ಇದು ಕನ್ನಡಿಗರ ಆಟಿಕೆ

ಮಕ್ಕಳಿಗೆ ಮಾತೃಭಾಷೆಯಲ್ಲಿ ಕಲಿಸಿದ ವಿದ್ಯೆ ಬೇಗ ಅರ್ಥವಾಗುತ್ತದೆ. ಬಾಲ್ಯದಲ್ಲಿ ಮಕ್ಕಳಿಗೆ ಮನೆಯಲ್ಲಿ ಹೇಳಿಕೊಟ್ಟ ಕಲಿಕೆ ಸದಾ ನೆನಪಿರುತ್ತದೆ. ಮಕ್ಕಳು ಆಟವಾಡುತ್ತಾ ಕಲಿಯಬೇಕು ಎಂಬುದು ಹೆಚ್ಚಿನ ಪೋಷಕರ ಆಸೆಯಾಗಿರುತ್ತದೆ. ಹಳ್ಳಿಯಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಈ ರೀತಿಯ ಅವಕಾಶ ಸಿಕ್ಕಿದರೂ ನಗರದಲ್ಲಿರುವವರಿಗೆ ಈ ರೀತಿಯ ಅವಕಾಶಗಳು ಸಿಗುವುದು ತುಂಬಾ ಕಡಿಮೆ. ಈಗಿನ ಕಾಲದ ಮಕ್ಕಳು ಶಾಲೆಯಲ್ಲಿನ ಕಲಿಕೆಯೊಂದಿಗೆ ಕಂಪ್ಯೂಟರ್, ಮೊಬೈಲ್‌ನಲ್ಲಿ ಕಲಿಯುವುದೇ ಜಾಸ್ತಿ. ಮಕ್ಕಳ ಆಟ ಪಾಠಗಳೆಲ್ಲವೂ ಬೆರಳ ತುದಿಯಲ್ಲಿ ಲಭ್ಯವಾಗುತ್ತಿರುವ ಕಾಲದಲ್ಲಿ ಮಕ್ಕಳಿಗೆ ಕನ್ನಡದಲ್ಲಿ ಓದಿ ತಿಳಿ ಆಡಿ ಕಲಿ ಎಂಬ ಉದ್ದೇಶದೊಂದಿಗೆ ರೂಪುಗೊಂಡ ವೆಬ್‌ಸೈಟ್ ‘ಆಟಿಕೆ’. http://atike.nadoja.com/ ಎಂಬ ಲಿಂಕ್ ಕ್ಲಿಕ್ ಮಾಡಿದರೆ ಗಡಿಯಾರ ಮತ್ತು ಸೌರಮಂಡಲ ಎಂಬ ಎರಡು ವಿಷಯಗಳು ಕಾಣಿಸಿಕೊಳ್ಳುತ್ತವೆ. ಗಡಿಯಾರ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯಲು ಗಡಿಯಾರ ಲಿಂಕ್ ಕ್ಲಿಕ್ ಮಾಡಿದರೆ ಸಾಕು. ‘ಹೊತ್ತು ನೋಡುವುದನ್ನು ಕಲಿ’ ಎಂಬ ಪುಟದಲ್ಲಿ ಇಂದಿನ ದಿನಾಂಕ ಮತ್ತು ಗಡಿಯಾರ ಕಾಣಿಸುತ್ತದೆ. ವೇಳೆಯ ಮಾದರಿ ಕ್ಲಿಕ್ಕಿಸಿದರೆ 12 ತಾಸು ಅಥವಾ 24 ತಾಸು – ಆಯ್ಕೆ ಮಾಡಬಹುದು. ‘ನನ್ನ ಮೆಚ್ಚಿನ ಬಣ್ಣ’ – ಮೆನು ಕ್ಲಿಕ್ಕಿಸಿ ಗಡಿಯಾರದ ಬಣ್ಣವನ್ನು ಬದಲಿಸಬಹುದು. ‘ಗಡಿಯಾರದೊಡನೆ ಆಟವಾಡು’ ಎಂದು ಕ್ಲಿಕ್ ಮಾಡಿ ಗಡಿಯಾರದ ಮುಳ್ಳುಗಳನ್ನು ಎಳೆದಾಡಬಹುದು. ಹೀಗೆ ಮುಳ್ಳುಗಳನ್ನು ತಿರುಗಿಸುವಾಗ ಬಲಭಾಗದಲ್ಲಿ ಸಮಯ ಎಷ್ಟಾಯಿತು ಎಂಬುದು ಕಾಣಿಸುತ್ತದೆ. ಅದೇ ರೀತಿ ಸೌರಮಂಡಲ ಕ್ಲಿಕ್ಕಿಸಿದರೆ ಸೂರ್ಯ ಮತ್ತು ಎಂಟು ಗ್ರಹಗಳ ಚಲನೆಯ ವೇಗ, ದೂರ ಮತ್ತು ಅಳತೆಯನ್ನು ಸುಲಭವಾಗಿ ವಿವರಿಸಿರುವುದನ್ನು ನಾವಿಲ್ಲಿ ಕಾಣಬಹುದು. 2ಡಿ ಮತ್ತು 3ಡಿ ಯಲ್ಲಿ ಸೌರಮಂಡಲದ ಚಟುವಟಿಕೆಯನ್ನು ವೀಕ್ಷಿಸುವ ಅವಕಾಶವೂ ಇಲ್ಲಿದೆ. ಹಾಗಾಗಿ ಮಕ್ಕಳಿಗೆ ಇದು ’ನೋಡಿ ಕಲಿ’ ಅನುಭವ ನೀಡುತ್ತದೆ

courtsey:prajavani.net

https://www.prajavani.net/artculture/article-features/kannadigs-aatike-661323.html

Leave a Reply