“ಸ್ಮರಣೆಯಷ್ಟೇ ಸಂಪಾದನೆಯೇ?”,

ಕನ್ನಡ ಸಾರಸ್ವತಲೋಕದಲ್ಲಿ ಕವಿ, ಕಥೆಗಾರನಾಗಿ ಗುರ್ತಿಸಿಕೊಂಡು ನಂತರ ಉಪನ್ಯಾಸಕ, ಸಂಪಾದಕನಾಗಿಯೂ ಕಾರ್ಯನಿರ್ವಹಿಸಿ, ವಿಮರ್ಶಕನಾಗಿ ಹೆಜ್ಜೆಗುರುತು ಮೂಡಿಸಿದವರು ಗಿರಡ್ಡಿ ಗೋವಿಂದರಾಜ. ಈ ನಡುವೆ ಅವರು ನಿರ್ವಹಿಸಿದ ಪಾತ್ರಗಳು ಹಲವು. ಗಿರಡ್ಡಿ ತೀರಿಹೋಗಿ 2019ರ ಮೇ 11ಕ್ಕೆ ಒಂದು ವರ್ಷ. ಇದೇ ಸಂದರ್ಭದ ನೆಪದಲ್ಲಿ, ಟಿ.ಎಸ್‌. ದಕ್ಷಿಣಾಮೂರ್ತಿ ಮತ್ತು ಮಹೇಶ ತಿಪ್ಪಶೆಟ್ಟಿ ‘ಡಾ. ಗಿರಡ್ಡಿ ಗೋವಿಂದರಾಜ, ವ್ಯಕ್ತಿ–ವಾಙ್ಮಯ’ ಹೆಸರಿನಲ್ಲಿ ನೆನಪಿನ ಗ್ರಂಥವನ್ನು ತಂದಿದ್ದಾರೆ. ಗಿರಡ್ಡಿಯವರ ಬದುಕು, ವಾಙ್ಮಯ, ಸಂದರ್ಶನಗಳು, ಶ್ರದ್ಧಾಂಜಲಿ, ಚಿತ್ರಸಂಪುಟ, ಹೀಗೆ ಐದು ಭಾಗಗಳಲ್ಲಿ ಈ ಪುಸ್ತಕವನ್ನು ವಿಭಾಗಿಸಿಕೊಳ್ಳಲಾಗಿದೆ. ಈ ಪುಸ್ತಕ ಆರಂಭವಾಗುವುದೇ ವಿಜಯಲಕ್ಷ್ಮಿ ಬ. ಸಾಸನೂರ ಎಂಬುವರು ಗಿರಡ್ಡಿಯವರ ಕುರಿತು ಬರೆದ ಪದ್ಯದ ಮೂಲಕ. ‘ಗದಗ ಜಿಲ್ಲೆಯ ರೋಣ ತಾಲ್ಲೂಕಿನ/ಅಬ್ಬಿಗೇರಿಯ ಅಂದಾನಪ್ಪ ಸಂಗವ್ವರ ಪುತ್ರರತ್ನ/ ಡಾ. ಶ್ರೀ ಗಿರಡ್ಡಿ ಗೋವಿಂದರಾಜ/ ಸಾಹಿತ್ಯ ಕೃಷಿಯೇ ಉಸಿರೆಂದ, ದಿವ್ಯ ತೇಜ’ ಎಂದು ಮುಂದುವರಿಯುವ ಸಾಲುಗಳು ಗಿರಡ್ಡಿಯವರ ಸಂಕ್ಷಿಪ್ತ ಬಯೋಡೆಟಾದಂತೆ ಭಾಸವಾಗುತ್ತವೆ. ಅದರ ನಂತರ ಎಚ್‌. ಎಸ್‌. ವೆಂಕಟೇಶಮೂರ್ತಿ ಅವರು ಬರೆದಿರುವ ಸುನೀತ, (ಇದನ್ನು ಈ ಪುಸ್ತಕದಲ್ಲಿ ‘ಸುನೀತಾ ಭಾವ’ ಎಂದು ಬರೆಯಲಾಗಿದೆ!) ಗಿರಡ್ಡಿಯವರ ವ್ಯಕ್ತಿತ್ವದ ರೂಪ ರೇಖೆಗಳನ್ನು ಅತ್ಯಾಪ್ತವಾಗಿ ಮನಸಲ್ಲಿ ಚಿತ್ರಿಸುತ್ತದೆ. ಆರಂಭದಲ್ಲಿಯೇ ಇರುವ ಈ ಎರಡೂ ಗುಣವೈರುಧ್ಯದ ಪದ್ಯಗಳನ್ನು ಪುಸ್ತಕದೊಳಗಿನ ಹೂರಣದ ವ್ಯರ್ಥ–ಸಾರ್ಥಕಗಳ ಮಿಶ್ರಣದ ಸಂಕೇತವಾಗಿಯೂ ಗ್ರಹಿಸಬಹುದು. ಯಾವುದೇ ವ್ಯಕ್ತಿಯ ಕುರಿತು ಒಳ್ಳೆಯ ಸ್ಮರಣ ಗ್ರಂಥ ಆ ವ್ಯಕ್ತಿಯ ಕುರಿತು ಒಂದಿಷ್ಟಾದರೂ ಹೊಸ ಹೊಳಹುಗಳನ್ನು ಹುಟ್ಟಿಸುವ ಹಾಗಿರಬೇಕು. ಆದರೆ ಹೊಸತೇನಾದರೂ ತಿಳಿದುಕೊಳ್ಳುವ ಆಸಕ್ತಿಯಿಂದ ಈ ಸ್ಮರಣಗ್ರಂಥವನ್ನು ತಿರುವಲು ಹೊರಟರೆ ನಮಗೆ ಸಿಗುವುದು ನಿರಾಶೆಯ ಅಕ್ಷರಮೂಟೆಗಳಷ್ಟೆ. ಹಾಗೆಂದು ಈ ಪುಸ್ತಕದಲ್ಲಿ ಗಿರಡ್ಡಿಯವರ ಕುರಿತು ಒಳ್ಳೆಯ ಬರಹಗಳು, ಅವರ ಸಾಹಿತ್ಯದ ಕುರಿತು ಹೊಳಹುಗಳು ಇಲ್ಲ ಎಂದಲ್ಲ. ಆದರೆ ಇಲ್ಲಿನ ಬಹುತೇಕ ಎಲ್ಲ ಲೇಖನಗಳು ಬೇರೆ ಬೇರೆ ಪತ್ರಿಕೆಗಳಲ್ಲಿ, ಗಿರಡ್ಡಿ ಅಭಿನಂದನ ಗ್ರಂಥದಲ್ಲಿ ಪ್ರಕಟವಾದವುಗಳೇ ಆಗಿವೆ(ಸಿಎನ್‌ಆರ್‌ ಮತ್ತು ದಕ್ಷಿಣಾಮೂರ್ತಿ ಅವರ ಲೇಖನ ಹೊರತುಪಡಿಸಿ). ಅಂಥ ಲೇಖನಗಳನ್ನು ಆಯ್ದುಕೊಳ್ಳುವಾಗಲೂ ಸಂಪಾದಕರು ಒಂದು ವಸ್ತುನಿಷ್ಠ ಮಾನದಂಡ ಇಟ್ಟುಕೊಂಡಂತೆ ಕಾಣುವುದಿಲ್ಲ. ತಮಗೆ ಸಿಕ್ಕ ಎಲ್ಲ ಬರಹಗಳನ್ನು ಬೇರೆ ಬೇರೆ ಭಾಗಗಳಲ್ಲಿ ವಿಂಗಡಿಸಿ ಹೆಸರು ಕೊಡುವುದನ್ನೇ ಅವರು ಸಂಪಾದನೆ ಎಂದು ಭಾವಿಸಿದಂತಿದೆ! ಈ ಪುಸ್ತಕದ ಮೊದಲ ಭಾಗ ‘ಬದುಕು’. ಇದರಲ್ಲಿ ಗಿರಡ್ಡಿಯವರ ಒಡನಾಟದ ನೆನಪುಗಳನ್ನು ಹಲವು ಹೆಸರಾಂತ ಸಾಹಿತಿಗಳು ಹಂಚಿಕೊಂಡಿದ್ದಾರೆ. ಇವೆಲ್ಲವೂ ಗಿರಡ್ಡಿ ಸಾವಿನ ನೆಪದಲ್ಲಿ ಬೇರೆ ಬೇರೆ ಪತ್ರಿಕೆಗಳಲ್ಲಿ ಈಗಾಗಲೇ ಪ್ರಕಟವಾಗಿರುವ ಬರಹಗಳಾಗಿದ್ದರಿಂದ ಬಹುತೇಕ ಲೇಖನಗಳಲ್ಲಿ ಅಭಿಮಾನದ ‘ನುಡಿ ನಮನ’ದ ಪರಿಧಿಯ ಆಚೆ ವಸ್ತುನಿಷ್ಠವಾಗಿ ಗಿರಡ್ಡಿ ಕಾಣಿಸುವುದಿಲ್ಲ. ಕೆಲವು ಲೇಖನಗಳಲ್ಲಂತೂ ಗಿರಡ್ಡಿಯವರಿಗಿಂತ ಅದನ್ನು ಬರೆದ ಲೇಖಕರೇ ಹೆಚ್ಚಾಗಿ ಕಾಣಿಸಿಕೊಳ್ಳುವುದೂ ಉಂಟು! ಎರಡನೇ ಭಾಗ ಗಿರಡ್ಡಿ ವಾಙ್ಮಯ. ಇದು ಪುಸ್ತಕದ ಹೆಚ್ಚು ಸಾರ್ಥಕ ಭಾಗ. ಇಲ್ಲಿ ಸಿಎನ್‌ಆರ್‌, ಟಿ.ಪಿ. ಅಶೋಕ, ಓಎಲ್‌ಎನ್‌, ಪದ್ಮರಾಜ ದಂಡಾವತಿ, ನರಹಳ್ಳಿ ಬಾಲಸುಬ್ರಹ್ಮಣ್ಯ, ಎನ್‌.ಎಸ್‌. ವಿಜಯಶಂಕರ, ಎಚ್ಚೆಸ್ವಿ ಅವರು ಗಿರಡ್ಡಿಯವರ ಸಾಹಿತ್ಯದ ಕುರಿತು ಬರೆದಿದ್ದಾರೆ. ಇಲ್ಲಿಯೂ ಸಿಎನ್‌ಆರ್‌ ಅವರ ಲೇಖನ ಬಿಟ್ಟರೆ ಮತ್ತೆಲ್ಲವೂ ಬೇರೆ ಬೇರೆ ಪತ್ರಿಕೆಗಳಲ್ಲಿ ಈಗಾಗಲೇ ಪ್ರಕಟವಾಗಿರುವಂಥವು. ಮುಂದಿನ ಭಾಗ ಸಂದರ್ಶನ. ವಿವಿಧ ಪತ್ರಿಕೆಗಳಿಗೆ ಅವರು ನೀಡಿದ್ದ ಸಂದರ್ಶನಗಳು ಇಲ್ಲಿವೆ. ನಮಗೆ ಈ ಪುಸ್ತಕದಲ್ಲಿ ನೇರವಾಗಿ ಗಿರಡ್ಡಿ ವಿಚಾರಧಾರೆಗಳು ಕಾಣಸಿಗುವುದು ಈ ಭಾಗದಲ್ಲಿಯೇ. ಶ್ರದ್ಧಾಂಜಲಿ, ಸಂತಾಪ, ನುಡಿನಮನೆಂಬ ಇನ್ನೊಂದು ಭಾಗವೂ ಈ ಕೃತಿಯಲ್ಲಿದೆ. ವಿವಿಧ ದಿನಪತ್ರಿಕೆಗಳಲ್ಲಿ ಪ್ರಕಟವಾದ ಗಿರಡ್ಡಿ ಅವರ ಸಾವಿನ ವಾರ್ತೆಗಳನ್ನೂ, ವಿವಿಧ ಸಾಹಿತಿಗಳು, ರಾಜಕಾರಣಿಗಳ ಹೇಳಿಕೆಗಳನ್ನು, ನೀನಾಸಮ್‌ನ ‘ಮಾತುಕತೆ’ ಪತ್ರಿಕೆಯಲ್ಲಿ ಹಾಕಲಾದ ಎರಡು ಸಾಲಿನ ಶ್ರದ್ಧಾಂಜಲಿಯನ್ನೂ ಬಿಡದ ಹಾಗೆ ಈ ಭಾಗದಲ್ಲಿ ಸೇರಿಸಲಾಗಿದೆ! ಗಿರಡ್ಡಿ ಅವರಂಥ ಶ್ರೇಷ್ಠ ವಿಮರ್ಶಕರ ಕುರಿತ ಸ್ಮರಣಗ್ರಂಥದ ಸುಮಾರು ಐವತ್ತು ಪುಟಗಳು ಅವರ ನಿಧನವಾರ್ತೆಗಳಿಗೆ ಮೀಸಲಾಗಿರುವುದು ವಿಪರ್ಯಾಸ ಎನ್ನದೆ ವಿಧಿಯಿಲ್ಲ. ‘ಚಿತ್ರಸಂಪುಟ’ ವಿಭಾಗದಲ್ಲಿಯೂ ಗಿರಡ್ಡಿಯವರು ಅಪರೂಪದ ಆಪ್ತವೆನಿಸುವ ಚಿತ್ರಗಳಿಗಿಂತ ಪ್ರಶಸ್ತಿ, ಸನ್ಮಾನದ, ಭಾಷಣದ ಸುದ್ದಿಪತ್ರಿಕೆ ಮಾದರಿಯ ಚಿತ್ರಗಳೇ ಇಡಿಕಿರಿದಿವೆ. ಈಗಾಗಲೇ ಎಲ್ಲೆಲ್ಲಿಯೋ ಪ್ರಕಟವಾಗಿರುವ ಬರಹಗಳನ್ನೆಲ್ಲ ಮೌಲ್ಯಮಾಪನದ ಶ್ರಮ ತೆಗೆದುಕೊಳ್ಳದೆ ಒಂದೆಡೆ ಸೇರಿಸಿ ಬಿಡುವುದೇ ಗ್ರಂಥಸಂಪಾದನೆಯೇ? ನೂರಾರು ರೂಪಾಯಿ ಕೊಟ್ಟು ಇಂಥ ಕೃತಿಯನ್ನು ಕೊಳ್ಳುವ ಓದುಗನಿಗೆ ನಿಧನವಾರ್ತೆ, ರಾಜಕಾರಣಿಗಳ ಸಂತಾಪಸೂಚನೆಗಳನ್ನು ಓದಿ ಆಗಬೇಕಾಗಿರುವುದು ಏನು? ಗಿರಡ್ಡಿಯಂಥ ವಸ್ತುನಿಷ್ಠ ವಿಮರ್ಶಕರ ಕುರಿತ ಕೃತಿ ವಸ್ತುನಿಷ್ಠತೆ ಮತ್ತು ಸಂಪಾದನ ಜವಾಬ್ದಾರಿಯೇ ಇಲ್ಲದೆ ಹೊರಬಂದರೆ ಅದು ಅವರಿಗೆ ಸಲ್ಲಿಸುವ ಗೌರವೋ, ಅಪಮಾನವೋ? ಈ ಎಲ್ಲ ಪ್ರಶ್ನೆಗಳನ್ನೂ ಸಂವೇದನಾಶೀಲ ಓದುಗರಲ್ಲಿ ಹುಟ್ಟು ಹಾಕುವುದೇ ಈ ಪುಸ್ತಕದ ಗುಣಾತ್ಮಕ ಅಂಶ ಎನ್ನಬಹುದು. ಒಟ್ಟಾರೆ ಗಿರಡ್ಡಿ ನೆನಪಿನಲ್ಲಿ ಬಂದಿರುವ ಈ ಕೃತಿಯ ಬಹುತೇಕ ಎಲ್ಲ ಬರಹಗಳು ‘ಈ ಲೇಖನವನ್ನು ಎಲ್ಲಿಯೋ ಓದಿದ್ದೆನಲ್ಲಾ’ ಎಂಬ ನೆನಪನ್ನು ಉದ್ದೀಪಿಸುವುದರ ಆಚೆಗೆ ಹೊಸದೇನನ್ನೂ ಕೊಡುವುದಿಲ್ಲ.

courtsey:prajavani.net

https://www.prajavani.net/artculture/book-review/book-giraddi-govindraj-649359.html

Leave a Reply