ಆರೋಗ್ಯ ಅಧ್ಯಾತ್ಮ ಆನಂದ

ಇದೇನು ಪ್ರಾಸಕ್ಕಾಗಿ ಬಳಸಿದ ಶೀರ್ಷಿಕೆ ಎಂದು ಭಾವಿಸಿದಿರೊ? ಅಡ್ಡಿಯಿಲ್ಲ. ಆದರೆ ಆರೋಗ್ಯ ಎಂಬುದಿದ್ದಾಗಲೇ ಅಧ್ಯಾತ್ಮಸಾಧನೆ ಸಾಧ್ಯ, ಮತ್ತು ಆಗಲೇ ಅದರಿಂದ ಆನಂದ ಲಭ್ಯ. ಕಾಳಿದಾಸ ಕೂಡ ತನ್ನ ‘ಕುಮಾರಸಂಭವ’ದಲ್ಲಿ ಹರನ ಬಾಯಿಂದ ನರನ ಬಾಳಿಗೆ ಮುಖ್ಯವಾದ ಸೂತ್ರವೊಂದನ್ನು ತಿಳಿಸಿದ್ದಾನೆ: ‘ಶರೀರಮಾಧ್ಯಂ ಖಲು ಧರ್ಮಸಾಧನಂ. ‘ಶರೀರದ ಮೂಲಕವೇ ಧರ್ಮಸಾಧನೆ’ ಎಂಬುದು ಸಾರಾಂಶ. ಶ್ರೀರಾಮಕೃಷ್ಣರು ತಮ್ಮ ಶಿಷ್ಯರಾದ ಲಾಟುವನ್ನು (ಮುಂದೆ ಸ್ವಾಮಿ ಅದ್ಭುತಾನಂದ) ‘ನಿನಗೇನು ವರ ಬೇಕು?’ ಎಂದಾಗ ಅವರು ‘ಒಳ್ಳೆಯ ಜೀರ್ಣಶಕ್ತಿ ಕೊಡಿ’ ಎಂದರಂತೆ. ಇದೆಂತಹ ವರ ಪಡೆದರು ಎಂದು ಅಚ್ಚರಿಪಡುವಂತಿಲ್ಲ. ‘ಹೊಟ್ಟೆನೋವು ಬಂದರೆ ಧ್ಯಾನ ಮಾಡಬೇಕಾದ ಮನಸ್ಸು ಹೊಟ್ಟೆಯ ಕಡೆ ಧಾವಿಸುತ್ತದೆ. ಆರೋಗ್ಯ ಚೆನ್ನಾಗಿದ್ದಾಗ ಮಾತ್ರ ಉತ್ತಮಸ್ತರದ ಧ್ಯಾನ ಸಾಧ್ಯ’ ಎಂದು ಸ್ವಾಮಿ ಅದ್ಭುತಾನಂದರು ಮುಂದೆ ತಮ್ಮ ಭಕ್ತರಿಗೆ ವಿವರಿಸುತ್ತಾರೆ. ಸಾಧಕನಾದವನು ಇಹಪರಗಳೆರಡರ ಸಾಧನೆಗೆ ಬಳಸುವ ಉಪಕರಣವೇ ದೇಹ. ದೇಹಗತವಾದ ಮನಸ್ಸನ್ನು ಆ ಮಟ್ಟದಿಂದ ಮೇಲಕ್ಕೇರಿಸಬೇಕಾದರೆ ಮೊದಲಿಗೆ ದೇಹದಲ್ಲಿ ಸೌಖ್ಯವಿರಬೇಕು. ಅದಕ್ಕಾಗಿಯೇ ವಿವೇಕಾನಂದರು ‘ಕಬ್ಬಿಣದಂತಹ ಮಾಂಸಖಂಡ,‌ ಉಕ್ಕಿನ ನರಮಂಡಲ’ ಬಯಸಿದ್ದು. ಶಕ್ತಿಯ ಉತ್ಪಾದನೆ, ಶೇಖರಣೆ, ಬಳಕೆ – ಮೂರಕ್ಕೂ ಪಾತ್ರವು ಸಮರ್ಥವಾಗಿರಬೇಕು. ಅಧ್ಯಾತ್ಮಸಾಧನೆಯಲ್ಲಿ ದೇಹ, ಮನಸ್ಸು, ಅಂತಃಕರಣಗಳನ್ನು ಬಳಸಿ ಸೂಕ್ಷ್ಮಶಕ್ತಿಯನ್ನು ಸಂಚಯಿಸುವ ಕೆಲಸವಾಗಬೇಕು. ಏರುಪೇರಾದರೆ ಸಾಧಕನಿಗೆ ತೊಂದರೆ ಆಗಬಹುದು. ಸಣ್ಣಪುಟ್ಟ ಹೊಡೆತಕ್ಕೆ ಶರೀರ ತತ್ತರಿಸಿದರೆ ಮಹತ್ತರ ಅನುಭವಗಳಿಗೆ ಅದು ಬಿದ್ದೇಹೋಗುತ್ತದೆ. ಅಧ್ಯಾತ್ಮಸಾಧನೆ ಯೋಧನ ತರಬೇತಿಯಂತೆ. ಸಾಮಾನ್ಯ ಯುವಕನೊಬ್ಬ ಸೈನ್ಯಕ್ಕೆ ಸೇರಿದ ಬಳಿಕ‌ ಅವನು ಕಠಿಣ ತರಬೇತಿಗೆ ಒಳಪಟ್ಟು ದೇಹ-ಮನಸ್ಸುಗಳನ್ನು ಪಳಗಿಸಿ ಅದನ್ನು ಸದಾಸಿದ್ಧ ಸ್ಥಿತಿಯಲ್ಲಿ, ಅತ್ಯಂತ ಕ್ಷಮತಾಸ್ಥಿತಿಯಲ್ಲಿ ಇರಿಸಿಕೊಳ್ಳುತ್ತಾನೆ. ಅವನ ಆಯ್ಕೆಯೂ ಕೂಡ ಕಠಿಣ ಮಾನದಂಡಗಳಿಂದ ಆಗುವಂತಹದ್ದು. ಇದು ಬಹಿರಂಗದ, ಜಗದ ಯುದ್ಧಕ್ಕೆ ಸಿಪಾಯಿಯ ತಯಾರಿಯಾದರೆ ಇನ್ನು ಅಂತರಂಗದ ಯುದ್ಧಕ್ಕೆ ನಡೆಯುವ ಆಯ್ಕೆ, ತರಬೇತಿ ಇನ್ನೂ ಸೂಕ್ಷ್ಮವೂ ಕಠಿಣವೂ ಆಗಿರುವಂತಹದ್ದು. ಶ್ರೀರಾಮಕೃಷ್ಣರು ತಮ್ಮ ಶಿಷ್ಯರನ್ನು ಸ್ವೀಕರಿಸುವ ಮುನ್ನ ಅವರ ದೈಹಿಕ ಪರೀಕ್ಷೆ ಮಾಡುತ್ತಿದ್ದರು, ದೇಹಲಕ್ಷಣಗಳನ್ನು ಗಮನಿಸುತ್ತಿದ್ದರು ಎಂಬುದು ಅವರ ಜೀವನಚರಿತ್ರೆಯಲ್ಲಿ ದಾಖಲಾಗಿರುವುದನ್ನು‌ ಕಾಣಬಹುದು. ಇಷ್ಟೆಲ್ಲ ಪರೀಕ್ಷೆ, ಪ್ರಯೋಗ, ಪರಿಣತಿಯಿಂದ ಸಾಧಿಸುವುದಾದರೂ ಏನನ್ನು? ಜೀವಿಯ ಪರಮಗುರಿ ಆನಂದ. ಈ ಆನಂದದ ಅನುಭವವನ್ನು ಪ್ರಾಥಮಿಕ ಹಂತದಿಂದ ಉನ್ನತ ಹಂತದವರೆಗೆ ಹೊಂದುವುದೇ ಸಾಧನೆಯ ಕ್ರಮಾನುಗತ ಫಲ. ಕಬ್ಬು, ಬೆಲ್ಲ, ಹೂರಣ, ಜೇನುತುಪ್ಪ – ಹೀಗೆ ಸಿಹಿಯ ಅನುಭವ ಸಾಂದ್ರವಾಗುತ್ತ ಹೋದಂತೆ ಇದು. ಅದು ಹೇಗೆ ಆನಂದದಲ್ಲಿ ಹಂತಗಳು, ಗುಣಕಗಳು ಇವೆ ಎಂಬುದನ್ನು ತೈತ್ತಿರೀಯೋಪನಿಷತ್ತಿನ ಬ್ರಹ್ಮಾನಂದವಲ್ಲಿ ಸೊಗಸಾಗಿ ನಿರೂಪಿಸಿದೆ. ದೃಢಕಾಯನೂ, ಆರೋಗ್ಯವಂತನೂ ಆಗಿರುವ ಯುವಕನು ಏನೇನೆಲ್ಲಾ ಸುಖವನ್ನನುಭವಿಸಬಹುದೋ ಅದಷ್ಟನ್ನೂ ಸೇರಿಸಿದರೆ ಒಂದು ಮಾನುಷ ಆನಂದ. ಮಾನುಷಾನಂದ ಕ್ಕಿಂತ ಸಹಸ್ರ ಕೋಟಿ ಪಾಲು ಹೆಚ್ಚು ಮಟ್ಟದ್ದು ಬ್ರಹ್ಮಾನಂದ ವೆಂಬುದು ಇದರ ಸಾರಾಂಶ. ಬದುಕೆಂಬುದು ಆನಂದದ ಪ್ರಯೋಗಶಾಲೆ. ಆರೋಗ್ಯವಿದ್ದರೆ ಅಧ್ಯಾತ್ಮ, ಅಧ್ಯಾತ್ಮದಿಂದ ಆನಂದ.

author – ರಘು ವಿ.

courtsey:prajavani.net

https://www.prajavani.net/artculture/article-features/spirituality-and-health-703220.html

Leave a Reply