ಕಸ್ತೂರಬಾ ಜೀವನ ಚರಿತೆ- ಕಾದಂಬರಿ ಓದಿದ ಅನುಭೂತಿ

ನೆರಳಿಲ್ಲದ ಮರ ಲೇ: ಡಾ. ಬಸು ಬೇವಿನಗಿಡದ ಪ್ರ: ಪಲ್ಲವ ಪ್ರಕಾಶನ ಮೊ: 9480353507 ಕಥೆ ಕಟ್ಟುವ ಶೈಲಿಗಳು ಹಲವು. ಅವುಗಳಲ್ಲಿ ಬದುಕಿನ ಅನುಭವದಿಂದ ಕಟ್ಟಿಕೊಡುವ ಕಥನ ಅಥವಾ ಬರಹಗಳು ಆಪ್ತಭಾವ ಮೂಡಿಸುತ್ತವೆ. ಬದುಕಿನಲ್ಲಿ ನಡೆದ ಯಾವುದೋ ಘಟನೆಗಳು, ಅಂದಿನ ಸ್ಥಿತಿ–ಗತಿ, ವ್ಯವಸ್ಥೆ, ಸ್ಥಳೀಯ ಭಾಷಾ ಸೊಗಡು ಪರಿಚಯಿಸುವಲ್ಲಿ ಬರಹಗಾರರು ಜಾಣ್ಮೆ ವಹಿಸಿದರೆ ಮತ್ತು ಪಾತ್ರಗಳನ್ನು ಕಟ್ಟುವಲ್ಲಿ ಸೂಕ್ಷ್ಮತೆ ಕಾಯ್ದುಕೊಂಡರೆ ಆ ಕಥೆ ಅಥವಾ ಬರಹ ಅಲ್ಲಿ ಮೊದಲ ಗೆಲುವು ಸಾಧಿಸಿದಂತೆ. ಲೇಖಕ ಬಸು ಬೇವಿನಗಿಡದ ಅವರ ‘ನೆರಳಿಲ್ಲದ ಮರ’ ಕಥಾ ಸಂಕಲನದಲ್ಲೂ ಭಾಷಾ ಸೊಗಡು, ಪಾತ್ರಗಳ ಸೂಕ್ಷ್ಮತೆ ಅಡಗಿದೆ. ಇದರಲ್ಲಿ ಎಂಟು ಕಥೆಗಳಿವೆ. ಜನಸಾಮಾನ್ಯರ ಬದುಕಿನ ಅಸಮಾನ್ಯ ಸ್ಥಿತಿ–ಗತಿಗಳನ್ನು ಇಲ್ಲಿನ ಕಥೆಗಳ ಪಾತ್ರಗಳಲ್ಲಿ ಕಾಣಬಹುದು. ಮನುಷ್ಯ ಸಂಬಂಧಗಳ ಪ್ರಸಕ್ತ ಕಾಲಮಾನದ ಸ್ಥಿತಿ; ಮೌಢ್ಯ, ಸ್ವಾರ್ಥಕ್ಕೆ ಸಿಲುಕಿ ನರಳುವ ವ್ಯಕ್ತಿಯ ಸ್ಥಿತಿ, ಕೌಟುಂಬಿಕ ಬಿರುಕು ಮತ್ತು ಅವಹೇಳನದ ಮಾತುಗಳ ಪರಿಚಯ ‘ನೆರಳಿಲ್ಲದ ಮರ’ದಲ್ಲಿ ಓದಿಗೆ ದಕ್ಕುತ್ತದೆ. ಬದುಕಿನಲ್ಲಾಗುವ ಹೊಸ ಬದಲಾವಣೆಗಳನ್ನು ಒಪ್ಪಿಕೊಳ್ಳುವ ಮನೋಭಾವದಲ್ಲಾಗುವ ತೊಡಕುಗಳು, ಹೊಸತು– ಹಳೆಯದರ ಸಂಘರ್ಷವನ್ನು ‘ತುಳುಕಿ ಹೋಗಿತ್ತ’ ಕಥೆ ಚಿತ್ರಿಸಿದೆ. ಎಂಟೂ ಕಥೆಗಳಲ್ಲೂ ವಿಭಿನ್ನತೆ ಇದೆ. ನಾನು ಕಸ್ತೂರ ಲೇ: ಡಾ.ಎಚ್‌.ಎಸ್‌. ಅನುಪಮಾ ಪ್ರ: ಲಡಾಯಿ ಪ್ರಕಾಶನ ಮೊ: 94802 11320 ಈ ಕೃತಿಯು ಕಸ್ತೂರಬಾ ಜೀವನ ಚಿತ್ರಣವನ್ನು ಸಮಗ್ರವಾಗಿ ತೆರೆದಿಟ್ಟಿದೆ. ಗಾಂಧಿಗೆ 150 ತುಂಬಿದಂತೆ ಕಸ್ತೂರಬಾಗೂ ಈಗ 150ನೇ ವರ್ಷ. ಈ ವೇಳೆಯಲ್ಲಿ ಅವರ ಸಂಪೂರ್ಣ ಬದುಕಿನ ಚಿತ್ರಣವನ್ನು ಕಟ್ಟಿಕೊಡಲು ಲೇಖಕಿ, ಗುಜರಾತಿನ ಪೋರಬಂದರ ಮತ್ತು ಸಬರಮತಿಗೂ ಖುದ್ದು ಭೇಟಿ ಕೊಟ್ಟು ಅಮೂಲ್ಯ ಮಾಹಿತಿಗಳನ್ನು ಮತ್ತು ಅಪರೂಪದ ಛಾಯಾಚಿತ್ರಗಳನ್ನು ಕಲೆಹಾಕಿ, ಕೃತಿಯಾಗಿಸಿ ಓದುಗರ ಕೈಗೆ ಇಟ್ಟಿದ್ದಾರೆ. ಜತೆಗೆ ಮಹಾತ್ಮ ಗಾಂಧಿಯವರ ‘ನನ್ನ ಸತ್ಯಶೋಧನೆಯ ಕಥೆ’ ಆತ್ಮಕಥೆಯೂ ಸೇರಿದಂತೆ ಹಲವು ಕೃತಿಗಳನ್ನು ಆಕರವಾಗಿಟ್ಟುಕೊಂಡು ಕಸ್ತೂರಬಾ ಬದುಕಿನ ಚಿತ್ರಣವನ್ನು ಅಕ್ಷರವಾಗಿಸಿದ್ದಾರೆ. ಇದರಲ್ಲಿ ಇಪ್ಪತ್ತೆರಡು ಅಧ್ಯಾಯಗಳಿವೆ. ದೇಶದ ಸಾಮಾಜಿಕ– ರಾಜಕೀಯ ಜೀವನದ ಸ್ಥಿತ್ಯಂತರಗಳ ಜೊತೆಗೇ ವೈಯಕ್ತಿಕ ಬದುಕಿನ ತಿರುವುಗಳನ್ನೂ ಕಂಡ ಒಂದು ಹೆಣ್ಣಿನ ಜೀವನಕಥೆಯಂತೆ ಕಸ್ತೂರಬಾ ಅವರ ಜೀವನಗಾಥೆ ಓದುಗರ ಮನಕ್ಕೆ ಇಳಿಯುತ್ತದೆ. ಬರವಣಿಗೆಯ ಶೈಲಿಯಿಂದಾಗಿ ಒಂದು ಕಾದಂಬರಿಯನ್ನು ಓದಿದ ಅನುಭೂತಿಯೂ ಓದುಗನಿಗೆ ದಕ್ಕುತ್ತದೆ. ಗಾಂಧಿ ಮತ್ತು ಕಸ್ತೂರಬಾ ಅವರ ಬದುಕು ಒಟ್ಟೊಟ್ಟಿಗೆ ಹೆಣೆದುಕೊಂಡಿದ್ದು, ಕಸ್ತೂರಬಾ ಅವರನ್ನು ಗಾಂಧಿಯನ್ನು ಬಿಟ್ಟು ಓದಲು ಸಾಧ್ಯವಾಗದು. ಹಾಗಾಗಿ ಈ ಇಬ್ಬರ ಜೀವನದರ್ಶನವೂ ಈ ಕೃತಿಯಲ್ಲಿ ಲಭಿಸುತ್ತದೆ. ಕನ್ನಡ ಮಾರ್ದನಿ ಲೇ: ರಾ.ನಂ. ಚಂದ್ರಶೇಖರ ಪ್ರ:ಸಪ್ನ ಬುಕ್‌ ಹೌಸ್‌, ಬೆಂಗಳೂರು ದೂ: 080– 40114455 ಭಾಷೆಯ ಉಳಿವು ಅದರ ಬಳಕೆಯ ಮೇಲೆ ನಿಂತಿದೆ. ಆದರೆ, ಪ್ರಸ್ತುತ ದಿನಮಾನಗಳಲ್ಲಿ ಆಧುನಿಕತೆಯ ನೆರಳಲ್ಲಿ ಕನ್ನಡ ಭಾಷೆ ನಲುಗುತ್ತಿರುವುದು ಕಟುಸತ್ಯ. ತನ್ನ ಭಾಷಾ ಅಸ್ಮಿತೆಯ ಉಳಿವಿನ ಹೋರಾಟದೊಂದಿಗೆ ಇತರ ಭಾಷೆಗಳನ್ನು ಗೌರವಿಸುವುದು ಸರಿಯಷ್ಟೆ. ವಿಪರ್ಯಾಸವೆಂಬಂತೆ ಕನ್ನಡ ನೆಲದಲ್ಲೇ ಕನ್ನಡಿಗ ಅನಾಥನಾಗುವ ಹಂತಕ್ಕೆ ತಲುಪಿದ್ದಾನೆಂದರೆ ಅದು ಭಾಷಾ ನಿರ್ಲಕ್ಷ್ಯತೆಯ ಪರಮಾವಧಿ ಎಂಬುದು ಲೇಖಕರ ಅಂಬೋಣ. ಭಾಷೆ ಉಳಿವಿನ ನೋವು, ನಿಟ್ಟುಸಿರುಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ ಇಲ್ಲಿ. ‘ಇಂಗ್ಲಿಷಿನ ಚಪ್ಪಡಿಯಡಿಯ ಹಸುಳೆ ಚೀತ್ಕಾರ’ ಎಂಬ ಕುವೆಂಪು ಅವರ ಮಾತು ಭಾಷೆಯ ಇಂದಿನ ಬಳಲಿಕೆಗೆ ಹಿಡಿದ ಕೈಗನ್ನಡಿ. ಹೋರಾಟದ ಮೂಲಕ ಏಕೀಕರಣಗೊಂಡ ಕರ್ನಾಟಕ ಹಾಗೂ ಕನ್ನಡ ಇಂದು ಹಲವರ ಬಿಗಿಹಿಡಿತ ಹಾಗೂ ನಮ್ಮವರ ದಿವ್ಯನಿರ್ಲಕ್ಷ್ಯದಿಂದ ಸೊರಗುತ್ತಿರುವುದರ ಅಳಲನ್ನು ‘ಕನ್ನಡ ಮಾರ್ದನಿ’ ನಿರ್ಭಿಡೆಯಿಂದ ಪ್ರತಿಧ್ವನಿಸಿದೆ. ಕರ್ನಾಟಕಕ್ಕೆ ಎದುರಾಗಿರುವ ಸವಾಲು, ಸಂಕಷ್ಟಗಳ ಚರ್ಚೆಯೊಟ್ಟಿಗೆ, ಸಮಸ್ಯೆಗಳ ವಿವಿಧ ಮಜಲು, ಪರಿಹಾರ ಕುರಿತು ಚರ್ಚಿಸಲಾಗಿದೆ. ನೈಜ ಕಾಳಜಿ ಕೇವಲ ಆಚರಣೆಗೆ ಸೀಮಿತವಾಗದೆ, ಕಾರ್ಯರೂಪಕ್ಕೆ ಇಳಿಯಲಿ ಎಂಬುದು ಪುಸ್ತಕದ ಕಾಳಜಿ. ಇದು ಇಂದಿನ ತುರ್ತೂ ಹೌದು.ವೈವಿಧ್ಯಮಯ ರೇಖಾ ಚಿತ್ರಗಳು ಲೇ: ಎಂ.ಆರ್‌. ಬಾಳಿಕಾಯಿ ಪ್ರ:ಎಂ.ಆರ್‌. ಬಾಳಿಕಾಯಿ ಆರ್ಟ್‌ ಗ್ಯಾಲರಿ, ವಿಕಾಸನಗರ, ಧಾರವಾಡ ಚಿತ್ರಕಲೆಯಂತಹ ‌ಸೃಜನಶೀಲ ಮಾಧ್ಯಮದಲ್ಲಿ ಹೆಸರು ಮಾಡಿದವರು ಹಿರಿಯ ಕಲಾವಿದ ಎಂ.ಆರ್‌.ಬಾಳಿಕಾಯಿ. ಅವರು ಸೀದಾ ಸಾದಾ, ಅಂಕುಡೊಂಕು, ಉದ್ದ, ಅಡ್ಡ, ವಾಸ್ತವಿಕ ಹಾಗೂ ಅವಾಸ್ತವಿಕ ರೇಖೆಗಳ ಮೂಲಕ ಸೃಷ್ಟಿಸಿದ ಕಲಾಕೃತಿಗಳಲ್ಲಿ ಆಯ್ದ ಕಲಾಕೃತಿಗಳ ಚಿತ್ರಗಳನ್ನು ಒಳಗೊಂಡ ‘ವೈವಿಧ್ಯಮಯ ರೇಖಾ ಚಿತ್ರಗಳು’ ಕೃತಿ ಹೊರಬಂದಿದೆ. ಇಂತಹ ಕೃತಿಗಳು ಕನ್ನಡದ ಮಟ್ಟಿಗೆ ವಿರಳ ಎನ್ನಬಹುದು. ಬಾಳಿಕಾಯಿ ತಮ್ಮ ಜೀವನಾನುಭವದ ಜತೆಗೆ ಪರಿಸರ ಮತ್ತು ಸಮಾಜದ ಅವಲೋಕನ, ಭಾವನೆಗಳು ಹಾಗೂ ದೃಷ್ಟಿಕೋನವನ್ನು ಚಿತ್ರಕೃತಿಯಾಗಿಸಿದ್ದಾರೆ. ಮಹಾತ್ಮಗಾಂಧಿ, ಮಹಾವೀರ, ಬುದ್ಧ ಮುಂತಾದವರ ಕಲಾಕೃತಿಗಳನ್ನು ಬರೀ ಗೆರೆಯಿಂದಷ್ಟೇ ಮೂಡಿಸಿಲ್ಲ; ಜತೆಗೆ ಇಂತಹ ಕಲಾಕೃತಿಗಳ ಮೂಲಕ ಜೀವನ ದರ್ಶನಕ್ಕೆ ಪ್ರಯತ್ನಿಸಿರುವುದು ಕಾಣಿಸುತ್ತದೆ. ಮನುಷ್ಯನ ಒಳಗಣ್ಣನ್ನು ತೆರೆಸುವ ಶಕ್ತಿ ಇರುವುದು ಚಿತ್ರಕಲೆಗೆ. ಚಿತ್ರಕ್ಕೆ ಮತ್ತು ಚಿತ್ರಕಲೆಗೆ ಇರುವ ಶಕ್ತಿಯೇ ಅಂಥದ್ದು. ಲೇಖಕರ ಪರಿಚಯದ ಜತೆಗೆ, ಹದಿನೇಳು ಅಧ್ಯಾಯಗಳಿವೆ. ನರಸಿಂಹ ಪರಾಂಜಪೆ ಅವರ ಮೌಲಿಕ ಮುನ್ನುಡಿ, ಡಾ.ಬಸವರಾಜ ಎಸ್‌.ಕಲೆಗಾರ ಅವರ ‘ಗೆರೆಯೊಳಗಿ ವಾಸ್ತವತೆ’ ಮತ್ತು ಎಂ.ಆರ್‌.ಬಾಳಿಕಾಯಿಯವರ ‘ಆಕೃತಿಯ ಒಳಗೊಂದು ಕಣ್ಣಿದೆ, ಉಸಿರಿದೆ’ ಬರಹಗಳು ಒಟ್ಟು ಕೃತಿಯನ್ನು ಅರ್ಥ ಮಾಡಿಕೊಳ್ಳಲು ಹಲವಾರು ಹೊಳಹುಗಳನ್ನು ನೀಡುತ್ತವೆ. ಬೇಂದ್ರೆ ಮತ್ತು ಬಾಳಿಕಾಯಿ ನಡುವಿನ ಸಂಭಾಷಣೆಯ ಪ್ರಸಂಗವು ಆಸಕ್ತಿದಾಯಕವಾಗಿವೆ. ತರುಣ ಪೀಳಿಗೆಯ ಕಲಾವಿದ್ಯಾರ್ಥಿಗಳಿಗೂ ಒಂದು ಕೈಪಿಡಿಯಂತಿರುವ ಕೃತಿಯಾಗಿದೆ ಇದು. ವಿಶ್ವದಲ್ಲಿ ನಾವು ಏಕಾಂಗಿಗಳೇ? ಲೇ: ಡಾ.ಎಚ್‌.ಆರ್‌.ಕೃಷ್ಣಮೂರ್ತಿ ಪ್ರ: ನವಕರ್ನಾಟಕ ದೂ: 080–22161900 ವಿಜ್ಞಾನವೆಂದರೆ ಅದು ಕುತೂಹಲದ ಮೂಟೆ. ಇನ್ನು ಬಾಹ್ಯಾಕಾಶವೆಂದರೆ ರಾಶಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ತಲೆ ಮೇಲೆ ದೊಡ್ಡ ಸೂರಿನಂತೆ ಕಾಣುವ ಆಕಾಶದಲ್ಲಿ ನಕ್ಷತ್ರಗಳು ಎಷ್ಟಿರಬಹುದು ಎಂಬ ಪ್ರಶ್ನೆ ಎಂದಾದರೂ ನಮ್ಮ ತಲೆಯಲ್ಲಿ ಬಂದೇ ಬಂದಿರುತ್ತದೆ. ಈ ಭೂಮಿಯ ಮೇಲೆ ಜೀವಿಯ ಉಗಮ ಹೇಗೆ ಆಗಿದ್ದಿರಬಹುದು? ಸೌರವ್ಯೂಹದಲ್ಲಿ ಏನೆಲ್ಲ ಇರಬಹುದು? ವಿಶಾಲ ವಿಶ್ವದಲ್ಲಿ ಭೂಮಿಯನ್ನು ಬಿಟ್ಟು ಬೇರೆ ಎಲ್ಲಿ ಜೀವಿಗಳು ಇರಬಹುದು? ಹೀಗೆ ನಾನಾ ಪ್ರಶ್ನೆಗಳು ನಮ್ಮನ್ನು ಎಂದಾದರೂ ಕಾಡೇ ಇರುತ್ತವೆ. ಇಂಥಹುದೇ ಹಲವು ಆಸಕ್ತ ಪ್ರಶ್ನೆಗಳಿಗೆ ಬಹಳ ಆಸ್ಥೆ ವಹಿಸಿ ಹಂತ ಹಂತವಾಗಿ ‘ವಿಶ್ವದಲ್ಲಿ ನಾವು ಏಕಾಂಗಿಗಳೇ’ ಕೃತಿಯ ಮೂಲಕ ಉತ್ತರಿಸಿದ್ದಾರೆ ಲೇಖಕರು. ವಿಜ್ಞಾನ ಲೇಖಕರಾಗಿ ಗುರುತಿಸಿಕೊಂಡಿರುವ ಇವರು, ವಿಜ್ಞಾನವೆಂದರೆ ಕ್ಲಿಷ್ಟವಲ್ಲ; ಅದಕ್ಕೊಂದು ಸರಳವಾದ ಆಯಾಮವಿದೆ ಎಂಬುದನ್ನು ಸರಳ ಭಾಷೆಯ ಮೂಲಕ ತಿಳಿಸಿಕೊಟ್ಟಿದ್ದಾರೆ. ಬ್ರಹ್ಮಾಂಡದ ಹಲವು ಕೌತುಕಗಳನ್ನು ಅರಿಯಲು ಇದೊಂದು ಕೈಪಿಡಿಯಂತಿದೆ.

courtsey:prajavani.net

https://www.prajavani.net/artculture/book-review/kasturba-lifistory-689915.html

Leave a Reply