ಸ್ವಂತಿಕೆಯ ಭಾವಬಂಧನದಲಿ…

ಸ್ವಂತಿಕೆಯ ಭಾವಬಂಧನದಲಿ…

ಅಮ್ಮ ಮನಸ್ಸಿನಲ್ಲೇ ಈ ಎರಡರ ತುಲನೆ ಮಾಡುತ್ತಿದ್ದಾಳೆ. ಬೆಳಕೇ ಅವಳಿಗೆ ಹೆಚ್ಚು ಹಿತ ನೀಡಿತೇನೋ ಎಂಬ ಭಾವದಲ್ಲಿ ‘ಇದು ಸಂಮೋಹನಕರವಾಗಿದೆ’ ಎಂದಳು ಸ್ವಗತದಂತೆ. ಅವಳು ಎಷ್ಟರ ಮಟ್ಟಿಗೆ ಬೆಳಕನ್ನು ದಿಟ್ಟಿಸುತ್ತಿದ್ದಳು ಎಂದರೆ ಅವಳ ದೃಷ್ಟಿ ಬೇರೆಡೆಗೆ ಸುಳಿಯುತ್ತಲೇ ಇಲ್ಲ.

ಅಮ್ಮ ನಿಧಾನವಾಗಿ ಕರಗುತ್ತಿರುವ ಕತ್ತಲಿನಲ್ಲಿ ದೃಷ್ಟಿ ನೆಟ್ಟಿದ್ದಳು. ಅವಳು ಕತ್ತಲಿನಲ್ಲೇ ಕಳೆದು ಹೋಗಿದ್ದಳು. ಇದ್ದಕ್ಕಿದ್ದಂತೆ ಬೆಳಕು ಹೊತ್ತಿಕೊಂಡಿತು. ಈಗ ಅಮ್ಮನ ದೃಷ್ಟಿ ಬೆಳಕಿನ ರೂಪದ ಬಲ್ಬ್‌ನ ಮೇಲಿದೆ. ಈಗ ಅವಳ ಲೋಕದಲ್ಲಿ ಬೆಳಕು ನೀಡಿದ ಬಲ್ಬ್ ಅಷ್ಟೇ ಇದೆ. ತನ್ನ ಸುತ್ತಲೂ ಬೇರೆನೂ ಇಲ್ಲ ಎಂಬ ಭಾವದೊಂದಿಗೆ ಅವಳು ಬೆಳಕನ್ನೇ ದಿಟ್ಟಿಸುತ್ತಿದ್ದಳು. ಮೊದಲು ಕತ್ತಲು, ಈಗ ಬೆಳಕು…

ಅಮ್ಮ ಮನಸ್ಸಿನಲ್ಲೇ ಈ ಎರಡರ ತುಲನೆ ಮಾಡುತ್ತಿದ್ದಾಳೆ. ಬೆಳಕೇ ಅವಳಿಗೆ ಹೆಚ್ಚು ಹಿತ ನೀಡಿತೇನೋ ಎಂಬ ಭಾವದಲ್ಲಿ ‘ಇದು ಸಂಮೋಹನಕರವಾಗಿದೆ’ ಎಂದಳು ಸ್ವಗತದಂತೆ. ಅವಳು ಎಷ್ಟರ ಮಟ್ಟಿಗೆ ಬೆಳಕನ್ನು ದಿಟ್ಟಿಸುತ್ತಿದ್ದಳು ಎಂದರೆ ಅವಳ ದೃಷ್ಟಿ ಬೇರೆಡೆಗೆ ಸುಳಿಯುತ್ತಲೇ ಇಲ್ಲ.

ಬೆಳಕು–ಕತ್ತಲನ್ನು ಹೊರತು ಪಡಿಸಿದ ವಾಸ್ತವಲೋಕದಲ್ಲಿ ಅಮ್ಮನಿಗೆ ಲಕ್ವ ಹೊಡೆದಿತ್ತು. ದೇಹದ ಅರ್ಧ ಭಾಗ ನಿಶ್ಚಲವಾಗಿತ್ತು. ಅವಳ ಮುಂದೀಗ ಹೊಳೆಯುವ ಬೆಳಕನ್ನು ಬಿಟ್ಟರೆ ಬೇರೆ ಯಾವುದರ ಅಸ್ತಿತ್ವವೂ ಇಲ್ಲ. ಬೆಳಕು ಅವಳ ಬದುಕನ್ನು ಎಷ್ಟರಮಟ್ಟಿಗೆ ಆವರಿಸಿಕೊಂಡು ಬಿಟ್ಟಿದೆ ಎಂದರೆ ಬೆಳಕಿನಾಳದಲ್ಲಿ ಇಳಿದು ನೋಡುವಷ್ಟು.

ವರ್ಷಗಳು ಕಳೆದಂತೆ ನನಗೂ ಅರಿವಾಯಿತು. ಎಷ್ಟು ಸುಂದರ, ಎಷ್ಟು ಗಾಢವಾದ ಸತ್ಯ ಅವಳ ಅನುಭವದಲ್ಲಿದೆ ಎಂಬುದು. ಅಂದು ನಾನು ಸುರಂಗದ ಚಿತ್ರವನ್ನು ನೋಡುತ್ತಿದ್ದೆ. ಮೊದಲು ಅದರ ದ್ವಾರವನ್ನು ದಿಟ್ಟಿಸಿದೆ. ದ್ವಾರವಷ್ಟೇ ಕಾಣಿಸಿತು. ಮುಂದೆಲ್ಲಾ ಖಾಲಿ! ದ್ವಾರವನ್ನು ನಾನು ನೆಟ್ಟ ಕಣ್ಣುಗಳಿಂದ ದಿಟ್ಟಿಸುತ್ತಲೇ ಇದ್ದೆ. ನನ್ನ ಕಣ್ಣುಗಳನ್ನು ಅಲ್ಲಿಂದ ಕೀಳಲಾಗುತ್ತಿಲ್ಲ. ಕಣ್ಣಿನ ನೋಟ ಸಾಗುತ್ತಲೇ ಇದೆ… ಮುಂದೆ…ಮುಂದೆ…ಮುಂದೆ… ಎಲ್ಲಿಯವರೆಗೂ ಎಂದರೆ ಸುರಂಗದ ಇನ್ನೊಂದು ತುದಿ ಕಾಣುವವರೆಗೂ… ಆ ತುದಿಯು ನನ್ನ ವಾಸ್ತವಕ್ಕೆ ಬರುವವರೆಗೂ.

ಹೌದು, ಈ ಬದುಕೆಂಬುದು ಹೀಗೆ… ಮೇಲಿಂದ ನೋಡಿದರೆ ನೈಜತೆ ಕಾಣುವುದಿಲ್ಲ. ಬದುಕಿನಾಳದಲ್ಲಿ ಇಳಿದಷ್ಟು ಬದುಕಿನ ಮುಖಗಳ ಪರಿಚಯ ನಮಗಾಗುತ್ತಾ ಹೋಗುತ್ತದೆ. ಬದುಕನ್ನು ಸಂಪೂರ್ಣವಾಗಿ ಅನುಭವಿಸಲು ಕೇವಲ ಒಂದು ದ್ವಾರವನ್ನು ಪ್ರವೇಶಿಸಿದರೆ ಸಾಲದು; ಕಾಣದ ಇನ್ನೊಂದು ದ್ವಾರದವರೆಗೂ ದೃಷ್ಟಿ ಇಡಬೇಕು. ಆಗಷ್ಟೇ ನಮ್ಮದು ಪರಿಪೂರ್ಣ ಬದುಕು ಎನ್ನಿಸಿಕೊಳ್ಳಲು ಸಾಧ್ಯ.

ಹುಟ್ಟಿದ ಮನುಷ್ಯ ಸಾಯುವರೆಗೂ ಪರಿಪೂರ್ಣನಾಗಿ ಬದುಕಬೇಕು ಎಂದುಕೊಂಡರೆ ಅವನಿಗೆ ಸ್ವಂತಿಕೆ ಮುಖ್ಯ. ಆದರೆ ಸ್ವಂತಿಕೆಯ ಬಗ್ಗೆ ಅಹಂಕಾರದ ಭಾವವಿರಬಾರದು. ಇತರರನ್ನು ಅರ್ಥ ಮಾಡಿಕೊಳ್ಳುವ ಮನಸ್ಸಿರಬೇಕು. ಸ್ವಂತಿಕೆ ಎನ್ನುವುದು ಯಾವಾಗ ಸುಂದರ ಎನ್ನಿಸಿಕೊಳ್ಳುತ್ತದೆ ಎಂದರೆ ತನ್ನತನವನ್ನು ಉಳಿಸಿಕೊಂಡು, ಮನಸ್ಸಿನ ಅಹಂಕಾರವನ್ನು ಕಳೆದು ಇತರರೊಂದಿಗೆ ಸಂತಸದಿಂದ ಇದ್ದಾಗ. ಆಗಷ್ಟೆ ನೀವು ಯಾವ ಕಾರಣಕ್ಕೂ ಬೇರೆಯವರಿಗೆ ನಿಮ್ಮಿಂದ ತೊಂದರೆಯಾಗಬಾರದು ಎಂದುಕೊಳ್ಳುತ್ತೀರಿ.

ಆಗ ನಿಮ್ಮ ಎದುರಿನವರು ನಿಮಗೆ ಏನಾದರೂ ಹೇಳಿದರು ನೀವು ಅವರ ಮನಸ್ಸಿಗೆ ನೋವಾಗುವಂತೆ  ತಿರುಗಿ ಮಾತನಾಡುವುದಿಲ್ಲ. ಆಗ ಇನ್ನೊಬ್ಬರ ಹಿತವನ್ನು ಕಾಪಾಡಬೇಕೆಂಬುದೇ ನಿಮಗೆ ಮುಖ್ಯವಾಗಿರುತ್ತದೆ. ಈ ಭಾವ ಕೇವಲ ನಿಮ್ಮಲ್ಲಿ ಮಾತ್ರ ಸಂತಸ ತರುವುದಲ್ಲದೇ ನಿಮ್ಮ ಸುತ್ತಲಿನ ವಾತಾವರಣವನ್ನೂ ಆಹ್ಲಾದಕರವಾಗಿರುವಂತೆ ನೋಡಿಕೊಳ್ಳುತ್ತದೆ.

ನಮಗೆ ತಿಳಿಯದಂತೆಯೇ ಎದುರಿನವರ ಮನಸ್ಸಿನೊಳಗೆ ನಮಗೊಂದು ಸ್ಥಾನವನ್ನು ಈ ಸ್ವಾರ್ಥಭಾವವಿಲ್ಲದ ಸ್ವಂತಿಕೆಯ ಮನೋಭಾವ ಒದಗಿಸಿರುತ್ತದೆ. ಆಗ ಜಗಳ, ದ್ವೇಷ, ಅಸೂಯೆಗಳು ನಮ್ಮಿಂದ ದೂರವಾಗಿರುತ್ತವೆ. ಆಗ ನಮ್ಮ ಮನಸ್ಸು ಶಾಂತವಾಗಿರುತ್ತದೆ.

ಒಂದೇ ಕಡೆಗೆ ನೋಡುವುದನ್ನು ನಾವು ಬಿಡಬೇಕಿದೆ. ಎಂದರೆ ಮನುಷ್ಯ ಬಾಹ್ಯ ವಿವರಗಳನ್ನಷ್ಟೇ ನೋಡಿ, ಅವನ್ನೇ ನಂಬಿಕೊಂಡು ಇದೇ ಜೀವನ ಎಂದುಕೊಂಡು ಸ್ವಾರ್ಥದಿಂದ ಬದುಕಬಾರದು. ಮನುಷ್ಯನು ಆಂತರಿಕವಾಗಿ ವಿಸ್ತಾರವಾದಷ್ಟೂ ಅವನ ಇಡಿಯ ವ್ಯಕ್ತಿತ್ವವೇ ವಿಸ್ತಾರವಾಗುತ್ತಹೋಗುತ್ತದೆ. ಮನಸ್ಸು ವಿಸ್ತಾರವಾದಷ್ಟು ಹೊಸ ಹೊಸ ವಿಷಯಗಳು ನಮಗೆ ಅರಿವಿಗೆ ಸಿಕ್ಕುತ್ತಹೋಗುತ್ತವೆ. ನಮ್ಮ ಮನಸ್ಸಿಗೆ ಇಷ್ಟವಾಗುವ ಯಾವುದೋ ಒಂದು ಕೆಲಸವನ್ನು ನಾನು ಅನುಸರಿಸಿಕೊಂಡು ಹೋಗಬೇಕು.

ಆಗ ನಮಗೆ ತಿಳಿಯದಂತೆ ಹೊಸ ಹೊಸ ವಿಷಯಗಳು ಆ ದಾರಿಯಲ್ಲಿ ನಮಗೆ ಅರಿವಾಗುತ್ತದೆ. ಜೊತೆಗೆ ಜೀವನಪ್ರಯಾಣದ ಇನ್ನೊಂದು ಆಯಾಮವೂ ನನಗೆ ಸುಲಭವಾಗುತ್ತದೆ ಸಿಗುತ್ತದೆ. ‘ಇಂಥ ದರ್ಶನಕ್ಕೆ ಎಷ್ಟೆಲ್ಲ ಕಷ್ಟಪಟ್ಟೆ, ಇದು ಇಷ್ಟು ಸುಲಭದ ದಾರಿಯೆ’ ಎಂದು ನಮಗೇ ಅಚ್ಚರಿಯಾಗುತ್ತದೆ. ಈ ಮರ್ಮ ನಮಗೆ ಒಮ್ಮೆ ಅರ್ಥವಾದರೆ ಆಗ ಜೀವನವನ್ನು ಕಂಗೆಡಿಸುವ ಯಾವ ವಿಷಯವೂ ನಮ್ಮನ್ನು ಹೆದರಿಸದು. ಎಲ್ಲ ಆತಂಕಗಳನ್ನೂ ಮೀರಿ ಗಾಳಿಯಲ್ಲಿ ಹಾರುವ ಗರಿಗಳಂತೆ ನಾವು ಹಾರಾಡುತ್ತಿರುತ್ತೇವೆ.  ಅಪೂರ್ಣಜ್ಞಾನದ ಗೊಂದಲದ ಭಾವವು ತೊಲಗಿ ಪೂರ್ಣಜ್ಞಾನದ ಆನಂದ ನಮ್ಮ ಮನಸ್ಸನ್ನು ಆವರಿಸಿರುತ್ತದೆ.

ಈ ಭಾವ ನಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಒಟ್ಟಾರೆಯಾಗಿ ಬದುಕು ಪೂರ್ಣ ಎನ್ನಿಸಿಕೊಳ್ಳಲು ಬದುಕಿನಾಳಕ್ಕೆ ನಾವು ಇಳಿಯಲೇ ಬೇಕು. ಬದುಕಿನ ಯಾವುದೋ ಒಂದು ಬಾಗಿಲಲ್ಲಿ ನಿಂತು, ಬದುಕು ಎಂದರೆ ಇಷ್ಟೇ ಎಂದುಕೊಳ್ಳದೆ ಇನ್ನೊಂದು ಬಾಗಿಲನ್ನು ತಟ್ಟುವುದಕ್ಕೂ ಸಿದ್ಧವಾಗಬೇಕು.
–ಭರತ್ ಮತ್ತು ಶಾಲನ್ ಸವೂರ್‌

Courtesy : Prajavani.net

http://www.prajavani.net/news/article/2018/03/21/560661.html

Leave a Reply