ಸಾಹಿತ್ಯ ಶಿಲ್ಪಿ ಚಿ. ಉದಯಶಂಕರ್

ಸಾಹಿತ್ಯ ಶಿಲ್ಪಿ ಚಿ. ಉದಯಶಂಕರ್

ಲೇಖಕ : ಡಿ.ಎಸ್‌. ಶ್ರೀನಿವಾಸ್‌ ಪ್ರಸಾದ್‌
ಪ್ರಕಾಶಕರು : ಟೋಟಲ್ ಕನ್ನಡ, ಬೆಂಗಳೂರು
ಪ್ರಕಟವಾದ ವರ್ಷ : 2018
ಪುಟ : 255 ಪುಟಗಳು
ರೂ : ರೂ 250

‘ಸಿನಿಮಾ ಸಂಭಾಷಣೆ ಸರಳವಾಗಿರಬೇಕು. ಜನರಿಗೆ ಸುಲಭಕ್ಕೆ ಅರ್ಥವಾಗುವ ಹಾಗೆ ಇರಬೇಕು. ಆಗ ಮಾತ್ರ ಸಿನಿಮಾ ಹೆಚ್ಚು ಜನರಿಗೆ ತಲುಪಲು ಸಾಧ್ಯ ಎಂದು ಹುಣಸೂರು ಕೃಷ್ಣಮೂರ್ತಿಗಳು ಯಾವಾಗಲೂ ಹೇಳುತ್ತಿದ್ದರು. ಅವರೇ ಸ್ವತಃ ಆ ಮಾತಿಗೆ ನಿದರ್ಶನವಾಗಿದ್ದರು. ಅವರ ನಂತರ ಸರಳತೆಯ ಈ ಗುಣವನ್ನು ತಕ್ಕಮಟ್ಟಿಗೆ ಅಳವಡಿಸಿಕೊಂಡವರು ಚಿ. ಉದಯಶಂಕರ್ ಅವರು’ – ಹಿರಿಯ ನಿರ್ದೇಶಕ ಭಾರ್ಗವ ಅವರ ಮಾತಿದು.

ಈ ಮಾತು ಉದಯಶಂಕರ್ ಅವರ ಸಾಹಿತ್ಯದ ಮಹತ್ವವನ್ನು ಹೇಳುವುದಷ್ಟೇ ಅಲ್ಲ, ಕನ್ನಡ ಸಿನಿಮಾ ಪರಂಪರೆಯನ್ನು ಬೆಳೆಸಿದ, ಪ್ರತಿನಿಧಿಸಿದ ಗಟ್ಟಿ ಕೊಂಡಿಯಾಗಿಯೂ ಅವರನ್ನು ಗುರ್ತಿಸುವಂತಿದೆ.

‘ಸಂತ ತುಕಾರಾಮ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟ ಚಿ.ಉದಯಶಂಕರ್ ಮೂರು ದಶಕಗಳ ಕಾಲ ಗಟ್ಟಿಯಾಗಿ ನೆಲೆನಿಂತವರು. ಚಿತ್ರರಂಗದ ಭದ್ರಕೋಟೆಗೆ ತಾವೇ ಗಟ್ಟಿ ಇಟ್ಟಿಗೆಯಾದವರು. ಆಡುಮಾತುಗಳನ್ನೇ ಹಾಡಾಗಿಸಿ ಗೆದ್ದವರು. ಕನ್ನಡ ಚಿತ್ರರಂಗಕ್ಕೆ ನಾಲ್ಕು ಸಾವಿರಕ್ಕೂ ಅಧಿಕ ಹಾಡುಗಳ ಕೊಡುಗೆ ಕೊಟ್ಟವರು.

ಗೀತರಚನೆಕಾರರಾಗಿಯಷ್ಟೇ ಅಲ್ಲ, ಸಂಭಾಷಣೆಕಾರರಾಗಿಯೂ ಗಣನೀಯ ಕೊಡುಗೆ ನೀಡಿದ್ದಾರೆ. ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ, ನಿರ್ದೇಶನವನ್ನೂ ಮಾಡಿದ್ದಾರೆ. ಇದರ ಜತೆಗೆ ‘ರಾಜ್‌ಕುಮಾರ್’ ಎಂಬ ಕನ್ನಡದ ಭಾವಶಿಲ್ಪವನ್ನು ಕಟ್ಟುವಲ್ಲಿಯೂ ಉದಯಶಂಕರ್ ಕೊಡುಗೆ ದೊಡ್ಡದು. ರಾಜ್‌ಕುಮಾರ್ ನಟಿಸಿದ 80ಕ್ಕೂ ಅಧಿಕ ಸಿನಿಮಾಗಳಿಗೆ ಇವರು ಮಾತು ಪೋಣಿಸಿದ್ದಾರೆ. ಒಟ್ಟಾರೆ ಮುನ್ನೂರಕ್ಕೂ ಅಧಿಕ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ರಾಜ್‌ ಅವರ ಆಪ್ತವಲಯದಲ್ಲಿ ಗುರ್ತಿಸಿಕೊಂಡಿದ್ದ ಉದಯಶಂಕರ್, ಸಿನಿಮಾಗಳ ಆಯ್ಕೆ, ತಿದ್ದುಪಡಿಯ ಕೆಲಸಗಳಲ್ಲಿಯೂ ಕೈಜೋಡಿಸುತ್ತಿದ್ದರು.

ಕೈಯಲ್ಲಿ ಲೇಖನಿ ಹಿಡಿದು ಧ್ಯಾನಸ್ಥರಾದರು ಎಂದರೆ ಎಲ್ಲಿಂದಲೋ ಸರಳಮೋಹಕ ಸಾಲುಗಳು ಹಾಳೆಗಿಳಿಯುತ್ತಿದ್ದವು. ಸರಳತೆಯೇ ಅವರ ಶಕ್ತಿಯಾಗಿತ್ತು. ಅವರ ಜತೆ ಒಡನಾಟದಲ್ಲಿದ್ದವರೆಲ್ಲ ಹೇಳುವ ಮಾತುಗಳನ್ನು ಗಮನಿಸಿದರೆ ಗೀತರಚನೆ ಎನ್ನುವುದು ಅವರಿಗೆಂದೂ ಪ್ರಯಾಸಕರ ಕೆಲಸ ಆಗಿರಲೇ ಇಲ್ಲ, ಸರಳವಾದಷ್ಟೇ ಸರಾಗವೂ ಆಗಿತ್ತು ಎಂಬುದು ತಿಳಿಯುತ್ತದೆ.

‘ಯಾವ ಕವಿಯು ಬರೆಯಲಾರ/ ಒಲವಿನಿಂದ, ಕಣ್ಣೋಟದಿಂದ/ ಹೃದಯದಲ್ಲಿ ನೀ ಬರೆದ/ ಈ ಪ್ರೇಮಗೀತೆಯ’ – ‘ಭಾಗ್ಯದ ಲಕ್ಷ್ಮೀ ಬಾರಮ್ಮಾ’ ಚಿತ್ರಕ್ಕಾಗಿ ಚಿ. ಉದಯಶಂಕರ್ ಬರೆದ ಈ ಸಾಲುಗಳೇ ಅವರ ಪ್ರತಿಭೆಗೆ ಸಾಕ್ಷಿ. ಇಂಥ ಹಲವು ಗೀತೆಗಳು ಅವರ ಲೇಖನಿಯಿಂದ ಬಂದಿವೆ. ಕನ್ನಡ ಚಿತ್ರಸಾಹಿತ್ಯವನ್ನು ಜನರ ಮನಸಲ್ಲಿ ಚಿರಸ್ಥಾಯಿಯಾಗಿಸಿವೆ. 

ಇಂಥ ಉದಯಶಂಕರ್ ಅವರು ಕನ್ನಡ ಚಿತ್ರರಂಗಕ್ಕೆ ಕೊಟ್ಟಿರುವ ಕೊಡುಗೆ, ಜನಪ್ರಿಯ ಚಿತ್ರಸಾಹಿತ್ಯದ ಮೂಲಕ ಅವರು ಪ್ರತಿಪಾದಿಸಿರುವ ಜೀವನಮೌಲ್ಯಗಳು, ಅವರ ಜೀವನ, ಇವೆಲ್ಲವೂ ಅಧ್ಯಯನಯೋಗ್ಯ ವಿಷಯಗಳು. ಇಂಥವರ ಕುರಿತಾದ ಅಧ್ಯಯನ ಪರೋಕ್ಷವಾಗಿ ಕನ್ನಡ ಚಿತ್ರರಂಗದ ಇತಿಹಾಸದ ಅಧ್ಯಯನವೂ ಆಗಿರುತ್ತದೆ. ಈ ಎಚ್ಚರ ಮತ್ತು ಜವಾಬ್ದಾರಿ ಅಧ್ಯಯನಕಾರರಿಗೂ ಇರಲೇಬೇಕು.

ಸಂಶೋಧನೆಯ ಶಿಸ್ತು, ತಾವು ಆಯ್ದುಕೊಂಡಿರುವ ವಿಷಯದ ಬಗ್ಗೆ ಪ್ರೀತಿ ಮತ್ತು ಆಳವಾದ ಅಧ್ಯಯನ ಇಲ್ಲದೇ ಹೋದರೆ, ಭಾಷೆಯ ಬಗ್ಗೆ ಕನಿಷ್ಠ ಗೌರವೂ ಇಲ್ಲದಿದ್ದರೆ ಅದರ ಪರಿಣಾಮ ಕೆಟ್ಟದಾಗಿರುತ್ತದೆ. ವಿಪರ್ಯಾಸವೆಂದರೆ ಇಂದು ವಿಶ್ವವಿದ್ಯಾಲಯಗಳಲ್ಲಿ ಆಗುತ್ತಿರುವ ಬಹುತೇಕ ಸಂಶೋಧನೆಗಳೆಲ್ಲವೂ ಹೀಗೆಯೇ ಇರುತ್ತವೆ. ಕನ್ನಡ ಚಿತ್ರರಂಗ, ಅದಕ್ಕೆ ಕೊಡುಗೆ ನೀಡಿದ ಮಹನೀಯರ ಕುರಿತಾಗಿ ನಡೆದಿರುವ ಸಂಶೋಧನೆಗಳು, ಬಂದಿರುವ ಕೃತಿಗಳು ಕಡಿಮೆಯೇ. ಅವುಗಳಲ್ಲಿಯೂ ‘ನಂಬಲರ್ಹ’ವಾಗಿದ್ದು ಬೆರಳೆಣಿಕೆಯಷ್ಟು. ಹಾಗಾದರೆ ಉಳಿದವುಗಳ ಪಾಡೇನು? ಅದನ್ನು ತಿಳಿಯಬೇಕಾದರೆ ಡಿ.ಎಸ್. ಶ್ರೀನಿವಾಸ್ ಪ್ರಸಾದ್‌ ಅವರು ಬರೆದಿರುವ ‘ಸಾಹಿತ್ಯ ಶಿಲ್ಪಿ ಚಿ. ಉದಯಶಂಕರ್’ ಎಂಬ ಕೃತಿಯನ್ನೊಮ್ಮೆ ತಿರುವಿ ಹಾಕಬೇಕು!

ಇದು ಡಿ.ಎಸ್. ಶ್ರೀನಿವಾಸ್ ಪ್ರಸಾದ್ ಅವರ ಎಂ.ಫಿಲ್ ಪ್ರಬಂಧ. ಇದಕ್ಕೆ ಪದ್ಮಶ್ರೀ ಪುರಸ್ಕೃತ ಡಾ. ದೊಡ್ಡರಂಗೇಗೌಡರ ಮಾರ್ಗದರ್ಶದ ಅಭಯಹಸ್ತವೂ ಇದೆ. ಹಾಗಾಗಿ ಈ ‘ಕೃತಿಸಾಧನೆ’ಯ ಶ್ರೇಯಸ್ಸಿನಲ್ಲಿ ಅವರಿಗೂ ಪಾಲು ನೀಡಲೇಬೇಕು.

ಸಾಮಾನ್ಯವಾಗಿ ವಿಶ್ವವಿದ್ಯಾಲಯಗಳಲ್ಲಿ ರಚಿತವಾಗುವ ಬಹುತೇಕ ಎಂ.ಫಿಲ್ ಪ್ರಬಂಧಗಳು ಸಂಗ್ರಹಾಲಯದಲ್ಲಿಯೇ ದೂಳು ತಿನ್ನುತ್ತಾ ಬಿದ್ದಿರುತ್ತವೆ. ಅವು ಯಾಕೆ ಪ್ರಬಂಧಗಳು ಯಾಕೆ ಪುಸ್ತಕರೂಪದಲ್ಲಿ ಪ್ರಕಟವಾಗಬಾರದು ಎನ್ನುವುದಕ್ಕೆ ಈ ಪುಸ್ತಕ ಒಳ್ಳೆಯ ನಿದರ್ಶನ. 

Courtesy : Prajavani.net

http://www.prajavani.net/news/books/2018/05/12/572525.html

Leave a Reply