ಬರಗಾಲದ ನೆನಪು – ಬಿರುಕುಬಿಟ್ಟ ಖಾಲಿ ಜಲಾಶಯದಲ್ಲಿ ನೀರು ಹುಡುಕುವ ಕುರಿಗಳು

ರಾಜ್ಯದಲ್ಲೀಗ ಮಳೆ, ಮಹಾಪೂರದ್ದೇ ಸದ್ದು. ಅದರೆ ಈ ಹೊತ್ತಿನಲ್ಲೂ ‘ಪ್ರಜಾವಾಣಿ’ಯ ಕೊಪ್ಪಳ ಜಿಲ್ಲಾ ಛಾಯಾಗ್ರಾಹಕ ಭರತ್ ಕಂದಕೂರ ಅವರಿಗೆ ಸತತ ಬರಗಾಲದಿಂದ ಕಂಗಾಲಾಗಿರುವ ತಮ್ಮ ಜಿಲ್ಲೆಯ ಬಿರುಕುಬಿಟ್ಟ ನೆಲದ ನೆನಪು ಕಾಡುತ್ತಿದೆ. ವಿಶ್ವ ಫೋಟೊಗ್ರಫಿ ದಿನದ ನೆನಪಿನಲ್ಲಿ ಅಂಥದ್ದೊಂದು ಚಿತ್ರದ ಕಥೆಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಕೊಪ್ಪಳದ ಕಿನ್ನಾಳ (ಮುದ್ಲಾಪುರ) ಜಲಾಶಯದಲ್ಲಿ ತೆಗೆದ ‘ನೀರನರಸುತ್ತ…’ ಶೀರ್ಷಿಕೆಯ ಈ ಚಿತ್ರ ಈವರೆಗಿನ ನನ್ನ ನೆಚ್ಚಿನ ಚಿತ್ರಗಳಲ್ಲಿ ಒಂದು. ಬಿಸಿಲ ನಾಡು ಕೊಪ್ಪಳದ್ದು ಒಣ ಹವೆಯ ಪ್ರದೇಶ. ಜಿಲ್ಲಾಡಳಿತವೇ ಹೇಳುವಂತೆ ಸತತ 16 ವರ್ಷಗಳ ಕಾಲ ಬರಗಾಲ ಎದುರಿಸಿದ ಗಟ್ಟಿ ಜಿಲ್ಲೆ ನಮ್ಮದು. ಆದರೂ ಕೂಡ ಇಲ್ಲಿನ ಜನರ ಪ್ರಮುಖ ಉದ್ಯೋಗ ಈಗಲೂ ಕೂಡ ಕೃಷಿಯೇ. ಪ್ರತಿವರ್ಷವೂ ಕೂಡ ಅಲ್ಪ ಸ್ವಲ್ಪ ಬೆಳೆ ಬೆಳೆದು ಇಲ್ಲಿನ ಜನರು ಜೀವನ ನಿರ್ವಹಿಸುತ್ತಿದ್ದಾರೆ ನಾವು ಪತ್ರಿಕಾ ಛಾಯಾಗ್ರಾಹಕರು, ಹೆಚ್ಚಿನ ಸಮಯವನ್ನು ಹಳ್ಳಿಗಳಲ್ಲಿ ಪ್ರಯಾಣ ಹಾಗೂ ರಾಜ್ಯದ ಜನತೆ ಜಿಲ್ಲೆಯ ಕಡೆ ಗಮನಹರಿಸುವಂತಹ ಚಿತ್ರಗಳನ್ನು ಸೆರೆಹಿಡಿಯುವಲ್ಲಿಯೇ ಕಳೆಯುತ್ತೇವೆ. ಅದಕ್ಕಾಗಿ ಉಪವಾಸವಿಲ್ಲದ ಹಾಗೂ ಸಮಯಕ್ಕೆ ಸರಿಯಾಗಿ ನಿದ್ರಿಸಿದ ದಿನಗಳಿಲ್ಲ. ಈ ಬಾರಿಯ ಬೇಸಿಗೆ ಜನರನ್ನು ತುಸು ಹೆಚ್ಚೇ ಕಾಡಿತು. ಬಿಸಿಲ ಬೇಗೆ ಎಷ್ಟಿತ್ತೆಂದರೆ ಉಷ್ಣಾಂಶ 49 ಡಿಗ್ರಿ ಸೆಂಟಿಗ್ರೇಡ್ ದಾಟಿತ್ತು. ಜಾನುವಾರುಗಳಿಗೆ ತಿನ್ನಲು ಮೇವಿಲ್ಲದ ಕಾರಣ ಸರ್ಕಾರ ಹಲವು ಮೇವು ಬ್ಯಾಂಕ್‍ಗಳನ್ನು ಸಹ ಸ್ಥಾಪಿಸಿತ್ತು. ಜಿಲ್ಲೆಯ ಬಹುತೇಕ ನೀರಿನ ಆಕರಗಳು ಬತ್ತಿ ಹೋಗಿದ್ದವೂ. ಕೊಳವೆಬಾವಿಯ ನೀರು ತೆಗೆಯೋಣವೆಂದರೆ ಫ್ಲೋರೈಡ್ ಸಮಸ್ಯೆ ಬೇರೆ. ಹನಿ ನೀರಿಗೂ ಹಾಹಾಕಾರ ಇದ್ದಂತಹ ಸ್ಥಿತಿ ಅದು. ಬರಗಾಲದ ತೀವ್ರತೆ ಬಿಂಬಿಸುವ ಚಿತ್ರಗಳಿಗೆ ಗಮನ ಕೊಡಿ’ ಎಂದು ನಮ್ಮ ಕಚೇರಿಯಿಂದ ಸೂಚನೆ ಬಂದಿತ್ತು. ಗ್ರಾಮೀಣ ಭಾಗಗಳಲ್ಲಿಯೇ ಹೆಚ್ಚಾಗಿ ಸಂಚರಿಸುವ ನನಗೆ ಈ ವಿಷಯ ತಲೆಗೆ ಹೋಗಲು ಹೆಚ್ಚಿನ ಸಮಯವೇನೂ ಹಿಡಿಯಲಿಲ್ಲ. ಮರುದಿನದಿಂದಲೇ ಅಂತಹ ಚಿತ್ರಗಳಿಗಾಗಿ ಹುಡುಕಾಟ ಆರಂಭವಾಯಿತು. ಒಟ್ಟು ಸುಮಾರು ನಲವತ್ತು ದಿನಗಳ ಕಾಲ ಬರಕ್ಕೆ ಸಂಬಂಧಿಸಿದ ಚಿತ್ರಗಳನ್ನು ತೆಗೆಯುವಿಕೆಗಾಗಿ ಓಡಾಡಿದ್ದೆ. ಬರಗಾಲದ ಚಿತ್ರಗಳಿಗಾಗಿ ತಾಲ್ಲೂಕಿನ ಬಹದ್ದೂರಬಂಡಿ, ಹಂದ್ರಾಳ, ಕವಲೂರು, ಅಳವಂಡಿ, ಗುಡಗೇರಿ ಇತ್ಯಾದಿ ಊರುಗಳನ್ನು ಸುತ್ತಿಯಾಗಿತ್ತು. ಒಂದು ದಿನ ಮುಂಜಾನೆ ಸುಮಾರು 6.30ಕ್ಕೆ ಕ್ಯಾಮೆರಾ ಬ್ಯಾಗ್ ಹೆಗಲಿಗೇರಿಸಿ ಬೈಕ್ ಏರಿ ಕಿನ್ನಾಳ ಭಾಗದತ್ತ ಹೊರಟೆ. ದಾರಿಯಲ್ಲಿ ಸಿಕ್ಕ ಕುರಿಗಾಹಿಗಳು, ಕಟ್ಟೆಯ ಮೇಲೆ ಕುಳಿತ ಹಿರಿಯರನ್ನು, ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರನ್ನು ಮಾತನಾಡಿಸುತ್ತ ಸಾಗಿದ ನನ್ನ ಪ್ರಯಾಣ ಸಾಗಿದ್ದು ಮುದ್ಲಾಪುರ ಗ್ರಾಮಕ್ಕೆ. ಗ್ರಾಮದಲ್ಲಿನ ಜಲಾಶಯ ನೋಡೋಣ ಎಂದು ಕೊಂಡು ಅದರ ದಿಬ್ಬ ಹತ್ತಿದಾಗ ಕಂಡದೃಶ್ಯ ತಕ್ಷಣಕ್ಕೆ ಜೀರ್ಣಿಸಿಕೊಳ್ಳಲಾಗಲಿಲ್ಲ. ಜಲಾಶಯ ಸಂಪೂರ್ಣ ಖಾಲಿಖಾಲಿ. ಹನಿ ನೀರು ಇಲ್ಲದ ಆ ಜಲಾಶಯದಲ್ಲಿ ನೆಲ ಒಣಗಿ ಬಿರುಕು ಬಿಟ್ಟಿತ್ತು. ಜಲಾಶಯದ ಬಾಯಿಯಲ್ಲಿ ಸತ್ತು ಬಿದ್ದಿದ್ದ ಮೀನುಗಳ ಪಳೆಯುಳಿಕೆಗಳು ಕಡೆಯದಾಗಿ ಉಳಿದಿದ್ದ ನೀರಿನ ಮಟ್ಟವನ್ನು ಸೂಚಿಸುತ್ತಿದ್ದವು. ಆಗಲೇ ಇಲ್ಲೇ ಒಂದು ಅತ್ಯುತ್ತಮ ಚಿತ್ರ ತೆಗೆಯಬೇಕು ಎಂದುಕೊಂಡೆ. ಅಂದು ಸಾಕಷ್ಟು ಸಮಯ ಕಾದರೂ ಚಿತ್ರ ದೊರೆಯಲಿಲ್ಲ. ಸಮಯದ ಅಭಾವದಿಂದಾಗಿ ಬರಿಗೈಯಲ್ಲಿ ವಾಪಾಸಾಗಬೇಕಾಯಿತು. ಇದು ಎರಡನೇ ಬಾರಿಯೂ ಮುಂದುವರೆಯಿತಾದರೂ ಜಲಾಶಯದ ನಡುವೆ ಸ್ವಲ್ಪ ನೀರಿದೆ. ಅಲ್ಲಿ ಕುರಿಗಾಹಿಗಳು ನಿತ್ಯ ನೀರು ಕುಡಿಸಲು ಹೋಗುತ್ತಾರೆ ಮುಂದೊಂದು ದಿನ ಆ ಚಿತ್ರಕ್ಕಾಗಿ ಮತ್ತೆ ಕಿನ್ನಾಳದತ್ತ ಪ್ರಯಾಣ ಬೆಳೆಸಿದೆ. ಅಂದು ಕುರಿಗಾಹಿಯೊಬ್ಬ ಬಿರುಕುಬಿಟ್ಟ ಜಲಾಶಯದ ನೆಲದಲ್ಲಿ ಕುರಿಗಾಹಿಯೊಬ್ಬ ತನ್ನ ಕುರಿಗಳೊಂದಿಗೆ ನೀರನರಸುತ್ತ ಹೊರಟಾಗ ಈ ಚಿತ್ರ ನನ್ನ ಹಾಗೂ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಯಿತು. ಅದೇ ದಿನ ಈ ಚಿತ್ರವನ್ನು ಬೆಂಗಳೂರು ಕಚೇರಿಗೆ ಕಳಿಸಿದೆವು. ಮೇ 13ರಂದು ಮುಖಪುಟ ಲೀಡ್ ಆಗಿ ಪ್ರಕಟವಾದ ‘ಬರಿದಾದ ಜಲಾಶಯಗಳ ಒಡಲು’ ಶೀರ್ಷಿಕೆಯ ವಿಶೇಷ ವರದಿಗೆ ನನ್ನ ಈ ಚಿತ್ರವನ್ನು ಬಳಸಿಕೊಳ್ಳಲಾಗಿತ್ತು. ಇದಕ್ಕೆ ಜಿಲ್ಲೆಯ ಓದುಗರು, ಉಪನ್ಯಾಸಕರು, ಸಹೋದ್ಯೋಗಿಗಳಿಂದ ಮೆಚ್ಚುಗೆ ವ್ಯಕ್ತವಾಯಿತು. ಅಲ್ಲದೆ ‘ಪ್ರಜಾವಾಣಿ’ಯ ಮುಖಪುಟದ ಲೇಖನವನ್ನು ಬಳಸಿಕೊಂಡು ಬಿಜೆಪಿ ಮಹಿಳಾ ಮೋರ್ಚಾದ ವಕ್ತಾರೆ ಮಾಳವಿಕಾ ಅವಿನಾಶ ಅವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ನನ್ನ ಜಿಲ್ಲೆಯ ಜನರ ಸಂಕಷ್ಟ ಪರಿಸ್ಥಿತಿಯನ್ನು ಛಾಯಾಚಿತ್ರದ ಮೂಲಕ ಸರ್ಕಾರದ ಗಮನಕ್ಕೆ ತಂದೆ. ಒಣಗಿದ ಜಲಾಶಯದ ಒಡಲಲ್ಲಿ ನೀರು ಹುಡುಕುತ್ತಾ ಸಾಗುವ ಕುರಿಗಳು, ಸತ್ತು ಬಿದ್ದ ಮೀನುಗಳ ಪಳೆಯುಳಿಕೆಗಳು ಇಂದಿಗೂ ನನ್ನನ್ನು ಬಹುವಾಗಿ ಕಾಡುತ್ತವೆ.

“author”: “ಭರತ್ ಕಂದಕೂರ”,

courtsey:prajavani.net

https://www.prajavani.net/artculture/article-features/drought-koppal-district-659025.html

Leave a Reply