ಹಬ್ಬಗಳು ಮತ್ತು ಆರೋಗ್ಯ ತತ್ವಗಳು

ಹಬ್ಬಗಳು ಮತ್ತು ಆರೋಗ್ಯ ತತ್ವಗಳು

-ಡಾ. ವಿಜಯಲಕ್ಷ್ಮಿ.ಪಿ

 ಹಬ್ಬಗಳೆಂದರೆ ಆಚರಣೆಗಳು ಅಥವಾ ಸಂಭ್ರಮದ ಸನ್ನಿವೇಶಗಳು ಮಾತ್ರವಲ್ಲ. ಈ ಆಚರಣೆಯ ಹಿಂದೆ ಕೆಲವು ವೈಜ್ಞಾನಿಕ ಸತ್ಯಗಳು, ಪ್ರಕೃತಿಯ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ವಿಚಾರಗಳು ಅಡಗಿವೆ. ಎಲ್ಲವನ್ನೂ ಇಲ್ಲಿ ವಿಷದೀಕರಿಸಲು ಸಾಧ್ಯವಾಗದಿದ್ದರೂ, ಕಿಂಚಿತ್ ವಿಷಯ ಪ್ರಸ್ತಾಪಿಸುವ ಪ್ರಯತ್ನ ಲೇಖನದ ಮೂಲಕ.

ಸೂರ್ಯನ ಕಿರಣಗಳು ಉತ್ತರದಿಂದ ದಕ್ಷಿಣಕ್ಕೆ ಚಲಿಸುವ ಕಾಲವನ್ನು ಉತ್ತರಾಯಣವೆಂದು, ದಕ್ಷಿಣದಿಂದ ಉತ್ತರಕ್ಕೆ ಚಲಿಸುವ ಕಾಲವನ್ನು ದಕ್ಷಿಣಾಯನವೆಂದೂ ಕರೆಯುತ್ತಾರೆ. ವೈಜ್ಞಾನಿಕವಾಗಿ ಡಿಸೆಂಬರ್ 22ರಿಂದ ಜೂನ್ 22 ರವರೆಗೂ ಉತ್ತರಾಯಣವೆಂದೂ, ಜೂನ್ 22ರಿಂದ ಡಿಸೆಂಬರ್ 22ರವರೆಗೂ ದಕ್ಷಿಣಾಯನವೆಂದು ಪರಿಗಣಿಸಬೇಕು. ಆದರೆ ನಮ್ಮ ಪಂಚಾಂಗವನ್ನು ಸ್ಫುಟ ಮಾಡಿಲ್ಲದ ಕಾರಣ ಮಕರಸಂಕ್ರಾಂತಿಯಿಂದ ಉತ್ತರಾಯಣವನ್ನೂ, ಕರ್ಕಾಟಕ ಸಂಕ್ರಾಂತಿಯಿಂದ ದಕ್ಷಿಣಾಯನವನ್ನೂ ಸಾಂಪ್ರದಾಯಿಕರು ಆಚರಿಸುತ್ತಾರೆ.

ಇದು ಬಹುಶಃ ಸೂರ್ಯನ ಕಿರಣಗಳು ಮಕರಸಂಕ್ರಾಂತಿ ವೃತ್ತದಿಂದ ಕರ್ಕಾಟಕ ಸಂಕ್ರಾಂತಿ ವೃತ್ತದವರೆಗಿನ ಚಲನೆಯನ್ನು ಅನುಸರಿಸಿ ಮಾಡಿರುವ ಆಚರಣೆಯೂ ಇರಬಹುದು. ಒಟ್ಟಾರೆ ಸಂಕ್ರಾಂತಿಯಿಂದ ಪ್ರಾರಂಭಿಸಿ ರಾಮನವಮಿಯವರೆಗೂ ಹಬ್ಬಗಳ ಸಾಲೇ ಇರುತ್ತದೆ. (ಮೇಷ ಸಂಕ್ರಮಣದಿಂದ ವಿಷುವತ್ಸಂಕ್ರಮಣದವರೆಗೂ) ನಂತರ ಶ್ರಾವಣದಿಂದ ಕಾರ್ತಿಕದವರೆಗೂ ಮತ್ತೆ ಹಬ್ಬಗಳ ಸಾಲು.

ಸಾಮಾನ್ಯವಾಗಿ ನಮ್ಮ ಆಚಾರ–ವಿಚಾರಗಳಲ್ಲಿ ಬದಲಾವಣೆಯನ್ನು ಆಹಾರದ ಸೇವನಾಕ್ರಮದಲ್ಲಿ ಬದಲಾವಣೆಯನ್ನು ಎರಡು ತಿಂಗಳ ಅವಧಿ ಎಂದರೆ ಋತುವಿಗೆ, ಅನುಗುಣವಾಗಿ ಮಾಡಬೇಕಾಗುತ್ತದೆ. ಇದನ್ನೇ ಆಯುರ್ವೇದದಲ್ಲಿ ‘ಋತುಚರ್ಯೆ’ ಎಂದು ಹೇಳಿದ್ದಾರೆ.

‘ರೋಗ ಬಂದ ನಂತರ ಚಿಕಿತ್ಸೆ ಮಾಡುವುದಕ್ಕಿಂತ, ಬಾರದಂತೆ ತಡೆಗಟ್ಟುವುದು ಒಳ್ಳೆಯದು’ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಸ್ವಾಭಾವಿಕವಾಗಿ ಭೂಮಿಯಲ್ಲಾಗುವ ಬದಲಾವಣೆಗಳು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಅದೇ ರೀತಿ ಮನುಷ್ಯನು ಪ್ರಕೃತಿಯನ್ನು, ವಾತಾವರಣವನ್ನು ಬದಲಾವಣೆ ಮಾಡುತ್ತಾ ಹೋದಂತೆ ವಾತಾವರಣದ ಅಸಮತೋಲನದಿಂದಾಗಿ ಗುಣಪಡಿಸುವಂತಹವು, ಗುಣಪಡಿಸಲಾಗದಂತಹವು ಇತ್ಯಾದಿ ಅನೇಕ ರೋಗಗಳು ಉತ್ಪತ್ತಿಯಾಗುತ್ತವೆ.

ಆದರೆ ಇಂದು ಸಂಪ್ರದಾಯವನ್ನು ತ್ಯಜಿಸಿ, ಆಧುನಿಕ ಜೀವನ ವಿಧಾನವನ್ನು ಅಳವಡಿಸಿಕೊಂಡು, ಇಡೀ ವರ್ಷವೂ ಒಂದೇ ರೀತಿಯ ಆಹಾರವನ್ನು ಸೇವಿಸುವ ಪದ್ಧತಿ ಅನುಸರಿಸುತ್ತಿದ್ದೇವೆ. ಅಲ್ಲದೆ ಯಾವುದೇ ಪ್ರದೇಶದಲ್ಲಿದ್ದರೂ, ಯಾವ ಕಾಲವೇ ಆದರೂ ದಿನಚರಿ ಮತ್ತು ಆಹಾರಸೇವನೆಯಲ್ಲಿ ಯಾವುದೇ ವ್ಯತ್ಯಾಸ ಮಾಡುವುದಿಲ್ಲ.

ಇದರಿಂದಾಗಿ ಗುಣಪಡಿಸಲಾಗದ ರೋಗಗಳು, ಜೀವನಶೈಲಿಯ ವ್ಯತ್ಯಾಸದಿಂದ ಬರುವ ರೋಗಗಳಾದ ಮಧುಮೇಹ, ಹೃದಯಸಂಬಂಧಿ ರೋಗ, ಸಂಧಿವಾತ ಮುಂತಾದವುಗಳ ಸಂಖ್ಯೆ ಹೆಚ್ಚುತ್ತಿದೆ. ಜೊತೆಗೆ ಗುಣವೇ ಆಗದಂತಹ ಕ್ಯಾನ್ಸರ್ ಕಾಯಿಲೆಗೂ, ನರಸಂಬಂಧಿ ಕಾಯಿಲೆಗಳಿಗೂ ಈ ಜೀವನವಿಧಾನ ಕಾರಣವಾಗಿವೆ. ಋತುವಿಗನುಗುಣವಾಗಿ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು.

ಇದನ್ನು ವಿಜ್ಞಾನಿಗಳೂ ಒಪ್ಪುತ್ತಾರಾದರೂ, ಜನಸಾಮಾನ್ಯರಿಗೆ ತಿಳಿವಳಿಕೆ ಕೊಡುವುದು ಸ್ವಲ್ಪ ಕಷ್ಟಕರವಾದ ಕೆಲಸವೇ. ಇದನ್ನು ತಡೆಗಟ್ಟಲು ಇರುವ ಒಂದೇ ಉಪಾಯವೆಂದರೆ ಆಯಾ ಪ್ರದೇಶದ ಸ್ವಾಭಾವಿಕ ಆಹಾರ–ವಿಹಾರಗಳನ್ನು ಕಾಲಕ್ಕೆ ಅನುಗುಣವಾಗಿ ಅವುಗಳನ್ನು ತಯಾರಿಸುವ ವಿಧಾನದಲ್ಲಿ ಬದಲಾವಣೆ ಮಾಡುವ ಮೂಲಕ ಹಾಗೂ ದೈನಂದಿನ ಕಾರ್ಯಕ್ರಮಗಳನ್ನು (ದಿನಚರಿಯನ್ನು) ಕಾಲಕ್ಕೆ, ದೇಶದ ವಾತಾವರಣಕ್ಕೆ ಅನುಗುಣವಾಗಿ ಹೊಂದಾಣಿಕೆ ಮಾಡಿಕೊಳ್ಳುವುದು.

ಯಾವ ಆಹಾರವನ್ನು ಯಾರು? ಯಾವಾಗ? ತೆಗೆದುಕೊಳ್ಳಬೇಕು ಎಂಬುದು ಎಲ್ಲರಿಗೂ ಯಾವಾಗಲೂ ಬರುವ ಪ್ರಶ್ನೆ. ಸಂಪ್ರದಾಯದಲ್ಲಿ ಆಯಾ ದೇಶ, ಕಾಲಕ್ಕೆ ಅನುಗುಣವಾಗಿ ಹಬ್ಬಗಳನ್ನು ಆಚರಿಸುವಂತೆ ಮಾಡಿ, ಅದಕ್ಕೆ ಕೆಲವು ನಿಯಮಗಳು ಹಾಗೂ ವ್ರತವೆಂದು ಹೇಳಿ ಇಂತಹುದೇ ಆಹಾರವನ್ನು ತಯಾರಿಸಿ ಉಪಯೋಗಿಸುವಂತೆ ನಿರ್ದೇಶಿಸಿದ್ದಾರೆ. ಇದನ್ನು ಅನುಸರಿಸಿದರೆ ಅತ್ಯುತ್ತಮ ಜೀವನವನ್ನು ಸುಲಭವಾಗಿ ಪಡೆಯಬಹುದು. ಇದು ಶಾರೀರಿಕವಾಗಿ ಮಾನಸಿಕವಾಗಿ ನೆಮ್ಮದಿಯನ್ನು ಕೊಡುವ ವಿಧಾನ.

1. ಹಬ್ಬಗಳು: ಧನುರ್ಮಾಸ ವ್ರತ, ಸಂಕ್ರಾಂತಿ, ರಥಸಪ್ತಮಿ, ಶಿವರಾತ್ರಿ, ಹಬ್ಬ ಮತ್ತು ಋತುವಿನ ಸಂಬಂಧ – ಡಿಸೆಂಬರ್ ಜನವರಿಯಲ್ಲಿ ಚಳಿ ಹೆಚ್ಚಾಗಿರುವುದರಿಂದ ಚರ್ಮದ ಸೂಕ್ಷ್ಮರಂಧ್ರಗಳು ಚಿಕ್ಕದಾಗುತ್ತವೆ. ಇದರಿಂದ ದೇಹದ ಒಳಗಿನ ಉಷ್ಣತೆ ಹೆಚ್ಚಾಗಿ ಹಸಿವೆ ಹೆಚ್ಚಾಗುವುದರಿಂದ, ಸಿಹಿ ಮತ್ತು ಖಾರ ಪೊಂಗಲ್ ತಿನ್ನುವುದು ಮತ್ತು ಎಳ್ಳು ಬೆರೆಸಿದ ಗೊಜ್ಜು ಇತ್ಯಾದಿ ಪದಾರ್ಥಗಳನ್ನು ತಿನ್ನುವುದರಿಂದ ಹೆಚ್ಚಾದ ಚರ್ಮದ ರಂಧ್ರಗಳು ನುಣುಪಾಗಿ ಒಳಗಿನ ಉಷ್ಣತೆ ಹೊರಹೋಗುವಂತೆ ಮಾಡಿ ಉಷ್ಣತೆಯು ಕಡಿಮೆಯಾಗುತ್ತದೆ. ಚಳಿಯಿಂದಾಗಿ ಮೈ ಒಡೆಯುವುದನ್ನು ಎಳ್ಳು ಕಡಿಮೆ ಮಾಡುತ್ತದೆ. ಚಳಿ ಇನ್ನೂ ಹೆಚ್ಚಾದ ಹಾಗೆ ಮೈ ಒಡೆಯುವುದು, ದೇಹದ ಒಳಭಾಗವೂ ಒಣಗುವುದು ಹೆಚ್ಚಾಗುವುದರಿಂದ ಸಂಕ್ರಾಂತಿಯಲ್ಲಿ ಎಣ್ಣೆಕಾಳುಗಳಾದ ಕಡ್ಲೆಕಾಯಿ, ಎಳ್ಳು, ಒಣಕೊಬ್ಬರಿಯ ಮಿಶ್ರಣ ಜೊತೆಗೆ ಸಿಹಿಯಾದ ಕಬ್ಬು, ಬೆಲ್ಲಗಳ ಸೇವನೆ, ಪೊಂಗಲ್ ಸೇವನೆಯನ್ನು ವಿಧಿಸಿದ್ದಾರೆ. ಇದನ್ನು ಚಳಿ ಅತಿ ಹೆಚ್ಚಾಗುವ ರಥಸಪ್ತಮಿಯವರೆಗೂ ಮುಂದುವರೆಸಬೇಕು.

2. ರಥಸಪ್ತಮಿಯ ನಂತರ ನಿಧಾನವಾಗಿ ಚಳಿಗಾಲದ ಮಂಜು ಕರಗುವಂತೆ ದೇಹದ ಕಫ, ಕರಗಲು ಪ್ರಾರಂಭಿಸುತ್ತದೆ. ಅದನ್ನು ಒಣಗಿಸಲೆಂದೇ ಎಕ್ಕದ ಎಲೆಯ ಸ್ನಾನ ವಿಪರೀತ ತೊಂದರೆ ಇರುವವರಿಗೆ ಒಂದು ತೊಟ್ಟು ಪಾನ (ಕ್ರಮವರಿತು ವೈದ್ಯರ ಸಲಹೆಯಂತೆ ಮಾಡಬೇಕು). ಮತ್ತೆ ವಸಂತದ ಪ್ರಾರಂಭ ಶಿವರಾತ್ರಿಯ ನಂತರ, ಕಫ ಹೆಚ್ಚಾಗಿ ಕರಗಿದ್ದನ್ನು ಒಣಗಿಸಲು ಉಪವಾಸ ಮತ್ತು ಜಾಗರಣೆ. ಇದರಿಂದಾಗಿ ವಸಂತದಲ್ಲಿ ಕೆಮ್ಮು, ದಮ್ಮು, ಚರ್ಮವ್ಯಾಧಿಗಳ ಕಾಟ ಇರುವುದಿಲ್ಲ. ನಂತರ ಬರುವುದೇ ಕಾಮನ ಹುಣ್ಣಿಮೆ ಅಥವಾ ಹೋಳಿ. ಇಂದು ಕಾಮವನ್ನು ಹೆಚ್ಚಿಸುವ ರಂಗಿನಾಟದೊಡನೆ, ಕಾಮ ಅಥವಾ ಹೋಲಿಕಾ ದಹನವನ್ನು ಮಾಡುತ್ತಾರೆ.

ಇದರರ್ಥ ಇನ್ನು ವಸಂತಋತುವಿನಲ್ಲಿ ಕಾಮೊದ್ರೇಕ ಹೆಚ್ಚಾಗುವುದು ಪ್ರಕೃತಿ ನಿಯಮ, ಅದನ್ನು ವಿಧಿ ಮೀರದಂತೆ ತಡೆಯಲೇಬೇಕು ಇಲ್ಲದಿದ್ದಲ್ಲಿ ವೈಯಕ್ತಿಕ ಹಾಗೂ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತದೆ ಎನ್ನುವುದರ ಸಂಕೇತ. ಅಲ್ಲಿಗೆ ಕರಗಿದ ಕಫವನ್ನು ಒಣಗಿಸುವುದೂ ಕಾಮದಹನದ ಉದ್ದೇಶ. ಇಷ್ಟಾಗಿಯೂ ಕರಗಿದ ಕಫ ತೊಂದರೆ ಕೊಡಲು ಪ್ರಾರಂಭಿಸಿದರೆ ಕಹಿಯನ್ನು ಸೇವಿಸಬೇಕು. ಆದರೆ ಕಹಿ ವಾತವನ್ನು ಹೆಚ್ಚು ಮಾಡುವ ಕಾರಣ ಕಹಿಯ ಜೊತೆ ಸ್ವಲ್ಪ ಸಿಹಿ – ಇದರರ್ಥವೇ ಬೇವು ಬೆಲ್ಲ. ವಿಪರೀತ ತೊಂದರೆ ಇರುವವರು ಬೇವಿನರಸ ಕುಡಿದು ವಾಂತಿ ಮಾಡಿ, ಪಥ್ಯಾಹಾರ ಸೇವನೆ ಮಾಡಬೇಕು (ಇದು ವೈದ್ಯರ ಸಮ್ಮುಖದಲ್ಲೇ ನಡೆಯಬೇಕಾದ ಕಾರ್ಯ).

3. ಪಂಚಾಂಗದ ಪ್ರಕಾರ ರಾಮನವಮಿ ವಸಂತಋತುವಿನಲ್ಲಿ ಬರುವುದಾದರೂ ಕಾಲದ ಪ್ರಭಾವ ಗ್ರೀಷ್ಮಋತುವಿನದ್ದೇ ಆಗಿರುತ್ತದೆ. ಇದನ್ನು ಋತುಸಂಧಿ ಎನ್ನಬಹುದು. ಈ ಸಮಯದಿಂದಲೇ ಗ್ರೀಷ್ಮಋತುವಿನ ಪ್ರಧಾನ ಆಹಾರವಾದ ಪಾನಕಸೇವನೆ ಪ್ರಾರಂಭವನ್ನು ಸೂಚಿಸುವ ಹಬ್ಬ.

4. ಮಾವಿನ ಹಣ್ಣೊಂದನ್ನು ಬಿಟ್ಟು ಮತ್ತಾವ ಹಣ್ಣುಗಳೂ, ಬೇಳೆಕಾಳುಗಳನ್ನು ಬಿಟ್ಟು ಮತ್ತಾವ ತರಕಾರಿಗಳನ್ನೂ ಸೇವಿಸದೆ, ದನಿಯಾ, ಮೆಣಸು, ಜೀರಿಗೆ ಹಾಕಿ ತಯಾರಿಸಿದ ಅಡುಗೆಗಳನ್ನು ಊಟಮಾಡಬೇಕೆಂದು ವ್ರತದ ನಿಯಮ ಹೇಳುತ್ತದೆ. ಇದು ಎಲ್ಲೂ ಸಂಚರಿಸದೆ ಒಂದೇ ಕಡೆ ಇರುವ ಸನ್ಯಾಸಿಗಳಿಗೆ ಹೇಳಿರುವ ವ್ರತ. ಇನ್ನು ಸಂಸಾರಿಗಳಾದರೋ, ಬಾಯಿ ಚಪಲಕ್ಕೆಂದು ಎಲ್ಲವನ್ನೂ ಎಲ್ಲಾ ತರಕಾರಿ ಹಣ್ಣುಗಳನ್ನೂ ಸೇವಿಸದೆ ಮೇಲೆ ತಿಳಿಸಿದ ಆಹಾರ ಸೇವಿಸಿದಲ್ಲಿ ಅನಾರೋಗ್ಯ ಬರುವುದಿಲ್ಲ. ಇದು ಆಯುರ್ವೇದದ ನಿಯಮ.

ಇನ್ನು ಮಾಂಸಾಹಾರಿಗಳು ಈ ಕಾಲದಲ್ಲಿ ಮಾಂಸಾಹಾರವನ್ನು ಬಿಡಬೇಕು. ಇದೇ ರೀತಿ ಮದುವೆಯಾದ ಮೊದಲ ವರ್ಷ, ಆಷಾಢಮಾಸದಲ್ಲಿ ತವರಿಗೆ ಹೋಗಬೇಕೆಂಬ ನಿಯಮ. ಇದು ಗರ್ಭಧಾರಣೆಗೆ ಸೂಕ್ತ ಕಾಲವಲ್ಲ ಎಂಬುದು. ಇನ್ನು ಮಳೆಗಾಲದ ಕೊನೆಗೆ ಆಚರಿಸುವ ಪಿತೃಪಕ್ಷ ಹಾಗೂ ಇತರರ ಮಹಾಲಯ ಅಮಾವಾಸ್ಯೆ ಎಂಬುದೂ ಆರೋಗ್ಯದ ದೃಷ್ಟಿಯಿಂದ ಕ್ಷೀಣವಾದ ದೇಹಬಲವನ್ನು, ವಾತಪ್ರಕೋಪವನ್ನು ಶಮನಗೊಳಿಸಲು ಬೇಕಾಗುವ ಆಹಾರಸೇವನೆ – ಉದ್ದಿನ ವಡೆ ಇತ್ಯಾದಿಗಳು. ಈ ಕಾಲದಲ್ಲಿ ಒಂದು ದಿನವಾದರೂ ಇವುಗಳನ್ನು ಸೇವಿಸಿದರೆ ಕೈ–ಕಾಲು ಗಂಟುಗಳ ನೋವು, ಸೊಂಟ, ಬೆನ್ನು ನೋವುಗಳು ಬರುವುದನ್ನು ತಡೆಗಟ್ಟಬಹುದು.

5. ಮಳೆಗಾಲದಲ್ಲಿ ಹೊರ ಪ್ರಪಂಚದಂತೆ ದೇಹದಲ್ಲೂ ದೋಷಗಳು ಅಲ್ಲೋಲ ಕಲ್ಲೋಲವಾಗಿ ಕೆಲಸ ಮಾಡುತ್ತವೆ. ಆ ಕಾರಣದಿಂದ ಶರೀರ, ಮನಸ್ಸಿನ ನೆಮ್ಮದಿಯ ಜೊತೆಗೆ ಆತ್ಮಸಂಸ್ಕಾರಕ್ಕಾಗಿ ಪಿತೃಪಕ್ಷ, ಮಹಾಲಯಗಳಾದ ನಂತರ ಮತ್ತದೇ ಆತ್ಮಸಂಸ್ಕಾರಕ್ಕಾಗಿ ಹಬ್ಬಗಳು ಶರೀರವನ್ನು ತಂಪುಗೊಳಿಸಲು ಶರನ್ನವರಾತ್ರಿವ್ರತ. ನಂತರ ಇಂದ್ರಿಯಗಳನ್ನು ತೃಪ್ತಿಗೊಳಿಸುವ ದೀಪಾವಳಿ. ಆದರೆ ಶರೀರ ವೃದ್ಧಿಗಾಗಿ ಇವೆಲ್ಲದರಲ್ಲಿಯೂ ಸಿಹಿಯೋ ಸಿಹಿ. ಆ ಸಿಹಿ ತಿನ್ನುವಾಗ ಜೊತೆಗೆ ಕಹಿಯನ್ನು ತಿನ್ನಬೇಕೆಂದು ಮರೆಯಬಾರದು. ಇಲ್ಲವಾದಲ್ಲಿ, ತೊಂದರೆಯಾದೀತು. ಕೊನೆಯದಾಗಿ ಬರುವ ಉತ್ಥಾನದ್ವಾದಶೀ ಅಥವಾ ತುಳಸೀಮದುವೆಯಲ್ಲಿ ನೆಲ್ಲಿಮರ ಕಡೆಯುವುದು ಬಿಟ್ಟು, ನೆಲ್ಲಿಮರದ ಬುಡದಲ್ಲಿ ಸಾಮೂಹಿಕವಾಗಿ ಹವನ ಮಾಡಿ ನೆಲ್ಲಿಕಾಯಿಯ ಗುಣವನ್ನು ವೃದ್ಧಿ ಮಾಡಿ ಸೇವಿಸಬೇಕು. ಇಲ್ಲಿಂದ ನಂತರ ನೆಲ್ಲಿ ಷಡ್ರಸೋಪೇತವಾಗಿ ಸೇವನೆಗೆ ಯೋಗ್ಯ.

ಹೀಗೆ ನಮ್ಮ ಹಿರಿಯರು ಪ್ರತಿಯೊಂದು ಪ್ರದೇಶ, ಕಾಲ, ವೃತ್ತಿಗೆ ಅನುಗುಣವಾಗಿ ಬೇರೆ ಬೇರೆ ನಿಯಮಗಳನ್ನು, ವ್ರತಗಳನ್ನು ಹೇಳಿದ್ದಾರೆ. ಅವರವರ ದೇಶ, ಕಾಲ, ವೃತ್ತಿಗನುಗುಣವಾಗಿ ಪಾಲಿಸುವುದರಿಂದ ಆರೋಗ್ಯ ಪಡೆಯಬಹುದು. ಆದರೆ ಇಂದಿನ ವೃತ್ತಿಗಳಿಗನುಗುಣವಾಗಿ ಇದರ ಅಳವಡಿಕೆಗೆ ಚಿಂತನೆ ಇಂದಿನ ಅಗತ್ಯ.

Courtesy : Prajavani.net

http://www.prajavani.net/news/article/2018/03/17/559998.html

Leave a Reply