡೆಸಿದ್ದೇನೆ. ಅಲ್ಲಿನ ಸರ್ಕಾರ ಕಲೆಗೆ ಹೆಚ್ಚು ಪ್ರಾತಿನಿಧ್ಯ ನೀಡುತ್ತದೆ. ಕಲಾವಿದರನ್ನು ಗೌರವಯುತವಾಗಿ ನಡೆಸಿಕೊಂಡು ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ನೇರವಾಗಿ ತಲುಪಿಸುತ್ತದೆ. ಆ ಪದ್ಧತಿ ನಮ್ಮ ದೇಶದಲ್ಲಿ ಕಾಣಸಿಗುತ್ತಿಲ್ಲ. ಇಲ್ಲಿ ಸಿಗುವ ಸ್ಪಂದನೆ ಆಧರಿಸಿ ಮುಂದುವರೆಯುವೆ.

ದಿ ವೆಡ್ಡಿಂಗ್ ಗೆಸ್ಟ್‌ ಸಿನಿಮಾಗೂ ಸಂಗೀತ

‘ದಿ ವೆಡ್ಡಿಂಗ್ ಗೆಸ್ಟ್‌’ ಎಂಬ ಹಾಲಿವುಡ್ ಸಿನಿಮಾದ ಚಿತ್ರೀಕರಣ ಈಗಾಗಲೇ ಶುರುವಾಗಿದ್ದು, ಆ ಸಿನಿಮಾದಲ್ಲೂ ಜ್ಯೋತ್ಸ್ನಾ ಶ್ರೀಕಾಂತ್ ಪಿಟೀಲು ನುಡಿಸಿದ್ದಾರೆ. 300ಕ್ಕೂ ಅಧಿಕ ದೇಶಿಯ ಹಾಗೂ ಅಂತರರಾಷ್ಟ್ರೀಯ ಸಿನಿಮಾಗಳಲ್ಲಿ ಪ್ರದರ್ಶನ ನೀಡಿರುವ ಅವರು ಸದ್ಯ ನಗರದಲ್ಲಿ ಹಲವು ಪ್ರದರ್ಶನ ನೀಡಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಫ್ಯೂಷನ್ ಶೋಗಳನ್ನು ಹೆಚ್ಚಾಗಿ ನಡೆಸಿಕೊಡುತ್ತಾರೆ. ಧ್ರುವ್ ಆರ್ಟ್ಸ್‌ ಫೌಂಡೇಷನ್‌ ಶಾಖೆಯನ್ನು ರಾಜ್ಯದಲ್ಲಿ ತೆರೆದು ಮಕ್ಕಳು ಹಾಗೂ ಯುವ ಸಮೂಹದಲ್ಲಿ ಸಂಗೀತ ಆಸಕ್ತಿ ಹೆಚ್ಚಿಸಬೇಕು ಎಂಬ ಮಹದಾಸೆ ಹೊಂದಿದ್ದಾರೆ.

Courtesy : Prajavani.net

http://www.prajavani.net/news/article/2018/05/10/571960.html

Leave a Reply