ಸಿನಿಮಾ ವಿದ್ಯಾರ್ಥಿಗಳಿಗೆ ಒಂದು ಪ್ರಾಕ್ಟಿಕಲ್ ಪಠ್ಯ

ಕನ್ನಡದಲ್ಲಿ ಸಿನಿಮಾ ಕುರಿತ ಕೃತಿಗಳು ವಿರಳಾತಿವಿರಳ ಎನ್ನುವಷ್ಟು ಕಡಿಮೆ. ಅದರಲ್ಲಿಯೂ ಒಂದು ಸಿನಿಮಾದ ಕಟ್ಟುವಿಕೆಯನ್ನು ನಿರ್ದೇಶಕನ ಕಣ್ಣಿನಲ್ಲಿ ಕಾಣಿಸುವ ‘ಪ್ರಾಕ್ಟಿಕಲ್‌’ ಕೃತಿಗಳು ಇನ್ನೂ ಕಮ್ಮಿ. ಗಿರೀಶ ಕಾಸರವಳ್ಳಿ ಅವರ ‘ಗುಲಾಬಿ ಟಾಕೀಜ್’, ಸತ್ಯಪ್ರಕಾಶ್ ಅವರ ‘ರಾಮಾ ರಾಮಾ ರೇ…’ಯಂಥ ಕೆಲವೇ ಕೆಲವು ’ಚಿತ್ರಕಥೆ’ಯ ಪುಸ್ತಕಗಳು ಇವೆ. ಹೀಗೆ ಸಿನಿಮಾ ಕಲಿಕೆಗೆ ಪಠ್ಯವಾಗಬಲ್ಲ ಕೃತಿಸರಕುಗಳ ಕೊರತೆಗೂ ಇಂದಿನ ಕನ್ನಡ ಸಿನಿಮಾಗಳ ಗುಣಮಟ್ಟಕ್ಕೂ ಸಂಬಂಧವೂ ಇಲ್ಲದೆ ಇಲ್ಲ. ಈ ನಿಟ್ಟಿನಲ್ಲಿ ಅಭಯ ಸಿಂಹ ಅವರ ‘ಪಡ್ಡಾಯಿ: ಚಿತ್ರ ಕಟ್ಟಿದ ಕಥೆ’ ಕೃತಿ, ಕನ್ನಡ ಸಿನಿಮಾ ವಿದ್ಯಾರ್ಥಿಗಳಿಗೆ ‘ಪ್ರಾಕ್ಟಿಕಲ್‌’ ಪಠ್ಯವಾಗಬಲ್ಲ ಪುಸ್ತಕ. ‘ಪಡ್ಡಾಯಿ’, ಅಭಯ ಸಿಂಹ ನಿರ್ದೇಶನದ ನಾಲ್ಕನೇ ಸಿನಿಮಾ. ಅವರ ಮೊದಲ ತುಳು ಸಿನಿಮಾ ಕೂಡ ಹೌದು. 2017ನೇ ಸಾಲಿನ ‘ಅತ್ಯುತ್ತಮ ಪ್ರಾದೇಶಿಕ ಚಿತ್ರ’ ರಾಷ್ಟ್ರಪ್ರಶಸ್ತಿಗೂ ಭಾಜನವಾಗಿರುವ ಈ ಚಿತ್ರ ಹಲವು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ‘ಪಡ್ಡಾಯಿ’ ಚಿತ್ರವನ್ನು ರೂಪಿಸಿದ ಬಗೆ, ತೆರೆಯ ಹಿಂದಿನ ಚಟುವಟಿಕೆಗಳು, ಪ್ರೇರಣೆ, ಪರಿಶ್ರಮ, ಹೊಳಹುಗಳನ್ನೆಲ್ಲ ಪರಿಚಯಿಸಿಕೊಡುವಂಥ ಈ ಪುಸ್ತಕವನ್ನು ಅಕ್ಷರ ಪ್ರಕಾಶನ ಪ್ರಕಟಿಸಿದೆ. ಈ ಕೃತಿಯಲ್ಲಿ ಚಿತ್ರಕಥೆ ಇದೆ; ಚಿತ್ರ ಕಟ್ಟುವ ಮುನ್ನ, ಕಟ್ಟುವ ಸಂದರ್ಭದಲ್ಲಿ ನಡೆದ ಕಥನಗಳೂ ಇವೆ. ‘ಪಡ್ಡಾಯಿ’, ಶೇಕ್ಸ್‌ಪಿಯರ್‌ನ ಪ್ರಸಿದ್ಧ ನಾಟಕ ‘ಮ್ಯಾಕ್‌ಬೆತ್‌’ನ ರೂಪಾಂತರ. ಮೂಲನಾಟಕದ ಪಾತ್ರಗಳು, ಅವು ಹೊಮ್ಮಿಸುವ ಧ್ವನಿಗಳನ್ನು ಇಟ್ಟುಕೊಂಡು, ತುಳುನಾಡಿನ ಮೊಗವೀರ ಸಮುದಾಯದೊಳಗೆ ಪುನರ್‌ಕಥಿಸುವ ಕೆಲಸ ಮಾಡಿದ್ದಾರೆ ನಿರ್ದೇಶಕರು. ಹಾಗಾಗಿ ಸಾಹಿತ್ಯಕೃತಿಯೊಂದನ್ನು ಸಿನಿಮಾ ಮಾಧ್ಯಮಕ್ಕೆ ಅಳವಡಿಸುವ ಪ್ರಕ್ರಿಯೆಯ ಕುರಿತು ಕುತೂಹಲ ಇರುವವರಿಗೂ ಈ ಪುಸ್ತಕ ಉತ್ತಮ ಆಕರ ಗ್ರಂಥ ಆಗಬಲ್ಲದು. ನಿರ್ಮಾಣದ ಕಥೆ, ಪಾತ್ರ ಪರಿಚಯ, ಚಿತ್ರಕಥೆ, ಚಿತ್ರದ ಶೀರ್ಷಿಕೆಗಳು ಹೀಗೆ ಈ ಪುಸ್ತಕದಲ್ಲಿ ನಾಲ್ಕು ಭಾಗಗಳಿವೆ. ಅದಕ್ಕೆ ಪೂರಕವಾಗಿ ಗಿರೀಶ ಕಾಸರವಳ್ಳಿ ತಮ್ಮ ಮುನ್ನುಡಿಯಲ್ಲಿ ಸಿನಿಮಾದ ಶಕ್ತಿ ಮತ್ತು ಮಿತಿ ಎರಡನ್ನೂ ಗುರ್ತಿಸಿದ್ದಾರೆ. ಜೊತೆಗೆ ಗೋಪಾಲಕೃಷ್ಣ ಪೈ ಅವರ ಬೆನ್ನುಡಿಯೂ ಹಲವು ಹೊಸ ಹೊಳಹುಗಳನ್ನು ನೀಡುವ ಹಾಗಿದೆ. ‘ನಿರ್ಮಾಣದ ಕಥೆ’ ಭಾಗದಲ್ಲಿ, ಮೂಲ ನಾಟಕವನ್ನು ಕರಾವಳಿಯ ನೆಲಕ್ಕೆ ಒಗ್ಗಿಸುವಲ್ಲಿನ ಸವಾಲುಗಳು, ಸಿನಿಮಾ ನಿರ್ಮಾಣ, ಕಲಾವಿದರು, ತಂತ್ರಜ್ಞರ ಆಯ್ಕೆ, ಚಿತ್ರೀಕರಣ, ಚಿತ್ರೀಕರಣ ನಂತರದ ಪ್ರಕ್ರಿಯೆಗಳ ಕುರಿತ ವಿವರಗಳಿವೆ. ಸಣ್ಣ ಸಣ್ಣ ಭಾಗಗಳಲ್ಲಿ ಕಟ್ಟಿಕೊಟ್ಟಿರುವ ಈ ವಿವರಗಳ ನಿರೂಪಣೆಯೂ ಸರಾಗ ಓದಿಗೆ ಪೂರಕವಾಗಿದೆ. ಲೇಖಕರು, ಮೂಲನಾಟಕ ಮತ್ತು ಸಿನಿಮಾ ರೂಪಾಂತರವನ್ನು ಅಕ್ಕಪಕ್ಕ ಇಟ್ಟು, ರೂಪಾಂತರದ ಪ್ರಕ್ರಿಯೆಯನ್ನು ಒಂದೊಂದು ಪಾತ್ರ–ಸನ್ನಿವೇಶಗಳ ಮೂಲಕ ವಿವರಿಸುತ್ತ ಹೋಗಿದ್ದಾರೆ. ಸಿನಿಮಾದಲ್ಲಿ ಬಳಸಿಕೊಂಡ ರೂಪಕಗಳು, ಸಂಕೇತಗಳನ್ನು ಕಟ್ಟಿದ್ದು ಹೇಗೆ? ಅವುಗಳ ಹಿಂದಿನ ಉದ್ದೇಶ ಏನು ಎಂಬುದೆಲ್ಲ ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ. ‘ನಡುವಲ್ಲಿ ಬಿಡುವಲ್ಲಿ ಇನ್ನೂ ಒಂದಿಷ್ಟು ಯೋಚನೆ’ ಎಂಬ ‌ಭಾಗದಲ್ಲಿ ಬರುವ ಅನುಭವಕಥನ ಸ್ವತಂತ್ರವಾಗಿಯೂ, ಸಿನಿಮಾ ಹಿನ್ನೆಲೆಯಲ್ಲಿಯೂ ಹಲವು ಧ್ವನಿಗಳನ್ನು ಅನುರಣಿಸುವಷ್ಟು ಶಕ್ತವಾಗಿದೆ. ಇದು ಸಿನಿಮಾದ ನೋಡಿಗೂ ಹೊಸ ವಿಸ್ತಾರ ಕೊಡಬಲ್ಲದು. ಈ ಬರವಣಿಗೆಯಲ್ಲಿ ಎರಡು ಧಾಟಿಗಳಿವೆ. ಒಂದು ಸಿನಿಮಾದ ಚಿತ್ರಕಥೆ, ತಂತ್ರ, ರೂಪಕಗಳ ಕಟ್ಟುವಿಕೆಗೆ ಸಂಬಂಧಿಸಿದ್ದು. ಈ ಧಾಟಿಯ ಬರವಣಿಗೆಯಲ್ಲಿ ಒಂದು ಬಗೆಯ ಸಾರ್ವತ್ರಿಕ ಧ್ವನಿ ಇದೆ. ಹಾಗಾಗಿ ಒಂದು ಕಥನವಾಗಿಯೂ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಇನ್ನು ಕೆಲವು ಭಾಗಗಳಲ್ಲಿ ವೈಯಕ್ತಿಕ ಧಾಟಿ ಕೊಂಚ ಮುನ್ನೆಲೆಗೆ ಬರುತ್ತದೆ. ಇದು ಕೆಲವೊಮ್ಮೆ ಲೇಖಕರ ಮಾತಿನಲ್ಲಿ ಬರುವ ‘ಕೃತಜ್ಞತೆ ಸಲ್ಲಿಕೆ’ಯ ಭಾಗದಂತೆಯೂ ಭಾಸವಾಗುತ್ತದೆ. ಕೆಲವು ಪುನರಾವರ್ತನೆಗಳನ್ನೂ ತಪ್ಪಿಸಬಹುದಿತ್ತು. ಒಳಪುಟಗಳ ವಿನ್ಯಾಸವನ್ನೂ ಇನ್ನಷ್ಟು ಒಪ್ಪಗೊಳಿಸಬಹುದಿತ್ತು. ಪುಸ್ತಕದ ಮುಂದಿನ ಭಾಗದಲ್ಲಿ ಪಾತ್ರಗಳ ಪರಿಚಯ ಇದೆ. ಪಾತ್ರಗಳ ಉದ್ದೇಶ, ಹಿನ್ನೆಲೆ, ಮನಸ್ಥಿತಿಯ ಕುರಿತ ಟಿಪ್ಪಣಿಗಳಿವೆ. ಅದರ ಮುಂದಿನ ಭಾಗದಲ್ಲಿ ಚಿತ್ರಕಥೆಯನ್ನು ಕೊಡಲಾಗಿದೆ. ತುಳುವಿನ ಚಿತ್ರಕಥೆಯನ್ನು ಕನ್ನಡಕ್ಕೆ ಅನುವಾದಿಸಿರುವುದಲ್ಲದೆ, ಸನ್ನಿವೇಶಗಳ ಹಿಂದಿನ ಉದ್ದೇಶದ ಕುರಿತೂ ಪುಟ್ಟ ಪುಟ್ಟ ಟಿಪ್ಪಣಿಯನ್ನು ನೀಡಿದ್ದಾರೆ. ಇದು ಸನ್ನಿವೇಶಗಳ ಒಳಾರ್ಥ, ಧ್ವನಿಯನ್ನು ಅರ್ಥೈಸಿಕೊಳ್ಳಲು ಸಹಕರಿಯಾಗಿವೆ. ಇನ್ನೊಂದು ದೃಷ್ಟಿಯಿಂದ ನೋಡಿದರೆ ಇದು ಸಿನಿಮಾದ ನೋಡುವಿಕೆಗೆ ಹಾಕಿದ ಬೇಲಿಯಾಗಿಯೂ ಕಾಣುತ್ತದೆ. ನಿರ್ದೇಶಕರ ಉದ್ದೇಶ, ತಂತ್ರಗಳು ತಿಳಿದುಬಿಡುವುದರಿಂದ, ಅದರಾಚೆಗೆ ಹೊಮ್ಮಬಹುದಾದ ದೃಶ್ಯಸಾಧ್ಯತೆಗಳಿಗೆ ಮನಸ್ಸು ಬೆನ್ನುಮಾಡಿಬಿಡುವ ಅಪಾಯವಿರುತ್ತದೆ. ಹೀಗಾಗಿಯೇ ಇದು ಸಿನಿಮಾ ನೋಡುವ ಮೊದಲು ಓದುವ ಪುಸ್ತಕ ಅಲ್ಲ; ಬದಲಿಗೆ ಪಡ್ಡಾಯಿ ಸಿನಿಮಾ ನೋಡಿ, ನೋಡುವಿಕೆಯ ಕುತೂಹಲ ತಣಿದ ಮೇಲೆ, ಅಭ್ಯಸನಕ್ಕಾಗಿ ಓದಬೇಕಾದ ಪುಸ್ತಕ. ಇದು ಸಿನಿಮಾ ಮಾಧ್ಯಮದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲೆಂಬ ಉದ್ದೇಶದಿಂದ ತರುತ್ತಿರುವ ಕೃತಿ ಎಂಬುದನ್ನು ನಿರ್ದೇಶಕರು ಪುಸ್ತಕದಲ್ಲಿಯೇ ಸ್ಪಷ್ಟಪಡಿಸಿದ್ದಾರೆ. ಕನ್ನಡದ ಸದ್ಯದ ಸಿನಿಮಾರಂಗ ಇರುವ ಪರಿಸ್ಥಿತಿಯಲ್ಲಿ ಸಿನಿಮಾ ಸೂಕ್ಷ್ಮಗಳ ಬಗ್ಗೆ ಅರಿವು ಹುಟ್ಟಿಸಬಲ್ಲ ಇಂಥ ಕೃತಿಗಳ ಅಗತ್ಯ ಖಂಡಿತ ಇದೆ.

“author”: “ಪದ್ಮನಾಭ ಭಟ್”,

courtsey:prajavani.net

https://www.prajavani.net/artculture/book-review/film-students-658718.html

Leave a Reply