ಮರಣ ದಂಡನೆ- ಮುಗಿಯದ ಜಿಜ್ಞಾಸೆ

ದೆಹಲಿಯ ನಿರ್ಭಯಾ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ 17ರ ಬಾಲಕನಿಗೂ ಮರಣದಂಡನೆ ವಿಧಿಸಬೇಕು ಎಂದು ಹಿಂದೆ ದೇಶದಾದ್ಯಂತ ಚರ್ಚೆಯಾಗಿತ್ತು. ಚರ್ಚೆಯ ಪರಿಣಾಮವಾಗಿ ಸಂಸತ್ತಿನಲ್ಲಿ ರೂಪುಗೊಂಡ ಕಾನೂನಿನ ಪ್ರಕಾರ ಅಪ್ರಾಪ್ತ ವಯಸ್ಸು ಎನ್ನುವ ವ್ಯಾಖ್ಯೆಯನ್ನು 18ವರ್ಷದಿಂದ 16ಕ್ಕೆ ಇಳಿಸಲಾಯಿತು. ಈಗ ಹೀನಾತಿಹೀನ ಕೃತ್ಯಗಳಲ್ಲಿ ಆರೋಪಿಯಾಗಿ 16 ವರ್ಷದ ವಯಸ್ಸಿನವರು ಕಟಕಟೆಗೆ ಬಂದು ಆರೋಪ ಸಾಬೀತಾದರೂ ಅವರಿಗೆ ಮರಣ ದಂಡನೆ ವಿಧಿಸುವಂತಿಲ್ಲ. ಕಾನೂನು ಮುರಿದ ಮಕ್ಕಳ ಪ್ರಕರಣಗಳು ಭಾರತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಡೆದು ಹೋಗಿವೆ. ಆದರೆ, 2012ರ ದೆಹಲಿ ನಿರ್ಭಯಾ ಪ್ರಕರಣದಲ್ಲಿ ಹೆಸರಿಸಲಾದ ಬಾಲಕನ ಚರ್ಚೆಯ ಕಾವು ಸುಲಭವಾಗಿ ಕಡಿಮೆ ಆಗುವುದಿಲ್ಲ. ಪ್ರಕರಣದಲ್ಲಿ ದೂಷಣೆಗೆ ಒಳಗಾದ 18 ವರ್ಷದೊಳಗಿನ ಬಾಲಕನನ್ನು ‘ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ 2000’ರಂತೆ ಮಕ್ಕಳ ನ್ಯಾಯ ಮಂಡಳಿಯು ಸಮಾಲೋಚನೆ ನಡೆಸಿ ಸುಧಾರಣೆಗೆ ಸೂಚಿಸಿತ್ತು. ಆದರೆ, ನಿರ್ಭಯಾ ಪ್ರಕರಣದ ಭೀಕರತೆ ಎಷ್ಟಿತ್ತೆಂದರೆ, ಸಾರ್ವಜನಿಕರ ಅಭಿಪ್ರಾಯ ತೀರಾ ಭಿನ್ನವಾಗಿತ್ತು. ‘ಕಾನೂನಿನೊಡನೆ ಸಂಘರ್ಷಕ್ಕೆ ಬಿದ್ದಿರುವ ಆ ಬಾಲಕನನ್ನು ಸಾರ್ವಜನಿಕರಿಗೆ ಒಪ್ಪಿಸಬೇಕು. ಅವನಿಗೂ ಮರಣ ದಂಡನೆ ವಿಧಿಸಬೇಕು. ದೇಶದ ಕಾನೂನು ಸಮರ್ಪಕವಾಗಿಲ್ಲ’ ಎಂಬ ಕೂಗು ದೇಶದುದ್ದಕ್ಕೂ ಎದ್ದಿತು. ಅದೇ ಅವಧಿಯಲ್ಲಿ, ಮಕ್ಕಳ ನ್ಯಾಯ ಕಾಯ್ದೆಯನ್ನೇ ತಿದ್ದುಪಡಿ ಮಾಡುವ ಪ್ರಸ್ತಾಪವೂ ಸುಪ್ರೀಂ ಕೋರ್ಟ್‌ನ ಮುಂದೆ ಬಂತು. ಆ ಪ್ರಸ್ತಾಪದ ‍ಪ್ರಕಾರ, ಮಕ್ಕಳು ಎನ್ನುವ ಶಬ್ದದ ವ್ಯಾಖ್ಯೆಯನ್ನು 16 ವರ್ಷಕ್ಕೆ ಇಳಿಸಿ ಎನ್ನುವ ವಾದ ಮುಂದಿಡಲಾಯಿತು. ವಿಶ್ವಸಂಸ್ಥೆಯ ಮಕ್ಕಳ ನ್ಯಾಯ ಕುರಿತಾದ ಸಾಮಾನ್ಯ ಸಭೆ ಮತ್ತು ಮಾನವ ಹಕ್ಕುಗಳ ಅಂತರರಾಷ್ಟ್ರೀಯ ನಿಯಮಗಳು (ಬೀಜಿಂಗ್‌ ಒಪ್ಪಂದ 1985) ಹೇಳುವುದೇ ಬೇರೆ. ‘ತಪ್ಪು ಮಾಡುವ ಮತ್ತು ಕಾನೂನು ಉಲ್ಲಂಘಿಸುವ ಮಕ್ಕಳ ಬಗ್ಗೆ ಮಾನವೀಯ ದೃಷ್ಟಿ ತಾಳಬೇಕು. ಆ ಮಕ್ಕಳನ್ನು ದೀರ್ಘಕಾಲ ಸೆರೆವಾಸಕ್ಕೆ ದೂಡುವಂತಿಲ್ಲ. ಹಿಂಸಾತ್ಮಕ ಶಿಕ್ಷೆ ಅಥವಾ ಆಜೀವ ಸೆರೆವಾಸ ಅಥವಾ ಮರಣ ದಂಡನೆ ವಿಧಿಸಬಾರದು. ಬದಲಿಗೆ ಸುಧಾರಣಾ ವ್ಯವಸ್ಥೆಗಳನ್ನು ಬಲಪಡಿಸಬೇಕು’ ಎನ್ನುತ್ತದೆ ಬೀಜಿಂಗ್‌ ಒಪ್ಪಂದ. ಇದೇ ವಿಚಾರವನ್ನು ಪ್ರತಿಪಾದಿಸುವ, ಅಂತರರಾಷ್ಟ್ರೀಯ ಕಾನೂನು ‘ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ’ಯ ಪರಿಚ್ಛೇದ 40 (ಮಕ್ಕಳ ನ್ಯಾಯ)ಕ್ಕೆ ಭಾರತವೂ ಬದ್ಧವಾಗಿದೆ. ಆ ಎಳೆಯನ್ನೇ ಇಟ್ಟುಕೊಂಡು 2013ರ ಜುಲೈ 17ರಂದು ಸುಪ್ರೀಂ ಕೋರ್ಟ್‌ ತನ್ನ ಅಭಿಪ್ರಾಯವ್ಯಕ್ತಪಡಿಸಿದೆ. ‘ಕಾನೂನಿನೊಡನೆ ಸಂಘರ್ಷಕ್ಕೆ ಬಿದ್ದಿರುವ 16ರಿಂದ 18 ವರ್ಷದೊಳಗಿನ ಮಕ್ಕಳು ಅಪರಾಧಿಕ ಪ್ರವೃತ್ತಿಗೆ ಬಲಿಬೀಳುವ ಘಟನೆಗಳಿವೆ. ಅವರನ್ನು ಮತ್ತೆ ಸಮಾಜದ ಮುಖ್ಯವಾಹಿನಿಗೆ ಸೇರಿಸುವುದು ಕಷ್ಟವೆನಿಸುತ್ತದೆ. ಹೀಗೆಂದು ಆ ಭಾವನೆಯು ಅಂತಹ ಮಕ್ಕಳ ಕುರಿತು ನಮ್ಮ ಮೂಲ ಚಿಂತನೆಗಳನ್ನೇ ಬದಲಿಸಬೇಕು ಎನ್ನುವಷ್ಟು ಪ್ರಮಾಣದಲ್ಲಿ ಇಲ್ಲ. ಅವರನ್ನು ಕಠಿಣ ಮನಸ್ಥಿತಿಯ ಅಪರಾಧಿಗಳಾಗಿ ಬೆಳೆಸುವುದಕ್ಕಿಂತಲೂ, ಮುಖ್ಯವಾಹಿನಿ ಸಮಾಜದಲ್ಲಿ ಮರುಸಂಘಟಿಸುವುದೇ ಭವಿಷ್ಯದ ದೃಷ್ಟಿಯಿಂದ, ನಾವು ಕೈಗೊಳ್ಳಬೇಕಿರುವ ಉತ್ತಮ ಕಾರ್ಯ’ ಎನ್ನುವುದು ಸುಪ್ರೀಂ ಕೋರ್ಟ್‌ ಅಭಿಪ್ರಾಯವಾಗಿತ್ತು. ‘ಕಾನೂನುಗಳ ವಿಮರ್ಶೆಗೆಂದೇ ಸರ್ಕಾರ ನೇಮಿಸಿದ್ದ ನ್ಯಾಯಮೂರ್ತಿ ವರ್ಮಾ ಸಮಿತಿಯೂ, ಆಪರಾಧಿಕ ಕೃತ್ಯ ಮಾಡಿದ ‘ಮಕ್ಕಳ’ ವಯಸ್ಸನ್ನು ಕಡಿಮೆ ಮಾಡಲು ಬರುವುದಿಲ್ಲ. ನ್ಯಾಯಾಲಯದ ಸುಪರ್ದಿಯಲ್ಲಿ ಅಂತಹವರಿಗಾಗಿ ಸುಧಾರಣಾ ವ್ಯವಸ್ಥೆಗಳನ್ನು ಮಾಡಬೇಕು. ಪರಿವರ್ತಿತರಾದ ಆ ಮಕ್ಕಳು ಸಮಾಜದಲ್ಲಿ ಮತ್ತೆ ಸೇರುವಂತೆ ನೋಡಿಕೊಳ್ಳುವುದು ಸರ್ಕಾರ ಹಾಗೂ ಸಮಾಜದ ಕರ್ತವ್ಯ’ ಎಂದಿತು. ಆದರೆ, ನಮ್ಮಲ್ಲಿ ಇವತ್ತು ಸಾರ್ವಜನಿಕ ಅಭಿಪ್ರಾಯಕ್ಕೆ ಹೆಚ್ಚು ಮಹತ್ವ ಲಭಿಸಿದೆ. ಈ ಮಾನವೀಯ ದೃಷ್ಟಿಕೋನವನ್ನು ಒಪ್ಪದ ನಾಗರಿಕರ ಕೂಗು, ಸಂಸತ್ತಿನ ಮೇಲೆಯೂ ಪ್ರಭಾವ ಬೀರಿದಂತೆ ಕಂಡುಬಂತು. ಆಡಳಿತ ಮತ್ತು ವಿರೋಧ ಪಕ್ಷಗಳ ಕೆಲವು ನಾಯಕರೂ ಸಾರ್ವಜನಿಕರ ಅಭಿಪ್ರಾಯದಂತೆಯೇ ಆಗಬೇಕು ಎಂಬ ಬಹಿರಂಗ ಹೇಳಿಕೆಗಳನ್ನು ಕೊಟ್ಟರು. ಮುಂದಿನದು ಇತಿಹಾಸ. ಸುಪ್ರೀಂ ಕೋರ್ಟ್‌ನ ನಿರ್ದೇಶನ, ತೀರ್ಪುಗಳನ್ನು ಧಿಕ್ಕರಿಸಬೇಕೆಂದರೆ ನಾವು ಸಂಸತ್ತನ್ನು ಬಳಸಿಕೊಂಡು ಕಾಯ್ದೆಗಳನ್ನೇ ಬದಲಿಸಿ ಬಿಡುತ್ತೇವೆ. ಮಕ್ಕಳ ನ್ಯಾಯಕ್ಕೂ ಅದೇ ಆಯಿತು! ‘ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ 2015’ ನೇರವಾಗಿ ಅಂತರರಾಷ್ಟ್ರೀಯ ನೀತಿ, ನಿಯಮಗಳನ್ನು ತಳ್ಳಿಹಾಕಲು ಮುಂದಾಗಲಿಲ್ಲ. ಆದರೆ, ಸಾರ್ವಜನಿಕ ಆಶಯದಂತೆ ಕಾಯ್ದೆಯ ಸ್ವರೂಪವನ್ನೇ ತಿದ್ದಿ ಹೊಸ ಕಾಯ್ದೆಯನ್ನು ತರಲಾಯಿತು. ಈ ಕಾಯ್ದೆ ಪ್ರಕಾರ, ಕೊಲೆ, ಅತ್ಯಾಚಾರ, ದರೋಡೆಗಳಂತಹ ಘೋರ ಅಪರಾಧಗಳನ್ನು ಮಾಡಿದ ಶಂಕೆಯಿರುವ 16–18 ವರ್ಷದೊಳಗಿನ ಮಕ್ಕಳನ್ನು ವಿಶೇಷ ಮಂಡಳಿಯ ಮುಂದೆ ತರಬೇಕು. ಅಲ್ಲಿ ಆ ರೀತಿಯ ಕೃತ್ಯ ಮಾಡಲು ಪ್ರೇರಣೆ ಏನು, ಅಂತಹದುರ ಕುರಿತಾದ ಅರಿವು ಎಷ್ಟಿದೆ ಮತ್ತು ಯಾವ ಸಂದರ್ಭದಲ್ಲಿ ಈ ಕೃತ್ಯ ಮಾಡಿದ ಶಂಕೆಯಿದೆ ಎನ್ನುವುದರ ಕುರಿತು ಪರಿಶೀಲನೆ ನಡೆಯಬೇಕು. ಮಂಡಳಿಯು ಮಗುವಿನ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಕುರಿತು ಪ್ರಾಥಮಿಕ ಪರಿಶೀಲನೆ ಮಾಡಬೇಕು. ಇಂತಹ ಪ್ರಾಥಮಿಕ ಪರಿಶೀಲನೆಗೆ ಮಂಡಳಿಯು ಅನುಭವಿ ಮನೋವಿಜ್ಞಾನಿಗಳ ಅಥವಾ ಮನೋ-ಸಾಮಾಜಿಕ ಕಾರ್ಯಕರ್ತರ ನೆರವನ್ನೂ ಪಡೆದುಕೊಳ್ಳಬೇಕು ಎಂದು ನಿರ್ಧರಿಸಲಾಯಿತು. ಕಾಯ್ದೆ ಈ ಹಂತದಲ್ಲಿ ಬಹಳ ಎಚ್ಚರಿಕೆಯಿಂದ ವಿವರಣೆಯೊಂದನ್ನು ನೀಡಿದೆ: ಆ ವಿವರಣೆ ಹೀಗಿದೆ– ಈ ಕಾಯ್ದೆಯ ಉದ್ದೇಶಕ್ಕಾಗಿ ಪ್ರಾಥಮಿಕ ಪರಿಶೀಲನೆಯು ವಿಚಾರಣೆ ಅಲ್ಲ. ಆದರೆ, ಇದು ಶಂಕಿತ ಅಪರಾಧ ಕೃತ್ಯ ಮಾಡುವ ಮತ್ತು ಅದರ ಪರಿಣಾಮಗಳನ್ನು ಅರ್ಥೈಸಿಕೊಳ್ಳುವ ಮಗುವಿನ ಸಾಮರ್ಥ್ಯವನ್ನು ತಿಳಿದುಕೊಳ್ಳಲು ಮಾತ್ರ. ಮುಂದಿನ ವಿಚಾರಣೆಗಳನ್ನು ನಡೆಸಲು ಅಂತಹ ಮಕ್ಕಳನ್ನು ಜಿಲ್ಲಾ ಮಕ್ಕಳ ನ್ಯಾಯಾಲಯಕ್ಕೆ ವರ್ಗಾಯಿಸಲಾಗುತ್ತದೆ. ಯಾವ ಅಪರಾಧಗಳಿಗೆ ಕಾಯ್ದೆ ಏಳು ವರ್ಷಕ್ಕಿಂತಲೂ ಅಧಿಕ ಪ್ರಮಾಣದ ಕಾರಾಗೃಹವಾಸದ ಶಿಕ್ಷೆ ವಿಧಿಸುವ ಸಾಧ್ಯತೆ ಇದೆಯೋ ಅಂತಹವನ್ನು ಘೋರ ಅಪರಾಧ ಕೃತ್ಯ ಎಂದು ಪರಿಗಣಿಸಬೇಕು. ಈ ಎಲ್ಲ ಹಂತಗಳಲ್ಲಿ ಸರ್ಕಾರ, ನ್ಯಾಯಾಲಯ ಮತ್ತು ಆಡಳಿತ ವ್ಯವಸ್ಥೆಯು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ತಾನೇ ಹಾಕಿಕೊಂಡಿರುವ ಕಟ್ಟುಪಾಡುಗಳಂತಿರುವ ‘ಮಕ್ಕಳ ನ್ಯಾಯಕ್ಕಾಗಿ 16 ಸಾಮಾನ್ಯ ತತ್ವಗಳ’ ಪಾಲನೆಯಲ್ಲಿ ಎಚ್ಚರಿಕೆವಹಿಸಬೇಕಿದೆ. ಅವುಗಳಲ್ಲಿ ಆಯ್ದ ಮೂರು ತತ್ವಗಳು ಹೀಗಿವೆ. ಭಾಗವಹಿಸುವ ತತ್ವ : ಪ್ರತಿಯೊಂದು ಮಗುವಿಗೂ ಅಭಿಪ್ರಾಯಗಳನ್ನು ಹೇಳುವ ಮತ್ತು ತನ್ನ ಹಿತಾಸಕ್ತಿಯ ಮೇಲೆ ಪರಿಣಾಮ ಬೀರುವ ವಿಚಾರಗಳ ಕುರಿತಾದ ತೀರ್ಮಾನಗಳ ಮೇಲಿನ ಎಲ್ಲಾ ಪ್ರಕ್ರಿಯೆಗಳಲ್ಲೂ ಭಾಗವಹಿಸುವ ಹಕ್ಕಿದೆ. ಮಗುವಿನ ವಯಸ್ಸು ಮತ್ತು ಬೌದ್ಧಿಕ ಬೆಳವಣಿಗೆಯ ಮಟ್ಟಕ್ಕೆ ಗೌರವ ನೀಡಿ ಅವರ ಅಭಿಪ್ರಾಯಗಳನ್ನು ಪರಿಗಣಿಸಲೇಬೇಕು. ಮುಗ್ಧರೆಂದು ಪರಿಗಣಿಸುವ ತತ್ವ: 18 ವರ್ಷದವರೆಗಿನ ಯಾವುದೇ ಮಗುವನ್ನು ಯಾವುದೇ ದುರುದ್ದೇಶದ ಅಥವಾ ಅಪರಾಧಿಕ ಉದ್ದೇಶಗಳಿಲ್ಲದ ಮುಗ್ಧರೆಂದು ಪರಿಗಣಿಸಬೇಕು. ಹಿತದೃಷ್ಟಿಯ ತತ್ವ: ಮಗುವಿನ ಕುರಿತಾದ ಎಲ್ಲಾ ತೀರ್ಮಾನಗಳು ಮಗುವಿನ ಹಿತಾಸಕ್ತಿಗೆ ಪೂರಕವಾಗಿ ಇರುವುದರ ಆಧಾರದ ಮೇಲೆ ಪರಿಗಣಿಸಬೇಕು. ಮಗುವಿಗೆ ತನ್ನ ಪೂರ್ಣ ಸಾಮರ್ಥ್ಯವನ್ನು ಹೊಂದಲು ಸಹಾಯ ಮಾಡಬೇಕು. ಭಾರತದ ನ್ಯಾಯದಾನ ವಿಧಾನದಲ್ಲಿ, ಅಪರಾಧ/ ಮೋಸಕ್ಕೆ ಈಡಾದವರಿಗೆ ನ್ಯಾಯ ಒದಗಿಸುವುದೇ ಪ್ರಮುಖ ಅಂಶ. ಅದರ ಜೊತೆಗೆ ಅಪರಾಧ ನಡೆಸಿದ ಯಾರೇ ಆಗಲಿ ಅವರಿಗೆ ದಂಡ/ ಶಿಕ್ಷೆ ವಿಧಿಸುವಾಗ ಅವರ ನಡವಳಿಕೆ, ಮನೋಭಾವ, ಸ್ವಭಾವಗಳಲ್ಲಿ ಬದಲಾವಣೆ ತಂದು ಅವರನ್ನು ಮತ್ತೆ ಸಮಾಜಕ್ಕೆ ಹಿಂದಿರುಗಿಸಬೇಕು ಎಂದೂ ಅಪೇಕ್ಷಿಸಲಾಗಿದೆ. ಈ ಅಂಶವನ್ನು ಕಾನೂನಿನೊಡನೆ ಸಂಘರ್ಷದಲ್ಲಿರುವ ಮಕ್ಕಳಿಗೆ ಅನ್ವಯಿಸುವಾಗ ಸುಧಾರಣೆಯೇ ಮೇಲಾಗುತ್ತದೆ. 2013ರ ರಾಷ್ಟ್ರೀಯ ಮಕ್ಕಳ ನೀತಿಯ ಪ್ರಕಾರ, 18 ವರ್ಷದೊಳಗಿನ ಎಲ್ಲ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲ ರೀತಿಯ ವ್ಯವಸ್ಥೆಗಳನ್ನು ಪೂರೈಸಲು ಸರ್ಕಾರವು ಸಿಬ್ಬಂದಿ ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತದೆ. ಆರೋಗ್ಯ, ಶಿಕ್ಷಣ, ಆಟೋಟ, ಗ್ರಂಥಾಲಯ, ಮನರಂಜನೆ, ಆಪ್ತಸಮಾಲೋಚನೆ, ಅವಕಾಶಗಳು, ಕೌಶಲ ಅಭಿವೃದ್ಧಿಯೇ ಮೊದಲಾದವುಗಳನ್ನು ಎಲ್ಲ ವರ್ಗಗಳ ಮಕ್ಕಳಿಗೆ ಒದಗಿಸಲಾಗುತ್ತದೆ. ಮಕ್ಕಳು ಹಾದಿತಪ್ಪದಂತೆ, ಅಪರಾಧಿಕ ಗುಂಪುಗಳೊಡನೆ ಸೇರದಂತೆ ಮತ್ತು ತಾವೇ ಅಪರಾಧಗಳಲ್ಲಿ ಭಾಗಿಗಳಾಗದಂತೆ ತಡೆಯುವುದು ಇದರ ಗುರಿ. ಇಂತಹ ನೆರವನ್ನು ಮುಖ್ಯವಾಗಿ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಸಮುದಾಯಗಳಲ್ಲಿ ಒದಗಿಸುವುದು ಸಮಾಜದ ಮತ್ತು ಸರ್ಕಾರದ ಕರ್ತವ್ಯ. ಆದರೆ, ಮಕ್ಕಳಿಗೆ ಸಮರ್ಪಕವಾಗಿ ವಿಕಾಸವಾಗಲು ನೆರವಾಗದ ಪರಿಸರದಲ್ಲಿ ಬೆಳೆಯುವ ಮಕ್ಕಳು ಇಂತಹ ಯಾವುದೇ ಸಾಮಾಜಿಕ ಸುರಕ್ಷತೆಯ ಅನುಕೂಲಗಳು ಸಿಗದೆ ದುಷ್ಕೃತ್ಯಗಳನ್ನು ಮಾಡುವ ವಯಸ್ಕರೊಡನೆ ಸೇರಿದರೆ ಅಥವಾ ಸಣ್ಣಪುಟ್ಟ ಅಪರಾಧಗಳನ್ನು ಮಾಡುತ್ತಲೇ ಬೆಳೆದರೆ ಅದರ ನೇರ ಹೊಣೆಯನ್ನು ಸರ್ಕಾರ ಮತ್ತು ಸಮಾಜ ಹೊರಬೇಕಾಗುತ್ತದೆ. ಮಕ್ಕಳು ತೊಂದರೆಯಲ್ಲಿದ್ದಾಗ ಅವರ ಕೈ ಹಿಡಿಯದೆ, ಅವರು ಅಪರಾಧಗಳನ್ನು ಮಾಡಿದಾಗ ಹಿಡಿದು ಶಿಕ್ಷಿಸಲು ಮುನ್ನುಗ್ಗುವುದು ಎಷ್ಟು ಸರಿ? ಮಕ್ಕಳು ಈ ದೇಶದ ರಾಷ್ಟ್ರೀಯ ಸಂಪತ್ತು. ಪ್ರತಿಯೊಂದು ಮಗುವಿಗೂ ಅವಕಾಶಗಳನ್ನು ಕಲ್ಪಿಸುವ ಮತ್ತು ವಿಕಾಸಕ್ಕೆ ಅನುವು ಮಾಡುವ ವಿಶಾಲ ದೃಷ್ಟಿಕೋನವಿದ್ದಲ್ಲಿ ಮಾತ್ರ ಮಾನವೀಯತೆ ಅರಳುತ್ತದೆ. ದೇಶದ ಪ್ರಗತಿ ಸಾಧ್ಯವಾಗುತ್ತದೆ. (ಲೇಖಕರು ಚೈಲ್ಡ್‌ರೈಟ್ಸ್‌ ಟ್ರಸ್ಟ್ ಮುಖ್ಯಸ್ಥರು)

courtsey:prajavani.net

https://www.prajavani.net/artculture/article-features/is-the-death-penalty-justified-or-should-it-be-abolished-702228.html

Leave a Reply