ದೇವರಿಗೆ ಹೋದೆವು ಪುಸ್ತಕ ವಿಮರ್ಶೆ- ಈ ಊರೊಳಗಿಷ್ಟು ಉತ್ಪಾತವೇನೋ

ನಮ್ಮ ಕೈವಾರ ತಾತಯ್ಯ ನಮ್ಮ ಸುತ್ತಲಿನ ಬದುಕಿನಲ್ಲಿ ತುಂಬಿ ತುಳುಕುತ್ತಿರುವ ಕೇಡನ್ನು ಕಂಡು ಬೇಸರದಿಂದ ಏಕತಾರಿ ಮೀಟಿದಾಗ ಹೀಗೊಂದು ತತ್ವಪದ ಹೊರಹೊಮ್ಮಿತು. ಈ ಕೇಡನ್ನು ತಣ್ಣಗಾಗಿಸಲು ನಮ್ಮ ತತ್ವಪದಕಾರರು ದೀರ್ಘಕಾಲದಿಂದ ಹೆಣಗುತ್ತಲೇ ಇದ್ದಾರೆ. ಉಣ್ಣುವ ಜಾಗದಲ್ಲೇ ಬಂದು ಹೊಲಸು ಮಾಡುವ ಮಂದಿ ನಿರಂತರ ಕ್ರಿಯಾಶೀಲರಾಗಿರುವುದು ನಮ್ಮ ನೆಲದ ದೊಡ್ಡ ಸಂಕಟ. ಹೊಲಸ ತೆಗೆಯದೇ ಉಣ್ಣಲಾಗದು; ತೆಗೆಯಹೋದರೆ ಮತ್ತೆ ಮತ್ತೆ ಹೊಲಸು ಬೀಳುತ್ತಲೇ ಇರುತ್ತದೆ. ಇದೇ ಉದ್ಯೋಗವಾಗಿ ಸಂಕಟ ಮಾತ್ರ ನಿರಂತರವಾಗಿದೆ. ಹೊಲಸು ಮಾಡುವ, ಅದನ್ನು ತೆಗೆಯುವ ಉದ್ಯೋಗಪರ್ವಗಳಿಂದಲೇ ನಮ್ಮ ಘನಂದಾರಿ ಮಹಾಕಾವ್ಯಗಳು, ಸಂಸ್ಕೃತಿ ಚರಿತ್ರೆ ಮತ್ತು ಚಳವಳಿಗಳು ತುಂಬಿಹೋಗಿವೆ. ಅವುಗಳನ್ನು ಮತ್ತೆ ಮತ್ತೆ ಹೇಳಿ ಉದ್ಧರಿಸುವ ವಿಮರ್ಶೆ, ಮೀಮಾಂಸೆಗಳೂ ತಮ್ಮ ತಮ್ಮ ಕರ್ತವ್ಯವನ್ನು ಮಾಡುತ್ತಲೇ ಇವೆ. ದುರಂತವೆಂದರೆ ಹೊಲಸು ಮಾಡುವವರು ಮಾಡುತ್ತಲೇ ಇದ್ದಾರೆ. ಮತ್ತೂ ಕೆಡುಕಿನ ಸಂಗತಿಯೆಂದರೆ ಅದಕ್ಕೆ ಒಪ್ಪಿಗೆ ನೀಡುವವರ ಸಂಖ್ಯೆ ಬೆಳೆಯುತ್ತಾ ಇದೆ. ಇದೆಲ್ಲವನ್ನು ಕಂಡ ಈ ನೆಲದ ಅನುಭಾವಿಗಳು ಹೊಲಸು ಮಾಡದೆ ಬಾಳುವುದನ್ನು ಕಲಿಸಲು ಯಾವತ್ತಿನಿಂದಲೂ ಪರದಾಡುತ್ತಲೇ ಇದ್ದಾರೆ. ಇನ್ನು ಕೆಲವರು ಯಾರನ್ನೂ ಸುಮ್ಮನಿರಗೊಡದ ಹಾಗೆ ಪೊಳ್ಳಿನ ರಾಶಿರಾಶಿಯನ್ನೆ ನಮ್ಮೆದುರಿಗೆ ಒಟ್ಟುತ್ತಿದ್ದಾರೆ. ನಮ್ಮ ನಡುವೆ ಇರುವ ನಮ್ಮದಲ್ಲದ ಪೊಳ್ಳನ್ನು ನಿಭಾಯಿಸುವುದು ಕವಿಗಳಿಗೆ, ದಾರ್ಶನಿಕರಿಗೆ, ಮೀಮಾಂಸಕರಿಗೆ, ಅನುಭಾವಿಗಳಿಗೆ ಒಂದು ಸವಾಲಾಗಿದೆ. ಈ ಹೊತ್ತಿನ ಕವಿಗಳೂ ಅದಕ್ಕೆ ಹೊರತಲ್ಲ. ಈ ಕವನ ಸಂಕಲನ ಮತ್ತು ಸವಿತಾ ನಾಗಭೂಷಣ ಅವರ ಹಿಂದಿನ ಸಂಕಲನಗಳೂ ಇದೇ ಉದ್ಯೋಗವನ್ನು ಮಾಡಿವೆ. ನಾವು ಚರಿತ್ರೆಯನ್ನು ಘಟನೆಗಳ ಮೂಲಕ ನೋಡುವ, ದಾಖಲಿಸುವ ಕೊರಕಲು ಜಾಡಿಗೆ ಬಿದ್ದಿದ್ದೇವೆ. ಆದರೆ ನಿತ್ಯದ ಬದುಕು ಘಟನೆಗಳಿಂದ ಕೂಡಿರುವುದಿಲ್ಲ; ಬದಲಿಗೆ ನಿಸರ್ಗದ ಸಹಜ ನಡೆಯಿಂದ ಕೂಡಿರುತ್ತದೆ. ಕಾಳೊಂದು ಎರಡು ಬೇಳೆಯಾಗಿ ಮೊಳೆತು ಫಲವಾಗಿ ನಮ್ಮ ತಟ್ಟೆಗೆ ಅನ್ನವಾಗಿ ಬರುವ ನಡೆಯನ್ನು ಘಟನೆಗಳೆಂದು ನೋಡಹೋದರೆ ಏನೂ ದೊರಕದು. ಬದಲಿಗೆ ಅದನ್ನೊಂದು ಪ್ರಕ್ರಿಯೆ ಎಂದು ಗಮನಿಸುವುದಾದರೆ ಒಂದು ಅದ್ಭುತವೇ ಘಟಿಸಿರುವುದು ಗೋಚರಿಸುತ್ತದೆ. ಹಾಗೆ ನೋಡಿದರೆ ಕನ್ನಡದ ಅನುಭಾವೀ ಲೋಕ ಇಂತಹ ಪ್ರಕ್ರಿಯಾತ್ಮಕ ಜಗತ್ತನ್ನು ಕಾವ್ಯವಾಗಿಸಿರುವುದೇ ಹೆಚ್ಚು. ಅಂಗಳದ ಒಂದು ಪುಟ್ಟ ಹಕ್ಕಿಯ ಉಲಿ, ಅಲ್ಲೆ ಅರಳಿರುವ ಒಂದು ದಾಸವಾಳ, ಕಲಸಿ ಹೋಗುತ್ತಿರುವ ರಂಗೋಲಿ, ರೊಟ್ಟಿ ಬಡಿಯುತ್ತಿರುವ ಟಪ ಟಪ ಸದ್ದು, – ಅದ್ಭುತವಾದ ಕಾವ್ಯ ಸೃಷ್ಟಿಯಾಗಲು ಇಷ್ಟು ಸಾಕಲ್ಲವೆ? ಕಾವ್ಯಕ್ಕೆ ಸಾವಿರಾರು ಸಾಮಾನ್ಯರನ್ನು ಕೊಂದು ಹಾಕುವ ಯುದ್ಧಗಳೇ ಬೇಕೆ? ಸಂಜೆಗೆ ಮಡ್ಲು ತುಂಬಾ ಸೊಪ್ಪು ಸೆದೆ ತುಂಬಿಕೊಂಡು ಬಂದು ಎಲ್ಲ ಹರಡಿಕೊಂಡು ಸೋಸಲು ಕೂತಿರುವ ಹೆಂಗಸಿನಂತೆ ಇರುವ ಸವಿತಾ ನಾಗಭೂಷಣ ಅವರ ಕಾವ್ಯಕ್ಕೆ, ಓದುಗರನ್ನು ಹಸಿದು ಬಂದಿರುವ ಗಂಡ ಮಕ್ಕಳಂತೆ ಒಳಗೊಳ್ಳುವ ಗುಣವಿದೆ. ನಿತ್ಯದ ಸಾಮಾನ್ಯ ಬದುಕೇ ಈ ಸಂಕಲನದ ಕವನಗಳ ಹೂರಣ. ಸಸಿ ನೆಟ್ಟು ಗೊಬ್ಬರ ಕೊಟ್ಟು ನೀರೂಡಿ ಮರ ಬೆಳೆಸಿದವನೇ ಜಾಣ ಮರ ಹತ್ತಿ ಎಳನೀರು ಕಾಯಿಳಿಸಿ ಬಾಯಾರಿಕೆ ತಣಿಸಿದವನೇ ಜಾಣ ಮಣ್ಣಿಗೆ ಮರಳಿ ಆಡಿ ಹೊಲದಲಿ ತೆಂಗಿನ ಬುಡದಲಿ ಮನೆ ಮಂದಿಯ ನೆನೆದೆಯಾದರೆ ತೀರೀತು . . . ಋಣ! (ತೆಂಗಿನ ಮರ) ನಿತ್ಯದ ಬದುಕು ದಿನೇ ದಿನೇ ದಿಕ್ಕೆಟ್ಟು ಹೋಗುತ್ತಿದೆ; ಹೋಗುವಂತೆ ಮಾಡಲಾಗುತ್ತಿದೆ. ನಮಗೆ ಬೇಕಿಲ್ಲದುದನ್ನು ನಮ್ಮ ಹೊರಗೆ ಮತ್ತೆ ಒಳಗೆ ಒಟ್ಟಿಕೊಳ್ಳುತ್ತಿದ್ದೇವೆ. ಬೇಕಿರುವುದಕ್ಕೆ ತಾವನ್ನೇ ಉಳಿಸಿಕೊಳ್ಳುತ್ತಿಲ್ಲ. ಹೀಗೆ ಕಳೆದು ಹೋಗುತ್ತಿರುವುದೇನೇನು?ಒಂದು ಬೆಕ್ಕು ಸತ್ತರೆಒಂದು ನಾಯಿ ಸತ್ತರೆ ಗಮನವೇ ಇಲ್ಲ! ಗೂಡು ಹರಿದು ಬಿದ್ದರೂ ಹಕ್ಕಿ ಅತ್ತು ಕರೆದರೂ ಗಮನವೇ ಇಲ್ಲ ಕಾಡು ಹೊತ್ತಿ ಉರಿದರೂ ನದಿಯು ಬತ್ತಿ ಬಿರಿದರೂ ಗಮನವೇ ಇಲ್ಲ! ಬೆಂಕಿಮಳೆಯು ಸುರಿದಿದೆ ಸರಕು ನರಕ ಸೃಜಿಸಿದೆ ದಮನವೇ ಎಲ್ಲಾ. . ಈ ಕವನ ಸಂಕಲನದಲ್ಲಿ ಹಾಸುಹೊಕ್ಕಾಗಿರುವ ಲೋಕಕರುಣೆಗೆ ಯಾವ ದರ್ಶನದ, ಧರ್ಮದ, ಪರಂಪರೆಯ ಹಂಗೂ ಇಲ್ಲ. ತುಂಬಾ ಸರಳವಾದರೂ ತನ್ಮಯತೆಯಿಂದ ತನ್ನ ಗುಡಿಸಲ ಸುತ್ತನ್ನು ಗುಡಿಸಿ ಸಗಣಿ ಸಾರಿಸಿ ಒಂದೆರಡು ರಂಗೋಲಿ ಇಟ್ಟು ತನ್ನ ಮಕ್ಕಳು ಕೊಳಕಿಲ್ಲದ ನೆಲದಲ್ಲಿ ಆಡಿಕೊಳ್ಳಲಿ ಎಂದು ಹಾರೈಸುವಂತಿವೆ. ಅಲ್ಲೆ ಪಕ್ಕದಲ್ಲಿ ಒಂದೆರಡು ಕರ್ಣಕುಂಡಲ ಮತ್ತು ಗೊರಟೆ ಹೂವಿನ ಗಿಡಗಳಲ್ಲಿ ಲೋಲಾಕಿನಂತೆ ತೂಗಾಡುತ್ತಿರುವ ನಾಲ್ಕು ಹೂಗಳು ಆರಳಿರಲಿ. ಒಳಗಿನಿಂದ ಬೇಯುತ್ತಿರುವ ರಾಗಿಮುದ್ದೆಯ ಕಮ್ಮನೆಯ ಘಮಲು ಬರುತ್ತಿರಲಿ ಎಂದು ಬಯಸುವಂತಿವೆ. ಈ ಹೊತ್ತು ತನ್ನ ಬಸಿರಿನಲ್ಲಿ ಜೀವವೊಂದನ್ನು ಇಟ್ಟುಕೊಂಡಿರುವ ಯಾವ ತಾಯಿಗೂ ಈ ಲೋಕಕ್ಕೆ ನನ್ನ ಕಂದನನ್ನು ಹೇಗಪ್ಪಾ ಕಳಿಸುವುದು ಎಂಬ ಆತಂಕವಾಗುವುದು ಸಹಜವಾಗಿದೆ. ಎಲ್ಲ ಸಂವೇದನೆಗಳೂ ಪೊಳ್ಳಿನ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಎಲ್ಲರಿಗೂ ಉಣ್ಣಕ್ಕಿಕ್ಕುವ ಒಂದು ಹೆಣ್ಣು ಜೀವ ಹತ್ತಾರು ವರುಷಗಳ ಕಾಲ ನಾನು ಉಣ್ಣಲಿಲ್ಲ ಎಂದರೆ, ಅದನ್ನು ಕೇಳಿಸಿಕೊಳ್ಳುವ ಕಿವಿಗಳು ಮೆತ್ತಿ ಹೋದರೆ ಒಬ್ಬ ಕವಿಯಿತ್ರಿಗೆ ಏನನ್ನಿಸಬೇಕು? ಹೇಗೆ ಅನ್ನ ಗಂಟಲಲ್ಲಿ ಇಳಿಯಬೇಕು? ಇರೋಮ್ ಶರ್ಮಿಳಾ ಕವನ ಆ ಹೆಣ್ಣುಮಗಳನ್ನು ಒಳಗೆ ಕರೆಯುತ್ತದೆ: ದೇಶ ಅಂತ ಒಂದು ಇದ್ದರೆ ಈ ಹೆಣ್ಣುಮಗಳು ನನ್ನ ದೇಶದ ಹೆಮ್ಮೆ! ಸೀತೆಗೆ ಹದಿನಾಲ್ಕು ವರುಷ ವನವಾಸವಾದರೆ ಈಗೆಕೆ ಹದಿನಾರು ವರುಷ ಉಪವಾಸ ಈಕೆ ಯಾರೋ ಏನೋ ನನ್ನ ಕನಸಿಗೆ ಆಗಾಗ್ಗೆ ಬರುತ್ತಾಳೆ ಊಟದ ತಾಟು ತರುವಷ್ಟರಲ್ಲಿ ಕಾಣೆಯಾಗಿರುತ್ತಾಳೆ! (ಇರೋಮ್ ಶರ್ಮಿಳಾ) ಕಳೆದ ಕಾಲದ ಹಳಹಳಿಕೆ ಈ ಸಂಕಲನದ ಅನೇಕ ಕವನಗಳ ವಸ್ತು. ಇಂಗ್ಲಿಷಿನ ಕಾರಣಕ್ಕೆ ಪಕ್ಕಕ್ಕೆ ಸರಿಯುತ್ತಿರುವ ಕನ್ನಡ, ಒತ್ತಡದ ಬದುಕಿನಲ್ಲಿ ಜಾಗ ಕಳೆದುಕೊಳ್ಳುತ್ತಿರುವ ಸಮಾಧಾನ, ಹಂಚಿಕೊಂಡು ಬಾಳಲೊಲ್ಲದ ಹೊಸ ಜೀವನಕ್ರಮಗಳು, ತಲೆಯ ಮೇಲೆ ಮತ್ತು ಒಳಗೆ ಒಟ್ಟಿಕೊಂಡಿರುವ ಅನಗತ್ಯ ವಸ್ತುಗಳ ರಾಶಿ ಇತ್ಯಾದಿ ಕಾಡಿಕೆಗಳು ಅನೇಕ ಕವನಗಳಾಗಿವೆ. ಪರಿಹರಿಸಿಕೊಳ್ಳಲು ಸುಲಭದಾರಿಗಳು ಕಾಣದಿರುವ ಬಗೆಗೆ ನಿರಾಶೆ ಕೂಡ ಅನೇಕ ಕವನಗಳಲ್ಲಿ ಜಾಗ ಪಡೆದಿದೆ. ಈ ಹೊತ್ತಿನ ಬದುಕು ಹಾಗೆ ಸೀದಾ ಸಾದಾ ಅಲ್ಲ, ಸರಳ ಪರಿಹಾರಗಳು ಇಲ್ಲವೆನ್ನುವ ವಾಸ್ತವದ ಅರಿವು ಇದ್ದರೂ ಭಾವುಕ ನಿಲುವುಗಳನ್ನು ಬಲವಾಗಿ ನೆಚ್ಚಿದೆ. ಅತ್ತ ರಾಮ-ಸೀತೆಯರ ಫೋಟೋದ ಜೊತೆಗೆ ಅಂಬೇಡ್ಕರ್, ಅಕ್ಕ, ಬಸವಾದಿಗಳ ಪಟಗಳನ್ನೂ ಇಡಬಹುದು ಎಲ್ಲರನ್ನೂ ಬಾಳಿಸಬಹುದು ಎಂದೇ ಅವರ ಕಾವ್ಯ ನಂಬುತ್ತದೆ ಮತ್ತು ಅದಕ್ಕೆ ಅಗತ್ಯವಿರುವಷ್ಟನ್ನು ಮಾತ್ರ ಚರಿತ್ರೆಯಿಂದ ಒದಗಿಸಿಕೊಳ್ಳಬಯಸುತ್ತದೆ. ತುಂಬಾ ಹೊತ್ತಿನಿಂದ ಅಳುತ್ತಿರುವ ಮಗುವಿನಂತೆ ಕ್ಷೀಣ ದನಿಯಲ್ಲಿ ಅದೇ ಅಳಲು ಉದ್ದಕ್ಕೂ ಕೇಳಿಸುತ್ತಲೇ ಇರುತ್ತದೆ….. ಈ ಊರೊಳಗಿಷ್ಟು ಉತ್ಪಾತವೇನೋ…

author- ಎಸ್. ನಟರಾಜ ಬೂದಾಳು

courtsey:prajavani.net

https://www.prajavani.net/artculture/book-review/analysis-666441.html

Leave a Reply