ಕವಿ, ಕಾಲದ ಕೂಸು…: ಸಿದ್ಧಲಿಂಗ ಪಟ್ಟಣಶೆಟ್ಟಿ

ಅರ್ಧಶತಮಾನಕ್ಕೂ ಹೆಚ್ಚು ಕಾಲ ಕಾವ್ಯವನ್ನು ಧ್ಯಾನದಂತೆ ಬದುಕಿದವರು ನೀವು. ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ಕೆಲಸ ಮಾಡಿದ್ದೀರಿ. ಆದರೆ, ಕಾವ್ಯವೇ ನಿಮ್ಮ ಅಸ್ಮಿತೆ. ಈ ನಂಟಿನ ಬಗ್ಗೆ ಏನನ್ನಿಸುತ್ತಿದೆ? ನಿಮ್ಮ ಗ್ರಹಿಕೆ ಸರಿಯಾಗಿದೆ. ಬದುಕು, ಬೋಧನೆ, ಬರವಣಿಗೆ ಎಲ್ಲ ಹಂತಗಳಲ್ಲಿ ಕಾವ್ಯವನ್ನು ಪ್ರೀತಿಸುತ್ತ, ಧ್ಯಾನಿಸುತ್ತ, ಆರಾಧಿಸುತ್ತ ಬಂದವನು ನಾನು. ಆರಂಭದಿಂದ ನನಗೆ ಸಿಕ್ಕಿದ, ದಕ್ಕಿದ ಬದುಕು ಉಸುರಿನ ಕಠಿಣ ಪ್ರಸ್ತರಗಳನ್ನು ಮತ್ತು ಉಸುರುವ ಮಧುರ ಪ್ರಸ್ತಾರಗಳನ್ನು ಸಮಾನವಾಗಿ ಪ್ರೀತಿಸುವಂತೆ ಕಲಿಸಿದೆ. 1-2 ವರ್ಷದವನಿದ್ದೆ. ಅಪ್ಪ ತೀರಿದ. ನನ್ನವ್ವ ಗಿರಿಜವ್ವ ಕೂಲಿ-ನಾಲಿ ಮಾಡಿ, ತಾನು ಉಪವಾಸ ಇದ್ದು, ನನಗೆ ಉಣಿಸಿದಳು. ಅಂದಿನ ಕಷ್ಟದ ದಿನಗಳನ್ನು ಈಗಲೂ ಕಾಣುವ, ನೆನೆಯುವ ಗುಣ ನನ್ನನ್ನು ಭಾವುಕನನ್ನಾಗಿಸಿದೆ. ಅಭಾವ, ಅಪಮಾನ, ಆಘಾತ, ತಾತ್ಸಾರ ಮುಂತಾದುವು ಕಾವ್ಯಪೋಷಕ ದ್ರವ್ಯಗಳೇ. ಅವು ನನ್ನನ್ನು ಬೆಳೆಸಿವೆ.ಕಾವ್ಯ ಅಪೇಕ್ಷಿಸುವ ಕಾಯುವಿಕೆ, ಸಹನೆ, ಏನನ್ನೂ ಬೇಡದ ನಿರಪೇಕ್ಷೆ, ಅರ್ಥಪೂರ್ಣ ಮೌನ, ಸ್ವೀಕೃತಿ, ನನ್ನಲ್ಲಿರದ ಪ್ರತಿಯೊಂದನ್ನೂ ಗೌರವದಿಂದ ಕಾಣುವ ಅನಸೂಯೆ ಮುಂತಾದುವನ್ನು ಮಕ್ಕಳಂತೆ ಅಕ್ಕರೆಯಿಂದ ಕಂಡಿದ್ದೇನೆ. ಹೀಗಾಗಿ ನಾನು ಬರೆದ ಕತೆ, ವಿಮರ್ಶೆ, ಅಂಕಣ, ಅನುವಾದಿಸಿದ ನಾಟಕ, ಕಲಿಸಿದ ಪಾಠ, ಆಡಿದ ನುಡಿ, ಹೊಂದಿದ ಸಂಬಂಧ ಎಲ್ಲದರಲ್ಲಿಯೂ ಇಂಥ ಆತ್ಮೀಯ ಭಾವುಕ ಕವಿತೆಯೇ ಅಡಗಿದೆ. ನನ್ನ ಸಮಸ್ತ ಬರವಣಿಗೆಯಲ್ಲಿ ಹುದುಗಿರುವ ಈ ನಂಟಿನ ಅಂಟನ್ನು ಗುರುತಿಸಿ, ಆತ್ಮೀಯರು ನನ್ನನ್ನು ಕವಿ ಎಂದರೆ ಹೆಮ್ಮೆಯೆನಿಸುತ್ತದೆ. ಕನ್ನಡ ಮತ್ತು ಹಿಂದಿ ಈ ಎರಡೂ ಭಾಷಿಕ -ಸಾಹಿತ್ಯಿಕ ಪ್ರಬುದ್ಧತೆ ನಿಮ್ಮದು. ಹಿಂದಿಯ ಮಹತ್ವದ ನಾಟಕಗಳನ್ನು ‘ಕನ್ನಡದ್ದೇ’ ಆಗಿಸಿದವರು. ಅನುವಾದ ನಿಮ್ಮ ಅಭಿವ್ಯಕ್ತಿಯ ಮುಖ್ಯ ಚಹರೆ. ಈ ಬಗ್ಗೆ ಏನು ಹೇಳ ಬಯಸುತ್ತೀರಿ?ಕನ್ನಡದ ಪಾಟಿಯ ಮೇಲೆ ಹಿಂದಿಯ ನಾಗರಿ ಮತ್ತು ಇತರ ಲಿಪಿಗಳನ್ನು ಮೂಡಿಸುವ ಕನ್ನಡಿಗ ನಾನು. ಬಾಲ್ಯದಿಂದಲೂ ಬಹುಭಾಷೆಗಳನ್ನು ಓದುವ, ಕೇಳುವ, ತಿಳಿಯುವ ಹುಚ್ಚು. ಅದಕ್ಕೆ ಬಹುಭಾಷಿಕ ಗೆಳೆಯರು, ಶಿಕ್ಷಕರ ಪ್ರೇಮವೂ ಕಾರಣ. ಹೈಸ್ಕೂಲಿನಲ್ಲಿದ್ದಾಗಲೇ ಇಂಗ್ಲಿಷ್ ಜೊತೆಗೆ ಜರ್ಮನ್, ಅರ್ಧಮಾಗಧಿ, ಸಂಸ್ಕೃತ, ಹಿಂದಿ, ಸ್ವಲ್ಪ ಮರಾಠಿ ಒಡನಾಟ ಹೊಂದಿದ್ದೆ. ಆದರೆ, ಹೈಸ್ಕೂಲಿಗೆ ಬಂದ ಹೊಸತರಲ್ಲಿ ಕಡ್ಡಾಯವಾಗಿದ್ದ ಹಿಂದಿಯಲ್ಲಿ ನಪಾಸಾಗಿದ್ದೆ. ನನ್ನನ್ನು ಅವಮಾನಿಸಿದ ಹಿಂದಿಯನ್ನು ಗೆಲ್ಲಲು ಹೋಗಿ, ಹಠದಿಂದ ಹೆಚ್ಚು ಒಳ್ಳೆಯ ಹಿಂದಿ ಕಲಿತೆ, ಓದಿದೆ, ಕೊನೆಗೆ ಹಿಂದಿಯನ್ನು ಪ್ರೀತಿಸತೊಡಗಿದೆ. ಕನ್ನಡ ಮತ್ತು ಹಿಂದಿ ಎರಡರಲ್ಲೂ ನಿರರ್ಗಳವಾಗಿ ಮಾತಾಡಬಲ್ಲೆ, ಬರೆಯಬಲ್ಲೆ 1962ರ ಕೊನೆಯಲ್ಲಿ ಬಿ.ವಿ. ಕಾರಂತರ ಒತ್ತಾಯದಿಂದಾಗಿ, ಮೋಹನ್ ರಾಕೇಶ್ ಅವರ ‘ಆಷಾಢದ ಒಂದು ದಿನ’ ಅನುವಾದಿಸಿ ಕೊಟ್ಟೆ. ಅಂದಿನಿಂದ ಹಲವರ ಪ್ರೀತಿ, ಒತ್ತಾಯ, ಆಗ್ರಹಗಳಿಗೆ ಮಣಿದು ಹಿಂದಿ ಹಾಗೂ ಇತರ ಭಾಷೆಗಳ ಅನೇಕ ನಾಟಕಗಳನ್ನು, ಇತರ ಕೃತಿಗಳನ್ನು ಕನ್ನಡಿಸಿದ್ದೇನೆ. ಅನುವಾದಗೊಳ್ಳುವ ಕೃತಿಯ ಆಯ್ಕೆ ನಮ್ಮ ಭಾಷೆಗೆ ಹೊಸ ಕಾಣ್ಕೆಯಾಗಿ ಬರಬೇಕು; ಅದು ಭಾಷಾಂತರ ಮಾತ್ರವಾಗದೆ, ಕನ್ನಡದ ಸ್ವತಂತ್ರ ಕೃತಿಯಂತೆ ಓದಿಸಿಕೊಳ್ಳಬೇಕು, ಅನು-ಸೃಷ್ಟಿಯಾಗಬೇಕು. ಹಾಗೆ ಶ್ರಮಿಸಬೇಕು. ಅದು ಕಾಯಾಂತರ, ಆತ್ಮಾಂತರವಾಗಿ ಬರಬೇಕು. ಕನ್ನಡದ ‘ಹದ್ದು ಮೀರಿದ ಹಾದಿ’ಯನ್ನು ಹಿಂದಿಗೆ ತಂದಾಗಲೂ ಇಂಥದೇ ಕೆಲಸ ಮಾಡಿದ್ದೇನೆ. ನೀವು ಈ ಎರಡೂ ಭಾಷೆ- ಸಾಹಿತ್ಯಗಳ ಒಡನಾಡಿ. ‘ಇಂದು ರಾಜಕಾರಣ ಹಿಂದಿ ಹೇರಿಕೆ ಮಾಡುತ್ತಿದೆ. ಹಿಂದಿ ನಮಗೆ ಜೊತೆ ಭಾಷೆಯಾಗುತ್ತಿಲ್ಲ. ಪ್ರಭುತ್ವ ಭಾಷೆಯಾಗ್ತಿದೆ’ –ಎಂಬ ಆತಂಕವನ್ನು, ಕನ್ನಡವನ್ನೂ ಒಳಗೊಂಡ ಹಾಗೆ ದಕ್ಷಿಣದ ಭಾಷೆಗಳು ವ್ಯಕ್ತಪಡಿಸ್ತಿವೆಯಲ್ಲ. ಏನು ಹೇಳಲು ಇಚ್ಛಿಸುತ್ತೀರಿ? ಈಗಿನ ಸಂದರ್ಭದಲ್ಲಿ ಇದು ಮಹತ್ವದ ಪ್ರಶ್ನೆ. ರಾಜಕಾರಣ ಹಿಂದಿ ಹೇರಿಕೆ ಮಾಡಿದರೆ ರಾಜಕಾರಣಿಗಳು ರಾಜಕೀಯಕ್ಕಾಗಿ ಅದನ್ನು ವಿರೋಧಿಸುತ್ತಾರೆ. ನಮ್ಮ ನಾಡಿ ನಲ್ಲಿಯೇ ಉತ್ತರ ಕರ್ನಾಟಕದಲ್ಲಿ ಹಿಂದಿ ಎಂದೂ ಸಮಸ್ಯೆಯಾಗಲೇ ಇಲ್ಲ. ನಮ್ಮ ದೇಶದಲ್ಲಿ ಅಘೋಷಿತವಾಗಿ, ಇಂಗ್ಲಿಷ್ ಅಲ್ಲ, ಹಿಂದಿಯೇ ಜನತೆಯ ಸಂಪರ್ಕ ಭಾಷೆಯಾಗಿದೆ. ಮೊಘಲರ ಆಡಳಿತದ ಕಾಲಕ್ಕೆ ಕೋರ್ಟು, ಕಚೇರಿ ಎಲ್ಲ ವ್ಯವಹಾರದಲ್ಲಿ ಫಾರ್ಸಿ ಭಾಷೆಯನ್ನು, ನಮ್ಮ ಭಾಗದಲ್ಲಿ ಕೆಲಕಾಲ ಮರಾಠಿಯನ್ನು ಸಹ ಒಪ್ಪಿಕೊಂಡಿದ್ದ ನಾವು, ನಂತರ ಆಂಗ್ಲರ ಅಧೀನದಲ್ಲಿ ಇಂಗ್ಲಿಷ್‍ಗೆ ಭಾಷಾಂತರಗೊಂಡವರು. ಒಂದು ವಿದೇಶಿ ಭಾಷೆಯನ್ನು ಒಪ್ಪಿ ಬಳಸುವ ಮನಸ್ಸು, ಶಕ್ತಿ ಇದ್ದವರು ನಮ್ಮದೇ ಸಂಸ್ಕೃತಿಯ, ಬಹುಜನರು ಬಳಸುವ ಒಂದು ಭಾಷೆಯನ್ನು ಕಲಿಯುವುದು ಕಷ್ಟವಲ್ಲ. ಹಿಂದಿಯ ವಿರೋಧ ಕೇವಲ ರಾಜಕಾರಣ. ನಾವು ಕನ್ನಡಿಗರು ಹಿಂದಿ ಹೇರಿಕೆಯನ್ನು ಖಂಡಿತವಾಗಿಯೂ ವಿರೋಧಿಸೋಣ, ಹಿಂದಿಯನ್ನಲ್ಲ. ಹಿಂದಿಯನ್ನು ವಿರೋಧಿಸುವ ನೆಪದಲ್ಲಿ, ಇಂಗ್ಲಿಷ್‍ಪರ ಹೇಳಿಕೆ ನೀಡುವುದೂ ಸರಿಯಲ್ಲ. ರಂಗಭೂಮಿಯ ಒಲವು ಹೇಗೆ ಅಂಕುರಿಸಿತ್ತು? ಬಹುಶಃ ನಿಮ್ಮ ಒಂದು ಪಾದ ಸಾಹಿತ್ಯವಾದರೆ, ಇನ್ನೊಂದು ಪಾದ ರಂಗಭೂಮಿ. ಈಗ ಹಿಂದಿರುಗಿ ನೋಡಿದರೆ, ಈ ಜೊತೆ ಹೆಜ್ಜೆ ನೀಡಿದ ಧನ್ಯತೆಯೇನು? ಅವ್ವನ ತವರುಮನೆ ಯಾದವಾಡ. ಧಾರವಾಡದಿಂದ ಆರು ಮೈಲು ಆಚೆ ಬೆಳವಲ. ಆರು ಮೈಲು ಈಚೆ ಕಡೆ ಮನಗುಂಡಿ, ಮಲೆನಾಡು. ಅಲ್ಲಿ ನನ್ನ ಸಣ್ಣಜ್ಜನ ಮನೆ. ಅಪ್ಪ ತೀರಿದ ಮೇಲೆ ಅನಿವಾರ್ಯವಾಗಿ ಈ ಎರಡೂ ಊರುಗಳಲ್ಲಿ ಬೆಳೆದೆ. ಯಾದವಾಡದಲ್ಲಿ ಸಣ್ಣಾಟ, ಪಾರಿಜಾತ; ಮನಗುಂಡಿಯಲ್ಲಿ ದೊಡ್ಡಾಟ, ಬಯಲಾಟದ ಭರಾಟೆ. ನನ್ನ ಮೂವರೂ ಸೋದರಮಾವಂದಿರು ಸಣ್ಣಾಟದ ಸರ್ವವಿದ್ಯಾಸಕ್ತರು. ನನ್ನ ಒಬ್ಬ ಸಣ್ಣಜ್ಜ ಬಯಲಾಟದಲ್ಲಿ ಹೆಸರಾಂತ ಹಾಸ್ಯ ನಟ. ಹೀಗೆ ರಂಗ ಕಲೆ ನನ್ನ ಬಾಲ್ಯಮೋಹ. ಶಾಲೆಯಲ್ಲಿ ಮಕ್ಕಳ ನಾಟಕಗಳಲ್ಲಿ, ನಂತರ ಕರ್ನಾಟಕ ಕಾಲೇಜಿನಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಬಿ.ವಿ. ಕಾರಂತರು 1963ರಲ್ಲಿ ದಿಲ್ಲಿಯಿಂದ ಬಂದ ನಂತರ ಮೊಟ್ಟಮೊದಲು ಧಾರವಾಡದಲ್ಲಿ ನಡೆಸಿದ ನಾಟಕ ತರಬೇತಿಯಲ್ಲಿ ಭಾಗವಹಿಸಿದೆ. ಆ ಮೇಲೆ ‘ಅಂತರಂಗ’ ನಾಟಕಕೂಟವನ್ನು ಕಟ್ಟಿ, ನಾನು, ಚಂಪಾ, ಶಾಂತಿನಾಥ ದೇಸಾಯಿ, ಸಂಪಿಗೆ ತೋಂಟದಾರ್ಯ, ಮುರಿಗೆಪ್ಪ, ಹೇಮಾ, ಪದ್ಮಜಾ ಮುಂತಾದವರು ನಿಯಮಿತವಾಗಿ ರಂಗ ಚಟುವಟಿಕೆ ನಡೆಸಿದೆವು. ಶ್ರೀರಂಗರು ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷರಾದಾಗ ಧಾರವಾಡ ಜಿಲ್ಲಾ ಘಟಕಕ್ಕೆ ನನ್ನನ್ನು ಸದಸ್ಯನನ್ನಾಗಿಸಿದರು. ಆಗಲೂ ನಾಟಕಗಳನ್ನು ಅನುವಾದಿಸುತ್ತ, ಆಡುತ್ತ, ಊರೂರು ಸುತ್ತಿ ನೋಡುತ್ತ, ‘ರಂಗಭೂಮಿಕಾ’ದಿಂದ ಬೇರೆಬೇರೆ ತಂಡದವರನ್ನು ಕರೆಸಿ ಆಡಿಸುತ್ತ ನಾಟಕದವನಾದೆ. ಈಚೆಗೆ ಕಾಲಿದಾಸನ ‘ಮಾಲವಿಕಾಗ್ನಿಮಿತ್ರಮ್’ ನಾಟಕವನ್ನು ನಮ್ಮ ದೊಡ್ಡಾಟದ ಶೈಲಿಗೆ ಸಂಪೂರ್ಣ ಹೊಸ ಬಗೆಯಲ್ಲಿ ರಂಗಾನುವಾದ ಮಾಡಿ ಕೊಟ್ಟೆ. ಅದನ್ನು ಜಂಬೆ ನಿರ್ದೇಶಿಸಿದರು. ನನಗೆ ಅಚ್ಚರಿಯೆನಿಸುವ ಸಂಗತಿಯೊಂದಿದೆ. ಧಾರವಾಡ, ಬಯಲುಸೀಮೆ. ಗಂಡಾಳಿಕೆಯ ನೆಲ. ಇಂಥಲ್ಲಿ ಬೇಂದ್ರೆ ‘ಅಂಬಿಕಾತನಯದತ್ತ’ನಾದರು. ನೀವು ‘ಗಿರಿಜವ್ವನ ಮಗ’ ಆದಿರಿ. ಹೆಣ್ಣಕಣ್ಣಿಂದ ಬಾಳು ನೋಡುವ ಗುಣ, ಈ ಮಣ್ಣಿಂದಲೇ ಹೊಮ್ಮಿದ್ದು ಹೇಗೆ ಅಂತ? ಧಾರವಾಡ ಗಡಿನಾಡು. ಇಲ್ಲಿ ಎರೆ, ಮಸಾರಿ ಎರಡೂ ಥರದ ನೆಲವಿದೆ. ಗೋಧಿ, ಜೋಳ, ಹತ್ತಿ, ಕುಸುಬಿ, ಶೇಂಗಾ ಜೊತೆಗೆ ಭತ್ತ, ನವಣೆ, ಕಬ್ಬು, ಅವರೆ ಸಹ ಬೆಳೆಯುತ್ತವೆ. ಬೇಂದ್ರೆ ಗಡಿನಾಡ ಕವಿ. ಆಡುಮಾತು, ಗ್ರಂಥಭಾಷೆ ಎರಡನ್ನೂ ಬಳಸಿ ಪಳಗಿಸಿದ್ದು ಅವರ ಹಿರಿಮೆ, ಪ್ರತಿಭೆ. ಏನೆಲ್ಲ ಇದ್ದರೂ ನಾವು ಕವಿಗಳು ಕಾಲದ ಕೂಸುಗಳು. ನಾವು ಬದುಕಿನ ಅನುಭವ ಬೀಜಗಳ ಪೈರು. ಕವಿಗಳು ಮೂಲತಃ ಅವ್ವಂದಿರೇ. ವೈಯಕ್ತಿಕ ಬದುಕಿನಲ್ಲಿ ಬೇಂದ್ರೆಯವರಾಗಲಿ, ನಾನಾಗಲಿ ಬಹುಪಾಲು ಅವ್ವಂದಿರಿಂದಲೇ ರೂಪಿತಗೊಂಡವರು, ಹೆಣ್ಣಗಳ್ಳಿನವರು. ಕವಿಯಾದವನು ತನ್ನ ಮಣ್ಣಿಗೆ, ಮಾತಿಗೆ, ರಚನಾಕ್ಷಣದ ಮತಿಗೆ ಬದ್ಧನಾಗಿರಬೇಕು. ಅದರ ಹಿನ್ನೆಲೆಯಲ್ಲಿಯೇ ಕೃಷಿಗೆ ತೊಡಗಬೇಕು. ತನ್ನ ಸಕಲ ಚಾಂಚಲ್ಯವನ್ನು ಕಾವ್ಯ ಕಾಯಕಕ್ಕೆ ಬಳಪವನ್ನಾಗಿ ಬಳಸಿಕೊಳ್ಳಬೇಕು. ಆಗ ಸಹಜ ಕವಿಯಾಗುತ್ತಾನೆ. ಬೇಂದ್ರೆ ಅದೆಲ್ಲ ಆಗಿದ್ದರು. ನಮ್ಮಂಥವರು ಅವರನ್ನು ಒಪ್ಪುತ್ತಲೇ, ಅವರೊಡನೆ ಜಗಳವಾಡುತ್ತಲೇ ಪ್ರೀತಿ ನೀಡಿದವರು, ಪಡೆದವರು. ಬೇಂದ್ರೆಯವರೂ ನಮ್ಮನ್ನು ಬೈಯುತ್ತಲೇ ಪ್ರೀತಿಸಿದರು, ಬೆಳೆಸಿದರು. ಅವರ ಒಡನಾಟದಲ್ಲಿದ್ದೆವು ಎಂದು ಹೇಳುವುದು ಸಹ ಹೆಮ್ಮೆ ನಮಗೆ. ಬೇಂದ್ರೆಯವರ ಕಾಲ ಅನೇಕ ಸಂಕೋಚಗಳ ಮುದ್ದೆ. ಹೀಗಾಗಿ ಬಹಳಷ್ಟು ಸಂಗತಿಗಳನ್ನು ಅವರಿಗೆ ಬರೆಯಲಾಗಲಿಲ್ಲ. ಬೇಂದ್ರೆ ಬಡವಿ ಅಂಬವ್ವನ ‘ಅಂಬಿಕಾತನಯ’. ನಾನು ಕೂಲಿ ಮಾಡುತ್ತಿದ್ದ ಗಿರಿಜವ್ವನ ‘ಮಗ’. ಸಿದ್ಧಲಿಂಗ ಪಟ್ಟಣಶೆಟ್ಟಿ ಎಷ್ಟು ವ್ಯಕ್ತಿಗಳೋ ಅಷ್ಟು ಭಾಷೆಗಳು –ಅಂತಾರೆ. ನೀವು ಬೇಂದ್ರೆಯ ಧಾರವಾಡದ ದೇಸಿಗಿಂತ ವಿಭಿನ್ನವಾದ ಧಾರವಾಡಿ ಭಾಷೆಯ ಕಸುವನ್ನು ಒಗ್ಗಿಸಿಕೊಂಡವರು. ಅದು ನಿಮ್ಮ ಪ್ರಜ್ಞಾಪೂರ್ವಕ ಆಯ್ಕೆಯಾಗಿತ್ತೇ?ಪ್ರಜ್ಞಾಪೂರ್ವಕ ಅಲ್ಲ, ಅದು ನನ್ನ ಸಹಜದ ನಡಿಗೆ. ಮೊದಲಿನಿಂದ ನಾನು ನನ್ನದೇ ಆದ ಶೈಲಿ, ಪದವಿನ್ಯಾಸ, ವ್ಯಾಕರಣವನ್ನು ಬಳಸುತ್ತ ಬಂದಿದ್ದೇನೆ. ಇದನ್ನು ಮೆಚ್ಚಿ ಪ್ರೋತ್ಸಾಹಿಸಿದವರು ನನ್ನ ಕನ್ನಡ ಸಾಲಿಯ ಬ.ಪ. ನವಲಗುಂದ ಗುರುಗಳು ಮತ್ತು ಹೈಸ್ಕೂಲಿನ ವರದರಾಜ ಹುಯಿಲಗೋಳರು. ಆ ನಂತರ ಪರೋಕ್ಷವಾಗಿ ಬೇಂದ್ರೆಯವರು. ಅವರದು ಪಟ್ಟಣದ ಆಡುಭಾಷೆ, ನನ್ನದು ಊರಿನ ಆಡುನುಡಿ. ನನ್ನ ಮೊದಲ ಕವನಸಂಗ್ರಹ ‘ನೀನಾ’ದಿಂದ ಹಿಡಿದು ಇತ್ತೀಚೆಗಿನ ‘ಕುಲಾಯಿ’ಗಳಲ್ಲಿ ಸಹ ನನ್ನ ಈ ನುಡಿ-ನಡೆಯನ್ನು ನೋಡಬಹುದು. ಜಿ.ಎನ್. ರಂಗನಾಥರಾಯರು ಒತ್ತಾಯ ಮಾಡಿದ್ದರಿಂದ, ‘ಪ್ರಜಾವಾಣಿ’ಯಲ್ಲಿ ಐದು ವರ್ಷ ‘ಚಹಾದ ಜೋಡಿ ಚೂಡಾದ್ಹಾಂಗ’ ಅಂಕಣ ಬರೆದೆ. ಬೇಂದ್ರೆಯವರ ಒಂದು ಹಾಡಿನಿಂದ ಆ ತಲೆಕಟ್ಟು ತೆಗೆದುಕೊಂಡಿದ್ದೆ, ಅದಕ್ಕೆ ತಕ್ಕಂತೆ ಮೊದಲ ಲೇಖನದಿಂದ ಕೊನೆಯವರೆಗೂ, ನನ್ನದೇ ಆದ, ವಿಶಿಷ್ಟ ನುಡಿಯನ್ನು ನುಡಿಸಿದೆ. ಬೇಂದ್ರೆ ಇಂಥ ಭಾಷೆಯನ್ನು ಪದ್ಯದಲ್ಲಿ ಬಳಸುತ್ತಿದ್ದರು, ನಾನು ಗದ್ಯದಲ್ಲಿಯೂ ಬಳಸಿದೆ. ನಂತರದ ದಿನಗಳಲ್ಲಿ ಅನೇಕ ಲೇಖಕರು ಇಂಥ ಪ್ರಯೋಗಕ್ಕೆ ತೊಡಗಿದ್ದು ಖುಷಿಯ ಸಂಗತಿ. ನಿಮ್ಮನ್ನು ಬೆಳೆಸಿದ ಧಾರವಾಡ, ನೀವು ಬೆಳೆಸಿದ ಧಾರವಾಡದ ಬಗ್ಗೆ –ಒಂಚೂರು… ಧಾರವಾಡ ಎಂದೂ ನನ್ನ ಕೈ ಬಿಟ್ಟಿಲ್ಲ. ಈಗ ಧಾರವಾಡ ದಲ್ಲಿರುವ ಧಾರವಾಡಿಗ ಅಂದರೆ ಬೇಂದ್ರೆಯವರಂತೆ ನಾನೊಬ್ಬನೇ. ಉಳಿದ ಸಾಹಿತಿಗಳು ಪರ ಊರುಗಳಿಂದ ಬಂದು ಧಾರವಾಡದಲ್ಲಿ ನೆಲೆ ಕಂಡವರು. ನನ್ನ ಧಾರವಾಡ ನನಗೆ ಬಹಳ ಕೊಟ್ಟಿದೆ. ಅದು ನನ್ನ ಅವ್ವ. ಅವ್ವ ನೀಡಿದ್ದನ್ನು ಉಂಡಿದ್ದೇನೆ. ಅದು ಮಾತಾಗಿದೆ, ಅಕ್ಷರವಾಗಿದೆ, ಬದುಕಾಗಿದೆ; ಇದನ್ನೆಲ್ಲ ಮರಳಿಸಲು ಸಾಧ್ಯವೆ? ನಾನು ಕಂಡ ಉಂಡ ಧಾರವಾಡ, ನನ್ನನ್ನು ಉಂಡ ಧಾರವಾಡ ಒಂದು ಪವಾಡ. ಅದನ್ನೆಲ್ಲ ಬಳಸಿ ಒಂದು ದೊಡ್ಡ ಇತಿಹಾಸವನ್ನೇ ಬರೆಯಬೇಕು. ಅಂಥ ಶಕ್ತಿ ಮತ್ತು ಅದಕ್ಕೆ ಅಗತ್ಯವಿರುವ ಸಂಯಮ ಸಿದ್ಧಿಸಿದರೆ ಬರೆಯುವ ಮನಸ್ಸಿದೆ, ನೋಡೋಣ. ಧಾರವಾಡದ ಹೆಸರಿಗೆ, ಇಲ್ಲಿಯ ಸಾಹಿತ್ಯಕ್ಕೆ, ಸಂಸ್ಕೃತಿಗೆ, ಪರಂಪರೆಗೆ, ಸಂಸ್ಥೆಗಳಿಗೆ ನನ್ನಿಂದ ಏನಾದರೂ ಸಂದಿದ್ದರೆ, ಅದನ್ನು ಸಂಪನ್ನ ಮನಸ್ಸುಗಳು ಹೇಳಬೇಕು, ಅಷ್ಟೆ. ನೀವು, ಸ್ವಾತಂತ್ರ್ಯಪೂರ್ವದಿಂದಲೂ ಈ ಸಮಾಜವನ್ನು ನೋಡಿಕೊಂಡು ಬಂದವರು. ಈಗ ನಡೀತಿರೊ ಅಕಾರಣ ಅಸಹನೆಗೆ, ಹಿಂಸಾರತಿಗೆ; ಹಿರೀಕರಾಗಿ ಏನು ಉಪಶಮನ ಹೇಳಲು ಬಯಸ್ತೀರಿ? ಈಗ ಬಹುತೇಕ ಎಲ್ಲ ದೇಶಗಳು ಇಂಥ ಅಸಹನೆಗೆ, ಹಿಂಸೆಗೆ ತುತ್ತಾಗಿವೆ. ಆದರೆ ನಮ್ಮ ಧರ್ಮ, ಸಂಸ್ಕೃತಿ, ಚರಿತ್ರೆ, ಭಾಷೆ ಮುಂತಾದುವು ನಮಗೆ ಮೊದಲಿನಿಂದಲೂ ಸೌಹಾರ್ದ, ಸಮಾನತೆ, ಭ್ರಾತೃತ್ವ, ಏಕತೆಯ ಹಾದಿಯಲ್ಲಿ ನಡೆಯಲು ಬೋಧಿಸಿವೆ, ಪ್ರೇರೇಪಿಸಿವೆ. ಅದನ್ನು ನೈತಿಕತೆಯ ಹಿನ್ನೆಲೆಯಲ್ಲಿ ನಮಗೆ ಮನೆಯಿಂದಲೇ ರೂಢಿಸಲಾಗುತ್ತಿತ್ತು. ಅದರ ಪರಿಣಾಮ ದೀರ್ಘಕಾಲಿಕವಾಗಿತ್ತು. ಈಚೆಗೆ ಅವು ಶಿಥಿಲಗೊಂಡಿವೆ. ಕುಟುಂಬ, ಮನಸ್ಸುಗಳು ಒಡೆದಿವೆ. ಬಹುತ್ವದಲ್ಲಿ ಏಕತ್ವದ ಪರಿಕಲ್ಪನೆ ಹೋಳಾಗಿದೆ. ಆ ಸ್ಥಾನದಲ್ಲಿ ಅನಿರೀಕ್ಷಿತವಾಗಿ ರಾಜಕೀಯದ ಕ್ಷುದ್ರತೆ, ಸಂಕುಚಿತ ಚಿಂತನೆ ತಲೆಯೆತ್ತಿವೆ. ಈಗ ನಾವು ಮಕ್ಕಳಲ್ಲಿ ಸಹಿಷ್ಣುತೆ ಬೆಳೆಸಬೇಕಿದೆ. ಅದು ಕೌಟುಂಬಿಕ ನೆಲೆಯಲ್ಲಿಯೂ, ಶಾಲಾ ಪಠ್ಯಗಳ ಮೂಲಕವೂ ಆಗಬೇಕು. ಮಕ್ಕಳ ಅದಮ್ಯ ಉತ್ಸಾಹ, ಕುತೂಹಲ, ಸದಾ ಚಟುವಟಿಕೆಯ ತುಡಿತಗಳನ್ನು ಸೃಜನಾತ್ಮಕತೆಯತ್ತ ಸೆಳೆಯಬೇಕು. ಪ್ರೀತಿಯ ಪೋಷಣೆ, ಸಂಬಂಧ, ಸಂವಾದಗಳ ಮೂಲಕ ಅಹಿಂಸಾತ್ಮಕ ಸಮಸಮಾಜದ ಕಲ್ಪನೆ ಮತ್ತು ಅಗತ್ಯಗಳನ್ನು ಬಿಂಬಿಸಬಹುದೇನೋ…

author- ವಿನಯಾ ಒಕ್ಕುಂದ

courtsey:prajavani.net

https://www.prajavani.net/artculture/article-features/poet-is-som-of-time-%E0%B2%B8%E0%B2%BF%E0%B2%A6%E0%B3%8D%E0%B2%A7%E0%B2%B2%E0%B2%BF%E0%B2%82%E0%B2%97-%E0%B2%AA%E0%B2%9F%E0%B3%8D%E0%B2%9F%E0%B2%A3%E0%B2%B6%E0%B3%86%E0%B2%9F%E0%B3%8D%E0%B2%9F%E0%B2%BF-siddalinga-pattanashetty-678682.html

Leave a Reply