ಅನಾರ್ಕಿ- ಒಂದು ವ್ಯಥೆಯ ಕಥೆ

‘ನಾನು ಪ್ರೀತಿಸುವ ಎಲ್ಲವೂ ಭಾರತದಲ್ಲಿ ಇದೆ’ ಎಂದು ಹೇಳಿಕೊಳ್ಳುವ ಸ್ಕಾಟ್ಲೆಂಡ್ ಮೂಲದ ಲೇಖಕ ವಿಲಿಯಂ ಡಾಲ್ರಿಂಪಲ್ ಭಾರತದ ಬಗ್ಗೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಭಾರತ ತಮ್ಮ ಎರಡನೆಯ ಮನೆ ಎಂದು ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಮೂರು ದಶಕಗಳಿಂದ ಇಲ್ಲಿರುವ ತಮಗೆ ಇದೇ ಮನೆ ಎಂಬ ಪ್ರೀತಿ ಅವರಲ್ಲಿದೆ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಭಾರತದ ಮೇಲೆ ಅಧಿಕಾರ ಸ್ಥಾಪಿಸಿದ ಕಥೆ ಹೇಳುವ ಅವರ ಹೊಸ ಪುಸ್ತಕ ‘ದಿ ಅನಾರ್ಕಿ’. ಷೇರುದಾರರಿಂದ ಹಣ ಸಂಗ್ರಹಿಸಿ, ನಿರ್ದೇಶಕರ ಮಂಡಳಿ ನೀಡುವ ಸೂಚನೆಗಳನ್ನು ಆಧರಿಸಿ ನಡೆಯುವ ಜಾಯಿಂಟ್‌ ಸ್ಟಾಕ್‌ ಕಂಪನಿಗಳು ಇಂದಿನ ಕಾಲಘಟ್ಟಕ್ಕೆ ಅಪರಿಚಿತವೇನೂ ಅಲ್ಲ. ಮಾರುಕಟ್ಟೆ ಆಧಾರಿತ ಅರ್ಥವ್ಯವಸ್ಥೆ, ಮುಕ್ತ ಮಾರುಕಟ್ಟೆ ವ್ಯವಸ್ಥೆ ಪರ ಇರುವವರು ಇಂತಹ ವ್ಯವಸ್ಥೆಯ ಬಗ್ಗೆ ಅಭಿಮಾನದಿಂದ ಮಾತನಾಡುವುದು ಇದೆ. ಷೇರುದಾರರ ಸಂಪತ್ತನ್ನು ವೃದ್ಧಿಸಿಕೊಡುವ ಉದ್ದೇಶದ, ಷೇರುದಾರ ಆಗುವ ಅವಕಾಶವನ್ನು ಎಲ್ಲರಿಗೂ ನೀಡುವ ಈ ವ್ಯವಸ್ಥೆಯ ಬಗ್ಗೆ ಹೆಮ್ಮೆ ಹೊಂದದಿರುವುದು ಹೇಗೆ? ಆದರೆ, ಇಂಥದ್ದೇ ಒಂದು ಕಂಪನಿ ಭಾರತ ಉಪಖಂಡದಲ್ಲಿ ನಡೆಸಿದ ಲೂಟಿ, ಇಲ್ಲಿ ತೋರಿದ ಕ್ರೌರ್ಯ, ತನ್ನ ತವರಿನಿಂದ ಸಹಸ್ರಾರು ಕಿಲೋಮೀಟರ್‌ ದೂರದ ನಾಡಿನಲ್ಲಿ ಒಂದು ಸಾಮ್ರಾಜ್ಯ ಸ್ಥಾಪಿಸಿದ ಕಥೆಯನ್ನು ಲೇಖಕ ವಿಲಿಯಂ ಡಾಲ್ರಿಂಪಲ್ ಅವರಿಂದ ಕೇಳಿದರೆ – ಅದರಲ್ಲೂ, ಈ ಕಂಪನಿ ತನ್ನದೇ ಆದ ಸೈನ್ಯವನ್ನು ಹೊಂದಿದ್ದು, ಆ ಸೈನ್ಯವು ಕಂಪನಿಯ ಮಾತೃದೇಶದ ಸೈನ್ಯಕ್ಕಿಂತಲೂ ದೊಡ್ಡದಾಗಿತ್ತು ಎಂಬ ವಿವರಗಳನ್ನು ಕೇಳಿದರೆ – ಅಬ್ಬಾ ಅನಿಸದೆ ಇರದು! ಹೌದು, ಇಲ್ಲಿ ಮಾತನಾಡುತ್ತಿರುವುದು ಭಾರತೀಯರು ಎಂದಿಗೂ ಮರೆಯಲಾಗದ, ಮರೆಯಬಾರದ ಬ್ರಿಟಿಷ್ ಈಸ್ಟ್‌ ಇಂಡಿಯಾ ಕಂಪನಿ ಬಗ್ಗೆ… ಡಾಲ್ರಿಂಪಲ್‌ ಹೇಳುವ ನೋವಿನ ಈ ಕಥೆಯ ಒಂದು ಎಳೆ ಇಲ್ಲಿದೆ: ‘1803ರ ಸುಮಾರಿಗೆ ಕಂಪನಿಯ ಖಾಸಗಿ ಸೇನೆಯಲ್ಲಿನ ಸೈನಿಕರ ಸಂಖ್ಯೆ ಎರಡು ಲಕ್ಷಕ್ಕೆ ಏರಿಕೆಯಾಗಿತ್ತು. ಇದು ಒಂದಿಡೀ ಉಪಖಂಡವನ್ನು ನೇರವಾಗಿ ವಶದಲ್ಲಿ ಇರಿಸಿಕೊಂಡಿತ್ತು. ಬೆರಗುಗೊಳಿಸುವ ಸಂಗತಿ ಅಂದರೆ, ಅರ್ಧ ಶತಮಾನಕ್ಕೂ ಕಡಿಮೆ ಅವಧಿಯಲ್ಲಿ ಇಷ್ಟೆಲ್ಲ ನಡೆದುಹೋಗಿತ್ತು. 1803ರ ಹೊತ್ತಿಗೆ ಕಂಪನಿಯ ವ್ಯಾಪ್ತಿಯು ಉತ್ತರದಲ್ಲಿ ಮೊಘಲ್ ರಾಜಧಾನಿ ದೆಹಲಿಯವರೆಗೆ ಹರಡಿತ್ತು. ದೆಹಲಿಯಿಂದ ದಕ್ಷಿಣಕ್ಕೆ ಬಹುತೇಕ ಎಲ್ಲ ಪ್ರದೇಶಗಳೂ ಲಂಡನ್ನಿನಲ್ಲಿ ಇರುವ ಆ ಕಂಪನಿಯ ಬೋರ್ಡ್‌ರೂಮಿನ (ಕಂಪನಿಯ ನಿರ್ದೇಶಕರು ಸಭೆ ನಡೆಸುವ ಸ್ಥಳ) ನಿಯಂತ್ರಣಕ್ಕೆ ಒಳಪಟ್ಟಿದ್ದವು.’’ ‘ನಾವು ಇಂದಿಗೂ ಬ್ರಿಟಿಷರು ಭಾರತವನ್ನು ವಶಪಡಿಸಿಕೊಂಡಿದ್ದರ ಬಗ್ಗೆ ಮಾತನಾಡುತ್ತೇವೆ. ಆದರೆ, ಈ ಮಾತು ಕೆಟ್ಟ ಸಂಗತಿಯೊಂದನ್ನು ಮರೆಮಾಚಿಬಿಡುತ್ತದೆ. ಭಾರತದ ದೊಡ್ಡ ಭೂಭಾಗಗಳನ್ನು ವಶಕ್ಕೆ ತೆಗೆದುಕೊಳ್ಳಲು ಆರಂಭಿಸಿದ್ದು ಬ್ರಿಟಿಷ್ ಸರ್ಕಾರ ಅಲ್ಲ. ಆ ಕೆಲಸ ಮಾಡಿದ್ದು ಲಂಡನ್ನಿನಲ್ಲಿ ಒಂದು ಸಣ್ಣ ಕಚೇರಿಯನ್ನು ಕೇಂದ್ರಸ್ಥಾನವಾಗಿ ಹೊಂದಿದ್ದ ಒಂದು ಅನಿಯಂತ್ರಿತ ಖಾಸಗಿ ಕಂಪನಿ. ಆ ಅನಿಯಂತ್ರಣ ಎಂಬುದು ಅಪಾಯಕಾರಿ ಮಟ್ಟದ್ದಾಗಿತ್ತು. ಆ ಕಂಪನಿಯ ಭಾರತದಲ್ಲಿನ ಚಟುವಟಿಕೆಗಳನ್ನು ನಿಭಾಯಿಸುತ್ತ ಇದ್ದಿದ್ದು ಒಂಚೂರೂ ಕನಿಕರ ಇಲ್ಲದಿದ್ದ, ಆಗಾಗ ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳುತ್ತಿದ್ದ ಕಾರ್ಪೊರೇಟ್ ಶೋಷಕ ಕ್ಲೈವ್. ಭಾರತವು ವಸಾಹತುಶಾಹಿ ವ್ಯವಸ್ಥೆಗೆ ಹೊರಳಿಕೊಂಡಿದ್ದು ಲಾಭಕ್ಕಾಗಿ ಹುಟ್ಟಿಕೊಂಡಿದ್ದ ಕಂಪನಿಯೊಂದರಿಂದ – ಈ ಕಂಪನಿಯ ಅಸ್ತಿತ್ವ ಇದ್ದಿದ್ದೇ ತನ್ನ ಷೇರುದಾರರ ಸಂಪತ್ತನ್ನು ವೃದ್ಧಿಸುವುದಕ್ಕೆ.’ ಭಾರತದ ಬಗ್ಗೆ ಬಹಳ ಪ್ರೀತಿಯಿಂದ ಬರೆಯುತ್ತ ಬಂದಿರುವ ವಿದೇಶಿ ಮೂಲದ ಲೇಖಕರಲ್ಲಿ ಡಾಲ್ರಿಂಪಲ್ ಕೂಡ ಒಬ್ಬರು. ‘ಅನಾರ್ಕಿ’ ಎಂಬ ಹೆಸರಿನಲ್ಲಿ ಅವರು ಬರೆದಿರುವ ಹೊಸ ಪುಸ್ತಕದಲ್ಲಿರುವ, ಈಸ್ಟ್ ಇಂಡಿಯಾ ಕಂಪನಿ ಕುರಿತ ವಿಚಾರಗಳು ಓದುಗರ ವಲಯದಲ್ಲಿ ಬಿರುಸಿನ ಚರ್ಚೆಗೆ ಕಾರಣವಾಗುತ್ತಿವೆ. ತಮ್ಮ ಪುಸ್ತಕಕ್ಕೆ ಸಂಬಂಧಿಸಿದ ಕಾರ್ಯಕ್ರಮದ ಸಲುವಾಗಿ ಬೆಂಗಳೂರಿಗೆ ಬಂದಿದ್ದ ಅವರು, ‘ಭಾನುವಾರದ ಪುರವಣಿ’ ಜೊತೆ ಮಾತಿಗೆ ಸಿಕ್ಕಿದ್ದರು. ಮಾತುಕತೆಯು ಪೂರ್ತಿಯಾಗಿ ಈ ಪುಸ್ತಕದ ಸುತ್ತವೇ ಗಿರಕಿ ಹೊಡೆಯುತ್ತಿತ್ತು. ‘ಇಂಗ್ಲೆಂಡಿನಲ್ಲಿ ಸ್ಥಾಪನೆಯಾದ ಕಂಪನಿ ಭಾರತಕ್ಕೆ ಬಂದಿದ್ದು, ತಾನು ಪೂರ್ತಿಯಾಗಿ ತಿಳಿದಿರದಿದ್ದ ಈ ದೇಶವನ್ನು ಆಳಲು ಶುರು ಮಾಡಿದ್ದು… ಇವೆಲ್ಲ ಹೇಗೆ ಸಾಧ್ಯವಾಯಿತು’ ಎನ್ನುವುದು ಡಾಲ್ರಿಂಪಲ್ ಅವರ ಎದುರು ಆರಂಭದಲ್ಲಿ ಇರಿಸಿದ ಪ್ರಶ್ನೆಯಾಗಿತ್ತು. ಇದಕ್ಕೆ ಅವರು ನೀಡಿದ ಉತ್ತರ ಸುದೀರ್ಘವಾಗಿ ಇತ್ತು. ‘ಇದೊಂದು ದೊಡ್ಡ ಪ್ರಶ್ನೆ’ ಎನ್ನುತ್ತ ಮಾತು ಆರಂಭಿಸಿದರು. ‘ಈ ಪುಸ್ತಕದಲ್ಲಿ (ಅನಾರ್ಕಿ) ಇರುವ ಅಸಾಮಾನ್ಯ ಕಥೆ ಇದುವೇ. ಪುಸ್ತಕದ 600 ಪುಟಗಳು ಈ ಕಥೆ ಹೇಳಲು ಯತ್ನಿಸಿವೆ. ವಾಸ್ತವದಲ್ಲಿ ಹೀಗಾಗಿತ್ತೇ ಎಂಬ ಪ್ರಶ್ನೆ ಮೂಡುವಂತಹ ಕಥೆ ಇದು. ಒಂದು ಕಂಪನಿ ಒಂದು ಸಾಮ್ರಾಜ್ಯವನ್ನು ಆಕ್ರಮಿಸಿಕೊಂಡಿದ್ದು ಮಾತ್ರವೇ ಅಲ್ಲ ನಾವು ನೋಡಬೇಕಾಗಿರುವುದು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಸ್ಥಾಪನೆ ಆದಾಗ ವಿಶ್ವದ ಜಿಡಿಪಿಗೆ (ಒಟ್ಟು ಆಂತರಿಕ ಉತ್ಪನ್ನ) ಇಂಗ್ಲೆಂಡಿನ ಕೊಡುಗೆ ಶೇಕಡ 1.7ರಷ್ಟಿತ್ತು. ಆದರೆ, ಆ ಹೊತ್ತಿನಲ್ಲಿ ವಿಶ್ವದ ಜಿಡಿಪಿಗೆ ಮೊಘಲ್ ಸಾಮ್ರಾಜ್ಯ ನೀಡುತ್ತಿದ್ದ ಕೊಡುಗೆಯು ಶೇಕಡ 37.3ರಷ್ಟಿತ್ತು! ಮೊಘಲ್ ಸಾಮ್ರಾಜ್ಯ ಆ ಸಂದರ್ಭದಲ್ಲಿ ವಿಶ್ವದ ಅತಿದೊಡ್ಡ ಕೈಗಾರಿಕಾ ಶಕ್ತಿ ಕೂಡ ಆಗಿತ್ತು – ಅಂದರೆ, ಚೀನಾಕ್ಕಿಂತಲೂ ಅದು ದೊಡ್ಡದಾಗಿತ್ತು. ಹೀಗಿದ್ದರೂ ಒಂದು ಕಂಪನಿ ದೂರದಿಂದ ಬಂದು ಈ ದೇಶದಲ್ಲಿ ಸಾಮ್ರಾಜ್ಯ ಕಟ್ಟಿತು. ಇದಕ್ಕೆ ಮೂರು ಕಾರಣಗಳು ಪ್ರಮುಖವಾಗುತ್ತವೆ’ ಎಂದರು ಸ್ಕಾಟ್ಲೆಂಡ್‌ ಮೂಲದ, ಈಗ ನವದೆಹಲಿಯಲ್ಲಿ ನೆಲೆಸಿರುವ ಈ ಲೇಖಕ. ಈಸ್ಟ್‌ ಇಂಡಿಯಾ ಕಂಪನಿಯು ಭಾರತದಲ್ಲಿ ನೆಲೆ ಕಂಡುಕೊಳ್ಳುವುದಕ್ಕೆ ಡಾಲ್ರಿಂಪಲ್ ನೀಡಿದ ಮೂರು ಕಾರಣಗಳು ಹೀಗಿವೆ: 1) ಬಹಳ ಸುಧಾರಿತವಾಗಿದ್ದ ಮಿಲಿಟರಿ ತಂತ್ರಜ್ಞಾನ ಆಗ ಕಂಪನಿಯ ಬಳಿ ಇತ್ತು. 1750ರ ಸುಮಾರಿಗೆ ಕಂಪನಿಯು ಭಾರತದಲ್ಲಿ ಯುದ್ಧಗಳನ್ನು ಆರಂಭಿಸಿದ ವೇಳೆಗೆ, ಯುರೋಪಿನಲ್ಲಿ ಎರಡು ದೊಡ್ಡ ಯುದ್ಧಗಳು ಮಾತ್ರ ನಡೆದಿದ್ದವು. ಪ್ರಷ್ಯಾದ ಆಡಳಿತಗಾರನಾಗಿದ್ದ ಫ್ರೆಡ್ರಿಕ್ ದಿ ಗ್ರೇಟ್, ಆರ್ಟಿಲ್ಲರಿ ತಂತ್ರಜ್ಞಾನ, ಪದಾತಿ ದಳ (ಇನ್‌ಫೆಂಟ್ರಿ) ಬಳಕೆ ಸೇರಿದಂತೆ ಮಿಲಿಟರಿಯಲ್ಲಿ ಹಲವು ಹೊಸ ತಂತ್ರಗಳನ್ನು ಅನುಸರಿಸಿದ್ದ. ಆತ ಯುದ್ಧದ ಸ್ವರೂಪವನ್ನೇ ಬದಲಾಯಿಸಿದ್ದ. ಬ್ರಿಟಿಷ್ ಈಸ್ಟ್‌ ಇಂಡಿಯಾ ಕಂಪನಿ ಮತ್ತು ಫ್ರೆಂಚ್‌ ಈಸ್ಟ್ ಇಂಡಿಯಾ ಕಂಪನಿ ಇವನ್ನೆಲ್ಲ ಭಾರತದಲ್ಲಿ ಏಕಕಾಲಕ್ಕೆ ಬಳಕೆಗೆ ತಂದವು. ಈ ತಂತ್ರಗಳ ಎದುರು ಮೊಘಲರ ಸೇನೆಯ ಬಳಿ ಪ್ರತಿತಂತ್ರ ಇರಲಿಲ್ಲ. 1780ರ ಸುಮಾರಿಗೆ ಭಾರತದ ಸೈನಿಕರೂ ಹೊಸ ತಂತ್ರಗಳನ್ನು ಕಲಿತುಕೊಂಡರು. ಆದರೆ 1740ಯಿಂದ 1780ರ ವರೆಗಿನ ಅವಧಿಯಲ್ಲಿ ಭಾರತದ ಸೈನಿಕರು ಸೋಲು ಕಾಣಬೇಕಾಯಿತು. 2) ಮೊಘಲರ ಬಳಿ ಆ ಸಂದರ್ಭದಲ್ಲಿ 40 ಲಕ್ಷ ಸೈನಿಕರು ಇದ್ದರು ಎಂಬುದನ್ನು ಗುರುತಿಸಬೇಕು. ಅವರದ್ದು ಬಲಿಷ್ಠ ಸಾಮ್ರಾಜ್ಯ ಆಗಿತ್ತು. ಅಂಥದ್ದೊಂದು ಸಾಮ್ರಾಜ್ಯವನ್ನು ಎದುರಿಸುವುದು ಕಂಪನಿಗೆ ಸುಲಭದ ಕೆಲಸ ಆಗಿರಲಿಲ್ಲ. ಆದರೆ, ನಾದೆರ್ ಶಾ ದೆಹಲಿಯ ಮೇಲೆ ಆಕ್ರಮಣ ನಡೆಸಿ, ಅಲ್ಲಿನ ಸಂಪತ್ತನ್ನು ಸೂರೆಗೈದ ನಂತರದಲ್ಲಿ, ಭಾರತದಲ್ಲಿ ಹತ್ತೆಂಟು ಸಾಮ್ರಾಜ್ಯಗಳು ಹುಟ್ಟಿಕೊಂಡವು. ದಕ್ಷಿಣದಲ್ಲಿ ಟಿಪ್ಪು, ತುಸು ಮೇಲೆ ಮರಾಠರು, ಸಿಖ್ಖರು, ಜಾಟರು… ಹೀಗೆ ಬೇರೆ ಬೇರೆ ಸಾಮ್ರಾಜ್ಯಗಳು ಹುಟ್ಟಿದವು. ಈ ಸಾಮ್ರಾಜ್ಯಗಳೆಲ್ಲ ಶಕ್ತಿಯುತವೇ ಆಗಿದ್ದರೂ, ಕಂಪನಿಯ ಎದುರು ಇವು ದುರ್ಬಲವಾಗಿದ್ದವು. ಇವುಗಳನ್ನೆಲ್ಲ ಒಂದಾದ ನಂತರ ಒಂದರಂತೆ ಕಂಪನಿ ವಶಪಡಿಸಿಕೊಂಡಿತು.3) ಭಾರತೀಯರು ಕೂಡ ಕಂಪನಿಗೆ ಬೆಂಬಲ ನೀಡಿದರು. ಇದು ಒಂದಿಷ್ಟು ಕಸಿವಿಸಿ ತರುವ ಕಥೆ. ಭಾರತದ ರಾಷ್ಟ್ರೀಯವಾದಿ ‍ಪಠ್ಯಗಳಲ್ಲಿ ಇದರ ಬಗ್ಗೆ ವಿವರ ಇಲ್ಲ. ಆದರೆ ವಾಸ್ತವದಲ್ಲಿ, ಮಾರ್ವಾರಿಗಳು, ಬನಾರಸ್‌ ಮತ್ತು ಪಟ್ನಾದ ಹಿಂದೂ ಬ್ಯಾಂಕರ್‌ಗಳು ಕಂಪನಿಯನ್ನು ಆರಂಭದಿಂದಲೂ ಬೆಂಬಲಿಸಿದರು. ಅವರು ವಿದೇಶಿ ಕಂಪನಿಯೊಂದನ್ನು ಏಕೆ ಬೆಂಬಲಿಸಿದರು ಎಂಬ ಪ್ರಶ್ನೆ ಇಲ್ಲಿ ಎದುರಾಗುತ್ತದೆ. ತಮ್ಮ ಹಣಕ್ಕೆ ಆ ಕಂಪನಿ ಸುರಕ್ಷಿತ ಸ್ಥಳ ಎಂದು ಅವರು ಭಾವಿಸಿದ್ದರು. ಕಂಪನಿಯಲ್ಲಿ ಹೂಡಿಕೆ ಮಾಡಿದರೆ ತಮ್ಮ ಹಣ ಸುರಕ್ಷಿತ ಎಂದು ಅವರು ತಿಳಿದಿದ್ದರು. ಕಂಪನಿ ಕೂಡ ಅವರ ಹಣವನ್ನು ಬಡ್ಡಿ ಸಮೇತ ಸಕಾಲದಲ್ಲಿ ಮರುಪಾವತಿ ಮಾಡುತ್ತಿತ್ತು. ಕಂಪನಿಯವರು ವಿದೇಶಿಗರೂ ಬೇರೆ ಧರ್ಮದವರೂ ಆಗಿದ್ದರೂ ಹಣಕಾಸಿನ ವಿಚಾರದಲ್ಲಿ ಅವರು ವಿಶ್ವಾಸ ಸಂಪಾದಿಸಿದ್ದರು. ಬಂಗಾಳದಲ್ಲಿ ಬಹಳಷ್ಟು ಜನ ಈ ಕಂಪನಿಯನ್ನು ಅತ್ಯಂತ ಕಡಿಮೆ ರಿಸ್ಕ್ ಇರುವ ಹೂಡಿಕೆ ಸ್ಥಳ ಎಂದು ಭಾವಿಸಿದ್ದರು. ಬಂಗಾಳದಲ್ಲಿ ಕಂಪನಿಗೆ ಜನರಿಂದ ಬೆಂಬಲ ದೊರೆಯಿತು. ಆಧುನಿಕ ಸಂದರ್ಭದಲ್ಲಿ ಯಾವುದೇ ಪ್ರಜಾತಂತ್ರ ರಾಷ್ಟ್ರ ಒಂದು ಕಂಪನಿಗೆ ತನ್ನದೇ ಆದ ಶಸ್ತ್ರಸಜ್ಜಿತ ಸೇನೆಯನ್ನು ಹೊಂದಲು ಅವಕಾಶ ನೀಡುವುದಿಲ್ಲ. ರಾಷ್ಟ್ರ ಮಾತ್ರ ಸೇನೆಯನ್ನು ಹೊಂದಬಹುದು. ಆದರೆ ಯಕಶ್ಚಿತ್ ಕಂಪನಿ ಮಾತ್ರವೇ ಆಗಿದ್ದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ತನ್ನದೇ ಆದ ಸೇನೆಯನ್ನು ಹೊಂದಿತ್ತು! ಇದು ಕೂಡ ಇಂದಿನ ಸಂದರ್ಭದಲ್ಲಿ ನಿಂತು ನೋಡಿದಾಗ ಸೋಜಿಗವಾಗಿಯೇ ಕಾಣುತ್ತದೆ. ಕಂಪನಿಯೊಂದು ಸೇನೆಯನ್ನು ಹೊಂದುವುದು ‘ಅನಾರ್ಕಿ’ಯ (ಅರಾಜಕತೆ) ಒಂದು ಸಂಕೇತವಾಗಿ ಕಾಣುತ್ತದೆ. ಕಂಪನಿಯು ತನ್ನದೇ ಸೈನ್ಯ ಹೊಂದಿದ್ದರ ಬಗ್ಗೆ ಡಾಲ್ರಿಂಪಲ್ ಹೇಳುವುದು ಹೀಗೆ: ‘ಕಂಪನಿಯೊಂದು ತನ್ನದೇ ಆದ ಸೈನ್ಯವನ್ನು ಹೊಂದುವುದು ಈಗಂತೂ ಸಾಧ್ಯವಿಲ್ಲ. ಆದರೆ, 1799ರ ಹೊತ್ತಿನಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಸೇನೆಯು ಬ್ರಿಟಿಷ್ ಸೇನೆಗಿಂತ ಎರಡು ಪಟ್ಟು ದೊಡ್ಡದಾಗಿತ್ತು! 1,00,000 ಸೈನಿಕರು ಬ್ರಿಟನ್ನಿನಲ್ಲಿ ಇದ್ದರು; 2,00,000 ಸೈನಿಕರು ಕಂಪನಿಯ ಬಳಿ ಇದ್ದರು. ಈ ಕಂಪನಿಯು ಒಂದು ಸಾಮ್ರಾಜ್ಯದೊಳಗೆ ಇನ್ನೊಂದು ಸಾಮ್ರಾಜ್ಯ ಎಂಬಂತೆ ಇತ್ತು. ಕಂಪನಿಗೆ ಆಫ್ರಿಕಾದಿಂದ ಪೂರ್ವಕ್ಕೆ ಯುದ್ಧ ನಡೆಸುವ ಅಧಿಕಾರ ಕೂಡ ಇತ್ತು!’ ಈಸ್ಟ್ ಇಂಡಿಯಾ ಕಂಪನಿಯ ಅಗಾಧ ಶಕ್ತಿ ಬ್ರಿಟನ್ನಿನ ಜನರಲ್ಲಿ ಆಶ್ಚರ್ಯ ಹುಟ್ಟಿಸಿತ್ತು, ಅವರಲ್ಲಿ ಪ್ರಶ್ನೆಗಳನ್ನು ಮೂಡಿಸಿತ್ತು ಎನ್ನುತ್ತಾರೆ ಡಾಲ್ರಿಂಪಲ್. ‘ಕಂಪನಿಯ ಇಂತಹ ಅಸ್ತಿತ್ವವೇ ಅಪಾಯಕಾರಿ. ಅಪಾಯ ಇರುವುದು ಕಂಪನಿಯ ಆಡಳಿತದ ಅಡಿಯಲ್ಲಿ ಇರುವ ಪ್ರಜೆಗಳಿಗೆ ಮಾತ್ರವೇ ಅಲ್ಲ. ಬ್ರಿಟನ್ನಿನ ಪ್ರಭುತ್ವದ ಸ್ಥಿರತೆಗೆ ಕೂಡ ಇದು ಅಪಾಯಕಾರಿ’ ಎಂದು ಬ್ರಿಟನ್ನಿನ ಸಂಸದರೊಬ್ಬರು ಆ ಹೊತ್ತಿನಲ್ಲಿ ಕಳವಳ ವ್ಯಕ್ತಪಡಿಸಿದ್ದರಂತೆ. ಒಂದು ಕಂಪನಿ ಇಷ್ಟೊಂದು ಶಕ್ತಿಶಾಲಿ ಆಗಿದ್ದು ಹೇಗೆ ಎಂದೂ ಅವರು ಪ್ರಶ್ನಿಸಿದ್ದರಂತೆ. ಬ್ರಿಟನ್ನಿನ ಮಹಾರಾಣಿ ವಿಕ್ಟೋರಿಯಾ, ಕಂಪನಿ ನಡೆಸಿದ ಕೃತ್ಯಗಳನ್ನು ತಿಳಿದು ದಿಗಿಲುಗೊಂಡಿದ್ದಳು. ‘ವಿಕ್ಟೋರಿಯಾ ರಾಣಿಯು ಆಗ್ರಾದ ಅಬ್ದುಲ್ ಎಂಬುವವನಿಂದ ಉರ್ದು ಹೇಳಿಸಿಕೊಳ್ಳುತ್ತಿದ್ದಳು. ಆತ, ರಾಣಿಗೆ ಕಂಪನಿಯ ಬಗ್ಗೆ ಭಾರತೀಯರು ಹೊಂದಿರುವ ಅನಿಸಿಕೆಯನ್ನು ತಿಳಿಸುತ್ತಾನೆ. ಅದನ್ನು ಕೇಳಿ ರಾಣಿ, ದಿಗಿಲುಗೊಂಡಿದ್ದಳು’ ಎಂಬುದನ್ನು ಈ ಪುಸ್ತಕ ಬರೆಯಲು ಬೇಕಿದ್ದ ಸಂಶೋಧನೆಯ ಸಂದರ್ಭದಲ್ಲಿ ಡಾಲ್ರಿಂಪಲ್‌ ಕಂಡುಕೊಂಡಿದ್ದಾರೆ. ‘ಕಂಪನಿಯು ಬ್ರಿಟನ್ನಿನಿಂದ ಬಹುದೂರದಲ್ಲಿ ಇತ್ತು, ಅದರ ಎಲ್ಲ ಚಟುವಟಿಕೆಗಳ ಮೇಲೆ ಕಣ್ಗಾವಲು ಇರಲಿಲ್ಲ. ಕಂಪನಿಯ ನಿರ್ದೇಶಕರು ಕೂಡ ದೂರದಲ್ಲಿ ಇದ್ದರು. ನಮಗೆ ಯುದ್ಧ ಬೇಡ, ನಮಗೆ ವ್ಯಾಪಾರ–ಲಾಭ ಮಾತ್ರ ಸಾಕು ಎಂದು ಅವರು ಹೇಳುತ್ತಿದ್ದರು’ ಎನ್ನುತ್ತಾರೆ ಡಾಲ್ರಿಂಪಲ್. ಕಂಪನಿಯ ಬಹುತೇಕ ಕ್ರೌರ್ಯಗಳು ಆ ಸಂದರ್ಭದಲ್ಲಿ, ಗೊತ್ತಾಗಬೇಕಾದವರಿಗೆ ಗೊತ್ತಾಗಿರಲೇ ಇಲ್ಲ! ಆದರೆ, ಕಂಪನಿ ನಡೆಸಿದ ಕ್ರೌರ್ಯ, ಭಾರತೀಯರ ಜೀವಕ್ಕೆ ಅದು ನೀಡುತ್ತಿದ್ದುದು ತೃಣಮಾತ್ರದ ಬೆಲೆ ಎಂಬುದು ಗೊತ್ತಾದಾಗ ಬ್ರಿಟನ್ನಿನ ಸುಶಿಕ್ಷಿತ ವರ್ಗ ಹೌಹಾರಿತ್ತು ಎಂದು ಡಾಲ್ರಿಂಪಲ್ ಹೇಳುತ್ತಾರೆ. ಭಾರತದ ಬಗ್ಗೆ, ಭಾರತೀಯರ ಬಗ್ಗೆ ಬ್ರಿಟನ್ನಿನಲ್ಲಿ ಬಹುಕಾಲದವರೆಗೆ ಸಂಪೂರ್ಣ ಮಾಹಿತಿ ಇರಲಿಲ್ಲ. ‘ಕಂಪನಿಯವರು ಭಾರತದಲ್ಲಿ ಹಣ ಮಾಡುತ್ತಿದ್ದಾರೆ ಎಂಬುದು ಅಲ್ಲಿನವರಿಗೆ ಗೊತ್ತಿತ್ತು. ಆದರೆ ಹೇಗೆ ಹಣ ಸಂಪಾದಿಸುತ್ತಿದ್ದಾರೆ ಎಂಬುದರ ವಿವರ ಅವರಲ್ಲಿ ಇರಲಿಲ್ಲ. ಅವಿಭಜಿತ ಬಂಗಾಳ 1770ರ ಸುಮಾರಿಗೆ ಅನುಭವಿಸಿದ ಬರಗಾಲದ ಘೋರ ಚಿತ್ರಣ ಅಂದಿನ ಬ್ರಿಟಿಷ್ ಪತ್ರಿಕೆಗಳಲ್ಲಿ ವರದಿ ರೂಪದಲ್ಲಿ ಬರುತ್ತಿತ್ತು. ಬಂಗಾಳದಲ್ಲಿ ಬರಗಾಲಕ್ಕೆ ಸಿಲುಕಿ 10 ಲಕ್ಷ ಜನ ಸತ್ತ ಸುದ್ದಿಗಳು ಅಲ್ಲಿ ಪ್ರಕಟವಾದವು. ಬರಗಾಲದ ಸುದ್ದಿ ಪ್ರಕಟವಾದ ಪತ್ರಿಕೆಗಳ ದಪ್ಪನೆಯ ಒಂದು ಕಟ್ಟು ನನಗೆ ಈ ಪುಸ್ತಕಕ್ಕಾಗಿ ಕೆಲಸ ಮಾಡುವಾಗ ಸಿಕ್ಕಿದೆ. ಬರಗಾಲವನ್ನು ನಿಭಾಯಿಸಿದ ಬಗೆಯ ವಿಚಾರವಾಗಿ ಪತ್ರಿಕೆಗಳಲ್ಲಿ ಆಕ್ರೋಶ ಕೂಡ ವ್ಯಕ್ತವಾಗಿತ್ತು’ ಎಂದು ಡಾಲ್ರಿಂಪಲ್ ಹೇಳುತ್ತಾರೆ. ಕಂಪನಿಯು ಭಾರತದಲ್ಲಿ ನಡೆಸಿದ ಲೂಟಿಯ ಪರಿಣಾಮವಾಗಿ, ಅದರ ಅಧಿಕಾರಿಯಾಗಿದ್ದ ರಾಬರ್ಟ್‌ ಕ್ಲೈವ್‌ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಬದಲಾದ! ಕಂಪನಿಯ ಅಧಿಕಾರಿಗಳು 3 ಮಿಲಿಯನ್‌ ಪೌಂಡ್‌ಗಳಷ್ಟು ಹಣವನ್ನು ಭಾರತದಿಂದ ತವರಿಗೆ ರವಾನಿಸುತ್ತಿದ್ದರು. ಇದನ್ನು ಭಾರತದ ಆರ್ಥಿಕ ಇತಿಹಾಸಕಾರರು ಸಂಪತ್ತಿನ ವಲಸೆ ಎಂದರು! ‘ಕಂಪನಿಯಲ್ಲಿ ಇದ್ದುದು ಬಹಳ ಕಡಿಮೆ ಸಂಖ್ಯೆಯ ಕಾಯಂ ನೌಕರರು. ಆದರೆ ಅವರು ನಡೆಸಿದ ಕಾರ್ಪೊರೇಟ್ ಕ್ರಾಂತಿಗೆ ಸಮನಾದದ್ದು ವಿಶ್ವದ ಇತಿಹಾಸದಲ್ಲಿ ಇನ್ಯಾವುದೂ ಇಲ್ಲ. ಕಾರ್ಪೊರೇಟ್ ಹಿಂಸೆಯ ಅತ್ಯುನ್ನತ ಉದಾಹರಣೆಯಾಗಿ ಬಹುತೇಕ ಇಂದಿಗೂ ಕಾಣಿಸುವುದು ಈ ಕಂಪನಿಯ ಕೃತ್ಯಗಳೇ’ ಎಂದು ಪುಸ್ತಕದಲ್ಲಿ ಬರೆಯಲಾಗಿದೆ. ಈ ಮಾತುಗಳು, ಬಹುಶಃ, ಡಾಲ್ರಿಂಪಲ್ ಅವರು ಈ ಕಂಪನಿಯನ್ನು ಕಂಡಿರುವ ಬಗೆಯನ್ನು ಹಿಡಿದಿಡುತ್ತವೆ, ಕಂಪನಿಯ ಅಧಿಕಾರಿಗಳ ಕೈಯಲ್ಲಿ ಭಾರತೀಯರು ಅನುಭವಿಸಿದ ಸಂಕಟವನ್ನು ಕೂಡ ಹೇಳುತ್ತವೆ.

author- ವಿಜಯ್ ಜೋಷಿ

courtsey:prajavani.net

https://www.prajavani.net/artculture/article-features/william-dalrymple-674478.html

,

Leave a Reply