ಅಂತರರಾಷ್ಟ್ರೀಯ ಪುರುಷರ ದಿನ: ಓಹ್‌ ಗಂಡಸೇ,ನೀನೆಷ್ಟು ಒಳ್ಳೆಯವನು..!

ಕಣ್ತುಂಬ ಪ್ರೀತಿ ತುಂಬಿ, ಮುಟ್ಟಿದರೆಲ್ಲಿ ಮಾಸುವುದೋ ಎಂಬಂತೆ ಮಗುವನ್ನು ಎತ್ತಿಕೊಂಡಾಗಲೇ ಒಬ್ಬ ಪುರುಷನಲ್ಲಿ ಅಂತಃಕರಣ ಸ್ಫುರಿಸುತ್ತದೆ. ಮಗುವಿನೊಂದಿಗೆ ಅಪ್ಪ ಹುಟ್ಟುವುದು ಅಲ್ಲಿಯೇ.. ಆ ಕ್ಷಣದಲ್ಲಿಯೇ! ಉದ್ದಾನುದ್ದ ಬಲಿಷ್ಠ ಬಾಹುಗಳಲ್ಲಿ ಮಗುವನ್ನು ಮುಚ್ಚಟೆಯಿಂದ ಮೊದಲ ಸಲ ಎತ್ತಿಕೊಂಡಾಗಲೇ ರಟ್ಟೆಯ ಬಲ ಹೆಚ್ಚಿಸಬೇಕು ಎನ್ನುವ ಜವಾಬ್ದಾರಿ. ಅಲ್ಲಿವರೆಗೂ ತನ್ನ ಬಗ್ಗೆ ಮಾತ್ರ ಯೋಚಿಸುತ್ತಿದ್ದವ ಇದ್ದಕ್ಕಿದ್ದಂತೆ ವ್ಯಕ್ತಿತ್ವ ಮಗ್ಗುಲು ಬದಲಿಸುತ್ತದೆ. ಅಪ್ಪ, ಅಮ್ಮ ತನಗೆ ಮಾತ್ರ ಎಂದುಕೊಂಡ ಮಗನಿಗೆ ತೊಟ್ಟಿಲಲ್ಲಿ ಪುಟ್ಟ ಮಗು ಕಣ್ಣರಳಿಸಿದಾಗ, ಅಣ್ಣನಾದ ಸಂಭ್ರಮ. ದೊಡ್ಡವನೆನ್ನುವ ಪಟ್ಟ. ತೊಟ್ಟಿಲು ತೂಗುವ ಪುಟ್ಟಣ್ಣನಿಗೆ ಮಗು ನಕ್ಕರೆ ಸಾಕು, ಮೊಗದ ಮೇಲೆ ನಗುವು ಅರಳುತ್ತದೆ. ತನ್ನದಿದು ಎಂಬ ಮುಚ್ಚಟೆಯ ಭಾವ. ರಕ್ಷಣೆಯ ಜವಾಬ್ದಾರಿ.ಅಮ್ಮ ಅಪ್ಪನ ನಡುವೆ ಸೇತುವೆಯಂತಿದ್ದರೂ, ಅಪ್ಪನನ್ನು ಸ್ಪರ್ಧೆಯಂತೆ ಕಾಣುವ, ಅಮ್ಮನಲ್ಲಿ ಸ್ನೇಹವನ್ನು ಹುಡುಕುತ್ತ, ದೊಡ್ಡವನಾದಂತೆ ಇಬ್ಬರಿಗೂ ಅಪರಿಚಿನಾಗುತ್ತಲೇ ಸ್ನೇಹಿತರ ನಡುವೆ ಆಪ್ತನಾಗುವ ಮಗ.. ಕಾಳಜಿ ತೋರಿದಾಗಲೆಲ್ಲ, ದುಡಿಯಲು ಆರಂಭಿಸಿದಾಗ, ಈ ಮನೆಯಿನ್ನು ನನ್ನ ಜವಾಬ್ದಾರಿ ಎಂದಾಗಲೇ ಮಗು ಮಗ ಆಗ್ತಾನೆ. ಮೀಸೆ ಮೂಡುವಾಗ ಕಾಣುವ ಬಾಲೆಯರೆಲ್ಲ ನಸುಕಂಪನ ಮೂಡಿಸುತ್ತಾರೆ. ತುಸು ಹೃದಯ ಮಿಡಿಯುತ್ತದೆ. ತನ್ನವಳೆನಿಸಿಕೊಂಡವಳ ಮುಂದೆ ತಾದಾತ್ಮ್ಯದಿಂದ ಶರಣಾಗುವ ಸಂಗಾತಿ, ಕಂಗಳಲ್ಲಿಯೇ ಭರವಸೆ ಸ್ಫುರಿಸುತ್ತಾನೆ. ಇವಿಷ್ಟೂ ಪುರುಷನ ಮೂಲ ಗುಣಗಳು. ಆಹಹಾ ಪುರುಷಾಹಂಕಾರ ಎಂದುಕೊಳ್ಳುವುದು ಅವರ ಜೀವನಪ್ರೀತಿ ಒಂಚೂರು ಮಿತಿಮೀರಿದಾಗ. ತನ್ನದು ಸತ್ಯ, ತನ್ನದೇ ಸತ್ಯ ಎಂಬ ಹಟ ಹಿಡಿದಾಗ. ಗಂಡುಮಕ್ಕಳಲ್ಲಿ, ಮಗುವೊಂದು ಸದಾ ಜಾಗೃತವಾಗಿರುತ್ತದೆ. ಇಂಥವರಿಗೆಲ್ಲ ಸದಾ ಅವರ ಅಭಿಮಾನವನ್ನು ಪೋಷಿಸುವವರ ನಡುವೆಯೇ ಇರಬೇಕು ಎಂದು ಬಯಸುತ್ತಾರೆ. ಹಾಗಾಗದಿದ್ದಾಗ, ತಮ್ಮತನವನ್ನು ಸಾಧಿಸಲು ಪುರುಷ, ಜೋರು ಮಾಡುವ, ಹಿಂಸೆಗಿಳಿಯುವ ಪ್ರವೃತ್ತಿ ತೋರುತ್ತಾನೆ. ಬಾಂಧವ್ಯದಲ್ಲಿರುವಾಗ ‘ತಾನು’‘ತಾನೂ‘ ಆಗಬೇಕು. ‘ತಾನೇ’ ಎಂದಾದಾಗ ಈ ಆಳುವ ಮನೋಭಾವ ಜಾಗೃತವಾಗುತ್ತದೆ. ತನ್ನದೆನ್ನುವುದೆಲ್ಲವೂ ತನಗೇ ಸಿಗಬೇಕು ಎಂಬ ಹಟ ಹುಟ್ಟಿದಾಗ ಹಿಂಸೆ ಪ್ರವೃತ್ತಿ ಹೆಚ್ಚುತ್ತದೆ. ಅವನೊಳಗಿನ ನಿಜವಾದ ಪುರುಷನನ್ನು ಹಿಂದಿಕ್ಕಿ, ಪಾಳೇಗಾರಿಕೆಯ ಮನೋಭಾವದ ಅಹಂಕಾರ ಜಾಗೃತವಾಗುತ್ತದೆ. ಈ ಅಹಂಕಾರ ತನ್ನನ್ನು ಮೆರೆಸುವುದಷ್ಟೇ ಅಲ್ಲ, ತನ್ನವರನ್ನು ಮರೆಸುವ ಕೆಲಸವನ್ನೂ ಮಾಡುತ್ತದೆ. ಹೀಗಾದಾಗಲೇ ಒಳಗೊಳಗೇ ಚೂರಾಗುತ್ತಾರೆ ಗಂಡಸರು. ಅವರಿಗೆ ಒಮ್ಮೆ ಕಣ್ಣೀರು ಹಾಕಿ, ಹಗುರಾಗುವ ಅವಕಾಶಗಳೇ ಇಲ್ಲವೆಂಬಂತೆ ತಮ್ಮೊಳಗೇ ಕುಗ್ಗುತ್ತಾರೆ. ಹೃದಯ ಚೂರಾದಾಗ ತೇಪೆ ಹಾಕಲು ಮಾತುಗಳ ಬದಲಿಗೆ ಇನ್ನಾವುದೋ ಮಾದಕ ವ್ಯಸನಗಳಿಗೆ ಬಲಿಯಾಗುತ್ತಾರೆ. ಒಳಗೊಳಗೇ ಕೋಟೆ ಕಟ್ಟಿಕೊಳ್ಳುತ್ತ ಬರುವ ಇವರು ಯಾವುದನ್ನೂ ಸಹಿಸದ ಸ್ಥಿತಿಗೆ ತಲುಪುವುದು ಹೀಗೆಯೇ. ಸಂಗಾತಿಯ ಮುಂದೆಯೂ ಏನೂ ಮಾತಾಡದ ಸ್ಥಿತಿಗೆ ತಲುಪುತ್ತಾರೆ. ಎಲ್ಲಿ ನಗೆಗೀಡು ಆಗುವೆವೋ ಎಂಬ ಆತಂಕ ಅವರ ನಗೆಯನ್ನೇ ಕದ್ದೊಯ್ಯುತ್ತದೆ. ಅಭಿಮಾನವೆಂಬುದು ಅಹಂಕಾರವಾದಾಗಿನ ಅತಿ ಉತ್ಪ್ರೇಕ್ಷಿತ ಸ್ಥಿತಿಯೇ ತಮ್ಮನ್ನು ತಾವು ಕೊನೆ ಗೊಳಿಸಿಕೊಳ್ಳುವುದು. ಆ ಕ್ಷಣಕ್ಕೆ, ಆ ಹೊತ್ತಿಗೆ, ಸಾಲದ ಬಾಧೆಯೋ, ಪ್ರೀತಿಯಲ್ಲಿನ ಸೋಲೋ, ವಂಚನೆಯೋ, ವ್ಯಾಪಾರದಲ್ಲಿ ನಷ್ಟವೋ.. ಏನೇ ಆಗಿದ್ದರೂ ಎಲ್ಲಿಲ್ಲದ ಧೈರ್ಯ ಒಡಗೂಡಿಸಿಕೊಳ್ಳುತ್ತಾರೆ. ಬದುಕಲು ಅದಕ್ಕಿಂತ ಒಂಚೂರು ಕಡಿಮೆ ಆತ್ಮಸ್ಥೈರ್ಯವಿದ್ದರೂ ಸಾಕು. ಆದರೆ ‘ನಾನು’ ಕೇಳಬೇಕೆ? ತಗ್ಗಬೇಕೆ? ತಿರಸ್ಕಾರವನ್ನು ಸ್ವೀಕರಿಸಬೇಕೆ? ಇಂಥ ಪ್ರಶ್ನೆಗಳು ಕೆಲವೊಮ್ಮೆ ಅವರನ್ನೇ ಬಲಿ ತೆಗೆದುಕೊಳ್ಳುತ್ತವೆ. ಅಪರಾಧಿ ಪ್ರಜ್ಞೆಗಿಂತಲೂ ಉಳಿದವರಿಗೊಂದು ಪಾಠ ಕಲಿಸಬೇಕೆಂಬ ರೊಚ್ಚು, ರೋಷ, ಮತ್ತು ಅವಮಾನ, ನನ್ನಿಂದ ನಿಭಾಯಿಸಲಾಗದು ಎಂಬ ಅನುಮಾನ ಇವರನ್ನು ಇವರ ಮೂಲಗುಣಗಳಿಂದ ದೂರಕ್ಕೆ ಎಳೆದೇ ತೀರುತ್ತವೆ. ಪರಿಣಾಮ.. ಒಂದರೆಗಳಿಗೆಯ ದುಡುಕಿನ ನಿರ್ಧಾರಕ್ಕೆ ಬಲಿಯಾಗಿ ಜೀವಕಳೆದುಕೊಳ್ಳುವ ಪುರುಷರು, ಅವರ ಅವಲಂಬಿತರ ಜೀವನವನ್ನೇ ಖಾಲಿ ಮಾಡಿ ಹೊರಟುಬಿಡುತ್ತಾರೆ. ಪುರುಷರಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚುತ್ತಿರಲು, ಬಿರುಕು ಬಿಡುತ್ತಿರುವ ಬಾಂಧವ್ಯಗಳು, ಅಪನಂಬಿಕೆಗಳು, ಜೀವನದ ಅಪಸವ್ಯಗಳಾಗಿವೆ. ಈ ಬಗ್ಗೆ ಜಾಗೃತಿ ಮೂಡಿಸಬೇಕು ಎನ್ನುವುದು ಅಂತರರಾಷ್ಟ್ರೀಯ ಪುರುಷರ ದಿನದ ಧ್ಯೇಯವಾಕ್ಯವಾಗಿದೆ. ಪುರುಷಾಹಂಕಾರ ಬೆಳೆಸಿಕೊಳ್ಳುವ ಮುನ್ನಆತ್ಮಾಭಿಮಾನದ ಬೆಳಕು ನಿಮ್ಮ ಹೃದಯದಲ್ಲಿ ಬೆಳಗಲಿ. ಆ ಬೆಳಕು, ಪ್ರೀತಿ, ರಕ್ಷಣೆ, ಭದ್ರತೆ ಮುಂತಾದ ಮೂಲಗುಣಗಳನ್ನೇ ಹರಡಲಿ. ‘ಓ ಗಂಡಸೇ ನೀನೆಷ್ಟು ಒಳ್ಳೆಯವನು’ ಎಂಬ ಭಾವ, ನಿಮ್ಮ ಸುತ್ತಲಿನ ಹೆಣ್ಮಕ್ಕಳ ಕಂಗಳಲ್ಲಿ ಮೂಡುವಂತಾಗಲಿ. ಆ ಕಂಗಳಲ್ಲಿ ನಿರಂತರ ವಿಷಾದ ತುಂಬದಂತಾಗಲಿ. ನಾಳೆ ಅಂತರರಾಷ್ಟ್ರೀಯ ಪುರುಷರ ದಿನ. ಹ್ಯಾಪ್ಪಿ ಮೆನ್ಸ್‌ ಡೇ. ಸಂಭ್ರಮಿಸಿ, ನಿಮ್ಮ ಅಸ್ತಿತ್ವವನ್ನು.

author – ರಶ್ಮಿ ಎಸ್‌

courtsey:prajavani.net

https://www.prajavani.net/artculture/article-features/international-mens-day-683119.html

Leave a Reply