ಕನ್ನಡದ ಸೊಲ್ಲಿನ ಏಳುಬೀಳಿನ ಕಥನ

 

ರಾ.ನಂ. ಚಂದ್ರಶೇಖರ ಅವರ ‘ಕನ್ನಡ ಡಿಂಡಿಮ’ ಕನ್ನಡ ಚಳವಳಿಯ ಏಳುಬೀಳುಗಳ ಕಥನ. ‘ಏಕೀಕರಣೋತ್ತರ ಕನ್ನಡ ಹೋರಾಟಗಳ ಇತಿಹಾಸ’ ಎಂದು ಲೇಖಕರು ತಮ್ಮ ಕೃತಿಯ ವಿಷಯವ್ಯಾಪ್ತಿಯನ್ನು ಸ್ಪಷ್ಟಪಡಿಸಿದ್ದಾರೆ. ಬಹುಶಃ, ಕನ್ನಡಕ್ಕಷ್ಟೇ ಸೀಮಿತವಾಗಿರಬಹುದಾದ ಇಂಥ ಭಾಷಾ ಚಳವಳಿಯ ಕಥನವನ್ನು ಭಾವುಕ ನೆಲೆಗಟ್ಟಿನಲ್ಲಿಯೂ ಚರಿತ್ರೆಯನ್ನು ಅರಿಯುವ ಕುತೂಹಲದ ರೂಪದಲ್ಲೂ ಓದಲಿಕ್ಕೆ ಸಾಧ್ಯವಿದೆ. ‘ಕನ್ನಡ ಚಳವಳಿ’ ಎನ್ನುವುದೇ ಭಾವುಕತೆಯನ್ನು ಉದ್ದೀಪಿಸುವಂತಹದ್ದಾದರೂ, ಪ್ರಸಕ್ತ ಕೃತಿಯನ್ನು ಸಂಯಮದಿಂದ ಓದಲಿಕ್ಕೆ ಸಾಧ್ಯವಿರುವುದಕ್ಕೆ ಕೃತಿಯನ್ನು ನಿರೂಪಿಸಿರುವ ಲೇಖಕರ ಸಂಯಮವೂ ಕಾರಣವಾಗಿದೆ. ಕನ್ನಡ ಚಳವಳಿಗಳ ಕುರಿತ ಈಗಾಗಲೇ ಪ್ರಕಟವಾಗಿರುವ ಕೃತಿಗಳಿಗಿಂತ ರಾ.ನಂ. ಅವರ ‘ಕನ್ನಡ ಡಿಂಡಿಮ’ ಭಿನ್ನವಾಗಿರುವುದು ಎರಡು ಕಾರಣಕ್ಕಾಗಿ: ಮೊದಲನೆಯದು, ಕನ್ನಡ ಚಳವಳಿಯ ಸ್ವರೂಪವನ್ನು ಚರ್ಚಿಸುವುದಕ್ಕೆ ಲೇಖಕರು ಇಡೀ ಕರ್ನಾಟಕವನ್ನು ಗಮನದಲ್ಲಿಟ್ಟುಕೊಂಡಿರುವುದು. ಎರಡನೆಯದು, ಲೇಖಕರು ಸ್ವತಃ ಕನ್ನಡ ಚಳವಳಿಯ ಭಾಗವಾಗಿದ್ದರೂ ‘ನಾನು’ ಎನ್ನುವ ಆತ್ಮಪ್ರತ್ಯಯ ಕೃತಿಯಲ್ಲಿ ತೀರಾ ಕಡಿಮೆ ಕಾಣಿಸಿಕೊಂಡಿರುವುದು. ಲೇಖಕರು ಕಾಣಿಸಿಕೊಂಡಿರುವ ಸಂದರ್ಭಗಳಲ್ಲಿ ಕೂಡ ಆ ಹಾಜರಿ ಘಟನೆಯ ಅಧಿಕೃತತೆಯನ್ನು ಸ್ಪಷ್ಟಪಡಿಸಲಿಕ್ಕಾಗಿ ಬಂದಿದೆಯೇ ಹೊರತು, ತನ್ನನ್ನು ಬಣ್ಣಿಸಿಕೊಳ್ಳಲಲ್ಲ. ತಾನು ಕಂಡು, ಕೇಳಿದ ಚಳವಳಿಯ ಸಂಗತಿಗಳನ್ನು ಓರ್ವ ಪತ್ರಕರ್ತನ ಧಾಟಿಯಲ್ಲಿ ರಾ.ನಂ. ದಾಖಲಿಸಿದ್ದಾರೆ. ಕನ್ನಡ ಚಳವಳಿಗೆ ಸಂಬಂಧಿಸಿದಂತೆ ಈವರೆಗಿನ ಮುಖ್ಯ ಕೃತಿಗಳು, ಬೆಂಗಳೂರಿನಲ್ಲಿ ನಡೆದ ಚಳವಳಿಗಳನ್ನು ಕೇಂದ್ರವಾಗಿರಿಸಿಕೊಂಡವು ಹಾಗೂ ಅರವತ್ತು ಎಪ್ಪತ್ತರ ದಶಕದ ಚೌಕಟ್ಟಿಗೆ ಒಳಪಟ್ಟಂತಹವು. ಕೃತಿಕಾರರೇ ತಮ್ಮನ್ನು ಚಳವಳಿಯ ಪ್ರಧಾನಪಾತ್ರವಾಗಿ ಚಿತ್ರಿಸಿಕೊಂಡ ಕಥನಗಳೂ ಇವೆ. ಇಂಥ ಮಿತಿಗಳಿಂದ ಸಾಕಷ್ಟು ಪಾರಾಗಿರುವ ‘ಕನ್ನಡ ಡಿಂಡಿಮ’, ಬೆಂಗಳೂರಿನಿಂದ ಬೆಳಗಾವಿಯವರೆಗಿನ ಕನ್ನಡ ಚಳವಳಿಗಳ ಪಕ್ಷಿನೋಟವನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕ ಸಂಯುಕ್ತರಂಗದಿಂದ ಹಿಡಿದು, ಇಂದಿನ ಬನವಾಸಿ ಕನ್ನಡ ಬಳಗದವರೆಗಿನ ಹಾಸುಬೀಸನ್ನು ಹೊಂದುವ ಮೂಲಕ ‘ಕನ್ನಡ ಚಳವಳಿ’ಯ ವರ್ತಮಾನದ ಸ್ವರೂ‍ಪವನ್ನೂ ಲೇಖಕರು ಸಂಕ್ಷಿಪ್ತವಾಗಿ ದಾಖಲಿಸಿದ್ದಾರೆ. ‘ಕನ್ನಡ ಡಿಂಡಿಮ’ ಕೃತಿ ಒಟ್ಟು ಹನ್ನೊಂದು ಅಧ್ಯಾಯಗಳಲ್ಲಿ ಕನ್ನಡ ಚಳವಳಿಯ ಸ್ವರೂಪವನ್ನು ಹಿಡಿದಿಡುವ ಪ್ರಯತ್ನ ನಡೆಸಿದೆ. ಮೊದಲ ಭಾಗ ಹಾಗೂ ಕೃತಿಯ ಮುಖ್ಯವಾದ ಭಾಗ ‘ಚಳವಳಿ: ನೆಲೆ–ಹಿನ್ನೆಲೆ’ ಅಧ್ಯಾಯದಲ್ಲಿ ಬೆಂಗಳೂರು ಪರಿಸರದಲ್ಲಿ ನಡೆದ ಚಳವಳಿಗಳ ಚರಿತ್ರೆಯಿದೆ. ಏಕೀಕರಣದ ನಂತರದಲ್ಲಿ ರಾಜಧಾನಿಯ ಕನ್ನಡಿಗರು ಅನುಭವಿಸುತ್ತಿದ್ದ ಅನಾಥಪ್ರಜ್ಞೆಗೆ ಪ್ರತಿಕ್ರಿಯೆಯ ರೂಪದಲ್ಲಿ ಜನ್ಮತಾಳಿದ ಚಳವಳಿ, ಕನ್ನಡ ಸಾಂಸ್ಕೃತಿಕ ಲೋಕದ ವಿವಿಧ ಧಾರೆಗಳಿಗೆ ಶಕ್ತಿದುಂಬಿದ ಕಥೆಯನ್ನು ಕೃತಿಕಾರರು ಸಾಕಷ್ಟು ದೀರ್ಘವಾಗಿಯೇ ದಾಖಲಿಸಿದ್ದಾರೆ. ಎರಡು ಮತ್ತು ಮೂರನೇ ಭಾಗದಲ್ಲಿ ಬೆಳಗಾವಿಯ ಕನ್ನಡ ಹೋರಾಟಗಳು ಹಾಗೂ ಗಡಿ ರಕ್ಷಣೆಗಾಗಿ ನಡೆದ ಸಂಘರ್ಷಗಳ ವಿವರಗಳಿವೆ. ಐದನೇ ಭಾಗ ‘ಗೋಕಾಕ್‌ ಚಳವಳಿ’ಗೆ ಮೀಸಲಾದುದು. ಗೋಕಾಕ್‌ ಭಾಷಾಸೂತ್ರದ ಹಿನ್ನೆಲೆಯಿಂದ ಹಿಡಿದು, ರಾಜಕುಮಾರ್‌ ಪ್ರವೇಶದ ಮೂಲಕ ಚಳವಳಿ ಜನಾಂದೋಲನವಾಗಿ ರೂಪುಗೊಂಡ ಕಥನ ಸಾಕಷ್ಟು ವಿವರವಾಗಿ ರೋಚಕವಾಗಿ ಮೂಡಿಬಂದಿದೆ. ನಂತರದ ಅಧ್ಯಾಯಗಳು – ಕನ್ನಡ ದೂರದರ್ಶನಕ್ಕಾಗಿ ನಡೆದ ಹೋರಾಟ, ‘ಕನ್ನಡಿಗರಿಗೆ ಕೆಲಸ’ ಧ್ಯೇಯವನ್ನೊಳಗೊಂಡ ಹೋರಾಟಗಳು, ನದಿ ನೀರಿಗಾಗಿ ನಡೆದ ಚಳವಳಿಗಳು, ಕನ್ನಡನಾಡು–ನುಡಿ ರಕ್ಷಣೆಗೆ ನಡೆದ ಹೋರಾಟ, ಕನ್ನಡಪರ ಸಂಘಟನೆಗಳ ಹುಟ್ಟು–ಬೆಳವಣಿಗೆಗಳನ್ನು ಚಿತ್ರಿಸಿವೆ. ಪುಸ್ತಕದ ಕೊನೆಯ ಭಾಗ, ‘ಕನ್ನಡ ಕಾಪಾಡಿದ ಕೈಗಳು’, ‘ಕನ್ನಡ ಚಳವಳಿ: ಪ್ರಭಾವ–ಪರಿಣಾಮ’ ಮತ್ತು ಆಕರಗಳಿಗೆ ಮೀಸಲಾದುದು. ಕನ್ನಡ ಚಳವಳಿ ತ್ಯಾಗ–ಬಲಿದಾನಗಳ ಪರಂಪರೆ ಒಳಗೊಂಡದ್ದು ಎನ್ನುವುದಕ್ಕೆ ‘ಕನ್ನಡ ಡಿಂಡಿಮ’ ಕೃತಿಯುದ್ದಕ್ಕೂ ಸಾಕ್ಷ್ಯಗಳಿವೆ. ಮ. ರಾಮಮೂರ್ತಿ, ಅ.ನ. ಕೃಷ್ಣರಾಯರು ಸೇರಿದಂತೆ ಅನೇಕ ನಾಯಕರ ಉದಾತ್ತ ವ್ಯಕ್ತಿತ್ವದ ಮೂಲಕ ಪುಷ್ಟಿಗೊಂಡ ಕನ್ನಡ ಚಳವಳಿ, ನಾಯಕರ ಸಣ್ಣತನದಿಂದಲೇ ತೇಜೋಹೀನವಾದ ದಾಖಲೆಯ ರೂಪದಲ್ಲೂ ಈ ಕೃತಿ ಮುಖ್ಯವೆನ್ನಿಸುತ್ತದೆ. ಕನ್ನಡ ಚಳವಳಿ ಎನ್ನುವುದು ನುಡಿಗಷ್ಟೇ ಸಂಬಂಧಿಸಿದ್ದಲ್ಲ; ನಾಡಿನ ಜನಜೀವನಕ್ಕೆ ಎದುರಾದ ಹಲವು ಬಿಕ್ಕಟ್ಟುಗಳಿಗೆ ಪ್ರತಿಕ್ರಿಯೆಯ ರೂಪದಲ್ಲೂ ಅದನ್ನು ಗುರ್ತಿಸಬೇಕು ಎನ್ನುವುದಕ್ಕೆ ‘ಕನ್ನಡ ಡಿಂಡಿಮ’ ಸಾಕಷ್ಟು ಉದಾಹರಣೆಗಳನ್ನು ನೀಡುತ್ತದೆ. ಈ ಕೃತಿಯನ್ನು ಏಕೀಕೃತ ಕರ್ನಾಟಕದ ಸಾಂಸ್ಕೃತಿಕ–ಸಾಮಾಜಿಕ ಇತಿಹಾಸದ ರೂಪದಲ್ಲೂ ಓದಲಿಕ್ಕೆ ಸಾಧ್ಯವಿದೆ. ನದಿ ವ್ಯಾಜ್ಯಗಳು, ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ನೌಕರಿ ದೊರೆಯದಿರುವುದು, ಸಂಗೀತ–ಸಿನಿಮಾ ಮಾಧ್ಯಮಗಳಲ್ಲಿನ ಪರಭಾಷಿಕರ ಪ್ರಾಬಲ್ಯ, ಗಡಿಯಲ್ಲಿನ ತವಕತಲ್ಲಣಗಳು – ಇವೆಲ್ಲವನ್ನೂ ಒಳಗೊಂಡಿರುವ ಕಾರಣದಿಂದಾಗಿ ಕನ್ನಡ ಚಳವಳಿ ಎನ್ನುವುದು ಒಟ್ಟಾರೆ ಕನ್ನಡ ಜನಜೀವನಕ್ಕೆ ಸಂಬಂಧಿಸಿದ ಪ್ರಮುಖ ವಿದ್ಯಮಾನವಾಗಿದೆ. ಚಳವಳಿಯ ಉತ್ಕರ್ಷವನ್ನು ವಸ್ತುನಿಷ್ಠತೆ ಹಾಗೂ ಉತ್ಸಾಹದಿಂದ ಚಿತ್ರಿಸುವ ಲೇಖಕರು, ಹೋರಾಟ ಹಳ್ಳ ಹಿಡಿದ ವಿವರಗಳನ್ನು ಹೇಳುವಾಗ ಭಾವುಕರಾಗಿರುವುದಿದೆ. ವ್ಯಕ್ತಿಗತ ಸ್ವಾರ್ಥಗಳಿಗೂ ಚಳವಳಿ ಬಳಕೆಯಾದುದರ ಸೂಚ್ಯ ವಿವರಗಳನ್ನು ಲೇಖಕರು ನೀಡಿದರೂ, ಕೆಲವು ಸಂದರ್ಭಗಳಲ್ಲಿ ಅವರು ಎತ್ತುವ ಪ್ರಶ್ನೆಗಳು ಏಕಮುಖವೆನ್ನಿಸುತ್ತವೆ. ಉದಾಹರಣೆಗೆ: ತನ್ನ ಅಸ್ತಿತ್ವ ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದ ಕನ್ನಡ ಚಿತ್ರರಂಗದ ನೆಲೆಗಟ್ಟನ್ನು ಚಳವಳಿ ಭದ್ರಪಡಿಸಿದ್ದನ್ನು ವಿವರವಾಗಿ ದಾಖಲಿಸುವ ಲೇಖಕರು‌, ‘ಕನ್ನಡ ಚಿತ್ರಗಳು ಉದ್ಧಾರವಾಗಲು ಶ್ರಮಿಸಿದ ನಿಸ್ವಾರ್ಥ ಕನ್ನಡ ಹೋರಾಟಗಾರರನ್ನು ಕನ್ನಡ ಚಿತ್ರರಂಗವು ಈಗ ನೆನಪಿಸಿಕೊಳ್ಳುತ್ತಿದೆಯೇ?’ ಎಂದು ಪ್ರಶ್ನಿಸಿದ್ದಾರೆ. ಇದು ಕೇಳಬೇಕಾದ ಪ್ರಶ್ನೆಯೇ. ಆದರೆ, ಈ ಪ್ರಶ್ನೆಯ ಜೊತೆಗೇ, ಯಾವ ಹೋರಾಟ ಡಬ್ಬಿಂಗ್ ಅನ್ನು ವಿರೋಧಿಸಿತೋ, ಅದೇ ಚಳವಳಿಯ ಸಂಗಾತಿಗಳು ಈಗ ಡಬ್ಬಿಂಗ್‌ಗಾಗಿ ಹಂಬಲಿಸಿದ್ದನ್ನೂ ಲೇಖಕರು ದಾಖಲಿಸಬೇಕಾಗಿತ್ತು. ಕನ್ನಡ ಚಳವಳಿ ರಾಜಕೀಯ ಆಯಮ ಪಡೆಯುವಲ್ಲಿ ಯಶಸ್ವಿಯಾಗದೆ ಹೋದುದು ಕನ್ನಡ ಜನರ ವಿವೇಕವನ್ನು ಸೂಚಿಸುತ್ತದೆ ಎನ್ನುವ ನಿಲುವನ್ನೂ ಒಪ್ಪುವುದು ಕಷ್ಟ. ಭಾಷೆಯ ಸ್ವಾಭಿಮಾನ ರಾಜಕಾರಣದ ಭಾಗವೂ ಆದಾಗ ದೊರೆಯುವ ಅನುಕೂಲಗಳಿಗೆ ಉದಾಹರಣೆಯಾಗಿ ತಮಿಳುನಾಡು, ಅಖಂಡ ಆಂಧ್ರಪ್ರದೇಶಗಳನ್ನು ನಾವು ಗಮನಿಸಬೇಕು. ಕರ್ನಾಟಕದ ರಾಜಕೀಯ ರಾಷ್ಟ್ರೀಯ ಪಕ್ಷಗಳ ಕೈಗಳಲ್ಲಿ ಸಿಲುಕಿ, ನಿರ್ಣಾಯಕ ಸಂದರ್ಭಗಳಲ್ಲಿ ನಾಡಿನ ಹಿತಕ್ಕೆ ಧಕ್ಕೆಯೊದಗುವುದಕ್ಕೂ ರಾಜ್ಯದಲ್ಲಿ ನಾಡು–ನುಡಿಯನ್ನು ಪ್ರತಿನಿಧಿಸುವ ಪಕ್ಷ ಇಲ್ಲದಿರುವುದಕ್ಕೂ ಸಂಬಂಧ ಇಲ್ಲದಿಲ್ಲ. ಕನ್ನಡ ಚಳವಳಿಯ ಕುರಿತಂತೆ ಪ್ರಾಮಾಣಿಕ ಹಾಗೂ ಸಾಕಷ್ಟು ಅಧಿಕೃತ ದಾಖಲೆಯಂತಿರುವ ಈ ಪುಸ್ತಕದ ಮುದ್ರಣ ಇನ್ನಷ್ಟು ಅಚ್ಚುಕಟ್ಟು, ಸೊಗಸಾಗಿರಬೇಕಾಗಿತ್ತು. ಮುಖ್ಯವಾಗಿ ಫೋಟೊಗಳ ಸಂಖ್ಯೆ ಹೆಚ್ಚಾಗಿರಬೇಕಿತ್ತು. ಹಿಂಬದಿಯ ರಕ್ಷಾಪುಟದಲ್ಲಿ ಪುಸ್ತಕದ ಅಥವಾ ಲೇಖಕರ ಮಾಹಿತಿಯ ಬದಲು, ಪ್ರಕಾಶನ ಸಂಸ್ಥೆಯ ಸಾಧನೆಯ ಟಿಪ್ಪಣಿಯಿರುವುದೇ ಪುಸ್ತಕದ ಮಹತ್ವವನ್ನು ಪ್ರಕಾಶಕರು ಗ್ರಹಿಸಿರುವ ವಿಧಾನಕ್ಕೆ ಸಾಕ್ಷಿಯಂತಿದೆ. ಕನ್ನಡ ಚಳವಳಿ ಹೊಸ ಸ್ವರೂಪವನ್ನು ಪಡೆಯಲು ತವಕಿಸುತ್ತಿರುವ ಸಂದರ್ಭದಲ್ಲಿ, ಆ ಚಳವಳಿಗೊಂದು ಸಶಕ್ತ ಪರಂಪರೆ ಹಾಗೂ ತಾತ್ವಿಕ ನೆಲೆಗಟ್ಟು ಇರುವುದನ್ನು ರಾ.ನಂ. ಅವರ ಕೃತಿ ಸಮರ್ಥವಾಗಿ ಬಿಂಬಿಸುತ್ತದೆ. ಅರ್ಥಪೂರ್ಣವೂ ಅಧ್ಯಯನ‍ಪೂರ್ಣವೂ ಆದ ‘ಕನ್ನಡ ಡಿಂಡಿಮ’ ಹೊಸ ತಲೆಮಾರಿನಲ್ಲಿ ಕನ್ನಡಪ್ರಜ್ಞೆಯನ್ನು ಮೂಡಿಸುವ ನಿಟ್ಟಿನಲ್ಲೂ ಬಹಳ ಮುಖ್ಯವಾದ ಪುಸ್ತಕ.

“author”: “ರಘುನಾಥ ಚ.ಹ.”

courtsey:prajavani.net

https://www.prajavani.net/artculture/book-review/kannada-language-issue-660259.html

Leave a Reply